"ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೪ (೧)
ವೈಶೇಷಿಕ ದರ್ಶನ
ಪರಿಚಯ
ವೈಶೇಷಿಕ ದರ್ಶನವು ಕಣಾದ ಅಥವಾ ಉಲೂಕನಿಂದ ಸ್ಥಾಪಿಸಲ್ಪಟ್ಟಿತು. ಆದ್ದರಿಂದ ಅದನ್ನು 'ಕಾಣಾದ' ಅಥವಾ 'ಔಲೂಕ್ಯ' ದರ್ಶನ ಎಂದೂ ಕರೆಯುತ್ತಾರೆ. ಕಣಾದ ಎನ್ನುವುದು ಉಲೂಕನ ಅನ್ವರ್ಥ ನಾಮವೆಂದು ಕಾಣುತ್ತದೆ. ಏಕೆಂದರೆ ಅವನು ಋಷಿಗಳಂತೆ ಜೀವನ ನಡೆಸಿ ರೈತರ ಹೊಲಗಳಿಂದ ಹೆಕ್ಕಿದ ಕಾಳುಗಳನ್ನು ತಿನ್ನುತ್ತಿದ್ದ. (ಕಣ=ಕಾಳು; ಅದ್=ತಿನ್ನು)
ಈ ದರ್ಶನಕ್ಕೆ ಕಣಾದನ 'ವೈಶೇಷಿಕ ಸೂತ್ರ'ಗಳು ಮೂಲ ಗ್ರಂಥವಾಗಿದೆ. ಅದು ಹತ್ತು ಅಧ್ಯಾಯಗಳು ಅಥವಾ ಪುಸ್ತಕಗಳಿಂದ ಒಡಗೂಡಿದೆ ಮತ್ತು ಪ್ರತಿಯೊಂದೂ ಅಧ್ಯಾಯವು ಎರಡು ಅಹ್ನಿಕ ಅಥವಾ ವಿಭಾಗಗಳನ್ನು ಹೊಂದಿವೆ. ಒಟ್ಟಾರೆಯಾಗಿ ಇದರಲ್ಲಿ ೩೭೪ ಸೂತ್ರಗಳು ಇವೆ.
ಪ್ರಶಸ್ತಪಾದ(ಕ್ರಿ.ಶ. ೫ನೇ ಶತಮಾನ) ರಚಿಸಿದ 'ಪದಾರ್ಥ ಧರ್ಮ ಸಂಗ್ರಹ' ಎನ್ನುವ ವ್ಯಾಖ್ಯಾನ ಗ್ರಂಥ ಬಹುಶಃ ವೈಶೇಷಿಕ ದರ್ಶನಕ್ಕೆ ಬರೆದ ಮೊದಲ ಭಾಷ್ಯ (ಲಭ್ಯವಿರುವ ಮೊದಲ ಗ್ರಂಥ). ಇದನ್ನು ಭಾಷ್ಯ ಗ್ರಂಥವೆಂದು ಕರೆದರೂ ಕೂಡ ಅದು ಪದ್ಧತಿಯಂತೆ ಮೂಲಗ್ರಂಥದ ಪ್ರತಿಯೊಂದೂ ಸೂತ್ರಕ್ಕೆ ಬರೆದ ಟಿಪ್ಪಣಿಯಲ್ಲ. ಈ ಭಾಷ್ಯದಲ್ಲಿ, ಮೂಲ ತತ್ವಗಳನ್ನು ಪುನರುದ್ಧರಿಸಿದರೂ ಕೂಡ ಅವುಗಳನ್ನು ಗಣನೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಶ್ರೀಧರನ(ಕ್ರಿ.ಶ. ೯೯೧) 'ನ್ಯಾಯಖಂಡಲಿ', ವ್ಯೋಮಶಿವನ 'ವ್ಯೋಮಾವಳಿ' ಮತ್ತು ಉದಯನನ (ಕ್ರಿ.ಶ. ೯೮೪) 'ಕಿರಣಾವಳಿ' ಇವುಗಳು ಪ್ರಶಸ್ತಪಾದನ ಗ್ರಂಥಗಳಿಗೆ ಬರೆದ ಪ್ರಸಿದ್ಧ ವ್ಯಾಖ್ಯಾನ ಗ್ರಂಥಗಳಾಗಿವೆ. ವಲ್ಲಭಾಚಾರ್ಯರ(ಕ್ರಿ.ಶ. ೧೧ನೇ ಶತಮಾನ) 'ನ್ಯಾಯಲೀಲಾವತಿ' ಮತ್ತು ಉದಯನನ 'ಲಕ್ಷಣಾವಳಿ' ಇವುಗಳು ವೈಶೇಷಿಕ ದರ್ಶನಕ್ಕೆ ಬರೆದ ಸಂಗ್ರಹ ಗ್ರಂಥಗಳಾಗಿವೆ.
ವೈಶೇಷಿಕ ಪದ್ಧತಿಯು ನ್ಯಾಯ ಪದ್ಧತಿಯೊಂದಿಗೆ ಕಾಲ ಕ್ರಮೇಣ ಬಹಳ ಹತ್ತಿರದ ಸಾಮತ್ಯೆಯನ್ನು ಹೊಂದಿತು. ಅದರ ಸಾಮ್ಯತೆ ಎಷ್ಟು ಸಮೀಪವಿತ್ತೆಂದರೆ ಕೆಲವು ಕಾಲದ ನಂತರ ಬಂದ ಗ್ರಂಥಕಾರರು ಇವೆರಡನ್ನೂ ಒಂದೇ ಆಗಿ ಪರಿಗಣಿಸಿ ವಿಶ್ಲೇಷಿಸತೊಡಗಿದರು. ಈ ವಿಷಯವಾಗಿ ಬಂದ ಗ್ರಂಥಗಳಲ್ಲಿ ಶಿವಾದಿತ್ಯನ(ಕ್ರಿ.ಶ.೧೦ನೇ ಶತಮಾನ) 'ಸಪ್ತಪದಾರ್ಥಿ' ಹಾಗೂ ವಿಶ್ವನಾಥ ವಿರಚಿತ 'ಭಾಷಾಪರಿಚ್ಛೇದ' ಮತ್ತು ಆ ಗ್ರಂಥಕ್ಕೆ ಅವನೇ ಬರೆದ ಭಾಷ್ಯ - 'ಸಿದ್ಧಾಂತ ಮುಕ್ತಾವಳಿ' ಇವುಗಳು ಉಲ್ಲೇಖಾರ್ಹವಾಗಿವೆ.
ಸಪ್ತ ಪದಾರ್ಥಗಳು
ವೈಶೇಷಿಕ ತತ್ವ ಶಾಸ್ತ್ರವು ಏಳು 'ಪದಾರ್ಥ' ಅಥವಾ ವಾಸ್ತವದ ವಿಧಾನಗಳನ್ನು ಗುರುತಿಸುತ್ತದೆ. ಪದಾರ್ಥದ ಅರ್ಥ 'ಯಾವುದು ಪದದಿಂದ ಗುರುತಿಸಲ್ಪಡುತ್ತದೆ'ಯೋ ಅಥವಾ ಜ್ಞಾನಕ್ಕೆ ಕಾರಕವಾದ ವಸ್ತು. ಈ ರೀತಿಯ ಎಲ್ಲಾ ವಸ್ತುಗಳನ್ನು ಎರಡು ವರ್ಗಗಳಲ್ಲಿ ವಿಭಾಗಿಸಬಹುದು: ಭಾವ (ಇರುವಿಕೆ) ಮತ್ತು ಅಭಾವ (ಇಲ್ಲದಿರುವಿಕೆ). ಭಾವವು ಎಲ್ಲಾ ರೀತಿಯ ಧನಾತ್ಮಕವಾದ ವಾಸ್ತವ ಸಂಗತಿಗಳನ್ನು ಬಿಂಬಿಸಿದರೆ, ಅಭಾವವು ಋಣಾತ್ಮಕ ವಾಸ್ತವಿಕತೆಯನ್ನು ಬಿಂಬಿಸುತ್ತದೆ (ವೈಶೇಷಿಕ ಸೂತ್ರಗಳು ೧.೧.೧೪).
ಸಪ್ತ ಪದಾರ್ಥಗಳು ಅಥವಾ ಏಳು ವಿಧಾನಗಳು ಯಾವುವೆಂದರೆ: ೧) ದ್ರವ್ಯ (ವಸ್ತು); 2) ಗುಣ (ಸ್ವಭಾವ); 3) ಕರ್ಮ (ಕ್ರಿಯೆ); 4) ಸಾಮಾನ್ಯ (ಸಮಾನ ಅಂಶ); 5)ವಿಶೇಷ (ಪ್ರತ್ಯೇಕತೆ); 6) ಸಮವಾಯ (ಅಂತರ್ಗತ ಸಂಭಂದ/ಬೇರ್ಪಡಿಸಲಾಗದ ಸಂಭಂದ) ಮತ್ತು 7) ಅಭಾವ (ಇಲ್ಲದಿರುವಿಕೆ). ಇವುಗಳನ್ನು ಈಗ ಒಂದೊಂದಾಗಿ ಪರಿಶೀಲಿಸೋಣ:
ದ್ರವ್ಯ ಎನ್ನುವ ಒಂದು ವಸ್ತುವು, ಗುಣ (ಸ್ವಭಾವ) ಮತ್ತು ಕರ್ಮ (ಕ್ರಿಯೆ) ಇವುಗಳನ್ನು ಒಳಗೊಳ್ಳಬಹುದು. ದ್ರವ್ಯವು ಎರಡೂ ಪದಾರ್ಥಗಳಿಗೆ ಮೂಲಾಧಾರವಾಗಿದೆ. ಒಂಭತ್ತು ರೀತಿಯ ದ್ರವ್ಯಗಳಿವೆ, ಅವುಗಳೆಂದರೆ: ನಾಲ್ಕು ಧಾತುಗಳಾದ [ಪೃಥ್ವಿ (ಭೂಮಿ), ಜಲ(ನೀರು), ತೇಜಸ್(ಅಗ್ನಿ/ಬೆಳಕು) ಮತ್ತು ವಾಯು(ಗಾಳಿ)]; ಆಕಾಶ (ಮೂಲ ಧಾತು), ಕಾಲ(ಸಮಯ); ದಿಕ್(ಸ್ಥಳ); ಆತ್ಮ(ಜೀವಿ) ಮತ್ತು ಮನಸ್ಸು; ಇವೆಲ್ಲವೂ ನಿತ್ಯನಿರಂತರವಾಗಿವೆ.
ನಾಲ್ಕು ಧಾತುಗಳು ಸೃಷ್ಟಿಕ್ರಿಯೆಗೆ ಮುಂಚೆ ಪರಮಾಣುಗಳ ರೂಪದಲ್ಲಿ ಇದ್ದರೆ; ಆಕಾಶ, ಕಾಲ, ದಿಕ್ಕು ಮತ್ತು ಮನಸ್ಸು ಇವು ಸರ್ವಾಂತರ್ಯಾಮಿಗಳಾಗಿವೆ ಮತ್ತು ಇದರಲ್ಲಿ ಮನಸ್ಸೆಂಬುದು ಅಣುವಿನ ಗಾತ್ರದಲ್ಲಿರುತ್ತದೆ.
ವೈಶೇಷಿಕ ಪದ್ದತಿಯು ಎರಡು ವಿಧವಾದ ಜೀವಿ(ಆತ್ಮ)ಗಳನ್ನು ಗುರುತಿಸುತ್ತದೆ, ಜೀವಾತ್ಮ ಮತ್ತು ಪರಮಾತ್ಮ(ಈಶ್ವರ ಅಥವಾ ಪರಮೇಶ್ವರ ಎಂದೂ ಕರೆಯುತ್ತಾರೆ). ಮೊದಲನೆಯದಾದ ಜೀವಾತ್ಮರು ಅನಂತ ಸಂಖ್ಯೆಯಲ್ಲಿದ್ದರೆ ಪರಮಾತ್ಮನು ಅಥವಾ ಅತ್ಯುನ್ನತ ಆತ್ಮನು ಅಥವಾ ದೇವರು ಒಬ್ಬನೇ ಒಬ್ಬನಿರುತ್ತಾನೆ.
ಗುಣ ಅಥವಾ ಸ್ವಭಾವವು ಯಾವಾಗಲೂ ದ್ರವ್ಯ ಅಥವಾ ವಸ್ತುವಿನ ಆಧಾರಕ್ಕೊಳಪಟ್ಟು ತನ್ನ 'ಇರುವಿಕೆ' ಮತ್ತು 'ವ್ಯಕ್ತವಾಗುವುವಿಕೆ'ಗೆ ಅದನ್ನೇ ಅವಲಂಬಿಸಿದೆ. ಅದು ಯಾವಾಗಲೂ ದ್ರವ್ಯಕ್ಕೇ ಸೇರಿದ್ದೇ ಹೊರತು ಇನ್ನೊಂದು ಗುಣಕ್ಕೆ ಸೇರುವುದಿಲ್ಲ; ಅಂದರೆ ಅದು ದ್ರವ್ಯದ ಭಾಗವೇ ಹೊರತು ಇನ್ನೊಂದು ಗುಣದ ಭಾಗವಲ್ಲ.
ವೈಶೇಷಿಕ ಪದ್ಧತಿಯು ೨೪ ರೀತಿಯ ಗುಣಗಳನ್ನು ಪ್ರತಿಪಾದಿಸುತ್ತದೆ. ಅವುಗಳಲ್ಲಿ ಕೆಲವೆಂದರೆ: ಐದು ಗ್ರಹಣೇಂದ್ರಿಯಗಳ ಗುಣಗಳು(ರೂಪ, ರಸ, ಗಂಧ, ಸ್ಪರ್ಶ, ಶಬ್ದ), ಪರಿಮಾಣ (ಗಾತ್ರ), ಸಂಯೋಗ್ಯ (ಜೋಡಣೆ), ಬುದ್ಧಿ (ಗ್ರಹಿಕೆ), ಸುಖ ಮತ್ತು ದುಃಖ (ನೋವು ಮತ್ತು ನಲಿವುಗಳು), ಇಚ್ಛೆ ಮತ್ತು ದ್ವೇಷ (ಇಷ್ಟ ಮತ್ತು ಅಯಿಷ್ಟಗಳು), ಸಂಸ್ಕಾರ (ಧೋರಣೆ/ಸಹಜ ಪ್ರವೃತ್ತಿ), ಧರ್ಮ ಮತ್ತು ಅಧರ್ಮ (ಒಳ್ಳೆಯ ಮತ್ತು ಕೆಟ್ಟ ಗುಣಗಳು).
ಇಲ್ಲಿ ಗುಣಗಳನ್ನು ೨೪ಕ್ಕೇ ಪರಿಮಿತಗೊಳಿಸುವುದರ ಹಿಂದಿರುವ ಉದ್ದೇಶವೇನೆಂದರೆ ಅವುಗಳನ್ನು ಇದಕ್ಕೂ ಹೆಚ್ಚಾಗಿ ವಿಭಾಗಿಸಲು ಆಗುವುದಿಲ್ಲವೆನ್ನುವುದು ವೈಶೇಷಿಕರ ಅಭಿಮತ.
ಕರ್ಮ ಅಥವಾ ಕ್ರಿಯೆಯು ಒಂದು ಭೌತಿಕ ಚಲನೆ. ಅದು ವಸ್ತುವಿಗೆ ಸೇರಿದ್ದಾಗಿದ್ದು ಅದರ ಸ್ವಭಾವವು ನಿರಂತರ ಬದಲಾವಣೆ ಹೊಂದುವುದು. ಐದು ರೀತಿಯಾದ ಚಲನೆಗಳನ್ನು; ಉತ್ಕ್ಷೇಪಣ (ಮೇಲೆ ತೂರುವಿಕೆ) ಮತ್ತು ಆಕುಂಚನ (ಕುಗ್ಗುವಿಕೆ) ಮೊದಲಾದವುಗಳನ್ನು ಪಟ್ಟಿ ಮಾಡಲಾಗಿದೆ. ಈ ರೀತಿಯ ಚಲನೆಗಳನ್ನು ಕಣ್ಣು, ಚರ್ಮ ಮೊದಲಾದ ಪಂಚೇಂದ್ರಿಯಗಳಿಂದ ಗ್ರಹಿಸಬಹುದು. ಮನಸ್ಸೂ ಕೂಡ ಚಲನೆಯನ್ನು ಒಳಗೊಂಡಿದೆ ಆದರೆ ಅದನ್ನು ಬಾಹ್ಯವಾಗಿ ಗ್ರಹಿಸಲಾಗದು. ಮುಂದುವರಿಯುವುದು.....................
==================================================================================
ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Vaiseshika Darshanaನದ 22 ರಿಂದ 25ನೆಯ ಪುಟದ ಅನುವಾದದ ಭಾಗ.
ಈ ಸರಣಿಯ ಹಿಂದಿನ ಲೇಖನ "ನ್ಯಾಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೩ (೩ ) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%A8%E0%B3%8D%E0%B2%AF%E0%B2%BE%E0%B2%AF-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%A9-%E0%B3%A9/31/03/2012/36198
================================================================================
ಚಿತ್ರಕೃಪೆಃ ಗೂಗಲ್
Comments
ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by mmshaik
ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by makara
ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by ಗಣೇಶ
ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by kavinagaraj
ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...