ಸತ್ಯ ಮುಚ್ಚಿಟ್ಟ ಸಾವಿತ್ರಿ

ಸತ್ಯ ಮುಚ್ಚಿಟ್ಟ ಸಾವಿತ್ರಿ

      ಇದು ಸುಮಾರು ೬ ವರ್ಷಗಳ ಹಿಂದೆ ನಡೆದ ಸತ್ಯ ಘಟನೆ. [ಹೆಸರುಗಳನ್ನು ಬದಲಿಸಿದೆ.]  ಬಸವಣ್ಣಪ್ಪನಿಗೆ ನಾಲ್ವರು -ಇಬ್ಬರು ಗಂಡು, ಇಬ್ಬರು ಹೆಣ್ಣು- ಮಕ್ಕಳು. ಹಿರಿಯ ಮಗ ಮತ್ತು ಹಿರಿಯ ಮಗಳಿಗೆ ಮದುವೆಯಾಗಿತ್ತು. ಎರಡನೆಯ ಮಗಳು ಸಾವಿತ್ರಿಗೆ ಆಗಲೇ ೨೩ ವರ್ಷವಾಗಿದ್ದು ಮದುವೆಗೆ ಗಂಡು ನೋಡುತ್ತಿದ್ದರು. ಪರಿಚಯದವರೊಬ್ಬರು ಸಮೀಪದ ಗ್ರಾಮದ ಈಶ್ವರಪ್ಪನ ಮಗ ಗಣೇಶನಿಗೆ ಏಕೆ ಕೊಡಬಾರದೆಂದು ಪ್ರಸ್ತಾಪಿಸಿದಾಗ ಪರಸ್ಪರರು ಭೇಟಿ ಮಾಡಿ ಮಾತುಕತೆ ನಡೆಸಿದರು. ಉಭಯತ್ರರಿಗೂ ಒಪ್ಪಿಗೆಯಾದಾಗ ಗಂಡು-ಹೆಣ್ಣು ನೋಡುವ, ಕೊಡುವ-ಬಿಡುವ ಮಾತು, ಶಾಸ್ತ್ರಗಳು ಜರುಗಿದವು. ಮಾಡಬೇಕಾದ ವರೋಪಚಾರಗಳನ್ನೂ ಮಾಡುವುದರೊಂದಿಗೆ ಸಾಂಪ್ರದಾಯಿಕವಾಗಿ ಮದುವೆಯೂ ಆಯಿತು. ನೆಂಟರ, ಬೀಗರ ಔತಣಗಳು ಎಲ್ಲವೂ ಸುಸೂತ್ರವಾಗಿ ಮುಗಿದು, ಗಣೇಶ-ಸಾವಿತ್ರಿ ಸತಿಪತಿಗಳೆನಿಸಿದರು.
     ನಿಜವಾದ ಕಥೆ ಪ್ರಾರಂಭವಾಗುವುದೇ ಈಗ. ಶುಭದಿನವೊಂದನ್ನು ನೋಡಿ ಪ್ರಸ್ತಕ್ಕೆ ಪ್ರಶಸ್ತ ದಿನ ಆರಿಸಿದರು. ಅಂದು ರಾತ್ರಿ ಸಾವಿತ್ರಿ ತುಂಬಾ ಹೊಟ್ಟೆನೋವು ಬಂದು ಒದ್ದಾಡಲು ಪ್ರಾರಂಭಿಸಿದ್ದನ್ನು ಕಂಡ ಗಣೇಶ ಕಕ್ಕಾಬಿಕ್ಕಿಯಾದ. ಸಂಕೋಚದಿಂದಲೇ ಬಾಗಿಲು ತೆರೆದು ಹೊರಬಂದ ಅವನು ಮನೆಯವರಿಗೆ ವಿಷಯ ತಿಳಿಸಿದ. ಗುರುತಿದ್ದ ಪಕ್ಕದ ಹಳ್ಳಿಯ ಡಾಕ್ಟರರಿಗೆ ಫೋನು ಮಾಡಿದರೆ ಅವರು ಕರೆದುಕೊಂಡು ಬರಲು ತಿಳಿಸಿದರು. ಗಣೇಶ ಹೆಂಡತಿಯನ್ನು ಮೋಟಾರ್ ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ವೈದ್ಯರಿಗೆ ತೋರಿಸಿದ. ಪರೀಕ್ಷೆ ಮಾಡಿದ ವೈದ್ಯರು ಗಣೇಶನ ಬೆನ್ನು ತಟ್ಟಿ "ನೀನು ತಂದೆಯಾಗುತ್ತಿದ್ದೀಯಾ, ನಿನ್ನ ಹೆಂಡತಿಗೆ ಈಗ ಎರಡೂವರೆ ತಿಂಗಳು" ಎಂದು ಶಹಭಾಶಗಿರಿ ಹೇಳಿದಾಗ ಅವನು ಕುಸಿದು ಹೋಗಿದ್ದ. ಮಾತನಾಡದೆ ಪತ್ನಿಯನ್ನು ಮನೆಗೆ ವಾಪಸು ಕರೆತಂದ. ಅವನ ಸ್ವಪ್ನ ಸೌಧ ಬಿದ್ದು ಹೋಗಿತ್ತು. ನಂತರ ಏನು ನಡೆಯಬಹುದೋ ಅದೇ ನಡೆಯಿತು. ಮೋಸ ಮಾಡಿ ಮದುವೆ ಮಾಡಿದ ಬಗ್ಗೆ ಗಣೇಶನ ಮನೆಯವರು ಕ್ರುದ್ಧರಾಗಿದ್ದರು. ಸಾವಿತ್ರಿಗೆ ಕಿರುಕುಳ ಪ್ರಾರಂಭವಾಯಿತು.
     ಮಗಳಿಗೆ ಕಿರುಕುಳ ಕೊಡುತ್ತಿದ್ದ ವಿಷಯ ತಂದೆ ಬಸವಣ್ಣಪ್ಪನಿಗೆ ಗೊತ್ತಾಗಿ ಆತ ತನ್ನ ಇನ್ನೊಬ್ಬ ಬೀಗರಾದ ಕುಳ್ಳಪ್ಪನನ್ನು ಕರೆದುಕೊಂಡು ಗಣೇಶನ ಮನೆಗೆ ಹೋಗಿ ಮಾತನಾಡಿದ್ದರು, ಸಹಜವಾಗಿ ಅವರಿಗೆ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಇದಾಗಿ ಕೆಲವು ದಿನಗಳ ನಂತರ ಗಣೇಶ, ಅವನ ತಂದೆ,ತಾಯಿ ಮತ್ತು ಕೆಲವರು ಹಿರಿಯರು ಸೇರಿ ಬಸವಣ್ಣಪ್ಪನ ಮನೆಗೆ ನ್ಯಾಯ ಪಂಚಾಯಿತಿ ಮಾಡಲು ಬಂದರು. 'ಈ ಊರಿನಲ್ಲಿ ಪಂಚಾಯಿತಿ ಮಾಡುವುದು ಬೇಡ, ಚೆನ್ನಾಗಿರುವುದಿಲ್ಲ, ನಾವೇ ನಿಮ್ಮೂರಿಗೆ ಬರುತ್ತೇವೆ' ಎಂದು ಹೇಳಿದ ಬಸವಣ್ಣಪ್ಪ ಪಂಚಾಯಿತಿಗೆ ಒಪ್ಪಲಿಲ್ಲ. ಸಾವಿತ್ರಿಯನ್ನು ತಂದೆಯ ಮನೆಯಲ್ಲೇ ಬಿಟ್ಟು ಬಂದವರು ಮರಳಿದರು.    
     ಒಂದೆರಡು ತಿಂಗಳು ಕಳೆಯಿತು. ಒಂದಲ್ಲಾ ಒಂದು ಕಾರಣದಿಂದ ಪಂಚಾಯಿತಿ ಸರಿಯಾಗಿ ನಡೆಯಲೇ ಇಲ್ಲ. ಒಂದು ದಿನ ಗಣೇಶನೇ ಮಾವನಿಗೆ ಫೋನು ಮಾಡಿ 'ನೀವೇನೂ ಪಂಚಾಯಿತಿ ಮಾಡುವುದು ಬೇಡ, ನಿಮ್ಮ ಮಗಳನ್ನು ಕರೆದುಕೊಂಡು ಬನ್ನಿ' ಎಂದು ತಿಳಿಸಿದ. ಬಸವಣ್ಣಪ್ಪ ಸಾವಿತ್ರಿಯನ್ನು ಕರೆದುಕೊಂಡು ಹೋಗಿ ಬೀಗರ ಮನೆಗೆ ಬಿಟ್ಟು ಬಂದ. ಎಲ್ಲವೂ ಸರಿಹೋದೀತು ಎಂಬುದು ಅವನ ನಿರೀಕ್ಷೆಯಾಗಿತ್ತು. ಇಷ್ಟಾದರೂ ಸಾವಿತ್ರಿ ತುಟಿ ಬಿಚ್ಚಿರಲಿಲ್ಲ, ಏನನ್ನೂ ಹೇಳಿರಲಿಲ್ಲ.

     ಸುಮಾರು ೧೦-೧೨ ದಿನಗಳ ನಂತರ ಬೈಕಿನಲ್ಲಿ ಸಾವಿತ್ರಿಯನ್ನು ಕೂರಿಸಿಕೊಂಡು ಮಾವನ ಮನೆಗೆ ಬಂದ ಗಣೇಶ ಅಂದು ಮಧ್ಯಾಹ್ನ ಅಲ್ಲಿಯೇ ಊಟ ಮಾಡಿದರು. 'ಕೂಲಿ ಕೆಲಸಕ್ಕೆ ದಾವಣಗೆರೆಗೆ ಹೋಗುತ್ತಿದ್ದೇವೆ, ಸ್ವಲ್ಪ ದಿವಸ ಊರಿಗೆ ಹೋಗುವುದಿಲ್ಲ' ಎಂದು ಹೇಳಿದವನು ಅಂದು ಮಧ್ಯಾಹ್ನವೇ ಊಟದ ನಂತರ ಅಲ್ಲಿಂದ ಬೈಕಿನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಹೊರಟ. ಸಾಯಂಕಾಲ ಸುಮಾರು ೭.೩೦ರ ಸಮಯದಲ್ಲಿ ಬಸವಣ್ಣಪ್ಪನ ಪಕ್ಕದ ಮನೆಗೆ ಫೋನು ಮಾಡಿ 'ದಾವಣಗೆರೆಯಲ್ಲಿ ಇರುವುದಾಗಿಯೂ, ಏನೂ ತೊಂದರೆಯಿಲ್ಲವೆಂದೂ, ಚೆನ್ನಾಗಿದ್ದೇವೆಂದೂ' ಗಣೇಶ ಮತ್ತು ಸಾವಿತ್ರಿ ಇಬ್ಬರೂ ತಿಳಿಸಿದರು.
      ಮರುದಿನ ಬೆಳಿಗ್ಗೆ ಬಸವಣ್ಣಪ್ಪ ಎಂದಿನಂತೆ ಜಮೀನಿನ ಕೆಲಸದಲ್ಲಿ ತೊಡಗಿಕೊಂಡಿದ್ದ. ಅಗ ಅವನ ಪರಿಚಯಸ್ಥರು ಓಡುತ್ತಾ ಬಂದು "ಬಸವಣ್ಣಾ, ಬೇಗ ಹೊರಡು, ನಿನ್ನ ಅಳಿಯ ವಿಷ ಕುಡಿದಿದ್ದಾನೆ, ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ" ಎಂದು ತಿಳಿಸಿದಾಗ ಗಾಬರಿಗೊಂಡ ಅವನು ಮಿತ್ರರ ಬೈಕಿನಲ್ಲಿ ಅಳಿಯನ ಊರಿನ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ. ಅಲ್ಲಿ ಗಣೇಶನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋದ ವಿಷಯ ತಿಳಿಯಿತು. ಮಗಳ ಕುರಿತು ವಿಚಾರಿಸಿದರೆ ಯಾರೂ ಸ್ಪಷ್ಟ ಮಾಹಿತಿ ಕೊಡಲಿಲ್ಲ, ತಮಗೆ ಗೊತ್ತಿಲ್ಲವೆಂದರು. ಶಿವಮೊಗ್ಗ ಆಸ್ಪತ್ರೆಗೂ ಹೋಗಿ ನೋಡಿದರೆ ಅಳಿಯ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಮಗಳ ಸುಳಿವಿರಲಿಲ್ಲ. ಮರುದಿನ ಬೆಳಿಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಗೆ ಹೋಗಿ 'ತಮ್ಮ ಮಗಳ ಪತ್ತೆಯಿಲ್ಲ, ಹುಡುಕಿಕೊಡಿ' ಎಂದು ಬಸವಣ್ಣಪ್ಪ ದೂರು ದಾಖಲಿಸಿದ. ಸ್ವಲ್ಪ ಸಮಯದ ನಂತರದಲ್ಲಿ ಊರ ಹೊಳೆಯ ಹತ್ತಿರ ಯಾರದೋ ಚಪ್ಪಲಿ, ವಾಚು ಬಿದ್ದಿದೆ ಅಂತ ಊರಿನವರು ಮಾತನಾಡಿಕೊಳ್ಳುತ್ತಿದ್ದುದು ಕಿವಿಗೆ ಬಿದ್ದು, ಉಳಿದವರೊಂದಿಗೆ ಅವನೂ ಹೊಳೆಯ ಹತ್ತಿರ ಹೋಗಿ ನೋಡಿದರೆ, ಅವು ಬಸವಣ್ಣಪ್ಪನ ಮಗಳದ್ದೇ ಆಗಿದ್ದವು. ಹುಡುಕಿ ನೋಡಿದರೆ ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಹಾಳು ಕಸ ಕಡ್ಡಿ, ಬಳ್ಳಿಗಳು ತುಂಬಿದ್ದ ಹೊಳೆಯ ಹತ್ತಿರದ ಹಳುವಿನಲ್ಲಿ ಅಂಗಾತವಾಗಿ ಸಿಕ್ಕಿಕೊಂಡಿದ್ದ ಹೆಣ ಕಂಡು ಬಂತು. ಹೆಣ ಕೆಸರಿನಲ್ಲಿದ್ದು ಗುರುತು ಹಿಡಿಯುವುದು ಕಷ್ಟವಾಗಿದ್ದರೂ, ಬಟ್ಟೆಯ ಆಧಾರದಲ್ಲಿ ಅದು ಮಗಳು ಸಾವಿತ್ರಿಯದೇ ಎಂದು ಬಸವಣ್ಣಪ್ಪ ಕಂಡುಕೊಂಡ. ತಲೆಯ ಮೇಲೆ ಕೈಹೊತ್ತು ಕುಸಿದು ಕುಳಿತ.
     ಘಟನೆ ನಡೆದ ತಾಲ್ಲೂಕಿನ ತಹಸೀಲ್ದಾರರು ಸಾಂದರ್ಭಿಕ ರಜೆಯಲ್ಲಿದ್ದರಿಂದ ಪಕ್ಕದ ತಾಲ್ಲೂಕಿನಲ್ಲಿ ತಹಸೀಲ್ದಾರ್ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿದ್ದ ನನ್ನನ್ನು ಪೋಲಿಸ್ ಕೋರಿಕೆಯಂತೆ ಶವತನಿಖೆಗೆ ಅಧಿಕೃತಗೊಳಿಸಿ ಅಸಿಸ್ಟೆಂಟ್ ಕಮಿಷನರರು ಫ್ಯಾಕ್ಸ್ ಸಂದೇಶ ಕಳಿಸಿದರು. ನಾನು ತಕ್ಷಣ ಸಂಬಂಧಿಸಿದ ಗುಮಾಸ್ತರನ್ನು ಕರೆದುಕೊಂಡು ಹೊರಟರೂ ತಲುಪುವ ವೇಳೆಗೆ ಸಾಯಂಕಾಲವಾಗುವ ಸಂಭವವಿದ್ದುದರಿಂದ ಪೆಟ್ರೋಮ್ಯಾಕ್ಸ್ ಲೈಟುಗಳಿಗೆ ವ್ಯವಸ್ಥೆ ಮಾಡಿರಲು ಹಾಗೂ ಸರ್ಕಾರೀ ವೈದ್ಯರಿಗೂ ಸೂಚಿಸಿ ಬಂದಿರಲು ತಿಳಿಸಿರಲು ಫೋನ್ ಮೂಲಕವೇ ಸೂಚನೆ ಕೊಟ್ಟೆ. ಅರ್ಧ ದಾರಿಯಲ್ಲಿ ಅಲ್ಲಿನ  ಸರ್ಕಲ್ ಇನ್ಸ್‌ಪೆಕ್ಟರರು, ಅವರ ಸಿಬ್ಬಂದಿ ಜೊತೆಗೂಡಿದರು. ಶವವಿದ್ದ ಸ್ಥಳ ಇನ್ನೂ ಸುಮಾರು ೩ ಕಿ.ಮೀ. ಇದ್ದಂತೆಯೇ ಜೀಪು ಹೋಗಲು ದಾರಿಯಿಲ್ಲದೆ ನಡೆದೇ ಹೋಗಬೇಕಿತ್ತು. ಮಳೆಗಾಲವಾಗಿದ್ದು ಮೋಡ ಮುಸುಕಿ ಜಿಟಿ ಜಿಟಿ ಮಳೆ ಬೀಳುತ್ತಿದ್ದಂತೆಯೇ ನಮ್ಮ ಸವಾರಿ ಮುಂದುವರೆಯಿತು. ನಾಟಿ ಮಾಡಿದ್ದ ಜಾರುತ್ತಿದ್ದ ಬದಿಗಳಲ್ಲಿ ಎಚ್ಚರಿಕೆಯಿಂದ ಬೀಳದಂತೆ ಹೆಜ್ಜೆಯಿಟ್ಟು ನಡೆಯಬೇಕಿತ್ತು. ನಮ್ಮ ಗ್ರಾಮಸಹಾಯಕನೊಬ್ಬ ನನಗೆ ಟಾರ್ಚು ಹಿಡಿದು ದಾರಿ ತೋರಿಸಲು ತಿರಿತಿರುಗಿ ನೋಡುತ್ತಾ ಹೋಗುತ್ತಿದ್ದಾಗ ಜಾರಿಬಿದ್ದು ಮೈಕೈಯೆಲ್ಲಾ ಕೆಸರು ಮಾಡಿಕೊಂಡಿದ್ದು ಅಂತಹ ವಿಷಾಧದ ಸಂದರ್ಭದಲ್ಲೂ ಎಲ್ಲರಿಗೆ ನಗು ತರಿಸಿತ್ತು. ಅವನು ಬಿದ್ದದ್ದು ಉಳಿದವರು ಇನ್ನೂ ಎಚ್ಚರಿಕೆಯಿಂದ ನಡೆಯುವಂತೆ ಮಾಡಿತ್ತು. ಆ ಕತ್ತಲೆಯ ಸಂಜೆಯಲ್ಲಿ ಗದ್ದೆಯ ಬದಿಯಲ್ಲಿ ಪೆಟ್ರೋಮ್ಯಾಕ್ಸ್ ಲೈಟುಗಳು, ಹಗ್ಗಗಳು, ಗಳುಗಳು, ಛತ್ರಿಗಳು, ಇತ್ಯಾದಿಗಳನ್ನು ಹಿಡಿದುಕೊಂಡು ನಾವುಗಳು ಹೋಗುತ್ತಿದ್ದುದನ್ನು ದೂರದಿಂದ ನೋಡಿದವರಿಗೆ ಕೊಳ್ಳಿದೆವ್ವಗಳಂತೆ ಕಂಡಿರಲೂ ಸಾಕು. ಪಾಪ, ಡಾಕ್ಟರರೂ ತಮ್ಮ ಒಬ್ಬ ಸಹಾಯಕನೊಂದಿಗೆ ಸಲಕರಣೆಗಳನ್ನು ಹಿಡಿದುಕೊಂಡು ನಮ್ಮೊಂದಿಗೆ ಹೆಜ್ಜೆ ಹಾಕಿದ್ದರು.
     ಅಂತೂ ಶವವಿದ್ದ ಸ್ಥಳ ತಲುಪಿದೆವು. ಶವವೋ ಅಲ್ಲಿದ್ದ ಹಳುಗಳ ನಡುವೆ ಸಿಕ್ಕಿಕೊಂಡಿದ್ದು ಕಾಣಿಸುತ್ತಿದ್ದರೂ, ಅದನ್ನು ಅಲ್ಲಿಂದ ಬಿಡಿಸಿ ಹೊರತರಲು ಕೆಳಗಿನ ಸಿಬ್ಬಂದಿ ಸುಮಾರು ಒಂದು ಗಂಟೆಯ ಕಾಲ ಹೆಣಗಬೇಕಾಯಿತು. ಶವಕ್ಕೆ ಕೆಸರು ಮೆತ್ತಿದ್ದರಿಂದ ನೀರು ಸುರಿದು ಸ್ವಚ್ಛಗೊಳಿಸಬೇಕಾಯಿತು. ಆ ದೃಷ್ಯ ಭೀಕರವಾಗಿತ್ತು, ದುರ್ವಾಸನೆ ತಡೆಯುವಂತಿರಲಿಲ್ಲ. ಸುಮಾರು ೨-೩ ದಿನಗಳು ನೀರಿನಲ್ಲೇ ಕೊಳೆತಿದ್ದ ಆ ಶವದ ನಾಲಿಗೆ ಹೊರಚಾಚಿ ಕಚ್ಚಿಕೊಂಡಿದ್ದು, ನಾಲಿಗೆ ಊದಿದ್ದರಿಂದ ಬಾಯಿಯಲ್ಲಿ ಬಲೂನು ಇಟ್ಟುಕೊಂಡಿದ್ದಂತೆ ಕಾಣುತ್ತಿತ್ತು. ತಲೆಯಲ್ಲಿ ಕೂದಲು ಇರಲಿಲ್ಲ, ತಲೆಯಚರ್ಮ ಕೊಳೆತಿದ್ದರಿಂದ ಕಳಚಿಹೋಗಿತ್ತು. ಎರಡೂ ಕೈಗಳು ಶೆಟಗೊಂಡಿದ್ದವು. ಬಲಗೈ ಮಣಿಕಟ್ಟಿನ ಹತ್ತಿರ ಸುಮಾರು ಮೂರು ಇಂಚು ಉದ್ದ, ಎರಡೂವರೆ ಇಂಚು ಅಗಲದ ಕಡಿತದಿಂದಾದ ರೀತಿಯ ಗಾಯವಿತ್ತು. ಹೊಟ್ಟೆಯಿಂದ ಕರುಳು ಹೊರಬಂದಿದ್ದು, ಇಡೀ ದೇಹ ಊದಿಕೊಂಡಿತ್ತು. ದೇಹದ ಅಲ್ಲಲ್ಲಿ ಜಲಚರಗಳು ದೇಹವನ್ನು ತಿಂದಿದ್ದವು. ಈ ಲೇಖನ ಬರೆಯುತ್ತಿರುವಾಗಲೂ ಆ ದೃಷ್ಯ ಕಣ್ಣ ಮುಂದೆ ರಾಚಿದಂತೆ ಇದೆ. ಗಮನಿಸಿದ ಸಂಗತಿಗಳನ್ನು ಪಂಚರ ಸಮಕ್ಷಮದಲ್ಲಿ ದಾಖಲಿಸಿ ಸಂಬಂಧಿಸಿದ ಎಲ್ಲರ ಸಹಿ ಪಡೆದೆ. ಮೃತಳ ತಂದೆಯ ಮತ್ತು ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಂಡೆ. ಪ್ರಾರಂಭದಲ್ಲಿ ಹೇಳಿದ ಸಂಗತಿಗಳು ದಾಖಲಿಸಿಕೊಂಡ ಹೇಳಿಕೆಗಳಲ್ಲಿವೆ. ನಂತರದಲ್ಲಿ ಸರ್ಕಾರಿ ವೈದ್ಯರಿಗೆ ಪೋಸ್ಟ್ ಮಾರ್ಟಮ್ ಮಾಡಿ ವರದಿಯನ್ನು ಪೋಲಿಸರಿಗೆ ತಲುಪಿಸಲು ಹಾಗೂ ಆ ನಂತರದಲ್ಲಿ ವಾರಸುದಾರರಿಗೆ ಶವವನ್ನು ಅಂತ್ಯ ಸಂಸ್ಕಾರಕ್ಕೆ ತಲುಪಿಸಲು ಸೂಚನೆ ನೀಡಿ ಹೊರಬಂದೆ. ಇದು ಶೀಲ ಶಂಕಿಸಿ ನಡೆದ ಕೊಲೆಯೆಂದು ಮೇಲುನೋಟಕ್ಕೆ ಗೋಚರವಾಗುವಂತಹ ಸಂಗತಿಯಾಗಿತ್ತು. ಕೊಲೆ ಮಾಡಿ ನದಿಗೆ ಎಸೆಯಲಾಗಿದ್ದ ಶವ ಕೊಚ್ಚಿಕೊಂಡು ಹೋಗಿ ಸುಮಾರು ಎರಡು ಕಿ.ಮೀ. ದೂರದ ಹಳುವಿನಲ್ಲಿ ಸಿಕ್ಕಿಕೊಂಡಿತ್ತು. ಸತ್ಯ ಮುಚ್ಚಿಟ್ಟು ಮದುವೆ ಮಾಡಿರದಿದ್ದರೆ ಬಹುಷಃ ಹೀಗೆ ಆಗುತ್ತಿರಲಿಲ್ಲವೇನೋ! ಮನೆಗೆ ಬಂದು ತಲುಪಿದಾಗ ರಾತ್ರಿ ಹನ್ನೊಂದು ಗಂಟೆಯಾಗಿತ್ತು.  ಆಗ ಸ್ನಾನ ಮಾಡಿ ಬಂದವನಿಗೆ ಊಟ ಮಾಡುವುದಿರಲಿ, ಮಡದಿ ಕೊಟ್ಟ ಕಾಫಿ ಸಹ ಕುಡಿಯಬೇಕೆನ್ನಿಸಲಿಲ್ಲ. ಸೂರನ್ನು ದಿಟ್ಟಿಸುತ್ತಾ ಮಲಗಿದವನಿಗೆ ಅದು ಯಾವಾಗಲೋ ನಿದ್ರೆ ಬಂದಿತ್ತು.
-ಕ.ವೆಂ.ನಾಗರಾಜ್.
**********************
[ಪೂರಕ ಮಾಹಿತಿ:
     ಯಾವುದೇ ಹೆಣ್ಣುಮಗಳು ಮದುವೆಯಾದ ೭ ವರ್ಷಗಳ ಒಳಗೆ ಮೃತಳಾದರೆ ಅದನ್ನು ವರದಕ್ಷಿಣೆಗಾಗಿ ಆದ ಸಾವೆಂಬ ಹಿನ್ನೆಲೆಯಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರು ಅಥವ ಮೇಲ್ಪಟ್ಟ ಅಧಿಕಾರಿ ಶವತನಿಖೆ ನಡೆಸಬೇಕಾಗಿರುತ್ತದೆ. ಪೋಲಿಸರಿಂದ ಪ್ರಥಮ ವರ್ತಮಾನ ವರದಿಯೊಡನೆ ಶವತನಿಖೆಗೆ ಕೋರಿಕೆ ಸ್ವೀಕರಿಸಿದ ನಂತರ ತನಿಖೆ ಮಾಡಲಾಗುತ್ತದೆ. ವರದಿಯನ್ನು ನ್ಯಾಯಾಲಯಕ್ಕೆ ಕಳಿಸಿಕೊಡಲಾಗುತ್ತದೆ. ಇದು ಪೋಲಿಸ್ ತನಿಖೆಗೆ ಪರ್ಯಾಯವಲ್ಲ. ಇದು ಕೇವಲ ಹೆಚ್ಚುವರಿ ತನಿಖೆಯಾಗಿರುತ್ತದೆ. ಇತರ ಕೊಲೆ/ಸಾವುಗಳ ಪ್ರಕರಣಗಳಲ್ಲಿ ನಡೆಯುವಂತೆ ಪೋಲಿಸರೇ ಪೂರ್ಣ ತನಿಖೆ ನಡೆಸಿ ಮೊಕದ್ದಮೆ ದಾಖಲು ಮಾಡುತ್ತಾರೆ ಮತ್ತು ಪ್ರಕರಣ ಸಾಬೀತು ಪಡಿಸುವ ಹೊಣೆಗಾರಿಕೆ ಅವರದ್ದು ಮತ್ತು ಸರ್ಕಾರಿ ಅಭಿಯೋಜಕರುಗಳದ್ದಾಗಿರುತ್ತದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ತಹಸೀಲ್ದಾರರನ್ನೂ ಸಾಕ್ಷಿಯಾಗಿ ಕರೆಸಲಾಗುತ್ತದೆ.]
ಹಿಂದಿನ ಲೇಖನ 'ಕ್ರೌರ್ಯ ಕೇಕೆ ಹಾಕಿತು'ಗೆ ಲಿಂಕ್: sampada.net/%E0%B2%95%E0%B3%87%E0%B2%95%E0%B3%86-%E0%B2%B9%E0%B2%BE%E0%B2%95%E0%B2%BF%E0%B2%A4%E0%B3%81-%E0%B2%95%E0%B3%8D%E0%B2%B0%E0%B3%8C%E0%B2%B0%E0%B3%8D%E0%B2%AF
 

Comments