ನಿಜವಾದ ಶ್ರೀಮಂತ ಯಾರು ಗೊತ್ತಾ?

ನಿಜವಾದ ಶ್ರೀಮಂತ ಯಾರು ಗೊತ್ತಾ?

Comments

ಬರಹ

ಇವರು ಯಾಕೆ ಯಾವಾಗಲು ಹಿಂಗೆ ಇರೋದು.ಎಲ್ಲಿಗಾದರೂ ಹೋಗಬೇಕಾದರೆ ಇವರಿಗೆ ಕೇಳಲೇ ಬೇಕು,ಏನಾದರು ಕೊಡಿಸು ಅಂದರೆ ಮುಖ ಕೆಂಪಗಾಗಿಸಿ ನೋಡ್ತಾರೆ,ದಿನದಲ್ಲಿ ಒಂದೋ ಎರಡೋ ಮಾತಾಡ್ತಾರೆ,ಅಮ್ಮ ಯಾಕೆ ಇವರನ್ನ ನೋಡಿ ಗಡ ಗಡ ನಡುಗಬೇಕು,ಒರಗೆಯವರೆಲ್ಲ ಇವರ ಬಗ್ಗೆ ಮಾತಾಡೋಕು ಹೆದರತಾರೆ ಯಾಕೆ,ಬರಿ ನ್ಯೂಸ್ ಚಾನೆಲ್ಸ್ ನೋಡ್ತಾರೆ ನಮಗೆ ಹೊಸ ಹಾಡು ಕೇಳೋಕೆ ಬಿಡಲ್ಲಾ.ಯಾಕೆ, ಆಗಲ್ಲಾ ,ನೋಡೋಣಾ  ಇವು ಇವರ ಫೆವರೆಟ್ ಪದಗಳು ...ನಮ್ಮ ಅಪ್ಪ ತುಂಬಾ ಸ್ತ್ರಿಕ್ಟು ಮಾತೆತ್ತಿದರೆ ಬೆಲ್ಟ್ ತಗೋತಾರೆ,ನಮ್ಮಪ್ಪಾನು ಅಷ್ಟೇ ಕೈ ಕಾಲಿಗೆಲ್ಲ ಹಗ್ಗ ಕಟ್ಟಿ ಹೊಡಿತಾರೆ ,ನಮ್ ತಂದೆ ಏನ್ ಕಡಿಮೆನಾ ಖಾರದಪುಡಿ ನಮ್ ತಂದೆ ಟೇಬಲ್ ಮೇಲೆ ಖಾಯಂ ಆಗಿ ಇರುತ್ತೆ  ಚೂರು ಗಲಾಟೆ ಮಾಡಿದ್ರು ನಿನ್ ಕಣ್ಣಿಗೆ ಖಾರದ ಪುಡಿ ಹಾಕ್ತೀನಿ ಅಂತಿರ್ತಾರೆ ಈ ಮಾತುಗಳು ನಾವೂ ಶಾಲಾ ದಿನಗಳಲ್ಲಿ ಆಡಿರುತ್ತೇವೆ.ಬೈಕು ಕೊಡಿಸು ಅಂದ್ರೆ ಸಾಕು ಯಾವಾಗಲು ಸಿಡುಕ್ತಾರೆ ನಮ್ಮಪ್ಪಾ, ಪಿಕ್ನಿಕ್ ಟೂರ್  ಹೋಗಬೇಕಾದ್ರೆ ನಮ್ಮ ಗೆಳತಿಯರನ್ನ ಮನೆಗೆ ಕರೆದು ಕೊಂಡು ಹೋಗಿ ಹೇಳಿಸಿದ ಮೇಲೆ ಬಿಡೋದು ನಮ್ಮಪ್ಪಾ,ಪ್ಯಾಕೆಟ್ ಮನಿ ಕೊಡೋದೇ ಇಲ್ಲಾ ಅಂತೀನಿ ಈ ಮಾತುಗಳು ನಾವೂ ಕಾಲೇಜ್ ದಿನಗಳಲಿ ಅಡಿರುತ್ತೇವೆ.ಯಾಕೆ ನಮ್ಮ ಅಪ್ಪಂದಿರು ಇಷ್ಟೊಂದು ಕಟ್ಟುನಿಟ್ಟಾಗಿ ಇರ್ತಾರೆ,ಯಾಕೆ ಯಾವಾಗಲು ಮುಖ ಗಂಟು ಹಾಕ್ಕೊಂಡೆ ಇರ್ತಾರೆ,ಅವರಿಗೇನೂ ನಮ್ ಮೇಲೆ ಪ್ರೀತಿನೆ ಇಲ್ವಾ? ಈ ಥರ ಯೋಚನೆಗಳು ನಮಗೆಲ್ಲಾ ಒಂದಿಲ್ಲ ಒಂದಿನ ಬಂದೆ ಇರುತ್ತವೆ.
 
ಸಂಸಾರದ ಹೊರೆ ಹೊತ್ತು ಯಾವಾಗಲು ನಮ್ಮ ಬಗ್ಗೆ ಚಿಂತಿಸಿ ಈ ಮುಗಿಯದ ಕಾಲಚಕ್ರದಲ್ಲಿ ತನ್ನ ಸಂಸಾರವೆಲ್ಲಿ ಹಿಂದೆ ಬಿಳುವುದೋ ಎಂದು ದಿನವಿಡೀ ಶ್ರಮಿಸುವ ಅಪ್ಪನಿಗೆ ಮನೆಗೆ ಬಂದು ಯಾವಾಗ ಮುದ್ದು ಮಕ್ಕಳ ಮುಖ ನೋಡಲಿ ಎನ್ನುವ ಆಸೆ ಇದ್ದೆ ಇರುತ್ತದೆ.ಎಷ್ಟೋ ಸಲ ಅಪ್ಪ ರಾತ್ರಿ ಬಂದು ನಮ್ಮ ಬಗ್ಗೆ ಅಮ್ಮನ ಹತ್ತಿರ ಮಕ್ಕಳು ಊಟ ಮಾಡಿದ್ರಾ,ಇವತ್ತೆನಂತೆ ಸ್ಕೂಲಲ್ಲಿ , ಅಂತ ವಿಚಾರಿಸಿ ಮಲಗಿರೋ ನಮ್ಮನ್ನ ಮನಸಾರೆ ನೋಡಿ ತಲೆ ನೇವರಿಸಿ ಹಣೆಗೋ,ಕೆನ್ನೆಗೋ ಮುತ್ತು ಕೊಟ್ಟಿರೋದು ನಮಗೆ ಗೊತ್ತೇ ಇರಲ್ಲಾ . ನಾವು ಹುಟ್ಟಿದಾಗ ಅಮ್ಮ  ನಮ್ಮನ್ನ ಮೊದಲು ತೋರಿಸೋದೇ ಅಪ್ಪನಿಗೆ ಯಾಕಂದ್ರೆ ಈ ಭೂಮಿ ಮೇಲೆ ಆ ಕ್ಷಣದಲ್ಲಿ ಅಪ್ಪನಿಗಾದಷ್ಟು ಖುಷಿ ಯಾರಿಗೂ ಅಗಿರಲ್ಲಾ.ನಮಗೆ ತಿಳಿಯದೆ ಇರೋ ವಯಸ್ಸಲ್ಲಿ ಅಪ್ಪ ನಮಗಾಗಿ ಬಹಳಷ್ಟನ್ನಾ ಮಾಡಿರ್ತಾರೆ.ನಮ್ಮ ಅಂದರೆ ಮಕ್ಕಳ ಮೆದುಳು ಅತ್ಯಂತ ವೇಗವಾಗಿ ಬೆಳೆಯೋದು ನಾವು ಅಮ್ಮನ ಗರ್ಭದಲ್ಲಿದ್ದಾಗ ಹಾಗು ನಾವು ಮೂರು ವರ್ಷದವರಾಗುವ ತನಕ .ಈ ಸಮಯದಲ್ಲಿ ನಾವು ಬಹುವಾಗಿ ಅಮ್ಮ ಅಪ್ಪ ಹಾಗು ನಮ್ಮ ಸುತ್ತಮುತ್ತಲಿನ ಪರಿಸರ ನೋಡುತ್ತಾ ಅವರಂತೆಯೇ ಬೆಳೆಯುತ್ತೇವೆ. ನಾವು ಬೆಳೆಯುತ್ತ ಹೋದಂತೆ ಅಪ್ಪಾ  ನಮಗೆ ಸಮಾಜದ ನೈಜ ಮುಖವನ್ನು ತೋರಿಸ್ತಾ ಹೋಗ್ತಾರೆ.ನಾವು ಎಡವಿ ಬಿದ್ದಾಗ ಅಮ್ಮಾ ನೋವು ಪಡ್ತಾಳೆ ಆದರೆ ಅಪ್ಪಾ ಏನಾಗಲ್ಲ  ಏಳ್ತಾನೆ ಬಿಡು ಅಂತಾರೆ.ಅವರು ಹಾಗನ್ನಲೇಬೇಕು ಅಂದಾಗಲೇ ನಾವು ಏಳೋದು.ಅಲ್ಲಿಂದಲೇ ಶುರುವಾಗುವುದು ಜೀವನದಲ್ಲಿ ಎಡವಿ ಬಿದ್ದಾಗ ಧೈರ್ಯದಿಂದ ಮತ್ತೆ ಏಳಬೇಕು ಎನ್ನುವ ಪಾಠ.ಅಪ್ಪ ನಮ್ಮೊಂದಿಗೆ ಬರಬರುತ್ತಾ ಸ್ತ್ರಿಕ್ಟಾಗಿ ವ್ಯವಹರಿಸುವುದು ಯಾಕೆಂದರೆ ನಮಗೆ ಅವರ ಮೇಲೆ ಕೊಂಚವಾದರೂ ಭಯವಿರಬೇಕು.ಆವಾಗಲೇ ಅಲ್ವೇ ನಾವು  ತಪ್ಪು ಮಾಡೋಕೆ ಹೆದರೋದು.ಯಾವುದೇ ಮನುಷ್ಯ ತಪ್ಪು ಕೆಲಸ ಮಾಡೋವಾಗ ಹೆದರಲೇಬೇಕು ಅದೇ ಒಳ್ಳೆ ಸಂಸ್ಕಾರ.ಒಳ್ಳೇದನ್ನೇ ನೋಡಬೇಕು ಕೇಳಬೇಕು ಕಲಿಬೇಕು ಅನ್ನೋದು ಯಾಕೆ ಎಲ್ಲ ಅಪ್ಪಂದಿರ ವಾದ ಹೇಳಿ ಏಕೆಂದರೆ ಜೀವನದಲ್ಲಿ ನಾವು ಒಬ್ಬ ಅಬ್ಬೆಪಾರಿಯಾಗದೆ ಜವಾಬ್ದಾರಿಯುತ ಅಪ್ಪಾ ಅಂತ ಅನ್ನಿಸ್ಕೋಬೇಕು ಅದಕೆ.

ನಮಗೆಲ್ಲ ಚೆನ್ನಾಗಿ ಓದಿಸಿ,ಅದಕೆ ಮಾಡಿದ ಸಾಲದ ಹೊರೆಯನ್ನು ತಿಂಗಳಿಗೆ ಇಷ್ಟು ಅಂತ ಮಾಡಿ ಮುಟ್ಟಿಸಿ,ಹಬ್ಬ ಹರಿದಿನದಂದು  ನಮಗೆ ಹೊಸಬಟ್ಟೆ ಕೊಡಿಸಿ, ಹೆಗಲ ಮೇಲೋ ,ಸೈಕಲ್ ಮೇಲೋ ,ಗಾಡಿ ಮೇಲೋ ನಮ್ಮನ್ನ ಶಾಲೆಗೆ ತಲುಪಿಸಿದ ಅಪ್ಪಾ  ನಾವು ಗುಂಡು ಹಾಕಿದಾಗೋ ಅಥವಾ ಯಾರದೋ ಹೆಣ್ಣುಮಗಳ ಮೇಲೆ ಕಣ್ಣು ಹಾಕಿದಾಗೋ ಅಪ್ಪಾ ನಮಗೆ ನಾಲ್ಕು ಬಾರಿಸಿ ಬುದ್ಧಿ ಹೇಳಬಾರದಾ? ನಾವು ಯಾವುದೋ ವಿಷಯದಲ್ಲಿ ಕಡಿಮೆ ಮಾರ್ಕ್ಸ್ ತಗೊಂಡರೆ ಯಾಕೆ ಹೀಗಾಯ್ತು ಅಂತ ಕೇಳಬಾರದೆ?.ಖಂಡಿತ ಕೇಳಬೇಕು ಅವರಿಗೆ ಆ ಸಂಪೂರ್ಣ ಹಕ್ಕಿದೆ.ಈ ಪರಿಸ್ಥಿತಿಯಲ್ಲಿ ಅಪ್ಪನ ಪಾಡು ಅಪ್ಪನಿಗೆ ಗೊತ್ತು.ಒಂದು ನನ ಮಗ ಹೀಗೆ ಮಾಡ್ಬಿಟ್ಟ ಅಂತ,ಒಂದು ಹಾದಿಬಿದಿಗೆ ಹೋಗೋರ ಬಾಯಿಗೆ ಆಹಾರವಾಗೋದು,ಮಗನಿಗೆ ಬೈಯ್ಯೋದೋ ಬುದ್ಧಿ ಹೇಳೋದೋ,ಬೈದರೆ ಏನಾದರೂ ಮಾಡ್ಕೊಂಡು ಬಿಟ್ಟರೆ....ಅಲ್ಲಾ ನಮ್ಮನ್ನ ಅಷ್ಟು ಮುದ್ದು ಮಾಡಿ ಬೆಳೆಸಿ ನಮ್ಮ ಹುಟ್ಟುಹಬ್ಬನ ಊರಹಬ್ಬದ ಥರ ಆಚರಿಸೋ ಅಪ್ಪನಿಗೆ ನಲವತ್ತರ ವಯಸಲ್ಲಿ ನಾವು ಕೊಡೊ ಕಾಣಿಕೆ ಇದೇನಾ.ಎಲ್ಲಾರು  ತಪ್ಪು ಮಾಡ್ತಿವಿ ಆದರೆ ಅಪ್ಪಾ ಈ ಥರ ಆಯಿತು ಇನ್ನೊದು ಸಲ ಹೀಗಾಗಲ್ಲ  ಅಂತ  ಅಪ್ಪನ ಹುಡುಕಿ ಹೇಳಿ ನೋಡಿ.. ಅದೇ  ಅಪ್ಪಾ ನಾವು ಮಾಡಿದ ಆ ತಪ್ಪನ್ನು ಹೇಗಾದರೂ ಮಾಡಿ ಸರಿ ಮಾಡಿ ನಮಗೆ ಆತ್ಮವಿಶ್ವಾಸ ತುಂಬಿ ಹೋಗ್ತಾನೆ.ಅಪ್ಪಾ ಅನ್ನೋ ಪದಕ್ಕೆ ನಿಜವಾದ ಅರ್ಥ ಬರೋದೆ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತೋರಿಸಿದಾಗ.

ಇನ್ನು ಹುಡುಗಿಯರಿಗೆ ಅಪ್ಪಾ ಅಣ್ಣಾ ತುಂಬಾನೇ ಹೇಳೋಕೆ ಹೋದರೆ ಅದು lecturer ಆಗಿ ಬಿಡುತ್ತೆ,ಕುಯ್ತಾರೆ ಅಂತಾರೆ.ನೆನಪಿರಲಿ ಮನೇಲಿ ಅಪ್ಪಾ ಅಣ್ಣ ತಮ್ಮಂದಿರು ನಿಮಗೆಲ್ಲ ಬೆನ್ನೆಲುಬು ಇದ್ದ ಹಾಗೆ,ಅವರ್ಯಾರಿಗೂ ನಿಮ್ಮ ಸಂತೋಷಾನ ಕಸಿಯೋಕೆ,ಅಥವಾ ನಿಮ್ಮ ಸ್ವತಂತ್ರ ಕಸಿದುಕೊಳ್ಳೋಕೆ  ಇಷ್ಟ ಇರಲ್ಲ..ಅವರು ನಿಮ್ಮ ಬಗ್ಗೆ ಅತಿಯಾದ ಕಾಳಜಿ ಇರೋದರಿಂದಾನೆ ನಿಮ್ಮ್ಹಿಂದೇನೆ ಇರ್ತಾರೆ.offcourse ನೀವು ಇತ್ತೀಚಿಗೆ ಎಲ್ಲಾ ಪರಿಸ್ಥಿತಿಗಳನ್ನಾ ಸಮರ್ಥವಾಗಿ ನಿಭಾಯಿಸ್ತಿರಿ ಆದರೆ ನಮಗೆ ನಿಮ್ಮ ಮೇಲಿನ ಪ್ರೀತಿ ಕಾಳಜಿ ನಿಮ್ಮನ್ನ ವೇದನೆಯಲ್ಲಿ ಇರೋದನ್ನ ನಮಗೆ ನೋಡೋಕೆ ಬಿಡಲ್ಲಾ.ಇದೆ ಹುಡುಗಿಯರು ಸ್ವಲ್ಪ ಮೆಚುರಿಟಿ ಬಂದ ಮೇಲೆ ನೋಡಿ ಆ ಅಪ್ಪನ್ನ,ಆ ಅಣ್ಣ ತಮ್ಮಂದಿರನ್ನ ಪೂಜಿಸೋಕೆ ಶುರು ಮಾಡ್ತಾರೆ.ಅವರಿಗೆ ಖುಷಿ ಕೊಡೊ ಕೆಲಸಗಳನ್ನೇ ಮಾಡ್ತಾರೆ.ಅವರಿಗಾಗಿ ಬಿದ್ದು ಸಾಯ್ತಾರೆ.

ನಾವು ಶಾರುಖ್ ಖಾನ್ ,ಸಚಿನ್ ತೆಂಡುಲ್ಕರ್,ಹೀಗೆ  ಹಲವರು ಹಲವರನ್ನ ರೋಲ್ ಮಾಡೆಲ್ ಮಾಡ್ಕೊಂದಿರ್ತಿವಿ..ಆದರೆ ಸಮಯ ಕಳೆದಂತೆ ನಾವೆಲ್ಲಾ alomost ನಮ್ಮಪ್ಪನ ಥರಾನೇ ಆಗಿರ್ತಿವಿ.ಬೆಳಿತಾ ಬೆಳಿತಾ ಅವರನ್ನೇ ರೋಲ್ ಮಾಡೆಲ್ ಮಾಡ್ಕೊತಿವಿ.ಸಂಸಾರದ ಕಠಿಣ ಪರಿಸ್ಥಿತಿಗಳನ್ನ ಎದುರಿಸೋವಾಗ ಅವರನ್ನ ನೆನೆಯುತ್ತಿವಿ ಅನುಕರಿಸ್ತಿವಿ.ಏಕೆಂದರೆ ಅವರೇ ನಿಜವಾದ ಹೀರೋಗಳು.ನಾವು ಅತ್ತಾಗ ಕೈ ಹಿಡಿದು,ತಪ್ಪು ಮಾಡಿದಾಗ ಹೊಡೆದು,ನಾವು ಬದುಕಿನಲ್ಲಿ ಯಶಸ್ವಿಯಾದಾಗ ಎದೆಯುಬ್ಬಿಸಿ ಹೆಮ್ಮೆಯಿಂದ ನಡೆದು,ಸೋತಾಗಲೂ ನಮ್ಮ ಮೇಲೆ ವಿಶ್ವಾಸವಿಡುವ ಜಗತ್ತಿನ ಏಕೈಕ ವ್ಯಕ್ತಿರೀ ಅಪ್ಪಾ.. "ನಿಜವಾದ  ಶ್ರೀಮಂತ ಯಾರು ಗೊತ್ತಾ?ಇನ್ನು ನನ್ನಿಂದಾಗಲ್ಲ ಅಂತ ಕುಸಿದು ಬಿಳೋವಾಗ ಅವನ ಮುಂದಿನ  ಬಲಿಷ್ಠ ತೊಳುಗಳಾಗುವ ಮಕ್ಕಳು ಅವನೊಂದಿಗೆ ಇರುವಂಥ ಅಪ್ಪಾ ಕಣ್ರೀ"..ನಾವೆಲ್ಲರೂ ನಮ್ಮ ಅಪ್ಪಂದಿರನ್ನ ಶ್ರೀಮಂತರನ್ನಾಗಿ ಮಾಡಬೇಕು ಏನಂತಿರಾ ?
                                                                                                                                                                                           - ಪ್ರವೀಣ್.ಎಸ್.ಕುಲಕರ್ಣಿ(ಚುಕ್ಕಿ)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet