ರೋಚಕ ಕಥೆ- "ಪ್ರತ್ಯುಪಕಾರ"
ಬಾರ್ಸಿ ತಕ್ಲಿ ಹಳ್ಳಿಯಲ್ಲಿನ ಕಾರ್ಯಕ್ರಮಗಳು ಮುಕ್ತಾಯವಾದಾಗ ಸಮಯ ರಾತ್ರಿ ಹನ್ನೆರಡು ದಾಟಿತ್ತು. ನಾನು ತುಂಬಾ ಆಯಾಸಗೊಂಡಿದ್ದೆ. ತುಂಗಾ ನನಗಿಂತಲೂ ಹೆಚ್ಚು ಸುಸ್ತಾಗಿಹೋಗಿದ್ದಳು ಎಂದು ಅವಳ ಮುಖ ನೋಡಿದರೇ ಗೊತ್ತಾಗುತ್ತಿತ್ತು.
ಛತ್ತೀಸ್‌ಘರ್ ರಾಜ್ಯದ ಬಸ್ತಾರ್ ಜಿಲ್ಲೆಯ ಆದಿವಾಸಿಗಳಿಗೆ ಅಕ್ಷರಜ್ಞಾನ ನೀಡುವುದು ನಮ್ಮ ಎನ್ ಜಿ ಓ "ಅಕ್ಷರ್‌ಗಂಗಾ"ದ ಧ್ಯೇಯ. ಸಂಸ್ಥೆಯ ಅರವತ್ತನಾಲ್ಕು ಕಾರ್ಯಕರ್ತರು ಜಿಲ್ಲೆಯ ಉದ್ದಗಲಕ್ಕೂ ಹರಡಿಹೋಗಿದ್ದರು. ನಾನು ಮತ್ತು ನನ್ನ ಹೆಂಡತಿ ತುಂಗಭದ್ರಾ ಕಳೆದ ಐದು ತಿಂಗಳಿಂದ ಪರ್ಲಾಕೋಟ್‌ನಲ್ಲಿ ಬೀಡುಬಿಟ್ಟಿದ್ದೆವು. ಆ ಊರಿನಲ್ಲಿದ್ದ ನಮ್ಮ ಸಂಸ್ಥೆಯ ಕಾರ್ಯಕರ್ತರೊಬ್ಬರ ತಂಗಿಯ ಮನೆಯ ಒಂದು ಕತ್ತಲ ಕೋಣೆಯಲ್ಲಿ ನಮ್ಮ ವಾಸ. ನಿಜ ಹೇಳಬೇಕೆಂದರೆ ಆ ಕೋಣೆಯಲ್ಲಿ ನಾವು ಕಳೆಯುತ್ತಿದ್ದುದು ರಾತ್ರಿಯ ಕೆಲವು ಗಂಟೆಗಳು ಮಾತ್ರ. ಬೆಳಿಗ್ಗೆ ಏಳುಗಂಟೆಗೂ ಮುಂಚೆ ‘ಮನೆ’ಯಿಂದ ಹೊರಟರೆ ಹಿಂತಿರುಗುತ್ತಿದ್ದುದು ರಾತ್ರಿ ಹನ್ನೆರಡು ದಾಟಿದ ಮೇಲೇ.
ಪರ್ಲಾಕೋಟ್‌ನ ಸುತ್ತಮುತ್ತ ಇದ್ದ ಬಾರ್ಸಿ ತಕ್ಲಿ, ಅಸುಂಡಿ, ಕಯಕ್‌ಲಾ, ಚಿತಾಲಿ ಮುಂತಾದ ಸುಮಾರು ಆರು ಆದಿವಾಸಿ ಹಳ್ಳಿಗಳಲ್ಲಿನ ಜನರಿಗೆ ಅಕ್ಷರ ಕಲಿಸುವ ಕೆಲಸ ನಮ್ಮಿಬ್ಬರದು. ಒಂದೊಂದು ಹಳ್ಳಿಯಲ್ಲೂ ಎರಡು-ಎರಡೂವರೆ ಗಂಟೆಗಳಂತೆ ದಿನಕ್ಕೆ ಹದಿನಾಲ್ಕು ಹದಿನೈದು ಗಂಟೆಗಳವರೆಗೆ ಕಾರ್ಯನಿರತರಾಗಿರುತ್ತಿದ್ದೆವು. ವಾರಕ್ಕೆ ಐದು ದಿನ ಈ ದಿನಚರಿ. ನಮ್ಮ ಕಾರ್ಯಕ್ಷೇತ್ರದ ಹಳ್ಳಿಗಳಲ್ಲಿ ಬಾರ್ಸಿ ತಕ್ಲಿಯೇ ತುಂಬಾ ದೂರದಲ್ಲಿದ್ದ ಹಳ್ಳಿ. ಪರ್ಲಾಕೋಟ್‌ನಿಂದ ವಾಯುವ್ಯಕ್ಕೆ ಸುಮಾರು ಇಪ್ಪತ್ತೈದು ಮೈಲಿ ದೂರದಲ್ಲಿ ಮಹಾರಾಷ್ಟ್ರದ ಗಡಿಗೆ ಅಂಟಿದಂತಿದ್ದ ಆ ಹಳ್ಳಿಗೆ ದಿನವೂ ನಾವು ತಲುಪುತ್ತಿದ್ದುದು ಕತ್ತಲಾದ ಮೇಲೆಯೇ. ಅಲ್ಲಿನ ಜನರಿಗೆ ಲಾಂದ್ರಗಳ ಬೆಳಕಿನಲ್ಲಿ ಒಂಬತ್ತು-ಒಂಬತ್ತೂವರೆಯವರೆಗೆ ಪಾಠ ಹೇಳಿ ಹಳ್ಳಿಗರೇ ಪ್ರೀತಿಯಿಂದ ಕೊಟ್ಟ ರೊಟ್ಟಿ ತಿಂದು, ಬೆಟ್ಟಗುಡ್ಡ, ಕಾಡುಮೇಡುಗಳಲ್ಲಿ ಹಾದುಹೋಗಿದ್ದ ‘ರಸ್ತೆ’ಯಲ್ಲಿ ಎರಡುಗಂಟೆ ಜೀಪ್ ಓಡಿಸಿ ಮನೆ ಸೇರುತ್ತಿದ್ದುದು ಮಧ್ಯರಾತ್ರಿಯ ಹೊತ್ತಿಗೆ.
ಆ ದಿನ ಬಾರ್ಸಿ ತಕ್ಲಿಯಲ್ಲಿ ನಮ್ಮ ಕಾರ್ಯಕ್ರಮದ ಕೊನೆಯ ದಿನ. ಅಕ್ಷರಕಲಿಕೆಯನ್ನು ಒಂದು ಸವಾಲೆಂಬಂತೆ ತೆಗೆದುಕೊಂಡ ಅ ಹಳ್ಳಿಯ ಸುಮಾರು ನೂರಿಪ್ಪತ್ತು ಜನ ಐದು ತಿಂಗಳಿಗೂ ಕಡಿಮೆ ಆವಧಿಯಲ್ಲಿ ಹಿಂದಿ ಅಕ್ಷರಗಳನ್ನು ಸರಾಗವಾಗಿ ಬರೆಯುವುದು ಓದುವುದನ್ನು ಕಲಿತುಬಿಟ್ಟಿದ್ದರು. ಅವರಿಗೆಂದು ಒಂದು ಪುಟ್ಟ ಲೈಬ್ರರಿಯನ್ನು ಸ್ಥಾಪಿಸಿದ್ದೆವು. ಜತೆಗೆ ನಾಲ್ಕು ರೇಡಿಯೋಗಳನ್ನು ಕೊಟ್ಟಿದ್ದೆವು. ಆ ಊರಿನಲ್ಲಿ ವಿದ್ಯುಚ್ಚಕ್ತಿ ಇದ್ದಿದ್ದರೆ ಟೀವಿಯನ್ನೂ ಕೊಡುತ್ತಿದ್ದೆವು. ಅದರೊಂದಿಗೆ ಅಲ್ಲಿ ನಮ್ಮ ಕೆಲಸವೂ ಪೂರ್ಣಗೊಂಡಂತಾಗಿತ್ತು. ಇನ್ನು ಆ ಹಳ್ಳಿಗೆ ಒಂದು ದಿನಪತ್ರಿಕೆ, ಎರಡು-ಮೂರು ನಿಯತಕಾಲಿಕಗಳು ಕ್ರಮಬದ್ಧವಾಗಿ ತಲುಪುವಂತೆ ವ್ಯವಸ್ಥೆ ಮಾಡಿದರೆ ಸಾಕಿತ್ತು. ಎರಡು ತಿಂಗಳಿಗೊಮ್ಮೆ ಅಲ್ಲಿಗೆ ಭೇಟಿ ನೀಡಿ ಅಲ್ಲಿಯ ಜನ ಇನ್ನೂ ಒದುತ್ತಿದ್ದಾರೋ ಇಲ್ಲವೋ ಎಂದು ಗಮನಿಸಿ ಅಗತ್ಯವಿರುವ ಪರಿಹಾರಾತ್ಮಕ ಉಪಾಯಗಳನ್ನು ಕೈಗೊಳ್ಳುವುದು ಮುಂದಿನ ಕೆಲಸ.
ಉಳಿದ ಹಳ್ಳಿಗಳಿಗಿಂತ ಮೊದಲೇ ತಾವು ಅಕ್ಷರ ಕಲಿತ ಬಗ್ಗೆ ಬಾರ್ಸಿ ತಕ್ಲಿಯ ಜನರಿಗೆ ಸಂತೋಷವೋ ಸಂತೋಷ. ತಮ್ಮ ಸಾಧನೆಯನ್ನು ಸಂಭ್ರಮದಿಂದ ಆಚರಿಸಲು ಅಂದು ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡಿದ್ದರು. ಹಾಡು, ಕುಣಿತ, ಹಳ್ಳಿಯ ಪುರಾತನ ವೀರ ಮಹಾಕಾಳನ ಬಗ್ಗೆ ಒಂದು ಪುಟ್ಟ ನಾಟಕ. ತಾವೂ ಕುಣಿದು ನಮ್ಮನ್ನೂ ಕುಣಿಸಿ ಸುಸ್ತು ಹೊಡೆಸಿಬಿಟ್ಟರು. ಕೊನೆಯಲ್ಲಿ ಭರ್ಜರಿ ಊಟ. ಎಲ್ಲಾ ಮುಕ್ತಾಯವಾದಾಗ ಮಧ್ಯರಾತ್ರಿಯಾಗಿತ್ತು.
‘ಈ ರಾತ್ರಿ ಇಲ್ಲೇ ಉಳಿಯಿರಿ’ ಎಂಬ ಅಲ್ಲಿನ ಜನರ ಪ್ರೀತಿಯ ಒತ್ತಾಯಕ್ಕೆ ಮಣಿಯುವ ಸ್ಥಿತಿಯಲ್ಲಿ ನಾವಿರಲಿಲ್ಲ. ಆದಷ್ಟು ಬೇಗ ಪರ್ಲಾಕೋಟ್ ತಲುಪಿ ಒಂದೆರಡು ಗಂಟೆ ನಿದ್ದೆ ಮಾಡಿ ಬೆಳಗಿಗೂ ಮುಂಚೆ ನೂರಿಪ್ಪತ್ತು ಮೈಲಿ ದೂರದ ರಾಜನಂದಗಾಂವ್‌ಗೆ ಓಡಬೇಕಿತ್ತು. ನಾಳೆ ಬೆಳಿಗ್ಗೆ ಒಂಬತ್ತು ಗಂಟೆಗೆ ಅಲ್ಲಿ ಆರಂಭವಾಗಲಿರುವ ಮೀಟಿಂಗ್ ಅನ್ನು ನಾವು ತಪ್ಪಿಸಿಕೊಳ್ಳುವಂತೆಯೇ ಇಲ್ಲ.
ಹಳ್ಳಿಗರು ಪ್ರೀತಿಯಿಂದ ಕೊಟ್ಟ ಮರದ ಚಿತ್ರವಿಚಿತ್ರ ಬೊಂಬೆಗಳು, ತಟ್ಟೆ ಲೋಟಗಳು ಇನ್ನಿತರ ಉಡುಗೊರೆಗಳನ್ನು ಜೀಪ್‌ನೊಳಗೆ ಸೇರಿಸಿದೆವು. ಆ ಉಡುಗೊರೆಗಳಲ್ಲಿ ಅವರು ತುಂಗಾಳಿಗೆಂದೇ ವಿಶೇಷ ಆಸ್ಥೆಯಿಂದ ತಯಾರಿಸಿದ ಒಂದು ಬಿಲ್ಲೂ, ಹಲವಾರು ಬಾಣಗಳೂ ಇದ್ದವು.
ತುಂಗಾ ಒಬ್ಬಳು ನುರಿತ ಗುರಿಕಾರ್ತಿ. ಏಳುವರ್ಷಗಳ ಹಿಂದೆ ಇಲ್ಲಿಗೆ ಬಂದಾಗ ಬೇಲಾ ದಿಲಾದ ಆದಿವಾಸೀ ಯುವತಿಯೊಬ್ಬಳಿಂದ ಬಿಲ್ಲುವಿದ್ಯೆ ಕಲಿತು ಅತೀ ಕಡಿಮೆ ಆವಧಿಯಲ್ಲಿ ಆದಿವಾಸಿಗಳೂ ಅಚ್ಚರಿ ಪಡುವ ಮಟ್ಟಿಗೆ ಪ್ರಾವೀಣ್ಯತೆ ಸಾಧಿಸಿಬಿಟ್ಟಿದ್ದಳು. ಅವಳ ಕೌಶಲವನ್ನು ಕಂಡು ನಾನೂ ಬೆರಗಾಗಿದ್ದೇನೆ.
ಹನ್ನೆರಡೂವರೆಯ ಹೊತ್ತಿಗೆ ಪರ್ಲಾಕೋಟ್‌ನತ್ತ ಹೊರಟೆವು. ರಸ್ತೆ ಒಳ್ಳೆಯದಾಗಿದ್ದರೆ ಅರ್ಧ-ಮುಕ್ಕಾಲುಗಂಟೆಯಲ್ಲಿ ಮನೆ ಸೇರಿಬಿಡಬಹುದಾಗಿತ್ತು. ಆದರೆ ನಿಜಸ್ಥಿತಿ ಹಾಗಿರಲಿಲ್ಲ. ಕೊರಕಲುಗಳಿಂದ ಕೂಡಿದ ಕಾಡುಮೇಡಿನ ದುರ್ಗಮ ರಸ್ತೆಯಲ್ಲಿ ಗಂಟೆಗೆ ಹನ್ನೆರಡು-ಹದಿಮೂರು ಮೈಲಿ ಸವೆಸಿದರೆ ಅದೇ ಹೆಚ್ಚು. ಈ ಮೂರು ತಿಂಗಳಲ್ಲಿ ಈ ಪ್ರಯಾಣ ನಮ್ಮಿಬ್ಬರಿಗೂ ಒಗ್ಗಿಹೋಗಿದ್ದುದರಿಂದ ಏನೂ ಅನ್ನಿಸುತ್ತಿರಲಿಲ್ಲ. ವೀಲ್ ಹಿಡಿದೆ.
"ನನಗೆ ನಿದ್ದೆ ಬರ‍್ತಿದೆ. ಮಲಗ್ತೀನಿ" ಎನ್ನುತ್ತಾ ತುಂಗಾ ಹಿಂದಿನ ಸೀಟ್ ಸೇರಿದಳು. ನಾನು ನಗುತ್ತಾ "ಸೋ ಜಾ ರಾಜ್ ದುಲಾರೀ" ಎಂದು ಮೆಲ್ಲಗೆ ಗುನುಗಿ ಎಡಗೈಯನ್ನು ಸೀಟ್‌ನ ಮೇಲಿಂದ ಹಿಂದಕ್ಕೆ ಚಾಚಿ ಸ್ಪರ್ಶಕ್ಕೆ ಸಿಕ್ಕಿದ ಅವಳ ಮೊಣಕಾಲಿಗೆ ಬೆರಳುಗಳಿಂದ ಮೃದುವಾಗಿ ತಟ್ಟಿದೆ.
ಕತ್ತಲುಗಟ್ಟಿದ ಕಾಡುಹಾದಿ. ನಾಲ್ಕು ಮೈಲುಗಳವರೆಗೆ ಮಣ್ಣುರಸ್ತೆಯಲ್ಲಿ ಸಾಗಿದರೆ ಟಾರ್ ರಸ್ತೆ ಸಿಕ್ಕುತ್ತಿತ್ತು. ಬೆಟ್ಟಗುಡ್ಡಗಳನ್ನು ಹತ್ತಿ ಇಳಿದು ಸಾಗುವ ಆ ರಸ್ತೆಯಲ್ಲಿ ಹದಿನೈದು ಮೈಲಿ ಸಾಗಿದರೆ ಕೋತ್ರಿ ನದಿಯ ಮೇಲಿನ ಸೇತುವೆ ಸಿಗುತ್ತದೆ. ಅದನ್ನು ದಾಟಿದೊಡನೇ ದಕ್ಷಿಣಕ್ಕೆ ತಿರುಗಿ ಆರೇಳು ಮೈಲು ದಟ್ಟ ಕಾಡುದಾರಿಯಲ್ಲಿ ಸಾಗಿದರೆ ಪರ್ಲಾಕೋಟ್. ಎರಡೂವರೆಯ ಹೊತ್ತಿಗೆ ಮನೆ ಸೇರಬಹುಧು.
ವಾಹನ ನಿಧಾನವಾಗಿ ಮುಂದೆ ಸಾಗಿತು. ನಾಲ್ಕೈದು ನಿಮಿಷಗಳಲ್ಲಿ ಬಾರ್ಸಿ ತಕ್ಲಿಯ ಜನರ ಗಲಾಟೆಗಳೆಲ್ಲಾ ಕರಗಿಹೋಗಿ ಕಾಡಿನ ಮೌನ ಕಿವಿ ತುಂಬಿತು. ಹೊಸಬರಾದರೆ ಭಯ ಹುಟ್ಟಿಸುವ ವಾತಾವರಣ. ಆದರೆ ನನಗೆ ಈ ಹಾದಿ ಸುಪರಿಚಿತವಾಗಿಹೋಗಿತ್ತು. ಅಲ್ಲದೇ ಸಂಸ್ಥೆ ನೀಡಿದ್ದ ಲೈಸನ್ಸ್ ಇದ್ದ ಗನ್ ಜತೆಗಿತ್ತು. ಹೀಗಾಗಿ ಯಾವ ಅಳುಕೂ ಇಲ್ಲದೇ ನಿರಾಳವಾಗಿ ವಾಹನವನ್ನು ಮುಂದೋಡಿಸಿದೆ. ಜೀಪ್ ಒಣಗಿಹೋಗಿದ್ದ ಹಳ್ಳವೊಂದರಲ್ಲಿ ಇಳಿಯಿತು. ನಿಧಾನವಾಗಿ ಅದನ್ನು ಮೇಲೆ ಹತ್ತಿಸಿದೆ. ಅಂತಹ ಕೆಟ್ಟ ರಸ್ತೆಯಲ್ಲೂ ವಾಹನ ಹೆಚ್ಚು ಕುಲುಕಾಡದ ಹಾಗೆ ನೋಡಿಕೊಳ್ಳಬೇಕಾದ ಜವಾಬ್ಧಾರಿ ನನ್ನ ಮೇಲಿತ್ತು. ಕಾರಣ ತುಂಗಾಳ ನಿದ್ದೆಗೆ ತೊಂದರೆಯಾಗುತ್ತದೆ ಎನ್ನುವುದಷ್ಟೇ ಅಲ್ಲ.
ತುಂಗಾ ನಾಲ್ಕು ತಿಂಗಳ ಗರ್ಭಿಣಿ.
ಅವಳ ಕ್ಷೇಮಕ್ಕಾಗಿ, ಅವಳ ಒಡಲಲ್ಲಿರುವ ನಮ್ಮ ಮಗುವಿನ ಕ್ಷೇಮಕ್ಕಾಗಿ ವಾಹನ ಯಾವುದೇ ಸಂದರ್ಭದಲ್ಲೂ ಅಳತೆ ಮೀರಿ ಕುಲುಕಾಡದ ಹಾಗೆ ನಾನು ನೋಡಿಕೊಳ್ಳಬೇಕಾಗಿತ್ತು.
ನಿಧಾನವಾಗಿ ಜೀಪನ್ನು ಹಳ್ಳದಿಂದ ಮೇಲೆ ಹತ್ತಿಸಿದೆ. ಒಮ್ಮೆ ಹಿಂತಿರುಗಿ ತುಂಗಾಳತ್ತ ನೋಡಿದೆ. ಕತ್ತಲಲ್ಲಿ ಏನೂ ಕಾಣಿಸಲಿಲ್ಲ. ಮುಂದೆ ದೃಷ್ಟಿ ಹೂಡಿದೆ.
ತುಂಗಾ!
ನಾಲ್ಕು ವರ್ಷಗಳ ಹಿಂದೆ ಔರಂಗಾಬಾದ್‌ನಲ್ಲಿ ನಡೆದ ಸೆಮಿನಾರ್ ಒಂದರಲ್ಲಿ ನನಗೆ ಪರಿಚಯವಾದ ಹೆಣ್ಣು. ನಾನಾಗ ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿ ಹೆಚ್ ಡಿ ವಿದ್ಯಾರ್ಥಿ. ತೆಳು ದೇಹದ, ಅಗಲ ಕಪ್ಪು ಕಣ್ಣುಗಳ, ಚುರುಕು ಮಾತಿನ, ತುಂಗಭದ್ರಾ ಎಂಬ ಚಂದದ ಹೆಸರಿನ ಈ ತಮಿಳು ಹೆಣ್ಣು ನನಗೆ ಮೊದಲ ಭೇಟಿಯಲ್ಲೇ ಇಷ್ಟವಾಗಿಹೋಗಿದ್ದಳು. ಅವಳಾಗಲೇ "ಅಕ್ಷರ್‌ಗಂಗಾ"ದ ಸಕ್ರಿಯ ಕಾರ್ಯಕರ್ತೆ. ಅವಳ ಹಿಂದೆ ಬಿದ್ದ ನಾನು ಪಿ ಹೆಚ್ ಡಿ ಗೆ ತಿಲಾಂಜಲಿಯಿತ್ತು ಬಸ್ತಾರ್ ಸೇರಿದೆ. ಅವಳೊಡನೆ ಕಾಡುಮೇಡು ಬೆಟ್ಟಗುಡ್ಡ ಅಲೆದೆ. ಆದಿವಾಸಿಗಳ ಕೈಹಿಡಿದು ಸ್ಲೇಟಿನ ಮೇಲೆ "ಅ ಆ ಇ ಈ" ಬರೆಸಿದೆ. ಅವರ ನಡುವೆ ಕುಳಿತು ಕಾಡುಹಣ್ಣು ಸವಿದು ಕಾಡುಹಂದಿಯ ಮಾಂಸ ಜಗಿದೆ...
ಪ್ರೇಮ ಮನುಷ್ಯನಿಂದ ಏನೆಲ್ಲಾ ಮಾಡಿಸುತ್ತದೆ ಅಲ್ಲವೇ?
ಮೂರೂವರೆ ವರ್ಷಗಳ ಹಿಂದೆ ಬೇಲಾ ದಿಲಾದ ಓಂಕಾರೇಶ್ವರ ದೇವಸ್ಥಾನದಲ್ಲಿ ತುಂಗಾ ನನ್ನ ಹೆಂಡತಿಯಾದಳು. ನನ್ನ ಜಗತ್ತು ಸುಂದರವಾಗಿತ್ತು. ಬಸ್ತಾರ್ ಸ್ವರ್ಗವೆನಿಸಿತ್ತು...
ಈಗ ನನ್ನ ತುಂಗಾ ತಾಯಿಯಾಗಲಿದ್ದಳು. ಅವಳನ್ನು ಜೋಪಾನವಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯ. ಇನ್ನೊಂದೆರಡು ತಿಂಗಳಲ್ಲಿ ಪರ್ಲಾಕೋಟ್‌ನ ನಮ್ಮ ಕಾರ್ಯಕ್ರಮಗಳು ಸಂಪೂರ್ಣವಾಗುತ್ತವೆ. ಆನಂತರ ಒಂದುವರ್ಷದವರೆಗೆ ತುಂಗಾಳಿಗೆ ಓಡಾಟ ಇಲ್ಲ. ದೂರದಕ್ಷಿಣದ ಪಾಂಡಿಚೆರಿಯಲ್ಲಿನ ತಾಯಿಯ ಮನೆಯಲ್ಲಿ ಆರಾಮವಾದ ಬದುಕು. ಮಗುವಿಗೆ ಆರೇಳು ತಿಂಗಳಾದ ಮೇಲೆ ಆಕೆ ಮತ್ತೆ ತನ್ನ ಪ್ರೀತಿಯ ಕೆಲಸಕ್ಕೆ ಹಾಜರಾಗುತ್ತಾಳೆ. ನಮ್ಮಂತೇ ನಮ್ಮ ಮಗುವೂ ಬಸ್ತಾರ್‌ನ ಮುಗ್ಧ, ಸ್ನೇಹಮಯೀ ಆದಿವಾಸಿಗಳ ನಡುವೆ ಬೆಳೆಯುತ್ತದೆ...
ತಾನು ತಾಯಿಯಾಗಲಿದ್ದೇನೆ ಎಂದು ತಿಳಿದಾಗಿನಿಂದ ತುಂಗಾ ತುಂಬಾ ಸಂತೋಷದಲ್ಲಿದ್ದಳು. ಯಾವಾಗಲೂ ಯಾವುಯಾವುದೋ ಹಳೆಯ ತಮಿಳು ಹಾಡುಗಳನ್ನು ಖುಷಿಯಾಗಿ ಹಾಡಿಕೊಳ್ಳುತ್ತಿದ್ದಳು. ಅದನ್ನು ಕೇಳಿ ನಾನು ನಕ್ಕರೆ "ನಮ್ಮಮ್ಮ ಹಾಡುತ್ತಿದ್ದ ಹಾಡು ಅದು" ಅನ್ನುತ್ತಿದ್ದಳು. ಅಲ್ಲದೇ ಆಗಾಗ ಹೊಟ್ಟೆ ಸವರಿಕೊಳ್ಳುತ್ತಾ "ಲಾಲಿ ಹೋ... ಲಾಲಿ ಹೋ..." ಎಂದು ರಾಗವಾಗಿ ಗುನುಗಿಕೊಳ್ಳುತ್ತಿದ್ದಳು.
ಯೋಚನೆಯಲ್ಲಿ ಸಮಯ ಸರಿದಿತ್ತು. ಅದರೊಡನೆ ಹಾದಿಯೂ ಸಹ. ಅಸುಂಡಿ ಮತ್ತು ಚಿತಾಲಿ ಗ್ರಾಮಗಳನ್ನು ಹಿಂದೆ ಹಾಕಿ ಬಂದಿದ್ದೆವು. ಕೋತ್ರಿ ನದಿಯ ಸೇತುವೆಗೆ ಇನ್ನು ಎರಡು ಮೈಲುಗಳಷ್ಟೇ. ಜೀಪ್ ಗುಡ್ಡವೊಂದರ ತಿರುವಿನಲ್ಲಿ ಎಡಕ್ಕೆ ಹೊರಳಿದಂತೇ ನನಗೊಂದು ಆಲೋಚನೆ ಬಂತು.
ಎಡಕ್ಕೆ ಹೋಗಿ ಸೇತುವೆ ದಾಟಿ ಬಳಸು ದಾರಿಯಲ್ಲಿ ಕಾಡಿನಲ್ಲಿ ಅಲೆದು ಪರ್ಲಾಕೋಟ್ ಸೇರುವುದಕ್ಕಿಂತ ಬಲಕ್ಕೆ ತಿರುಗಿ ಒಂದುಹನಿಯೂ ಇಲ್ಲದ ಕೋತ್ರಿ ನದಿಗೆ ಇಳಿದು ಮೇಲೆ ಹತ್ತಿ ಮಣ್ಣುಹಾದಿಯಲ್ಲಿ ಅರ್ಧ ಮೈಲು ಸಾಗಿ ಜಿಂದಾಲ್ ಮೈನ್ಸ್ ಕಂಪನಿಯವರು ತಮ್ಮ ಗಣಿಕಾರಿಕೆಗಾಗಿ ನಿರ್ಮಿಸಿಕೊಂಡಿರುವ ಟಾರ್ ರಸ್ತೆ ಹಿಡಿದರೆ ಎರಡು ನಿಮಿಷದಲ್ಲಿ ಪರ್ಲಾಕೋಟ್ ಸೇರಿಬಿಡಬಹುದು!
ಆ ಯೋಚನೆ ಬಂದದ್ದೇ ತಡ ಜೀಪನ್ನು ಹಿಂದೆ ತೆಗೆದುಕೊಂಡೆ. ತಿರುವಿನಲ್ಲಿ ಬಲಕ್ಕೆ ಹೊರಳಿಸಿ ಕೋತ್ರಿ ನದಿಯತ್ತ ಸಾಗಿದ್ದ ಮಣ್ಣು ಹಾದಿಗಿಳಿದೆ.
ನನ್ನ ಬದುಕಿನಲ್ಲಿ ನಾನು ಮಾಡಿದ ಅತೀ ದೊಡ್ಡ ತಪ್ಪು ಅದು! ಆದರೆ ನನಗಾಗ ಅದರ ಅರಿವಿರಲಿಲ್ಲ.
ಇಳಿಜಾರಾಗಿದ್ದ ಮಣ್ಣುಹಾದಿ ದಟ್ಟ ಮರಗಳ ನಡುವೆ ಹಾವಿನಂತೆ ಬಳುಕಿ ಬಳುಕಿ ಸಾಗಿತ್ತು. ತುಂಗಾಳ ನಿದ್ದೆಗೆ ಭಂಗವಾಗದಂತೆ ಜೀಪನ್ನು ನಡೆಸುವುದು ಕಷ್ಟವೇ ಆಯಿತು. ಪ್ರಯಾಸದಿಂದ ಕೋತ್ರಿ ನದಿಯ ತೀರ ತಲುಪಿದೆ. ಕಪ್ಪು ಕಾಡಿನ ನಡುವೆ ನಸುಬಿಳುಪಾಗಿ ಕಾಣುತ್ತಿದ್ದ ನದಿಯ ಒಣಪಾತ್ರವನ್ನು ಒಮ್ಮೆ ಅವಲೋಕಿಸಿ ವಾಹನವನ್ನು ಎಚ್ಚರಿಕೆಯಿಂದ ಕೆಳಗಿಳಿಸಿದೆ. ಇನ್ನೇನು ನದಿತಳದ ಸಪಾಟು ನೆಲ ಸೇರಿದೆ ಅಂದುಕೊಳ್ಳುತ್ತಿದ್ದಂತೆ ಜೀಪಿನ ಮುಂಭಾಗದ ಬಲ ಚಕ್ರ ಧಡ್ಡನೆ ಕೆಳಗಿಳಿಯಿತು. ಮರುಕ್ಷಣ ಹಿಂಭಾಗದ ಚಕ್ರವೂ ಕೆಳಗೆ ಕುಸಿದು ವಾಹನ ಬಲಕ್ಕೆ ವಾಲಿಕೊಂಡಿತು. ಸಾವರಿಸಿಕೊಂಡು ಎಡಕ್ಕೆ ಹೊರಳಿಸಿದೆ. ಮುಂದಿನ ಕ್ಷಣದಲ್ಲಿ ವಾಹನದ ನಾಲ್ಕು ಚಕ್ರಗಳೂ ನದಿಯ ಸಪಾಟು ನೆಲದ ಮೇಲಿದ್ದವು. ಸಮಾಧಾನದ ಉಸಿರು ಬಿಟ್ಟೆ. ಆದರೆ ಅಷ್ಟರಲ್ಲಾಗಲೇ ತುಂಗಾ ಗಡಬಡಿಸಿ ಎದ್ದಾಗಿತ್ತು.
"ಸಾರೀ." ಪೆಚ್ಚು ದನಿ ಹೊರಡಿಸಿದೆ. ಅವಳು ಬೆಚ್ಚಿ ನಿದ್ದೆಯಿಂದ ಎಚ್ಚರಗೊಳ್ಳುವ ಹಾಗೆ ಮಾಡಿದ್ದಕ್ಕೆ ನನ್ನನ್ನೇ ಶಪಿಸಿಕೊಂಡೆ.
"ಏನಾಯ್ತು?" ಅವಳು ನಿದ್ದೆಗಣ್ಣಿನಲ್ಲಿ ಗಾಬರಿಯ ದನಿ ತೆಗೆದಳು.
"ಕತ್ತಲಲ್ಲಿ ಕೊರಕಲು ಕಾಣಿಸ್ಲಿಲ್ಲ. ಈಗ ಸರಿಹೋಯ್ತು. ನಥಿಂಗ್ ಟು ವರಿ." ಸಮಾಧಾನಿಸಿದೆ.
"ಪರ್ಲಾಕೋಟ್ ಇನ್ನೂ ಬರ‍್ಲಿಲ್ವಾ?" ಆಕಳಿಸುತ್ತಾ ದನಿ ಎಳೆದಳು ತುಂಗಾ. ಸೀಟ್‌ನ ಮೇಲೆ ಸರಿಯಾಗಿ ಕುಳಿತು ಎಡಬಲ ನೋಡಿದವಳು ಗಾಬರಿಯ ದನಿ ತೆಗೆದಳು: "ಇದೆಲ್ಲಿದ್ದೀವಿ ನಾವು? ಇದ್ಯಾವ ಜಾಗ?"
ಕತ್ತಲಲ್ಲಿ ಕೋತ್ರಿ ನದಿಯ ಒಣಮರಳಿನ ಪಾತ್ರ ಆಕೆಗೆ ಅಪರಿಚಿತವಾಗಿ ಕಂಡಿದ್ದು ಸಹಜವೇ ಆಗಿತ್ತು.
"ಗಾಬರಿಯಾಗಬೇಡ. ಕೋತ್ರಿ ನದಿಗಿಳಿದ್ದೀವಿ. ಸೇತುವೆ ಮೇಲಿಂದ ಹೋಗೋದಕ್ಕಿಂತಾ ಇಧು ಹತ್ತಿರದ ದಾರಿ." ಅವಳತ್ತ ತಿರುಗಿ ಆಶ್ವಾಸನೆಯ ದನಿಯಲ್ಲಿ ಹೇಳಿದೆ.
ಅವಳು ಪ್ರತಿಕ್ರಿಯಿಸಲಿಲ್ಲ.
ನಾವಿಲ್ಲಿಗೆ ಬಂದಾಗಿನಿಂದ ನದಿಯಲ್ಲಿ ಒಂದು ಹನಿ ನೀರನ್ನೂ ನಾವು ನೋಡಿರಲಿಲ್ಲ. ಅಲ್ಲಿಯ ಜನ ಹೇಳುವ ಪ್ರಕಾರ ಕಳೆದ ಮೂರು ವರ್ಷಗಳಿಂದ ಆ ಪ್ರದೇಶದಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ಹೀಗಾಗಿ ನದೀಪಾತ್ರದ ತಳ ಒಣಗಿಹೋಗಿತ್ತು. ತೆಳುವಾದ ಮರಳಿನ ಹಾಸಿನ ಕೆಳಗಿದ್ದುದು ಗಟ್ಟಿಯಾದ ನೆಲ ಎಂಬುದನ್ನು ನಾನು ಎಂದೋ ಕಂಡುಕೊಂಡಿದ್ದೆ. ಹೀಗಾಗಿಯೇ ಯಾವ ಹಿಂಜರಿಕೆಯೂ ಇಲ್ಲದೇ ಜೀಪನ್ನು ನದಿಗಿಳಿಸಿದ್ದೆ. ನಿಧಾನವಾಗಿ ಸಾಗಿ ಸುಮಾರು ನಾನೂರು ಅಡಿಗಳಷ್ಟು ದೂರದಲ್ಲಿದ್ದ ಆಚೆದಡವನ್ನು ತಲುಪಿದೆ. ಜೀಪ್ ಮೇಲೇರುತ್ತಿದ್ದಂತೇ ಹಿಂದಿನಿಂದ ತುಂಗಾಳ ದನಿ ಕೇಳಿಸಿತು.
"ಯಾಕೋ ಅಲಕಾಳ ನೆನಪು ತುಂಬಾ ಬರ್ತಿದೆ. ಅಳು ಬರೋ ಹಾಗಾಗ್ತಿದೆ."
ನಾನು ಸರ್ರನೆ ಹಿಂದೆ ತಿರುಗಿದೆ.
ತುಂಗಾ ಮತ್ತೆ ಸೀಟ್‌ನ ಉದ್ದಕ್ಕೂ ಮಲಗಿದ್ದಳು. ಅವಳತ್ತಲೇ ಧೀರ್ಘವಾಗಿ ನೋಡಿ ನಿಟ್ಟುಸಿರಿನೊಡನೆ ಕೊರಳು ಹೊರಳಿಸಿ ಮುಂದಕ್ಕೆ ದೃಷ್ಟಿ ಹೂದಿದೆ.
ಅಲಕಾ!
ಆ ಹೆಸರನ್ನು ತುಂಗಾಳ ಬಾಯಿಂದ ನೂರಾರು ಬಾರಿ ಕೇಳಿದ್ದೇನೆ. ಬಹುಷಃ ಆ ಹೆಸರನ್ನು ಮರೆಯುವುದು ತುಂಗಾಳಿಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ.
ಅಲಕಾ ಇಲ್ಲಿಂದ ಅರವತ್ತು-ಎಪ್ಪತ್ತು ಮೈಲು ದೂರದ ರೇತಿ ಎಂಬ ಹಳ್ಳಿಯ ಆದಿವಾಸಿ ಹೆಣ್ಣು. ತುಂಗಾಳಿಗೆ ಅವಳ ಪರಿಚಯವಾದದ್ದು ಒಂದು ಅಪೂರ್ವ ಸನ್ನಿವೇಶದಲ್ಲಿ.
ತುಂಗಾ ಏಳೆಂಟು ವರ್ಷಗಳ ಹಿಂದೆ ಬಸ್ತಾರ್‌ಗೆ ಬಂದ ಹೊಸತು. ಒಂದು ದಿನ ಲಿಲ್ಲೀ ಲಾಕ್ರಾ ಎಂಬ ಹೆಸರಿನ ಝಾರ್ಖಂಡ್‌ನ ಗೆಳತಿಯ ಜತೆ ಇಂದ್ರಾವತಿ ನದಿಯ ತೀರದಲ್ಲಿ ತಿರುಗಾಡುತ್ತಿದ್ದಾಗ ಹೆಣ್ಣೊಬ್ಬಳ ಚೀತ್ಕಾರ ಕೇಳಿ ಅತ್ತ ಓಡಿದಳಂತೆ. ಅಲ್ಲಿ ಕಂಡದ್ದು...! ನದಿಯಲ್ಲಿ ಸ್ನಾನ ಮಾಡುತ್ತಿದ್ದ ಆದಿವಾಸೀ ಯುವತಿಯೊಬ್ಬಳನ್ನು ಮೊಸಳೆಯೊಂದು ಹಿಡಿದಿದೆ! ಅವಳು ನೀರ ಮೇಲೆದ್ದಿದ್ದ ಬಂಡೆಯೊಂದರ ಅಂಚನ್ನು ಬಿಗಿಯಾಗಿ ತಬ್ಬಿ ಹಿಡಿದು ಅರ್ತನಾದಗೈಯುತ್ತಿದ್ದಾಳೆ!
ತುಂಗಾ ತಕ್ಷಣ ಕಾರ್ಯೋನ್ಮುಖಳಾದಳು. ಕೈಲಿದ್ದ ಬಿಲ್ಲಿಗೆ ಬಾಣ ಹೂದಿದಳು. ಒಂದರ ಹಿಂದೆ ಒಂದರಂತೆ ಆರು ಬಾಣಗಳನ್ನು ಮೊಸಳೆಯ ಮೇಲೆ ಪ್ರಯೋಗಿಸಿದಳು... ಗಾಯಗೊಂಡ ಮೊಸಳೆ ಯುವತಿಯ ಕಾಲು ಬಿಟ್ಟಿತು... ಅದರ ಮೃತದೇಹ ಸಂಜೆಯ ಹೊತ್ತಿಗೆ ಅರ್ಧ ಮೈಲುದೂರದ ನದೀತಿರುವಿನಲ್ಲಿ ಬಂದು ಬಿದ್ದಿತ್ತು.
ಅಂದು ತುಂಗಾ ಕಾಪಾಡಿದ ಆ ಯುವತಿಯೇ ಅಲಕಾ. ಆ ಗಳಿಗೆಯಿಂದ ಅವಳು ತುಂಗಾಳಿಗೆ ಆತ್ಮೀಯಳಾಗಿಬಿಟ್ಟಳು. ತುಂಗಾ ಹೊರಟ ಕಡೆಯಲ್ಲೆಲ್ಲಾ ಅವಳ ಜತೆ ತಾನೂ ಓಡಾಡಿದಳು. ಅಕ್ಷರ ಕಲಿಯಲು ಅಸಹಕಾರ ತೋರಿದ ಆದಿವಾಸಿಗಳ ಮನವೋಲಿಸಿದಳು... ತುಂಗಾಳ ಪ್ರತಿಯೊಂದು ಕೆಲಸದಲ್ಲೂ ತನ್ನ ಕೈ ಸೇರಿಸಿದಳು.
ಅಂತಹ ಅಲಕಾ ಆರೂವರೆ ವರ್ಷಗಳ ಹಿಂದೆ ದಟ್ಟಕಾಡಿನಲ್ಲಿ ಹಾವು ಕಚ್ಚಿ ಸತ್ತುಹೋದಳು.
ಅದು ತುಂಗಾಳಿಗೆ ಸಹನೆಗೆ ಮೀರಿದ ಆಘಾತ. ಅವಳು ಅತೀವ ನೋವಿಗೀಡಾಗಿದ್ದಳು. ಕಂಡ ಕಂಡ ಆದಿವಾಸೀ ಯುವತಿಯರಲ್ಲಿ ಅಲಕಾಳನ್ನು ಹುಡುಕಿದ್ದಳು.
ತುಂಗಾ ನನಗೆ ಹಲವಾರು ಬಾರಿ ಒಂದು ಮಾತು ಹೇಳಿದ್ದಳು. ಆಕೆ ಮೊಸಳೆಯಿಂದ ಕಾಪಾಡಿದ ದಿನ ಅಲಕಾ ಅವಳಿಗೆ ಹೇಳಿದ್ದ ಮಾತು ಅದು.
"ನೀನು ಇಂದು ನನ್ನ ಪ್ರಾಣ ಉಳಿಸಿದ್ದೀಯೆ. ಒಂದಲ್ಲಾ ಒಂದು ದಿನ ನಾನು ನಿನ್ನ ಪ್ರಾಣ ಉಳಿಸುತ್ತೇನೆ."
ಈ ಪ್ರದೇಶದ ಆದಿವಾಸಿಗಳಲ್ಲಿ ಒಂದು ಆಶ್ಚರ್ಯಕರ ನಡವಳಿಕೆಯನ್ನು ನಾವು ಗಮನಿಸಿದ್ದೆವು. ತಮಗೆ ಯಾರಿಂದಲಾದರೂ ಉಪಕಾರವಾದರೆ ಅವರದನ್ನು ಎಂದಿಗೂ ಮರೆಯುವುದಿಲ್ಲ. ಉಪಕಾರ ಮಾಡಿದ ವ್ಯಕ್ತಿಗೆ ಅಂಥದೇ ಉಪಕಾರ ಮಾಡುವ ಅವಕಾಶ ತಮಗೆ ಬಂದೇ ಬರುತ್ತದೆ ಎಂದು ಭಾವಿಸಿ ಅದಕ್ಕಾಗಿ ಕಾಯುತ್ತಾರೆ. ಅವಕಾಶ ದೊರೆತೊಡನೇ ಪ್ರತ್ಯುಪಕಾರ ಮಾಡುತ್ತಾರೆ. ಒಂದುವೇಳೆ ಈ ರೀತಿ ಪ್ರತ್ಯುಪಕಾರಗೈಯ್ಯದೇ ತಾವು ಮರಣ ಹೊಂದಿದರೆ ತಮ್ಮ ಆತ್ಮ ತಮಗೆ ಉಪಕರಿಸಿದ ವ್ಯಕ್ತಿಯ ಬೆನ್ನಹಿಂದೆಯೇ ಏಳುವರ್ಷಗಳವರೆಗೆ ಅಲೆಯುತ್ತಿರುತ್ತದೆ ಹಾಗೂ ಪ್ರತ್ಯುಪಕಾರದ ಅವಕಾಶಕ್ಕಾಗಿ ಕಾಯುತ್ತಿರುತ್ತದೆ ಎಂಬ ವಿಚಿತ್ರ ನಂಬಿಕೆ ಅವರಲ್ಲಿದೆ. ಆ ಏಳುವರ್ಷಗಳಲ್ಲೂ ಅಂತಹ ಅವಕಾಶ ದೊರೆಯದೇ ಹೋದರೆ ಋಣಮುಕ್ತರಾಗಲು ತಾವು ಮತ್ತೊಂದು ಜನ್ಮವೆತ್ತಿ ಬರಬೇಕಾಗುತ್ತದೆ ಎಂದು ಬಲವಾಗಿ ನಂಬುತ್ತಾರೆ.
ಅಲಕಾಳೂ ಆದಿವಾಸೀ ಹೆಣ್ಣು. ಅವಳಲ್ಲೂ ಅಂತಹ ನಂಬಿಕೆ ಬಲವಾಗಿತ್ತು. ಹೀಗಾಗಿ ತುಂಗಾಳಿಗೆ ಪ್ರತ್ಯುಪಕಾರಗೈಯದೇ ತಾನು ಸಾಯಬೇಕಾಗಿ ಬಂದದ್ದರ ಬಗ್ಗೆ ಆಕೆಗೆ ಅತೀವ ನೋವಾಗಿತ್ತು. ತುಂಗಾಳ ಬೆನ್ನ ಹಿಂದೆಯೇ ಕಾವಲಾಗಿದ್ದುಕೊಂಡು ಅವಳನ್ನು ಎಲ್ಲ ತೊಂದರೆಗಳಿಂದ ಕಾಪಾಡುತ್ತೇನೆ ಎಂದು ಆಕೆ ಸಾಯುವ ಗಳಿಗೆಯಲ್ಲಿ ಜತೆಯಲ್ಲಿದ್ದ ಇಬ್ಬರು ಗೆಳತಿಯರಿಗೆ ಹೇಳಿ ಪ್ರಾಣ ಬಿಟ್ಟಿದ್ದಳು. ಆ ವಿಷಯವನ್ನು ಬೇಲಾ ಮತ್ತು ಸಿಯಾ ಎಂಬ ಆ ಯುವತಿಯರು ಕಣ್ಣೀರುಗರೆಯುತ್ತಾ ತುಂಗಾಳಿಗೆ ಹೇಳಿದ್ದರು. ಕೇಳಿದ ತುಂಗಾ ಕಣ್ಣೀರು ಹಾಕಿದ್ದಳು.
ಆದಿವಾಸಿಗಳ ಆ ನಂಬಿಕೆಯ ಬಗ್ಗೆ ನಮಗೆ ಯಾವ ವಿಶ್ವಾಸವೂ ಇರಲಿಲ್ಲ. ಆದರೆ ಅದನ್ನು ಅಲ್ಲಗಳೆದು ಅವರ ಮನಸ್ಸನ್ನು ನೋಯಿಸಲು ನಾವು ಹೋಗಿರಲಿಲ್ಲ. ಅವರ ಯಾವುದೇ ನಂಬಿಕೆಯನ್ನು ಅಲ್ಲಗಳೆಯಲು ನಾವು ಪ್ರಯತ್ನಿಸಿದರೆ ಅಲ್ಲಿಗೆ ನಮ್ಮ ಅವರ ಸ್ನೇಹಕ್ಕೆ ಮಂಗಳ ಹಾಡಿದಂತೆ ಎಂದು ನಮಗೆ ಚೆನ್ನಾಗಿ ಗೊತ್ತಿತ್ತು.
ನದಿಯಿಂದ ಮೇಲೆ ಬಂದು ಕಾಡಿನೊಳಗೆ ಪ್ರವೇಶಿಸಿದೆ. ಕಾಡೇನೂ ದಟ್ಟವಾಗಿರಲಿಲ್ಲ. ಮೂರುನಾಲ್ಕು ವರ್ಷಗಳಿಂದ ಮಳೆ ಇಲ್ಲದಿದ್ದುದರಿಂದ ಗಿಡಗಂಟೆ ಹುಲ್ಲೆಲ್ಲಾ ಒಣಗಿಹೋಗಿದ್ದವು. ಹಸಿರಾಗಿದ್ದುದು ಮರಗಳು ಮಾತ್ರ. ಕಿರಿದಾದ ಮಣ್ಣುಹಾದಿಯಲ್ಲಿ ಎಚ್ಚರಿಕೆಯಿಂದ ಜೀಪ್ ನಡೆಸಿದೆ. ಕಾಡಿನ ನಡುವೆ ಆದಿವಾಸಿಗಳು ನಡೆದು ಮಾಡಿದ್ದ ಹಾದಿ ಅದು. ಈ ದಾರಿಯಲ್ಲಿ ಅರ್ಧ ಮೈಲು ಸಾಗಿದರೆ ಟಾರ್ ರಸ್ತೆ ಸಿಗುತ್ತದೆ.
ಒಂದು ತಿರುವಿನಲ್ಲಿ ತಿರುಗಿ ಕವಲೊಡೆದಿದ್ದ ಹಾದಿಯ ಎಡಸೀಳಿನಲ್ಲಿ ವಾಹನ ನಡೆಸಿದೆ. ಟಾರ್ ರಸ್ತೆಗೆ ಇನ್ನು ಕೆಲವೇ ಅಡಿಗಳಷ್ಟೇ. ಉತ್ಸಾಹದಿಂದ ಸಿಳ್ಳು ಹಾಕಿದೆ. ದಾರಿಗಡ್ಡವಾಗಿ ಓಡಿದ ಕಡವೆಗಳ ಗುಂಪಿಗೆ "ಟಾಟಾ" ಹೇಳಿದೆ.
ಕಾಡು ಹಾದಿ ಮತ್ತೆ ಸೀಳಿತ್ತು!
ಇದೇಕೆ ಹೀಗೆ? ಟಾರ್ ರಸ್ತೆ ಎಲ್ಲಿ ಮಾಯವಾಯಿತು?
ವಾಹನವನ್ನು ಹಿಮ್ಮುಖವಾಗಿ ನಡೆಸಿದೆ. ಮೊದಲ ಸೀಳಿನ ಬಳಿ ಬಲಕ್ಕೆ ಹೊರಳಿಸಿದೆ. ಐದು ನಿಮಿಷ... ಹತ್ತು ನಿಮಿಷ ಸುತ್ತಿದೆ. ಟಾರ್ ರಸ್ತೆ ಸಿಗಲಿಲ್ಲ.
ಮತ್ತೆ ಹಿಂದೆ ಬಂದೆ. ‘ಸರಿಯಾದ ದಾರಿ ಇದಿರಬಹುದೇನೋ’ ಎಂದುಕೊಂಡು ಮತ್ತೊಂದು ಕಡೆ ನುಗ್ಗಿದೆ. ಹಾಗೆಯೇ ಮಗದೊಂದು ಕಡೆ... ಉರುಳುತ್ತಿದ್ದ ನಿಮಿಷಗಳ ಪರಿವೆಯನ್ನು ನಾನು ಕಳೆದುಕೊಂಡಿದ್ದೆ... ಒಮ್ಮೆ ಏಕಾಏಕಿ ಗಡಿಯಾರದತ್ತ ನೋಡಿದೆ.
ಮೂರು ಗಂಟೆ ಐದು ನಿಮಿಷ!
ಮೈ ಗಾಡ್! ಅರ್ಧಗಂಟೆಯ ಹಿಂದೆಯೇ ನಾನು ಮನೆ ಸೇರಿರಬೇಕಾಗಿತ್ತು!
ವಾಸ್ತವ ಭೀಕರವಾಗಿ ಎದುರು ನಿಂತಿತ್ತು. ಕಗ್ಗತ್ತಲ ರಾತ್ರಿಯಲ್ಲಿ, ಕಾಡಿನಲ್ಲಿ ನಾನು ದಾರಿ ತಪ್ಪಿದ್ದೆ.
ಕಂಡ ಮತ್ತೊಂದು ದಾರಿಗೆ ನುಗ್ಗಿದೆ. ಹತ್ತು ಹೆಜ್ಜೆಗಳಿಗೊಮ್ಮೆ ಅತ್ತಿತ್ತ ಹೊರಳುತ್ತಾ ಸಾಗಿದ್ದ ಅದು ಒಣಗಿಹೋಗಿದ್ದ ಹಳ್ಳವೊಂದರ ಬಳಿ ಥಟ್ಟನೆ ಕೊನೆಯಾಗಿತ್ತು.
ಇಡೀ ಪ್ರದೇಶ ಪೂರ್ಣ ಅಪರಿಚಿತ. ಎಂಜಿನ್ ಸ್ಥಬ್ಧಗೊಳಿಸಿದೆ. ಭೀಕರ ಮೌನ ಕಿವಿ ತುಂಬಿತು. ಏಕಾಏಕಿ ಭಯವಾಯಿತು. "ತುಂಗಾ" ಎನ್ನುತ್ತಾ ಹಿಂದೆ ತಿರುಗಿದೆ.
ತುಂಗಾ ಮೈಮುದುರಿ ನಿದ್ರಿಸುತ್ತಿದ್ದಳು. ನಾವು ದಾರಿ ತಪ್ಪಿರುವ ಅರಿವೇ ಅವಳಿಗಿಲ್ಲ.
ಅವಳಿಗದು ಗೊತ್ತಾಗುವುದೇ ಬೇಡ. ಅವಳು ಆರಾಮವಾಗಿ ನಿದ್ರಿಸಲಿ.
ನನ್ನ ಕಿವಿಗಳು ಥಟ್ಟನೆ ನಿಮಿರಿದವು.
"ಢಕ್ಕ ಢಕ್ಕ... ಢಕ್ಕ ಢಕ್ಕ..." ದೂರದಿಂದೆಲ್ಲೋ ಕ್ಷೀಣವಾಗಿ ತೇಲಿಬರುತ್ತಿದ್ದ ಡೋಲಿನ ಶಬ್ಧ!
ಮುಂದಿನ ಕ್ಷಣದಲ್ಲಿ "ಟಮ ಟಮ ಟಮ" ತಮಟೆಯ ಸದ್ದು ಹಳ್ಳದಾಚೆಯ ಕಾಡಿನ ಕತ್ತಲಿನಾಳದಿಂದ ಕೇಳಿಬಂತು. ಹಿಂದೆಯೇ "ಹೇ... ಹೆಹೆಹೇ" ಎಂಬ ಮನುಷ್ಯರ ಸಾಮೂಹಿಕ ಕೂಗು.
ಈ ಅಪರಾತ್ರಿಯಲ್ಲಿ ಈ ಕಾಡುಜನರು ಇಲ್ಲಿ ಮಾಡುತ್ತಿರುವುದೇನು? ಪ್ರಶ್ನೆ ಮೂಡುತ್ತಿದ್ದಂತೇ ಹಳ್ಳದ ಎದುರು ಅಂಚಿನಲ್ಲಿ ಕಾಡಿನ ಕತ್ತಲನ್ನು ಸೀಳಿ ಹೊರಬಂದ ಎರಡು ದೊಂದಿಗಳು ಕಣ್ಣುಕುಕ್ಕಿದವು. ಅವೆರಡೂ ನನ್ನತ್ತ ವೇಗವಾಗಿ ಸಾಗಿಬರುತ್ತಿರುವಂತೆನಿಸಿತು. ಅದು ನನ್ನ ಭ್ರಮೆಯೇ?
ಕಣ್ಣುಜ್ಜಿಕೊಂಡೆ. ಅದು ಭ್ರಮೆಯಾಗಿರಲಿಲ್ಲ. ದೊಂದಿಗಳನ್ನು ಎತ್ತಿ ಹಿಡಿದ ಎರಡು ಮನುಷ್ಯಾಕೃತಿಗಳು ಹಳ್ಳದ ಮರಳನೆಲದಲ್ಲಿ ನನ್ನತ್ತ ವೇಗವಾಗಿ ಓಡಿಬರುತ್ತಿದ್ದವು. ನಾನು ಕಣ್ಣು ಕೀಲಿಸಿ ನೋಡುತ್ತಿದ್ದಂತೇ ಅರ್ಧನಿಮಿಷದಲ್ಲಿ ವಿಚಿತ್ರ ವೇಷ ತೊಟ್ಟಿದ್ದ ಇಬ್ಬರು ಆದಿವಾಸಿ ಯುವಕರು ನನ್ನ ಮುಂದೆ ನಿಂತಿದ್ದರು.
ಅರಿಶಿಣ ಕುಂಕುಮದ ಜತೆಗೆ ಅಲ್ಲಲ್ಲಿ ಬೂದಿ ಬಳಿದಿದ್ದ ಕಪ್ಪು ಮೈ. ನಡುವಿನಷ್ಟಕ್ಕೆ ಸುತ್ತಿದ್ದ ಕಡುಗೆಂಪು ವಸ್ತ್ರ, ಕೊರಳಲ್ಲಿ ದಪ್ಪದಪ್ಪ ಮಣಿಗಳ ಹಾರ, ಯಾವುಯಾವುದೋ ಕಾಡು ಎಲೆ, ಹಕ್ಕಿಗರಿಗಳಿಂದ ತಲೆಗೆ ಅಲಂಕಾರ... ದೊಂದಿಯ ಬೆಳಕಿನಲ್ಲಿ ಭಯಂಕರವಾಗಿ ಕಂಡರು.
ಪರ್ಲಾಕೋಟ್ ಯಾವ ಕಡೆಗೆ ಎಂದು ಅವರನ್ನು ಕೇಳಬೇಕೆಂದುಕೊಳ್ಳುತ್ತಿದ್ದಂತೇ ಇಬ್ಬರೂ ನನ್ನನ್ನು ಪರೀಕ್ಷಿಸುವಂತೆ ಜೀಪ್‌ನ ಸುತ್ತಲೂ ಒಮ್ಮೆ ಸುತ್ತಿದರು. ಕಿಟಕಿಗೆ ಮುಖ ಒತ್ತಿ ಸೀಟ್‌ನಲ್ಲಿ ಮಲಗಿದ್ದ ತುಂಗಾಳನ್ನೇ ನಿಮಿಷಗಳವರೆಗೆ ನೋಡಿದರು. ನನಗರ್ಥವಾಗದ ಯಾವುದೋ ಕಾಡುಭಾಷೆಯಲ್ಲಿ ‘ಕಚಪಚ’ ಮಾತಾಡಿಕೊಂಡರು.
ಅವರ ಈ ಮಂಗಗಳ ವರ್ತನೆಗೆ ಮಂಗಳ ಹಾಡಬೇಕಿತ್ತು.
"ಪರ್ಲಾಕೋಟ್ ಯಾವ ಕಡೆಗೆ?" ದನಿ ಎತ್ತರಿಸಿ ಪ್ರಶ್ನಿಸಿದೆ.
ತಮ್ಮತಮ್ಮಲ್ಲೇ ಏನೋ ಗೊಣಗಿಕೊಂಡ ಅವರು ನನ್ನತ್ತ ತಿರುಗಿದರು. ಅವರಲ್ಲೊಬ್ಬ ಬಾಯಿ ತೆರೆದ.
"ಪರ್ಲಾಕೋಟ್ ಇಲ್ಲಿಂದ ಒಂಬತ್ತು ಮೈಲಿ ದೂರ. ಬಂದ ದಾರೀಲೇ ಹಿಂದೆ ಹೋಗಬೇಕು. ಹೋಗೋದಕ್ಕೆ ಮೊದಲು ನಮ್ಮ ಜತೆ ಬಂದು ದೇವಿ ದರ್ಶನ ಮಾಡಿಕೊಂಡು ಪ್ರಸಾದ ಸ್ವೀಕರಿಸಿ." ಬೇಡಿಕೆಯಲ್ಲಿ ವಿನಯವಿತ್ತು. ಮತ್ತೊಬ್ಬ "ಹ್ಞೂ ಹ್ಞೂ ಬನ್ನಿ. ನಮ್ಮ ಜತೆ ಬನ್ನಿ" ಎನ್ನುತ್ತ ಕೈಜೋಡಿಸಿದ. ಎಲೆ ಗರಿಗಳಿಂದ ಮುಚ್ಚಿಹೋಗಿದ್ದ ತಲೆಯೂ ವಿನಯದಿಂದ ಬಾಗಿತು.
ನಾನು ಒಂದುಕ್ಷಣ ಅನುಮಾನಿಸಿದೆ. ಮನೆ ಸೇರುವುದು ಈಗಾಗಲೇ ತಡವಾಗಿಹೋಗಿದೆ. ಇನ್ನು ಈ ಕಾಡುಜನರ ಪೂಜೆ ಪುರಸ್ಕಾರಗಳನ್ನು ನೋಡುತ್ತಾ ನಿಂತರೆ ನನ್ನ ಕೆಲಸಗಳೆಲ್ಲಾ ಹಾಳು ಎನಿಸಿತು. ಮರುಕ್ಷಣ ಮನಸ್ಸು ಬೇರೊಂದು ದಾರಿ ಹಿಡಿಯಿತು. ಹೇಗೂ ತಡ ಆಗಿಯೇಹೋಗಿದೆ. ಒಂದರ್ಧ ಗಂಟೆ ಇವರ ಜತೆ ಕಳೆದು ಆದಿವಾಸೀ ಬದುಕಿನ ಮತ್ತೊಂದು ಚಿತ್ರವನ್ನು ಅವಲೋಕಿಸಿವುದು ಒಳ್ಳೆಯದು.
ಆ ಆಲೋಚನೆ ಬಂದದ್ದೇ ತಡ, ಜೀಪ್‌ನಿಂದ ಕೆಳಗಿಳಿದೆ. ತುಂಗಾಳನ್ನು ಎಬ್ಬಿಸಬೇಕೆಂದುಕೊಳ್ಳುವಷ್ಟರಲ್ಲಿ ಅವಳಾಗಲೇ ಜೀಪ್‌ನಿಂದ ಹೊರಬಂದು ನಿಂತಿರುವುದು ಕಂಡು ಅಚ್ಚರಿಗೊಂಡೆ. ಒಂದು ಕ್ಷಣದ ಹಿಂದೆ ನಿದ್ದೆಯಲ್ಲಿ ಮುಳುಗಿಹೋಗಿದ್ದ ಇವಳು ಎದ್ದದ್ದು ಯಾವಾಗ? ಜೀಪ್‌ನಿಂದ ಹೊರಬಂದು ನಿಂತದ್ದು ಯಾವಾಗ?
"ನೀ ಯಾವಾಗ ಎದ್ದೆ?" ಕೇಳಿಯೇ ಬಿಟ್ಟೆ.
"ಈಗತಾನೆ ಎದ್ದೆನಲ್ಲ?" ಎನ್ನುತ್ತಾ ನಕ್ಕಳು.
ನನಗೆ ನಂಬಿಕೆಯಾಗಲಿಲ್ಲ. ಅವಳನ್ನೇ ಅನುಮಾನದಿಂದ ನೋಡಿದೆ.
ಮುದುರಿದ ಸಲ್ವಾರ್ ಕಮೀಜ್, ಕೊರಳಿಗೆ ಹಾರದಂತೆ ಸುತ್ತಿಕೊಂಡಿದ್ದ ಚುನರಿ. ತೆಳುದೇಹದಲ್ಲಿ ಎದ್ದು ಕಾಣುತ್ತಿದ್ದ ತುಸು ಉಬ್ಬಿದ ಹೊಟ್ಟೆ. ಪ್ರಶಾಂತ ಮುಖ. ದೊಂದಿಗಳ ಬೆಳಕಿನಲ್ಲಿ ಆ ಮುಖ ಯಾವುದೋ ಅಲೌಕಿಕ ಕಾಂತಿಯಿಂದ ಬೆಳಗುತ್ತಿದ್ದಂತೆ ಕಂಡಿತು. ಅದೇ ಗಳಿಗೆಯಲ್ಲಿ ಹಲವಾರು ಆದಿವಾಸಿಗಳು ನಮ್ಮನ್ನು ಸುತ್ತುಗಟ್ಟಿ ನಿಂತಿರುವುದು ನನ್ನ ಅರಿವಿಗೆ ಬಂತು. ತುಂಗಾಳನ್ನು ಗಮನಿಸುತ್ತಿದ್ದ ನನಗೆ ಇವರೆಲ್ಲಾ ಬಂದದ್ದು ಯಾವಾಗ ಎಂದೇ ಗೊತ್ತಾಗಿರಲಿಲ್ಲ. ಅವರನ್ನೆಲ್ಲಾ ನೋಡುತ್ತಿದ್ದಂತೇ ಯಾಕೋ ಭಯವಾಯಿತು. ಇವರ ಜತೆ ಹೋಗುವುದು ಬೇಡ ಎನಿಸಿತು.
"ನೋಡಿ ನಮಗೆ ಸಮಯವಿಲ್ಲ. ನಾವೀಗ ಅರ್ಜೆಂಟ್ ಆಗಿ ಪರ್ಲಾಕೋಟ್ ಸೇರಲೇಬೇಕು" ಎಂದೆ.
ಅವರೆಲ್ಲರೂ ಒಟ್ಟಾಗಿ ಗಹಗಹಿಸಿದರು. ಅವರಲ್ಲೊಬ್ಬ ಗಟ್ಟಿದನಿಯಲ್ಲಿ ಹೇಳಿದ:
"ಆಯಿತು. ನೀವು ಪರ್ಲಾಕೋಟ್‌ಗೆ ಹೊರಡಿ. ಆದರೆ ಈ ದೇವಿಯನ್ನು ಮಾತ್ರ ನಮ್ಮ ಜತೆ ಕರೆದುಕೊಂಡು ಹೋಗುತ್ತೇವೆ" ಎನ್ನುತ್ತಾ ತುಂಗಾಳ ಕೈ ಹಿಡಿದ. ನನಗೆ ಗಾಬರಿಯಾಯಿತು. "ಏಯ್ ಏನಿದು?" ಎನ್ನುತ್ತಾ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ ಆ ಆದಿವಾಸಿ ತುಂಗಾಳನ್ನು ಅನಾಮತ್ತಾಗಿ ಮೇಲೆತ್ತಿದ. ಅವಳು ಚಟ್ಟನೆ ಚೀರಿದಳು. ಅವಳನ್ನು ಹೆಗಲ ಮೇಲೆ ಹಾಕಿಕೊಂಡು ಆ ಕಿರಾತಕ ನನಗೆ ಬೆನ್ನು ಹಾಕಿ ಓಡತೊಡಗಿದ. ಉಳಿದವರು "ಹೇ ಹೆಹೆಹೇ" ಎಂದು ಕೂಗುತ್ತಾ ಅವನ ಜತೆ ಓಡಿದರು. ಏನಾಗುತ್ತಿದೆಯೆಂದು ನನ್ನ ಅರಿವಿಗೆ ಬರುವಷ್ಟರಲ್ಲಿ ಅವರೆಲ್ಲಾ ಒಣಹಳ್ಳದ ಮಧ್ಯದಲ್ಲಿದ್ದರು.
ಹುಚ್ಚು ಹಿಡಿದವನಂತೆ ಅವರ ಹಿಂದೆ ಓಡಿದೆ. ತುಂಗಾಳ ಚೀಠ್ಕಾರ ಕೇಳುತ್ತಿದ್ದಂತೇ ಮೈಯಲ್ಲಿ ದೆವ್ವ ಹೊಕ್ಕಂತೆ ಹಳ್ಳದ ಮರಳಿನಲ್ಲಿ ಜಿಗಿಜಿಗಿದು ಓಡಿದೆ. ಆದರೆ ಎಷ್ಟು ವೇಗವಾಗಿ ಓಡಿದರೂ ಅವರನ್ನು ಸಮೀಪಿಸುವುದು ನನ್ನಿಂದಾಗಲಿಲ್ಲ.
ಒಣಹಳ್ಳವನ್ನು ದಾಟಿ ಕಾಡಿನೊಳಗೆ ಪ್ರವೇಶಿಸುತ್ತಿದ್ದಂತೇ ತಮಟೆಯ ಶಬ್ಧ ಹತ್ತಿರಾಗತೊಡಗಿತು. ಅದರ ಜತೆ ಯಾವುದೋ ವಾದ್ಯದ "ಕೊರ್ರೋ" ಎಂದು ಕರ್ಕಶ ಸದ್ದೂ ಸೇರಿಕೊಂಡಿತ್ತು. ಒಣಗಿಹೋಗಿದ್ದ ಗಿಡಗಂಟೆಗಳಿಗೆ ಕಾಲು ತೊಡರಿಸಿಕೊಂಡು ಬೀಳುವುದನ್ನೂ ಲೆಕ್ಕಿಸದೇ ಹತ್ತು ಹೆಜ್ಜೆ ಓಡುವಷ್ಟರಲ್ಲಿ ಕಾಡಿನ ಕತ್ತಲಿನಲ್ಲಿ ಬೆಳಕು ಕಂಡಿತು.
ಕಾಡಿನ ನಡುವೆ ಪುಟ್ಟ ವೃತ್ತಾಕಾರದ ಬಯಲಿನಂತಿದ್ದ ಪ್ರದೇಶವೊಂದರಲ್ಲಿ ಆದಿವಾಸೀ ಗುಂಪು ಸೇರಿತ್ತು. ಬಯಲಿನ ನಾಲ್ಕೂ ಕಡೆ ನೆಟ್ಟಿದ್ದ ದೊಂದಿಗಳ ಬೆಳಕಿನಲ್ಲಿ ಅಲ್ಲಿನ ದೃಶ್ಯ ನನಗೆ ಸ್ಪಷ್ಟವಾಗಿ ಕಂಡಿತು.
ಹಲವಾರು ಕೊಂಬೆಗಳಿದ್ದ ಹಸೀಮರದ ಬೊಡ್ಡೆಯೊಂದನ್ನು ಬಯಲಿನ ನಟ್ಟನಡುವೆ ನಿಲ್ಲಿಸಿ ಅದನ್ನು ಕಾಡುಹೂಗಳಿಂದ ಅಲಂಕರಿಸಿದ್ದರು. ಅದರ ಮೇಲೆಲ್ಲಾ ಅರಿಶಿಣ ಕುಂಕುಮಗಳನ್ನು ಧಾರಾಳವಾಗಿ ಚೆಲ್ಲಿದ್ದರು. ಅದರ ಕೊಂಬೆಗಳಿಗೆ ಏನೇನನ್ನೂ ತೂಗುಹಾಕಿದ್ದರು. ಮಧ್ಯದ ಕೊಂಬೆಯಲ್ಲಿ ನೇತಾಡುತ್ತಿದ್ದುದು ಒಂದು ಮಾನವ ತಲೆಬುರುಡೆ.
ಮರದ ಮುಂದೆ ಏಳು ಮಡಕೆಗಳಲ್ಲಿ ಏನೇನನ್ನೋ ತುಂಬಿಸಿ ಇಟ್ಟಿದ್ದರು. ಅವುಗಳ ಮುಂದೆ ನಿಗಿನಿಗಿ ಕೆಂಡಗಳಿಂದ ತುಂಬಿದ್ದ ಯೋನಿಯ ಆಕಾರದಲ್ಲಿದ್ದ ಅಗ್ನಿಕುಂಡ. ತಲೆಯ ಮೇಲೆ ಎತ್ತರದ ಜಟೆಯಿದ್ದ, ಹಣೆ ಮೈಕೈಗಳಿಗೆ ಬೂದಿ ಬಳಿದುಕೊಂಡು ಕೊರಳಿನಲ್ಲಿ ಯಾವುಯಾವುದೋ ಪ್ರಾಣಿಗಳ ತಲೆಬುರುಡೆಗಳ ಮಾಲೆ ಹಾಕಿಕೊಂಡು ಭಯಂಕರವಾಗಿ ಕಾಣುತ್ತಿದ್ದ ಆದಿವಾಸಿಯೊಬ್ಬ ಕತ್ತಿ ಹಿಡಿದುಕೊಂಡು ನಿಂತಿದ್ದ. ಅವನ ಸುತ್ತ ಇಪ್ಪತ್ತು-ಮೂವತ್ತು ವಿಚಿತ್ರ ವೇಷಾಲಂಕಾರದ ಆದಿವಾಸೀ ಗಂಡಸರು.
ಅದೆಲ್ಲವನ್ನೂ ನೋಡುತ್ತಿದ್ದಂತೇ ಅಲ್ಲಿ ನಡೆಯುತ್ತಿರುವುದೇನೆಂದು ನನಗೆ ಹೊಳೆದುಬಿಟ್ಟಿತು.
ಅದು ನರಬಲಿಯ, ಗರ್ಭಿಣಿ ಹೆಂಗಸಿನ ಬಲಿಯ ಸಿದ್ಧತೆ!
ಇದರ ಬಗ್ಗೆ ಬಸ್ತಾರ್‌ಗೆ ಬಂದ ಹೊಸದರಲ್ಲಿ ಕೇಳಿತಿಳಿದಿದ್ದೆ. ಮಳೆ ಇಲ್ಲದೇ ಜನ ಜಾನುವಾರುಗಳು ಸಂಕಷ್ಟಕ್ಕೀಡಾದಾಗ ಇಲ್ಲಿನ ಒಂದೆರಡು ಬುಡಕಟ್ಟುಗಳ ಜನರು ಮುನಿದ ದೈವವನ್ನು ಸಂತುಷ್ಟಿಗೊಳಿಸಲು ಏಳು ರಾತ್ರಿಗಳು ಪೂಜೆ ನಡೆಸುತ್ತಾರೆ. ಮಧ್ಯರಾತ್ರಿಯಿಂದ ಬೆಳಗಿನಜಾವದವರೆಗೆ ನಡೆಯುವ ಈ ಪೂಜೆಯಲ್ಲಿ ಮೊದಲ ರಾತ್ರಿ ಒಂದು ಹೇಂಟೆಯನ್ನೂ, ಎರಡನೆಯ ರಾತ್ರಿ ಒಂದು ಹೆಣ್ಣು ಮೊಲವನ್ನೂ, ಮೂರನೆಯ ರಾತ್ರಿ ಒಂದು ಹೆಣ್ಣು ಕಾಡುಬೆಕ್ಕನ್ನೂ, ನಾಲ್ಕನೆಯ ರಾತ್ರಿ ಒಂದು ಮೇಕೆಯನ್ನೂ, ಐದನೆಯ ರಾತ್ರಿ ಒಂದು ಎಮ್ಮೆಯನ್ನೂ, ಆರನೆಯ ರಾತ್ರಿ ಒಂದು ಹಸುವನ್ನೂ ದೇವಿಗೆ ಬಲಿ ಕೊಡಲಾಗುತ್ತದೆ. ಏಳನೆಯ ರಾತ್ರಿ ಒಬ್ಬಳು ಗರ್ಭಿಣಿ ಸ್ತ್ರೀಯ ಬಲಿಯೊಂದಿಗೆ ಪೂಜೆ ಮುಕ್ತಾಯವಾಗುತ್ತದೆ. ಪೂಜೆ ಮುಗಿದ ನಂತರ ಬಲಿಯಾದ ಸ್ತ್ರೀಯ ಕಳೇಬರವನ್ನು ತೆಗೆದುಕೊಂಡು ಅವರೆಲ್ಲರೂ ಹಿಂತಿರುಗಿ ನೋಡದೇ ಅಲ್ಲಿಂದ ನಡೆದುಬಿಡುತ್ತಾರೆ. ಸಕಲ ವಿಧಿವಿಧಾನಗಳೊಡನೆ ಕಳೇಬರವನ್ನು ಕಾಡಿನ ಸುರಹೊನ್ನೆ ಮರವೊಂದರ ಬುಡದಲ್ಲಿ ಹೂಳುತ್ತಾರೆ.
ಬಲಿಯಾದ ಸ್ತ್ರೀ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾಳೆ. ಸ್ವರ್ಗ ಇರುವುದು ಒಂದು ಹಸಿರು ಕಣಿವೆಯಲ್ಲಿ. ಅಲ್ಲಿಗೆ ತಲುಪುವ ಮೊದಲು ಅವಳು ಆರು ದುರ್ಗಮ ಕಣಿವೆಗಳನ್ನು ದಾಟಿಹೋಗಬೇಕು. ಅವಳಿಗಿಂತ ಮೊದಲು ಬಲಿಯಾದ ಆ ಆರು ಜೀವಿಗಳು ಒಂದೊಂದಾಗಿ ಬಂದು ಅವಳಿಗೆ ಜತೆ ನೀಡಿ ಆ ಅರೂ ಕಣಿವೆಗಳನ್ನು ಆಕೆ ಶ್ರಮವಿಲ್ಲದೇ ಧಾಟಲು ಸಹಕರಿಸುತ್ತವೆ. ಏಳನೆಯ ಕಣಿವೆಗೆ ಅಂದರೆ ಸ್ವರ್ಗದ ಕಣಿವೆಗೆ ಅವಳೊಬ್ಬಳೇ ಪ್ರವೇಶಿಸುತ್ತಾಳೆ.
ಇದೊಂದು ಅನಾಗರೀಕ ನಂಬಿಕೆ. ಕ್ರೂರ ಪೂಜಾವಿಧಾನ. ಇತ್ತೀಚೆಗೆ ಇದು ನಡೆದ ಅಧಿಕೃತ ವರದಿ ಇಲ್ಲದಿದ್ದರೂ ಆಗೊಮ್ಮೆ ಈಗೊಮ್ಮೆ ಇದು ಈಗಲೂ ನಡೆಯುತ್ತಿದೆ ಎಂದು ಇಲ್ಲಿಗೆ ಬಂದ ಹೊಸತರಲ್ಲಿ ನಮ್ಮ ಸಂಸ್ಥೆಯ ಕೆಲವು ಕಾರ್ಯಕರ್ತರಿಂದ ಕೇಳಿದ್ದೆ. ಇಂತಹ ಪೂಜೆ ನಡೆಯುತ್ತಿರುವ ಸುದ್ದಿ ತಿಳಿದ ಬೇರೆ ಆದಿವಾಸೀ ಹಳ್ಳಿಗಳ ಜನರು ಏಳನೆಯ ದಿನ ತಮ್ಮ ಹಳ್ಳಿಯ ಗರ್ಭಿಣಿ ಸ್ತ್ರೀಯರನ್ನು ಕಟ್ಟೆಚ್ಚರದಿಂದ ಕಾಯುತ್ತಾರೆ. ಅವರು ಅಪಹರಣಗೊಂಡು ಬಲಿಯಾಗುವುದನ್ನು ತಡೆಯಲು ಬೇಕಾದ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುತ್ತಾರೆ. ಆರು ದಿನಗಳೂ ಪೂಜೆ ಸಾಂಗವಾಗಿ ನೆರವೇರಿ ಏಳನೆಯ ದಿನ ಮಾತ್ರ ಬಲಿಗೆ ಯಾವ ಸ್ತ್ರೀಯೂ ದೊರಕದೆ ನರಬಲಿ ನಡೆಯದೇ ಹೋದರೆ ಅದುವರೆಗೆ ಮಾಡಿದ ಇಡೀ ಪೂಜೆ ವ್ಯರ್ಥ. ಆದರೆ ಹೀಗಾಗುವುದಿಲ್ಲವಂತೆ. ಆರೂ ರಾತ್ರಿಗಳ ಪೂಜೆಯಿಂದ ಸಂತುಷ್ಟಳಾದ ದೇವಿ ಏಳನೆಯ ರಾತ್ರಿ ಗರ್ಭಿಣಿ ಸ್ತ್ರೀಯೊಬ್ಬಳು ತಾನಾಗಿಯೇ ಬಂದು ತನ್ನ ಭಕ್ತರ ಕೈಗೆ ಸಿಗುವಂತೆ ಮಾಡುತ್ತಾಳೆ ಎಂಬ ವಿಶ್ವಾಸ ಈ ಜನಕ್ಕಿದೆ ಎಂದೂ ಕೇಳಿದ್ದೆ.
ಅಂದರೆ ಈಗ ಈ ಜನ ನನ್ನ ತುಂಗಾಳನ್ನು ಬಲಿ ಕೊಡಹೊರಟಿದ್ದಾರೆ! ದೇವರೇ!
ತುಂಗಾಳನ್ನು ಹೊತ್ತು ತಂದ ಗುಂಪು ಬಯಲಿನಲ್ಲಿ ಪ್ರವೇಶಿಸುತ್ತಿದ್ದಂತೇ ಅಲ್ಲಿದ್ದ ಜನ ಕೇಕೆ ಹಾಕುತ್ತಾ ಓಡಿ ಬಂದು ವೃತ್ತಾಕಾರವಾಗಿ ಸುತ್ತುತ್ತಾ ಕುಣಿಯತೊಡಗಿದರು. ನಾನು ಹುಚ್ಚನಂತೆ ಅವರ ನಡುವೆ ನುಗ್ಗಿದೆ. ಸಿಕ್ಕಿದವರಿಗೆ ಕೈಯಿಂದ ಗುದ್ದಿ, ಕಾಲುಗಳಿಂದ ಒದ್ದು ತುಂಗಾಳನ್ನು ಸಮೀಪಿಸಿದೆ.
ಕತ್ತಿ ಹಿಡಿದಿದ್ದವನು ಏನೋ ಅರಚಿದ. ಥಟ್ಟನೆ ಕುಣಿತ ನಿಂತಿತು. ಮೂರುನಾಲ್ಕು ಜನ ನನ್ನ ರಟ್ಟೆಗಳನ್ನು ಹಿಡಿದುಕೊಂಡರು. ನನ್ನ ಪ್ರತಿಭಟನೆಯನ್ನು ಲೆಕ್ಕಿಸದೇ ನನ್ನನ್ನು ದರದರನೆ ಎಳೆದುಕೊಂಡುಹೋಗಿ ಬಯಲಿನಂಚಿನ ಮರವೊಂದಕ್ಕೆ ನಾರು ಹಗ್ಗಗಳಿಂದ ಕಟ್ಟಿದರು. ಹರಿದುಹೋಗುವಂತೆ ಬಾಯಿಯನ್ನು ಅಗಲಿಸಿ ನಾರಿನ ದಪ್ಪ ಉಂಡೆಯೊಂದನ್ನು ತುರುಕಿದರು.
ಕೈಕಾಲುಗಳನ್ನು ಅಲುಗಿಸಲೂ ಸಾಧ್ಯವಿಲ್ಲದಷ್ಟು ಬಿಗಿಯಾಗಿ ಕಟ್ಟಿಬಿಟ್ಟಿದ್ದರು. ಗಂಟಲಲ್ಲಿ ಮೂಡಿದ ಕೂಗು ಅಲ್ಲೇ ಅಡಗಿಹೋಗುತ್ತಿತ್ತು. ನಾನು ಬಂಧಿಯಾಗಿಹೋಗಿದ್ದೆ. ನಿಸ್ಸಹಾಯಕನಾಗಿ ಎದುರಿನ ರುದ್ರನಾಟಕವನ್ನು ನೋಡಿದೆ. ತುಂಗಾ ಅರ್ತಳಾಗಿ ಕೂಗುತ್ತಿದ್ದಳು.
ಕತ್ತಿ ಹಿಡಿದಿದ್ದವನು -ಅವನೇ ಪೂಜಾರಿ ಇರಬೇಕು- ಮಣ್ಣಿನ ಕುಡಿಕೆಯೊಂದನ್ನು ಹಿಡಿದು ಬಂದ. ಮೂರುನಾಲ್ಕು ಜನ ತುಂಗಾಳನ್ನು ಗಟ್ಟಿಯಾಗಿ ಹಿಡಿದರು. ಮತ್ತೊಬ್ಬ ಅವಳ ಬಾಯಿಯೊಳಗೆ ಕೈ ತೂರಿಸಿ ಅಗಲವಾಗಿ ತೆರೆದ. ಪೂಜಾರಿ ಕುಡಿಕೆಯಲ್ಲಿದ್ದುದನ್ನು ಒಂದೇಬಾರಿಗೆ ತುಂಗಾಳ ಬಾಯಿಗೆ ಸುರಿದ. ಗುಂಪಿನ ಕೇಕೆ ಮುಗಿಲು ಮುಟ್ಟಿತು. ಎಲ್ಲರೂ ತುಂಗಾಳನ್ನು ಬಿಟ್ಟು ದೂರ ಸರಿದರು. ಅವಳು ಮಧ್ಯದಲ್ಲಿ ನಿಂತಿರುವಂತೇ ಅವಳ ಸುತ್ತಲೂ ವೃತ್ತಾಕಾರವಾಗಿ ಕುಣಿಯತೊಡಗಿದರು. ಕೇಕೆ, ಯಾವುದೋ ಅರ್ಥವಾಗದ, ವಿಚಿತ್ರ ಭಾಷೆಯ ಉದ್ಗಾರಗಳು, ಹಾಡುಗಳು. ಜತೆಗೆ ತಾರಕಕ್ಕೇರಿದ ತಮಟೆಯ ಸದ್ದು...
ತುಂಗಾ ನಿಂತಲ್ಲೇ ಮೆಲ್ಲಗೆ ಓಲಾಡತೊಡಗಿದಳು. ಕಣ್ಣುಗಳನ್ನು ಮುಚ್ಚಿದಂತೇ ಹೆಜ್ಜೆ ಸರಿಸುತ್ತಾ ಕೈಗಳನ್ನು ಅತ್ತಿತ್ತ ಆಡಿಸತೊಡಗಿದಳು. ಗುಂಪು ಕಿವಿಗಡಚಿಕ್ಕುವಂತೆ ಕೇಕೆ ಹಾಕಿತು. ಅವರ ಘೋಷಗಳು ಮುಗಿಲು ಮುಟ್ಟಿದವು. ಕುಣಿಯುತ್ತಿದ್ದ ಹೆಜ್ಜೆಗಳ ಚಲನೆ ಉತ್ಕರ್ಷಕ್ಕೇರಿ ನನ್ನ ಕಣ್ಣ ಮುಂದೆ ನೂರಾರು, ಸಾವಿರಾರು ಕಾಲುಗಳು ಹುಚ್ಚುವೇಗದಲ್ಲಿ ಜಿಗಿದಾಡುತ್ತಿರುವಂತೆ ಕಾಣತೊಡಗಿತು. ನನಗೆ ಮಂಕು ಕವಿಯತೊಡಗಿತು. ಯಾವುದೋ ತಳಕಾಣದ ಪಾತಾಳಕ್ಕೆ ಜಾರುತ್ತಿರುವಂತೆನಿಸತೊಡಗಿತು.
ಅದೆಷ್ಟು ಹೊತ್ತಿನವರೆಗೆ ಆ ನರಕದ ನೃತ್ಯ ನಡೆಯಿತೋ ನನಗೆ ಗೊತ್ತಿಲ್ಲ. ಕಾಲದ ಪರಿವೆಯನ್ನೇ ನಾನು ಕಳೆದುಕೊಂಡಿದ್ದೆ. ನನ್ನ ಮನಸ್ಸು ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಂಡು ಜಡವಾಗಿಹೋಗಿತ್ತು.
ಒಂದು ಹಂತದಲ್ಲಿ ನೃತ್ಯ ಇದ್ದಕ್ಕಿದ್ದಂತೇ ನಿಂತಿತು. ಘೋಷಗಳು, ಕೇಕೆಗಳು, ತಮಟೆ ತುತ್ತೂರಿಗಳ ಶಬ್ಧಗಳು ಥಟ್ಟನೆ ನಿಂತುಹೋದವು. ಕುಣಿಯುತ್ತಿದ್ದವರೆಲ್ಲಾ ನಿಂತಲ್ಲೇ ಪ್ರತಿಮೆಗಳಂತೆ ನಿಂತುಬಿಟ್ಟರು. ಕಿವಿ ಇರಿಯುತ್ತಿದ್ದ ಶಬ್ಧಕ್ಷೋಭೆ, ಕಣ್ಣುಗಳನ್ನು ಕತ್ತಲುಗಟ್ಟಿಸಿಬಿಟ್ಟಿದ್ದ ಹುಚ್ಚುಕುಣಿತಗಳು ಥಟ್ಟನೆ ನಿಂತುಹೋಗಿ ನಾನು ಒಂದುಕ್ಷಣ ಗೊಂದಲಕ್ಕೊಳಗಾದೆ. ಒಂದು ಅಪರಿಚಿತ ಲೋಕದಿಂದ ಇನ್ನೊಂದು ಅಪರಿಚಿತ ಲೋಕಕ್ಕೆ ಏಕಾಏಕಿ ಒಗೆಯಲ್ಪಟ್ಟಂತೆ ದಿಗ್ಭ್ರಮೆಗೊಂಡೆ.
ಎಲ್ಲೆಲ್ಲೂ ಮೌನ. ಗಾಳಿಯೂ ಬೀಸುವುದನ್ನು ಮರೆತು ಇಲ್ಲಿ ನಡೆಯುತ್ತಿದ್ದ ರುದ್ರನಾಟಕವನ್ನು ಬೆರಗುಗೊಂಡು ನೋಡುತ್ತಿದೆಯೆನಿಸಿತು. ಎಲ್ಲವೂ ನಿಶ್ಚಲ, ನೀರವ.
ಪೂಜಾರಿಯ ಒಂದು ಕರ್ಕಶ ಆಜ್ಞೆ ಮೌನವನ್ನು ಭಂಗಿಸಿತು. ಥಟ್ಟನೆ ಜನ ಎರಡೂ ಪಕ್ಕಕ್ಕೆ ಸರಿದು ದಾರಿ ಮಾಡಿಕೊಟ್ಟರು. ಈಗ ತುಂಗಾ ಇಡಿಯಾಗಿ ನನ್ನ ನೋಟಕ್ಕೆ ಸಿಕ್ಕಿದಳು. ಅವಳು ಕಣ್ಣುಮುಚ್ಚಿ ಬೊಂಬೆಯಂತೆ ನಿಂತಿದ್ದಳು. ದೇಹದಲ್ಲಿ ಯಾವ ಚಲನೆಯೂ ಇಲ್ಲ.
ಪೂಜಾರಿ ತನ್ನ ಬಲಗೈ ಎತ್ತಿ ಅವಳ ತಲೆಯ ಮೇಲಿಟ್ಟ. ನಿದ್ರೆಯಿಂದ ಎಚ್ಚತ್ತಂತೆ ತುಂಗಾ ಫಕ್ಕನೆ ಕಣ್ಣು ತೆರೆದಳು. ಅವಳ ತಲೆಯ ಮೇಲೆ ಕೈ ಇಟ್ಟಂತೇ ಪೂಜಾರಿ ನನ್ನತ್ತ ನಡೆದು ಬರತೊಡಗಿದ. ತುಂಗಾ ಮೋಡಿಗೊಳಗಾದವಳಂತೆ ಮೌನವಾಗಿ ಅವನ ಜತೆ ನಡೆದು ಬಂದಳು. ಅವರಿಬ್ಬರೂ ನನ್ನ ಮುಂದೆ ಬಂದು ನಿಂತರು.
ನಾನು ತುಂಗಾಳ ಮುಖವನ್ನೇ ದಿಟ್ಟಿಸಿದೆ. ಕಣ್ಣುಗಳಲ್ಲಿ ಶೂನ್ಯತೆ. ಮುಖದಲ್ಲಿ ಯಾವ ಭಾವನೆಯೂ ಇರಲಿಲ್ಲ. ಮರದಲ್ಲಿ ಕೆತ್ತಿದಂತೆ ಅದು ನಿರ್ಭಾವುಕವಾಗಿತ್ತು.
ಪೂಜಾರಿ ತುಂಗಾಳತ್ತ ತಿರುಗಿ ಗಂಭೀರದನಿಯಲ್ಲಿ ಹೇಳಿದ:
"ನಮಗೋಸ್ಕರ, ನಮ್ಮ ದೇವಿಗೋಸ್ಕರ ನಿನ್ನನ್ನು ಇಲ್ಲಿಗೆ ಕರೆತಂದ ನಿನ್ನ ಪುರುಷ ಇಲ್ಲಿಂದ ಬರಿಗೈಯಲ್ಲಿ ಹೋಗಬಾರದು. ಅದು ನಮಗೆ ಶ್ರೇಯಸ್ಸಲ್ಲ. ನಿನ್ನ ಮೈಮೇಲಿನ ಒಂದು ವಸ್ತುವನ್ನು ತೆಗೆದು ಅವನಿಗೆ ಕೊಡು. ಅದೊಂದು ಮಾತ್ರ ನಿನ್ನ ತ್ಯಾಗದ ನಂತರವೂ ನಿನ್ನ ನೆನಪಾಗಿ ಅವನಲ್ಲಿ ಉಳಿಯಲಿ."
ಆಜ್ಞೆ ಪಾಲಿಸುವ ವಿಧೇಯ ಸೇವಕಿಯಂತೆ ತುಂಗಾ ಮೌನವಾಗಿ ತನ್ನ ಬಲಗೈನ ಉಂಗುರದ ಬೆರಳಿನಲ್ಲಿದ್ದ ಉಂಗುರವೊಂದನ್ನು ತೆಗೆದು ನನ್ನ ಬೆರಳಿಗೆ ತೊಡಿಸಿದಳು. ನನ್ನ ಮನಸ್ಸು ಇದ್ಯಾವುದಕ್ಕೂ ಪ್ರತಿಕ್ರಿಯಿಸಲಾರದಷ್ಟು ಜಡವಾಗಿಹೋಗಿತ್ತು.
ಪೂಜಾರಿ ಮತ್ತೆ ಅವಳ ತಲೆಯ ಮೇಲೆ ಕೈ ಇಟ್ಟು ಹಿಂದಕ್ಕೆ ತಿರುಗಿ ನಡೆಯತೊಡಗಿದ. ತುಂಗಾ ಅವನ ಜತೆ ಹೆಜ್ಜೆ ಹಾಕಿದಳು. ಇಬ್ಬರೂ ನಿಧಾನವಾಗಿ ನನ್ನಿಂದ ದೂರ ನಡೆದು ಹೋದರು. ಹೋಗಿ ಅಗ್ನಿಕುಂಡಕ್ಕೂ ಮಡಕೆಗಳಿಗೂ ನಡುವೆ ನಿಂತರು.
ಪೂಜಾರಿ ಮಡಕೆಗಳಲ್ಲಿದ್ದ ದ್ರವಗಳನ್ನು ಒಂದೊಂದಾಗಿ ಬೊಂಬಿನ ಲೋಟಗಳಲ್ಲಿ ಮೊಗೆದು ತುಂಗಾಳ ನೆತ್ತಿಯ ಮೇಲೆ ಸುರಿದ. ಪ್ರತಿಸಲ ಸುರಿಯುವಾಗಲೂ ತಾರಕಸ್ವರದಲ್ಲಿ ವಿಚಿತ್ರ ಮಂತ್ರಗಳನ್ನು ಹೇಳುತ್ತಿದ್ದ. ನಂತರ ಶಂಖವೊಂದನ್ನು ಕೈಗೆತ್ತಿಕೊಂಡು ಊದಿದ. ಅದರ ನಿನಾದ ಸುತ್ತಲ ಗಿರಿಕಂದರಗಳಲ್ಲಿ ಪ್ರತಿಧ್ವನಿಸಿತು. ತಕ್ಷಣ ಬಳಿಯಲ್ಲಿದ್ದವನೊಬ್ಬ ಒಣಎಲೆಗಳ ಪೊಟ್ಟಣಗಳನ್ನು ಬಿಡಿಸಿ ಅವುಗಳಲ್ಲಿದ್ದ ಧೂಪದಂತಹ ಪುಡಿಯನ್ನು ಅಗ್ನಿಕುಂಡಕ್ಕೆ ಸುರಿದ. ದಟ್ಟ ಹೊಗೆ ಮೇಲೆದ್ದಿತು. ಆ ಹೊಗೆಯಲ್ಲಿ ತುಂಗಾ, ಪೂಜಾರಿ, ಮರದ ಬೊಡ್ಡೆಯ ದೇವತೆ- ಎಲ್ಲರೂ ನನ್ನ ದೃಷ್ಟಿಯಿಂದ ಮರೆಯಾಗಿಹೋದರು. ಪೂಜಾರಿಯ ತಾರಕಸ್ವರದ ಮಂತ್ರೋಚ್ಚಾರಣೆ ಮಾತ್ರ ಅವ್ಯಾಹತವಾಗಿ ಕೇಳಿಬರುತ್ತಿತ್ತು.
ಅದೆಷ್ಟೋ ಹೊತ್ತಿನ ನಂತರ ಮಂತ್ರೋಚ್ಚಾರಣೆ ನಿಂತಿತು. ಹಿಂದೆಯೇ ಹೊಗೆ ಕರಗುತ್ತಿದ್ದಂತೇ ನನ್ನ ದೃಷ್ಟಿಗೆ ಬಿದ್ದದ್ದು ಮರದ ಬೊಡ್ಡೆಯ ಎರಡು ಕವಲುಗಳ ನಡುವೆ ತಲೆಯಿಟ್ಟು ಕುಳಿತ ತುಂಗಾ, ಕತ್ತಿಯನ್ನು ಮೇಲೆತ್ತಿ ಹಿಡಿದ ಪೂಜಾರಿ.
ಆ ಕ್ಷಣದಲ್ಲಿ ಅಲ್ಲಿಯವರೆಗೆ ನನ್ನ ಕಣ್ಣಿಗಂಟಿದ್ದ ಪೊರೆ ಹರಿದು, ಮನಸ್ಸಿಗೆ ಕವಿದಿದ್ದ ಮಂಕು ಕರಗಿ ಏನು ನಡೆಯುತ್ತಿದೆಯೆಂಬುದು ನನ್ನ ಅರಿವಿಗೆ ಬಂದಿತು.
ಇನ್ನೊಂದು ಕ್ಷಣದಲ್ಲಿ ಆ ಕಿರಾತಕನ ಕತ್ತಿ ತುಂಗಾಳ ಕೊರಳಿನ ಮೇಲೆ ಎರಗುತ್ತದೆ! ನನ್ನ ತುಂಗಾ ಬಲಿಯಾಗಿಹೋಗುತ್ತಾಳೆ!
"ಓ ಬೇಡಾ." ಚೀರಿದೆ. ಚೀತ್ಕಾರ ಗಂಟಲಲ್ಲೇ ಅಡಗಿಹೋಯಿತು. ಕಟ್ಟುಗಳಿಂದ ಬಿಡಿಸಿಕೊಳ್ಳಲು ಹುಚ್ಚನಂತೆ ಹೆಣಗಿದೆ... ಸೋತೆ.
ಪೂಜಾರಿ ಒಮ್ಮೆ ಹೂಂಕರಿಸಿದ. ಎತ್ತಿ ಹಿಡಿದಿದ್ದ ಕತ್ತಿ ಸುಂಯ್ಯನೆ ಕೆಳಗಿಳಿಯಿತು. ನಾನು ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಂಡೆ. ನನ್ನಿಂದ ಸಾಧ್ಯವಿದ್ದುದು ಅದೊಂದು ಮಾತ್ರ.
ಮರುಕ್ಷಣ ತುಂಗಾಳ ಹೃದಯವಿದ್ರಾವಕ ಚೀತ್ಕಾರ ದಿಕ್ಕುದಿಕ್ಕುಗಳಲ್ಲಿ ಪ್ರತಿಧ್ವನಿಸಿತು. ಹಿಂದೆಯೇ ಮುಗಿಲು ಮುಟ್ಟಿದ ಜನರ ಸಾಮೂಹಿಕ ಕೇಕೆ, ಹುಚ್ಚು ಹಿಡಿದಂತೆ ಬಡಿದುಕೊಂಡ ತಮಟೆ ಡೋಲುಗಳು... ನಾನು ಮೂರ್ಛೆಹೋದೆ.
* * *
ನನಗೆ ಎಚ್ಚರವಾದಾಗ ನೆಲದ ಮೇಲೆ ಮಲಗಿದ್ದೆ. ನನ್ನ ಕಟ್ಟುಗಳನ್ನು ಬಿಚ್ಚಿದ್ದರು. ಬಾಯೊಳಗಿದ್ದ ನಾರಿನ ಉಂಡೆಯನ್ನೂ ತೆಗೆದುಹಾಕಿದ್ದರು. ಎದ್ದು ಕುಳಿತೆ.
ಎಲ್ಲೆಡೆ ನಿಶ್ಶಬ್ಧ. ನಾಲ್ಕು ದೊಂದಿಗಳಲ್ಲಿ ಎರಡು ಆರಿಹೋಗಿದ್ದವು. ಒಂದು ಇನ್ನೇನು ಆರುವಂತಿತ್ತು. ತೂರಾಡುತ್ತಾ ಎದ್ದುನಿಂತು ಇನ್ನೂ ಉರಿಯುತ್ತಿದ್ದ ಒಂದು ದೊಂದಿಯ ಬೆಳಕಿನಲ್ಲಿ ಸುತ್ತಲೂ ಕಣ್ಣಾಡಿಸಿದೆ.
ಅಗ್ನಿಕುಂಡದಲ್ಲಿದ್ದ ಕೆಂಡಗಳು ಕಪ್ಪುಗಟ್ಟಿ ಮೌನ ತಾಳಿದ್ದವು. ಏಳುಮಡಕೆಗಳೂ ಅಮಾಯಕವಾಗಿ ಬಾಯಿ ತೆರೆದುಕೊಂಡು ಕುಳಿತಿದ್ದವು. ಅಲಂಕೃತಗೊಂಡ ಆದಿವಾಸಿ ದೇವತೆ ಪ್ರಶಾಂತವಾಗಿ ನಿದ್ರಿಸುತ್ತಿದ್ದಂತಿತ್ತು. ಅದರ ತಳಭಾಗದಲ್ಲಿ ಧಾರಾಳವಾಗಿ ಹರಿದಿದ್ದ ರಕ್ತ. ನನ್ನ ತುಂಗಾಳ ರಕ್ತ.
ಅವಳ ದೇಹ ಅಲ್ಲಿರಲಿಲ್ಲ. ಜತೆಗೇ ಒಬ್ಬ ಆದಿವಾಸಿಯ ಸುಳಿವೂ ಅಲ್ಲಿ ಕಂಡುಬರಲಿಲ್ಲ.
ಅವರ ಆರಾಧನೆ ಮುಗಿದಿತ್ತು. ಜತೆಗೆ ನನ್ನ ತುಂಗಾಳ ಬದುಕೂ ಸಹ... ನನ್ನ ಭವಿಷ್ಯವೂ ಸಹ.
ಅಳು ಉಮ್ಮಳಿಸಿಕೊಂಡು ಬಂತು. ತುಂಗಾ ಬಲಿಯಾದ ಸ್ಥಳದತ್ತ ಓಡಿದೆ. ಮರದ ಬೊಡ್ಡೆಯ ದೇವತೆಯನ್ನು ಸಮೀಪಿಸುವಷ್ಟರಲ್ಲಿ ಇದ್ದಕ್ಕಿದ್ದಂತೇ ಜೋರಾಗಿ ಗಾಳಿ ಬೀಸಿತು. ಗಿಡಮರಗಳು ಓಲಾಡಿದವು. ದಟ್ಟ ಧೂಳು ಮೇಲೆದ್ದಿತು. ಗಾಳಿಯ ಮೊರೆತದ ಜತೆ "ಇಲ್ಲಿಂದ ಬೇಗ ಹೊರಟುಹೋಗು" ಎಂದು ಯಾರೋ ಕಿವಿಯಲ್ಲಿ ಪಿಸುಗುಟ್ಟಿದಂತೆನಿಸಿತು. ನನಗರಿವಿಲ್ಲದಂತೇ ನನ್ನ ಹೆಜ್ಜೆಗಳು ಹಿಮ್ಮುಖವಾದವು. ಮರುಕ್ಷಣ ನಾನು ಗಿಡಗಂಟೆಗಳನ್ನು ಸರಿಸಿಕೊಂಡು ಓಡುತ್ತಿದ್ದೆ.
ಕಾಡಿನಿಂದ ಹೊರಬಂದು ಒಣಹಳ್ಳದ ಅಂಚು ತಲುಪಿದಾಗ ಬೆಳಗಾಗುತ್ತಿರುವುದು ಅರಿವಿಗೆ ಬಂತು. ಆಚೆ ಬದಿಯಲ್ಲಿದ್ದ ನನ್ನ ಜೀಪ್ ಅಸ್ಪಷ್ಟವಾಗಿ ನೋಟಕ್ಕೆ ಸಿಕ್ಕಿತು. ಬಿಟ್ಟ ಬಾಣದಂತೆ ಅದರತ್ತ ಓಡಿದೆ. ಅದನ್ನು ಸಮೀಪಿಸಿದಾಗ ಜೀಪ್‌ನ ಒಂದು ಪಕ್ಕ ಯಾರೋ ನಿಂತಿರುವಂತೆ ಕಂಡಿತು. ಆ ವ್ಯಕ್ತಿಯ ಮುಖ ನೋಡಿದ ನಾನು ಸ್ಥಂಭಿತನಾಗಿ ನಿಂತುಬಿಟ್ಟೆ.
ನನ್ನನ್ನೇ ಬೆರಗಿನಿಂದ ನೋಡುತ್ತಾ ನಿಂತಿದ್ದಳು ತುಂಗಾ!
ದೇವರೇ ನಾನು ನೋಡುತ್ತಿರುವುದೇನು? ಇದೇನು ಕನಸೇ?"
"ಯಾಕಿಷ್ಟು ಗಾಬರಿಯಾಗಿದೀಯ? ಏನಾಯ್ತು?" ಅವಳು ಹತ್ತಿರ ಬಂದು ನನ್ನ ಭುಜ ಅಲುಗಿಸಿದಳು.
ಅದು ನಿಃಸಂಶಯವಾಗಿಯೂ ತುಂಗಾಳ ದನಿ! ಅದರಲ್ಲಿ ಯಾವ ಅನುಮಾನವೂ ಇಲ್ಲ.
"ನೀನು... ನೀನು... ತುಂ...ತುಂ... ತುಂಗಾ..." ತೊದಲಿದೆ.
ಅವಳು ನಕ್ಕುಬಿಟ್ಟಳು.
"ನಾನು ತುಂಗಾನೇ. ಮತ್ತೇನಂದ್ಕೊಂಡೆ? ಈ ಕಾಡಿನಲ್ಲಿ ಅಲೀತಾ ಇರೋ ಯಾವುದೋ ದಿಕ್ಕಿಲ್ಲದ ದೆವ್ವ ಅಂದ್ಕೊಂಡ್ಯಾ?" ಕಿಲಕಿಲನೆ ನಕ್ಕಳು.
"ಹಾಗಾದ್ರೆ... ಅಲ್ಲಿ ಅವರು ನಿನ್ನನ್ನ ಬಲಿ ಕೊಟ್ಟದ್ದು?" ನನಗರಿವಿಲ್ಲದಂತೇ ಪ್ರಶ್ನೆ ಹೊರಬಿದ್ದಿತ್ತು.
"ನನ್ನನ್ನ ಬಲಿ ಕೊಟ್ಟದ್ದು! ಏನು ಹುಚ್ಚುಮಾತು ಆಡ್ತಿದೀಯ? ಆ ಆದಿವಾಸಿಗಳು ನಿನ್ನನ್ನ ಕರಕೊಂಡು ಹೋಗಿ ಕತ್ತಿನವರೆಗೆ ಹೆಂಡ ಗಿಂಡ ಕುಡಿಸಿ ಕಳಿಸಿದ್ದಾರೋ ಹೇಗೆ?" ಅವಳ ನಗೆ ದೊಡ್ಡದಾಯಿತು.
ನನಗೆ ಏನೂ ಅರ್ಥವಾಗಲಿಲ್ಲ. ಎಲ್ಲವೂ ಅಯೋಮಯವಾಗಿತ್ತು. ಅವಳೇ ಮಾತಾಡಿದಳು.
"ನಂಗೆ ನಿದ್ದೆಯಿಂದ ಎಚ್ಚರ ಆದಾಗ ನೀನು ಯಾರೋ ಇಬ್ಬರು ಆದಿವಾಸಿಗಳ ಜತೆ ಮಾತಾಡ್ತಾ ಇದ್ದದ್ದು ಕಾಣಿಸ್ತು. ಎದ್ದು ಬರೋಣ ಅಂತ ನೋಡ್ದೆ. ಆದ್ರೆ ಅದ್ಯಾವ ಮಾಯದಲ್ಲೋ ಮತ್ತೆ ಜೋರು ನಿದ್ದೆ ಬಂದುಬಿಡ್ತು. ಮತ್ತೆ ಎಚ್ಚರವಾದಾಗ ನೀನು ಇಲ್ಲಿ ಇರ‍್ಲಿಲ್ಲ. ಟೈಂ ನೋಡ್ದೆ. ಐದೂವರೆಯಾಗಿದ್ದು ನೋಡಿ ಆಶ್ಚರ್ಯ ಆಯ್ತು. ನೀನೆಲ್ಲಿ ಹೋದೆ ಅಂತ ಗಾಬರಿಯಾಯ್ತು. ಹೊರಕ್ಕೆ ಬಂದು ನಿಂತ್ಕೊಂಡೆ. ನೀನು ಓಡಿಬರ‍್ತಾ ಇರೋದು ಕಂಡು ಸಮಾಧಾನ ಆಯ್ತು. ನೀನು ಬಂದೋನು ತಲೆಕೆಟ್ಟವನ ಹಾಗೆ ಏನೇನೋ ಒದರ‍್ತಾ ಇದೀಯಲ್ಲ? ನಂಗೆ ಮತ್ತೆ ಗಾಬರಿ ಶುರು ಆಗಿದೆ." ಮತ್ತೆ ನಕ್ಕಳು.
"ತುಂಗಾ... ನಿನ್ನನ್ನ ಮತ್ತೆ ಜೀವಂತವಾಗಿ ನೋಡ್ತಾ ಇರೋದಿಕ್ಕೆ ನನಗೆಷ್ಟು ಸಂತೋಷ ಆಗ್ತಿದೆ ಗೊತ್ತಾ? ಆದ್ರೆ ಆದಿವಾಸಿಗಳು ನನ್ನ ಕಣ್ಣೆದುರಿಗೇ ನಿನ್ನನ್ನ ತಮ್ಮ ದೇವತೆಗೆ ಬಲಿ ಕೊಟ್ಟದ್ದು... ಅದೇನು ಕನಸೇ? ಇಲ್ಲ ಕನಸಲ್ಲ ಅದು. ಎಲ್ಲವೂ ನನ್ನ ಕಣ್ಣೆದುರೇ ನಡೀತು." ಬಡಬಡಿಸಿದೆ.
ಈಗ ಅವಳ ಮುಖ ಗಂಭೀರವಾಯಿತು. ನನ್ನ ಭುಜ ಸವರಿದಳು. "ಆಯ್ತು. ನೀನು ಕಂಡದ್ದೇನು ಹೇಳು?" ಕೇಳಿದಳು.
ಒಂದೇ ಉಸಿರಿಗೆ ಎಲ್ಲವನ್ನೂ ಅವಳಿಗೆ ಹೇಳಿದೆ. ಆದರೆ ಅವಳು ಪಕಪಕನೆ ನಕ್ಕುಬಿಟ್ಟಳು. ನನ್ನ ಒಂದು ಮಾತನ್ನೂ ನಂಬಲು ಅವಳು ತಯಾರಿರಲಿಲ್ಲ.
"ನನ್ ಮಾತಿನ್ ಮೇಲೆ ನಿಂಗೆ ನಂಬ್ಕೆ ಇಲ್ದಿದ್ರೆ ನನ್ ಜೊತೆ ಬಾ. ತೋರಿಸ್ತೀನಿ." ಅವಳ ಕೈ ಹಿಡಿದೆಳೆದೆ.
"ನಡೆ. ನೋಡಿಯೇ ಬಿಡೋಣ." ಅವಳು ಹೊರಟೇಬಿಟ್ಟಳು.
ಬಯಲಿನ ಪ್ರದೇಶಕ್ಕೆ ಬರುವ ಹೊತ್ತಿಗೆ ಚೆನ್ನಾಗಿ ಬೆಳಕಾಗಿತ್ತು. ಅಲ್ಲಿ ಈಗಲೂ ಒಂದು ನರಪಿಳ್ಳೆಯೂ ಇರಲಿಲ್ಲ. ಆದಿವಾಸಿಗಳ ಹೊರತಾಗಿ ಬೇರೆಲ್ಲವೂ ಇದ್ದವು. ಆರಿಹೊಗಿದ್ದ ದೊಂದಿಗಳು, ಇನ್ನೂ ಬಿಸಿಯಾಗಿದ್ದ ಅಗ್ನಿಕುಂಡ, ಏಳು ಮಡಕೆಗಳು, ಮರದ ಬೊಡ್ಡೆಯ ದೇವತೆ, ಅದಕ್ಕೆ ಹಚ್ಚಿದ್ದ ಅರಿಷಿಣ ಕುಂಕುಮ, ತೊಡಿಸಿದ್ದ ಕರಾಳ ಆಭರಣಗಳು, ತಳದಲ್ಲಿ ಹರಿದು ಹೆಪ್ಪುಗಟ್ಟಿದ್ದ ರಕ್ತ... ಎಲ್ಲವೂ ಹಾಗೇ ಇದ್ದವು. ತುಂಗಾಳ ಕೈ ಹಿಡಿದು ಎಲ್ಲವನ್ನೂ ತೋರಿಸುತ್ತಾ ಒಡಾಡಿದೆ. ನನ್ನ ಬಾಯಿಗೆ ತುರುಕಿದ್ದ ನಾರಿನ ಉಂಡೆ, ಕೈಕಾಲುಗಳನ್ನು ಕಟ್ಟಿದ್ದ ನಾರು ಹಗ್ಗಗಳನ್ನು ಅವಳ ಮುಂದೆ ಎತ್ತಿಹಿಡಿದೆ.
ಎಲ್ಲವನ್ನೂ ನೋಡಿದ ತುಂಗಾಳ ಮುಖದಲ್ಲಿ ಅತೀವ ಗೊಂದಲ. ರಕ್ತವನ್ನು ನೋಡಿ ನಿಮಿಷದವರೆಗೆ ದಂಗಾಗಿ ನಿಂತುಬಿಟ್ಟಳು. ಕೊನೆಗೆ ಸಣ್ಣಗೆ ದನಿ ತೆಗೆದಳು:
"ಇಲ್ಲೇನು ನಡೀತೋ, ನೀನಿಲ್ಲಿ ಅದೇನು ಕಂಡೆಯೋ ನನಗೆ ಗೊತ್ತಿಲ್ಲ. ಆದರೆ ನಾನು ಜೀಪಿನೊಳಗೇ ಮೈಮರೆತು ನಿದ್ದೆ ಮಾಡಿದ್ದಂತೂ ನಿಜ. ನಂಗೇನೂ ಆಗಿಲ್ಲ. ನೀನೇ ನೋಡು" ಎನ್ನುತ್ತಾ ನನ್ನ ಕೈ ಎಳೆದು ತನ್ನ ಭುಜದ ಮೇಲೆ ಇಟ್ಟುಕೊಂಡಳು.
ನಾನು ಬೆಪ್ಪಾಗಿ ನಿಂತೆ. ತಲೆ ಮತ್ತೂ ಗೋಜಲುಗಟ್ಟಿಬಿಟ್ಟಿತ್ತು. ಹಾಗೇ ನಿಂತಿದ್ದಂತೇ ನನಗೆ ಫಕ್ಕನೆ ಒಂದು ವಿಷಯ ನೆನಪಿಗೆ ಬಂತು.
"ಬಲಿಯಾಗುವುದಕ್ಕೆ ಮೊದಲು ನೀನು ನಿನ್ನ ಬೆರಳಿನಲ್ಲಿದ್ದ ಉಂಗುರವನ್ನು ನನ್ನ ಬೆರಳಿಗೆ ತೊಡಿಸಿದೆ ಗೊತ್ತಾ?"
"ನನ್ನ ಉಂಗುರ! ಅದು ನನ್ನ ಬೆರಳಲ್ಲೇ ಇದೆಯಲ್ಲ?" ಅವಳು ತನ್ನ ಕೈ ಮೇಲೆತ್ತಿ ಬೆರಳನ್ನು ನನ್ನ ಮುಂದೆ ಹಿಡಿದಳು.
ಅವಳ ಉಂಗುರ ಅವಳ ಬೆರಳಿನಲ್ಲೇ ಇತ್ತು!
"ಹಾಗಾದರೆ ಇದೇನು?" ಎಂದು ಗೊಣಗಿಕೊಳ್ಳುತ್ತಾ ನನ್ನ ಬೆರಳಿನಲ್ಲಿದ್ದ ಉಂಗುರವನ್ನೇ ಬೆರಗಿನಿಂದ ನೋಡಿದೆ.
ಅವಳ ನೋಟ ಅದರತ್ತ ತಿರುಗಿತು. "ಎಲ್ಲಿ ಎಲ್ಲೀ ತೋರ‍್ಸು" ಎನ್ನುತ್ತಾ ನನ್ನ ಬೆರಳನ್ನು ಹಿಡಿದು ಅದರತ್ತ ಬಾಗಿದಳು. ಮರುಕ್ಶಣ ಫಕ್ಕನೆ ತಲೆಯೆತ್ತಿದಳು. ಕಣ್ಣುಗಳಲ್ಲಿ ಬಣ್ಣಿಸಲಾಗದಷ್ಟು ಅಚ್ಚರಿ.
"ಇದು... ಇದು... ಅ... ಅ... ಅಲಕಾಳ ಉಂಗುರ." ಅವಳ ಬಾಯಿಂದ ಉದ್ಗಾರ ತಡೆತಡೆದು ಹೊರಬಂತು.
* * *
ಆ ಕಗ್ಗತ್ತಲ ರಾತ್ರಿ ಕಾಡಿನ ನಡುವಿನ ಬಯಲಲ್ಲಿ ನಡೆದುದೇನು ಎಂದು ನನಗಿನ್ನೂ ಅರ್ಥವಾಗಿಲ್ಲ. ಆದರೆ ತುಂಗಾ ಧೃಢವಿಶ್ವಾಸದಲ್ಲಿ ಹೇಳುವುದು ಹೀಗೆ:
"ಆರೂವರೆ ವರ್ಷಗಳ ಹಿಂದೆ ದುರ್ಮರಣಕ್ಕೀಡಾದ ನನ್ನ ಗೆಳತಿ ಅಲಕಾ ಆ ರಾತ್ರಿ ನನ್ನ ರೂಪು ತಳೆದು ಬಂದು ದೇವತೆಗೆ ಬಲಿಯಾಗಿ ನನ್ನನ್ನು ಉಳಿಸಿದಳು. ತಾನು ಕೊಟ್ಟ ಮಾತನ್ನು ಉಳಿಸಿಕೊಂಡಳು."
ಅವಳ ಮಾತುಗಳನ್ನು ಅಲ್ಲಗಳೆಯುವ ಧೈರ್ಯ ನನಗಿಲ್ಲ.
--***೦***--
Comments
ಉ: ರೋಚಕ ಕಥೆ- "ಪ್ರತ್ಯುಪಕಾರ"
In reply to ಉ: ರೋಚಕ ಕಥೆ- "ಪ್ರತ್ಯುಪಕಾರ" by makara
ಉ: ರೋಚಕ ಕಥೆ- "ಪ್ರತ್ಯುಪಕಾರ"
In reply to ಉ: ರೋಚಕ ಕಥೆ- "ಪ್ರತ್ಯುಪಕಾರ" by cherryprem
ಉ: ರೋಚಕ ಕಥೆ- "ಪ್ರತ್ಯುಪಕಾರ"
In reply to ಉ: ರೋಚಕ ಕಥೆ- "ಪ್ರತ್ಯುಪಕಾರ" by Shreekar
ಉ: ರೋಚಕ ಕಥೆ- "ಪ್ರತ್ಯುಪಕಾರ"
ಉ: ರೋಚಕ ಕಥೆ- "ಪ್ರತ್ಯುಪಕಾರ"
In reply to ಉ: ರೋಚಕ ಕಥೆ- "ಪ್ರತ್ಯುಪಕಾರ" by basho aras
ಉ: ರೋಚಕ ಕಥೆ- "ಪ್ರತ್ಯುಪಕಾರ"
ಉ: ರೋಚಕ ಕಥೆ- "ಪ್ರತ್ಯುಪಕಾರ"
In reply to ಉ: ರೋಚಕ ಕಥೆ- "ಪ್ರತ್ಯುಪಕಾರ" by venkatb83
ಉ: ರೋಚಕ ಕಥೆ- "ಪ್ರತ್ಯುಪಕಾರ"
In reply to ಉ: ರೋಚಕ ಕಥೆ- "ಪ್ರತ್ಯುಪಕಾರ" by cherryprem
ಉ: ರೋಚಕ ಕಥೆ- "ಪ್ರತ್ಯುಪಕಾರ"
In reply to ಉ: ರೋಚಕ ಕಥೆ- "ಪ್ರತ್ಯುಪಕಾರ" by Shreekar
ಉ: ರೋಚಕ ಕಥೆ- "ಪ್ರತ್ಯುಪಕಾರ"
ಉ: ರೋಚಕ ಕಥೆ- "ಪ್ರತ್ಯುಪಕಾರ"
In reply to ಉ: ರೋಚಕ ಕಥೆ- "ಪ್ರತ್ಯುಪಕಾರ" by venkatb83
ಉ: ರೋಚಕ ಕಥೆ- "ಪ್ರತ್ಯುಪಕಾರ"
In reply to ಉ: ರೋಚಕ ಕಥೆ- "ಪ್ರತ್ಯುಪಕಾರ" by cherryprem
ಉ: ರೋಚಕ ಕಥೆ- "ಪ್ರತ್ಯುಪಕಾರ"