ಮತ್ಸ್ಯ ಯಂತ್ರ

ಮತ್ಸ್ಯ ಯಂತ್ರ

ಚಿತ್ರ

 ಏಕಚಕ್ರಪುರದಿಂದ ಬ್ರಾಹ್ಮಣ ವೇಷದಲ್ಲಿ ಪಾಂಡವರು ದ್ರುಪದ ರಾಜನ ರಾಜ್ಯಕ್ಕೆ ದ್ರೌಪದಿಯ ಸ್ವಯಂವರ ದ ಸಲುವಾಗಿ ಹೊರಟಿದ್ದಾರೆ. ಜೊತೆಯಲ್ಲಿ ಇತರ ಬ್ರಾಹ್ಮಣರು ಹೊರಟಿದ್ದಾರೆ. ಅವರೆಲ್ಲರೂ ಪಾಂಡವರನ್ನು ಕುರಿತು ಸ್ವಯಂವರದಲ್ಲಿ ಒಳ್ಳೆಯ ಊಟದ ಸೌಕರ್ಯ ಇರುತ್ತದೆ. ಚೆನ್ನಾಗಿ ಊಟ ಮಾಡಿ ಎಂದು ಹೇಳುತ್ತಿದ್ದಾರೆ. ಪಾಂಡವರು ಒಳಗೊಳಗೇ ನಕ್ಕು ಸುಮ್ಮನೆ ತಲೆಯಾಡಿಸುತ್ತಾ ಸುಮ್ಮನೆ ನಡೆಯುತ್ತಿದ್ದಾರೆ. ಕೆಲ ಬ್ರಾಹ್ಮಣರು ಭೀಮನ ಪರಾಕ್ರಮ ಅರಿತಿದ್ದರಿಂದ ಅವರುಗಳು ದ್ರೌಪದಿಯು ಭೀಮನನ್ನು ಬಿಟ್ಟು ಇನ್ಯಾರಿಗೂ ಸಿಗುವುದಿಲ ಎಂದು ಮಾತನಾಡಿಕೊಳ್ಳುತ್ತಿದ್ದರು.

ಸ್ವಯಂವರದ ದಿನ ಬಹಳ ಹತ್ತಿರ ಇದ್ದದ್ದರಿಂದ ಹಗಲು ರಾತ್ರಿ ಎನ್ನದೆ ಪ್ರಯಾಣ ಮಾಡುತ್ತಿದ್ದಾರೆ. ನಡೆಯುತ್ತಾ ನಡೆಯುತ್ತಾ ಗಂಗಾ ನದಿ ದಂಡೆಗೆ ಬಂದಿದ್ದಾರೆ. ಗಂಗಾ ನದಿ ದಾಟಿ ಹೋದರೆ ದ್ರುಪದನ ರಾಜ್ಯ ಸಿಗುತ್ತಿತ್ತು. ರಾತ್ರಿಯಾದ್ದರಿಂದ ಎಲ್ಲರೂ ಅಲ್ಲೇ ಗಂಗೆ ದಂಡೆಯಲ್ಲಿ ಮಲಗಿದ್ದಾರೆ. ಪಾಂಡವರು ಮಾತ್ರ ನಾವು ಹೊರಡುತ್ತೇವೆ ಎಂದು ಹೊರಟಿದ್ದಾರೆ. ಮುಂದೆ ಅರ್ಜುನ ಕೊನೆಯಲ್ಲಿ ಭೀಮಸೇನ ಮಧ್ಯದಲ್ಲಿ ಕುಂತಿದೇವಿ ಹಾಗೂ ಉಳಿದ ಪಾಂಡವರು ನದಿಯನ್ನು ದಾಟುತ್ತಿದ್ದಾರೆ. ಅಂದು ಶುಕ್ಲ ಪಕ್ಷ ಅಷ್ಟಮಿ ದಿವಸ. ಚಂದ್ರ ಅಸ್ತಂಗತನಾಗಿ ಕತ್ತಲಾವರಿಸಿದೆ.ಅರ್ಧರಾತ್ರಿ ಆಗಿತ್ತು.

ಅದೇ ಸಮಯಕ್ಕೆ ಚಿತ್ರರತ ಎಂಬ ಗಂಧರ್ವ ತನ್ನ ಸಖಿಯರೊಡನೆ ಗಂಗಾ ನದಿಯಲ್ಲಿ ಜಲಕ್ರೀಡೆ ಆಡುತ್ತಿದ್ದಾನೆ.ಅರ್ಜುನ ಕೈಯಲ್ಲಿ ಕೊಳ್ಳಿಯ ದೀಪವನ್ನು ಹಿಡಿದು ಮುನ್ನಡೆಯುತ್ತಿದ್ದಾನೆ. ಪಾಂಡವರ ಆಗಮನದಿಂದ ಚಿತ್ರರತನಿಗೆ ವಿಘ್ನವಾದಂತಾಗಿ ಅವರ ಮೇಲೆ ಆಕ್ರಮಣ ಮಾಡಲು ಬರುತ್ತಿದ್ದಾನೆ. ಪಾಂಡವರು ಬ್ರಾಹ್ಮಣ ವೇಷದಲ್ಲಿದ್ದರೂ ಅವರು ಕ್ಷತ್ರಿಯರೆಂದು ಚಿತ್ರರತನಿಗೆ ಗೊತ್ತಾಯಿತು.  ಅದೂ ಅಲ್ಲದೆ ಮಾನವರಿಗೆ ನಿಷಿದ್ಧವಾದ ಮಹಾ ನಿಷಿದ್ಧ ಕಾಲದಲ್ಲಿ ಬರುತ್ತಿದ್ದಾರೆ.(ಮಹಾ ನಿಷಿದ್ಧ ಕಾಲ ಎಂದರೆ ರಾತ್ರಿ ೧೧.೪೫ - ೧೨.೧೫) ಈ ಕಾಲದಲ್ಲಿ ಭೂತ ಪ್ರೇತಗಳು, ಗಂಧರ್ವರು ಸಂಚರಿಸುವ ಸಮಯ. ಈ ಸಮಯದಲ್ಲಿ ನೀವು ಬಂದು ನನಗೆ ವಿಘ್ನ ಉಂಟು ಮಾಡಿದ್ದೀರಾ ನಿಮ್ಮನ್ನು ಸಂಹರಿಸುತ್ತೇನೆ ಎಂದು ಆಕ್ರಮಣ ಮಾಡಲು ಬರುತ್ತಿದ್ದಾನೆ.

ಅರ್ಜುನನು ನಾವೆಲ್ಲರೂ ಅಸ್ತ್ರ ಜ್ಞಾನಿಗಳು ನಿನ್ನಿಂದ ನಮಗೇನು ಮಾಡಲು ಸಾಧ್ಯವಿಲ್ಲ. ನಿನ್ನ ಪ್ರಯತ್ನಗಳೆಲ್ಲ ವಿಫಲವಾಗುತ್ತದೆ ಎಂದು ಹೇಳಿದರೂ ಕೇಳದೆ ಬಾಣ ಪ್ರಯೋಗ ಮಾಡಲು ಮುಂದಾದ ಚಿತ್ರರತ. ಮುಂದಿದ್ದ ಅರ್ಜುನ ತನ್ನ ಕೈಯಲ್ಲಿದ್ದ ಕೊಳ್ಳಿಗೆ ಆಜ್ನೆಯಾಸ್ತ್ರವನ್ನು ಅಭಿಮಂತ್ರಿಸಿ ಅವನ ಮೇಲೆ ಬಿಸಾಡಿದಾಗ ಚಿತ್ರರತನ ರಥ ಸುಟ್ಟು ಅವನ ಮೈ ಸುಡಲು ಶುರುವಾಯಿತು. ಆಗ ಚಿತ್ರರತ ಅರ್ಜುನನಲ್ಲಿ ಕ್ಷಮೆ ಯಾಚಿಸಿದಾಗ ಅರ್ಜುನ ಅವನಿಗೆ ಕ್ಷಮೆ ನೀಡಿ ಕಳುಹಿಸುತ್ತಾರೆ. ಆಗ ಚಿತ್ರರತ ಹೇಳುತ್ತಾನೆ, ನಾನು ನಿಮ್ಮನ್ನು ಆಕ್ರಮಣ ಮಾಡಲು ಕಾರಣ ಏನೆಂದರೆ ನೀವೆಲ್ಲರೂ ಕ್ಷತ್ರಿಯರು. ಕ್ಷತ್ರಿಯರು ಯಾವಾಗಲೂ ಒಬ್ಬ ಬ್ರಾಹ್ಮಣನ ಜೊತೆ ಇಲ್ಲದೆ ಹೋಗಬಾರದು. ಹಾಗಾಗಿ ಮುಂದೆ ಪಾಂಚಾಲ ರಾಜ್ಯದಲ್ಲಿ ದೌಮ್ಯಾಚಾರ್ಯರು ಎಂಬ ಒಬ್ಬ ಬ್ರಾಹ್ಮಣರು ಇದ್ದಾರೆ ಅವರನ್ನು ಕರೆದುಕೊಂಡು ಹೋಗಿ ಎಂದು ಬೀಳ್ಕೊಟ್ಟನು.

ಗಂಗಾ ನದಿಯನ್ನು ದಾಟಿ ಪಾಂಡವರು ಚಿತ್ರರತನ ಸಲಹೆಯಂತೆ ದೌಮ್ಯಾಚಾರ್ಯರನ್ನು ಜೊತೆಗೂಡಿಕೊಂಡು ಸ್ವಯಂವರ ನಡೆಯುತ್ತಿದ್ದ ಜಾಗಕ್ಕೆ ಆಗಮಿಸಿದ್ದಾರೆ. ಪಾಂಚಾಲ ರಾಜ್ಯ ಎಲ್ಲೆಲ್ಲೂ ತಳಿರು ತೋರಣಗಳಿಂದ ಸಿಂಗರಿಸಿಕೊಂಡು ನವವಧುವಿನಂತೆ ಸಿದ್ಧವಾಗಿತ್ತು. ಅರಮನೆಯ ಮುಂಭಾಗದಲ್ಲಿ ಸ್ವಯಂವರಕ್ಕೆಂದು ಬೃಹದಾಕಾರದ ವೇದಿಕೆ ಸಿದ್ಧಗೊಂಡಿತ್ತು. ಸುತ್ತಲೂ ಬೇರೆ ಬೇರೆ ರಾಜ್ಯದ ರಾಜ ಮಹಾರಾಜರು ಕುಳಿತಿದ್ದಾರೆ. ಮತ್ತೊಂದೆಡೆ ಅಸಾಮಾನ್ಯ ಕ್ಷತ್ರಿಯರು ಕುಳಿತಿದ್ದಾರೆ. ಮತ್ತೊಂದೆಡೆ ದುರ್ಯೋಧನ, ಕರ್ಣ, ಶಲ್ಯ,ಶಿಶುಪಾಲ ಮುಂತಾದ ಪರಾಕ್ರಮಿಗಳು ಕುಳಿತಿದ್ದಾರೆ. ಇನ್ನೊಂದು ಬದಿಯಲ್ಲಿ ಸ್ವಯಂವರವನ್ನು ನೋಡಲೆಂದು ಬಂದಿದ್ದ ಬ್ರಾಹ್ಮಣರೂ ಕುಳಿತಿದ್ದಾರೆ. ಅರಗಿನ ಮನೆಯಲ್ಲಿ ಪಾಂಡವರೆಲ್ಲರೂ ಸತ್ತು ಹೋಗಿದ್ದಾರೆಂಬ ಭಾವನೆಯಲ್ಲೇ ದುರ್ಯೋಧನಾದಿಗಳು ಕುಳಿತಿದ್ದಾರೆ. ಶ್ರೀ ಕೃಷ್ಣನೂ ಆಗಮಿಸಿದ್ದಾನೆ.

ಅಲ್ಲಿಗೆ ಆಗಮಿಸಿದ ಬ್ರಾಹ್ಮಣ ವೇಷಧಾರಿಗಳಾದ ಪಾಂಡವರು ಹೋಗಿ ಬ್ರಾಹ್ಮಣರು ಕುಳಿತಿದ್ದ ಜಾಗದಲ್ಲಿ ಕುಳಿತುಕೊಂಡಿದ್ದಾರೆ. ದೃಷ್ಟದ್ಯುಮ್ನ ದ್ರೌಪದಿಯ ಕೈ ಹಿಡಿದುಕೊಂಡು ಬಂದು ವೇದಿಕೆಗೆ ಕರೆ ತಂದಿದ್ದಾನೆ. ದ್ರೌಪದಿಯ ಕೈಯಲ್ಲಿ ದ್ರುಪದ ರಾಜನು ಮಾಲೆಯನ್ನು ಕೊಟ್ಟಿದ್ದಾನೆ. ಆ ಮಾಲೆ ಯಾವುದೆಂದರೆ ಅಂಬೆಯು ಭೀಷ್ಮಾಚಾರ್ಯರನ್ನು ಮದುವೆ ಆಗಲೆಂದು ಕೇಳಿದಾಗ  ಭೀಷ್ಮಾಚಾರ್ಯರು ನಾನು ಬ್ರಹ್ಮಚಾರಿ ಆದ್ದರಿಂದ ಮದುವೆ ಆಗಲಾರೆ ಎಂದು ಹೇಳಿ ಕಳುಹಿಸಿದ್ದರು. ಅದರಿಂದ ಸಿಟ್ಟಾದ ಅಂಬೆ ರುದ್ರ ದೇವರನ್ನು ಕುರಿತು ತಪಸ್ಸು ಮಾಡಿ ನಾನು ಭೀಷ್ಮರನ್ನು ಕೊಲ್ಲಬೇಕೆಂದು ವರ ಕೇಳಿದಾಗ ರುದ್ರ ದೇವರು ಪ್ರಸನ್ನರಾಗಿ ನಾನು ನಿನಗೆ ಒಂದು ಮಾಲೆಯನ್ನು ಕೊಡುತ್ತೇನೆ. ಯಾರು ಆ ಮಾಲೆಯನ್ನು ಧರಿಸುತ್ತಾರೋ ಅವರು ಭೀಷ್ಮರನ್ನು ಕೊಲ್ಲುತ್ತಾರೆ ಎಂದು ಹೇಳಿ ಮಾಲೆಯನ್ನು ಕೊಟ್ಟಿರುತ್ತಾರೆ.  ಆ ಮಾಲೆಯನ್ನು ಧರಿಸಿದವರು ಭೀಷ್ಮರನ್ನು ಕೊಲ್ಲುವವರು ಆಗುತ್ತಾರೆ ಎಂದು ತಿಳಿದು ಯಾರೂ ಆ ಮಾಲೆಯನ್ನು ಧರಿಸಲು ಮುಂದೆ ಬರಲಿಲ್ಲ. ಕೊನೆಗೆ ಅಂಬೆ ಆ ಮಾಲೆಯನ್ನು ತೆಗೆದುಕೊಂಡು ಹೋಗಿ ದ್ರುಪದ ರಾಜನ ಮನೆಯ ಮುಂದೆ ಇಟ್ಟು ಹೋಗಿಬಿಡುತ್ತಾಳೆ.   ದ್ರುಪದ ರಾಜ ಆ ಮಾಲೆಯನ್ನು ಹಾಗೆಯೇ ರಕ್ಷಣೆ ಮಾಡಿ ಇಟ್ಟಿರುತ್ತಾನೆ.

ದೃಷ್ಟದ್ಯುಮ್ನ ವೇದಿಕೆಯ ಮೇಲೆ ನಿಂತು ಘೋಷಣೆ ಮಾಡುತ್ತಿದ್ದಾನೆ. ವೇದಿಕೆಯ ಪಕ್ಕದಲ್ಲಿದ್ದ ಮರವೊಂದರ ಕೊಂಬೆಗೆ ಮತ್ಸ್ಯ ಯಂತ್ರವನ್ನು ತೂಗಿ ಹಾಕಿದ್ದಾರೆ. ಅದರ ಕೆಳಗೆ ಒಂದು ತೂತು ಇರುವ ಹಲಗೆಯನ್ನು ನೇತು ಹಾಕಿದ್ದರೆ. ಕೆಳಗೆ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ. ಪಕ್ಕದಲ್ಲಿ ಐದು ಬಾಣಗಳು ಹಾಗೆ "ಕಿಂಧುರ" ಎಂಬ ಧನಸ್ಸು. ಆ ಧನಸ್ಸು ಯಾವುದೆಂದರೆ ರುದ್ರದೇವರು ಅದನ್ನು ದ್ರುಪದ ರಾಜನಿಗೆ ನೀಡಿದ್ದ ಧನಸ್ಸು. ಆ ಧನಸ್ಸನ್ನು ಸಾಮಾನ್ಯರು ಅಲುಗಾಡಿಸಲೂ ಸಾಧ್ಯವಾಗದು.

ಆ ಕೆಳಗಿರುವ ನೀರಿನ ಪಾತ್ರೆಯಲ್ಲಿ ನೋಡಿಕೊಂಡು ಮೇಲಿರುವ ಹಲಗೆಯಲ್ಲಿರುವ ರಂಧ್ರದ ಮೂಲಕ ಮತ್ಸ್ಯ ಯಂತ್ರದಲ್ಲಿರುವ ಮೀನಿನ ಪ್ರತಿಕೃತಿಗೆ ಬಾಣವನ್ನು ಹೂಡಿ ಯಾರು ಯಂತ್ರವನ್ನು ಭೇಧಿಸುತ್ತಾರೋ ಅವರಿಗೆ ದ್ರೌಪದಿಯನ್ನು ಕೊಟ್ಟು ವಿವಾಹ ಮಾಡುವುದಾಗಿ ಘೋಷಿಸಿದ್ದಾನೆ ದೃಷ್ಟದ್ಯುಮ್ನ. ಆ ಕಿಂಧುರ ಧನಸ್ಸಿನ ಹಗ್ಗವನ್ನು ಬಿಚ್ಚಿಟ್ಟಿದ್ದಾರೆ. ಆ ಹಗ್ಗವನ್ನು ಎಳೆದು ಕಟ್ಟಿ ಬಾಣ ಹೂಡಬೇಕು.

ಘೋಷಣೆ ಮುಗಿಯುತ್ತಿದ್ದಂತೆ ಹಲವಾರು ಜನ ಹುಮ್ಮಸ್ಸಿನಿಂದ ಮತ್ಸ್ಯ ಯಂತ್ರವನ್ನು ಭೇಧಿಸಲು ಮುಂದಾದರು. ಕೆಲವರು ಯಾವ ಹುಮ್ಮಸ್ಸಿನಿಂದ ಎದ್ದರೋ ಧನಸ್ಸಿನ ಬಳಿ ಬಂದು ಇದು ತಮ್ಮ ಯೋಗ್ಯತೆಗೆ ಅಸಾಧ್ಯವಾದುದೆಂದು ತಿಳಿದು ಹಾಗೆ ಹಿಂದಿರುಗಿದರು. ಮತ್ತೆ ಕೆಲವರು ಮುಟ್ಟಿ ಹಿಂದಿರುಗಿದರೆ ಮತ್ತೆ ಕೆಲವರು ಅಲ್ಲಾಡಿಸಿ ಹಿಂದಿರುಗಿದರು.

ನಂತರದಲ್ಲಿ ಬಂದಿದ್ದು ಶಿಶುಪಾಲ. ಶಿಶುಪಾಲ ಮಹಾ ಪರಾಕ್ರಮಿ ಧನಸ್ಸಿನ ಬಳಿ ಬಂದು ಧನಸ್ಸನ್ನು ಎತ್ತಿ ನಿಲ್ಲಿಸಿದ್ದಾನೆ. ಹಗ್ಗದಂತಿದ್ದ ಆ ಕಬ್ಬಿಣದ ತಂತಿಯನ್ನು ಎಳೆದು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಬಿಲ್ಲನ್ನು ಬಗ್ಗಿಸಿದ್ದಾನೆ. ಇನ್ನೇನು ಆ ಕೊಕ್ಕೆಗೆ ಒಂದು ಉದ್ದಿನ ಕಾಳಿನಷ್ಟು ಮಾತ್ರ ಜಾಗ ಇತ್ತು ಅಷ್ಟರಲ್ಲಿ ಶಿಶುಪಾಲನ ಮೈಯಲ್ಲಿದ್ದ ಶಕ್ತಿಯೆಲ್ಲಾ ಖಾಲಿ ಆಗಿ ಮೈಯೆಲ್ಲಾ ಬೆವರು ಕಿತ್ತುಕೊಂಡು ಬಿಲ್ಲನ್ನು ಬಿಟ್ಟುಬಿಟ್ಟ. ಮುಖಭಂಗ ಅನುಭವಿಸಿ ಹಿಂದಿರುಗಿದ ನಂತರ ಬಂದ ಶಲ್ಯ ರಾಜ ಬಿಲ್ಲನ್ನು ಎತ್ತಿ ನಿಲ್ಲಿಸಿ ತಂತಿಯನ್ನು ಎಳೆದು ಶಿಶುಪಾಲನಿಗಿಂತ ಕಮ್ಮಿ ಅಂತರಕ್ಕೆ ಬಗ್ಗಿಸಿ ನಂತರ ಸಾಧ್ಯವಾಗದೆ ಅವನೂ ಹಿಂತಿರುಗಿದ್ದಾನೆ. ಶಲ್ಯ ರಾಜ ಹಿಂತಿರುಗಿದಾಗ ನೆರೆದಿದ್ದವರಲ್ಲಿ ಶಲ್ಯ ರಾಜನಿಗೆ ಆಗದು ತಮಗೂ ಆಗುವುದಿಲ್ಲ ಎಂದು ಅಲ್ಲಿಂದಲೇ ಹಿಂತಿರುಗಿದರು.

ನಂತರದಲ್ಲಿ ಬಂದ ದುರಹಂಕಾರಿ ಜರಾಸಂಧ ಬಿಲ್ಲನ್ನು ಎತ್ತಿ ನಿಲ್ಲಿಸಿ ತಂತಿಯನ್ನು ಒಂದೇ ಒಂದು ಸಾಸಿವೆ ಕಾಳಿನಷ್ಟು ಜಾಗ ಇರುವಷ್ಟು ಎಳೆದಿದ್ದಾನೆ. ಆದರೆ ಸಾಧ್ಯವಾಗದೆ ಬಿಲ್ಲನ್ನು ಬಿಟ್ಟುಬಿಟ್ಟ. ಬಿಟ್ಟ ರಭಸಕ್ಕೆ ಬಿಲ್ಲು ಅವನಿಗೆ ಬಡಿದು ನೆಲದ ಬಿದ್ದು ಬಿಟ್ಟ. ಆದ ಅವಮಾನದಿಂದ ಯಾರ ಮುಖವನ್ನು ನೋಡದೆ ಅಲ್ಲಿಂದ ಹಿಂತಿರುಗಿ ನೋಡದೆ ಮಗಧ ರಾಜ್ಯದವರೆಗೂ ಹೋಗಿಬಿಟ್ಟಿದ್ದಾನೆ. ಜರಾಸಂಧನ ನಂತರ ಬಂದ ಕರ್ಣ ಆ ಬಿಲ್ಲನ್ನು ಎತ್ತಿ ಕಟ್ಟಿ ಮತ್ಸ್ಯ ಯಂತ್ರವನ್ನು ಭೇಧಿಸಿ ದ್ರೌಪದಿಯನ್ನು ಗೆದ್ದು ಅವಳನ್ನು ದುರ್ಯೋಧನನಿಗೆ ಕೊಟ್ಟು ಮದುವೆ ಮಾಡಿಸಬೇಕೆಂಬ ದುರುದ್ದೇಶದಿಂದ ಧನಸ್ಸಿನ ಬಳಿ ಬಂದು ಧನಸ್ಸನ್ನು ಎತ್ತಿ ತನ್ನೆಲ್ಲ ಬಲವನ್ನು ಹಾಕಿ ತಂತಿಯನ್ನು ಎಳೆದಿದ್ದಾನೆ. ಕೇವಲ ಒಂದೇ ಒಂದು ಕೂದಲೆಳೆಯಷ್ಟು ಅಂತರದವರೆಗೂ ಎಳೆದಿದ್ದಾನೆ. ಆದರೆ ಶಕ್ತಿ ಸಾಲದೇ ಬಿಟ್ಟು ಬಿಟ್ಟ. ಕರ್ಣನ ಸೋಲಿನ ನಂತರ ಬಹಳಷ್ಟು ಮಂದಿ ಅಲ್ಲಿಂದ ನಿರ್ಗಮಿಸಿಬಿಟ್ಟರು.

ಈಗ ಭೀಮ ಮತ್ತು ಅರ್ಜುನರು ಇಬ್ಬರೂ ಎದ್ದರು. ಬ್ರಾಹ್ಮಣರ ಗುಂಪಿನಲ್ಲಿ ಕುಳಿತಿದ್ದ ಭೀಮಾರ್ಜುನರು ಎದ್ದಿದ್ದು ನೋಡಿ ಪಕ್ಕದಲ್ಲಿದ್ದ ಬ್ರಾಹ್ಮಣರು ಅವರ ಶಲ್ಯವನ್ನು ಎಳೆದು ನಾವು ಬಂದಿದ್ದು ಸ್ವಯಂವರ ನೋಡಲು ಬಂದಿದ್ದಷ್ಟೇ ನೀವ್ಯಾಕೆ ಹೋಗುತ್ತಿದ್ದೀರಾ. ನೀವು ವಿಫಲರಾದರೆ ಇಡೀ ಬ್ರಾಹ್ಮಣ ಸಮಾಜದ ಮರ್ಯಾದೆಯೇ ಹಾಳಾಗಿ ಹೋಗುತ್ತದೆ. ಎಂಥೆಂಥ ರಾಜ ಮಹಾರಾಜರೇ ವಿಫಲರಾಗಿದ್ದಾರೆ ನೀವು ಯಾಕೆ ಹೋಗುತ್ತಿದ್ದೀರಾ ಸುಮ್ಮನೆ ಕೂಡಿ ಎಂದಾಗ ಭೀಮಾರ್ಜುನರು ಹೇಳುತ್ತಿದ್ದಾರೆ ನೀವೇನೂ ಚಿಂತಿಸಬೇಡಿ ಬ್ರಾಹ್ಮಣ ಸಮಾಜಕ್ಕೆ ಕೀರ್ತಿ ಬರುವ ಹಾಗೆ ಮಾಡುತ್ತೇವೆ ಎಂದು ಹೊರಟಿದ್ದಾರೆ.  ಭೀಮಾರ್ಜುನರು ಒಮ್ಮೆ ಶ್ರೀ ಕೃಷ್ಣನ ಕಡೆ ಅನುಮತಿಗಾಗಿ ನೋಡಿದರು ಕೃಷ್ಣ ಯಾರ ಅರಿವಿಗೂ ಬಾರದೆ ಕಣ್ಸನ್ನೆಯಲ್ಲೇ ಅನುಮತಿ ನೀಡಿದ್ದಾನೆ. ಇಬ್ಬರೂ ಧನಸ್ಸಿನ ಸ್ಥಳಕ್ಕೆ ಬಂದು ಭೀಮ ಅರ್ಜುನನಿಗೆ ಧೈರ್ಯ ನೀಡಿ ತನ್ನ ಸ್ಥಳಕ್ಕೆ ಹಿಂದಿರುಗಿದ.

ಅರ್ಜುನ ಧನಸ್ಸನು ಮುಟ್ಟಿ ಮನಸಿನಲ್ಲೇ ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿ ನಿರಾಯಾಸವಾಗಿ ಧನಸ್ಸನ್ನು ಎತ್ತಿ ತಂತಿಯನ್ನು ಎಳೆದು ಕಟ್ಟಿ ಐದು ಬಾಣಗಳನ್ನು ತೆಗೆದುಕೊಂಡು ಕೆಳಗಡೆ ನೀರಿನಲ್ಲಿ ಮೀನಿನ ಪ್ರತಿಬಿಂಬವನ್ನು ನೋಡಿ ಆ ಹಲಗೆಯ ರಂಧ್ರದ ಮೂಲಕ ಬಾಣವನ್ನು ಬಿಟ್ಟು ಮತ್ಸ್ಯ ಯಂತ್ರವನ್ನು ಭೇಧಿಸಿದನು. ತಕ್ಷಣ ಎಲ್ಲೆಡೆ ಹರ್ಷೋದ್ಘಾರ ತುಂಬಿ ತುಳುಕಿತು. ದ್ರೌಪದಿ ದೇವಿ ಆ ಮಾಲೆಯನ್ನು ತಂದು ಅರ್ಜುನನ ಕೊರಳಿಗೆ ಹಾಕಿದ್ದಾಳೆ

 

ಚಿತ್ರ - ಅ೦ತರ್ಜಾಲ

Rating
No votes yet

Comments