"ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
೨ ಎಪ್ರಿಲ್ ೨೦೧೨ರಂದು ಕರ್ನಾಟಕ ಸರಕಾರ ಜ್ಯಾರಿಗೊಳಿಸಿದ ಕಾಯಿದೆ ಆಧಾರಿತ ಕಾರ್ಯಕ್ರಮ "ಸಕಾಲ". ಅದರ ಬಗ್ಗೆ ಅಂದಿನ ಹಲವು ಪತ್ರಿಕೆಗಳಲ್ಲಿ ಇಡೀ ಪುಟದ ಜಾಹೀರಾತು. "ಸಾರ್ವಜನಿಕ ಸೇವೆಗೆ ಬದ್ಧತೆ ತಂದ "ಸಕಾಲ" - ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ - ೨೦೧೧ ಇಂದು ರಾಜ್ಯಾದ್ಯಂತ ಜಾರಿ" ಎಂಬ ಘೋಷಣೆ. "ಸೇವೆಗೂ ಖಾತರಿ, ಸಮಯಕ್ಕೂ ಖಾತರಿ" ಎಂಬ ಆಶ್ವಾಸನೆ. "ಆಡಳಿತದಲ್ಲಿ ಹೊಸ ಕ್ರಾಂತಿಯ ಉದಯ", "ಬನ್ನಿ, ನಿಮ್ಮ ಹಕ್ಕು ಚಲಾಯಿಸಿ" ಎಂಬ ಕರೆ.
ಅದಾಗಿ ಒಂದು ವಾರದಲ್ಲಿ, ೯ ಎಪ್ರಿಲ್ ೨೦೧೨ರಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಮೊದಲ ಮಹಡಿಯಲ್ಲಿರುವ ಮಂಗಳೂರು ಉಪವಿಭಾಗದ ಅಸಿಸ್ಟೆಂಟ್ ಕಮಿಷನರ ಕಚೇರಿಯ ಕೆಲವು ಆಗುಹೋಗುಗಳು ಹೇಗಿತ್ತು?
ಉಪವಿಭಾಗದ ದಂಡಾಧಿಕಾರಿಯಾದ ಅಸಿಸ್ಟೆಂಟ್ ಕಮಿಷನರ ಅಲ್ಲಿನ ಕೋರ್ಟಿನಲ್ಲಿ ರೆವಿನ್ಯೂ ಇಲಾಖೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯೂ ನಡೆಯುತ್ತದೆ. ಆ ದಿನ ಪೂರ್ವಾಹ್ನ ೧೧ ಗಂಟೆಗೆ ಯಾರಿಗೆಲ್ಲ ವಿಚಾರಣೆ ನಿಗದಿಪಡಿಸಲಾಗಿತ್ತೋ ಅವರು ಎರಡೂವರೆ ತಾಸು ಕಾಯಬೇಕಾಯಿತು. ಒಬ್ಬರಂತೂ ತಮ್ಮ ಅರ್ಜಿಯ ವಿಚಾರಣೆಗಾಗಿ ನಾಲ್ಕು ತಾಸು ಕಾಯಬೇಕಾಯಿತು.
ಆ ಕೋರ್ಟಿನ ವಿಚಾರಣೆಗಳನ್ನು ಆಗಾಗ ಮುಂದೂಡಲಾಗುತ್ತದೆ. ಆ ಕಚೇರಿಯ ಗೋಡೆಯ ಫಲಕಕ್ಕೆ ಅಂಟಿಸಿದ್ದ ಹಲವು ನೋಟೀಸುಗಳು ಅಲ್ಲಿ ಮುಂದೂಡಲಾದ ವಿಚಾರಣೆಗಳ ಪುರಾವೆ. ೨ ಜನವರಿ ೨೦೧೨ರ ವಿಚಾರಣೆಗಳನ್ನು ೧೨ ಮಾರ್ಚ್ ೨೦೧೨ಕ್ಕೆ, ೧೬ ಜನವರಿ ೨೦೧೨ರದ್ದನ್ನು ೨೬ ಮಾರ್ಚ್ ೨೦೧೨ಕ್ಕೆ, ೬ ಫೆಬ್ರವರಿ ೨೦೧೨ರದ್ದನ್ನು ೨ ಎಪ್ರಿಲ್ ೨೦೧೨ಕ್ಕೆ ಮುಂದೂಡಿದ್ದನ್ನು ಅವು ಸಾರುತ್ತಿದ್ದವು. ಅದೇ ರೀತಿಯಲ್ಲಿ, ೨೬ ಮಾರ್ಚ್ ೨೦೧೨ರ ಪ್ರಕರಣಗಳ ವಿಚಾರಣೆಯನ್ನು ೪ ಜೂನ್ ೨೦೧೨ಕ್ಕೆ (ಎರಡೂವರೆ ತಿಂಗಳು) ಮತ್ತು ೨೭ ಮಾರ್ಚ್ ೨೦೧೨ರದ್ದನ್ನು ೫ ಜೂನ್ ೨೦೧೨ಕ್ಕೆ ಮುಂದೂಡಿದ್ದು ಕಣ್ಣಿಗೆ ರಾಚುತ್ತಿತ್ತು.
ಹೀಗೆ ಪ್ರಕರಣಗಳ ವಿಚಾರಣೆಯನ್ನು ತಿಂಗಳುಗಟ್ಟಲೆ ಮುಂದೂಡಿದರೆ, ಜನಸಾಮಾನ್ಯರಿಗೆ ಎಷ್ಟು ಸಂಕಟ ಆಗುತ್ತದೆ ಎಂಬುದನ್ನು ಅಂದಿನ ಈ ಮೂರು ಪ್ರಕರಣಗಳು ದಾಖಲಿಸುತ್ತವೆ.
ಮೂಡಬಿದ್ರೆ ತಾಲೂಕಿನ ಇರುವೈಲು ಹತ್ತಿರದ ಕರಣಾಕರ ಅವರು ನನ್ನ ಪಕ್ಕದಲ್ಲಿ ಪೂ.೧೧ ಗಂಟೆಯಿಂದ ಕಾಯುತ್ತಿದ್ದರು. ಅವರ ಪ್ರಕರಣ ಅವರೇ ಹೇಳಿದಂತೆ: "ನಾನು ಆರ್‍ಟಿಸಿಯಲ್ಲಿ ಹೆಸರು ಬದಲಾಯಿಸಬೇಕೆಂದು ಅರ್ಜಿ ಕೊಟ್ಟು ಮೂರೂವರೆ ವರುಷ ಆಯಿತು. ಸರ್ವೆ ಆಗಿದೆ. ಒಮ್ಮೆ ಏಸಿ ಆಫೀಸಿನಿಂದ ರೆವೆನ್ಯೂ ಇನ್‍ಸ್ಪೆಕ್ಟರಿಗೆ ಮತ್ತು ವಿಲೇಜ್ ಎಕೌಂಟೆಂಟರಿಗೆ ನೋಟೀಸು ಹೋಗಿತ್ತು. ಅವರಿಬ್ಬರೂ ರಿಪೋರ್ಟ್ ಕೊಟ್ಟಾಗಿದೆ. ಈಗ ಅವರಿಗೇ ಪುನಃ ನೋಟೀಸು ಕೊಡಬೇಕಂತ ಏಸಿ ಆರ್ಡರ್ ಮಾಡಿದ್ದಾರೆ. ಎಪ್ರಿಲ್ ೧೬ಕ್ಕೆ ಏಸಿ ಪುನಃ ಇದರ ವಿಚಾರಣೆ ಇಟ್ಟಿದ್ದಾರೆ. ಅಷ್ಟರೊಳಗೆ ವಿಲೇಜ್ ಎಕೌಂಟೆಂಟರ ರಿಪೋರ್ಟ್ ಬರಬೇಕು. ಅದಕ್ಕಾಗಿ, ಆ ನೋಟೀಸು ತೆಗೆದುಕೊಳ್ಳಲಿಕ್ಕೆ ಅಲ್ಲಿಂದ ಬಂದಿದ್ದೇನೆ. ನನಗೆ ಸಾಕಾಗಿ ಹೋಗಿದೆ. ನಿಮಗೆ ದುಡ್ಡು ಕೊಡುವಾ, ನನ್ನ ಕೆಲಸ ಮಾಡಿಕೊಡಿ ಎಂದು ವಿಲೇಜ್ ಎಕೌಂಟೆಂಟರಿಗೆ ಹೇಳಿದ್ದೇನೆ. ಅವರು ಆರ್ಡರಿನ ಕಾಪಿ ತನ್ನಿ, ಒಂದೇ ದಿನದಲ್ಲಿ ಮಾಡುತ್ತೇನೆ ಎಂದು ಹೇಳುತ್ತಾರೆ."
ಅನಂತರ ಕರುಣಾಕರ ಎರಡನೇ ಸಲ ಏಸಿ ಆಫೀಸಿನ ಒಳಗೆ ಹೋದರು. ಹದಿನೈದು ನಿಮಿಷಗಳ ಬಳಿಕ ಹೊರಗೆ ವರಾಂಡಕ್ಕೆ ಬಂದು ಅವರು ಹೇಳಿದ್ದು, "ಈ ಆಫೀಸಿನ ಜೆರಾಕ್ಸ್ ಮೆಷೀನ್ ಹಾಳಾಗಿದೆ. ಮೂರು ಜನ ಸ್ಟಾಫ್ ಅದನ್ನು ಸರಿ ಮಾಡಲಿಕ್ಕೆ ಹೆಣಗಾಡುತ್ತಾ ಇದ್ದಾರೆ. ನಾನು ಡಿಸಿ ಆಫೀಸಿನ ಗೇಟಿನ ಹತ್ತಿರದ ಜೆರಾಕ್ಸ್ ಷಾಪಿನಲ್ಲಿ ಹಣ ಕೊಟ್ಟು ಮಾಡಿಸಿ ತರುತ್ತೇನೆ ಎಂದು ಹೇಳಿದೆ. ಆದರೆ ನನ್ನ ಆರ್ಡರೇ ಇಲ್ಲಿಯ ಮೆಷೀನಿನ ಒಳಗೆ ಸಿಕ್ಕಿ ಹಾಕಿಕೊಂಡಿದೆಯಂತೆ. ಏನು ಮಾಡೋದು ಹೇಳಿ. ಈ ಗವರ್ನಮೆಂಟು ಆಫೀಸುಗಳಲ್ಲಿ ಎಲ್ಲರೂ ಹೀಗೆ ಸಿಕ್ಕಿ ಹಾಕಿ ಕೊಳ್ಳುತ್ತೇವೆ."
ಅರ್ಧ ತಾಸಿನ ನಂತರ ಕರುಣಾಕರ ಪುನಃ ಆಫೀಸಿನ ಒಳಗೆ ಹೋದರು. ಹೊರಗೆ ಬರುವಾಗ ಅವರ ಕೈಯಲ್ಲೊಂದು ಚೀಟಿ. ಆ ಚೀಟಿಯಲ್ಲಿ ಅವರ ಆರ್ಡರಿನ ನಂಬರ್ ಬರೆಯಲಾಗಿತ್ತು. ಅವರು ತನ್ನೂರಿನ ವಿಲೇಜ್ ಎಕೌಂಟೆಂಟರ ಕಚೇರಿಗೆ ಹೊರಡುತ್ತಾ ಕೇಳಿದ ಪ್ರಶ್ನೆಗಳು: "ಇದಕ್ಕಾಗಿ ನಾನು ಇರುವೈಲಿನಿಂದ ಮಂಗಳೂರಿಗೆ ಬರಬೇಕಾಗಿತ್ತಾ? ಆ ಆರ್ಡರನ್ನು ಕಳಿಸಲು ಅಥವಾ ಅದರ ನಂಬರನ್ನು ತಿಳಿಸಲು ಬೇರೆ ಯಾವ ದಾರಿಯೂ ಇರಲಿಲ್ಲವೇ?"
ಅವರಂತೆಯೇ ಒಂದು ತಾಸಿನಿಂದ ಕಾಯುತ್ತಿದ್ದ ಇರಾದಿಂದ ಬಂದ ಇಬ್ರಾಹಿಂ ಹೇಳಿದ್ದು: "ನಮ್ಮದು ೨೦ ಸೆಂಟ್ಸ್ ಜಮೀನಿದೆ. ನಮ್ಮ ಮಾಜಿ ಪಂಚಾಯತ್ ಚೇರ್‍ಮನ್ ಮೂರು ಎಕರೆ ಸರಕಾರಿ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಆ ಜಮೀನಿನ ರೆಕಾರ್ಡಿನಲ್ಲಿ ನಮ್ಮ ಜಮೀನಿನ ಸರ್ವೆ ನಂಬರನ್ನೇ ಕೊಟ್ಟಿದ್ದಾರೆ. ಈಗ ನಮಗೆ ಹೆದರಿಕೆ. ಇವರೆಲ್ಲ ಏನು ಬೇಕಾದರೂ ಮಾಡುತ್ತಾರೆ. ನಮ್ಮ ಜಮೀನಿನ ಸರ್ವೆ ನಂಬರೇ ತಪ್ಪು ಎಂದು ಮಾಡಿಯಾರು. ಅದಕ್ಕಾಗಿ ನಮ್ಮ ಜಮೀನಿನ ಸರ್ವೆ ನಂಬ್ರ ಇನ್ನೊಂದು ಜಮೀನಿಗೆ ಕೊಟ್ಟದ್ದನ್ನು ರದ್ದು ಮಾಡಿ ಎಂದು ಅರ್ಜಿ ಕೊಟ್ಟು ಮೂರು ವರುಷ ಆಗಿದೆ. ನಮ್ಮ ಅರ್ಜಿ ಇನ್ನೂ ಹಾಗೇ ಇದೆ."
ಅಲ್ಲಿ ಮೂರನೇ ಕುರ್ಚಿಯಲ್ಲಿ ಕುಳಿತಿದ್ದ ಸುಗಂಧಿ ತನ್ನ ಸಮಸ್ಯೆ ಬಗ್ಗೆ ತಿಳಿಸಿದ್ದು: "ನಾವೂ ಮೂರು ವರುಷದಿಂದ ಇಲ್ಲಿಗೆ ಬರುತ್ತಾ ಇದ್ದೇವೆ. ನಮ್ಮ ಜಮೀನು ಇರುವುದು ಮೂಡಬಿದರೆ ಹತ್ತಿರದ ಕಾಂತಾವರದಿಂದ ೨ ಕಿಲೋಮೀಟರ್ ಮುಂದಕ್ಕೆ. ಅಲ್ಲಿ ಮಂಗನ ಕಾಟ, ಕಾಡುಹಂದಿ ಕಾಟ. ಇಲ್ಲಿ ಇವರ ಕಾಟ. ಅಲ್ಲಿಂದ ಒಮ್ಮೆ ಬಂದು ಹೋಗಲಿಕ್ಕೆ ನೂರು ರೂಪಾಯಿ ಬಸ್ಸಿಗೆ ಒಬ್ಬರಿಗೆ ಖರ್ಚಾಗುತ್ತದೆ. ಬೆಳಗ್ಗೆ ಬೇಗ ಹೊರಟು ಬಂದಿದ್ದೇವೆ. ಇಲ್ಲಿ ಎರಡು ದೋಸೆ, ಒಂದು ಕಾಫಿಗೆ ೨೫ ರೂಪಾಯಿ ಕೊಡಬೇಕಾಯಿತು.
ನಮ್ಮ ಅರ್ಜಿಯ ವಿಚಾರಣೆ ಸಂಜೆ ೩ ಗಂಟೆಗೆ ಅಂತ ಇಲ್ಲಿ ಬಂದಾಗ ಹೇಳಿದರು. ಹಾಗಾದರೆ ನಮಗೆ ಬೆಳಗ್ಗೆ ೧೧ ಗಂಟೆಗೆ ಬರಲಿಕ್ಕೆ ಹೇಳಿದ್ದು ಯಾಕೆ? ನಮ್ಮದು ವಿಚಾರಣೆ ಆಗುವಾಗ ಸಂಜೆ ೪ ಗಂಟೆ ಆದೀತು. ಮತ್ತೆ ನಾವು ಮೂಡಬಿದರೆಗೆ ಹೋಗಬೇಕು. ಅಲ್ಲಿಂದ ಲಾಸ್ಟ್ ಬಸ್ಸು ಸಂಜೆ ೬ ಗಂಟೆಗೆ ಬಿಡ್ತದೆ. ಅದು ತಪ್ಪಿದರೆ ನಾವು ರಿಕ್ಷಾ ಮಾಡಿ ಹೋಗಬೇಕು.
ಇಷ್ಟರ ತನಕ ನಮಗೆ ೬೦,೦೦೦ ರೂಪಾಯಿ ಖರ್ಚಾಗಿದೆ. ವಕೀಲರಿಗೆ, ವಿಲೇಜ್ ಎಕೌಂಟೆಂಟರಿಗೆ, ತಹಸೀಲ್ದಾರರಿಗೆ - ಇವರಿಗೆಲ್ಲ ದುಡ್ಡು ಕೊಟ್ಟಿದ್ದೇವೆ. ಇನ್ನೂ ನಮ್ಮ ಜಮೀನು ನಮ್ಮ ಹೆಸರಿಗೆ ಆಗಿಲ್ಲ. ಸರ್ವೆ ಆಗಿದೆ. ಪೇಪರಿನಲ್ಲಿ ಹಾಕಿ ಆಗಿದೆ. ಇನ್ನು ಎಂತದು ಆಗಬೇಕು? ನಮಗೆ ಇಷ್ಟೆಲ್ಲ ಕಷ್ತ ಕೊಡುವ ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
ಅವರ ಆಕ್ರೋಶ ಅರ್ಥವಾಗಬೇಕಾದರೆ, "ಸಕಾಲ" ಜಾಹೀರಾತಿನಲ್ಲಿ ನೊಂದ ನಾಗರಿಕರಿಗೆ ಸರಕಾರ ಘೋಷಿಸಿರುವ ಪರಿಹಾರ ಗಮನಿಸಬೇಕು. ಅದು ಸರಕಾರಿ ನೌಕರರ ವೇತನದಿಂದ ಪ್ರತಿ ಸೇವೆಗೆ ಪ್ರತಿ ದಿನದ ವಿಳಂಬಕ್ಕೆ ರೂಪಾಯಿ ೨೦ರಂತೆ ಗರಿಷ್ಠ ರೂಪಾಯಿ ೫೦೦ ಮಾತ್ರ!
Comments
ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
In reply to ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?" by makara
ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
In reply to ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?" by anand33
ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
In reply to ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?" by kavinagaraj
ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
ಉ: "ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"