ಭಿನ್ನಾಣಗಿತ್ತಿಯ (ನದಿ) ಬೆಂಬತ್ತಿ

ಭಿನ್ನಾಣಗಿತ್ತಿಯ (ನದಿ) ಬೆಂಬತ್ತಿ

ಕವನ

ಬಳುಕಿ ಬಳುಕಿ ಮೈ ಕುಲುಕಿ ನಡೆವಾ ಭಿನ್ನಾಣಗಿತ್ತಿಯ ನೋಡಿದೆನು.

ಅಚ್ಚ ಹಸುರಿನ ಹೊಲದ ಬದಿಯಲಿ ಮಾಟಗಾತಿಯ ನೋಡಿದೆನು.

ನೋಡಿದೆನು, ನಾ ಹಿಂದೆ ಓಡಿದೆನು.

 

ಮುಳ್ಳಪೊದೆಯಲಿ ಮೈಯ ಬಗ್ಗಿಸಿ ನುಸುಳಿ ಹೆಜ್ಜೆಯನಿಟ್ಟವಳ.

ಕಲ್ಲುಬಂಡೆಯ ಸುತ್ತ ಸುತ್ತುತ ಆಟವನಾಡಿ ನಕ್ಕವಳ.

ಮುಗಿಲು ಸುರಿಸಿದಾ ಜಡಿಮಳೆಯಲಿ ಮೈಯನುಬ್ಬಿಸಿ ನಡೆದವಳ.

ಕಣ್ಣ ಸೆಳೆಯುವ ಕೆಮ್ಮಣ್ಣಿನ ಬಣ್ಣದುಡುಗೆಯ ತೊಟ್ಟವಳ.

 

ಬಿಸಿಲ ಅರಸಗೆ ಮೈಯ ತೋರುವ ಸೊಬಗ ಸೀರೆಯನುಟ್ಟವಳ.

ಒಣಗಿದ ತೊಗಲಿನ ಕಡುಬಡವಗೂ ತನ್ನೊಡಲ ಬಳಸಲು ಬಿಟ್ಟವಳ.

ಹಸುವ ಕಾಯುವ ಕೂಸ ಪೊರೆಯಲು ಒಡಲ ಸೀಳೇ ಬಿಟ್ಟವಳ.

ಕೂಸಿನ ತರದಲ್ಲೆಲ್ಲರ ಕಂಡು ತನ್ನತ್ತವರನು ಕರೆದವಳ.

 

ಕಡಲ ನೀರಲಿ ಉಡುಗೆಯ ಕಳಚಿ ಅಂದದೊಡಲೂ ತೊರೆದವಳ.

ತೊರೆದ ಒಡಲನು ಮತ್ತೆ ಪಡೆಯಲು ಮುಗಿಲನೇರಿ ಕುಳಿತವಳ.

Comments