ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಚಿತ್ರ
'ಅಂಡಾಂಡಭಂಡ ಸಮ್ಮರ್ ಕ್ಯಾಂಪ್'
ಬೇಸಿಗೆಯ ಮಜಾ ಪಡೆಯಲು ವಿಶೇಷ ರುಚಿಗಳ ಅವಿಷ್ಕಾರ.
ಹೊಸ ಹೊಸ ದಕ್ಷಿಣ ಭಾರತದ ಸ್ವಾದಿಷ್ಟ ಅಡುಗೆ ತಿಂಡಿಗಳನ್ನು ಮಾಡಲು ಕಲಿಸುವ ಕ್ಯಾಂಪ್.
ಬನ್ನಿ ಸಂಪದಿಗರೆ ಸೇರಿ.. ಹೊಸ ಅನುಭವ ಪಡೆಯಿರಿ.
ಇಂತದೊಂದು ಈಮೈಲ್ ನನ್ನ 'ಜೀ' ಮೈಲ್ ಡಬ್ಬಿಯಲ್ಲಿ ಬಂದು ಬಿದ್ದಾಗ ಆಶ್ಚರ್ಯವಾಯಿತು. ಕೊನೆಯಲ್ಲಿ ನೋಡಿದೆ, ನಿಜ ಗಣೇಶರೆ ಎಲ್ಲರಿಗು ಕಳಿಸಿರುವುದು. ನಡೆಯುವ ಸ್ಥಳ ನೋಡಿದೆ ಬನಶಂಕರಿಯ ಹತ್ತಿರದ ವಿಳಾಸ. ಇದೆಂತದು ಗಣೇಶರು , ಇಬ್ಬರು ಸೇರಿ ಸಮ್ಮರ್ ಕ್ಯಾಂಪ್ ಪ್ರಾರಂಬಿಸೋಣ ಎಂದಿದ್ದವರು, ಈ ರೀತಿ ಒಬ್ಬರೆ ನನಗೆ ತಿಳಿಸದೆ ಕ್ಯಾಂಪ್ ಆಯೋಜಿಸಿದ್ದಾರಲ್ಲ ಎನ್ನಿಸಿತು. ಆದರು ಕುತೂಹಲ , ಇರಲಿ ಎಂದು ಕಡೆಯಲ್ಲಿ ನೋಡಿದೆ. 'ಫೀಸ್' ಎಂಬಲ್ಲಿ ಸೊನ್ನೆ ರೂಪಾಯಿಗಳು ಎಂದಿದ್ದವು, ಇದೇನು ಸೊನ್ನೆಯೊ ಅಥವ ಸೊನ್ನೆಯ ಹಿಂದೆ ಏನಾದರು ಇದೆಯೊ ಅರ್ಥವಾಗಲಿಲ್ಲ. ಅಲ್ಲದೆ 'ಸ್ಥಳದಲ್ಲಿಯೆ ರಿಜಿಸ್ಟ್ರೇಷನ್' ಎಂದಿದ್ದು 'ಮೊದಲು ಬಂದವರಿಗೆ ಆಧ್ಯತೆ' ಎಂದು ಬರೆದಿತ್ತು, ಬಾನುವಾರ ಬೆಳಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಬನ್ನಿ ಎಂದಿತ್ತು.
ಅಲ್ಲದೆ ವಿಶೇಷ ಸೂಚನೆ ಎಂದು 'ಮಧ್ಯಾನದ ನಿಮ್ಮ ಊಟವನ್ನು ನಿಮ್ಮ ಮನೆಯಿಂದ ಕ್ಯಾರಿಯರ್ ನಲ್ಲಿ ತನ್ನಿ ' ಎಂದು ತಿಳಿಸಿದ್ದರು
ಮನಸ್ಸು ತೂಯ್ದಾಡುತ್ತಿತ್ತು, ಹೇಗಾದರು ಸರಿ ಎಂದು ಬಾನುವಾರ ಬನಶಂಕರಿಯ ಹತ್ತಿರ ಅವರು ಹೇಳಿದ ವಿಳಾಸ ಹುಡುಕಿ ಹೊರಟೆ. ಕೆಳಗೆ ಗಾಡಿ ನಿಲ್ಲಿಸುವಾಗಲೆ ಜಯಂತ್ ಸಹ ಗಾಡಿಯಿಂದ ಇಳಿಯುತ್ತಿದ್ದರು. ಸಂತಸವಾಯಿತು ಅವರು ವಿಶ್ ಮಾಡಿದರು. ಅಕ್ಕಪಕ್ಕ ನೋಡಿದೆವು ಬೀಗ ಹಾಕದ ಹಳೆಯ ಸ್ಕೂಟರ್ ಕಾಣಿಸಿತು ಸರಿ ಹಾಗಿದ್ದರೆ ಗಣೇಶರು ಬಂದಿರುವುದು ಸತ್ಯ.
ನಾನು ಜಯಂತರನ್ನು 'ನೀವು ಸಮ್ಮರ್ ಕ್ಯಾಂಪ್ ನಲ್ಲಿ ಅಡಿಗೆ ಕಲಿಯಲು ಬರ್ತಾ ಇದ್ದೀರ?" ಕೇಳಿದೆ,
ಸಂಕೋಚದಿಂದ ತಲೆ ಆಡಿಸಿದರು.
ಒಳಗೆ ಹೋಗುವಾಗಲೆ ಗಮನಿಸಿದೆ, ಅಲ್ಲಿ ಸುಮಾರು ಮೂವತ್ತು ಕುರ್ಚಿಗಳನ್ನು ಹಾಕಿದ್ದರು. ಸುಮಾರು ಇಪ್ಪತ್ತು ಜನ ಬರ್ತಿಯಾಗಿದ್ದರು. ನಾನು ಜಯಂತ್ ಜೊತೆ ಹಿಂದೆ ಹೋಗಿ ಕುಳಿತೆ. ಎದುರಿಗಿದ್ದ ಸ್ಟೇಜ್ ಗಮನಿಸಿದೆ. ಇದೇನು 'ಸಮ್ಮರ್ ಕ್ಯಾಂಪ್' ಎಂದು ಹೇಳಿ ಈ ರೀತಿ ಸಭೆ ನಡೆಸುವ ರೀತಿ ಕುಳಿತ್ತಿದ್ದಾರಲ್ಲ ಅನ್ನಿಸಿತು. ಸ್ಟೇಜ್ ಮೇಲೆ 'ಅರ್ದ ಆನೆಯ' ಗಾತ್ರದ ವ್ಯಕ್ತಿಯೊಬ್ಬರು ಕುಳಿತಿದ್ದರು, ಹಸನ್ಮುಖ ನೋಡುವಾಗಲೆ ತಿಳಿಯಿತು ಅವರೆ ಗಣೇಶರು ಅರ್ಥಾತ್ ಅಂಡಾಂಡಭಂಡ ಸ್ವಾಮಿಗಳು ಹಾಗು ಬಲಪಕ್ಕದಲ್ಲಿ ಹೌದು! ಆಸುರವರು.
ಅಕ್ಕ ಪಕ್ಕ ನೋಡಿದೆ ಕೆಲವು ಪರಿಚಯದ ಮುಖ , ಮತ್ತೆ ಕೆಲವರು ಮುಖ ನೋಡಿದರು ಇಂತವರೆ ಎಂದು ಹೇಳಲಾಗುವದಿಲ್ಲ,
ಸಂಪದದಲ್ಲಿ ತಮ್ಮ ಮುಖದ ಚಿತ್ರ ಹಾಕದೆ ಯಾವುದೊ ದೇವರ, ಹೂವಿನ , ಪ್ರಕೃತಿಯ ಚಿತ್ರಗಳನ್ನು ಹಾಕುವ ಬಗ್ಗೆ ಕೋಪ ಬಂದಿತು. ಅಷ್ಟರಲ್ಲಿ ನಾನು ಸಹ ನನ್ನ ಚಿತ್ರ ಹಾಕಿಲ್ಲ ಅಂತ ನೆನಪಿಗೆ ಬಂದು ಆ ಕೋಪ ಹಾಗೆ ಸರಿಯಾಯಿತು.
ಅಂಡಾಂಡಭಂಡರು ಮಾತನಾಡುತ್ತಿದ್ದರು ' ನನ್ನ ಬಗ್ಗೆ ವಿಶ್ವಾಸವಿಟ್ಟು ಎಲ್ಲರು ಬಂದಿರುವುದು ಸಂತಸ. ಪಾರ್ಥರು ಮತ್ತು ನಾನು ಇಬ್ಬರು ಸೇರಿ ಈ ಸಮ್ಮರ್ ಕ್ಯಾಂಪ್ ನಡೆಸುವ ಯೋಜನೆಯಿತ್ತು ಆದರೆ ನಾನು ನನ್ನದೆ ಆದ ಕಾರಣಗಳಿಗಾಗಿ ಇದನ್ನು ಪ್ರತ್ಯೇಕವಾಗಿ ಆಯೋಜಿಸಿದೆ. ಈ ಸಮ್ಮರ್ ಆಡಿಗೆ ಕ್ಯಾಂಪ್ ನಲ್ಲಿ ಯಾವುದೆ ಗಂಡಸರು ಬಾಗವಹಿಸಬಹುದು. ಮತ್ತು ಇಲ್ಲಿಯ ನಿಯಮಗಳೆಲ್ಲ ಸರಳ. ಇದು ದೀರ್ಘವಾದದ್ದಲ್ಲ , ಒಂದೆ ಸೆಶನ್ ನದ್ದು. 'ಜೀಬ್ರ ಟೀವಿ' ಮುಂತಾದ ಕಡೆ ವಿಚಿತ್ರ ನಿಯಮಗಳಿರುತ್ತವೆ.. ಐದು ನಿಮಿಶದಲ್ಲಿ ಎರಡು ತಿಂಡಿ ಮಾಡಿ, ಪ್ರಸಂಟೇಶನ್ ಮುಖ್ಯ ಎಂದೆಲ್ಲ ಹೇಳುತ್ತಾರೆ. ಅದರಲ್ಲಿ ಒಬ್ಬ ಬೋಡ ಆಸಾಮಿ ನೀವು ಮಾಡುವ ತಿಂಡಿಯನ್ನು ಬರಿ ಒಂದು ಬೆರಳಲ್ಲಿ ತಿಂದು ಅದು ಹೇಗಿದೆ ಅಂತ ಮಾರ್ಕ್ಸ್ ಕೊಡುತ್ತಾರೆ. ಅಲ್ಲ ಅಷ್ಟು ಕಡಿಮೆ ತಿಂದರೆ ಇರುವೆಗೆ ಸಹ, ರುಚಿ ಗೊತ್ತಾಗಲ್ಲ ಹಾಗಿರುವಲ್ಲಿ ಅವರಿಗೆ ಹೇಗೆ ರುಚಿ ತಿಳಿಯುತ್ತೆ ಎಲ್ಲವು ಮೋಸ.
ಇಲ್ಲಿ ನಿಮಗೆ ಸಮಯದ ಸಮಸ್ಯೆ ಇಲ್ಲ. ಈಗ ಪ್ರಾರಂಬಿಸಿ ಮಧ್ಯಾನ ಒಂದು ಘಂಟೆಯವರೆಗು ವಿರಾಮದಲ್ಲಿ ನಿಮಗೆ ಬರುವ ಯಾವುದೆ ತಿಂಡಿ ಅಥವ ಅಡುಗೆ ಮಾಡಬಹುದು. ಸಮಯದ ಕಟ್ಟುಪಾಡಿಲ್ಲ ನೀವು ಬೇಕಿದ್ದರೆ ಅರ್ದಗಂಟೆ ಜಾಸ್ತಿಯು ತೆಗೆದುಕೊಳ್ಳಬಹುದು. ಮತ್ತೆ ರುಚಿಯ ಜೊತೆಗೆ ಗಾತ್ರವು ಮುಖ್ಯ. ಸಣ್ಣ ಬೌಲ್ ಗಳಲ್ಲಿ ಮಾಡಿಟ್ಟರೆ ಹೇಗೆ? , ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಾಡಿ. ಕನಿಷ್ಟ ಇಲ್ಲಿರುವ ೨೫-೩೦ ಜನರಿಗೆ ಸ್ವಲ್ಪವಾದರು ಒದಗಿಸಿ ಕೊಡುವಷ್ಟಿರಬೇಕು. ಉಂಡೆ ಮುಂತಾದವುಗಳನ್ನು ಮಾಡುವ ಹಾಗಿದ್ದಲ್ಲಿ ದೊಡ್ಡ ದೊಡ್ಡ ಗಾತ್ರದ ಉಂಡೆಗಳನು ಮಾಡಿ" ಎನ್ನುತ್ತ ತಮ್ಮ ಎರಡು ಕೈಗಳನ್ನು 'ಎಳೆನೀರು' ಗಾತ್ರಕ್ಕೆ ತೋರಿಸಿದರು. ಆಗ ಅವರ ಕಣ್ಣುಗಳು ಮಿಂಚುತ್ತಿದ್ದವು. ಮತ್ತೆ ಮುಂದುವರೆದು.
"ನೀವು ಅಡುಗೆ ಮಾಡಲು ಮೇಲೆ ಸ್ಥಳ ಏರ್ಪಡಿಸಲಾಗಿದೆ. ನೀವು ನಿಮಗೆ ಚೆನ್ನಾಗಿ ಬರುವ ಯಾವುದೆ ಒಂದು ಅಥವ ಎರಡು ಪದಾರ್ಥಗಳನ್ನು ಮಾಡಬಹುದು. ಅಥವ ನನ್ನ ಹತ್ತಿರ ಕೆಲವು ತಿಂಡಿ ಮಾಡುವ ಮಾರ್ಗದರ್ಶಿಗಳ ಪ್ರಿಂಟೆಡ್ ಪೇಪರ್ ಗಳಿವೆ ಇದರಲ್ಲಿ ನಿಮಗೆ ಇಷ್ಟವಾದ ಶೀಟ್ ಆಯ್ದುಕೊಂಡು ಅಡುಗೆ ಮಾಡಬಹುದು. ನಿಮಗೆ ಬೇಕಾದ ದಿನಸಿಗಳು ತರಕಾರಿಗಳು ಎಲ್ಲವು ಏರ್ಪಾಟಾಗಿದೆ. ಈಗ ಸ್ವಲ್ಪ ಕಾಫಿ ಸ್ವೀಕರಿಸಿ, ನಿಮ್ಮ ನಿಮ್ಮಲ್ಲಿ ಮಾತನಾಡಿಕೊಂಡು ಮೇಲಿನ ಹಾಲಿಗೆ ನಡೆಯಿರಿ. ಮತ್ತೆ ಮರೆತೆ, ಇಲ್ಲಿ ಜಡ್ಜ್ ಅಂತ ಯಾರು ಇರುವದಿಲ್ಲ ಇದು ಸ್ಪರ್ದೆಯಲ್ಲ ಬರಿ ಕ್ಯಾಂಪ್. ಆದರೆ ನೀವು ಮಾಡುವದೆಲ್ಲವನ್ನು ನೋಡಲು ವಿಶೇಷ ವಿಕ್ಷಕರೊಬ್ಬರಿರುತ್ತಾರೆ' ಎನ್ನುತ್ತ 'ಇವರನ್ನು ಪರಿಚಯಿಸಿಕೊಳ್ಳಿ'
" ಶ್ರೀ ಆಸು ಹೆಗ್ಡೆಯವರು ಇಂದಿನ ಕ್ಯಾಂಪ್ ನ ವೀಕ್ಷಕರು" ಎಂದರು.
ಆಸುರವರು ಎದ್ದು ನಿಂತು ಎಲ್ಲರಿಗು ನಮಸ್ಕಾರ ಮಾಡುತ್ತಿರುವಂತೆ ಎಲ್ಲರು ಚಪ್ಪಾಳೆ ತಟ್ಟಿದರು. ಈಗ ಅಂಡಾಂಡಭಂಡರು " ನಿಮ್ಮಲ್ಲಿ ಯಾರಿಗಾದರು ಏನಾದರು ಅನುಮಾನಗಳಿದ್ದರೆ ಕೇಳಿ" ಎಂದರು.
ನನಗೆ ಇದ್ದಕ್ಕಿದಂತೆ ಭಯಂಕರ ಅನುಮಾನವೊಂದು ತಲೆದೋರಿತು , ಎದ್ದು ನಿಂತು
"ಅಂಡಾಂಡಭಂಡ ಸ್ವಾಮಿಗಳೆ ,ಇಲ್ಲಿ ಎಲ್ಲರು ಗಂಡಸರೆ ಇದ್ದಾರೆ ಏಕೆ, ಅಡುಗೆ ಮಾಡುವದರಲ್ಲಿ ಹೆಣ್ಣು ಮಕ್ಕಳೆ ಮುಂದಲ್ಲವೆ ಹಾಗಿರಲು ಅವರೇಕೆ ಇಲ್ಲ" ಎಂದೆ
ಅದಕ್ಕವರು " ಸರಿ, ನೀವು ಪಾರ್ಥರಲ್ಲವೆ ನಿಮಗೆ ಇಂತ ಪೆದ್ದು ಅನುಮಾನವೆ ಬರುವುದು. ಹೆಣ್ಣುಮಕ್ಕಳು ದಿನಾ ಅದೇ ಕೆಲಸ ಮಾಡುತ್ತಾರೆ, ಹಾಗಿರಲು ಇಲ್ಲಿ ಕರೆದರೆ ಎಲ್ಲಿ ಬರುತ್ತಾರೆ? , ಅಲ್ಲದೆ ಸಂಪದದಲ್ಲಿ ಗಮನಿಸಿ. ಇಲ್ಲಿಯವರೆಗು ಹೊಸರುಚಿ ಬಗ್ಗೆ ಬರೆದಿರುವವರು , ಹೆಚ್ಚಿನ ಸಂಖ್ಯೆಯಲ್ಲಿ ಗಂಡಸರೆ. ಹೆಂಗಸರು ಹೊಸರುಚಿಯ ಬಗ್ಗೆ ಬರೆದಿರುವದನ್ನು ನೋಡಿದ್ದೀರ?" ಎಂದರು. ನಾನು ಹೌದಲ್ಲವೆ ಅಂದುಕೊಂಡು ಮತ್ತೆ
"ಅದು ಸರಿ ಸ್ವಾಮಿಗಳೆ ನೀವು ಸದಾ ಮಠ, ಉಪದೇಶ ಇವನ್ನೆಲ್ಲ ಬಿಟ್ಟು , ಈ ಅಡುಗೆ ಮಾಡುವ ಸಮ್ಮರ್ ಕ್ಯಾಂಪ್ ಏಕೊ ಯೋಜಿಸುತ್ತಿದ್ದೀರಿ?" ಎಂದೆ
ಅದಕ್ಕವರು ಸ್ವಲ್ಪ ಕಾಲ ಕಣ್ಣು ಮುಚ್ಚಿ ಪುನಃ ತೆಗೆದು "ನೋಡಿ ಯೋಗಿಗಳ ಮನಸಿನ ಆಳ ಅರಿಯಲು ನೀವು ಪ್ರಯತ್ನ ಪಡಬಾರದು ನೀವು ಕೇಳಿಲ್ಲವೆ, ದೇವಮೂಲ ಋಷಿಮೂಲ ಹುಡುಕಲು ಹೋಗಬಾರದು " ಎಂದರು.
ನನಗೆ ಕನ್ ಪ್ಯೂಸ್ ಆಯಿತು ಅದಕ್ಕು ಇದಕ್ಕು ಏನು ಸಂಬಂಧ ಎಂದು ಆದರೆ ಕೇಳಲಿಲ್ಲ. ಮತ್ತೆ ಯಾರಾದರು ಪ್ರಶ್ನೆ ಕೇಳುತ್ತಾರ ಅಂತ ನೋಡಿದೆ ಯಾರಿಗು ಯಾವ ಅನುಮಾನವು ಇದ್ದಂತಿಲ್ಲ.
ಈಗ ಕಾಫಿ ಕುಡಿದು ಸುತ್ತಲು ಸುತ್ತಾಡುತ್ತಿದ್ದೆ. ಬಹಳಷ್ಟು ಜನ ಪರಿಚಿತರು , ಕೆಲವರನ್ನು ಮೊದಲ ಸಾರಿ ನೋಡುತ್ತಿರುವುದು. ನಾನು ಜಯಂತ್ ಮಾತನಾಡುತ್ತಿರುವಾಗ ಸಪ್ತಗಿರಿ ಎದುರಿಗೆ ಬಂದರು. ನಾನು ಆಶ್ಚರ್ಯದಿಂದ
"ಇದೇನು ನೀವು ಬಂದಿರುವಿರಿ, ನಿಮಗೇಕೆ ಕ್ಯಾಂಪ್, ಮನೆಯಲ್ಲಿ ದಿನಾ ನೀವೆ ಅಲ್ಲವೆ ಅಡಿಗೆ ಮಾಡುವುದು " ಎಂದೆ.
ಜಯಂತರು "ಎಲ್ಲಿ ಅವರಿಗಿನ್ನು ಮದುವೆ ಆಗಿಲ್ಲವೆ " ಎಂದರು.
ನಾನು "ಆಗದೆ ಏನು ಹಿಂದೊಮ್ಮೆ ಅವರೆ ಬರೆದಿಲ್ಲವೆ ಅಡುಗೆ ಮಾಡಲು ಬೇಸರವೆಂದೆ ಹೆಂಡತಿ ಮಕ್ಕಳ ಜೊತೆ ಯಾವುದೊ ಮದುವೆಗೆ ಹೋಗಿದ್ದು " ಎಂದೆ.
ಸಪ್ತಗಿರಿ ನಗುತ್ತ " ನೀವು ಸರಿಯಾಗಿ ಹೇಳಿದಿರಿ, ನಾನು ಅಡುಗೆ ಮಾಡುವಾಗ ದಿನವು ಮನೆಯಲ್ಲಿ ಹಂಗಿಸುತ್ತಾರೆ, ಮದುವೆಯಾಗಿ ಒಂದು ಮಗುವಾದರು ಇನು ಸರಿಯಾಗಿ ಅಡಿಗೆ ಮಾಡಲು ಕಲಿಯಲಿಲ್ಲ, ಹೋಗಿ ಗಣೇಶರಲ್ಲಿ ಕಲಿತು ಬನ್ನಿ ಎಂದು ಅದಕ್ಕೆ ಬಂದೆ" ಎಂದರು.
ಈಗ ಜಯಂತ್ ಸಪ್ತಗಿರಿಗೆ
" ಮತ್ತೆ ನೀವು ಕಳೆದ ತಿಂಗಳು ಬರೆದಿದ್ದೀರಿ, ಹುಡುಗಿ ನೋಡಿದ್ದೇನೆ ಎಲ್ಲರು ಒಪ್ಪಿದರೆ ಮದುವೆಯಾಗುತ್ತೇನೆ ಎಂದು, ನಿಮ್ಮ ಪತ್ನಿ ಮತ್ತು ಮಗಳು ಈ ನಿಮ್ಮ ಮದುವೆಗೆ ಒಪ್ಪಿದ್ದಾರ?" ಎಂದು ಪ್ರಶ್ನಿಸಿದರು. ಎಲ್ಲರಿಗು ಕನ್ ಪ್ಯೂಸ್ ಆಯಿತು.
ನಾನು ಪಕ್ಕಕ್ಕೆ ಬಂದೆ. ಸ್ವಲ್ಪ ವಯಸ್ಕರೊಬ್ಬರು ಹೇಳುತ್ತಿದ್ದರು
"ನಾನು ಇರಲಿ ಎಂದು ಪುಳಿಯೋಗರೆ ಮತ್ತು ಬಿಸಿಬೇಳೆಬಾತ್ ಎರಡನ್ನು ಮಾಡಿಬಿಡುತ್ತೇನೆ ಯಾವುದು ರುಚಿ ಎಂದು ನೋಡೋಣ"
ನನಗೆ ಅರ್ಥವಾಯಿತು ಇವರು ಹಂಸಾನಂದಿಯವರು ಎಂದು. ಆಶ್ಚರ್ಯ ಇವರು ಯಾವಗ ಭಾರತಕ್ಕೆ ಬಂದರು. ಹೋಗಿ ಮಾತನಾಡಿಸಿದೆ. ಅಷ್ಟರಲ್ಲಿ ಗಟ್ಟಿಯಾದ ದ್ವನಿ ಕೇಳಿಸಿತು.
"ನಮಗೆ ಈ ಪುಳ್ಚಾರ್ ಅಡುಗೆ ಎಲ್ಲ ಸರಿ ಹೋಗಲ್ಲ, ನಾನು ಸರಿಯಾಗಿ ರಾಗಿಮುದ್ದೆ, ಹಾಗು ಸೊಪ್ಪಿನ ಎಸರು ಮಾಡಿಬಿಡುತ್ತೇನೆ ಬೇಕಾದರೆ ಎಲ್ಲರು ರುಚಿ ನೋಡಿ" ಎಂದು, ಓಹೊ ಹೊಳೆನರಸಿಪುರದ ಮಂಜುನಾಥರು. ಸರಿ ಬಹಳ ಜನ ಬಂದಿದ್ದಾರೆ. ಅತ್ತಿತ್ತ ನೋಡುವ ವೇಳೆಗೆ ಚಿಕ್ಕು ಕಾಣಿಸಿದರು ನಾನು ಗಾಭರಿಯಿಂದ
"ಇದೇನು ಚಿಕ್ಕು ಮದುವೆಯಾಗಿ ಆರಾಮವಾಗಿರುವುದು ಬಿಟ್ಟು ಇಲ್ಲಿ ಬಂದಿದ್ದೀರಿ" ಎಂದೆ, ಅದಕ್ಕವರು,
"ಏನು ಮಾಡೋದು ಪಾರ್ಥಾವ್ರೆ, ಮದುವೆ ಆಗುವಾಗ ಅಡಿಗೆ ಬರುತ್ತೆ ಅಂತ ಸುಳ್ಳು ಹೇಳಿಬಿಟ್ಟೆದ್ದೆ, ಒಂದು ವಾರದಲ್ಲೆ ನಮ್ಮವರಿಗೆ ಸತ್ಯ ಗೊತ್ತಾಗಿ ಹೋಯಿತು, ಎಲ್ಲಾದರು ಹೋಗಿ ಅಡುಗೆ ಕಲಿತು ಬನ್ನಿ ಇಲ್ಲದಿದ್ದರೆ ದಿನವು ಹೋಟೆಲ್ ಊಟವೆ ಗತಿ ಅಂದರು, ಅದಕ್ಕೆ ಈ ಕ್ಯಾಂಪಿಗೆ ಬಂದೆ, ನಾನು ಸರಳವಾಗಿ ಒಂದು ಅನ್ನ ಮತ್ತು ಸಾಂಬಾರ್ ಮಾಡುವುದು ಕಲಿತು ಹೋದರೆ ಸಾಕಾಗಿದೆ" ಎಂದರು ಸಪ್ಪೆಯಾಗಿ. ಛೇ! ಮದುವೆಯಾಗಿ ಈ ಕಷ್ಟ ಬಂದಿತಲ್ಲ ಅಂದುಕೊಂಡೆ.
ಅಷ್ಟರಲ್ಲಿ ಮೈಕಿನಲ್ಲಿ ಗಟ್ಟಿಯಾಗಿ ಅಂಡಾಂಡಭಂಡ ಸ್ವಾಮಿಗಳ ದ್ವನಿ ಕೇಳಿಸಿತು, ಈಗ ನೀವೆಲ್ಲ ಭಕ್ತಿಯಿಂದ ನಮಗೆ ಇಷ್ಟವಾದ ನಮ್ಮ ಭಜನೆಗೀತೆ ಹಾಡಿ ನಂತರ ಎಲ್ಲರು ಮೇಲೆ ಹೊರಡಿ ಅಲ್ಲಿ ನಿಮ್ಮ ಟ್ರೈನಿಂಗೆ ಎಲ್ಲ ಏರ್ಪಾಡಾಗಿದೆ ಎಂದರು. ರಾಮಮೋಹನರು ಹಿಂದೊಮ್ಮೆ ಬರೆದ ಸ್ವಾಮಿಗಳ ಬಗೆಗಿನ ಭಕ್ತಿಗೀತೆಯನ್ನು ಅಂಡಾಂಡಭಂಡರೆ ಹೇಳಿಕೊಟ್ಟರು ಎಲ್ಲರು ತಾಳಬದ್ದವಾಗಿ ಚಪ್ಪಾಳೆ ತಟ್ಟುತ್ತ ರಾಗವಾಗಿ ಹಾಡನ್ನು ಹಾಡಿದರು.
ಡೊಂಗಿ ದಾಸರಿವರು
ಕಲಿಯುಗ ಡೊಂಗಿದಾಸರಿವರು||
ಹಣೆಯಲಿ ಉದ್ದುದ್ದ ನಾಮವ ತೀಡುತ
ಪರಹಿತ ಚಿಂತನೆ ಬಾಯಲಿ ಹಾಡುತ
ಮನದಲಿ ಲೋಭದ ಸ್ವಾರ್ಥದಿ ತೇಲುತ
ಒಳಗೊಂದು ಹೊರಗೊಂದು ಕಾಯಕ ಚರಿಸುವ ||ಡೊಂಗಿ ದಾಸ.||
ನಡೆಯಂತೆ ನುಡಿಯದು ಇರಬೇಕೆನ್ನುತ
ನಡೆ ನುಡಿ ಇಬ್ಬಗೆ ತುಂಬಿ ತೋರುತ
ಮಾತಿನ ಅರಮನೆ ಬೆರಗನು ಮೆರೆಸುತ
ಬಾಳಿನ ತತ್ವವ ಗಾಳಿಗೆ ತೂರುವ ||ಡೊಂಗಿ ದಾಸ.||
ಈಗ ಎಲ್ಲರು ಮೇಲೆ ಹೊರಟರು. ನಾನು ಮೇಲೆ ಹತ್ತಿ ಹೋದೆ, ಅಲ್ಲಿ ದೊಡ್ಡದಾದ ಹಾಲ್ ಒಟ್ಟೊಟ್ಟೊಗೆ ಇಪ್ಪತ್ತು ಕಡೆ ಅಡಿಗೆಮಾಡಲು ಅನುಕೂಲವಾಗುವಂತೆ ಟೇಬಲ್ ಗಳನ್ನ ಜೋಡಿಸಲಾಗಿತ್ತು. ಇಷ್ಟ ಪಟ್ಟರೆ ಇಬ್ಬಿಬ್ಬರು ಒಂದಾಗಿ ಒಂದು ಟೇಬಲ್ ನಲ್ಲಿ ಆಡುಗೆ ಮಾಡಲು ಅವಕಾಶ ಜೋಡಿಯಾಗಿ! ಯಾವುದೆ ನಿಯಮಗಳಿಲ್ಲ. ಗೋಡೆಯ ಪಕ್ಕ ಉದ್ದಕ್ಕೆ ಅಡುಗೆ ತಿಂಡಿಗಳಿಗೆ ಬೇಕಾಗುವ ಎಲ್ಲ ದಿನಸಿ ಹಾಗು ತರಕಾರಿಗಳನ್ನು ಜೋಡಿಸಿಡಲಾಗಿತ್ತು.
ಈಗ ಅಂಡಾಂಡಭಂಡರು " ಈಗ ಸುರೇಶ್ ಆತ್ರಾಡಿ ಹೆಗ್ಡೆಯವರು, ನಿಮ್ಮೆಲ್ಲರಿಗೂ ವೀಕ್ಷಕರಾಗಿರುತ್ತಾರೆ, ಮತ್ತು ಅವರು ತಮ್ಮ ಒಂದು ದ್ವಿಪದಿ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡುತ್ತಾರೆ" ಎಂದು ಪ್ರಕಟಿಸಿದರು.
ಆಸುರವರು ಎದ್ದು ನಿಂತು "ಎಲ್ಲರು ನೆನಪಿಡಿ ನಾನು ಇಲ್ಲಿ ತೀರ್ಪುಗಾರನಾಗಿರುವದಿಲ್ಲ, ನಿಮ್ಮ ಅಡುಗೆಯ ರುಚಿಯನ್ನು ನಿರ್ಣಯಿಸುವನು ನಾನಲ್ಲ' ಎಂದು ತಿಳಿಸಿ , 'ನಾನೀಗ ನನ್ನ ಕವನ ಓದುವೆ ಎಲ್ಲರು ಗಮನವಿಟ್ಟು ಕೇಳಿ' ಎನ್ನುತ್ತ ತಮ್ಮ ಕವನ ಓದಿದರು.
"ನೀವೀಗ ನಿಮ್ಮ ಅಡುಗೆಯ ರುಚಿಯ ಕಡೆ ಮನಸು ಇಡಿ
ಕಡೆಯಲ್ಲಿ ಗಣೇಶರು ಕೊಡುವ ಪಂಚಿನ ಕಡೆ ಗಮನ ಕೊಡಿ"
ಎನ್ನುತ್ತ , ಮತ್ತೆ ಮತ್ತೆ ಅದೇ ಎರಡು ಸಾಲುಗಳನ್ನು ಹೇಳಿದರು.
ಅದೇಕೊ ಅಂಡಾಂಡಭಂಡಸ್ವಾಮಿಗಳು ನಡುವೆ ಬಂದು, ' ಈಗ ಕ್ಯಾಂಪ್ ಪ್ರಾರಂಬವಾಯಿತು, ಎಲ್ಲರು ನಿಮಗೆ ನಿಗದಿಪಡಿಸಿರುವ ಅಡುಗೆ ಪ್ರಾರಂಬಿಸಿ' ಎಂದರು
ಎಲ್ಲರು ಅವರಿಗೆ ಇಷ್ಟವಾಗುವ ಚೆನ್ನಾಗಿ ಬರುವ ತಿಂಡಿಗಳನ್ನು ಆಯ್ದುಕೊಂಡರು, ಅಂಡಾಂಡಭಂಡರು ನನ್ನ ಬಳಿ ಬಂದು
"ಪಾರ್ಥರೆ ನೀವು ಏನು ಮಾಡುತ್ತೀರಿ" ಎಂದು ಕೇಳಿದರು.
ನಾನು ಅನುಮಾನದಿಂದ
" ನಾನು ಕೋಡುಬಳೆ ಮಾಡಲೆ " ಎಂದೆ. ಅವರು ಏಕೊ ಗೋಡೆಯಲ್ಲಿ , ಒಂದು ಹಲ್ಲು ಮುರಿದು ನಿಂತಿದ್ದ, ಏಕದಂತ ಗಣೇಶನ ಚಿತ್ರ ನೋಡಿ, ಪುನಃ ನನ್ನತ್ತ ನೋಡುತ್ತ
"ಬೇಡ ಬೇಡ , ಅದರ ಬದಲು ನೀವು ಕಲ್ಲಂಗಡಿ ಹಣ್ಣಿನ ದೋಸೆ ಮಾಡಿ, ಮಾಡುವ ವಿಧಾನ ಇಲ್ಲಿದೆ ನೋಡಿ ' ಎನ್ನುತ್ತ ನನ್ನ ಕೈಗೆ ಕಂಫ್ಯೂಟರ್ ನಲ್ಲಿ ಪ್ರಿಂಟ್ ತೆಗೆದ ಒಂದು ಪೇಪರ್ ಕೊಟ್ಟರು. ಸರಿಯೆ ಎನ್ನುತ್ತ ಸಿದ್ದನಾದೆ ಅದರಲ್ಲಿರುವ ವಿವರಗಳನ್ನೆಲ್ಲ ಓದಿಕೊಂಡು, ಸುಮಾರು ಮುವತ್ತು ದೋಸೆಗಳನ್ನು ಮಾಡಿದರೆ ಸರಿಹೋಗುತ್ತೆ ಎಂದುಕೊಂಡು ಅದಕ್ಕೆ ಬೇಕಾಗುವ ಸಾಮಗ್ರಿಯ ಸಿದ್ದತೆ ನಡೆಸಿದೆ.
ಪಕ್ಕದಲ್ಲಿ ಜಯಂತ್ ! ಕುತೂಹಲಕ್ಕೆ ಪ್ರಶ್ನಿಸಿದೆ ನೀವು ಏನು ಮಾಡುತ್ತೀರಿ ಎಂದು , ಅದಕ್ಕವರು 'ನಾನು ರಾಘವೇಂದ್ರ ಮಠದಲ್ಲಿ ಮಾಡುವ, ' ಹಯಗ್ರೀವ' ಎಂದರೆ ನನಗಿಷ್ಟ ನಾನು ಅದನ್ನೆ ಮಾಡುತ್ತೇನೆ ' ಎಂದರು.
ಸರಿ ಎಲ್ಲ ಪ್ರಾರಂಬವಾದಂತೆ, ಅಂಡಾಂಡಭಂಡರು ಎಲ್ಲರ ನಡುವೆ ಓಡಾಡುತ್ತ, ಅವರ ಅಡುಗೆಗಳನ್ನು ಗಮನಿಸುತ್ತ, ಸಲಹೆಗಳನ್ನು ಕೊಡುತ್ತಿದ್ದರು, ಕಡೆಗೆ ಬಂದಂತೆ ಕೆಲವರ ಅಡುಗೆ ಗಮನಿಸಿ, 'ಇನ್ನು ಸ್ವಲ್ಪ ಉಪ್ಪು ಹಾಕಬೇಕು', 'ನೋಡಿ ಸ್ವಲ್ಪ ಏಲಕ್ಕಿಪುಡಿ ಹಾಕಿಬಿಡಿ ಒಳ್ಳೆ ಘಂ ಎನ್ನುವ ಸುವಾಸನೆ ಬರುತ್ತೆ ' ಎಂದು ನಾನಾ ರೀತಿಯ ಸಲಹೆ ಕೊಡುತ್ತ ಓಡಾಡುತ್ತಿದ್ದರು.
ನಾನು ಸೂಚನೆಗಳನ್ನು ಅನುಸರಿಸುತ್ತ ಸುಮಾರು ಮೂವತ್ತು ನಲವತ್ತು ದೋಸೆಗಳನ್ನು , ಅದಕ್ಕೆ ಸೈಡ್ ಆಗಿ ಒಂದು ದೊಡ್ಡ ಬಟ್ಟಲು ಚಟ್ನಿಯನ್ನು ತಯಾರಿಸಿದೆ . ಅದರ ಸುವಾಸನೆ ನನ್ನ ನಾಲಿಗೆಯಲ್ಲಿ ನೀರೂರಿಸುತ್ತಿತ್ತು, ಆದರೆ ಅದನ್ನು ತೋರಗೋಡಲಿಲ್ಲ. ಎಲ್ಲರು ಅವರ ಅಡುಗೆ ಮುಗಿಸುವ ಹೊತ್ತಿಗೆ ಎರಡು ಗಂಟೆಯಾಗುತ್ತು ಬಂದಿತ್ತು.
ಅಂಡಾಂಡಭಂಡರು "ಈಗ ನೀವು ಮಾಡಿರುವ ಎಲ್ಲ ಅಡುಗೆಯನ್ನು ಇಲ್ಲಿ ಜೋಡಿಸಿರುವ ಟೇಬಲ್ ಮೇಲೆ ಸಾಲಾಗಿ ತಂದು ಜೋಡಿಸಿ, ನಿಮಗೆ ಕೊಟ್ಟಿರುವ ಸೀರಿಯಲ್ ನಂಬರ್ ಪ್ರಕಾರ ಜೋಡಿಸಿ" ಎಂದರು. ಎಲ್ಲರು ಉತ್ಸಾಹದಿಂದ , ಅವರವರು ಮಾಡಿರುವ, ಸಿಹಿಗಳು, ಪಾಯಸ, ಕರಿದತಿಂಡಿ, ಅನ್ನ, ಮುದ್ದೆ, ಸಾಂಬರ್, ಸೊಪ್ಪಿನ ಸಾರು, ಕೋಸಂಬರಿ, ಪಲ್ಯಗಳು ಎಲ್ಲವನ್ನು ತಂದು ಒಂದರಪಕ್ಕ ಒಂದರಂತೆ ಜೋಡಿಸಿದರು. ನಾನು ಅಂದುಕೊಂಡೆ ,
"ಮನೆಯಿಂದ ಊಟದ ಡಬ್ಬಿ ತರದಿದ್ದರು ನಡೆಯುತ್ತಿತ್ತು, ಇಲ್ಲಿರುವ ಅಡುಗೆ ಎಲ್ಲರಿಗೂ ಬೇಕಾದಷ್ಟು ಆಗುತ್ತದೆ' ಎಂದು. ಆಗ ಅಂಡಾಂಡಭಂಡರು
"ಸರಿ ಈಗ ಎಲ್ಲರೂ ಕೆಳಗೆ ಹೋಗಿ , ಸ್ವಚ್ಚವಾಗಿ ಮುಖತೊಳೆದು, ಪ್ರೆಶ್ ಆಗಿ, ನೀವು ಮನೆಯಿಂದ ತಂದಿರುವ ಡಬ್ಬಿಗಳನ್ನು ತಂದುಬಿಡಿ" ಎಂದರು.
ಆಸುರವರು ನಮ್ಮೆಲ್ಲರನ್ನು ಏಕೊ ಸ್ವಲ್ಪ ಕರುಣೆಯಿಂದ ನೋಡುತ್ತಿದ್ದರು. ನನಗೆ ಏಕೆಂದು ಅರ್ಥವಾಗಲಿಲ್ಲ. ಸರಿ ನಾವೆಲ್ಲ ಕೆಳಗೆ ಹೊರಟೆವು. ಕೆಳಗೆ ಬಂದು ಅಲ್ಲಿದ್ದ ವಾಶ್ ಬೇಸಿನ್ನಿನಲ್ಲಿ ಕೈಗಳನ್ನು, ಮುಖವನ್ನು ತೊಳೆದು, ಟವೆಲ್ ನಿಂದ ಒರೆಸಿಕೊಂಡು, ಒಬ್ಬರಿಗೊಬ್ಬರು ಮಾತನಾಡಿಕೊಂಡೆವು. ಪ್ರತಿಯೊಬ್ಬರು ತಾವು ಮಾಡಿರುವ ಅಡುಗೆ ರುಚಿಯಾಗಿದೆಯಿಂದು ಮೇಲೆ ಹೋದನಂತರ ಬೇಕಾದರೆ ನೋಡಬಹುದೆಂದು ವಾದಿಸುತ್ತಿದ್ದರು. ಹೀಗೆ ಹತ್ತಿಪ್ಪತ್ತು ನಿಮಿಶ ಕಳೆದು ಎಲ್ಲರು ಅವರವರ ಡಬ್ಬಿಗಳನ್ನು ಹಿಡಿದು ಮೇಲೆ ಬಂದೆವು.
ಮೇಲಿನ ಹಾಲಿಗೆ ಬರುವಾಗ ಏಕೊ ಪಿಚ್ ಅನ್ನಿಸಿತು, ಅಲ್ಲಿ ಏನೊ ಒಂದು ಮೋಸದ ವಾತವರಣವಿರುವಂತೆ ಅನ್ನಿಸಿತು, ಆದರೆ ಏನೆಂದು ಅರ್ಥವಾಗಲಿಲ್ಲ. ಸರಿ ಎಂದು ನೋಡಿದರೆ , ಅಂಡಾಂಡಭಂಡರು ನಾವು ಜೋಡಿಸಿದ್ದ ಮಾಡಿಟ್ಟ ಅಡುಗೆಯ ಟೇಬಲ್ಲಿನ ಹಿಂದೆ ಹಾಕಿರುವ ಕುರ್ಚಿಯಲ್ಲಿ ಹಾಗೆ ಕುಳಿತು ತೂಕಡಿಸುತ್ತಿದ್ದಾರೆ, ಆಸುರವರು ಗಂಭೀರವಾಗಿಯೆ ಕುಳಿತ್ತಿದ್ದಾರೆ.
ನಾನು ಅಂಡಾಂಡಭಂಡರ ಎದುರಿಗೆ ನಿಂತು " ಸ್ವಾಮಿ ಈಗ ಎಲ್ಲರು ಬಂದೆವು, ನೀವೀಗ ರುಚಿ ನೋಡಿ ಯಾರು ಚೆನ್ನಾಗಿ ಮಾಡಿದ್ದಾರೆ ತಿಳಿಸಿ, ನಂತರ ನಾವು ಸಹ ಎಲ್ಲರು ಮಾಡಿರುವ ಅಡುಗೆಯನ್ನು ಹಂಚಿಕೊಂಡು ತಿನ್ನುವೆವು. ಮನೆಯಿಂದ ಈ ಡಬ್ಬಿಯನ್ನು ತರದಿದ್ದರು ಆಗುತ್ತಿತ್ತು ಅಲ್ಲವೆ" ಎಂದೆ.
ಅಂಡಾಂಡಭಂಡರು ಏಕೊ ಉತ್ತರವನ್ನೆ ಕೊಡಲಿಲ್ಲ, ಹಾಗೆ ತೂಕಡಿಸುತ್ತಿದ್ದಾರೆ. ನಾನು ಮತ್ತೆ ಮತ್ತೆ ಸ್ವಾಮಿ ಎಂದು ಕೂಗಿದೆ , ಉತ್ತರವಿಲ್ಲ. ನಾನು ನಿದಾನವಾಗಿ ನಾನು ಮಾಡಿ ತಂದಿಟ್ಟಿದ್ದ ದೋಸೆ ಹಾಗು ಚಟ್ನಿಯ ಪಾತ್ರೆಯಮುಚ್ಚಲ ತೆಗೆದು ಬಗ್ಗಿ ನೋಡಿದೆ
"ಅಲ್ಲಿ ಏನಿದೆ? ಖಾಲಿ!"
ಅರೆ ನಾನು ಮಾಡಿದ್ದ , ಸುಮಾರು ನಲವತ್ತು ದೋಸೆಗಳೆಲ್ಲಿ , ಏಕೊ ಅನುಮಾನವಾಯಿತು, ಪಕ್ಕದ ಪಾತ್ರೆ ಮುಚ್ಚಲ ತೆಗೆದು ನೋಡಿದೆ, ಅದು ಅದೇ ಪರಿಸ್ಥಿಥಿ.ನನ್ನ ಮುಖದಲ್ಲಿನ ಗಾಭರಿ ನೋಡಿ, ಎಲ್ಲರು ಮುಂದೆ ಬಂದು ಅವರವರ ಪಾತ್ರೆ ತೆಗೆದು ನೋಡಿದರೆ , ಏನಿದೆ ಎಲ್ಲರು ಮಾಡಿಟ್ಟ ಅಡುಗೆಯೆಲ್ಲ ಮಾಯ. ನನಗೆ ಅರ್ಥವಾಗಿತ್ತು, ನಮ್ಮನ್ನೆಲ್ಲ ಕೆಳಗೆ ಕಳಿಸಿದ ಈ ಅಂಡಾಂಡಭಂಡ ಸ್ವಾಮಿಗಳು, ಎಲ್ಲವನ್ನು 'ಸ್ವಾಹ' ಮಾಡಿದ್ದಾರೆ
ನಾನು ಆಸುರವರತ್ತ ನೋಡುತ್ತ
"ಇದೇನು ಮೋಸ, ನಾವು ಮಾಡಿದ್ದ ಅಡುಗೆಯೆಲ್ಲ ಎಲ್ಲಿ ಒಬ್ಬರೆ ತಿಂದು ಹಾಕಿದರೆ?, ನೀವೇನು ಹೇಳಲಿಲ್ಲವೆ?" ಎಂದು ಜೋರಾಗಿ ಕೇಳಿದೆ, ಅದಕ್ಕವರು
"ನಾನು ಬೆಳಗಿನಿಂದಲೆ ಹೇಳುತ್ತಿದ್ದೀನಿ, ನಾನು ಬರಿ ವೀಕ್ಷಕನೆಂದು , ಯಾರು ಏನು ಮಾಡಿದರು ನಾನು ಬರಿ ವೀಕ್ಷಿಸುತ್ತೇನೆ ಅಷ್ಟೆ. ನನಗೇನು ಸಂಬಂಧವಿಲ್ಲ ' ಎಂದರು. ಸರಿಯಾಗಿ ಕನ್ನಡ ವ್ಯಾಕರಣ ಕಲಿಯದ ಬಗ್ಗೆ ನನಗೆ ಸಿಟ್ಟು ಬಂದಿತು.
ಮತ್ತೆ ಅವರೇ ಅಂದರು " ಅಲ್ಲದೆ ನಾನು ಬೆಳಗ್ಗೆಯೆ ನನ್ನ ಕವನದಲ್ಲಿ ಹೇಳಿರುವೆ , ಕಡೆಯ ಪಂಚಿನ ಬಗ್ಗೆ ಎಚ್ಚರದಿಂದಿರಿ ಎಂದು ನೀವ್ಯಾರು ಕೇಳಲಿಲ್ಲ , ನಾನೇನು ಮಾಡಲಿ " ಎಂದರು.
ನನಗೀಗ ಎಲ್ಲವು ಅರ್ಥವಾಗಿತ್ತು,. ಈ ಅಂಡಾಂಡಭಂಡರು ತಮ್ಮ ಬೃಹುತ್ ಹೊಟ್ಟೆ ತುಂಬಿಸಲು , ನಮ್ಮನ್ನೆಲ್ಲ ಕರೆದು, ಈ ಸಮ್ಮರ್ ಕ್ಯಾಂಪಿನ ನಾಟಕವಾಡಿದ್ದಾರೆ. ಬೆಳಗ್ಗೆ ಕೇಳಿದರೆ , ಋಷಿಗಳ ಮೂಲ ಹುಡುಕಬಾರದು ಎಂದು ಕತೆ ಹೇಳಿದರು ಅಷ್ಟೆ , ಅಯ್ಯೊ ನನ್ನ ಪೆದ್ದುತನವೆ ಎಂದು ಸಂಕಟವಾಯಿತು. ಮತ್ತೇನು ಮಾಡುವುದು . ಎಲ್ಲರು ಅವರವರ ಬುದ್ದಿಯನ್ನು ಹಳಿದುಕೊಂಡು, ಮನೆಯಿಂದ ತಂದಿದ್ದ ಡಬ್ಬಿಗಳನ್ನು ತೆಗೆದು, ಅದರಲ್ಲಿದ ತಿಂಡಿಗಳನ್ನು ಪರಸ್ಪರ ಹಂಚಿಕೊಂಡು ತಿಂದೆವು.
ಸ್ವಲ್ಪ ಹೊತ್ತಾಯಿತು. ನಮ್ಮ ಊಟ ಮುಗಿಸುತ್ತಿರುವಂತೆ, ಅಂಡಾಂಡಭಂಡರಿಗೆ ಎಚ್ಚರವಾಯಿತು ಅನ್ನಿಸುತ್ತೆ , ಮತ್ತೆ ಅವರು ಎದ್ದು ನಿಂತು
"ನನ್ನ ಆತ್ಮೀಯರೆ, ನೀವೆಲ್ಲ ಬಂದು ಬಾಗವಹಿಸಿ, ಈ ಅಂಡಾಂಡಭಂಡ ಕ್ಯಾಂಪ್ ಯಶಸ್ವಿಯಾಗಿದೆ. ಈ ಕ್ಯಾಂಪನ್ನು ಮತ್ತೆ ಮುಂದಿನ ಬಾನುವಾರ ಮಲ್ಲೇಶ್ವರದಲ್ಲಿ ಆಯೋಜಿಸುತ್ತಿದ್ದೇವೆ. ನೀವು ತಪ್ಪಿಸದೆ ಬಂದು ಅಲ್ಲಿಯೂ ಬಾಗವಹಿಸಬೇಕು. ಮರೆಯದೆ ನಿಮ್ಮ ಗೆಳೆಯರನ್ನು ಕರೆತಂದು ಹೊಸ ಹೊಸ ರುಚಿಗಳನ್ನು ಕಂಡುಹಿಡಿಯಬೇಕು " ಎಂದು ಏನೇನೊ ಹೇಳುತ್ತಿದ್ದರು. ನನಗೆ ಕೋಪವೇರಿ, ಸಹನೆ ತಪ್ಪಿಹೋಯಿತು
"ರೀ ಸ್ವಾಮಿ ಹೋಗ್ರಿ , ಮುಂದಿನವಾರ ಬೇರೆ ಬರಬೇಕಂತೆ, ಅಲ್ಲ ನೀವು ನಮ್ಮನ್ನೇನು ಮಾಡಿದ್ದೀರಿ, ನಿಮ್ಮ ಗುಡಾಣಹೊಟ್ಟೆ ತುಂಬಿಸಲು, ಉಪಾಯಮಾಡಿ ನಮ್ಮನ್ನೆಲ್ಲಾ ಕರೆಯುತ್ತೀರಿ, ನನಗೆ ಬುದ್ದಿ ಇಲ್ಲವ ನಾನು ಬರಲ್ಲ" ಎಂದು ಕೂಗಾಡುತ್ತ ಹೊರಟೆ.
ಅದಕ್ಕೆ ಸ್ವಾಮಿಗಳು " ಪಾಪ , ಇವನಿಗೆ ನಮ್ಮ ಮಹಿಮೆ ತಿಳಿಯದು. ಇಂದು ಅಜ್ಞಾನದಲ್ಲಿರುವ ಇವನಿಗೆ ಮುಂದು ಖಂಡೀತ ನಾವು ಜ್ಞಾನವನ್ನು ಕರುಣಿಸುತ್ತೇವೆ. ಇವನು ತಪ್ಪದೆ ನಮ್ಮ ಸಮ್ಮರ್ ಕ್ಯಾಂಪಿನಲ್ಲಿ ಬಾಗವಹಿಸುತ್ತಾನೆ. ಶಿಷ್ಯರೆ ನೀವೆಲ್ಲ ಹೊರಡಿ " ಎಂದರು.
-------------------------++++++++++++++++++++++++++
ಈ ತಿಳಿಹಾಸ್ಯಬರಹದಲ್ಲಿ ಹಲವು ಸಂಪದಿಗರ ಹೆಸರು ಬಳಸಿಕೊಂಡಿರುವೆ
ಅದಕ್ಕಾಗಿ ಎಲ್ಲರು ನನ್ನನ್ನು ಕ್ಷಮಿಸುವರೆಂದು ನಂಬಿದ್ದೇನೆ
ಯಾರ ಮನಸಿಗಾದರು ನೋವಾದಲಿ ಕ್ಷಮೆ ಇರಲಿ.
Rating
Comments
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by makara
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by kavinagaraj
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by venkatb83
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by partha1059
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by nanjunda
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by venkatb83
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by ಗಣೇಶ
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by ಗಣೇಶ
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by ಗಣೇಶ
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by Jayanth Ramachar
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by harishsharma.k
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by hvravikiran
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
In reply to ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್ by hamsanandi
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್
ಉ: ಗಣೇಶ(ಅರ್ಥಾಥ್ ಅಂಡಾಂಡಭಂಡ)ರ ಸಮ್ಮರ್ ಕ್ಯಾಂಪ್