'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ)
ಆ ದಿನ ರಾತ್ರಿ ಸುಮಾರು ಒಂಭತ್ತು ಗಂಟೆಯ ಸಮಯ ವಾಗಿರಬಹುದು. ಭೀಮಯ್ಯ ರಾಮನನ್ನು ಕರೆದು ನಾಲ್ಕಾಣೆಯನ್ನು ಕೊಟ್ಟು ಚಿಮಣೀ ಎಣ್ಣೆ ಸಕ್ಕರೆ ಚಹಾಪುಡಿ ಮತ್ತು ಎಲೆ ಅಡಿಕೆಗಳನ್ನು ನಾರಾಯಣಪ್ಪನ ಅಂಗಡಿ ಯಿಂದ ತರಲು ಹೇಳಿದರು. ರಾಮನ ಜಂಘಾಬಲವೆ ಉಡುಗಿ ಹೋಯಿತು. ಮೆಲ್ಲನೆ ಅಜ್ಜಿ ನಾಗಮ್ಮಳ ಹತ್ತಿರ ಹೋಗಿ
' ಅಜ್ಜಿ ಕತ್ತಲೆಯಾಗಿದೆ ನನಗೆ ಹೆದರಿಕೆ ಯಾಗುತ್ತೆ ನೀನೂ ನನ್ನ ಜೊತೆಗೆ ಬಾ ' ಎಂದು ಕರೆದ. ನಾಗಮ್ಮ ಮಗ ಭೀಮಯ್ಯನನ್ನು ಉದ್ದೇಶಿಸಿ
' ಭೀಮ ಕತ್ತಲೆಯಾಗಿದೆ ಆ ಮಗು ಹೇಗೆ ಅಂಗಡಿಗೆ ಹೋಗ ಬೇಕು ? ನೀನೆ ಒಂದು ಹೆಜ್ಜೆ ಹೋಗಿ ಬಾ ' ಎಂದಳು. ನಾಗಮ್ಮ ಅಷ್ಟು ಹೇಳಿದ್ದು ಸಾಕಾಯಿತು, ಭೀಮಯ್ಯ ಉರಿದು ಹೋದ. ತನ್ನ ತಾಯಿ ನಾಗಮ್ಮಳಿಗೆ
' ಅಮ್ಮ ನೀನೇ ಅವನನ್ನು ಮುದ್ದು ಮಾಡಿ ಹಾಳು ಮಾಡಿದ್ದೀ, ಕತ್ತೆಯ ವಯಸ್ಸಾಗಿದೆ ಹೆಣ್ಣಿಗ, ಅವನಿಗೆ ಧೈರ್ಯ ಬರುವುದು ಯಾವಾಗ ? ಅವನೆ ಅಂಗಡಿಗೆ ಹೋಗಿ ಬರಬೇಕು ಎಂದು ಗುಡುಗಿದರು. ಉಪಾಯ ವಿಲ್ಲದೆ ರಾಮ ಅಂಗಡಿಗೆ ಹೊರಟ.
ಇದನ್ನು ಗಮನಿಸಿದ ನಾಗಮ್ಮ ' ತಡಿಯೋ ರಾಮ ನಾನೂ ಜೊತೆಗೆ ಬರುತ್ತೇನೆ ' ಎಂದು ಮೊಮ್ಮಗನ ಜೊತೆ ಹೋಗಲು ಹವಣಿಸಿದಳು.
' ಕೂಡದು ಆತ ಒಬ್ಬನೆ ಅಂಗಡಿಗೆ ಹೋಗಿ ಬರಬೇಕು ' ಎಂದು ಭೀಮಯ್ಯ ತನ್ನ ಅಮ್ಮನಿಗೆ ಥಟ್ಟನೆ ಪ್ರತಿಕ್ರಿಯಿಸಿದರು.
ಅದು ಭೀಮಯ್ಯನ ಸುಗ್ರಿವಾಜ್ಞೆ, ಅಲ್ಲಿಗೆ ಮುಗಿಯಿತು ಯಾರೂ ಏನೂ ಮಾಡುವಂತಿಲ್ಲ ರಾಮ ನಾರಾಯಣಪ್ಪನ ಅಂಗಡಿಗೆ ಹೋಗಲೆ ಬೇಕಿತ್ತು, ಇಲ್ಲವಾದರೆ ಭೀಮಯ್ಯ ಎರಡೇಟು ಬಿಗಿದಾದರೂ ಕಳಿಸು ವವರು ರಾಮ ನಿರುಪಾಯನಾಗಿ ಚಿಮಣಿ ಎಣ್ಣೆಯ ಬಾಟಲಿ ನೀಲಿ ಬಣ್ಣದ ಕೈಚೀಲವನ್ನು ತೆಗೆದುಕೊಂಡು ಮನೆಯ ಅಂಗಳವನ್ನು ದಾಟಿದ. ಅಲ್ಲಿಂದ ಮುಂದೆ ಹೋಗಿ ಅಂಗಡಿಯಿಂದ ಸಾಮಾನು ತರುವುದು ಅಷ್ಟು ಸುಲಭ ವಿರಲಿಲ್ಲ. ರಾಮ ಮನೆಯ ಮುಂದಿನ ಉಣುಗೋಲು ದಾಟಿದ. ಗವ್ವೆನ್ನುವ ಕತ್ತಲೆ ಕಣ್ಣೆದುರು ರಾಚಿತು. ಬೇಲಿಯ ಪಕ್ಕದಲ್ಲಿಯೆ ಭರ್ಮಪ್ಪ ದೇವರು ಇದೆ. ರಾಮನಿಗೆ ಹೆಜ್ಜೆಗಳನ್ನು ಕಿತ್ತಿ ಮುಂದೆ ಇಡಲು ಹೆದರಿಕೆ. ಯಾಕೆಂದರೆ ಆ ಭರ್ಮಪ್ಪ ಉಗ್ರ ರೂಪದ ದೇವರು, ಮೇಲಾಗಿ ರಾಮನನ್ನು ಒಂದು ಅಳುಕು ಕಾಡುತ್ತಿದೆ.
*
ರಾಮ ಕಳೆದ ಬೇಸಿಗೆಯಲ್ಲಿ ಒಂದು ತಪ್ಪು ಮಾಡಿದ್ದ. ಅದು ರಾಮ ಆತನ ಅಜ್ಜಿ ಮತ್ತು ಆ ಭರ್ಮಪ್ಪ ದೇವರಿಗೆ ಮಾತ್ರ ಗೊತ್ತು. ಆ ವಿಷಯವನ್ನು ಅಜ್ಜಿಯನ್ನು ಬಿಟ್ಟು ಬೇರೆ ಯಾರ ಹತ್ತಿರವೂ ಹೇಳಿರಲಿಲ್ಲ. ಹೋಳಿ ಹುಣ್ಣಿಮೆಯ ದಿನ ಮಧ್ಯಾನ್ಹದ ಸಮಯ ರಾಮನಿಗೆ ಹಲಿಗೆಯನ್ನು ಬಾರಿಸಲು ಒದು ಗುಣಿ ಬೇಕಾಗಿತ್ತು ಭರ್ಮಪ್ಪ ದೇವರ ಪಕ್ಕದ ಕಳ್ಳಿಯ ಬೇಲಿಯ ಗುಂಟ ಹುಡುಕುತ್ತ ಹೋದ ಸುಮಾರು ದೊಡ್ಡವರ ಹೆಬ್ಬೆರಳು ಗಾತ್ರದ ಒದು ಗೇಣು ಉದ್ದದ ಅಡಸಾಲ ಗಿಡದ ಒಣಗಿದ ರೆಂಬೆಯನ್ನು ಮುರಿದುಕೊಂಡು ಜಲಬಾಧೆಯನ್ನು ತೀರಿಸಿಕೊಳ್ಳಲು ನಿಂತ. ಸುಮ್ಮನೆ ಮುಂದೆ ದೃಷ್ಟಿ ಹಾಯಿಸಿದ, ನೋಡುತ್ತಾನೆ ಆತನ ಎದುರು ಸುಮಾರು ನಾಲ್ಕು ಅಡಿ ದೂರದಲ್ಲಿ ಮಾರುದ್ದದ ಗೋದಿ ಬಣದ ನಾಗರ ಹಾವೊಂದು ಚಲನೆಯಿಲ್ಲದೆ ಬಿದ್ದು ಕೊಂಡಿದೆ. ರಾಮ ಒಂದು ಕ್ಷಣ ಗಾಬರಿಯಾದ. ನಂತರ ಅದು ತನ್ನಿಂದ ಸುಮಾರು ದೂರದಲ್ಲಿದೆಯೆಂದು ಖಚಿತ ಪಡಿಸಿಕೊಂಡು ಧೈರ್ಯ ತಂದುಕೊಂಡು ಅದನ್ನು ನೋಡುತ್ತ ನಿಂತುಕೊಂಡ. ಆ ಹಾವು ಚಲನೆಯಿಲ್ಲದೆ ಬಿದ್ದು ಕೊಂಡಿತ್ತು. ಆ ನಾಗರಹಾವನ್ನು ತಮ್ಮ ಮನೆಯ ಮುಂದಿನ ಭರ್ಮಪ್ಪ ದೇವರ ಮೇಲೆ ಹಾಗೂ ಸುತ್ತ ಮುತ್ತಲಿನ ಜಾಗದಲ್ಲಿ ನೋಡಿದಂತೆ ನೆನಪು. ಅದು ಯವುದೇ ಚಲನೆ ಯಿಲ್ಲದೆ ಬಿದ್ದುದನ್ನು ಕಂಡು ಅದು ಸತ್ತಿರಬಹುದೆಂಬ ಅನುಮಾನ ರಾಮನಲ್ಲಿ ಮೊಳೆಯಿತು, ಆತ ಒಂದು ಕ್ಷಣ ಹೆದರಿದ ಒಂದು ಜಿಜ್ಞಾಸೆ ಆತನನ್ನು ಕಾಡ ತೊಡಗಿತು, ದೇವರ ಹಾವು ಎಂದಾದರೂ ಸಾಯುತ್ತದೆಯೆ? ಊಹುಂ ಇಲ್ಲ, ರಾಮ ಮತ್ತೆ ಹಾವನ್ನು ದಿಟ್ಟಿಸಿದ, ಅದರಲ್ಲಿ ಯಾವುದೆ ಚಲನೆ ಕಂಡು ಬರಲಿಲ್ಲ. ಅದು ಸತ್ತಿದೆಯೆಂದು ರಾಮ ಭಾವಿಸಿದ. ಆದರೂ ಯಾಕೆ ದೇವರಹಾವಿನ ಸಹವಾಸ ಎಂದು ಮನೆಯ ಕಡೆಗೆ ಹೆಜ್ಜೆಯಿಟ್ಟ ಕುತೂಹಲ ಅವನನ್ನು ಅಲ್ಲಿಂದ ಹೋಗಗೊಡಲಿಲ್ಲ, ಮತ್ತೆ ಹಾವನ್ನು ದಿಟ್ಟಿಸಿ ನೋಡಿದ, ಅದು ಸತ್ತಿದೆಯೆಂದು ಆತನಿಗೆ ಖಚಿತವಾಯಿತು. ಆದರೂ ಪರೀಕ್ಷಿಸೋಣವೆಂದು ಬೇಲಿಯ ಬದಿಯಲ್ಲಿದ್ದ ಮುಷ್ಟಿ ಗಾತ್ರದ ಒಂದು ಕಲ್ಲನ್ನು ಎತ್ತಿಕೊಂಡು ಆ ಹಾವಿ ನೆಡೆಗೆ ಎಸೆದ , ಆ ಕಲ್ಲು ಗೊರಟಿಗೆ ಹೂವಿನ ಪೊದೆಗೆ ತಾಕಿ ಕೆಳಗೆ ಒಣಗಿದ ದರಗುಗಳ ಮೇಲೆ ಬಿತ್ತು, ಹಾವು ಬುಸ್ಸೆಂದು ಹೆಡೆಬಿಚ್ಚಿ ಹಿಂದೆ ಮುಂದೆ ತೊನೆಯುತ್ತ ಒಂದು ಅಡಿ ಎತ್ತರದಲ್ಲಿ ನಿಂತು ರಾಮನನ್ನೆ ದಿಟ್ಟಿಸ ತೊಡಗಿತು. ರಾಮನ ನಾಲಿಗೆಯ ದ್ರವ ಆರಿ ಹೋಯಿತು, ಕೂಗಲು ಪ್ರಯತ್ನಿಸಿದ ಧ್ವನಿ ಹೊರಡಲಿಲ್ಲ, ಆತನಿಗೆ ಭಯ ಕಾಡ ತೊಡಗಿತು. ದೇವರ ಹಾವಿಗೆ ತಾನು ಕಲ್ಲು ಹೊಡೆದಾಗಿದೆ, ತನ್ನ ಕಥೆ ಮುಗಿಯಿತು ಎಂದು ಭಾವಿಸಿದ ಅಮ್ಮ ಅಜ್ಜಿ ಎಲ್ಲರೂ ನೆನಪಾದರು, ಇನ್ನು ಮುಂದೆ ಅವರನ್ನು ನೋಡುತ್ತೇನೇಯೊ ಇಲ್ಲವೊ ಎನ್ನುವ ಭಯ ಆತನನ್ನು ಕಾಡ ತೊಡಗಿತು. ಇನ್ನೇನು ಕ್ಷಣದಲ್ಲಿ ಹಾವು ಬಂದು ತನ್ನನ್ನು ಕಚ್ಚುತ್ತದೆ ಎಂದು ಗರಬಡಿದು ನಿಂತುಕೊಂಡ. ಕಳೆದೆ ವರ್ಷ ಸುಗ್ಗಿಯಲ್ಲಿ ತಳವಾರ ನಿಂಗ ಅವರ ಕಣದಲ್ಲಿ ಭತ್ತ ಒಕ್ಕುವಾಗ ನಾಗರಹಾವು ಕಡಿದು ಆತ ನೊರೆಕಕ್ಕಿ ಸತ್ತಿದ್ದ. ಹಾಗೆಯೆ ಈ ಹಾವು ಕಚ್ಚಿ ತಾನು ಸಾಯುತ್ತೇನೆ ಎಂದು ಯೋಚಿಸುತ್ತ ನಿಂತ. ಹೆಜ್ಜೆಯನ್ನು ಕಿತ್ತಿಡಲು ಆತನಿಂದ ಆಗುತ್ತಿಲ್ಲ. ಆ ವೇಳೆಗೆ ಕಾಕತಾಳೀಯ ವೆನ್ನುವಂತೆ ಭಾವಿಯ ಕಡೆಯಿಂದ ಬಂದ ನಾಯಿ ಭೈರ ಆ ಹಾವನ್ನು ನೋಡಿ ಬೊಗಳಲು ಪ್ರಾರಂಭಿಸಿತು, ಅದರ್ ಬೊಗಳುವಿಕೆಗೆ ಹೆದರಿ ಹಾವು ಬೇಲಿಯಲ್ಲಿ ಸರಿದು ಹೋಯಿತು. ರಾಮನಿಗೆ ಸಾವಿನ ಬಾಯಿಯಿಂದ ಪಾರಾಗಿ ಬಂದತೆನಿಸಿ ಆತ ನಿರಾಳವಾಗಿ ಉಸಿರಾಡಿದ. ಅದರೂ ರಾಮನಿಗೆ ದೇವರಹಾವಿಗೆ ಕಲ್ಲಿನಿಂದ ಹೊಡೆದ ಬಗ್ಗೆ ಒಂದು ರೀತಿಯ ಅಳುಕು ಇದೆ. ಇದನ್ನು ತಂದೆ ಭೀಮಯ್ಯನೆದುರು ಹೇಳುವಂತಿಲ್ಲ, ಒಂದು ವೇಳೆ ಹೇಳಿದರೆ ನಿನಗೇಕೆ ಹಾವಿಗೆ ಕಲ್ಲೆಸೆಯುವ ಉಸಾಬರಿ ಬೇಕಿತ್ತು ಎಂದು ಎರಡೇಟು ಬಿಗಿಯಲೂ ಹಿಂದೆ ಮುಂದೆ ನೋಡುವವರಲ್ಲ ಎನ್ನಿಸಿ ಅಜ್ಜಿ ಒಬ್ಬಳೆ ಇರುವ ಸಮಯ ಕಾದು ಅವಳೆದುರು ನಡೆದ ಘಟನೆಯ ವಿವರವನ್ನು ಹೇಳಿದ. ಅಜ್ಜಿ ಒಂದು ಸೋಮವಾರ ಭರ್ಮಪ್ಪನಿಗೆ ಪೂಜೆ ಮಾಡಿಸಿದಳು, ರಾಮನಿಗೆ ನೆಮ್ಮದಿಯಾಯಿತು. ಭರ್ಮಪ್ಪ ಸಂತುಷ್ಟನಾಗಿದ್ದಾನೆ ಆತನ ಹಾವು ತನಗೇನೂ ಮಾಡುವುದಿಲ್ಲವೆಂದು ನೆಮ್ಮದಿ ಯಾದ. ಆದರೂ ಕತ್ತಲಲ್ಲಿ ಹೋಗುವಾಗ ಬರುವಾಗ ರಾಮನಿಗೆ ಆಗಾಗ ಆ ಹಾವಿನ ಭಯ ಕಾಡುತ್ತಿತ್ತು. ಆದರೂ ಆತನನ್ನು ಒಂದು ಶಂಕೆ ಕಾಡುತ್ತಿದೆ. ಅದು ಭರ್ಮಪ್ಪನ ಹಾವಾಗಿದ್ದರೆ ಸರಿ, ಭರ್ಮಪ್ಪನಿಗೆ ಪೂಜೆ ಮಾಡಸಿಯಾಗಿದೆ ಆತ ತನ್ನ ಹಾವಿಗೆ ಕಚ್ಚಬೇಡ ಎಂದು ತಾಕೀತು ಮಾಡಿರಬಹುದು. ಒದು ವೇಳೆ ಅದು ಭರ್ಮಪ್ಪ ದೇವರ ಹಾವಾಗದೆ ಬೇರೆ ಹಾವಾಗಿದ್ದರೆ ಹೊಡೆದವರಿಗೆ ಪ್ರತಿಕಾರ ಮಾಡದೆ ಬಿಡುವುದಿಲ್ಲ ಎಂದು ಬಸವ ಬೇರೆ ರಾಮನಿಗೆ ಹೆದರಿಸಿ ಹಾವಿನ ದ್ವೇಷದ ಬಗ್ಗೆ ಕಥೆ ಕಟ್ಟಿ ಹೇಳಿ ಮತ್ತಷ್ಟು ಹೆದರಿಸಿದ್ದಾನೆ. ರಾಮ ಹಾವಿಗೆ ಕಲ್ಲು ಹೊಡೆದು ಆರು ತಿಂಗಳುಗಳು ಮಾತ್ರ ಆಗಿದೆ, ಅಂತಹದರಲ್ಲಿ ಹವು ತನಗೆ ಕಚ್ಚದೆ ಬಿಡುವುದೆ ? ರಾಮನ ಎದೆ ಬಡಿತ ಜೋರಾಯಿತು, ತಾನು ಕಲ್ಲು ಎಸೆದ ಹಔಉ ಬೇರೆಯದೆ ಹಾವಾಗಿರಬೇಕು, ಇನ್ನೇನು ಅದು ಬಂದು ತನ್ನನ್ನು ಕಚ್ಚಿ ಬಿಡುತ್ತದೆ ಎಂದು ನಿವರ್ಿಣ್ಯ ನಾದ. ಅಷ್ಟರಲ್ಲಿ ಎದುರಿನಿಂದ ಪರಸಪ್ದ ಬಂದುದನ್ನು ಕಂಡು ರಾಮನಿಗೆ ಹೋದ ಜೀವ ಬಂದಂತಗಾಗಿ ಲಗುಬಗೆ ಯಿಂದ ಮುಂದೆ ನಡೆದ, ಹಾವಿನ ಹೆದರಿಕೆಯಿಂದ ಪಾರಾಗಿ ನಿರಾಳವಾದ.
ರಾಮ ತನ್ನ ಮನೆಯ ಮುಂದಿನ ದಾರಿಗುಂಟ ಸಾಗಿ ಕಳ್ಳಿಮನಿ ಕಾಳಪ್ಪನ ಮನೆಯ ಹತ್ತಿರ ತಿರುಗಿದ. ಮೊನ್ನೆ ಮೊನ್ನೆ ಸುಮಾರು ಎರಡು ತಿಂಗಳುಗಳ ಹಿಂದೆ ಕಾರಹುಣ್ಣಿಮೆಯ ದಿನ ಕಾಳಪ್ಪನ ತಂದೆ ಕಲ್ಲಜ್ಜ ತೀರಿಕೊಂಡಿದ್ದು, ಆತನನ್ನು ಅವರ ಮನೆಯ ಹೊರಗಿನ ಜಗುಲಿಯ ಮೇಲೆ ಕೂರಿಸಿದ್ದನ್ನು ರಾಮ ನೋಡಿದ್ದ. ಕಲ್ಲಜ್ಜ ದೆವ್ವವಾಗಿರುವ ನೆಂದು ಅಲ್ಲಲ್ಲಿ ಜನ ಮಾತನಾಡುವುದನ್ನು ರಾಮ ಕೇಳಿದ್ದ. ದೆವ್ವಗಳು ಮನುಷ್ಯರನ್ನು ಸಾಯಿಸುತ್ತವೆಂದೂ, ಕಲ್ಲಜ್ಜನ ದೆವ್ವ ನವರಾತ್ರಿ ಅಮವಾಸ್ಯೆಯ ದಿನ ಮೂಲಿಮನಿ ಚನ್ನಪ್ಪ ರಕ್ತಕಾರಿ ಸತ್ತಿದ್ದು ಅವನನ್ನು ಕೊಂದಿದ್ದು ಕಲ್ಲಜ್ಜನ ದೆವ್ವವೆಂದು ಬಸವ ಹೇಳಿದ್ದ. ಬೇಲಿಯಲ್ಲಿ ಏನೋ ಸದ್ದಾಗಿ ಆ ಕಡೆಗೆ ತಿರುಗಿ ನೋಡಿದ, ಬೇಲಿಯ ಬದಿಯಲ್ಲಿ ಒಂದು ಕರಿಯ ನಾಯಿ ರಾಮನನ್ನು ದಿಟ್ಟಿಸುತ್ತ ನಿಂತಿದೆ, ರಾಮನ ಜೀವ ಬಾಯಿಗೆ ಬಂದಂತಾಯಿತು. ಥತ್ ದರಿದ್ರ ದವರು ಈ ಕತ್ತಲೆಯಲ್ಲಿ ತನಗೆ ಅಂಗಡಿ ಸಾಮಾನು ತರಲು ಕಳಿಸಿದ್ದಾರೆ, ತನ್ನ ತೋಂದರೆಗಳು ಮನೆಯಲ್ಲಿ ಯಾರಿಗೂ ಅರ್ಥವಾಗುವುದಿಲ್ಲ, ಅದರಲ್ಲೂ ವಿಶೇಷವಾಗಿ ತನ್ನ ತಂದೆಗೆ, ಒಂದು ಕ್ಷಣ ಆತ ಹತಾಶನಾಗಿ ನಿಂತ. ಇನ್ನೇನು ಕರಿಯ ನಾಯಿ ಕಲ್ಲಜ್ಜನ ದೆವ್ವದ ರೂಪತಾಳಿ ತನ್ನನ್ನು ಸಾಯಿಸುತ್ತೆ, ತಾನೂ ಸಹ ಚೆನ್ನಪ್ಪನಂತೆ ರಕ್ತಕಾರಿ ಸಾಯುತ್ತೇನೆ ಎಂದು ವಿಷಣ್ಣನಾದ. ಆದರೆ ರಾಮನಿಗೆ ಸಾವು ಎಂದರೆ ಭಯ, ಆತ ಇನ್ನೂ ಓದಬೇಕು ಸೈಕಲ್ ಸವಾರಿ ಕಲಿಯಬೇಕು ಇನ್ನೂ ಏನೇನೆಲ್ಲ ಮಾಡುವುದಿದೆ ಎಂಬ ವಿಚಾರದಲ್ಲಿ ಮುಳುಗಿ ದಿಕ್ಕು ತೋಚದಂತಾದ. ಬೇಲಿಯ ಕಡೆಗೆ ಮತ್ತೊಮ್ಮೆ ದಿಟ್ಟಿಸಿದ, ಅವನನ್ನು ದಿಟ್ಟಿಸುತ್ತಿದ್ದೆ ಕರಿಯ ನಾಯಿ ಅಲ್ಲಿರಲಿಲ್ಲ, ಯಾರೋ ಕೆಮ್ಮಿದಂತಾ ಯಿತು, ಆ ಕೆಮ್ಮಿನ ಸದ್ದಿನಿಂದ ಆಕೆ ಮೂಲಿಮನಿ ಸಾವಂತ್ರಿ ಎಂದು ರಾಮನಿಗೆ ಖಚಿತವಾಯಿತು.
ಅದು ದೆವ್ವವಲ್ಲವೆಂದು ರಾಮನಿಗೆ ಖಚಿತವಾಯಿತು, ಧೈರ್ಯ ತಂದುಕೊಂಡು ವೇಗವಾಗಿ ಓಡಿ ನಾರಾಯಣ ಪ್ಪನ ಅಂಗಡಿಯನ್ನು ತಲುಪಿದ. ಅಂಗಡಿಯಿಂದ ಸಾಮಾನು ತೆಗೆದುಕೊಂಡು ಮನೆಯ ದಾರಿಯನ್ನು ಹಿಡಿದ. ದಾರಿಯಲ್ಲಿ ಯಾರಾದರೂ ಜೊತೆ ಸಿಕ್ಕರೆ ಅನುಕೂಲವೆಂದು ಯೋಚಿಸುವಷ್ಟರಲ್ಲಿ ಬೀಡಿ ಬೆಂಕಿಪೊಟ್ಟಣ ಖರೀದಿಸಲು ಬಂದಿದ್ದ ಪರಸಪ್ಪ ಜೊತೆಗೆ ಸಿಕ್ಕ, ರಾಮನಿಗೆ ಅನುಕೂಲವಾಯಿತು. ಮನೆಗೆ ಹೋಗಲು ಜೊತೆಗೆ ಒಂದು ಜನ ಸಿಕ್ಕಂತಾಯಿತು. ಮನೆಗೆ ಹೋದ ರಾಮ ಚಿಮಣಿಎಣ್ಣೆ ಸಕ್ಕರೆ ಚಹಾಪುಡಿಯನ್ನು ಅಮ್ಮನಿಗೂ ಎಲೆ ಅಡಿಕೆಯನ್ನು ತದೆ ಭೀಮಯ್ಯ ನವಿರಿಗೆ ತಲುಪಿಸಿ ರಾತ್ರಿಯ ಊಟ ಮುಗಿಸಿ ಮಲಗಿದ. ಸರಿ ರಾತ್ರಿಯಾದರೂ ರಾಮನಿಗೆ ನಿದ್ರೆಯೆ ಬರಲೊಲ್ಲದು. ಎಷ್ಟು ಬೇಗ ಬೆಳಗಾಗುವುದೋ ಎಷ್ಟು ಬೇಗನೆ ತಾನು ಸೈಕಲ್ ಕಲಿಯುಲು ಹೋಗುವೆನೋ ಎಂಬ ತವಕದಲ್ಲಿ ಹಾಸಿಗೆಯ ಮೇಲೆಯೆ ಸುಮಾರು ಹೊತ್ತು ಹೊರಳಾಡಿದ.
ಭಾನುವಾರ ರಾಮನಿಗೆ ಎಚ್ಚರವಾದಾಗ ಬೆಳಗಿನ ಏಳು ಗಂಟೆಯ ಸಮಯ. ರಾಮ ತನ್ನ ಎಲ್ಲ ಕೆಲಸ ಕಾರ್ಯ ಮುಗಿಸಿ ಇನ್ನೇನು ಓಂಭತ್ತು ಗಂಟೆಗೆ ಮನೆಯಿಂದ ಹೊರಡಬೇಕು ಎಂದು ತನ್ನ ಮನೆಯ ಮುಂದಿನ ರಸ್ತೆಯನ್ನು ಗಮನಿಸುತ್ತ ಕಳ್ಳಿಯ ಬೇಲಿಯ ಹತ್ತಿರ ಮೋಹನನ ಬರುವಿಕೆಯ ನಿರೀಕ್ಷೆಯಲ್ಲಿ ನಿಂತಿದ್ದ. ಮೋಹನ ಬರುತ್ತಿರುವುದನ್ನು ಕಂಡ ರಾಮ ತನ್ನ ಮನೆಯ ಉಣುಗೋಲನ್ನು ದಾಟಿ ಹೋಗುವ ಸನ್ನಾಹದಲ್ಲಿದ್ದಾಗ ಭೀಮಯ್ಯ
' ಏ ಕತ್ತೆ ಭಡವಾ ಎಲ್ಲಿಗೋ ಹೊರಟಿರುವೆ, ರಜೆ ಇರುವುದು ನಿನ್ನ ಅಲೆದಾಟಕ್ಕಲ್ಲ, ಹೋಗು ಪಾಠ ಓದಿಕೋ ' ಎಂದು ಗದರಿದರು.
ನಿಸ್ಸಹಾಯಕನಾದ ರಾಮ ಮೋಹನನ ಕಡೆಗೆ ತಿರುತಿರುಗಿ ನೋಡುತ್ತ ಮನೆಯ ಪಡಸಾಲೆಗೆ ಬಂದು ಕಂಬದ ಮೊಳೆಗೆ ನೇತು ಹಾಕಿದ್ದ ಹೆಣಿಕೆ ಚೀಲದಿಂದ ಪುಸ್ತಕವನ್ನು ಹೊರತೆಗೆದು ಓದಲು ಕುಳಿತ. ಓದಿನ ಕಡೆಗೆ ಆತನ ಮನ ಹೋಗುತ್ತಿಲ್ಲ, ಒಂದು ಸಲ ಗುಟ್ಟಾಗಿ ರಸ್ತೆಯ ಕಡೆಗೆ ನೋಡುವುದು ಮರುಕ್ಷಣ ಪುಸ್ತಕದೆಡೆಗೆ ಗಮನ ಹರಿಸು ಸುವುದು ಮಾಡುತ್ತ ಹೊರಗೆ ಹೋಗುವ ಅವಕಾಶಕ್ಕಾಗಿ ಕಾದು ಕುಳಿತ. ರಾಮನ ಅನ್ಯ ಮನಸ್ಕತೆಯನ್ನು ಗಮನಿ ಸಿದ ಭೀಮಯ್ಯ ರಾಮನನ್ನು ಕುರಿತು
' ಮತ್ತೆ ರಸ್ತೆ ಕಡೆಗೆ ಏನು ನೋಡುತ್ತೀಯೋ? ಪಾಠ ಇರುವುದು ಪುಸ್ತಕದಲ್ಲಿ ರಸ್ತೆಯ ಮೇಲಲ್ಲ, ಏ ಪರಸ್ಯಾ ಹುಣಸೆ ಬರ್ಲು ತಾರೋ ಇವನಿಗೆ ..' ಎಂದು ಪುನಃ ಗದರಿದರು.
ನಿರುಪಾಯನಾದ ರಾಮ ಸಮಯ ಸಾಧಿಸಿ ರಸ್ತೆಯ ಕಡೆಗೆ ಗಮನಿಸಿದ, ಮೋಹನ ಆಗಲೆ ಅಲ್ಲಿದ ಹೊರಟು ಹೋಗಿದ್ದ. ಬೇರೆ ಮಾರ್ಗವಿಲ್ಲದೆ ಧರಣಿ ಮಂಡಲ ಮಧ್ಯದೊಳಗೆ ಹಾಡನ್ನು ಕಂಠಪಾಠ ಮಾಡುತ್ತ ಕುಳಿತ ಅವನಿಗೆ ಬಸವನ ನೆನಪು ಬಂತು, ಆ ಹಾಡನ್ನು ಧರಣಿ ಮಂಡಲ ಮಧ್ಯದೊಳಗೆ ತರುಣಿ ಸೊಂಟದ ಸ್ವಲ್ಪ ಕೆಳಗೆ ಎಂದು ಆತ ತುಂಬ ಪೋಲಿ ಪೋಲಿಯಾಗಿ ಹಾಡುತ್ತಿದ್ದುದನ್ನು ನೆನೆದು ನಗುಬಂದು ಕಿಸಕ್ಕನೆ ನಕ್ಕ. ಅದನ್ನು ಗಮಿಸಿಸಿದ ಭೀಮಯ್ಯ ರಾಮನೆಡೆಗೆ ಕೆಂಗಣ್ಣುಗಳಿಂದ ನೋಡಿದರು. ಮತ್ತೆ ಪುಸ್ತಕದೆಡೆಗೆ ಕಣ್ಣು ಕೀಲಿಸಿ ಓದಲು ಕುಳಿತ. ಸುಮಾರು ಹೊತ್ತು ತಂದೆ ಮಗನ ಈ ಕಣ್ಣುಮುಚ್ಚಾಲೆಯಾಟ ನಡೆದು ಭೀಮಯ್ಯ ಹಿತ್ತಲು ಕಡೆ ನಡೆದು ಹೋದರು.
ಮಧ್ಯಾನ್ಹ ಎರಡು ಗಂಟೆಯ ವೇಳೆಗೆ ಊಟ ಮುಗಿಸಿದ ರಾಮ ತುಳಸಿ ಕಟ್ಟೆಯ ಹತ್ತಿರ ಹುಣಸೆ ಮರದ ನೆರಳಲ್ಲಿ ಹೊರಸಿನ ಮೇಲೆ ಮಲಗಿದ. ಮೂರು ಗಂಟೆಯ ವೇಳೆಗೆ ಭೀಮಯ್ಯ ಹೊಲದ ಕಡೆಗೆ ಹೋದರು. ಅವರು ರಸ್ತೆಯ ತಿರುವಿನಲ್ಲಿ ಕಣ್ಮರೆಯಾದದ್ದೆ ತಡ ಹೊರಸಿನ ಮೇಲಿಂದ ನೆಗದು ಮೋಹನನ ಮನೆಯ ಕಡೆಗೆ ಓಡಿದ. ಮೋಹನನೂ ಸಹ ರಾಮನ ಬರುವಿಕೆಯ ನಿರೀಕ್ಷೆಯಲ್ಲಿ ತನ್ನ ಮನೆಯ ಮುಂದಿನ ಕಟ್ಟೆಯ ಮೇಲೆ ಓದುವವನಂತೆ ನಟಿಸುತ್ತ ಕುಳಿತಿದ್ದ. ರಾಮ ಬಂದುದನ್ನು ನೋಡಿ ಪುಸ್ತಕದ ಚೀಲವನ್ನು ಮನೆಯ ಒಳಗಡೆ ಇಟ್ಟು ರಾಮ ನೊಟ್ಟಿಗೆ ಬಸವನ ಮನೆಯ ಕಡೆಗೆ ನಡೆದ. ಇವರ ಬರುವಿಕೆಯನ್ನು ಗಮನಿಸಿದ ಬಸವ ಬಂದ ಅವರನ್ನು ಉದ್ದೇಶಿಸಿ
' ನಾನು ನಿಮಗೋಸ್ಕರ ಬೆಳಿಗ್ಗೆ ಒಂಭತ್ತು ಗಂಟೆಯಿಂದ ಹತ್ತು ಗಂಟೆಯ ವರೆಗೆ ಕಾದೆ. ಈಗ ನಾನು ಎತ್ತು ಗಳಿಗೆ ಹುಲ್ಲು ತರಲು ಹೊಲಕ್ಕೆ ಹೋಗಬೇಕು ' ಎಂದ.
ಅವರೂ ಸಹ ಆತನಿಗೆ ತಮಗಾದ ತೊಂದರೆ ಕುರಿತು ವಿವರಿಸಿ ಆತನನ್ನು ನಂಬಿಸಿದರು. ಬಸವ ಅವರಿಗೆ ಸರಿಯಾಗಿ ಸಂಜೆ ನಾಲ್ಕು ಗಂಟೆಗೆ ಊರ ಮುಂದಿನ ನಾಕಾದ ಹತ್ತಿರ ಬರಲು ಹೇಳಿದ. ಅವರಿಬ್ಬರೂ ನಾಕಾದ ಹತ್ತಿರ ಹೋಗಿ ಬಸವನ ಬರುವಿಕೆಗಾಗಿ ಕಾಯ ತೊಡಗಿದರು. ಸಂಜೆ ನಾಲ್ಕೂವರೆಯ ವೇಳೆಗೆ ಬಸವ ರಫಿಕ್ನ ಸೈಕಲ್ ಶಾಪ್ನಿಂದ ಕೆಂಪು ಬಣ್ಣದ ಮಿರಿ ಮಿರಿ ಮಿರುಗುವ ಹೊಳೆಯುವ ಸಣ್ಣ ಸೈಕಲ್ನ್ನು ತಂದ. ಸೈಕಲ್ಲನ್ನು ನಾಲ್ಕು ಗಂಟೆಗೆ ತಂದಿದ್ದು ಇಲ್ಲಿಗೆ ಬರುವಲ್ಲಿ ಇಷ್ಟು ಹೊತ್ತಾಯಿತು ಎಂದು ಬಸವ ವಿವರಣೆ ನೀಡಿದ. ರಾಮನಿಗೆ ಕೋಪ ಬಂತು. ರಫಿಕ್ನ ಸೈಕಲ್ಶಾಪ್ನಿಂದ ನಾಕಾಕ್ಕೆ ಬರಲು ಹತ್ತು ನಿಮಿಷಗಳು ಸಾಕು ಊರೆಲ್ಲ ಸುತ್ತಿ ಬಂದು ಸುಳ್ಳು ಹೇಳುತ್ತಿದ್ದಾನೆ ಎಂದು ಮುನಿಸಿಕೊಂಡ, ಆದರೆ ಅದನ್ನು ಬಸವನಿಗೆ ಹೇಳುವಂತಿಲ್ಲ. ಸೈಕಲ್ ಕಲಿಯುವ ವರೆಗೆ ಅವನ ಮಜರ್ಿ ಕಾಯ ಬೇಕಾಗಿದೆ. ಮತ್ತೆ ಬಸಡವ ಇನ್ನೊಮ್ಮೆ ಸೈಕಲ್ ಪರೀಕ್ಷೆ ಮಾಡುವುದಾಗಿ ನಾಕಾದ ಬಯಲಿನ ಸುತ್ತ ಸೈಕಲ್ ಮೇಲೆ ಸುತ್ತಾಡಿ ಐದು ಗಂಟೆಯ ವೇಳೆಗೆ ರಾಮ ಮೋಹನರ ಹತ್ತಿರ ಸೈಕಲ್ ತಂದು ನಿಲ್ಲಿಸಿದ. ಮುಖ ಊದಿಸಿಕೊಂಡು ನಿಂತಿದ್ದ ರಾಮನ ಮುಖ ಕೋಪದಿಂದ ಕುದಿಯುತ್ತಿತ್ತು. ಸೈಕಲ್ ಭಾಡಿಗೆ ಹಣ ನಮ್ಮದು, ಪೂರ್ತಿ ಒಂದು ಗಂಟೆ ಸೈಕಲ್ ಬಸವನೆ ಹೊಡೆದಿದ್ದಾನೆ. ಅವನ ಊದಿದ ಮುಖವನ್ನು ಗಮನಿಸಿದ ಬಸವ ರಾಮನಿಗೆ ಮೊದಲು ಸೈಕಲ್ ಹತ್ತಲು ಹೇಳಿದ.
*
ರಾಮ ಸೈಕಲ್ ಹತ್ತಿ ಅದರ ಎರಡು ಹ್ಯಾಂಡಲ್ಗಳನ್ನು ಹಿಡಿದುಕೊಂಡ. ಒಂದು ಬದಿಯಲ್ಲಿ ಬಸವ ಇನ್ನೊಂದು ಬದಿಯಲ್ಲಿ ಮೋಹನ ಸೈಕಲ್ಲನ್ನು ನೇರವಾಗಿ ಹಿಡಿದು ಕೊಂಡರು. ಬಸವ ರಾಮನಿಗೆ ಎದುರುಗಡೆಗೆ ನೋಡುತ್ತ ಸೈಕಲ್ ಪೆಡಲ್ ತುಳಿಯುತ್ತಿರಬೇಕೆಂದು ಹೇಳಿದ. ಬಸವ ಹೇಳಿದ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಂಡು ಪೆಡಲ್ ತುಳಿಯಲು ಪ್ರಾರಂಭಿಸಿದ. ಗಾಳಿಯಲ್ಲಿ ತೇಲಿ ಹೋದಂತಹ ಅನುಭವ. ರಾಮನಿಗೆ ಖುಷಿಯಾಯಿತು. ಆತ ನಾಲ್ಕೈದು ಸುತ್ತು ಸೈಕಲ್ ತುಳಿದ. ಬಸವ ರಾಮನಿಗೆ ಸೈಕಲ್ನಿಂದ ಇಳಿಯಲು ಹೇಳಿದ. ನಂತರ ರಾಮ ಬಸವ ಸೇರಿ ಮೋಹನನನ್ನು ಸೈಕಲ್ ಹತ್ತಿಸಿ ಆತನಿಗೂ ಸಹ ನಾಲ್ಕೈದು ಸುತ್ತು ಸೈಕಲ್ ಹೊಡೆಸಿದರು. ಬಸವ ಅವರನ್ನು ಉದ್ದೇಶಿಸಿ ನೀವು ಬಹಳ ಬೇಗನೆ ಸೈಕಲ್ ಕಲಿಯುತ್ತೀರಿ ಎಂದು ಹುರಿದುಂಬಿಸಿದ, ಅವರಿಬ್ಬರಿಗೂ ಬಹಳ ಖುಷಿಯಾಯಿತು.
ರಾಮ ಮತ್ತೊಂದಾವರ್ತಿ ಸೈಕಲ್ ಏರಿದ ಸ್ವಲ್ಪ ಮಟ್ಟಿಗೆ ಸೈಕಲ್ ಬ್ಯಾಲನ್ಸಿನ ಅನುಭವವಾಗಿದ್ದ ರಾಮ ಬಸವನ ಹೊಗಳಿಕೆಯಿಂದ ಉಬ್ಬಿ ಆ ದಿನವೆ ಪೂರ್ತಾ ಸೈಕಲ್ ಕಲಿತು ಬಿಡಬೇಕೆಂದು ಯೋಚಿಸಿ ಜೋರಾಗಿ ಸೈಕಲ್ ಪೆಡಲು ಗಳನ್ನು ಜೋರಾಗಿ ತುಳಿಯಲು ಪ್ರಾರಂಭಿಸಿದ., ಇಳಿಜಾರಿನಲ್ಲಿ ತನ್ನ ವೇಗವನ್ನು ವರ್ಧಿಸಿಕೊಂಡು ಸೈಕಲ್ ಓಡುತ್ತಿತ್ತು. ಆ ಸೈಕಲ್ನ ವೇಗಕ್ಕೆ ಹೊಂದಿಕೊಂಡು ಓಡಲಾಗದ ಬಸವ ಮೋಹನರು ಹಿಂದುಳಿದು ಬಿಟ್ಟರು. ರಾಮನಿಗೆ ಸೈಕಲ್ ಬ್ರೆಕ್ ಬಗ್ಗೆ ಮಾಹಿತಿ ಇರಲಿಲ್ಲ, ಅದೂ ಅಲ್ಲದೆ ಸೈಕಲ್ ನ್ನು ಎಡಕ್ಕೆ ಬಲಕ್ಕೆ ತಿರುಗಿಸುವ ಬಗೆಗೆ ಸರಿಯಾದ ಮಾಹಿತಿ ಇರಲಿಲ್ಲ. ಕಳೆದ ವರ್ಷದ ಚಳಿಗಾಲದ ಸುಗ್ಗಿಯ ಸಮಯದಲ್ಲಿ ಗೋಕಾಕ ನಾಟಕ ಕಂಪನಿ ಬಂದಿತ್ತು. ಅದರ ಸ್ಟೇಜ್ ಮುಂದುಗಡೆಗೆ ಖುರ್ಚಿಗಳನ್ನು ಹಾಕಲು ಐವತ್ತು ಅಡಿ ಉದ್ದ ಮತ್ತು ಅಷ್ಟೆ ಅಗಲದ ಚಚ್ಚೌಕಾದ ತಗ್ಗು ಮಾಡಿ ಅದರ ಮಣ್ಣನ್ನು ಮುಂದುಗಡೆ ಏರಿಸಿ ಸಮಮಾಡಿ ರಂಗಸ್ಥಳ ಮಾಡಿದ್ದರು. ನಾಟಕ ಕಂಪನಿ ಹೋದ ನಂತರ ಆ ತಗ್ಗು ದಿಣ್ಣೆಗಳು ಹಾಗೆಯೆ ಇದ್ದವು. ಬಸವ ರಾಮನನ್ನುದ್ದೇಶಿಸಿ
' ರಾಮ ಎಡಗಡೆಯ ಬ್ರೆಕ್ ಹಾಕಿ ಕೆಳಗೆ ಇಳಿ, ಇಲ್ಲಾಂದ್ರ ಸೈಕಲ್ ತಿರುಗಿಸ್ಕೊಂಡು ಹೊಳ್ಳಿ ಬಾ ' ಎಂದು ಕೂಗಿ ಹೇಳಿದ.
ರಾಮ ಒಂದು ಕ್ಷಣ ತಿರುಗಿ ನೋಡಿದ ಬಸವ ಮೋಹನರು ತನ್ನನ್ನು ಅನುಸರಿಸಿ ಬರುತ್ತಿಲ್ಲ ವೆಂಬುದನ್ನು ತಿಳಿದು ತಬ್ಬಿಬ್ಬಾದ. ಬಸವ ಬ್ರೆಕ್ ಹಾಕುವಂತೆ ಕೂಗುತ್ತಿದ್ದ. ಗೊಂದಲಗೊಂಡ ರಾಮ ಎಡಗಡೆಯ ಬ್ರೆಕ್ ಹಾಕುವ ಬದಲು ಬಲಗಡೆಯ ಬ್ರೆಕ್ ಹಾಕಿದ ಪರಿಣಾಮವಾಗಿ ಸೈಕಲ್ ಪಲ್ಟಿ ಹೊಡೆದು ಎದುರುಗಡೆ ನಾಟಕದ ಕಂಪನಿಯವರು ತೋಡಿದ್ದ ಗುಂಡಿಗೆ ಬಿದ್ದ. ಆ ಗುಂಡಿಯಲ್ಲಿ ಸೈಕಲ್ ಕ್ರಮಿಸಿ ದಿಣ್ಣೆಯನ್ನು ಏರಿ ಬಿದ್ದಿತು. ಬಸವ ಮೋಹನರು ರಾಮ ಬಿದ್ದಲ್ಲಿಗೆ ಧಾವಿಸಿ ಬಂದರು. ರಾಮನ ಕೈಕಾಲುಗಳಿಗೆ ತರಚಿದ ಗಾಯಗಳಾಗಿದ್ದವು. ಸೈಕಲ್ ಮೇಲಿಂದ ಬಿದ್ದ ಅವಮಾನ ಒಂದು ಕಡೆಗಾದರೆ, ಬಸವ ಸರಿಯಾಗಿ ಮಾಹಿತಿ ಕೊಡದೆ ಸೈಕಲ್ ಹತ್ತಿಸಿದ ಬಗ್ಗೆ ಬಸವನ ಮೇಲೆ ರೇಗಿದ. ಸೈಕಲ್ನ ಹ್ಯಾಂಡಲ್ ಬೆಂಡಾಗಿದ್ದು ಮುಂದಿನ ಗಾಲಿಯ ಬಾಲ್ ಬೇರಿಂಗ್ಗಳು ಉದುರಿ ಬಿದ್ದು ಸೈಕಲ್ ಹಾಳಾಗಿತ್ತು.
ರಾಮನ ರೇಗುವಿಕೆಯಿಂದ ಅಸಮಾಧಾನಗೊಂಡ ಬಸವ ' ಸೈಕಲ್ ಹಾಳಾಗಿದೆ, ಅದರ ರಿಪೇರಿ ದುಡ್ಡು ಸುಮಾರು ಒಂದು ರೂಪಾಯಿ ಆಗಬಹುದು, ಅದನ್ನು ಕೆಡವಿ ಹಾಳು ಮಾಡಿದ್ದು ರಾಮ, ಅವನೆ ರಿಪೇರಿ ದುಡ್ಡು ಕೊಡಬೇಕೆಂದು ' ಹೇಳಿದ.
ಅದಕ್ಕೆ ಪ್ರತಿಯಾಗಿ ರಾಮ ' ಸೈಕಲ್ ಬಗ್ಗೆ ಸರಿಯಾದ ಮಾಹಿತಿಯನ್ನು ಕೊಡದೆ ಸೈಕಲ್ ಹತ್ತಿಸಿದ್ದು ಬಸವನ ತಪ್ಪು , ಆದಕಾರಣ ಸೈಕಲ್ ರಿಪೇರಿ ಹಣವನ್ನು ಬಸವನೆ ಕೊಡಬೇಕು ' ಎಂದ. ಹೀಗೆಯೆ ಅವರಿಬ್ಬರೂ ಪರಸ್ಪರ ದೂಷಣೆಗೆ ತೊಡಗಿದರು.
' ಸೈಕಲ್ನ್ನು ಭಾಡಿಗೆಗೆ ತಂದು ಸುಮಾರು ಸಮಯ ಬಸವನೆ ಸೈಕಲ್ ಹೊಡೆದಿದ್ದಾನೆ ' ಎಂದು ರಾಮನ ಆಪಾದನೆ ಮುಂದುವರಿಯಿತು.
ಅದಕ್ಕೆ ಬಸವ ' ನಾನು ನಿಮಗಿಬ್ಬರಿಗೂ ಸೈಕಲ್ ಕಲಿಸಲು ಬಂದವನು, ಸರಿಯಾಗಿ ತಿಳಿದು ಕೊಳ್ಳದೆ ನೀನು ತಪ್ಪು ಮಾಡಿದ್ದು, ನೀನೆ ರಿಪೇರಿ ವೆಚ್ಚ ಭರಿಸಬೇಕು ' ಎಂದು ರಾಮನನ್ನು ಉದ್ದೇಶಿಸಿ ಹೇಳಿದ.
ಇವರಿಬ್ಬರ ವಾದಗಳನ್ನು ಆಲಿಸಿದ ಮೋಹನ ' ಸೈಕಲ್ ತಂದವ ಬಸವ, ಸೈಕಲ್ ಕೆಡವಿ ಹಾಳು ಮಾಡಿದವ ರಾಮ, ರಿಪೇರಿ ಹಣವನ್ನು ಅವರಿಬ್ಬರೆ ಕಟ್ಟಿಕೊಳ್ಳೋಬೇಕೆಂದು, ತನಗೂ ಮತ್ತು ಸೈಕಲ್ ರಿಪೇರಿ ಹಣಕ್ಕೂ ಸಂಬಂಧ ವಿಲ್ಲವೆಂದು ' ಜಾರಿಕೊಳ್ಳಲು ನೋಡಿದ. ಅದನ್ನು ಒಪ್ಪಲು ರಾಮ ಮತ್ತು ಬಸವರು ತಯಾರಿರಲಿಲ್ಲ.
' ಇದು ಮೂವರದೂ ಜವಾಬ್ದಾರಿ ' ಎಂದು ರಾಮ ಹೇಳಿದ.
ಸೈಕಲ್ ಹಾಳಾದದ್ದು ಒಂದು ಅಕಸ್ಮಿಕ ಘಟನೆ, ಅದು ಎಲ್ಲರಿಗೂ ಗೊತ್ತಿದೆ, ಕಾರಣ ರಿಪೇರಿ ಹಣಕ್ಕೆ ಏನು ಮಾಡುವುದು ಎಂಬ ಪ್ರಶ್ನೆ ಎದುರಾಯಿತು. ಈ ವಿಷಯ ತಮ್ಮ ತಮ್ಮ ಮನೆಗಳಲ್ಲಿ ಗೊತ್ತಾದರೆ ಒದೆ ಗ್ಯಾರಂಟಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯ, ರಿಪೇರಿ ಹಣದ ಗೋಜಲು ಬಗೆ ಹರಿಯಲಿಲ್ಲ. ರಾಮ ಮತ್ತು ಮೋಹನರು ತಲಾ ಒಂದಾಣೆಯಂತೆ ತಮ್ಮಲ್ಲಿದ್ದ ಹಣವನ್ನು ಬಸವನಿಗೆ ಕೊಡ್ಡು ತಮ್ಮ ಖಾಲಿ ಜೋಬುಗಳನ್ನು ಅವನಿಗೆ ತೋರಿಸಿದರು., ಬಸವನಿಗೂ ರಾಮ ಮೋಹನರ ಪರಿಸ್ಥಿತಿಯ ಅರಿವಾಗುತ್ತದೆ. ಆದರೆ ಏನು ಮಾಡುವುದು ಸಮಯ ಸಂಜೆಯ ಆರು ಗಂಟೆಗೆ ಸಮೀಪಿಸುತ್ತಿದೆ. ಸೈಕಲ್ನ್ನು ಮರಳಿ ರಫಿಕ್ನ ಶಾಪ್ಗೆ ಕೊಡಬೇಕಿರುತ್ತದೆ. ಇಂತಹ ಅನೇಕ ಘಟನೆಗಳನ್ನು ಚಾಲಾಕಿತನದಿಂದ ನಿಭಾಯಿಸಿದ ಅನುಭವವಿದ್ದ ಬಸವ ತನ್ನ ಆಲೋಚನೆಯೊಂದನ್ನು ರಾಮ ಮೋಹನರ ಮುಂದಿಡುತ್ತಾನೆ. ಅದು ಏನೆಂದರೆ ಹಾಳಾದ ಸೈಕಲ್ನ್ನು ಸಿಧಾನಕ್ಕೆ ಒಯ್ದು ಗೋಡೆಗೆ ಒರಗಿಸಿ ಇಟ್ಟು ಭಾಡಿಗೆ ಹಣ ಎರಡಾಣೆಯನ್ನು ರಫಿಕ್ನ ಕೈಗಿಟ್ಟು ಅಲ್ಲಿಂದ ಹೊರಟು ಬಿಡುವುದು. ಕೆಲವು ದಿನಗಳ ಕಾಲ ಆತನ ಶಾಪ್ ಮುಂದುಗಡೆ ಶಾಲೆಗೆ ಹೋಗುವುದನ್ನು ಬಿಟ್ಟು ಬೇರೆ ಓಣಿಯಿಂದ ಓಡಾಡುವುದು.
ರಾಮ ಮೋಹನರಿಗೆ ಬಸವನ ಸಲಹೆ ಒಪ್ಪಿಗೆಯಾಗುವುದಿಲ್ಲ. ' ಅದು ತಪ್ಪು ' ಎನ್ನುತ್ತಾರೆ.
ಅದಕ್ಕೆ ಬಸವ ' ಅದು ತಪ್ಪು ಎನ್ನುವುದು ನನಗೂ ಗೊತ್ತಿದೆ, ನನ್ನಲ್ಲಿ ಸಹ ಯಾವುದೇ ಹಣವಿಲ್ಲ, ಆರು ಗಂಟೆ ಕಳೆದು ಐದು ನಿಮಿಷವಾದರೂ ರಫಿಕ್ ಅರ್ಧ ತಾಸಿನ ಭಾಡಿಗೆ ವಸೂಲು ಮಾಡುತ್ತಾನೆ ' ಎನ್ನುತ್ತಾನೆ. ಬೇರೆ ಮಾರ್ಗ ವಿಲ್ಲದೆ ಅವರು ಬಸವನ ಸಲಹೆಯನ್ನು ಒಪ್ಪುತ್ತಾರೆ. ಬಸವ ಸೈಕಲ್ನ್ನು ತಳ್ಳಿಕೊಂಡು ರಫಿಕ್ನ ಸೈಕಲ್ ಶಾಪ್ ಕಡೆಗೆ ನಡೆದ. ಅವರಿಬ್ಬರೂ ಬಸವನನ್ನು ಅನುಸರಿಸಿ ಹೋದರು. ರಫಿಕ್ ಯಾವುದೋ ಒಂದು ಸೈಕಲ್ ಟ್ಯೂಬ್ ಪಂಕ್ಷರ್ ಹಾಕುತ್ತ ಬೀಡಿ ಸೇದುತ್ತ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ನೂರ್ ಎಕ್ಸ್ಪ್ರೆಸ್ ಟ್ರಕ್ನ ಚಾಲಕ ಮುನಾವರ್ ಮತ್ತೂ ಹಿಟ್ಟಿನ ಗಿರಣಿಯ ವಿಠಲ ಸಾವಂತರ ಜೊತೆ ರಫಿಕ್ ಮಾತನಾಡುತ್ತಿರುವಾಗ ಸಮಯ ಕಾದು ಬಸವ ತಾನು ಒಯ್ದ ಕೆಂಪು ಬಣ್ಣದ ಸಣ್ಣ ಸೈಕಲ್ನ್ನು ಸ್ವಲ್ಪ ದೂರದಲ್ಲಿ ಗೋಡೆಗೆ ಒರಗಿಸಿ ಇಟ್ಟು ಭಾಡಿಗೆಯ ಹಣ ಎರಡಾಣೆಯನ್ನು ರಫಿಕ್ನ ಕೈಗಿಟ್ಟ.
ರಫಿಕ್ ಗಡಿಯಾರವನ್ನು ನೋಡಿ ' ಸಂಜೆ ನಾಲ್ಕು ಗಂಟೆಗೆ ಸೈಕಲ್ ಒಯ್ದಿರುವೆ, ಈಗ ಆರೂ ಕಾಲು ಗಂಟೆ, ಹದಿನೈದು ನಿಮಿಷ ಜಾಸ್ತಿಯಾಗಿದೆ ಒಂದು ಬಿಲ್ಲಿಯನ್ನು ಕೊಡು ' ಎನ್ನುತ್ತಾನೆ. ಬಸವನ ಎದೆ ಗುಂಡಿಗೆ ಬಾಯಿಗೆ ಬಂದಂತಾಗುತ್ತದೆ. ಬೇಗ ಅಲ್ಲಿಂದ ತಪ್ಪಿಸಿ ಕೊಂಡರೆ ಸಾಕೆಂದು ತನ್ನ ಜೋಬಿನಿಂದ ಒಂದು ತಾಮ್ರದ ಬಿಲ್ಲಿಯನ್ನು ತೆಗೆದು ರಫಿಕ್ನಿಗೆ ಕೊಟ್ಟು ಬಸವ ಅಲ್ಲಿಂದ ಕಾಲ್ದೆಗೆದು ರಾಮ ಮೋಹನರಿಗೆ ಮನೆಗೆ ಹೋಗುವಂತೆ ಸನ್ನೆ ಮಾಡಿದ. ಮೂವರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಕೈಕಾಲುಗಳಿಗೆ ತರಚಿದ ಗಾಯಗಳನ್ನು ಮಾಡಿಕೊಂಡು ಬಂದ ರಾಮನನ್ನು ಭೀಮಯ್ಯ ಏನಾಯಿತೆಂದು ಗದರುತ್ತಾರೆ.
' ಮರ ಕೋತಿಯಾಟ ಆಡುವಾಗ ಮರದಿಂದ ಕೆಳಗೆ ಬಿದ್ದು ಗಾಯಗಳಾದವು ' ಎಂದು ರಾಮ ಸುಳ್ಳು ಹೇಳುತ್ತಾನೆ. ಭೀಮಯ್ಯ ಆತನಿಗೆ ಎರಡೇಟು ಬಿಗಿಯುತ್ತಾರೆ.
ಸೈಕಲ್ ಹಾಳಾದ ವಿಷಯವನ್ನು ರಫಿಕ್ನಿಗೆ ತಿಳಿಸದೆ ಬಂದುದಕ್ಕೆ ಮತ್ತು ತನ್ನ ತಂದೆಯ ಎದುರು ಸುಳ್ಳು ಹೇಳಿದ ಬಗ್ಗೆ ರಾಮನನ್ನು ಅಪರಾಧಿ ಪ್ರಜ್ಞೆ ಕಾಡುತ್ತದೆ. ಆ ವರ್ಷ ಪೂರ್ತಿ ರಾಮ ರಫಿಕ್ನ ಶಾಪ್ನ ಮುಂದೆ ಹಾದು ಹೋಗುವುದಿಲ್ಲ. ಆದರೆ ದೂರದಲ್ಲೆಲ್ಲೊ ರಫಿಕ್ ಶಾಪ್ನ ಸೈಕಲ್ ಕಂಡರೆ ಮತ್ತು ರಫಿಕ್ನನ್ನು ಕಂಡರೆ ರಾಮನಿಗೆ ತಲೆ ತಗ್ಗಿಸುವಂತೆ ಆಗುತ್ತದೆ. ರಾಮ ಮುಂದೆಂದೂ ಸೈಕಲ್ ಕಲಿಕೆಯ ಬಗ್ಗೆ ಯೋಚಿಸುವುದಿಲ್ಲ. ಮುಂದೆ ಬಿ.ಎ.ಆನರ್ಸ ಮುಗಿಸಿದ ರಾಮ ಎಲ್.ಐ.ಸಿ.ಯಲ್ಲಿ ಗುಮಾಸ್ತನಾಗಿ ಸೇರಿ ಆ ಸಂಸ್ಥೆಯ ಉನ್ನತ ಹುದ್ದೆಗೆ ಏರಿ ನಿವೃತ್ತಿಯನ್ನು ಹೊಂದುತ್ತಾನೆ. ಆಗಾಗ ರಾಮಯ್ಯನವರಲ್ಲಿ ತಾವು ಸೈಕಲ್ ಕಲಿಯದೆ ಇರುವುದರ ಬಗೆಗೆ ವಿಷಾದ ಭಾವ ಆವರಿಸುತ್ತಿರುತ್ತದೆ. ಆದರೆ ಏನು ಮಾಡುವುದು? ಆಗಿನ ಕಾಲದ ರೀತಿ ರಿವಾಜುಗಳು ಅವರನ್ನು ಕಟ್ಟಿ ಹಾಕಿರುತ್ತವೆ. ಆದರೂ ಒಮ್ಮೊಮ್ಮೆ ಅವರಿಗೆ ಅನ್ನಿಸಿದ್ದುಂಟು ತಮ್ಮ ತಂದೆ ಭೀಮಯ್ಯ ತನ್ನೊಡನೆ ಸ್ವಲ್ಪ ಪ್ರೀತಿ ವಿಶ್ವಾಸ ಗಳಿಂದ ನಡೆದು ಕೊಂಡಿದ್ದರೆ, ಅತಿಯಾದ ಕಟ್ಟು ನಿಟ್ಟುಗಳನ್ನು ಹೇರದೆ ಇದ್ದಿದ್ದರೆ ತಾನೂ ತನ್ನ ಸ್ನೇಹಿತರಂತೆ ಬಾಲ್ಯದಲ್ಲಿ ಸೈಕಲ್ ಕಲಿಯಬಹುದಿತ್ತು. ಆದರೆ ಹಳೆಯ ಕಾಲದ ಮೌಲ್ಯಗಳಿಗೆ ಹೊಂದಿಕೊಂಡಿದ್ದ ಅವರಿಗೆ ಆಧುನಿಕ ಕಾಲದ ಯಾವುದೆ ಬದಲಾವಣೆ ಪ್ರಗತಿ ಅವರಿಗೆ ಸೇರಿಕೆಯಾಗುತ್ತಿರಲಿಲ್ಲ. ಸೈಕಲ್ ಹತ್ತಿದರೆ ಸಂಸ್ಕೃತಿ ಹಾಳಾಗುತ್ತದೆ ಎನ್ನುವ ಮಟ್ಟದ ವಿಪರೀತ ಕಲ್ಪನೆಯವರು, ಉಳಿದೆಲ್ಲ ವಿಷಯಗಳಲ್ಲಿ ಭೀಮಯ್ಯ ಉದಾರಿಗಳೆ ಆದರೆ ಹುಡುಗ ವಯಸ್ಸಿನ ರಾಮನ ಆಶೆ ಆಕಾಂಕ್ಷೆಗಳನ್ನು ಭಾವನೆಗಳನ್ನು ಗಮನಿಸದವರಾಗಿರುತ್ತಾರೆ. ಹೀಗಾಗಿ ರಾಮನ ಸೈಕಲ್ ಕಲಿಯುವ ಆಶೆ ಆಶೆಯಾಗಿಯೆ ಉಳಿಯುತ್ತದೆ. ಮುಂದೆ ತಮ್ಮ ಯೌವನದ ಕಾಲದಲ್ಲಿ ಸೈಕಲ್ ಕಲಿಯ ಬಹುದಿತ್ತು. ಆದರೆ ರಾಮಯ್ಯ ಅದಕ್ಕೆ ಮನಸು ಮಾಡುವುದೆ ಇಲ್ಲ
ಅದರೆ ಎಪ್ಪತ್ತು ವರ್ಷಗಳಲ್ಲಿ ಕಾಲವೆಷ್ಟು ಬದಲಾಯಿಸಿದೆ? ರಾಮಯ್ಯನವರ ತಂದೆ ಭೀಮಯ್ಯ ಗತಿಸಿ ಐವತ್ತು ವರ್ಷಗಳೇ ಸಂದಿವೆ. ಆಗಿನ ಹುಡುಗ ರಾಮ ಈಗ ವೃದ್ದಾಪ್ಯದ ಅಂಚಿಗೆ ಬಂದು ನಿಂತಿದ್ದಾರೆ. ಒದು ತಾಸಿನ ಸೈಕಲ್ ಭಾಡಿಗೆಗೆ ಒಂದಾಣೆಯನ್ನು ಹೊಂದಿಸಲು ತಾನು ಪಟ್ಟ ಕಷ್ಟವೆಲ್ಲಿ, ಈಗ ತಮ್ಮ ಮೊಮ್ಮಗ ರವಿ ಯಾವುದೆ ಮುಲಾಜು ಇಲ್ಲದೆ ಸೈಕಲ್ ಭಾಡಿಗೆಗೆ ಹಣ ಕೇಳಿ ಪಡೆಯುವ ನಿರ್ಭೀತ ಗುಣ ಸ್ವಭಾವ ವಾತಾವರಣಗಳೆಲ್ಲಿ? ಕಾಲ ಪಡೆಯುತ್ತಿರುವ ವೇಗ, ಸುಧಾರಣೆಯ ದಿಕ್ಕು ಅವರನ್ನು ಅಚ್ಚರಿ ಗೊಳಿಸುತ್ತವೆ.
' ಅಜ್ಜ ನಾನು ಸೈಕಲ್ ಕಲಿತೆ ' ಎಂದು ಕೂಗುತ್ತ ರವಿ ಮನೆಯ ಒಳಗೆ ಪ್ರವೇಶ ಮಾಡಿದ.
' ನಿಜವೇನೋ ! ಅಜ್ಜ ರಾಮಯ್ಯ ಅಚ್ಚರಿಯಿಂದ ಕೇಳಿದರು'
' ನಿಜ ಅಜ್ಜ ಇನ್ನೆರಡು ದಿನಗಳಲ್ಲಿ ನಾನು ಪೇಟೆಯಲ್ಲಿಯೂ ಸಹ ಸೈಕಲ್ ಹೊಡೆಯಬಲ್ಲೆ ಎಂದು ಆತ್ಮ
ವಿಶ್ವಾಸದಿಂದ ಬೀಗಿದ ಆತನ ಆತ್ಮ ವಿಶ್ವಾಸದ ಬಗ್ಗೆ ಅವರಲ್ಲಿ ಒಂದು ರೀತಿಯ ಬೆರಗು ಮೂಡಿ ಮಾಯವಾಯಿತು.
' ಸಾಕು ನಿನ್ನ ಪ್ರವರ, ಕೈಕಾಲು ಮುಖ ತೊಳೆದುಕೊಂಡು ದೇವರಿಗೆ ನಮಸ್ಕರಿಸಿ ಓದಲು ಕೂಡು ' ಎಂದು ಆತನ ತಾಯಿ ವೈದೇಹಿ ಆಜ್ಞಾಪಿಸಿದಳು. ರವಿ ಬಚ್ಚಲು ಮನೆಯೆಡೆಗೆ ಸಾಗಿದ
ಇನ್ನೂ ತಮ್ಮ ಬಾಲ್ಯದ ಗುಂಗಿನಲ್ಲಿಯೇ ಇದ್ದ ರಾಮಯ್ಯ ಪಶ್ಚಿಮ ದಿಗಂತದ ವರ್ಣ ವೈವಿಧ್ಯವನ್ನು ಗಮನಿಸುತ್ತಾ ಖುರ್ಚಿಯಲ್ಲಿ ಕುಳಿತು ಕೊಂಡರು.
ರಾಮನ ಅಜ್ಜಿ ಸಾವಿತ್ರಮ್ಮ ಹೊರಗೆ ಬಂದವರು ಒಂಟಿಯಾಗಿ ಕುಳಿತ ರಾಮಯ್ಯ ನವರನ್ನು ಉದ್ದೇಶಿಸಿ
' ಹೊತ್ತು ಮುಳುಗಿತು ಥಂಡಿ ಗಾಳಿ ಬೀಸುತ್ತಿದೆ ಒಳಗೆ ಬನ್ನಿ ' ಎಂದರು.
ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ರಾಮಯ್ಯ ' ಹೌದು ಹೊತ್ತು ಮುಳುಗಿತು ' ಎಂದು ಸ್ವಗತವಾಗಿ ಹೇಳಿ ಕೊಳ್ಳುತ್ತ ಒಳಗೆ ಬಂದರು.ಯಾಕೋ ಅನ್ಯಮನಸ್ಕತೆ ಅವರನ್ನು ಆವರಿಸಿತು, ಕೋಣೆಯೊಳಗೆ ಹೋಗಿ ಮನೆಯ ಛಾವಣಿಯನ್ನು ದಿಟ್ಟಿಸುತ್ತ ಕುಳಿತರು.
***********
( ಮುಗಿಯಿತು.)
)
Comments
ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ)
In reply to ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ) by swara kamath
ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ)
ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ)
In reply to ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ) by venkatb83
ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ)
ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ)
In reply to ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ) by geethavision
ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ)
ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ)
In reply to ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ) by makara
ಉ: 'ರಾಮನ ಸೈಕಲ್ ಸವಾರಿ' ಕೊನೆಯ ಭಾಗ (ಕಥೆ)