ಸಮಯ ರಾತ್ರಿ ೮.೩೦. ನಾನಿನ್ನೂ ಆಫೀಸಿನಲ್ಲೇ ಇದ್ದೆ. ಅಷ್ಟರಲ್ಲಿ ನನ್ನ ಫೋನ್ ಸುಮಾರು ಒಂದು ಒಂದೂವರೆ ಘಂಟೆಯಿಂದ ಹೊಡೆದುಕೊಳ್ಳುತ್ತಲೇ ಇತ್ತು. ಅದು ವಿಕ್ಕಿಯ ಫೋನ್ ನಂಬರ್ ಇಂದ ಬರುತ್ತಿದ್ದ ಕರೆ ಆಗಿತ್ತು. ೬.೩೦ ಕ್ಕೆ ನಾವಿಬ್ಬರೂ ಊರಿಗೆ ಹೊರಡಬೇಕಿತ್ತು. ಆದರೆ ಕೆಲಸದ ಒತ್ತಡದಿಂದ ಇನ್ನೂ ಆಫೀಸಿನಲ್ಲೇ ಇದ್ದೆ. ಒಂದೆರೆಡು ಸಲ ಫೋನ್ ಎತ್ತಿ ಅವನ ಕೈಯಲ್ಲಿ ಬೈಸಿಕೊಂಡಿದ್ದೆ. ಇನ್ನೊಂದು ಹತ್ತು ನಿಮಿಷ ಹತ್ತು ನಿಮಿಷ ಎನ್ನುತ್ತಲೇ ಒಂದೂ ವರೆ ಘಂಟೆ ಆಗಿತ್ತು. ಇದು ನಮ್ಮಿಬ್ಬರಿಗೂ ಮೊದಲೇನಲ್ಲ. ಪ್ರತಿ ಸಲ ಎಲ್ಲಾದರೂ ಹೋಗಬೇಕಂದರೆ ಒಂದು ನಾನು ಇಲ್ಲ ಎಂದರೆ ಅವನು ಯಾರಿಗಾದರೂ ತಡ ಆಗುತ್ತಿತ್ತು. ಆಗ ಇನ್ನೊಬ್ಬರು ಬೈಯ್ಯುವುದು ಮಾಮೂಲಿ ಆಗಿ ಹೋಗಿತ್ತು. ಇನ್ನೇನು ಕೆಲಸ ಮುಗಿಯುತ್ತ ಬಂದಿತು. ವಿಕ್ಕಿಗೆ ಫೋನ್ ಮಾಡಿ ವಿಕ್ಕಿ ಮನೆ ಹತ್ರ ಬಂದು ಬಿಡು ಇನ್ನೊಂದು ಐದು ನಿಮಿಷ ಮನೆಯಲ್ಲಿ ಇರುತ್ತೇನೆ ಎಂದು ಫೋನ್ ಕಟ್ ಮಾಡಿ ಮನೆ ತಲುಪಿದಾಗ ೯.೩೦ ಆಗಿತ್ತು. ಆಗಲೇ ವಿಕ್ಕಿ ಮನೆ ಮುಂದೆ ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದ. ಮನೆ ಒಳಗೆ ಹೋಗಿ ಊಟ ಮಾಡಿ ಹೊರಡುವ ಹೊತ್ತಿಗೆ ಹತ್ತು ಘಂಟೆ ಆಗಿತ್ತು.
ವಿಕ್ಕಿಗೆ ಹೊಸ ಹೊಸ ಜಾಗಗಳನ್ನು ನೋಡುವ ಹುಚ್ಚು ವಿಪರೀತ. ಒಂದು ಸಲ ನೋಡಿದ ಜಾಗಕ್ಕೆ ಮತ್ತೊಮ್ಮೆ ಹೋಗಲು ಒಪ್ಪುತ್ತಿರಲಿಲ್ಲ. ತಿಂಗಳಲ್ಲಿ ಒಂದು ಸಲ ಇಲ್ಲ ಎರಡು ಸಲ ಈ ರೀತಿ ಹೊಸ ಜಾಗಗಳಿಗೆ ಹೋಗುವುದು ಅವನಿಗೆ ಚಟವಾಗಿತ್ತು. ಎಷ್ಟೋ ಸಲ ಅವನ ಈ ಅಭ್ಯಾಸದಿಂದ ಹಲವಾರು ತೊಂದರೆಗಳನ್ನು ಅನುಭವಿಸಿದ್ದಾನೆ. ಕೆಲವು ಸಲ ತಾನು ಹುಡುಕಿ ಕೊಂಡು ಹೋದ ಜಾಗ ಸಿಗದೇ ದಾರಿ ತಪ್ಪಿ ಇನ್ನೆಲ್ಲೋ ಹೋಗಿ ಅಲ್ಲಿಂದ ಆಚೆ ಬಂದು ಮತ್ತೆಲ್ಲೋ ಹೋಗಿ ತೊಂದರೆಗಳನ್ನು ಅನುಭವಿಸಿದ್ದ. ಆದರೂ ಅದರಿಂದ ಅವನು ಪಾಠ ಕಲಿತಿರಲಿಲ್ಲ. ಏನಾದರೂ ಕೇಳಿದರೆ ಹೌದು ಆ ಜಾಗ ಸಿಗಲಿಲ್ಲ ಆದರೆ ಇನ್ನೊಂದು ಹೊಸ ಜಾಗ ಅಂತೂ ಕಂಡು ಹಿಡಿದೆನಲ್ಲ ಎಂದು ಕಿಸಿಯುತ್ತಿದ್ದ. ಇವನ ಈ ಹುಚ್ಚಾಟದಿಂದ ಹೆಚ್ಚು ಜನ (ಸ್ನೇಹಿತರು) ಇವನ ಜೊತೆ ಹೋಗಲು ಒಪ್ಪದೇ ಏನಾದರೂ ಕಾರಣ ಹೇಳಿ ತಪ್ಪಿಸಿ ಕೊಳ್ಳುತ್ತಿದ್ದರು. ಆದರೆ ನಾನು ವಿಕ್ಕಿ ಬಾಲ್ಯದಿಂದಲೂ ಸ್ನೇಹಿತರಾದ್ದರಿಂದ ನಾನು ಅವನಿಗೆ ಬೈದರೂ ಅವನು ನನಗೆ ಬೈದರೂ ಕೊನೆಗೆ ಹೋಗುತ್ತಿದ್ದದ್ದು ನಾನು ಅವನೇ. ಎಷ್ಟೋ ಸಲ ನಾನು ಹೋಗಲು ಆಗದಿದ್ದಾಗ ಅವನೊಬ್ಬನೇ ಹೋಗಿ ಬರುತ್ತಿದ್ದನು.
ಈ ಬಾರಿ ನಾವು ಹೊರಟಿದ್ದು ಬೆಂಗಳೂರು ತಿರುಪತಿ ಹೈವೇ ಮಧ್ಯದಲ್ಲಿ ಇದ್ದ ಮದನಪಲ್ಲಿ ಬಳಿ ಇರುವ "ಹಾಸ್ಲೆ ಹಿಲ್ಲ್ಸ್" ಎಂಬ ಜಾಗಕ್ಕೆ. ಅವನು ಅಂತರ್ಜಾಲದಲ್ಲಿ ಹುಡುಕಿದ್ದ ಜಾಗ ಅಂತೆ ಅದು ಅದ್ಭುತವಾಗಿದೆ ಅದೂ ಇದು ಎಂದು ಏನೇನೋ ಹೇಳಿದ್ದ. ನಾನು ಆಯ್ತು ನಡಿಯಪ್ಪ ಎಂದು ಹೊರಟಿದ್ದೆವು. ವಾರಾಂತ್ಯವಾದ್ದರಿಂದ ಟ್ರಾಫಿಕ್ ದಾಟಿಕೊಂಡು ಕೃಷ್ಣರಾಜಪುರ ದಾಟುವ ಹೊತ್ತಿಗೆ ೧೧.೪೦ ಆಗಿತ್ತು. ಅಲ್ಲಿಂದ ಹೊಸ ರಸ್ತೆ ಅದ್ಭುತವಾಗಿತ್ತು. ಬೇಸಿಗೆ ಆದ್ದರಿಂದ ವಾತಾವರಣ ಅಷ್ಟೇನೂ ಹಿತವಾಗಿರದೆ ಕಾರಿನ ಕಿಟಕಿಗಳನ್ನು ತೆಗೆದೇ ಕುಳಿತಿದ್ದೆವು. ಕಾರು ೧೦೦-೧೨೦ ರ ವೇಗದಲ್ಲಿ ಹೋಗುತ್ತಿತ್ತು. ನಾನು ವಿಕ್ಕಿಗೆ ಹೇಳಿದೆ, ಲೋ ವಿಕ್ಕಿ ಯಾಕೋ ಇಷ್ಟು ಸ್ಪೀಡ್ ಈ ಸ್ಪೀಡ್ ಅಲ್ಲಿ ಹೋದರೆ ನಾಲ್ಕು ಗಂಟೆಗೆಲ್ಲ ಮದನಪಲ್ಲಿ ಸೇರಿ ಬಿಡುತ್ತೇವೆ. ಅಷ್ಟು ಬೇಗ ಹೋಗಿ ಅಲ್ಲಿ ಏನು ಮಾಡ್ತೀಯ. ಸ್ವಲ್ಪ ನಿಧಾನಕ್ಕೆ ಹೋಗು ಆರಾಮಾಗಿ ಹೋಗೋಣ ಎಂದಿದ್ದಕ್ಕೆ ತಲೆ ಆಡಿಸಿ ಕಾರಿನ ವೇಗವನ್ನು ೮೦ ಕ್ಕೆ ಇಳಿಸಿದ. ಸ್ವಲ್ಪ ದೂರ ಹೋದನಂತರ ನನಗೆ ಕಡಿಮೆ ಸ್ಪೀಡಿನಲ್ಲಿ ಓಡಿಸಿದರೆ ಮಜಾ ಇಲ್ಲ ಎಂದು ಮತ್ತೆ ವೇಗ ಹೆಚ್ಚಿಸಿದ. ಮಾತಾಡುತ್ತ ಆಡುತ್ತ ಕರ್ನಾಟಕದ ಗಡಿಗೆ ಬಂದು ತಲುಪಿದೆವು. ಸಮಯ ನೋಡಿದರೆ ೩.೦೦ ಗಂಟೆ ತೋರಿಸುತ್ತಿತ್ತು. ಲೋ ವಿಕ್ಕಿ ನನ್ನ ಮಾತು ಕೇಳಲ್ಲ. ಇಷ್ಟು ಬೇಗ ಗಡಿಗೆ ಬಂದು ಬಿಟ್ಟೆವು. ಇಲ್ಲಿಂದ ಇನ್ನೊಂದು ಘಂಟೆ ಅಷ್ಟೇ ಅಲ್ಲಿ ಹೋಗಿ ಏನು ಮಾಡೋದು. ಲೋ ಕಿಟ್ಟಿ ಮೊದಲು ಅಲ್ಲಿ ಹೋಗೋಣ ಆಮೇಲೆ ನೋಡೋಣ ಏನು ಮಾಡೋದು ಎಂದು ಗಾಡಿಯ ವೇಗ ಹೆಚ್ಚಿಸಿದ. ಸ್ವಲ್ಪ ದೂರ ಬರುವಷ್ಟರಲ್ಲಿ ಮದನಪಲ್ಲಿ ಎಡಗಡೆಗೆ ಎಂದು ಬಾಣದ ಚಿಹ್ನೆ ಇದ್ದ ಬೋರ್ಡ್ ಕಂಡಿತು. ವಿಕ್ಕಿ ಗಾಡಿಯ ವೇಗವನ್ನು ಕಡಿಮೆ ಮಾಡಿ ಎಡಕ್ಕೆ ತಿರುಗಿಸಲು ಮುಂದಾದ. ವಿಕ್ಕಿ ಇಷ್ಟು ಬೇಗ ಮದನಪಲ್ಲಿ ಬರಲ್ಲ ಕಣೋ ಇನ್ನು ಮುಂದೆ ಹೋಗಬೇಕು ಇದ್ಯಾವುದೋ ಬೇರೆ ಹಳ್ಳಿ ಇರಬೇಕು ಕಣೋ. ಇರು ಅಲ್ಯಾರೋ ಕೂತಿದ್ದಾರೆ ಅವರನ್ನೊಮ್ಮೆ ಕೇಳುತ್ತೇನೆ ಕಾರಿನಿದ ಇಳಿದು ಆ ವ್ಯಕ್ತಿಯ ಬಳಿ ಹೋಗಿ ಸ್ವಾಮಿ ಎಂದೆ.
ಆ ವ್ಯಕ್ತಿ ತಲೆಯ ಮೇಲೊಂದು ಶಾಲು ಹೊದ್ದುಕೊಂಡು ತಲೆ ತಗ್ಗಿಸಿ ಕೊಂಡು ಕುಳಿತಿದ್ದ. ನನ್ನ ಧ್ವನಿ ಕೇಳಿ ತಲೆ ಮೇಲೆತ್ತಿದ ಅಷ್ಟೇ ಎರಡು ಕ್ಷಣ ಬೆಚ್ಚಿ ಹಿಂದಕ್ಕೆ ಹೆಜ್ಜೆ ಇಟ್ಟೆ. ಏಕೆಂದರೆ ಅವನ ಮುಖ ಅಷ್ಟು ವಿಕಾರವಾಗಿತ್ತು. ಅರ್ಧ ಮುಖ ಸುಟ್ಟು ಒಂದು ಕಣ್ಣೇ ಇರಲಿಲ್ಲ. ಹಾಗೆ ಕೆಳಗೆ ನೋಡಿದರೆ ಎರಡೂ ಕಾಲು ಇರಲಿಲ್ಲ. ಮೊಣಕಾಲಿನವರೆಗೆ ಮಾತ್ರ ಇತ್ತು. ನಾನು ಸ್ವಲ್ಪ ಸುಧಾರಿಸಿಕೊಂಡು ಮದನಪಲ್ಲಿಗೆ ಅಂದೇ ಅಷ್ಟೇ. ಅವನು ಕ್ಷಣಕಾಲ ನನ್ನ ಮುಖವನ್ನು ತನ್ನ ಒಕ್ಕಣ್ಣಿ ನಿಂದ ದಿಟ್ಟಿಸಿ ನೋಡಿ ಎಡಗಡೆ ಕೈ ತೋರಿಸುತ್ತ ಏನಪ್ಪಾ ಈಗ ಬರ್ತಾ ಇದ್ದೀಯ. ಎಲ್ಲ ಮುಗಿದ ಮೇಲೆ ಬಂದು ಏನು ಮಾಡ್ತಾ ಇದ್ದೀಯ. ಹತ್ತು ವರ್ಷದಿಂದ ಕಾಯ್ತಾನೆ ಇದ್ದೀನಿ ಬಾ ಬಾ ಎಂದು ತೆವಳಿಕೊಂಡು ನನ್ನೆಡೆಗೆ ಬರುತ್ತಿದ್ದ. ಅಲ್ಲಿಂದ ಒಂದೇ ಓಟ ಕಿಟ್ಟಿ ಕಾರಿನ ಬಳಿ ಬಂದು ಮೊದಲು ಕಾರು ತಿರುಗಿಸು ಇದೆ ದಾರಿ ಎಡಕ್ಕೆ ಕಾರು ತಿರುಗಿಸಿ ಭರ್ರನೆ ಅಲ್ಲಿಂದ ಹೊರಟೆವು. ಸ್ವಲ್ಪ ದೂರದವರೆಗೆ ಟಾರು ರಸ್ತೆ ಇದ್ದು ಇದ್ದಕ್ಕಿದ್ದಂತೆ ಮಣ್ಣಿನ ರಸ್ತೆ ಶುರುವಾಯಿತು. ನನಗ್ಯಾಕೋ ಅನುಮಾನ ಶುರುವಾಗಿ ವಿಕ್ಕಿ ನನಗ್ಯಾಕೋ ಡೌಟು ಕಣೋ ಇದೆ ರಸ್ತೇನೋ ಅಲ್ವೋ ಅಂತ. ಯಾಕೆಂದರೆ ನಾನು ಕಳೆದ ಬಾರಿ ತಿರುಪತಿಗೆ ಹೋದಾಗ ಮದನಪಲ್ಲಿ ರಸ್ತೆ ಇಷ್ಟು ಕೆಟ್ಟದಾಗಿರಲಿಲ್ಲ ಕಣೋ. ಅದೂ ಅಲ್ಲದೆ ಅವನ್ಯಾರೋ ಹುಚ್ಚ ಇದ್ದ ಹಾಗೆ ಇದ್ದ ಅವನ ಮಾತು ಕೇಳಿ ನಾವು ಈ ಕಡೆ ಬಂದಿದ್ದೇವೆ ಎಂದು ಒಮ್ಮೆ ಕಿಟಕಿಯಿಂದ ಬಗ್ಗಿ ನೋಡಿದರೆ ಅಲ್ಲಿ ಕುಳಿತಿದ್ದ ವ್ಯಕ್ತಿ ಅಲ್ಲೆಲ್ಲೂ ಕಾಣಲಿಲ್ಲ. ನನಗೆ ಮೈಯೆಲ್ಲಾ ಥರಗುಟ್ಟಲು ಶುರುವಾಯಿತು. ಲೋ ವಿಕ್ಕಿ ಎಲ್ಲೋ ಇಷ್ಟು ಹೊತ್ತು ನಾವು ಹುಚ್ಚ ಅಂದ ವ್ಯಕ್ತಿ ಅಲ್ಲಿ ಕಾಣ್ತಾನೆ ಇಲ್ವಲ್ಲೋ ಎಂದರೆ ಅಯ್ಯೋ ಸುಮ್ನೆ ಕೂತ್ಕೊಳೋ ಬಹುಶಃ ಇದು ಶಾರ್ಟ್ ಕಟ್ ರಸ್ತೆ ಇರುತ್ತದೆ. ಇಲ್ಲ ಅಂದರೆ ಮುಂದೆ ಯಾರನ್ನಾದರೂ ಕೇಳಿ ತಿಳಿದುಕೊಳ್ಳೋಣ ಎಂದ. ಅದಕ್ಕೆ ನಾನು ಈ ಬಾರಿ ನೀನೆ ಕೇಳಪ್ಪ ನಾನು ಕೇಳಲ್ಲ ಎಂದೆ. ಆಯ್ತು ಆಯ್ತು ಎಂದು ಮುಂದೆ ಸಾಗುತ್ತಿದ್ದ. ನಾನು ಮತ್ತೊಮ್ಮೆ ಹಿಂದೆ ತಿರುಗಿಎ ನೋಡಿದರೆ ಇನ್ಯಾರೋ ಒಬ್ಬರು ಕೈ ಬೀಸಿಕೊಂಡು ಓದಿ ಬರುತ್ತಿದ್ದ ಹಾಗೆ ಕಾಣಿಸಿತು. ನನಗೆ ಭಯ ಮತ್ತಷ್ಟು ಜಾಸ್ತಿ ಆಗಿ ವಿಕ್ಕಿ ಸ್ವಲ್ಪ ಬೇಗ ಓಡಿಸೋ ಎಂದು ಮುಂದಕ್ಕೆ ಕಣ್ಣಿಟ್ಟೆ. ನಮ್ಮ ಕಾರಿನ ದೀಪ ಬಿಟ್ಟರೆ ಆ ರಸ್ತೆಯಲ್ಲಿ ಇನ್ಯಾವುದೇ ದೀಪ ಇರಲಿಲ್ಲ. ರಸ್ತೆಯ ಅಕ್ಕ ಪಕ್ಕ ಎಲ್ಲ ಪೂರ್ತಿ ಕತ್ತಲು ತುಂಬಿಕೊಂಡು ಗುಯ್....ಗುಯ್ ಎಂದು ಸದ್ದು ಮಾತ್ರ ಕೇಳುತ್ತಿತ್ತು.ಹಾಗೆ ಮುಂದಕ್ಕೆ ಸಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಪ್ರತ್ಯಕ್ಷವಾದ ಅವನು ಲಿಫ್ಟ್ ಕೇಳುವ ಹಾಗೆ ಕೈ ಸನ್ನೆ ಮಾಡಿ ತೋರಿಸುತ್ತಿದ್ದ. ಕಾರಿನ ದೀಪ ಅವನ ಮುಖದ ಮೇಲೆ ಬೀಳುತ್ತಿದ್ದ ಹಾಗೆ ನನಗೆ ಮತ್ತಷ್ಟು ಭಯವಾಯಿತು. ನಾವು ಮುಂಚೆ ದಾರಿ ಕೇಳಿದ ಮುದುಕನ ಮುಖದ ಹಾಗೆ ಇತ್ತು ಅವನ ಮುಖ. ವಿಕ್ಕಿ ಮೊದಲು ಸ್ಪೀಡ್ ಜಾಸ್ತಿ ಮಾಡು ಎಂದು ಕಣ್ಣು ಮುಚ್ಚಿಕೊಂಡು ಬಿಟ್ಟೆ. ಸ್ವಲ್ಪ ಹೊತ್ತ್ತಿನ ನಂತರ ಲೋ ಕಿಟ್ಟಿ ಕಣ್ಣು ಬಿಡೋ ಅಲ್ಲಿ ನೋಡೋ ಎಂದ. ನಾನು ಕಣ್ಣು ಬಿಟ್ಟೆ. ವಿಕ್ಕಿ ಕಾರನ್ನು ನಿಲ್ಲಿಸಿದ. ಸಮಯ ನೋಡಿದರೆ ೩.೪೦ ತೋರಿಸುತ್ತಿತ್ತು. ನಾವು ಯಾವುದೋ ಹಳಿಗೆ ಬಂದಿದ್ದೆವು.ಅಲ್ಲೊಂದು ಇಲ್ಲೊಂದು ಗುಡಿಸಲುಗಳು, ಸ್ವಲ್ಪ ಮುಂದೆ ಸಾಗಿದರೆ ಹಳೆ ಕಾಲದ ಹೆಂಚಿನ ಮನೆಗಳು ಕಂಡವು. ಅದೇನು ಬೇಸಿಗೆಯಲ್ಲಿ ಹಳ್ಳಿಯ ಜನ ಮನೆಯ ಮುಂದೆ ಜಗಲಿಯ ಮೇಲೋ ಇಲ್ಲ ಹಗ್ಗದ ಮಂಚದ ಮೇಲೆ ಮಲಗಿರುತ್ತಾರೆ. ಆದರೆ ಇಲ್ಲೇನು ಒಬ್ಬರು ಕಾಣುತ್ತಿಲ್ಲ. ಎಂದು ಕೊಂಡು ಹಾಗೆ ಮುಂದೆ ಬಂದರೆ ದೊಡ್ಡದೊಂದು ಮನೆ ಕಂಡಿತು. ಅಲ್ಲಿನ ಅಂಗಳದಲ್ಲಿ ಯಾರೋ ಮಲಗಿದ್ದರು. ಅವರನ್ನು ಎಬ್ಬಿಸಿ ದಾರಿ ಕೇಳೋಣ ಎಂದುಕೊಂಡು ಅವನ ಮಂಚದ ಬಳಿ ಹೋಗಿ ಸ್ವಾಮಿ ಸ್ವಾಮಿ ಎಂದ ವಿಕ್ಕಿ. ಮಲಗಿದ್ದ ಅವರು ದೊಡ್ಡದಾಗಿ ಆಕಳಿಸಿ ಎದ್ದು ಓಹ್ ನೀವಾ ಬನ್ನಿ ಬನ್ನಿ ಎಂದು ಬಹಳ ಪರಿಚಯಸ್ಥರ ಹಾಗೆ ಕೇಳಿದರು. ನಮಗೊಂದೂ ಅರ್ಥವಾಗಲಿಲ್ಲ. ಕೂಡಲೇ ವಿಕ್ಕಿ ಸ್ವಾಮಿ ನಾವು ನಿಮ್ಮನ್ನು ನೋಡುತ್ತಿರುವುದೇ ಮೊದಲ ಬಾರಿ ನೀವು ನೋಡಿದರೆ ಎಷ್ಟೋ ದಿನಗಳಿಂದ ನಮ್ಮ ಪರಿಚಯ ಇರುವ ಹಾಗಿ ಮಾತಾಡುತ್ತಿದ್ದೀರ ನನಗೊಂದು ಅರ್ಥವಾಗುತ್ತಿಲ್ಲ ಎಂದಿದ್ದಕ್ಕೆ ಆ ಮನುಷ್ಯ ಅದು ಬಿಡಿ ಈಗ ಹೇಳಿ ಏನು ವಿಷಯ ಎಂದು ಕೇಳಿದ. ನಾನಂತೂ ಗಾಭರಿಯಿಂದ ಒಂದು ಮಾತನ್ನು ಆಡುತ್ತಿರಲಿಲ್ಲ. ಎಲ್ಲ ವಿಕ್ಕಿನೆ ಮಾತಾಡುತ್ತಿದ್ದ. ಏನಿಲ್ಲ ನಾವು ಹಾಸ್ಲೆ ಹಿಲ್ಲ್ಸ್ ಗೆ ಹೋಗಬೇಕಿತ್ತು. ಆದರೆ ನಾವು ದಾರಿ ತಪ್ಪಿ ಬಂದಿದ್ದೇವೆ ಅನಿಸುತ್ತಿದೆ. ಇಲ್ಲಿಂದ ಹಾಸ್ಲೆ ಹಿಲ್ಸ್ ಗೆ ಹೊಗಬಹುದ ಎಂದು ಕೇಳಿದ್ದಕ್ಕೆ ಆ ವ್ಯಕ್ತಿ ಇಲ್ಲಿಂದ ಹಾಸ್ಲೆ ಹಿಲ್ಸ್ ಬಹಳ ದೂರ ನೀವು ಒಂದು ಕೆಲಸ ಮಾಡಿ ಈಗ ಇಲ್ಲೇ ಮಲಗಿ ಬೆಳಿಗ್ಗೆ ಎದ್ದು ಹೋಗಿ ಎಂದರು. ನಾನು ತಕ್ಷಣ ಹೌದು ವಿಕ್ಕಿ ಅವರು ಹೇಳಿದ್ದು ಸರಿ ಈಗ ಇಲ್ಲೇ ಮಲಗಿದ್ದು ಬೆಳಿಗ್ಗೆದ್ದು ಹೋಗೋಣ ಎಂದಿದ್ದಕ್ಕೆ ವಿಕ್ಕಿಯೂ ತಲೆಯಾಡಿಸಿದ.
ಆ ವ್ಯಕ್ತಿ ಮನೆ ಒಳಗೆ ಕರೆದುಕೊಂಡು ಹೋಗಿ ಬನ್ನಿ ಮನೆಯವರನ್ನು ಪರಿಚಯಿಸುತ್ತೇನೆ ಎಂದು ಒಬ್ಬೊಬ್ಬರ ಹೆಸರನ್ನು ಹಿಡಿದು ಕೂಗಿದ. ತಕ್ಷಣ ವಿಕ್ಕಿ ಸ್ವಾಮಿ ಈ ಹೊತ್ತಿನಲ್ಲಿ ಯಾಕೆ ಬೆಳಿಗ್ಗೆದ್ದು ಪರಿಚಯ ಮಾಡಿಕೊಂಡರೆ ಆಗುತ್ತದೆ. ಅವರು ನಿದ್ದೆಯಲ್ಲಿರುತ್ತಾರೆ ಯಾಕೆ ಎಬ್ಬಿಸುವುದು. ಹಾಗೆಲ್ಲಾ ಮನೆಯವರನ್ನು ಪರಿಚಯ ಮಾಡಿಕೊಳ್ಳದೆ ಯಾರನ್ನು ಮನೆಯೊಳಗೇ ಇರಲು ಬಿಡುವುದಿಲ್ಲ ಎನ್ನುವಷ್ಟರಲ್ಲಿ ಇಡೀ ಕುಟುಂಬ ಹಜಾರದಲ್ಲಿ ಆಗಮಿಸಿದ್ದರು. ಒಬ್ಬೊಬ್ಬರ ಪರಿಚಯ ಮಾಡಿಕೊಂಡು ಮೇಲೆ ಹೋಗಿ ಮಲಗುವಷ್ಟರಲ್ಲಿ ಸಾಕು ಸಾಕಾಗಿತ್ತು. ತುಂಬಾ ದಣಿದಿದ್ದರಿಂದ ಒಳ್ಳೆ ನಿದ್ದೆ ಹತ್ತಿಬಿಟ್ಟಿತು.
ಸಮಯ ಎಷ್ಟು ಏನು ಒಂದೂ ಅರಿವಿಲ್ಲದಂತೆ ನಿದ್ದೆ ಬಂದಿತ್ತು. ಇದ್ದಕ್ಕಿದ್ದಂತೆ ಕಣ್ಣಿಗೆ ಯಾವುದೋ ಪ್ರಖರವಾದ ಬೆಳಕು ಬೀಳುತ್ತಿತ್ತು. ಕಣ್ಣುಜ್ಜಿಕೊಂಡು ಎದ್ದು ಕಣ್ಣು ಬಿಟ್ಟರೆ ಕೆಲ ಹೊತ್ತು ನಮ್ಮ ಕಣ್ಣನ್ನು ನಾವೇ ನಂಬಲಾದೆವು. ಅಷ್ಟೇ ಅಲ್ಲದೆ ವಿಪರೀತ ಭಯ ಕೂಡ ಉಂಟಾಯಿತು. ನಾವು ಮಲಗಿದ್ದದ್ದು ಸುತ್ತಲೂ ಒಂದು ಇಪ್ಪತ್ತು ಸಮಾಧಿಗಳು ಇದ್ದ ಜಾಗದ ಮಧ್ಯದಲ್ಲಿ ಮಲಗಿದ್ದೆವು. ಸಮಾಧಿಗಳ ಮೇಲೆ ರಾತ್ರಿ ನಮಗೆ ಮಲಗಲು ಜಾಗ ಮಾಡಿಕೊಟ್ಟ ಮನೆಯ ಯಜಮಾನ, ಹಾಗೂ ಅವನು ಪರಿಚಯ ಮಾಡಿಕೊಟ್ಟ ಅವನ ಕುಟುಂಬದ ಹೆಸರುಗಳು ಇದ್ದವು. ದಿನಾಂಕ ನೋಡಿದರೆ ಹತ್ತು ವರ್ಷದ ಹಿಂದಿನ ದಿನಾಂಕ ಇತ್ತು. ಮೊದಲು ಅಲ್ಲಿಂದ ಆಚೆ ಬಂದರೆ ನಾವು ರಾತ್ರಿ ಕಂಡ ಆ ಮನೆ ಸುಟ್ಟು ಕರಕಲಾಗಿ ಪಾಳು ಬಿದ್ದ ಭೂತ ಬಂಗಲೆಯಂತೆ ಆಗಿತ್ತು. ಅಲ್ಲಿಂದ ಸ್ವಲ್ಪ ಮುಂದೆ ಬಂದರೆ ಅಲ್ಲಿದ್ದ ಗುಡಿಸಲುಗಳು, ಹೆಂಚಿನ ಮನೆಗಳು ಎಲ್ಲವೂ ಸುಟ್ಟು ಕರಕಲಾಗಿದ್ದವು. ನಿಧಾನವಾಗಿ ನಮಗೆ ಒಂದೊಂದೇ ಅರ್ಥವಾಗುತ್ತಿದ್ದಂತೆ ಸೀದಾ ಓಡಿ ಬಂದು ಕಾರನ್ನು ಹತ್ತಿ ಎಷ್ಟು ವೇಗವಾಗಿ ಸಾಧ್ಯವೋ ಅಷ್ಟು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೈವೇ ಗೆ ಬಂದು ರಾತ್ರಿ ನಾವು ಎಡಗಡೆ ತಿರುಗಿಕೊಂಡ ಜಾಗದಲ್ಲೇ ಸ್ವಲ್ಪ ದೂರದಲ್ಲಿ ಇದ್ದ ಟೀ ಅಂಗಡಿ ಒಂದರ ಮುಂದೆ ಕಾರು ನಿಲ್ಲಿಸಿ ಅಂಗಡಿಯವನಿಗೆ ಎರಡು ಟೀ ಕೊಡು ಎಂದು ಕೇಳಿದ್ದಕ್ಕೆ ಅವನು ಏನ್ ಸಾರ್ ಹೇಗಿತ್ತು ಊರು ಎಲ್ಲರೂ ಚೆನ್ನಾಗಿದಾರ ಎಂದು ವ್ಯಂಗ್ಯವಾಗಿ ಕೇಳಿದ. ನಮಗೆ ಆಶ್ಚರ್ಯವಾಗಿ ಅದ್ಯಾಕೆ ಹಾಗೆ ಕೇಳುತ್ತಿದ್ದೀರಾ ಎಂದಿದ್ದಕ್ಕೆ ಅವನು ಇನ್ನು ಹೇಗೆ ಸರ್ ಕೇಳಬೇಕು. ದೆವ್ವದ ಊರಿಗೆ ಅವರ ಮನೆಯಲ್ಲಿದ್ದು ಬಂದವರನ್ನು ಇನ್ನು ಹೇಗೆ ಸರ್ ಕೇಳಲಿ ಎಂದ. ನಮಗೆ ಅಷ್ಟು ಹೊತ್ತಿಗಾಗಲೇ ಅದು ದೆವ್ವದ ಆಟ ಎಂದು ಗೊತ್ತಾಗಿತ್ತು ಆದರೆ ಪೂರ್ತಿ ವಿಷಯ ತಿಳಿದುಕೊಳ್ಳೋಣ ಎಂದು ಅವನಲ್ಲಿ ವಿವರ ಕೇಳಿದಾಗ, ಅಯ್ಯೋ ಸ್ವಾಮಿ ಹತ್ತು ವರ್ಷದ ಹಿಂದೆ ಇಡೀ ಊರಿಗೆ ಊರೇ ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಹೋಯಿತು. ಆಮೇಲೆ ವಿಷಯ ಗೊತ್ತಾಗಿ ಅಕ್ಕಪಕ್ಕದ ಹಳ್ಳಿಗಳ ಜನ ಬಂದು ಆ ಶವಗಳನ್ನು ಅಲ್ಲೇ ಮಣ್ಣು ಮಾಡಿದರು. ಆದರೆ ನಂತರ ಅಲ್ಲಿ ಯಾರೂ ವಾಸ ಮಾಡಲು ಸಾಧ್ಯವಾಗಲಿಲ್ಲ. ಆ ಆತ್ಮಗಳು ಇನ್ನೂ ಅಲ್ಲೇ ಇವೆ. ಪ್ರತಿ ರಾತ್ರಿ ಜಾಗೃತವಾಗುತ್ತವೆ. ಅದಕ್ಕೆ ಅಪ್ಪಿ ತಪ್ಪಿ ಯಾರೂ ಆ ಹಳ್ಳಿಯ ಕಡೆ ಹೋಗುವುದಿಲ್ಲ. ಅದು ಸರಿ ನೀವ್ಯಾಕೆ ಆ ಹಳ್ಳಿಗೆ ಹೋದ್ರಿ ಅಸಲಿಗೆ ಎಲ್ಲಿಗೆ ಹೋಗಬೇಕಿತ್ತು ನೀವು. ನಾವು ಮದನಪಲ್ಲಿಗೆ ಹೋಗಬೇಕಿತ್ತು. ಅಲ್ಲಿದ್ದ ಬೋರ್ಡ್ ನೋಡಿ ಅಲ್ಲೇ ಪಕ್ಕದಲ್ಲಿದ್ದ ಮುದುಕನನ್ನು ಕೇಳಿದ್ದಕ್ಕೆ ಈ ಕಡೆ ಎಂದು ದಾರಿ ತೋರಿಸಿದ. ಅಯ್ಯೋ ಆ ಮುದುಕನ ಅವನೊಬ್ಬನೇ ಆ ದುರ್ಘಟನೆಯಲ್ಲಿ ಉಳಿದಿದ್ದು. ಆ ಘಟನೆಯಲ್ಲಿ ಒಂದು ಕಣ್ಣು ಕಳೆದುಕೊಂಡು ಕಾಲು ಕಳೆದುಕೊಂಡು ತನ್ನ ಮಗನನ್ನು ಕಳೆದುಕೊಂಡು ಹುಚ್ಚನಾಗಿ ಅವಾಗವಾಗ ಇಲ್ಲಿ ಕಾಣಿಸುತ್ತಾನೆ. ಅಪ್ಪಿ ತಪ್ಪಿ ಯಾರಾದರೂ ಮಾತಾಡಿಸಿದರೆ ತನ್ನ ಮಗನೆ ಬಂದನೆಂದುಕೊಂಡು ಬಾ ನಿನಗೆ ಕಾಯ್ತಾ ಇದ್ದೆ. ಹತ್ತು ವರ್ಷ ಬೇಕಾ ಹಾಗೆ ಹೀಗೆ ಏನೇನೋ ಮಾತಾಡುತ್ತಾನೆ. ನೀವು ಕಾರು ತಿರುಗಿಸಿದ್ದು ನೋಡಿ ನಿಮ್ಮನ್ನು ನಿಲ್ಲಿಸಲು ನಾನು ನಿಮ್ಮ ಕಾರಿನ ಹಿಂದೆ ಕೈ ಬೀಸುತ್ತ ಕೂಗುತ್ತಾ ಓಡಿ ಬಂದೆ ಆದರೆ ನೀವು ನಿಲ್ಲಿಸಲಿಲ್ಲ. ಸರಿ ಹೇಗಿದ್ದರೂ ಬೆಳಿಗ್ಗೆ ಬರುತ್ತೀರಾ ಎಂದು ಗೊತ್ತಿತ್ತು. ಅದೆಲ್ಲಕ್ಕಿ೦ತ ಮುಖ್ಯವಾಗಿ ಈ ಹಳ್ಳಿ ಮದನಪಲ್ಲಿ ಅಲ್ಲ ಅದು ಮದ್ದನಪಲ್ಲಿ. ಯಾರೋ ಹುಡುಗರು ದ ಕೆಳಗಿನ ಒತ್ತನ್ನು ಕೆತ್ತಿ ಬಿಟ್ಟಿದ್ದಾರೆ ಎಂದ.
ನಮಗೆ ಹೇಗಾಯಿತು ಎಂದರೆ..
Comments
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by kavinagaraj
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by makara
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by Chikku123
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by sathishnasa
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by RAMAMOHANA
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by RAMAMOHANA
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by ಗಣೇಶ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by venkatb83
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by Jayanth Ramachar
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by ಗಣೇಶ
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by venkatb83
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by bhalle
ಉ: ಕಥೆ = ಆ ರಾತ್ರಿ