ಸರ್ವಶುಕ್ಲಾ ಸರಸ್ವತೀ!
ದಂಡಿ ಸುಮಾರು ೬-೭ ಶತಮಾನದಲ್ಲಿದ್ದ ಸಂಸ್ಕೃತ ಕವಿ. ಅವನದಾಗಿ ಸಿಕ್ಕಿರುವುದು ಎರಡು ರಚನೆಗಳು. ಒಂದು ದಶಕುಮಾರ ಚರಿತೆ ಅನ್ನುವ ಕಾಲ್ಪನಿಕ ಕಥೆ, ಮತ್ತೆ ಕಾವ್ಯಾದರ್ಶ ಎಂಬ ಕಾವ್ಯ ಲಕ್ಷಣ ಗ್ರಂಥ.
ಕಾವ್ಯಾದರ್ಶದ ಮೊದಲ ಶ್ಲೋಕ ಹೀಗಿದೆ:
ಚತುರ್ಮುಖ ಮುಖಾಂಬೋಜ ವನಹಂಸ ವಧೂರ್ಮಮ |
ಮಾನಸೇ ರಮತಾಂ ದೀರ್ಘಮ್ ಸರ್ವಶುಕ್ಲಾ ಸರಸ್ವತೀ ||
ಇದರ ಸಾರಾಂಶ ಸುಮಾರಾಗಿ ಹೀಗೆ:
ನಾಲ್ಮೊಗದವನ ಮಡದಿ ನೀನೆನ್ನ ಮನದಲಿ
ಹಂಸದೊಲು ಸದಾ ನಲಿ! ಬಿಳಿಮೈಯ ಸರಸ್ವತೀ!
ಸರಸ್ವತಿಯನ್ನು ಸರ್ವಶುಕ್ಲಾ ಎಂದು ಕರೆದಿರುವುದನ್ನು ಗಮನಿಸಿ.
ಈ ಶ್ಲೋಕ ನಮಗೆ ಏಕೆ ಮುಖ್ಯವಾಗುತ್ತೆ? ಕನ್ನಡದಲ್ಲಿ ದೊರೆತ ಮೊದಲ ಹೊತ್ತಿಗೆ - ಕವಿರಾಜಮಾರ್ಗ. ಅದು ದಂಡಿಯ ಕಾವ್ಯಾದರ್ಶದ ರೂಪಾಂತರವೇ ಆಗಿದೆ.
ಕಾವ್ಯಾದರ್ಶದ ಮೊದಲ ಶ್ಲೋಕ, ಕವಿರಾಜಮಾರ್ಗದಲ್ಲಿ ಮೂರನೇ ಕಂದವಾಗಿದೆ. ಕವಿ ಬಹುಶಃ ಜೈನನಾದದ್ದರಿಂದ, ಬ್ರಹ್ಮ (ನಾಲ್ಮೊಗದ)ನ ವಿಷಯವನ್ನು ಅದು ಎತ್ತುವುದಿಲ್ಲ ಎಂದು ತಿಳಿದವರು ಹೇಳಿದ್ದಾರೆ.
ಶ್ರೀ ವಿಶದವರ್ಣೆ ಮಧುರಾ
ರಾವೋಚಿತೆ ಚತುರ ರುಚಿರ ಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನದದೊಳ್
ಎಂದಿದ್ದಾನೆ ಕವಿರಾಜಮಾರ್ಗಕಾರ. ಸರಸ್ವತಿಗೆ ಬಿಳಿಮೈಯವಳು ಎಂಬುದರ ಜೊತೆಗೆ ಇನ್ನೊಂದೆರಡು ವಿಶೇಷಣಗಳನ್ನು ಕೂಡಾ ಸೇರಿಸಿದ್ದಾನೆ.
ಇವರಿಬ್ಬರ ನಂತರ ಕಲ್ಯಾಣಿ ಚಾಲುಕ್ಯ ರಾಜರ ಕಾಲದಲ್ಲಿ ಒಬ್ಬ ರಾಜನ ಹೆಂಡತಿ ವಿಜ್ಜಿಕೆ ಎಂಬುವಳಿದ್ದಳು. ಅವಳು ಒಬ್ಬ ಕವಯಿತ್ರಿ. ಸುಮಾರು ಮೊದಮೊದಲಾಗಿ ಕಾವ್ಯ ರಚನೆಗೆ ತೊಡಗಿದ ಮಹಿಳೆಯರಲ್ಲಿ ಮುಂಚೂಣಿಯಲ್ಲಿದ್ದವಳು ಎಂದು ತೋರುತ್ತೆ. ಅವಳು ತನ್ನ ಬಗ್ಗೆ ಹೇಳಿಕೊಂಡಿರುವ ಪರಿಚಯ ಹೀಗಿದೆ.
ನೀಲೋತ್ಪಲ ಶ್ಯಾಮಾಂ ವಿಜ್ಜಿಕಾಂ ಮಾಮಜಾನತ |
ವ್ಯರ್ಥೇನ ದಂಡಿನಾ ಪ್ರೋಕ್ತಾ ಸರ್ವಶುಕ್ಲಾ ಸರಸ್ವತೀ ||
ಇದರ ಭಾವಾನುವಾದ ಹೀಗಿದೆ:
ಕನ್ನೈದಿಲೆಯೋಲ್ವ ಈ ವಿಜ್ಜಿಕೆಯನರಿಯದೆಯೆ
ದಂಡಿ ನುಡಿದುದು ದಂಡ- ಸರಸ್ವತಿ ಬಿಳುಪೆಂದು!
ಈಕೆಯ ಆತ್ಮವಿಶ್ವಾಸ ಅಚ್ಚರಿಯನ್ನು ತರುವಂತಹದ್ದು, ಅಲ್ಲವೇ?
-ಹಂಸಾನಂದಿ
Comments
ಉ: ಸರ್ವಶುಕ್ಲಾ ಸರಸ್ವತೀ!
ಉ: ಸರ್ವಶುಕ್ಲಾ ಸರಸ್ವತೀ!
ಉ: ಸರ್ವಶುಕ್ಲಾ ಸರಸ್ವತೀ!
ಉ: ಸರ್ವಶುಕ್ಲಾ ಸರಸ್ವತೀ!