"ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೨)
ಈ ಸರಣಿಯ ಹಿಂದಿನ ಲೇಖನ ಭಾಗ - ೬ (೧) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AC-%E0%B3%A7/15/04/2012/36398
=================================================================================
ಯೋಗಸೂತ್ರಗಳ ಸಿದ್ಧಾಂತ
ಪತಂಜಲಿ ವಿರಚಿತ ಯೋಗಸೂತ್ರವು ಮೂಲವಾಗಿ ಅಧ್ಯಾತ್ಮಿಕ ಸಾಧನೆ ಮತ್ತು ನಿಯಮಗಳ ಬಗ್ಗೆ ಪ್ರತಿಪಾದಿಸಿದರೂ ಕೂಡ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ ಅದರ 'ಸಾಂಖ್ಯ'ದ ಹಿನ್ನಲೆಯ ಮೂಲವನ್ನು ಸ್ವಲ್ಪ ತಿಳಿದುಕೊಂಡಿರುವುದು ಒಳಿತು.
ಯೋಗದರ್ಶನವು ಮೂಲತಃ ಮೂರು ರೀತಿಯ ವಾಸ್ತವತೆಗಳನ್ನು ಒಪ್ಪಿಕೊಳ್ಳುತ್ತದೆ. ಅವೆಂದರೆ, ಈಶ್ವರ, ಪುರುಷರು ಮತ್ತು ಪ್ರಧಾನ ಅಥವಾ ಪ್ರಕೃತಿ. ಪುರುಷರು ಎಂದರೆ ಪ್ರತ್ಯೇಕ ಜೀವಿಗಳು. ಅವುಗಳು ಚಿದ್ರೂಪರು ಅಥವಾ ಪ್ರಜ್ಞಾ ಸ್ವರೂಪವನ್ನುಳ್ಳವರು ಮತ್ತು ಇವುಗಳು ಅಸಂಖ್ಯಾತವಾಗಿವೆ. ಈಶ್ವರನನ್ನು 'ಪುರುಷವಿಶೇಷ' - ವಿಶೇಷ ಪುರುಷ ಅಥವಾ ಅದ್ವಿತೀಯ ಪುರುಷ ಎಂದು ಕರೆಯಲಾಗಿದೆ ಮತ್ತವನ ಇರುವಿಕೆಯನ್ನು ಶಾಸ್ತ್ರಮುಖೇನ ಮಾತ್ರವೇ ಕಂಡುಕೊಳ್ಳಬಹುದು. ಅವನು ಸರ್ವಜ್ಞನು ಅಥವಾ ಎಲ್ಲದರ ಬಗ್ಗೆಯೂ ಜ್ಞಾನವನ್ನು ಹೊಂದಿದವನು. ಪ್ರಕೃತಿಯ ಶೃಂಖಲೆಗಳಿಂದ ಬಂಧನಕ್ಕೊಳಗಾಗದೇ ಇರುವ ಅವನು ನಿತ್ಯಮುಕ್ತನು. ಅವನೇ ಆದಿಗುರು - ಪ್ರಥಮ ಶಿಕ್ಷಕ. ಪ್ರಣವ ಅಥವಾ ಓಂ ಎನ್ನುವುದು ಅವನ ಪ್ರತೀಕ. ಅವನ ಇಚ್ಛೆಯಿಂದ ಪುರುಷರ ಕರ್ಮಕ್ಕನುಗುಣವಾಗಿ ಮೂರುಗುಣಗಳಾದ - ಸತ್ವ, ರಜೋ ಹಾಗು ತಮೋ ಗುಣಗಳಿಂದೊಡಗೂಡಿದ ಪ್ರಕೃತಿಯ ಸಮಾಗಮದಿಂದ ಸೃಷ್ಠಿಯ ಉಗಮವಾಗುತ್ತದೆ. ಪ್ರಕೃತಿಯ ಉತ್ಪನ್ನಗಳಾದ, ಮಹತ್ (ವಿಶ್ವದ ಬುದ್ಧಿ), ಅಹಂಕಾರ(ನಾನು ಎನ್ನುವ ಭಾವನೆ), ಮನಸ್(ವಿಶ್ವದ ಮನಸ್ಸು), ತನ್ಮಾತ್ರೆಗಳು(ಸೂಕ್ಷ್ಮ ಧಾತುಗಳು) ಮೊದಲಾದವುಗಳು ಸಾಂಖ್ಯ ಪದ್ಧತಿಯಲ್ಲಿ ಪ್ರತಿಪಾದಿಸಿರುವಂತೆ ರೂಪುಗೊಳ್ಳುತ್ತವೆ.
ಪುರುಷನು ಅದು ಹೇಗೋ ಅವಿದ್ಯಾ ಅಥವಾ ಅಜ್ಞಾನದ ಪ್ರಭಾವಕ್ಕೊಳಗಾಗಿ ತನ್ನ ನಿಜ ಸ್ವರೂಪವಾದ ಚಿದ್ರೂಪವನ್ನು ಮರೆತು; ಪ್ರಕೃತಿಯ ವಿವಿಧ ರೂಪಾಂತರಗಳೊಳಗೆ ಸಿಲುಕಿ ಹುಟ್ಟು, ಸಾವು ಮತ್ತವುಗಳ ಸ್ಥಿತ್ಯಂತರಗಳನ್ನು ಅನುಭವಿಸುತ್ತಾನೆ. ಆದರೆ ಜೀವಿಯು ಸಾಧನೆಗಳನ್ನು ಅಂದರೆ ಅಷ್ಟಾಂಗ ಅಥವಾ ಯೋಗದ ಎಂಟು ಸೋಪಾನಗಳನ್ನು ಕೈಗೊಂಡಾಗ ಅವನು ತನ್ನ ಸ್ವರೂಪವನ್ನು ಅರಿಯುತ್ತಾನೆ ಮತ್ತು ತಕ್ಷಣವೇ ಸಂಸಾರದ ಹುಟ್ಟು ಸಾವುಗಳ ಸ್ಥಿತ್ಯಂತರಗಳಿಂದ ಬಿಡುಗಡೆ ಹೊಂದುತ್ತಾನೆ. ಆತ್ಮನು ತನ್ನೊಳಗೆ ಐಕ್ಯಗೊಂಡು, ಸಂಸಾರದಿಂದ ಬಿಡುಗಡೆ ಹೊಂದುವುದನ್ನೇ ಕೈವಲ್ಯವೆನ್ನುತ್ತಾರೆ.
"ಚಿತ್ತವೃತ್ತಿಗಳನಿರೋಧ"ವಾಗಿ ಯೋಗ
ಪತಂಜಲಿಯು "ಚಿತ್ತವೃತ್ತಿಗಳನಿರೋಧ"ವೇ 'ಯೋಗ'ವೆಂದು ಕರೆದಿದ್ದಾನೆ (ಯೋಗಸೂತ್ರ ೧.೨). ಚಿತ್ತ ಅಥವಾ ಮನಸ್ಸಿನ ಎಲ್ಲಾ ವೃತ್ತಿ ಅಥವಾ ಮಾರ್ಪಾಟುಗಳನ್ನು ನಿಯಂತ್ರಣ ಮತ್ತು ನಿಗ್ರಹ(ನಿರೋಧ)ದಲ್ಲಿಟ್ಟರೆ ಪುರುಷ ಅಥವಾ ಆತ್ಮನ ನೈಜ ಸ್ವರೂಪವು ಅನಾವರಣಗೊಳ್ಳುತ್ತದೆ. ಚಿತ್ತವು ಮನಸ್ಸಿನ ಪದಾರ್ಥವಾಗಿದ್ದು ಅದನ್ನು ಅಂತಃಕರಣ (ಒಳಗಿನ ಸಾಧನ), ಮನಸ್ (ಮನಸ್ಸು) ಅಥವಾ ಬುದ್ಧಿ ಮೊದಲಾದ ಶಬ್ದಗಳಿಂದ ಕರೆಯಲಾಗಿದೆ. ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ ಮೊದಲಾದವುಗಳ ಮುಖಾಂತರ ವಿಷಯ ವಸ್ತುಗಳು ಮನಸ್ಸಿನ ಒಳಗೆ ಉಂಟು ಮಾಡುವ ಆಲೋಚನಾ ತರಂಗಗಳು, ಭಾವನೆಗಳು ಮತ್ತು ಉದ್ವೇಗಗಳನ್ನೇ ಚಿತ್ತವೃತ್ತಿಗಳೆಂದು ಕರೆದಿದ್ದಾರೆ. ಈ ಚಿತ್ತವೃತ್ತಿಗಳು ಅಸಂಖ್ಯಾತವೆಂದು ಕಂಡುಬಂದರೂ ಕೂಡ ಅವುಗಳನ್ನು ಐದು ವರ್ಗಗಳಾಗಿ ವಿಂಗಡಿಸಬಹುದು. ಅವೆಂದರೆ, 'ಪ್ರಮಾಣ'(ನೈಜ ಜ್ಞಾನದ ಮೂಲಗಳು), 'ವಿಪರ್ಯಯ'(ಅಸಂಬದ್ಧ ಜ್ಞಾನ), 'ವಿಕಲ್ಪ'(ಒಂದು ಶಬ್ದವನ್ನು ಕೇಳಿದಾಗ ಮನಸ್ಸಿನಲ್ಲಿ ಮೂಡುವ ಚಿತ್ರ), 'ನಿದ್ರಾ'(ನಿದ್ದೆ) ಮತ್ತು 'ಸ್ಮೃತಿ'(ನೆನಪು).
'ಪ್ರಮಾಣ'ವೆಂದರೆ ಸರಿಯಾದ ಜ್ಞಾನವನ್ನು ಹೊಂದಲು ಇರುವ ಮಾಧ್ಯಮ. ಪ್ರಮಾಣಗಳು ಮೂರು - ಪ್ರತ್ಯಕ್ಷ (ನೇರವಾದ ಅನುಭವ), ಅನುಮಾನ (ನಿಷ್ಕರ್ಷೆ ಅಥವಾ ಕ್ರಮಬದ್ಧ ಜ್ಞಾನ) ಮತ್ತು ಆಗಮ (ನಂಬಲರ್ಹ ವ್ಯಕ್ತಿಯ ಮಾತು ಹಾಗೂ ಶ್ರುತಿಗಳ ವಾಕ್ಯಗಳು). 'ವಿಪರ್ಯಯ'ವೆಂದರೆ ಅಸಂಬದ್ಧ (ಅಸ್ಪಷ್ಟ)ವಾದ ಜ್ಞಾನ - ಹಗ್ಗವನ್ನು ಹಾವೆಂದು ಅರೆಕತ್ತಲಿನಲ್ಲಿ ತಿಳಿಯುವಂತೆ. 'ವಿಕಲ್ಪ'ವೆಂದರೆ ಒಂದು ಶಬ್ದ ಅಥವಾ ಶಬ್ದಗಳನ್ನು ಕೇಳಿದೊಡನೆ ಮನಸ್ಸಿನಲ್ಲಿ ಮೂಢುವ ಚಿತ್ರ; ಉದಾಹರಣೆಗೆ "ರಾಹುವಿನ ತಲೆ" (ಕುಗ್ರಹವಾದ ರಾಹುವಿಗೆ ತಲೆಮಾತ್ರವಿದ್ದು ದೇಹದ ಉಳಿದ ಭಾಗವು ಇರುವುದಿಲ್ಲ). 'ನಿದ್ರಾ' ಅಥವಾ ನಿದ್ದೆಯ ಸ್ಥಿತಿಯೆಂದರೆ ತಮಸ್ಸಿನ ಆಧಿಪತ್ಯದಿಂದ ಮನಸ್ಸಿನಲ್ಲಿ ಏಳುವ ವಿಕಾರಗಳು. 'ಸ್ಮೃತಿ'ಯೆಂದರೆ ಹಿಂದಿನ ಅನುಭವಗಳ ನೆನಪು.
ಚಿತ್ತವೃತ್ತಿಗಳು ಪುರುಷನಿಗೆ ಅವಿದ್ಯೆ(ಅಜ್ಞಾನ), ಅಸ್ಮಿತಾ(ತಾನೆ ಎನ್ನುವ ಅಹಂಭಾವ) ಮೊದಲಾದವುಗಳಿಂದ 'ಕ್ಲೇಷ' ಅಥವಾ ದುಃಖವನ್ನು ಉಂಟು ಮಾಡಿದಾಗ ಅವನ್ನು 'ಕ್ಲಿಷ್ಟ'ವೆನ್ನುತ್ತಾರೆ. ಯಾವಾಗ ಚಿತ್ತವೃತ್ತಿಗಳು ಪುರುಷನು ಅವುಗಳಿಂದ ಬಿಡುಗಡೆಹೊಂದಲು ಸಹಾಯ ಮಾಡುತ್ತವೆಯೋ ಆಗ ಅವು 'ಅಕ್ಲಿಷ್ಟ'ವೆನಿಸುತ್ತವೆ.
ಚಿತ್ತ ಅಥವಾ ಮನಸ್ಸಿಗೆ ಐದು ಹಂತಗಳಿವೆ: ಕ್ಷಿಪ್ತ(ಚುರುಕು), ಮೂಢ(ನಿರಾಸಕ್ತಿ), ವಿಕ್ಷಿಪ್ತ (ಚಂಚಲ ಅಥವಾ ಚದುರಿದ), ಏಕಾಗ್ರ (ತಲ್ಲೀನ) ಮತ್ತು ನಿರುದ್ಧ (ನಿರ್ಲಿಪ್ತ ಅಥವಾ ನಿಗ್ರಹ). ಮೊದಲ ಮೂರು ಹಂತಗಳಲ್ಲಿ ಯೋಗವು ಸಾಧ್ಯವಿಲ್ಲ ಏಕೆಂದರೆ ಮನಸ್ಸು ಆಗ ರಜಸ್ಸು ಹಾಗು ತಮಸ್ಸಿನ ಆಧೀನಕ್ಕೊಳಪಟ್ಟಿರುತ್ತದೆ. ಯಾವಾಗ ಸತ್ವದ ಆಧಿಪತ್ಯವು ಉಂಟಾಗುತ್ತದೋ ಅದು ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಿ ಅದನ್ನು ಏಕಾಗ್ರತೆಯಿಂದ 'ಸಂಪ್ರಜ್ಞತ-ಸಮಾಧಿ'ಯ(ನಿಖರವಾದ ಧ್ಯಾನದಿಂದ ಲಕ್ಷದ ಬಗ್ಗೆ ಸ್ಪಷ್ಟ ತಿಳುವಳಿಕೆ ಉಂಟಾಗುವ ಸ್ಥಿತಿ) ಕಡೆಗೆ ಕೊಂಡೊಯ್ಯುತ್ತದೆ. ಕಡೆಯದಾದ ನಿರುದ್ಧ ಸ್ಥಿತಿಯಲ್ಲಿ ಯಾವುದೇ ರೀತಿಯ ಚಿತ್ತವೃತ್ತಿಗಳು ಉತ್ಪನ್ನವಾಗದೆ ಮನಸ್ಸು 'ಅಸಂಪ್ರಜ್ಞ-ಸಮಾಧಿ'ಯ ಸ್ಥಿತಿಗೆ ಕೊಂಡೊಯ್ಯಲ್ಪಡುತ್ತದೆ. ಈ ಸ್ಥಿತಿಯಲ್ಲಿ ಯಾವುದೇ 'ಲಕ್ಷ್ಯ'ದ ಬಗ್ಗೆ ಪುರುಷನಿಗೆ ಪರಿವೆಯಿರುವುದಿಲ್ಲ ಆದರೆ ಅವನು ತನ್ನೊಳಗೆ ಅಂದರೆ ಆತ್ಮದ ಸ್ವರೂಪದೊಂದಿಗೆ ಸಂಪೂರ್ಣ ತನ್ಮಯನಾಗುತ್ತಾನೆ. ಆವಾಗ ಪುರುಷನು ಮುಕ್ತನಾಗುತ್ತಾನೆ; ಅಂದರೆ ಬಂಧನದಿಂದ ಬಿಡುಗಡೆಗೊಂಡ ಆತ್ಮನಾಗುತ್ತಾನೆ - ಅಂದರೆ ಪ್ರಕೃತಿಯ ಎಲ್ಲಾ ಸಂಕಷ್ಟಗಳಿಂದ ಪಾರಾದವನಾಗಿರುತ್ತಾನೆ.
ಯೋಗಕ್ಕೆ ಬರುವ ಪ್ರತಿರೋಧಗಳು
ಪತಂಜಲಿಯು ಯೋಗಕ್ಕೆ ಬರುವ ಅಡ್ಡಿಗಳನ್ನು 'ಅಂತರಾಯ'(ಮಧ್ಯದಲ್ಲಿ ಬರುವವು)ಗಳೆಂದು ಕರೆಯುತ್ತಾನೆ ಮತ್ತು ಅವು ಒಂಭತ್ತು ವಿಧವಾದವುಗಳು ಎಂದು ಪಟ್ಟಿ ಮಾಡುತ್ತಾನೆ (೧.೩೦). ಅವೆಂದರೆ, ವ್ಯಾಧಿ (ರೋಗ/ಖಾಯಿಲೆ), ಸ್ಥ್ಯಾನ(ಅಯಿಷ್ಟತೆ/ನಿರಾಸಕ್ತಿ), ಸಂಶಯ (ಶಂಖೆ), ಪ್ರಮಾದ (ಅವಘಡ), ಆಲಸ್ಯ(ಸೋಮಾರಿತನ), ಅವಿರತಿ (ವೈರಾಗ್ಯ ಹೀನತೆ/ಪ್ರಾಪಂಚಿಕ ವಸ್ತುಗಳಲ್ಲಿ ಆಸಕ್ತಿ), ಭ್ರಾಂತಿದರ್ಶನ (ತಪ್ಪು ತಿಳುವಳಿಕೆ/ಅನುಭವ), ಅಲಬ್ಧಭೂಮಿಕತ್ವ(ಯೋಗದ ವಿವಿಧ ಹಂತಗಳನ್ನು ಮುಟ್ಟಲಾಗದೇ ಇರುವುದು) ಮತ್ತು ಅನವಸ್ಥಿತತ್ವ (ಯೋಗದ ಸ್ಥಿತಿಯಲ್ಲಿ ನಿಲ್ಲಲಾಗದೇ ಇರುವುದು).
ಖಾಯಿಲೆಯನ್ನು ಸೂಕ್ತವಾದ ಚಿಕಿತ್ಸೆಯಿಂದ ಶಮನಗೊಳಿಸಬೇಕು. ನಿರಾಸಕ್ತಿಯನ್ನು ಮನೋಬಲವನ್ನು ಗಟ್ಟಿಗೊಳಿಸಿಕೊಳ್ಳುವುದರ ಮೂಲಕ ನಿವಾರಿಸಿಕೊಳ್ಳಬೇಕು. ಸಂಶಯವನ್ನು ಶ್ರುತಿಗಳ ಮತ್ತು ಗುರುಗಳ ಮೇಲೆ ನಂಬಿಕೆಯಿರಿಸಿ ಹೊಡೆದೋಡಿಸಬೇಕು. ನಿರಂತರ ಎಚ್ಚರಿಕೆಯಿಂದ ಪ್ರಮಾದಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಆಲಸ್ಯತನ ಅಥವಾ ಸೋಮಾರಿತನವನ್ನು ನಿರಂತರ ಚಟುವಟಿಕೆಯಿಂದ ಗೆಲ್ಲಬೇಕು. ಅವಿರತಿಯನ್ನು ವಿವೇಕ (ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ವಿವೇಚನೆ) ಮತ್ತು ವೈರಾಗ್ಯ(ಪ್ರಾಪಂಚಿಕತೆಯನ್ನು ತೊರೆಯುವುದು) ಇವುಗಳ ಮೂಲಕ ಶೂನ್ಯವಾಗಿಸಬೇಕು. ಕಡೆಯ ಮೂರು ಪ್ರತಿರೋಧಗಳಾದ ಭ್ರಾಂತಿದರ್ಶನ, ಅಲಬ್ಧಭೂಮಿಕತ್ವ ಮತ್ತು ಅನವಸ್ಥಿತತ್ವಗಳನ್ನು ಯೋಗ್ಯ ಗುರುವಿನ ಮಾರ್ಗದರ್ಶನದಂತೆ ನಡೆದು ಇಲ್ಲವಾಗಿಸಿಕೊಳ್ಳಬೇಕು.
ಪತಂಜಲಿಯು ಮನಸ್ಸನ್ನು ವಿಚಲಿತಗೊಳಿಸುವ ಇನ್ನೂ ಐದು ಅಂತರಾಯಗಳನ್ನು ಈ ಪಟ್ಟಿಗೆ ಸೇರಿಸುತ್ತಾನೆ. ಅವೆಂದರೆ: ದುಃಖ (ಯಾತನೆ/ನೋವು), ದೌರ್ಮನಸ್ಯ (ಹತಾಶೆ/ಆಶಾಭಂಗ), ಅಂಗಮೆಜಯತ್ವ(ದೇಹದ ಅಂಗಗಳ/ಕೈಕಾಲುಗಳ ಅವಿಶ್ರಾಂತತೆ), ಶ್ವಾಸ ಮತ್ತು ಪ್ರಶ್ವಾಸ (ಲಯಬದ್ಧವಾಗಿ ಉಸಿರನ್ನು ಬಿಡುವುದು ಮತ್ತು ತೆಗೆದುಕೊಳ್ಳುವುದಕ್ಕೆ ಉಂಟಾಗುವ ತೊಂದರೆ). ಇವುಗಳನ್ನು ಕೂಡ ಸೂಕ್ತ ಕ್ರಮಗಳಿಂದ ನಿವಾರಿಸಿಕೊಳ್ಳಬೇಕು.
ಮುಂದುವರೆಯುವುದು............
============================================================================
ವಿ. ಸೂಃ ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophyಯಲ್ಲಿಯ Yoga Darshanaನದ೪೮ ರಿಂದ ೫೨ನೆಯ ಪುಟದ ಅನುವಾದದ ಭಾಗ.
ಚಿತ್ರಕೃಪೆಃ ಗೂಗಲ್
===============================================================================
ಈ ಸರಣಿಯ ಮುಂದಿನ ಲೇಖನ "ಯೋಗ ದರ್ಶನ" -ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬(೩)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AC-%E0%B3%A9/20/04/2012/36459
Comments
ಉ: "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by dattatraya
ಉ: "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
ಉ: "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by kavinagaraj
ಉ: "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
ಉ: "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by RAMAMOHANA
ಉ: "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...