ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?
ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ? ಈ ಪ್ರಶ್ನೆಗೆ ಶಾಲೆಗೆ ಹೋದ ಯಾರೂ ಉತ್ತರ ಕೊಡುತ್ತಾರೆ. ಗುರುತ್ವಾಕರ್ಷಣೆಯಿಂದಾಗಿ ಅದು ಕೆಳಗೆ ಬೀಳುತ್ತದೆ. ಯಾಕೆ? ಎಂಬ ಮತ್ತೊಂದು ಪ್ರಶ್ನೆ ಹಾಕಿದರೆ ನ್ಯೂಟನ್ನ ಗುರುತ್ವಾಕರ್ಷಣೆಯ ಸಿದ್ಧಾಂತಗಳ ವಿವರಣೆಯನ್ನು ಪಡೆಯಬಹುದು.
ನಮ್ಮ ಚರ್ಚೆಯ ವಿಷಯ ಅದಲ್ಲ. ಈ ಸಿದ್ಧಾಂತ ಎಲ್ಲಿತ್ತು? ನ್ಯೂಟನ್ ಇದನ್ನು ಕಂಡುಕೊಳ್ಳುವ ಮೊದಲು ಅದು ಅಸ್ತಿತ್ವದಲ್ಲಿ ಇರಲಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ `ಖಂಡಿತವಾಗಿಯೂ ಇತ್ತು' ಎಂಬ ಉತ್ತರ ಸಿಗುತ್ತದೆ. ಹಾಗಾದರೆ ಜಗತ್ತಿನಲ್ಲಿ ನಮಗೆ ತಿಳಿಯದ ಇನ್ನೂ ಸಾಕಷ್ಟು ಉಳಿದಿರಬಹುದು ಎಂಬುದನ್ನು ನಾವು ಒಪ್ಪಿಕೊಂಡಂತಾಗುತ್ತದೆ. ಹಾಗಿದ್ದರೆ ಮಂಗ ವಿಕಾಸ ಹೊಂದಿ ಮನುಷ್ಯನಾಗಿ, ಮನುಷ್ಯ ವಿಕಾಸ ಹೊಂದಿ ಆಧುನಿಕ ಮನುಷ್ಯನಾಗುವ ಪ್ರಕ್ರಿಯೆಗಳಿಗೆ ಮೊದಲೂ ಬೇಸಾಯ ಇತ್ತೆ?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟರೆ ಹಲವು ಹೊಸ ವಿಷಯಗಳು ಅರ್ಥವಾಗ ತೊಡಗುತ್ತವೆ. ಮೊದಲನೆಯಾದಾಗಿ ಬೇಸಾಯ ಎಂದು ನಾವು ಹೇಳುತ್ತಿರುವ ಕಲ್ಪನೆ ಸಹಜವಾಗಿಯೇ ಈ ಭೂಮಿಯ ಮೇಲೆ ನಡೆಯುತ್ತಿದ್ದ ಒಂದು ವಿದ್ಯಮಾನ. ಇದನ್ನು ಮನುಷ್ಯ ತನ್ನ ಅನುಕೂಲಕ್ಕೆ ತಕ್ಕ ಹಾಗೆ ಮಾರ್ಪಡಿಸಿಕೊಂಡ. ಈ ಮಾರ್ಪಾಡು ಮೊದಲಿಗೆ ಸಹಜ ಕ್ರಿಯೆಯ ಜೊತೆ ಜೊತೆಗೇ ನಡೆಯುತ್ತಿತ್ತು. ಮನುಷ್ಯ `ಬುದ್ಧಿವಂತ'ನಾಗುತ್ತಾ ಸಾಗಿದಂತೆ ಸಹಜ ಕ್ರಿಯೆಯನ್ನು ತನಗೆ ಬೇಕಿರುವಂತೆ ಬಗ್ಗಿಸಲು ಪ್ರಯತ್ನಿಸಿದ. ಅಲ್ಲಿಂದ ಆರಂಭವಾದದ್ದು ಕೃಷಿ.
ಮನುಷ್ಯ ಚಕ್ರವನ್ನು ಕಂಡುಹಿಡಿದದ್ದು, ಬೆಂಕಿಯ ಬಳಕೆಯನ್ನು ತಿಳಿದದ್ದು, ಕೃಷಿಯನ್ನು ಆರಂಭಿಸಿದ್ದು ಮಾನವನ ವಿಕಾಸದ ಪ್ರಮುಖ ಘಟನೆಗಳೆಂದು ಭಾವಿಸುತ್ತೇವೆ. ಆದರೆ ಈ ಪ್ರಮುಖ ಘಟನೆಗಳು ಮನುಷ್ಯನನ್ನು ವಿಕಾಸದ ಹಾದಿಯಲ್ಲಿ ಕೊಂಡೊಯ್ದವೇ?
ಇದು ವಿಜ್ಞಾನಿಗಳು ಮತ್ತು ಚಿಂತಕರ ಮಟ್ಟಿಗೆ ಬಹಳ ಸಂಕೀರ್ಣವಾದ ಪ್ರಶ್ನೆ. ಈ ಸಂಕೀರ್ಣವಾದ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ ಅನೇಕ ತತ್ವಶಾಸ್ತ್ರಗಳು ಹುಟ್ಟಿದವು. ಮನುಷ್ಯ ಎಷ್ಟು ಮುಖ್ಯ, ಮನುಷ್ಯ ಜನ್ಮ ಎಷ್ಟು ಮುಖ್ಯ ಎಂಬ ಬಗ್ಗೆ ಬಹಳ ಚರ್ಚೆಗಳು ನಡೆದವು. ಇದರ ಜೊತೆ ಜೊತೆಗೇ ಇತರ ಜನ್ಮಗಳು ಅಥವಾ ಇತರ ಜೀವಿಗಳು ಎಷ್ಟು ಮುಖ್ಯ ಎಂಬ ವಿಷಯ ಚರ್ಚೆಯಾಗಲಿಲ್ಲ. ಕಾರಣ ಬಹಳ ಸರಳ ಎಲ್ಲ ತತ್ವಶಾಸ್ತ್ರಗಳೂ ಮನುಷ್ಯರ ಮಧ್ಯೆ ಹುಟ್ಟಿವೆ, ಹಾಗೆಯೇ ಉಳಿದ ಜೀವಿಗಳ ಮಧ್ಯೆ ಹುಟ್ಟಿರಬಹುದಾದ ತತ್ವಶಾಸ್ತ್ರಗಳ ಬಗ್ಗೆ ಮನುಷ್ಯನಿಗೆ ಏನೂ ತಿಳಿದಿಲ್ಲ.
ಈ ಸಂವಹನದ ಕೊರತೆ ಮನುಷ್ಯನನ್ನು ಯಾವ ಮಟ್ಟಿಗೆ ವಿಕಾಸಗೊಳಿಸಿದೆ ಎಂದರೆ ವಿಕಾಸದ ಅಂಚಿನಲ್ಲಿ ತಾನು ನಿಂತಿದ್ದೇನೆ ಎಂದು ಮನುಷ್ಯ ಭಾವಿಸುವಂತೆ ಮಾಡಿದೆ. ಮಾನವ ಜನ್ಮ ದೊಡ್ಡದು ಎಂಬ ಏಕೈಕ ಕಾರಣಕ್ಕಾಗಿ ಜೀವಕೋಶದ ವಿನ್ಯಾಸವನ್ನೂ ನಮಗೆ ಬೇಕಾದಂತೆ ಬದಲಾಯಿಸುತ್ತಿದ್ದೇವೆ. ಈ ಎಲ್ಲಾ ವಿಶ್ಲೇಷಣೆಗಳು ನಮಗೆ ಜಗತ್ತನ್ನು ಅರ್ಥ ಮಾಡಿಸಿಕೊಟ್ಟಾವೆ?
ಇದಕ್ಕೆ ಉತ್ತರವನ್ನು ಒಂದು ರೂಪಕದ ಮೂಲಕ ಹೇಳಬಹುದೇನೋ.
ಪ್ರೇಮಿ ಪ್ರಿಯತಮೆಯ ಬಾಗಿಲು ಬಡಿದ.
ಒಳಗಿನಿಂದ ಪ್ರಶ್ನೆ ಬಂತು `ಯಾರು?'
ಪ್ರೇಮಿ ಹೇಳಿದ `ನಾನು'
ಬಾಗಿಲು ಮುಚ್ಚಿಯೇ ಇದ್ದಂತೆ ಉತ್ತರ ಬಂತು `ಇಲ್ಲಿ ನಾನಿದ್ದೇನೆ. ಜೊತೆಗೊಂದು `ನಾನು' ಬೇಡ'.
ಪ್ರೇಮಿ ನಿರಾಶನಾಗಿ ಹಿಂತಿರುಗಿದ. ತಪಸ್ಸಿನಲ್ಲಿ ಮುಳುಗಿದ. ಕೊನೆಗೊಂದು ಮತ್ತೆ ಪ್ರಿಯತಮೆಯ ಮನೆಯ ಬಾಗಿಲು ಬಡಿದ.
`ಯಾರು?'
`ನೀನು'
ಬಾಗಿಲು ತೆರೆಯಿತು.
ಮನುಷ್ಯನಿನ್ನೂ ಬಾಗಿಲು ಬಡಿಯುತ್ತಿದ್ದಾನೆ!
ಇಸ್ಮಾಯಿಲ್
Comments
ನನ್ನೊಳು ನೀ ನಿನ್ನೊಳು ನಾ
In reply to ನನ್ನೊಳು ನೀ ನಿನ್ನೊಳು ನಾ by pavanaja
ನಾ ನಿನ್ನ ನು೦ಗಿ, ನೀ ನನ್ನ ನು೦ಗಿ