ಕತ್ತಲು...

ಕತ್ತಲು...

ಕವನ

ಗಂಟೆ ಕತ್ತಲ ಹನ್ನೆರಡಕ್ಕೆ ಮುತ್ತಿಟ್ಟಾಗ

ಉಳಿದ ಅರ್ಧ ನೆನಪ ಸೀಸೆ ಮತ್ತೇರುವುದು
ಜಾರುವುದು ಬೀದಿಗೆ ಕಣ್ಣು.
 
ಕೊನರುತ್ತಿದೆ ಬೀದಿ ದೀಪದ ಕೆಳಗೆ ಕನಸು
ಸ್ನೇಹ, ಪ್ರೀತಿ ಅಲೆಯುತ್ತಿದೆ, ಚರಂಡಿ ಬದಿಯಲ್ಲಿ, ಕೆಸರು ತೀರಗಳಲ್ಲಿ,
ಮಾನವೀಯತೆ ನಗುತ್ತಿದೆ ಕೂತು ಸಂತೃಪ್ತ ಕಸದ ರಾಶಿಯ ಸುತ್ತಾ.
 
ಆ ಕತ್ತಲಿಗೆ ಅಂಜಿಕೆಯಿಲ್ಲ ಬದಲಿಗೆ ಮುಖವಾಡ
ಸುಖ, ಆತಂಕ, ಮೋಸ, ನೈತಿಕತೆಗೆ ಬಿಗಿಯುತ್ತಿದೆ ಮೂಗು
ಊರವರ ಮಲ ಮಜ್ಜನದ ಝರಿಗೆ.
 
ಸ್ವಲ್ಪ ಮುಂದೆ ಗುಡಿಸಲುಗಳಲ್ಲಿ ಮೋಸವಿಲ್ಲದ,
ಬೆವೆತು ಹೋದ ತೋಳು, ಮನಸುಗಳ ವಿಕ್ಷಿಪ್ತ ದೇಹಗಳು
ಮೂರು ಕಲ್ಲಿನ ಒಲೆಯಿದೆ, ತೂತು ಬಿದ್ದ ಪಾತ್ರೆಯಿದೆ.
 
ಪಾತ್ರೆಯಲ್ಲಿ ಅರೆಬೆಂದ ಕನಸಿನ ಕಾಳಿವೆ
ಅವರ ಹೊಟ್ಟೆಯ ತುಂಬ ನೆನಪ ಮತ್ತಿದೆ
ತಿಕ ಮುರಿಯೇ ದಣಿದ ದೇಹಕ್ಕೆ ಪರಿವೆ ಯಾಕೆ?
 
ಗುಡಿಸಲ ಕಿಂಡಿಯೊಳಗೆ ಕಾಣುತಿದೆ ಮಹಲು
ಅಲ್ಲಿವೆ ಬಣ್ಣ ಬಣ್ಣದ ಪೋಷಾಕು ತೊಟ್ಟ ಹುಳುಕು-ತಳುಕು
ಹುಸಿ ನಗುವ ತನು ನೋಯದ ಸುಕೋಮಲ, ಸಂತೃಪ್ತರಿದ್ದಾರೆ.
 
ಬೆಳಕಾಗುತ್ತಿದೆ ತಿಕ-ಮಕ ಮಾತ್ರ ತೊಳೆಯುವ ಜಗತ್ತಿಗೆ
ಮರೆಯಾಗುವೆನು ಕತ್ತಲ ಮರೆಯಲ್ಲಿ, ಗುಡಿಸಲುಗಳ ಸಂದಿಗೆ 
ಚರಂಡಿಗಳೆಡೆಗೆ, ನಿಷ್ಕಲ್ಮಶ ಮನಸುಗಳೆಡೆಗೆ, ಒಟ್ಟಾರೆ ಸತ್ಯದೆಡೆಗೆ...

Comments