ಕೋಳಿ ವ್ಯಾಪಾರ

ಕೋಳಿ ವ್ಯಾಪಾರ

ನಮ್ ಕಾಡ್ನಾಗೆ ಹಲವಾರು ಹಟ್ಟಿಗಳಿವೆ. ನಮ್ ಹಟ್ಟಿಗಿಂತ ದೋಡ್ದು ಮೂರ್ನಾಲ್ಕುಅವೆ. ನಮ್ ಜೀವ್ನ ತುಂಬಾ ಸರಳ. ನಾವೇನು ಭತ್ತ, ಕಬ್ಬು ಬೆಳೆಯಲ್ಲ. ಕೋಳಿ, ಹುಂಜ, ಆಡು ಸಾಕ್ಕೊತ್ತೀವಿ. ಕಾಡ್ನಲ್ಲಿ ಏನೇನ್ ಸಿಗುತ್ತೋ ಅದ್ರಲ್ಲೇ ಜೀವ್ನ ಸಾಗಿಸ್ತೀವಿ. ಬೇರೆ ಬೇರೆ ಹಟ್ಟಿಗ್ಳು ಅಷ್ಟೇ. ಅವ್ರ್ ಪಾಡಿಗೆ ಅವ್ರು, ನಮ್ ಪಾಡಿಗೆ ನಾವು.

ನಮ್ ಹಟ್ಟಿಲಿ ಹತ್ತಾರು ಗುಡುಸ್ಲುಗಳಿವೆ. ನಮ್ಮಲ್ಲಿ ಎಲ್ರೂ ಒಟ್ಗೆ ಸೇರಿ ಕೋಳಿ, ಆಡು ಸಾಕ್ತೀವಿ. ಗಂಡಸ್ರೆಲ್ಲಾರು ಹೊತ್ತಾರೆ ಹೋಗಿ ಕಾಡ್ನಾಗೆ ಬೇಟೆ ಆಡಿ, ಮರಗಳಲ್ಲಿ ಹಣ್ಣು ಹಂಪ್ಲು, ಕಡ್ಡಿ-ಕಟ್ಟಿಗೆ ಕಟ್ಕೊಂಡು ಬರ್ತೀವಿ. ಹೆಂಗುಸ್ರೆಲ್ಲಾ ಗುಡುಸ್ಲು ಕಡೆ ನಿಗಾ ಮಡಿಕ್ಕೊಂಡಿರ್ತಾರೆ. ಐಕ್ಳೆಲ್ಲಾ ಆಡ್ಕೊಂಡು ಹಾಡ್ಕೊಂಡು ಕಾಲ ಕಳೀತವೆ. ಇತ್ತಾಗೆ ನಮ್ ಕೋಳಿಗ್ಳು ಅದ್ರ ಪಾಡಿಗೆ ನೆಲದಲ್ಲಿ ಸಿಗೋ ಹುಳು ಹುಪ್ಟೆ ತಿನ್ಕೊಂಡ್ ಮೊಟ್ಟೆಗಿಟ್ಟೆ ಇಡತ್ವೆ. ಇರೋ ಹತ್ತಾರು ಕೋಳಿಗಳು ಎಲ್ಲಿ ಹೋದ್ವು ಏನ್ಮಾಡ್ತಿವೆ ಅಂತ ಯಾರು ತಲೆಕೆಡ್ಸ್ಕೊತಾ ಇರ್ಲಿಲ್ಲ.

ಆದ್ರೆ ಇತ್ತೀಚ್ಗೆ ಈ ಕೋಳಿಗಳೇ ನಮ್ಗೆ ದೋಡ್ ತಲೆನೋವಾಗಿದೆ. ನಾನ್ ಕಾಡ್ನಲ್ಲಿ ಬೇಟೆ ಆಡಕ್ಕೆ ಹೋದಾಗ ನಮ್ ಹತ್ರದ್ ಹಟ್ಟಿನವ ನನ್ಗೆಳೆಯ ನಾಟ ಸಿಕ್ಕ. ಅವ ಸಿಕ್ಕಿ ಈಗಾಗ್ಲೆ ಒಂದ್ ವರ್ಷ ಆಗಿರ್ಬೇಕು.

"ಯಾಕ್ಲಾ ನಾಟ ? ಲಗ್ನಗಿಗ್ನ ಆದ್ಯೋ ಎಂಗೆ ?' ಅಂದೆ. ಅವ ತಿರುಗ್ಸಿ, "ಇಲ್ಲಾ ಕಳ, ನಮ್ ಹಟ್ಟೀಲಿ ಈಗ ಕೋಳಿ ವ್ಯಾಪಾರ ಶುರು ಹಚ್ಕೊಂಡಿವಿ' ಅಂದ. "ಏನ್ಲಾ ಹಂಗಂದ್ರೆ' ಅಂತಂತಂದೆ.

Hen from Wikipedia
"ಪ್ರತಿ ವಾರ ಪಟ್ಣದಿಂದ ನಮ್ ಹಟ್ಟಿಗೆ ಇಬ್ರು ಬಂದು ನಾವು ಕೊಡೋ ಕೋಳಿಗಳ್ನ ಎತ್ಕೊಂಡ್ ಓಯ್ತಾರೆ' ಅಂದ. "ಹಂಗಾದ್ರೆ ನೀವು ಸಾರ್ ಮಾಡಕ್ ಏನ್ ಹಾಕ್ತೀರ್ಲ ?' ಅಂತ ಕೇಳ್ದೆ.

ಅವ "ಅಯ್ಯ, ನಾವು ಕಾಡ್ನಿಂದ ತರ್ತೀವಲ್ಲ ಸೊಪ್ಪು, ಹಣ್ಣು. ಅದ್ರಲ್ಲೇ ಮಾಡ್ತೀವಿ ಸಾರ್ನ. ಆಮ್ಯೇಕೆ ಆ ಪಟ್ಣದವ್ರು ಅಲ್ಲಿಂದ ಏನೆಲ್ಲಾ ತರ್ತಾರೆ ಗೊತ್ತೇನ್ಲಾ? ನಮ್ಗೆ ಅವ್ರು ಕೋಳಿ ಬದ್ಲಿಗೆ ಬಣ್ಣ್ ಬಣ್ಣದ್ ಬಟ್ಟೆ, ಐಕ್ಳಿಗೆ ಗೊಂಬೆಗ್ಳು, ತಿನ್ನಾಕ್ ಪೆಪ್ರಮಿಂಟು, ಬೇಯ್ಸಿದ್ ಹಿಟ್ಟು ಇನ್ನು ಏನೇನೋ ಎಲ್ಲಾ ಕೊಡ್ತಾರೆ'. "ನಾನು ನಿಮ್ ಹಟ್ಟಿ ಕಡೀಕ್ಕೆ ಹೊಂಟಿದ್ದೆ ಕಳ. ಈಗ ಎಂಗಾಗದೆ ಅಂದ್ರೆ ನಾವೆಲ್ಲ ಕೂತು ಕೋಳೀನ್ನೋಡ್ಕೊಂಡ್ರು ಅವ್ರಿಗೆ ಕೊಡೊ ಅಷ್ಟು ಕೋಳಿಗ್ಳು ಸಾಕಾಗ್ತಿಲ್ಲ ಕಳ. ಅದ್ಕೆ ನಾನು ಅವ್ರನ್ ಕೇಳ್ದೆ ನಮ್ ಪಕ್ಕದ್ ಹಟ್ಟಿಯಿಂದಾನು ಕೋಳಿಗಳ್ ತಂದ್ರೆ ಏಂಗೆ ಅಂತ. ಅದ್ಕೆ ಅವ್ರು ಹಂಗೆಲ್ಲಾ ಆಯ್ಕಿಲ್ಲ. ನಿಮ್ ಹಟ್ಟೀದೇ ಕೋಳಿಗ್ಳು ಬೇಕು ಅಂದ್ರು.'

"ಅದ್ಕೆ ನಾವು ತಲೆ ಓಡ್ಸ್ಬುಟ್ಟಿ ಒಂದು ಉಪಾಯ ಮಾಡ್ಬುಟ್ವಿ. ಏಂಗಿದ್ರು ನೀವು ದಿನಾ ಕಾಡ್ಗೆ ಓಯ್ತೀರ. ನಿಮ್ಗೆ ಆಯ್ಕೊಳದ್ ಜೊತ್ಗೆ ನಮ್ಗೂ ಸೇರ್ಸಿ ಆಯ್ಕಂಬುಡ್ರಲಾ. ನಾವು ನಿಮ್ಗೆ ಆ ಪಟ್ಣದವ್ರ್ ತರೋದ್ರಲ್ಲಿ ಒಂದಷ್ಟು ಬಟ್ಟ, ಹಿಟ್ಟನುಂಡೆ ಕೊಡ್ತೀವಿ.'

ಅದ್ಕೆ ನಾನು "ನಾನು ವಸಿ ನಮ್ ಹಟ್ಟಿಯವ್ರನ್ಕೇಳಿ ಯೋಳ್ತೀನಿ' ಅಂದೆ. ನಮ್ ಹಟ್ಟಿಯವ್ರನ್ ಕೇಳ್ದೆ. ಐಕ್ಳೂ, ಎಂಗುಸ್ರೂ ಹಣ್ಣ ಆಯ್ಕಳಿಕ್ಕೆ ನಾವು ಬಂದೇವು ಆಯ್ತದೆ ಅನ್ನಿ, ಅಂದ್ರು. ಯಾಕೋ ಮನ್ಸು ಒಲ್ಲೇ ಅಂದ್ರು ಇರ್ಲಿ ಅಂತ ನಮ್ ಹಟ್ಟಿಯಿಂದ ನಾಟನ್ ಹಟ್ಟಿಯವ್ರಿಗೆ ಹಣ್ಣುಗಳು ಕೊಡ್ತೀವಿ ಅಂತ ಯೋಳಿ ಬಂದ್ ಬಿಟ್ವಿ.

ಆಮ್ಯಾಕ್ ಶುರು ಆಯ್ತು ನೋಡಿ ಮಜಾ, ನಾಟ್ನ್ ಹಟ್ಟಿಯವ್ರು ಅಷ್ಟೆಲ್ಲಾ ತಿಂತಾರೆ ಅಂತ ಯಾರಿಗೊತ್ತಿತ್ತು. ನಾವ್ಗಳು ತರೋದೆಲ್ಲಾ ಅವ್ರಿಗೆ ಸಾಕಾಗ್ತಿರ್ಲಿಲ್ಲಾ. ನಾವು ಬೇಕಾದಷ್ಟ ದಿನ ಖಾಲಿ ಹೊಟ್ಟೇಲಿ ಮಲ್ಕಂಡ್ವಿ. ಅವ್ರು ಕೊಡೋ ಆ ಬಟ್ಟೆ ಉಟ್ಟ್ರೆ ಕಾಡ್ನಾಗೆ ಇನ್ನು ಕಷ್ಟ ಆಯ್ತೈತಿ. ಹುಲಿರಾಯ ಬಂದ್ರೆ ಓಡಾಂಗಿಲ್ಲ ಬಿಡಾಂಗಿಲ್ಲ. ಏನ್ ಮಾಡೋದು ಒಪ್ಪಿದ್ದಾಗಿದೆ. ಒಲ್ಲೆ ಅಂದ್ರೆ ಮಾದೇಸ ಸುಮ್ಕಿರಕ್ಕಿಲ್ಲ. ಹಂಗು ಯೋಚ್ಸಿ ಯೋಚ್ಸಿ ಒಂದು ತೀರ್ಮಾನಕ್ ಬಂದ್ವಿ.

ಅದೇ ನಮ್ ಪಕ್ಕದ್ ಹಟ್ಟಿ ಐತಲ್ಲ, ಮೋನಂದು ಹೆಂಗಿದ್ರು ಅವ್ರು ಕಾಡ್ಗ್ ಓಯ್ತಾರೆ, ಅವ್ರಿಗ್ ಯೋಳ್ಬುಟ್ಟು "ವಸಿ ನಮ್ ಹಟ್ಟಿಯವ್ರಿಗು ಆಗೋ ಅಷ್ಟು ಆಯ್ಕೊಂಡ್ ಬನ್ರಲಾ' ಅಂತ, ನಾವು ನಾಟನ್ ಹಟ್ಟಿಯವ್ರಿಗೆ ತಂದ್ ಕೊಡೋದು. ಅಷ್ಟೇ!!

Rating
No votes yet

Comments