ಸಾರಗ್ರಾಹಿಯ ರಸೋದ್ಗಾರಗಳು -6
ಪಂ. ಸುಧಾಕರ ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು. ನೇರವಾಗಿ ಅವರ ಕುರಿತು ತಮ್ಮ ಅನಿಸಿಕೆಗಳನ್ನು ಅವರಿಗೇ ಹೇಳುತ್ತಿದ್ದವರು. ಗಾಂಧೀಜಿ ಸಹ ಅವರ ಕುರಿತು ಗೌರವವುಳ್ಳವರಾಗಿದ್ದರು. 116 ವರ್ಷಗಳಾಗಿರುವ ಪಂಡಿತರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . .
-ಕ.ವೆಂ.ನಾಗರಾಜ್.
****************
ಗಾಂಧೀಜಿ ಮತ್ತು ಉಪವಾಸ
ಗಾಂಧೀಜಿ ಜೊತೆ ಮಾತನಾಡುವಾಗ ನಾನು ಹೇಳುತ್ತಿದ್ದೆ - "ಗಾಂಧೀಜಿ, ನೀವು ಮಾತುಮಾತಿಗೆ ಉಪವಾಸ, ಉಪವಾಸ ಅಂತ ಮಾಡ್ತೀರಲ್ಲಾ, ಅದು ಹಿಂಸೆಯಲ್ಲವೋ?" ಗಾಂಧೀಜಿ "ಯಾಕಪ್ಪಾ ಹಾಗೆ ಹೇಳ್ತೀಯಾ?" ಅಂದಾಗ ನಾನು ಕೇಳಿದ್ದೆ: "ನೀವು ಬೇರೆಯವರನ್ನು ಉಪವಾಸ ಕೆಡವಿದರೆ ಅದೂ ಪಾಪವೇ, ನೀವು ಉಪವಾಸ ಮಾಡಿದರೆ ನಿಮ್ಮ ಆತ್ಮಕ್ಕೆ ಉಪವಾಸ ಮಾಡಿಸಿದ ಹಾಗೆ ಆಯಿತು, ಇದು ಎಲ್ಲಿಯ ಪುಣ್ಯ? ಇದರಿಂದ ಯಾರಿಗೆ ಲಾಭ?" ಗಾಂಧಿ ಒಂದೇ ಮಾತು ಹೇಳಿಬಿಟ್ಟರು: "ಅಪ್ಪಾ, ನೀನೇ ಮಹಾತ್ಮ, ನಾನಲ್ಲ." ನನ್ನದು ಸ್ವಲ್ಪ ಚೇಷ್ಟೆ ಸ್ವಭಾವ, ಹೇಳಿದೆ: "ಗಾಂಧೀಜಿ, ದಯವಿಟ್ಟು ನನ್ನನ್ನು ಮಹಾತ್ಮ ಅಂತ ಕರೀಬೇಡಿ, ಯಾಕೆ ಅಂದರೆ, ಮಹಾತ್ಮನಾದ ರಾವಣ ಸೀತೆಯನ್ನು ಅಪಹರಿಸಿದ ಅಂತ ರಾಮಾಯಣದಲ್ಲಿದೆ. ನಾನು ಯಾವ ಸೀತೆಯನ್ನೂ ಅಪಹರಿಸಿಲ್ಲ. ಆದ್ದರಿಂದ ನನಗೆ ಮಹಾತ್ಮ ಅನ್ನಬೇಡಿ, ಅದನ್ನು ನೀವೇ ಇಟ್ಟುಕೊಳ್ಳಿ." "ನಿನ್ನ ಹತ್ತಿರ ತರ್ಕ ಮಾಡುವುದಿಲ್ಲಪ್ಪಾ" ಎಂದು ನಗುತ್ತಾ ಹೇಳಿದ ಗಾಂಧೀಜಿ ಸುಮ್ಮನಾಗಿಬಿಟ್ಟರು.
ಬಡತನ ಅನ್ನುವುದು ಒಂದು ಅಭಿಶಾಪ. ಭಗವಂತ ಸರ್ವೈಶ್ಯರ್ಯ ಸಂಪನ್ನ. ಅವನ ಮಕ್ಕಳು ನಾವು ಬಡತನದಲ್ಲಿದ್ದರೆ ಅವನಿಗೆ ಸಂತೋಷವಿರುತ್ತೇನು? ಅವನ ಮಕ್ಕಳು ನಾವು ಚೆನ್ನಾಗಿ ತಿನ್ನಬೇಕು, ಸುಖವಾಗಿರಬೇಕು, ಅದು ಭಗವಂತನ ಆಸೆ. ನಾವು ಬಲವಂತವಾಗಿ ಉಪವಾಸ ಮಾಡಿದರೆ ಅವನಿಗೆ ಸಂತೋಷ ಆಗುತ್ತೆ ಅಂತ ಮಾಡಿದ್ದೀರಾ?
ಗಾಂಧೀಜಿ ಪತ್ನಿ ಕಸ್ತೂರಿಬಾ ಹೇಳುತ್ತಿದ್ದರು, "ನಮ್ಮ ಯಜಮಾನರು ೭ ದಿನ, ೧೫ ದಿನ, ೨೧ ದಿನ ಹೀಗೆಲ್ಲಾ ಉಪವಾಸ ಮಾಡುತ್ತಾರೆ, ಸ್ವಲ್ಪ ಸ್ವಲ್ಪ ದಿನ ಏಕೆ, ಪೂರ್ಣ ಸಾಯುವವರೆಗೂ ಉಪವಾಸ ಮಾಡಿ ಸತ್ತುಬಿಡಲಿ, ನಾಲ್ಕು ದಿನ ಅತ್ತು ಸುಮ್ಮನಾಗುತ್ತೇನೆ, ನಂತರ ಮರೆತುಬಿಡುತ್ತೇನೆ" ಅಂತ. ಆ ಸಾಧ್ವಿಯ ಬಾಯಲ್ಲಿ, ಮಹಾಪತಿವ್ರತೆಯ ಬಾಯಲ್ಲಿ ಅಂತಹ ಮಾತು ಬರಬೇಕಾದರೆ ಎಷ್ಟು ನೊಂದಿರಬೇಕು, ಊಹಿಸಿ.
ಭಗವಂತನಿಗೆ ಪ್ರಿಯವಾದ ಕೆಲಸ
ಭಗವಂತನಿಗೆ ಅನೇಕ ಹೆಸರುಗಳಿವೆ, ಸೋಮ ಅನ್ನುವುದೂ ಅವನ ಹೆಸರೇ. ಆ ಸೋಮ ಅನ್ನುವುದಕ್ಕೆ ಬೇಕಾದಷ್ಟು ಅರ್ಥ ಇದೆ. ಭಕ್ತಿರಸ ಅಂತಲೂ ಅರ್ಥ ಇದೆ, ಜಗತ್ತಿನ ಪ್ರೇರಕ, ಉತ್ಪಾದಕ ಅನ್ನುವ ಅರ್ಥವೂ ಇದೆ. ದೇವತೆಗಳ ಉತ್ಪಾದಕ, ಪ್ರೇರಕನೂ ಅವನೇ. ಅವನನ್ನು ಪ್ರಾರ್ಥನೆ ಮಾಡುವುದನ್ನು ಬಿಟ್ಟು ಅವನ ಹೆಸರಿನಲ್ಲಿ ಬೇರೆ ಯಾವ ಯಾವುದನ್ನೋ ಪೂಜೆ ಮಾಡುತ್ತಾ ಹೋದರೆ ಫಲ ಸಿಗುತ್ತಾ? ಮತ್ತೆ ಆ ಸೋಮ ವಿಶ್ವಪ್ರಿಯ. ಪ್ರತಿದಿನ ಅವನಿಗೆ ಪ್ರಿಯವಾದ ಕೆಲಸವನ್ನು ಮಾಡಿಕೊಂಡು ಹೋಗುವುದೇ ಪೂಜೆ. ಭಗವಂತನಿಗೆ ಪ್ರಿಯವಾದ ಕೆಲಸ ಯಾವುದು? ಅವನಿಗೇನು ಉದ್ಧಾರ ಆಗಬೇಕಿಲ್ಲ. ಉದ್ಧಾರ ಆಗಬೇಕಾಗಿರುವುದು ನಮಗೆ. ನಾವು ಅಂದರೆ ನಮ್ಮ ಸಮೂಹ. ನಮ್ಮ ಸಮೂಹದ ಉದ್ಧಾರಕ್ಕಾಗಿ ನಾವು ಕೆಲಸ ಮಾಡಬೇಕಾಗಿದೆ. ಪೀಡಿಸೋದು, ಎಲ್ಲರನ್ನೂ ಗೋಳು ಹುಯ್ಕೊಳ್ಳೋದು, ಅನ್ಯಾಯ ಮಾಡೋದು, ಮತ್ತೆ ನಾನು ಭಗವದ್ಭಕ್ತ ಕಣಯ್ಯಾ ಅನ್ನೋದು, ಎಂಥಾ ಭಕ್ತರು? ಅವನಿಗೆ ಪ್ರಿಯರಾಗಿ, ಭಗವಂತನ ಮಕ್ಕಳು ನಾವೆಲ್ಲಾ, ಕಷ್ಟ, ಕಾರ್ಪಣ್ಯದಲ್ಲಿರುವವರಿಗೆ, ಬಡವರಿಗೆ, ಬಗ್ಗರಿಗೆ, ದೀನ ದಲಿತರಿಗೆ ಸಹಾಯ ಮಾಡಿದರೆ ನಿಜವಾದ ಭಗವಂತನ ಭಕ್ತರು ಅನ್ನಬಹುದು.
ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ
ಅಯ್ಯೋ, ಅವನು ನಾಸ್ತಿಕ, ದೇವಸ್ಥಾನಕ್ಕೇ ಹೋಗೋದಿಲ್ಲ, ಅವನ ಮಾತು ಕೇಳ್ಬೇಡಿ ಅಂತ ಹೇಳ್ತಾರೆ. ಒಳ್ಳೇ ತಮಾಷೆ ಆಯ್ತಲ್ಲಾ ಇದು! ದೇವಸ್ಥಾನದಲ್ಲಿ ಮಾತ್ರ ಅವನಿದ್ದಿದ್ದರೆ ಬೇರೆ ಇನ್ನೆಲ್ಲೂ ಇಲ್ಲ ಅಂತಿದ್ದರೆ ಅಲ್ಲಿಗೆ ಹೋಗಬೇಕಾಗಿತ್ತು. ಸರ್ವವ್ಯಾಪಕ ಅಂತೀರಿ, ಎಲ್ಲಾ ಕಡೆಯೂ ಇದ್ದಾನೆ ಅಂತೀರಿ, ನಿಮ್ಮ ಹೃದಯಕ್ಕಿಂತ ದೊಡ್ಡ ಮಂದಿರ ಬೇಕಾ? ನಿಮ್ಮ ಹೃದಯದಲ್ಲೂ ಪರಮಾತ್ಮನಿದ್ದಾನೆ. ಸುಖವಾಗಿ ಆ ಪರಮಾತ್ಮನ ಕುರಿತು ಧ್ಯಾನ ಮಾಡಿ. ನಿಜವಾಗಿ ನಿಮಗೆ ಆನಂದ ಸಿಕ್ಕುತ್ತೆ. ಈ ಮಾತನ್ನು ನಾನು ನೂರು ವರ್ಷಗಳ ಅನುಭವದಿಂದ ಹೇಳುತ್ತಿದ್ದೇನೆ. ನಾನು ಆ ಸ್ಥಿತಿಯಲ್ಲಿ ಇರುವಾಗ ಈ ಪ್ರಪಂಚ ಏನೂ ಇರುವುದೇ ಇಲ್ಲ. ನನ್ನ ದೃಷ್ಟಿಯ ಒಳಗೆ ಈ ಪ್ರಪಂಚ ಇರೋದೆ ಇಲ್ಲ, ಇರೋದು ನನ್ನೊಳಗಿನ ಪರಮಾತ್ಮ ಒಬ್ಬನೇ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು; ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ.
ದೇವಸ್ಥಾನಗಳನ್ನು ಕಟ್ಟುವ ಬದಲು ಧರ್ಮಶಾಲೆ ಕಟ್ಟಿಸಿ, ಅನಾಥಾಲಯಗಳನ್ನು ಕಟ್ಟಿಸಿ, ಛತ್ರಗಳನ್ನು ನಿರ್ಮಾಣ ಮಾಡಿ, ಜನ ವಾಸ ಮಾಡಲಾದರೂ ಆಗುತ್ತೆ, ಅದು ಬಿಟ್ಟು ದೇವಸ್ಥಾನದಲ್ಲಿ ಮಾತ್ರ ಅವನಿದ್ದಾನೆ, ಬೇರೆ ಕಡೆ ಇಲ್ಲ ಅನ್ನೋದು ಸರಿಯಲ್ಲ. ಮೊದಲೇ ಅಜ್ಞಾನದಲ್ಲಿ ನರಳುತ್ತಿದ್ದೇವೆ, ನಮ್ಮನ್ನು ಇನ್ನೂ ಅಜ್ಞಾನಕ್ಕೆ ತಳ್ಳಿ ನೋಡೋದು ಎಷ್ಟು ಸರಿ? ಇದು ತಪ್ಪಬೇಕು. ಭಗವಂತನ ಮಕ್ಕಳ ಸೇವೆ ಮಾಡುವುದಕ್ಕೆ ನಮಗೆ ಉದಾರವಾದ ಮನಸ್ಸು ಕೊಡು ಅಂತ ದೇವರಲ್ಲಿ ಪ್ರಾರ್ಥಿಸಬೇಕು.
ಒಳ್ಳೆಯ ರೀತಿ ಬಾಳೋಣ
ಯಾರು ಏನೇ ಅನ್ನಲಿ, ನಿಮ್ಮನ್ನು ಶತ್ರುವಾಗೇ ಕಾಣಲಿ, ನೀವು ಮಾತ್ರಾ ನಾನು ಎಲ್ಲರ ಮಿತ್ರ ಎಂದುಕೊಳ್ಳಿ, ಇತರರು ನಿಮ್ಮನ್ನು ದ್ವೇಶಿಸಲಿ, ಪ್ರತಿಯಾಗಿ ನೀವು ದ್ವೇಶಿಸಲು ಹೋಗಬೇಡಿ. ದೊಡ್ಡಮಾತು, ಮಹಾತ್ಮರಿಗೆ ಅರ್ಥವಾಗುತ್ತೆ, ನಮಗೆ ಅರ್ಥವಾಗಲ್ಲ, ನಮಗೆ ಯಾಕೆ? ಅಂದುಕೊಂಡು ಅವನು ಎರಡು ಮಾತು ಬೈದನಲ್ಲಾ, ಹತ್ತು ಮಾತು ಜಾಡಿಸಿಬಿಡುತ್ತೇನೆ ಅಂದರೆ ಅವನದು ಎರಡು, ನಿಮ್ಮದು ಹತ್ತು, ಹನ್ನೆರಡು ಮಾತು ಕೇಳಿ ಬಂತು, ಯಾರ ಉದ್ಧಾರಕ್ಕೆ? ನಾವು ಈರೀತಿ ಯೋಚನೆ ಮಾಡುವುದನ್ನು ಕಲಿಯಬೇಕು, ಯೋಚನೆ ಮಾಡದೆ ಯಾವ ಕೆಲಸವನ್ನೂ ಮಾಡಬಾರದು, ವಿದ್ಯೆ, ಜ್ಞಾನದಿಂದ ಮಾಡುವ ಕೆಲಸದಲ್ಲಿ ಶಕ್ತಿ ತುಂಬಿಕೊಂಡಿರುತ್ತದೆ, ಎಲ್ಲರೊಡನೆ ಮೃದುವಾಗಿ, ಮಧುರವಾಗಿ ಮಾತನಾಡಬೇಕೆಂದು ವೇದ ಹೇಳುತ್ತದೆ. ಜೇನುತುಪ್ಪದಂತಿರಬೇಕೆಂದು ಹೇಳುತ್ತದೆ. ಒಳ್ಳೆಯ ಮಾತು ಎಲ್ಲಿ ಕೇಳುತ್ತೇವೆ, ಒಬ್ಬರನ್ನೊಬ್ಬರು ಬಯ್ಯುವುದು, ಒಬ್ಬರನ್ನೊಬ್ಬರು ಹಂಗಿಸುವುದು, ಇದರಲ್ಲೆ ಕಳೆಯುತ್ತೇವೆ. ಆಲೋಚನೆ ಮಾಡೋಣ, ಒಳ್ಳೆಯ ರೀತಿ ಬಾಳೋಣ.
ಭೇದ ಮಾಡದ ಭಗವಂತ
ಸರ್ಕಾರಿ ಚಿಹ್ನೆ ಹಾಕ್ತಾರೆ - 'ಸತ್ಯಮೇವ ಜಯತೇ'. ಯಾರ ಜೀವನದಲ್ಲೂ ಇಲ್ಲ, ಪ್ರೈಮ್ ಮಿನಿಸ್ಟರಿಂದ ಹಿಡಿದು ಚೀಫ್ ಮಿನಿಸ್ಟರ್, ಒಬ್ಬ ಸಾಧಾರಣ ಮಿನಿಸ್ಟರ್ವರೆಗೂ ಯಾರಿಗೂ ಇಲ್ಲ. ಒಂದು ಸಲ ಒಬ್ಬ ಅಂತಿದ್ದನಂತೆ; 'ಪರಮಾತ್ಮ ನೀನು ಬಲೇ ಕಂತ್ರಿ, ಯಾಕೆ? ನಾನಾಗಲಿಲ್ಲ ಮಂತ್ರಿ! ನನ್ನನ್ನು ಮಂತ್ರಿನೂ ಮಾಡಲಿಲ್ಲ, ನೀನೆಂಥಾ ದೇವ್ರು, ಕಂತ್ರಿ ನೀನು'. ನಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಆ ದೌರ್ಬಲ್ಯವನ್ನು ಪರಮಾತ್ಮನ ಮೇಲೆ ಹಾಕೋದು. ಇಷ್ಟು ತಿಳ್ಕೊಳ್ಳಿ, ನಿಮ್ಮ ನಿಂದೆ, ನಿಮ್ಮ ಸ್ತುತಿ ಯಾವುದೂ ಭಗವಂತನ ಮೇಲೆ ಪರಿಣಾಮ ಬೀರುವುದಿಲ್ಲ. ಹೊಗಳಿದರು ಅಂತ ಕೇಳಿದ್ದನ್ನೆಲ್ಲಾ ಕೊಟ್ಟುಬಿಡುವುದಿಲ್ಲ, ಬೈದುಬಿಟ್ಟರು, ಅವರು ನಾಸ್ತಿಕರು ಅಂತ ಅವರ ಆಹಾರವನ್ನು ಕಿತ್ತುಕೊಳ್ಳುವುದಿಲ್ಲ, ನಾಸ್ತಿಕರು ಹೆಚ್ಚಿರುವ ರಷ್ಯದವರು ನಮಗಿಂತ ಚೆನ್ನಾಗಿ ಊಟ ಮಾಡ್ತಾರೆ. ಭಗವಂತ ಅವರ ಅನ್ನ ಕಿತ್ತುಕೊಳ್ಳಲಿಲ್ಲ. ನನ್ನನ್ನೇ ಇಲ್ಲ ಅಂತ ಹೇಳ್ತಾರಲ್ಲಾ, ಅವರೆಲ್ಲಾ ನಾಸ್ತಿಕರು ಅಂತ ಅನ್ನ ಕಿತ್ತುಕೊಳ್ಳೋದಿಲ್ಲ, ಆಸ್ತಿಕರಿಗೂ ಅನ್ನ ಕೊಡ್ತಾನೆ, ನಾಸ್ತಿಕರಿಗೂ ಅನ್ನ ಕೊಡ್ತಾನೆ. ನಮ್ಮ ಕುಂದುಕೊರತೆಗಳನ್ನು ಭಗವಂತನ ಮೇಲೆ ಹೊರಿಸುವುದು ಸರಿಯಲ್ಲ.
ಸತ್ಯವನ್ನೇ ಹೇಳುತ್ತೇನೆ . .
ಈಗ ಕೋರ್ಟುಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ -"ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟದ್ದೇ ಸತ್ಯ , ಅದನ್ನೇ ಹೇಳು" ಅಂತ. (ನಾನು ತಮಾಷೆ ಮಾಡುತ್ತಿರುತ್ತೇನೆ) ಲಾಯರ್ ಅಂದರೆ ಲೈಯರ್ ಅಂತ! ಮಾಡುತ್ತಾ ಇರುವುದು ಹಾಗೇನೇ, ಇವತ್ತು ಇರುವುದೂ ಹಾಗೇನೇ. ಇಂದಿನ ಸತ್ಯದ ಸ್ಥಿತಿ ಇದು.
. . .ಮುಂದುವರೆಯುವುದು. .
[ಗಾಂಧೀಜಿ ಮತ್ತು ಕಸ್ತೂರ ಬಾ ಚಿತ್ರ ಕೃಪೆ: ಅಂತರ್ಜಾಲದಿಂದ ಹೆಕ್ಕಿದ್ದು]
*********************
ಹಿಂದಿನ ಲೇಖನಕ್ಕೆ ಲಿಂಕ್:
Comments
ಉ: ಸಾರಗ್ರಾಹಿಯ ರಸೋದ್ಗಾರಗಳು -6
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -6 by venkatb83
ಉ: ಸಾರಗ್ರಾಹಿಯ ರಸೋದ್ಗಾರಗಳು -6
ಉ: ಸಾರಗ್ರಾಹಿಯ ರಸೋದ್ಗಾರಗಳು -6
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -6 by Chikku123
ಉ: ಸಾರಗ್ರಾಹಿಯ ರಸೋದ್ಗಾರಗಳು -6
ಉ: ಸಾರಗ್ರಾಹಿಯ ರಸೋದ್ಗಾರಗಳು -6
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -6 by makara
ಉ: ಸಾರಗ್ರಾಹಿಯ ರಸೋದ್ಗಾರಗಳು -6