ಕರ್ನಾಟಕದ ಮಹಾಚೇತನ : ಭಕ್ತಿ ಭಂಡಾರಿ ಬಸವಣ್ಣನವರು

ಕರ್ನಾಟಕದ ಮಹಾಚೇತನ : ಭಕ್ತಿ ಭಂಡಾರಿ ಬಸವಣ್ಣನವರು


ಕಾಯಕವೆ ಕೈಲಾಸ : ಭಾರತದ ಪ್ರಸಿದ್ದ ಗ್ರಂಥಗಳಲ್ಲಿ ಪ್ರಥಮವಾಗಿ ನಿಲ್ಲುವುದು 'ಭಗವದ್ಗೀತೆ', ಅದರಲ್ಲಿ ಶ್ರೀಕೃಷ್ಣನು ಭೋದಿಸಿದ ಕರ್ಮ ತತ್ವವನ್ನು , ನಿನ್ನ ಕರ್ತವ್ಯವನ್ನು ನೀನು ಮಾಡು ಎಂದ ಅವನ ಕರ್ಮದೀಕ್ಷೆಯನ್ನು ಒಂದೇ ಪದದಲ್ಲಿ 'ಕಾಯಕವೆ ಕೈಲಾಸ' ಎಂದು ಜನಸಾಮನ್ಯರಿಗೆ ಅರಿವಾಗುವಂತೆ ಉಪದೇಶಿಸಿದವರು ಕರ್ನಾಟಕದವರಾದ ವಿಶ್ವಪ್ರಸಿದ್ದ ಶ್ರೀ ಬಸವೇಶ್ವರರು. ಕುವೆಂಪುರವರು ಇಪ್ಪತ್ತನೆ ಶತಮಾನದಲ್ಲಿ ಕನಸು ಕಂಡ 'ವಿಶ್ವಮಾನವ' ಕಲ್ಪನೆಯನ್ನು , ಹನ್ನೆರಡನೇ ಶತಮಾದಲ್ಲಿಯೆ ಸಾಮಾಜಿಕವಾಗಿ ಪ್ರಯೋಗಿಸಿ ಯಶಸ್ವಿಯಾದವರು ಅವರು.ವಚನಕಾರರು ಅಸಂಖ್ಯರು ಆದರೂ ವಚನಗಳೆಂದರೆ ಶ್ರೀಬಸವಣ್ಣನವರ ವಚನಗಳೆ ಪ್ರಥಮವಾಗಿ ನೆನಪಿಗೆ ಬರುತ್ತವೆ.

ಜೀವನ : ಬಸವಣ್ಣನವರು ಹನ್ನೆರಡನೆ ಶತಮಾನದಲ್ಲಿ ಅಂದರೆ ಸುಮಾರು ೧೧೩೪ ರಲ್ಲಿ ಬಿಜಾಪುರದ ಬಾಗೇವಾಡಿ ಗ್ರಾಮದಲ್ಲಿ ಜನಿಸಿದರು. ತಂದೆ ಶ್ರೀ ಮಾದರಸ ಹಾಗು ತಾಯಿ ಮಾದಲಾಂಬಿಕೆ. ಜೊತೆಗೆ ಅಕ್ಕ ನಾಗಮ್ಮ ಹಾಗು ಭಾವ ಶಿವಸ್ವಾಮಿಯವರು ಬಾಲ್ಯದಲ್ಲಿ ಜೊತೆಗಿದ್ದವರು.ನಂತರ ಅವರು ವಿದ್ಯಾಬ್ಯಾಸಕ್ಕಾಗಿ ಕೂಡಲಸಂಗಮಕ್ಕೆ ತೆರಳಿದರು. ತುಂಗಾ ಹಾಗು ಭದ್ರೆಯ ಸಂಗಮ ಸ್ಥಳ ಕೂಡಲಸಂಗಮ. ಬಸವೇಸ್ವರರು ಸುಮಾರು ಹನ್ನೆರಡು ವರ್ಷಕಾಲ ವಿದ್ಯಾಬ್ಯಾಸ ನಡೆಸುತ್ತ ಕೂಡಲಸಂಗಮದಲ್ಲಿ ನೆಲೆಸಿದರು. ಅವರ ಮನಸು ಬುದ್ದಿಗಳು ಅವರ ಸಮಕಾಲಿನದಲ್ಲಿ ಇದ್ದ ಸಮವಯಸ್ಕರಂತೆ ಇರದೆ ವಿಷಿಷ್ಟವಾಗಿಯೆ ಚಿಂತಿಸುತ್ತಿತ್ತು. ಅವರ ಯೋಚನೆಗಳೆಲ್ಲ ಸಾಮಾನ್ಯವಾಗಿರದೆ ಕ್ರಾಂತಿಕಾರಕವಾಗಿದ್ದು ಅವರ ಚಿಂತನೆಗಳು ಬೇರೆಯೆ ಆಗಿದ್ದವು.
   ಅವರ ಚಿಂತನೆಯಂತೆ ದೇವರು ಒಬ್ಬನಾಗಿದ್ದಾನೆ ಮತ್ತು ಅವನು ಎಲ್ಲ ಮಾನವರಲ್ಲಿ ನೆಲಸಿದ್ದಾನೆಯೆ ಹೊರತು , ಗುಡಿ ಬಿಡಾರಗಳಲ್ಲಿ ಅಥವ ಎಲ್ಲೊ ಕಾಣದ ಲೋಕದಲ್ಲಿ ಇಲ್ಲ.ಪ್ರತಿ ಮನುಷ್ಯನು ದುಡಿದು ತಿನ್ನ ಬೇಕೆ ಹೊರತು ಅಲಸಿಯಾಗಿ ಇನ್ನೊಬ್ಬರ ಮೇಲೆ ಅವಲಂಬಿಸಿ ಜೀವನ ನಡೆಸಬಾರದು. ಇದೇ ಅವರ 'ಕಾಯಕವೆ ಕೈಲಾಸ ' ಎಂಬ ಪ್ರಸಿದ್ದ ಸೂಕ್ತಿಗೆ ಪ್ರೇರಣೆಯಾಯಿತು. ಕೆಲಸದಲ್ಲಿ ಮೇಲು ಕೀಳು ಎಂಬುದಿಲ್ಲ ಎಲ್ಲ ಕೆಲಸವು ದೈವ ಪೂಜೆಯ ಸಮಾನ ಎಂದು ಸಾರಿದವರು ಅವರು. ಅಲ್ಲದೇ ಆಗಿನ ಕಾಲಕ್ಕೆ ಅವರು ಪುರುಷರಂತೆ ಮಹಿಳೆಯರಿಗೂ ವಿದ್ಯಾಬ್ಯಾಸ ಹಾಗು ಜೀವನ ರೂಪಿಸಿಕೊಳ್ಳುವ ಹಕ್ಕಿದೆ ಎಂದು ಸಾರಿದವರು.
  ಅಲ್ಲದೆ ಸುಳ್ಳೂ ಹೇಳುವುದು ವಂಚಿಸುವುದು, ಅಲಸಿಜೀವನ ನಡೆಸುವುದು, ಕೊಲೆ ಸುಲಿಗೆ ಪರಧನ ಹರಣ,ಪರಸ್ತ್ರೀವ್ಯಾಮೋಹ ಇಂತಹುದನ್ನೆಲ್ಲ ಘೋರ ಅಪರಾದ ಎಂದು ಸಾರಿದರು. ದೇವರ ಹೆಸರಿನಲ್ಲಿ ಪೊಳ್ಳು ಜೀವನ ನಡೆಸುತ್ತಿದ್ದ ಹಾಗು ಅಂತಹ ಪುರೋಹಿತಶಾಯಿ ಜನರಿಂದ ಸದಾ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಆಶಾಕಿರಣವಾದರು
 ಈ ರೀತಿಯ ದಾಸೋಹ ತತ್ವಗಳನ್ನು ಒಪ್ಪಿ ಅದರಂತೆ ನಡೆಯಲು ಸಿದ್ದರಿರುವ ಯಾರೆ ಆದರು ಶಿವಶರಣರಾಗಬಹುದೆಂದು ಬಸವಣ್ಣನವರು ಸಾರಿದರು. ಈ ಮೂಲಕ ಅವರು ಎಲ್ಲ ಸಾಮಜಿಕ ಕಟ್ಟುಪಾಡನ್ನು , ಜಾತಿ ದರ್ಮ ಅಲ್ಲದೆ ಸ್ರೀಪುರುಷರೆಂಬ ಬೇದಭಾವವನ್ನು ಮೀರಿ ಎಲ್ಲ ಭೇದವನ್ನು ತಿರಸ್ಕರಿಸಿ ಒಂದು ಸಾಮಾಜಿಕ ಕ್ರಾಂತಿಗೆ ಕಾರಣರಾದರು. ಹೊಸದೊಂದಿ ಸಾಮಾಜಿಕ ಬದಲಾವಣೆಯ ಹರಿಕಾರರಾದರು. ಈ ಕಾರಣಗಳಿಗಾಗಿ ಬಸವಣ್ಣನವರನ್ನು 'ಜಗಜ್ಯೋತಿ ಬಸವೇಶ್ವರ' ಎಂದು ಅವರ ಸಾಮಾಜಿಕ ಕ್ರಾಂತಿಗಾಗಿ 'ಕ್ರಾಂತಿಯೋಗಿ ಬಸವೇಶ್ವರ' ಎಂದು ಕರೆಯಲಾಗುತ್ತದೆ.

ಸಾಮನ್ಯವಾಗಿ ಅಸಾಮನ್ಯ ಪುರುಷರು ಶರಣರು ಅಧಿಕಾರದ ಸಿಂಹಾಸನವೇರುವುದು ಅಪರೂಪ. ಅವರು ವಿರಕ್ತರಂತೆ ಜೀವಿಸಿ ಜನಮನದಲ್ಲಿ ನೆಲೆಸಿ ಸಾಮಾಜಿಕ ಜೀವನದ ಹೊಲಸನ್ನು ದೂರ ಮಾಡಲು ಶ್ರಮಿಸುತ್ತಾರೆ. ಆದರೆ ಬಸವಣ್ಣನವರು ಹಾಗೆ ಮಾಡದೆ , ತಮಗೆ ಸಿಕ್ಕಿದ ಅಧಿಕಾರದ ಅವಕಾಶವನ್ನು ಜನಪರವಾದ ಸುದಾರಣೆ ತರುವುದಕ್ಕೆ ಉಪಯೋಗಿಸಿಕೊಂಡರು.ಮಂಗಳವಾಡದ ರಾಜ 'ಬಿಜ್ಜಳನ' ರಾಜ್ಯಬಾರದಲ್ಲಿ ಬಸವೇಶ್ವರರು ತಮಗೆ ಸಿಕ್ಕಿದ ಅವಕಾಶದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಲು ಒಪ್ಪಿ ಮುಂದಾದರು.
ಅವರ ಅಧಿಕಾರಾವದಿಯಲ್ಲಿ ಅನೇಕ ಸುದಾರಣೆಗಳನ್ನು ಜಾರಿಗೆ ತಂದರು. ಜನರನ್ನು ಅಲಸಿ ಜೀವನದಿಂದ ದುಡಿದು ಬದುಕುವ ಪಥದಲ್ಲಿ ಮುನ್ನಡೆಸಿದರು. ಜಾತಿ ಲಿಂಗ ಬಾಷೆ ಬೇದವಿಲ್ಲದೆ ಶರಣ ತತ್ವದಲ್ಲಿ ನಂಬಿಕೆ ಇಟ್ಟು ಬರುವರನ್ನು 'ನಿಜವಾದ ಶಿವಶರಣ' ರೆಂದು ಕರೆದು ಸನ್ಮಾನಿಸಿದರು. ಸಮಾಜದ ಎಲ್ಲ ವರ್ಗದ ಜನರನ್ನು ಒಂದುಗೂಡಿಸಿದ ಅವರು ಜಾತಿಯತೆಯ ವಿರುದ್ದ ಸಮರ ಸಾರಿದರು. ಅಸ್ಪಶ್ಯತೆಯ ಹೆಸರಿನಲ್ಲಿ ಊರ ಹೊರಗಿದ್ದ ದಲಿತರನ್ನು ಕರೆತಂದು ಸಮಾಜದ ಬಾಗವನ್ನಾಗಿ ಮಾಡಲು ಶ್ರಮಿಸಿದರು. ದೇವಾಲಯ ಕುಡಿಯುವ ನೀರಿನ ಭಾವಿ ಕೆರೆಗಳನ್ನು ಬಳಸಲು ಎಲ್ಲರಿಗೂ ಹಕ್ಕಿದೆ ಎಂದು ಪ್ರತಿಪಾದಿಸಿ ಅದನ್ನು ಆಚರಣೆಗೆ ತಂದರು.ಅಲ್ಲದೆ ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು.
   ಕನ್ನಡ ಬಾಷೆಯಲ್ಲಿ ಜನಸಾಮನ್ಯರಿಗಾಗಿ ತಮ್ಮ ವಚನಗಳನ್ನು ರಚಿಸಲು ಪ್ರೋತ್ಸಾಹಿಸಿದ ಇವರು , ಬಸವಕಲ್ಯಾಣವೆಂಬ ಜಾಗದಲ್ಲಿ ಶರಣರನ್ನೆಲ್ಲ ಜೊತೆಗೂಡಿಸಿ 'ಅನುಭವ ಮಂಟಪ' ಎಂಬ ಪೀಠ ಸ್ಥಾಪಿಸಿದರು. 'ಅನುಭವ ಮಂಟಪ'ವು ವಿಶ್ವ ಮಾನವ ಸಂದೇಶ ಹಾಗು ದಾರ್ಮಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಬಹುದಾಗಿದ್ದ ವೇದಿಕೆಯಾಗಿದ್ದು ಭಾರತದದ್ಯಂತ ಅನೇಕ ಕಡೆಗಳಿಂದ ಜನರನ್ನು ಸೆಳೆಯಿತು. ಕನ್ನಡದಲ್ಲಿ ತಮ್ಮ ವಚನಗಳನ್ನು ಬರೆಯುವಂತೆ ಎಲ್ಲರನ್ನು ಪ್ರೋತ್ಸಾಹಿಸಿದ ಇವರು ಆ ಮೂಲಕ ತಮ್ಮ ಕ್ರಾಂತಿಕಾರಕ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಶ್ರಮಿಸಿದರು.

'ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ
 ಎನ್ನ ಕಾಲೇ ಕಂಭ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ'  
   
ಎಂದ ಬಸವಣ್ಣನವರು ನವಿರಾಗಿಯೆ ಪುರೋಹಿತಶಾಯಿ ವ್ಯವಸ್ಥೆ ಮತ್ತು ಜನಸಾಮಾನ್ಯರ ಶೋಷಣೆಯನ್ನು ಖಂಡಿಸಿದ್ದಾರೆ. ಸಮಾಜಸುದಾರಕರಾಗಿ ’ಕ್ರಾಂತಿಯೋಗಿ ಬಸವಣ್ಣ’ ಎಂದು ಕರೆಯಲ್ಪಟ್ಟಂತೆ , ಅವರು ಪರಶಿವನನನ್ನು ಎಲ್ಲೆಲ್ಲು ಇರುವನೆಂದು ಸಾರುತ್ತ ಭಕ್ತಿಮಾರ್ಗದ ಹಾದಿಯನ್ನು ತುಳಿಯುತ್ತ ’ಭಕ್ತಿ ಭಂಡಾರಿ’ ಎನಿಸಿ ಎರಡು ದಾರಿಯನ್ನು ಒಟ್ಟಿಗೆ ಕ್ರಮಿಸಿದ ವಿಶಿಷ್ಟ ವ್ಯಕ್ತಿತ್ವ ಇವರದು. ಶಿವಶರಣರನ್ನು ನಡೆವ ಜಂಗಮನೆಂದು ಕರೆದು ಶಿವ ನಮ್ಮಲ್ಲೆ ವಾಸಿಸುತ್ತಾನೆ ಬೇರೆಲ್ಲೊ ಕುಳಿತಿಲ್ಲ ಎಂದು ಪ್ರತಿಪಾದಿಸಿದರು.

 ಆದರೆ ಈ ಜೀವನದಲ್ಲಿ ಕೆಟ್ಟದ್ದು ಮತ್ತು ಸುಳ್ಳು ಬಾಳುವಷ್ಟು ಸುಲುಭವಾಗಿ ಮತ್ತು ದೀರ್ಘವಾಗಿ ಒಳ್ಳೆಯದು ಹಾಗು ಸತ್ಯ ಬಾಳಲಾರದು ಎನ್ನುವದನ್ನು ತೋರಿಸಲೋ ಎಂಬಂತೆ ಬಸವಣ್ಣನವರ ಕ್ರಾಂತಿಕಾರಕ ಜೀವನಕ್ಕೆ ಅಂತ್ಯವೂ ಬಂದು ಬಿಟ್ಟಿತು. ಕೃತ್ರಿಮ ಹಾಗು ಪೊಳ್ಳೂ ಜೀವನ ನಡೆಸದ ಬಸವೇಶ್ವರರು ತಮ್ಮ ಸುತ್ತಲು ನಡೆಯುತ್ತಿದ್ದ ಕುತ್ಸಿತ ಜನರ ವಿಲೋಮ ಮಾರ್ಗಗಳನ್ನು ಅರಿಯದಾದರು. ಶರಣರಾದ ಮಧುವರಸನ ಮಗಳು ಲಾವಣ್ಯ ಹಾಗು ಹರಳಯ್ಯನ ಮಗ ಶೀಲವಂತ ಎಂಬುವರ ಅಂತರ್ಜಾತೀಯ ಮದುವೆಯಲ್ಲಿ ಮಿಥ್ಯ ಸಂಪ್ರದಾಯವಾದಿಗಳೆಲ್ಲ ರಾಜ ಬಿಜ್ಜಳನನ್ನು ದಾರಿ ತಪ್ಪಿಸಿದರು. ರಾಜನಲ್ಲಿ ದೂರಿ ರಾಜನು ಈ ಮದುವೆಯನ್ನು ವಿರೋದಿಸುವಂತೆ ಮಾಡಿದರು. ಮನನೊಂದ ಬಸವಣ್ಣನವರು ತಮ್ಮ ಪದವಿಯನ್ನು ತ್ಯಜಿಸಬೇಕಾಯಿತು. ನಂತರ ರಾಜನು ಮಧುವರಸ ಹಾಗು ಹರಳಯ್ಯನನ್ನು ಹಾಗು ನವ ದಂಪತಿಗಳನ್ನು ಆನೆಯ ಕಾಲಿಗೆ ಕಟ್ಟಿ ಎಳೆಯಿಸಿ ಕೊಲ್ಲುವ ಕ್ರೂರವಾದಿ ಶಿಕ್ಷೆ ವಿದಿಸಿದನು. ಬಿಜ್ಜಳನ ಸೈನ್ಯ ಶಿವಶರಣರನ್ನು ಶಿಕ್ಷಿಸತೊಡಗಿದಾಗ ರಕ್ತದ ಹೊಳೆ ಹರಿಯಿತು. ಸೂಕ್ಷ್ಮ ಮನಸಿನವರಾದ ಬಸವಣ್ಣನವರು ೧೧೯೬ ರರಲ್ಲಿ ಬಿಜ್ಜಳನ್ನು ರಾಜ್ಯವನ್ನು ತೊರೆದು ಕೂಡಲಸಂಗಮಕ್ಕೆ ಬಂದು ಅಲ್ಲಿಯೆ ಲಿಂಬೈಕ್ಯರಾದರು.

ಕರ್ನಾಟಕ ಕಂಡ ಪ್ರಥಮ ಸಾಮಾಜಿಕ ಕ್ರಾಂತಿಕಾರಕ ಪುರುಷನ ಜೀವನ ಹೀಗೆ ದುರಂತದಲ್ಲಿ ಅಂತ್ಯವಾಯಿತು.

ಬಸವಣ್ಣನವರು ರಚಿಸಿದ ಹಾಗು ಅವರ ಪ್ರೋತ್ಸಾಹದಿಂದ ಅವರ ಸಮಕಾಲಿನ ಅಲ್ಲಮ ಪ್ರಭು, ಅಕ್ಕಮಹಾದೇವಿ ಚೆನ್ನಬಸವಣ್ಣ ಮುಂತಾದವರಿಂದ ರಚಿತವಾದ ಶರಣರ ವಚನಗಳು ಇಂದಿಗೂ ಹಲವು ಶತಮಾನಗಳ ನಂತರವು  ಕನ್ನಡದಲ್ಲಿ ಜೀವಂತವಾಗಿದೆ ಹಾಗು ಜನಸಾಮನ್ಯರ ನಾಲಿಗೆಯಲ್ಲಿದೆ.

 

Comments