ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ (ಬಾಗ ೨) - ಬಿಟ್ಟೆನೆಂದರು ಬಿಡದ ಮಾಯೆ

ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ (ಬಾಗ ೨) - ಬಿಟ್ಟೆನೆಂದರು ಬಿಡದ ಮಾಯೆ

  ಇಲ್ಲಿಯವರೆಗೂ....
  ಮನೆಯವರೊಡನೆ ಶಿವಗಂಗೆಗೆ ಹೋದ ನಾನು ಎಲ್ಲರೊಡನೆ ಬೆಟ್ಟದ ಮೇಲೆ ಹೋಗದೆ ಕೆಳಗೆ ಉಳಿದೆ. ದೇವಾಲಯದ ಮುಂದೆ ಸನ್ಯಾಸಿಯೊಬ್ಬರ ಪರಿಚಯವಾಯಿತು. ಅವರೊಡನೆ ಹೋಟೆಲ್ ನಲ್ಲಿ ಊಟ ಮುಗಿಸಿ ಬಂದು ನಂತರ ವಿರಾಮಕ್ಕೆ ಕುಳಿತು ಅವರ ಜೀವನದ ಕತೆ  ಹೇಳಿ ಎಂದೆ. ಅವರ ಪೂರ್ವಾಶ್ರಮದ ಹೆಸರು ವೆಂಕಟೇಶ್.
ಅವರು ಹೇಳಿದ ತಮ್ಮ ಕತೆಯ ಸಾರವೆ ಎರಡನೆ ಬಾಗ 
ಓದಿ... 
-----------------------------------------------------------------------------------------------------------------------------
 
                         ಎರಡನೆ ಬಾಗ :  ಬಿಟ್ಟೆನೆಂದರು ಬಿಡದ ಮಾಯೆ
 
ಸನ್ಯಾಸಿ ತಮ್ಮ ಕತೆ ಪ್ರಾರಂಬಿಸಿದರು 
" ನನ್ನ ನೆನಪಿನಲ್ಲಿ ನನ್ನ ಕತೆ ಪ್ರಾರಂಬವಾಗುವುದೆ ಕಷ್ಟಗಳ ಜೊತೆ. ತೀರ ಚಿಕ್ಕ ವಯಸಿನಲ್ಲಿಯೆ ನನ್ನ ತಂದೆ ನನ್ನನ್ನು ಅಗಲಿದರು.  ನನ್ನ ತಾಯಿ ಚಿತ್ರದುರ್ಗದ ಜಿಲ್ಲೆಯ ತಾಳ್ಯದವರು. ಮೊದಲಲ್ಲಿ ಅವರಿಗೆ ತವರಿನಿಂದ ಸ್ವಲ್ಪ ಬೆಂಬಲವಿತ್ತು. ಆದರೆ ನನ್ನ ಸೋದರಮಾವ ಅಂದರೆ ನಮ್ಮ ತಾಯಿಯ ಅಣ್ಣ ತೀರಿಕೊಂಡ ನಂತರ ಅದು ತಪ್ಪಿಹೋಯಿತು.  ಮುಂದಿನದೆಲ್ಲ ಕಷ್ಟಗಳ ಪರಂಪರೆಯೆ. ನಮ್ಮ ತಾಯಿ ತಾಯಮ್ಮನವರು ಅವರಿವರಲ್ಲಿ ಅಡಿಗೆ ಮುಂತಾದ ಕೆಲಸ ಮಾಡುತ್ತ. ಅದೆ ಸಂಪಾದನೆಯಲ್ಲಿ ನನ್ನನ್ನು ಕಷ್ಟದಿಂದ ಸಾಕುತ್ತಿದ್ದರು. 
 
  ನಾನು ಹೈಸ್ಕೂಲು ಮುಗಿಸಿ ಕಾಲೇಜಿಗೆ ಬರುವ ಹೊತ್ತಿಗಾಗಲೆ ನನ್ನ ಅಮ್ಮನ ದೇಹ ಶಕ್ತಿ ಸೊರಗಿ ನನ್ನನ್ನು ಸಾಕಲು ಕಷ್ಟಪಡುತ್ತಿದ್ದಳು. ಪ್ರತಿ ಪೈಸೆ ದುಡಿಯಲು ಅವಳು ಪಡುತ್ತಿದ್ದ ಕಷ್ಟ ನೋಡುವಾಗಲೆ ಬಹುಷಃ ನನಗೆ ಆಗಿನಿಂದಲೆ ಹಣದ ಮೇಲಿನ ಜಿಗುಪ್ಸೆ ಪ್ರಾರಂಬವಾಯಿತು. ಅದರೆ ಅದು ಹಣವಿಲ್ಲದೆ ಹಣದ ಮೇಲಿದ್ದ ಜಿಗುಪ್ಸೆ. ನಾನು ಆಗ ಓದಿಗಾಗಿ  ಪರಾವಲಂಬಿಯಾಗಬೇಕಾಯಿತು. ಬೆಂಗಳೂರಿಗೆ ಬಂದು ಹೇಗೊ ಅವರಿವರನ್ನು ಬೇಡುತ್ತ, ಇರಲು ಒಂದು ರೂಮು ಪಡೆದೆ. ಪರಿಚಯಸ್ಥರ ಮೂಲಕ ವಾರನ್ನಕ್ಕಾಗಿ ಮನೆಗಳನ್ನು ಹೊಂದಿಸಿಕೊಂಡೆ. ಬಹುಷಃ ನನಗೆ ಆಗಲೆ ದಿನಕ್ಕೊಂದು ಊಟದ ಅಭ್ಯಾಸವಾಗಿತ್ತೇನೊ.  ಚಾಮರಾಜಪೇಟೆಯ ಸಂದಿಗಳಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದ ಮನೆಗಳಲ್ಲಿ ಊಟಕ್ಕೆ ಹೋಗುತ್ತಿದ್ದೆ.  ಜೊತೆಗೆ ಚಿಕ್ಕಮಕ್ಕಳಿಗೆ ಪಾಠ ಹೇಳುವುದು ಮುಂತಾದ ಕೆಲಸಗಳಿಂದ ಅಲ್ಪ ಸ್ವಲ್ಪ ಸಂಪಾದಿಸುತ್ತಿದ್ದೆ. 
  ಹೇಗೊ  ಓದುವದಂತು ಮುಗಿಯಿತು. ಏಕೊ ಕೆಲಸಕ್ಕಾಗಿ ಸೇರಿ ಅವರಿವರಲ್ಲಿ ಚಾಕರಿ ಮಾಡಲು ಮನಸ್ಸು ಒಪ್ಪಲಿಲ್ಲ. ಸ್ವಂತದ ಏನಾದರು ವ್ಯವಹಾರ ಮಾಡಬೇಕೆಂಬ ಆಸಕ್ತಿಯಲ್ಲಿ ಇಬ್ಬರು ಗೆಳೆಯರ ಪಾಲುದಾರಿಕೆಯಲ್ಲಿ , ನಾನು ಸಾಲಮಾಡಿ ಹಣವನ್ನು ಹೊಂದಿಸಿ ಚಿಕ್ಕದಾಗಿ ಪ್ರಾಸ್ಟಿಕ್ ರಿಸೈಕ್ಲಿಂಗ್ ತಂತ್ರದಲ್ಲಿ ತಯಾರಾಗುವ ಪ್ಲಾಸ್ಟಿಕ್ ಗೃಹಪಯೋಗಿ ವಸ್ತುಗಳನ್ನು ತಯಾರಿಸಿ ಮಾರ್ಕೆಟ್ ಮಾಡಲು ತೊಡಗಿದೆ. ಗೆಲುವು ನನ್ನ ಕೈಹಿಡಿದಿತ್ತು, 'ಅದೇನೊ ಆಶ್ಚರ್ಯ!' ಬಾಲ್ಯದಿಂದ ನಾನು ಜಿಗುಪ್ಸೆಯಿಂದ ಕಾಣುತ್ತಿದ್ದ 'ಹಣ' ಈಗ ನನ್ನ ಸುತ್ತಲು ನರ್ತಿಸುತ್ತಿತ್ತು. ಇಬ್ಬರು ಗೆಳೆಯರು ಸಹ ನನ್ನ ಈ ಗೆಲುವಿನಿಂದ ಹರ್ಷಿತರಾಗಿದ್ದರು.
 
 ಅಮ್ಮನಂತು ಗೆಲುವಾಗಿದ್ದಳು, ಅವಳ ಮುಖದಲ್ಲಿ ಸಂತೃಪ್ತಿ ತುಂಬಿತ್ತು. ಸಂತೋಷ ಬರುವಾಗ ಸದಾ ಒಟ್ಟೊಟ್ಟಾಗಿಯೆ ಬರುವುದು. ಬೆಂಗಳೂರಿನಲ್ಲಿ ವ್ಯವಹಾರ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದ ಶಿವರಾಮಯ್ಯನವರು ನನ್ನ ಚುರುಕುತನವನ್ನು ಏಳ್ಗೆಯನ್ನು ನೋಡುತ್ತ , ತಮ್ಮ ಮಗಳನ್ನು ನನಗೆ ವಿವಾಹಮಾಡಿ ಕೊಡುವ ಪ್ರಸ್ತಾಪ ತಂದರು. ನಮ್ಮ ಕಡೆಯಿಂದ ಯಾವುದೆ ವಿರೋದವು ಇರಲಿಲ್ಲ. ಮದುವೆ ನಂತರದ ಜೀವನ ಸುಖವಾಗಿಯೆ ಇತ್ತು. ಎರಡು ವರ್ಷಗಳಲ್ಲಿ ಮಗಳು ಹುಟ್ಟಿದಳು ನಮಗಂತು ಸ್ವರ್ಗಕ್ಕೆ ಮೂರೆ ಗೇಣು ಅನ್ನುತ್ತಾರಲ್ಲ , ಜೀವನವೆನ್ನುವುದು ಹಾಗಿತ್ತು.    ನನ್ನ ಜೊತೆಗೆ ಪಾಲುದಾರರಾಗಿದ್ದ ಇಬ್ಬರು ಗೆಳೆಯರು ಶಂಕರ ಮತ್ತು ಗೋಪಾಲರಿಗು ಮದುವೆಯಾಗಿತ್ತು. ನನ್ನ ಎಲ್ಲ ವ್ಯವಹಾರಗಳಿಗು ಸ್ಪೂರ್ತಿಯಾಗಿದ್ದವಳು ನನ್ನ ಅಮ್ಮ. 
  
  ಎಲ್ಲವು ಚೆನ್ನಾಗಿದೆ ಅಂದುಕೊಳ್ಳುವಾಗಲೆ ಸಣ್ಣ ತೊಡಕೊಂದು ಬಂದಿತು. ಮದುವೆಯ ನಂತರ ಗೆಳೆಯರಿಬ್ಬರ ಮನೋಭಾವ ಅದೇಕೊ ಬದಲಾಯಿತು.  ಅವರಿಬ್ಬರು ಅದೇಕೊ ವ್ಯವಹಾರದಲ್ಲಿ ಬೇರೆ ಬೇರೆ ಆಗುವ ಯೋಚನೆ ನನ್ನ ಮುಂದಿಟ್ಟರು. ನಾನು ಪ್ರತಿರೋದಿಸಿದೆ. 
"ಯಾವ ಕಾರಣಕ್ಕೆ ನಾವು ನಮ್ಮ ಪಾಲುದಾರಿಕೆ ಮುರಿದು ವ್ಯವಹಾರದಲ್ಲಿ ಬೇರೆ ಬೇರೆ ಯಾಗಬೇಕು. ಎಲ್ಲವು ಚೆನ್ನಾಗಿದೆ, ಒಟ್ಟಿಗೆ ಇದ್ದರಷ್ಟೆ ಬೆಳೆಯಲು ಅನುಕೂಲ"          
ಎಂಬುದು ನನ್ನ ವಾದ
 
ಆದರೆ ಅವರಿಬ್ಬರ ಮನದಲ್ಲಿ ಬೇರೆ ಏನು ಯೋಚನೆ ಇದ್ದಂತಿತ್ತು. ವ್ಯವಹಾರ ಚಿಕ್ಕದಾಗಿದೆ , ಯಾವ ಘರ್ಷಣೆಗಳು ಇಲ್ಲ . ಎಲ್ಲ ಚೆನ್ನಾಗಿರುವಾಗಲೆ ಬೇರೆ ಆದರೆ ಮನಸುಗಳು ಚೆನ್ನಾಗಿರುತ್ತದೆ. ಅಲ್ಲದೆ ಬೇರೆ ಬೇರೆಯಾಗಿ ವ್ಯವಹಾರ ಮಾಡಿದಲ್ಲಿ ಮೂವರು ದೊಡ್ಡದಾಗಿ ಬೆಳೆಯಬಹುದು. ಮುಂದೆಯು ತೊಂದರೆ ಇರುವದಿಲ್ಲ ಎನ್ನುತ್ತಿದ್ದರು. ನನಗಂತು ಅವರ ಯೋಚನೆಯ ಹಿಂದೆ ಬೇರೆಯವರು ಇರುವಂತೆ ಕಾಣುತ್ತಿತ್ತು. 
 
  ಕಡೆಗೆ ಅವರ ಮಾತು ನಾನು ಒಪ್ಪಬೇಕಾಯಿತು. ನಾನು ನನ್ನ ತಾಯಿಯವರ ಹೆಸರಿನಲ್ಲಿ ಪ್ರಾರಂಬಿಸಿದ್ದ ಪ್ಲಾಸ್ಟಿಕ್ ರಿಸೈಕ್ಲಿಂಗ್ ನ ಮೂಲ ಯೂನಿಟ್ "ತಾಳ್ಯ ತಾಯಮ್ಮ ಪ್ಲಾಸ್ಟಿಕ್ ರೆಸೈಲ್ಕಿಂಗ್ " ನನ್ನ ಪಾಲಿಗೆ ಉಳಿಯಿತು. ನಾನು ಇಬ್ಬರು ಗೆಳೆಯರ ಯಾವುದೆ ತೀರ್ಮಾನವನ್ನು ಪ್ರತಿರೋದಿಸಲಿಲ್ಲ. ನನ್ನ ಪಾಲಿಗೆ ಬಂದಿದ್ದ ಬಾಗದಲ್ಲಿ ಪೂರ್ಣ ತೃಪ್ತಿಯಿಂದ ಇದ್ದೆ.  ವರ್ಷವೆರಡು ಕಳೆಯುವದರಲ್ಲಿ ನನ್ನ ವ್ಯವಹಾರ ಒಂದಕ್ಕೆ ಹತ್ತಾಗಿ ಬೆಳೆಯಿತು.  ಆಗಿನ್ನು  ಪ್ಲಾಸ್ಟಿಕ್ ಯುಗ ಪ್ರಾರಂಬವಾಗಿತ್ತು ಹಾಗಾಗಿ ನನಗೆ ಅದರ ಪೂರ್ಣ ಪ್ರಯೋಜನ ದೊರೆಯಿತು. ನಾನು ಬೇರೆ ಬೇರೆ ವ್ಯವಹಾರದಲ್ಲಿ ಸಹ ತೊಡಗಿಸಿಕೊಂಡೆ. 
 
 ಆದರೆ ನಾನು ಬೇಡವೆಂದರು ನನ್ನನ್ನು ತೊರೆದು ಹೋಗಿದ್ದ ಗೆಳೆಯರು ಮಾತ್ರ ಅದೇಕೊ ಸೋತಿದ್ದರು. ಗೆಲುವನ್ನು ಅರಸಿ ಹೊರಟಿದ್ದ ಅವರನ್ನು ಅದೃಷ್ಟ ಲಕ್ಷ್ಮಿ ಅದೇಕೊ ಒಲಿದಿರಲಿಲ್ಲ. ನನ್ನದು ಯಾವುದೆ ತಪ್ಪು ಇರದಿದ್ದರು ಅದೇಕೊ ಅವರು ನನ್ನ ಗೆಳೆತನವನ್ನು ನಿದಾನಕ್ಕೆ ತೊರೆದರು. 
 
 ಆದರೆ ನನ್ನ ಮನವೇಕೊ ಎಂದಿಗು ನೆಮ್ಮದಿಯಾಗಿರಲಿಲ್ಲ. ಹೊರಗೆ ನಾನು ಸದಾ ಸಂತುಷ್ಟನೆ. ನನಗೆ ಯೋಚಿಸಲು ಯಾವ ಸಂಗತಿಯು ಇರಲಿಲ್ಲ. ಕೈಯಿಟ್ಟ ಕಡೆಯಲ್ಲ ಅದೃಷ್ಟ ಕೂಡಿಬರುತ್ತಿತ್ತು.  ಮನಸು ಮಾತ್ರ ಇರುವ ವೈಭವದಲ್ಲಿ ಮುಳುಗುತ್ತಿರಲಿಲ್ಲ. ತಣ್ಣಗಿನ ವಾತಾನುಕೂಲಿ ರೂಮಿನಲ್ಲಿ ಮಂಚದಮೇಲೆ ಮಲಗಿದಾಗಲು, ಬಾಲ್ಯದಲ್ಲಿ ಹಳ್ಳಿಯಲ್ಲಿ ಇದ್ದ ಮುರುಕುಮನೆಯೆ ನೆನಪಾಗುತ್ತಿತ್ತು. ಬಡತನದ ದಿನಗಳು ನನ್ನ ನೆನಪಲ್ಲಿ ಏಕೊ ಸದಾ ಹಸಿರಾಗಿ ಇತ್ತು.  ಕ್ರಮೇಣ ನನಗೆ ಅರ್ಥವಾಗಿತ್ತು ಇವೆಲ್ಲ ನನ್ನ ಮನೋಧರ್ಮಕ್ಕೆ ಹೊಂದುತ್ತಿಲ್ಲ.  ಸದಾ ನನ್ನ ಮನದಲ್ಲಿ ಯಾವುದೊ ವ್ಯಾಕುಲತೆ. 
 
  
 ನನ್ನಲ್ಲಿ ಅಪಾರ ಹಣ ಸೇರುತ್ತ ಹೋದ ಹಾಗೆ ಅದರ ಪರಿಣಾಮ ನನ್ನ ಸಂಸಾರದ ಮೇಲೆ ಆಗುತ್ತಿತ್ತು. ಮೊದಲೆಲ್ಲ ನಾನು ಮನೆಗೆ ಬಂದರೆ ಸಾಕೆಂದು ಕಾಯುತ್ತಿದ್ದ ಪತ್ನಿ ಈಗ ನಿದಾನಕ್ಕೆ ಹೊರಗೆ ಕಾಲಿಟ್ಟಿದ್ದಳು. ಸಿರಿವಂತರು ಮಾತ್ರ ಕಾಲಿಡುವ ಕ್ಲಬ್ ಗಳಲ್ಲಿ ಅವಳಿಗೆ ಗೋಗರೆದು ಮೆಂಬರ್ಶಿಪ್ ಕೊಟ್ಟಿದ್ದರು. ಸದಾ ಅವಳನ್ನು ಹೊಗಳಿ ಅಟ್ಟಕ್ಕೇರಿಸುವ ಗೆಳತಿಯರು ಅವಳ ಸುತ್ತಲು ಸದಾ ಇರುತ್ತಿದ್ದರು. ಮಧ್ಯವ ವರ್ಗದ ಹಿಂಜರಿಕೆಗಳೆಲ್ಲ ಅವಳಿಂದ ಬೇಗ ಮರೆಯಾಗಿತ್ತು. ಹಣದ ಪ್ರಭಾವ ಅದೇನೊ ಅವಳ ವ್ಯಕ್ತಿತ್ವವನ್ನು ಬದಲಿಸಿಬಿಟ್ಟಿತ್ತು.  
 
     ನನ್ನ ಹೆಂಡತಿಯ ಈ ನಡತೆ ಅವಳ ಮಗಳ ಮೇಲು ಪರಿಣಾಮ ಬೀರಿತ್ತು. ತೀರ ಚಿಕ್ಕ ವಯಸ್ಸಿನಲ್ಲಿಯೆ ಅವಳು ಈ ರೀತಿಯ ಹಣವಂತರ ರೀತಿಯ ನಡೆನುಡಿಗಳನ್ನು ರೂಡಿಸಿಕೊಂಡಿದ್ದಳು. ಯಾವ ಅಮೋಧ ಪ್ರಮೋಧಗಳಿಗು ಅವಳಿಗೆ ಕೊರತೆ ಇರಲಿಲ್ಲ.  ಬೆಳೆಯುತ್ತಿರುವಂತೆ ಅದು ಬೇರೆ  ರೀತಿಯಾಗಿ ಬದಲಾಗುತ್ತಿತ್ತು. ಇನ್ನು ಕಾಲೇಜು ಮುಗಿಸುವ ಮೊದಲೆ ನನ್ನ ಪತ್ನಿ ಅವಳಿಗೆ ಎಂದು ಕಾರು ಕೊಡಿಸಿದ್ದಳು. ಅಲ್ಲದೆ ಅವಳ ನಡೆನುಡಿಗಳು ಬಹಳಷ್ಟು ಆಕ್ರಮಣಕಾರಿಯಾಗಿದ್ದು ತನ್ನ ಎದುರಿಗೆ ಇರುವರು ಯಾರೆಂಬ ಕಿಂಚಿತ್ ಪರಿಗಣನೆಯು ಇಲ್ಲದೆ ಉತ್ತರ ಕೊಡುತ್ತಿದ್ದಳು. ನಾನು ಕೆಲವೊಮ್ಮೆ ಅವಳನ್ನು ತಿದ್ದಲು ಪ್ರಯತ್ನಿಸಿ ಸೋತಿದ್ದೆ.  ಪತ್ನಿಯನ್ನು ಈ ಬಗ್ಗೆ ಬಹಳ ಸಾರಿ ಎಚ್ಚರಿಸಿದೆ ಅದರೆ ಅವಳು ತನ್ನನಾಗಲಿ ಅಥವ ಮಗಳನ್ನಾಗಲಿ ಬದಲಿಸಿಕೊಳ್ಳಬೇಕೆಂಬ ಇಚ್ಚೆ ತೋರಲಿಲ್ಲ. ಈಗ ಮಗಳು ಕಾಲೇಜಿನ ಕಡೆಯ ವರ್ಷಕ್ಕೆ ಬಂದಿದ್ದಳು. ಅವಳ ಸುತ್ತ ಇದ್ದ ಗುಂಪು ಸಹ ಅಂತಹುದೆ. 
 
 ನನಗೆ ಮತ್ತೊಂದು ಅಘಾತ ಕಾದಿತ್ತು. ನನ್ನನ್ನು ಚಿಕ್ಕವಯಸಿನಿಂದಲು ಬೆಳೆಸಿ ನನ್ನೊಳಗೆ ತಾನು ಒಂದಾಗಿದ್ದ ನನ್ನ ಅಮ್ಮ ನನ್ನನ್ನು ಅಗಲಿದಳು.  ಅದು ನನ್ನನ್ನು ಬಹಳ ತಿಂಗಳುಗಳ ಕಾಲ ಕಾಡಿತ್ತು. ಈಗ ನಾನು ಬಹಳಷ್ಟು ಒಂಟಿಯಾಗಿದ್ದೆ. ಅಮ್ಮನಿರುವ ತನಕ ಅವಳು ನನ್ನಲ್ಲಿ ಮಾತನಾಡಲಿ ಬಿಡಲಿ ಮನೆಯ ಯಾವುದೊ ಮೂಲೆಯಲ್ಲಿದ್ದು ನನ್ನ ಮನಕ್ಕೆ ಒಂದು ಆಸರೆಯಾಗಿದ್ದಳು. ಈಗ ಮನೆಗೆ ಬಂದರೆ ನನ್ನನ್ನು ಒಂಟಿತನ ಕಾಡುತ್ತಿತ್ತು. ಹೀಗಾಗಿ ನಾನು ಸಾದರಣವಾಗಿಯೆ ಮನೆಗೆ ತಡವಾಗಿ ಬರುತ್ತಿದ್ದೆ. 
 
 ಪತ್ನಿ ಹೊರಗೆ ಹೋಗಿದ್ದರೆ ಯಾವಾಗ ಬರುವಳೆಂದು ತಿಳಿಯುತ್ತಿರಲಿಲ್ಲ. ಮಗಳಾದರು ಅವಳಿಗೆ ಅವಳದೆ ಆದ ಗೆಳಯ ಗೆಳತಿಯರ ಬಳಗವಿತ್ತು. ಮನೆಯಲ್ಲಿ ಒಟ್ಟಿಗೆ ಕುಳಿತು ಮಾತನಾಡುವದಾಗಲಿ ಅಥವ ಊಟಮಾಡುವ ಪ್ರಸಂಗವಾಗಲಿ ಬರುತ್ತಲೆ ಇರಲಿಲ್ಲ.  ಕೆಲವೊಮ್ಮೆ ಅಡುಗೆಯವನು ನಾನಿರುವ ರೂಮಿಗೆ ಊಟವನ್ನು ತಂದು ಒದಗಿಸುತ್ತಿದ್ದ.   ವಿಚಿತ್ರವೆನಿಸಬಹುದು ಕೆಲವು ಸಿನಿಮಾಗಳಲ್ಲಿ ತಂದೆ ವ್ಯವಹಾರದಲ್ಲಿ ಮುಳುಗಿ, ತಾಯಿ ಹೊರಗೆ ತನ್ನ ವ್ಯವಹಾರದಲ್ಲಿ ಮುಳುಗಿ, ಮನೆಯಲ್ಲಿ ಮಕ್ಕಳು ತಂದೆ ತಾಯಿಯ ಪ್ರೀತಿಗೆ ಕಾತರಿಸುವ ಸನ್ನಿವೇಶ ಕಂಡಿದ್ದೆ, ಆದರೆ ಇಲ್ಲಿ ಅದೇನೊ ವಿಚಿತ್ರ ಮನೆಯ ಸದಸ್ಯರೆಲ್ಲ ಅವರ ವ್ಯವಹಾರದಲ್ಲಿ ಮುಳುಗಿ ಮನೆಯ ಯಜಮಾನನಾದ ನಾನೆ ಅದೇಕೊ ಅನಾಥನಂತೆ ಬಾಳುತ್ತಿದ್ದೀನಿ ಅನ್ನುವ ಭಾವನೆ ನನ್ನನ್ನು ತುಂಬುತ್ತಿತ್ತು.  ಮನೆಯಲ್ಲಿ ಒಬ್ಬರನ್ನೊಬ್ಬರು ಭಾವನಾತ್ಮಕವಾಗಿ ಅರಿತುಕೊಳ್ಳದೆ ಅವರದೆ ವೃತ್ತಗಳಲ್ಲಿ ಬದುಕಿದ್ದೇವೆ ಅನ್ನಿಸುತ್ತ ಇತ್ತು.  
 
 ಇಂತಹುದೆ ಒಂದು ದಿನ ನಾನು ಸ್ವಲ್ಪ ಮುಂಚೆಯೆ ಸಂಜೆ ಮನೆಗೆ ಬಂದೆ. ರಾತ್ರಿ ಕತ್ತಲಾದನಂತರ ಮಗಳು ಎಲ್ಲಿಗೊ ಹೊರಡುವ ಸಿದ್ದತೆ ನಡೆಸಿದ್ದಳು. ಹೊರಗೆ ಹೊರಟ ಅವಳನ್ನು ಗಮನಿಸುತ್ತ ಪ್ರಶ್ನಿಸಿದೆ
"ಸುಧಾ ಎಲ್ಲಿಗೆ ಹೊರಟೆಯಮ್ಮ , ಕತ್ತಲಾದ ನಂತರ "  ಅವಳು ನಗುತ್ತ ಅಂದಳು
"ಡ್ಯಾಡಿ, ನಮ್ಮ ಕಾರ್ಯಕ್ರಮವಿರುವುದೆ ಕತ್ತಲಾದ ಮೇಲೆ , ಹಾಗಾಗಿ ಹೊರಟೆ" 
ನಾನು ಕೊಂಚ ಆಶ್ಚರ್ಯದಿಂದಲೆ 
"ಅದೆಂತದು ಕತ್ತಲಾದಮೇಲಿನ ಕಾರ್ಯಕ್ರಮ, ಎಷ್ಟು ಹೊತ್ತಾಗಬಹುದು ಬರುವುದು" ಎಂದೆ
"ಡ್ಯಾಡಿ, ಇದೇನು ಡ್ಯಾಡಿ. ವಿಚಾರಣೆ ನಡೆಸುತ್ತಿದ್ದಿ  ಪೋಲಿಸ್ ಸ್ಟೇಷನ್ ತರ,  ಸ್ನೇಹಿತರೆಲ್ಲ ಸೇರಿ, ಒಂದು ಪಾರ್ಟಿ ಆಯೋಜಿಸಿದ್ದಾರೆ, ಸಿಟಿಯ ಹೊರಗೆ, ಹೊಸದಾದ ರೀತಿ ಅದನ್ನು 'ರೇವ್" ಪಾರ್ಟಿ ಅನ್ನುತ್ತಾರಂತೆ, ನಾನಂತು ಕುತೂಹಲದಿಂದ ಇದ್ದೀನಿ,ಬರುವುದು ಬೆಳಗ್ಗೆಯಾಗಬಹುದು ಅನ್ನಿಸುತ್ತೆ" ಅಂದಳು. 
  ನಾನು ಹೊರಗೆ ಕೇಳಿದ್ದೆ , ಓದಿದ್ದೆ, ಈ ಹೊಸ ಹುಚ್ಚಿನ ಬಗ್ಗೆ, ಹಣವಂತರ ಮಕ್ಕಳು ಸೇರಿ, ಕುಡಿಯುವುದು ಕುಣಿಯುವುದು ಎಲ್ಲ ನಡೆಸುತ್ತಾರೆ, ಕೆಲವೊಮ್ಮೆ ಮಾದಕ ದ್ರವ್ಯಗಳ ಸೇವನೆ ಸಹ ದಾರಾಳವಿರುತ್ತೆ. ಹೆಣ್ಣು ಗಂಡುಗಳೆಂಬ ಬೇದ ಕಡಿಮೆ ಈ ರೀತಿ ಏನೇನೊ ,  ಆದರೆ ಈಗ ಮಗಳು ಹೊರಟು ನಿಂತಿದ್ದಾಳೆ. ನಾನು ತಡೆದೆ, ಅವಳ ಕೋಪ ಜಾಸ್ತಿಯಾಗಿತ್ತು. ನಾನು ಸಮದಾನ ಪಡಿಸುತ್ತ ಹೇಳಿದೆ 
 
  "ನಾನು ಹೇಳುವುದನ್ನು ಅರ್ಥಮಾಡಿಕೋ, ಇಂತ ಕಡೆ ಬರುವರೆಲ್ಲ ಗಂಡು ಹುಡುಗರು ಜಾಸ್ತಿ ಇರುತ್ತಾರೆ, ಅಲ್ಲೆಲ್ಲ ಕೆಟ್ಟ ವ್ಯವಹಾರಗಳೆಲ್ಲ ಜಾಸ್ತಿ , ಯಾರನ್ನೊ ನಂಬಿ ಅಲ್ಲೆಲ್ಲ ಹೋಗಬಾರದು" 
"ಡ್ಯಾಡಿ ನಾನು ಯಾರೋ ಜೊತೆಗೆ ಹೋಗುತ್ತಿಲ್ಲ, ಅಲ್ಲಿ ಬರುತ್ತಿರುವರೆಲ್ಲ ನನ್ನ ಗೆಳೆಯ ಗೆಳತಿಯರೆ, ಎಲ್ಲ ಗೊತ್ತಿರುವವರೆ" ಎಂದಳು
"ಇರಬಹುದಮ್ಮ ಈಗ ಯಾರನ್ನು ನಂಬುವುದು ಕಷ್ಟ ನೀನು ದಿನ ನ್ಯೂಸ್ ಪೇಪರ್ ಎಲ್ಲ ಓದುತ್ತಿಯಲ್ಲ, ಮೋಸಗಳು ಜಾಸ್ತಿ , ನಮ್ಮ ಎಚ್ಚರದಲ್ಲಿ ನಾವಿರಬೇಕು, ಇಂತ ಅಪರಾತ್ರಿಯಲ್ಲಿ ಹೋದರೆ, ನಮ್ಮ ಗೆಳೆಯರೆ ನಮ್ಮನ್ನು ಮೋಸಮಾಡಬಹುದು " ಎಂದೆ.
 
ಅದಕ್ಕವಳು 
"ಇದೇನು ಡ್ಯಾಡಿ, ಅರ್ಥವಿಲ್ಲದ್ದ ಮಾತನಾಡುತ್ತೀರ, ಯಾವುದೊ ಪೇಪರ್ ಓದಿ ನನ್ನ ಗೆಳೆಯರನ್ನು ನಂಬದೆ ಇರಲೆ, ಭಯಪಡಲೆ, ಈಗ ಅನೇಕ ಸಾರಿ ಪತ್ರಿಕೆಗಳನ್ನು ಓದಿದ್ದೇವೆ, ತಂದೆಯೆ ಮಗಳನ್ನು ಕೆಟ್ಟ ದೃಷ್ಟಿಯಿಂದ ನೋಡಿದ, ಹಾಳುಮಾಡಿದ ಎಂದೆಲ್ಲ, ಹಾಗೆಂದು ನಾನು ನಿಮ್ಮ ಜೊತೆ ಇರುವಾಗ ಹೆದರುತ್ತೇನೆಯೆ?  ಬರುತ್ತೇನೆ ಎಂದು ಮಾತು ಕೊಟ್ಟಾಗಿದೆ, ಹೋಗುವಳೆ, ಬೆಳಗ್ಗೆ ಬಂದು ನಿಮ್ಮ ಉಪದೇಶ ಕೇಳುವೆ" 
ಎಂದು ಕೂಗಾಡುತ್ತ ಹೊರಟು ಹೋದಳು. 
 
 ನನಗೆ ಮೊದಲಿಗೆ ಅವಳ ಮಾತು ಅರ್ಥವಾಗಲೆ ಇಲ್ಲ, ನಿದಾನವಾಗಿ ಅರ್ಥವಾದಂತೆ ನನ್ನ ಮನದಲ್ಲಿ ಎಂತದೊ ಶೂನ್ಯ ಆವರಿಸಿತು. 
 
 ಅವಳು ಹೋದ ಎಷ್ಟೋ ಹೊತ್ತಿನ ತನಕ ನನ್ನ ಕಿವಿಯಲ್ಲಿ ಅವಳ ಮಾತು ಗುಯ್ ಗುಡುತ್ತಿತ್ತು. ಸಂಸಾರದಲ್ಲಿ ಪ್ರೀತಿ  ಕಡಿಮೆಯಾದರು ಹೇಗೊ ನಡೆಯುತ್ತೆ. ಆದರೆ ಸಂಸಾರ ಎಂಬುವುದು ನಿಂತಿರುವುದೆ ಪರಸ್ಪರ ವಿಶ್ವಾಸದ ಮೇಲೆ ಎಂಬುದು ನನ್ನ ಭಾವನೆ. ಹೀಗಿರುವಾಗ ಮಗಳು ಅಂದ ಮಾತಿನಿಂದ ನನ್ನ ಮನ ಮುದುಡಿತ್ತು. ಅವರ ಗೆಳೆಯರನ್ನು ನನ್ನನ್ನು ಸಮ ತಕ್ಕಡಿಯಲ್ಲಿಟ್ಟು ತೂಗಿದ್ದಳು. 
  ಮನದಲ್ಲಿ ಹಿಂದಿನ ನೆನಪು ಬಂದಿತು. ಚಿಕ್ಕ ವಯಸಿನಲ್ಲಿ ಅವಳು ನನ್ನನ್ನು ಸಾಕಷ್ಟು ಹಚ್ಚಿಕೊಂಡಿದ್ದಳು. ನಾನು ಒಂದು ಕ್ಷಣ ಅವಳ ಎದುರಿಗೆ ಇರದಿದ್ದರು ಸಾಕಷ್ಟು ಅತ್ತು ರಂಪ ಮಾಡುತ್ತಿದ್ದಳು. ನನಗು ಅಷ್ಟೆ ಮನಸಿಗೆ ಅಂಟಿಕೊಂಡು ಬೆಳೆದ ಮಗಳು,ದೊಡ್ಡವಾಳಾಗುತ್ತ ತನ್ನದೆ ಆದ ವ್ಯಕ್ತಿತ್ವ ರೂಪಿಸಿಕೊಂಡಂತೆ ನನ್ನಿಂದ ಸ್ವಲ್ಪ ಅಂತರದಲ್ಲಿದಳು. ಆದರೆ ಈಗಿನ ಮಾತು ನನ್ನ ಅದೇಕೊ ನನ್ನ ಹೃದಯವನ್ನೆ ಬೇದಿಸಿತ್ತು. 
  ಏನು ನನ್ನನ್ನು ಅವಳು ಅಪಮಾನಿಸಿದಳೆ ಮಗಳನ್ನು ಕೆಟ್ಟದೃಷ್ಟಿಯಿಂದ ನೋಡುವ ತಂದೆ ಎಂದಳೆ ಹಾಗೇನು ಇಲ್ಲ. ಅವಳೇನು ನನ್ನನ್ನು ಅಪಮಾನಿಸಿರಲಿಲ್ಲ ಆದರೆ ನನ್ನನ್ನು ಹೊರಗಿನವರ ಜೊತೆ ಹೋಲಿಸಿ ಮಾತನಾಡಿದ್ದಳು. 
 
  ಏಕೊ ಎಲ್ಲವು ಶೂನ್ಯ ಅನಿಸಿತು. ಎಲ್ಲ ವ್ಯಾಮೋಹಗಳು ಇರುವುದೆ ನಮ್ಮನ್ನು ಕಾಡಲು ಎನ್ನುವ ಭಾವ ತುಂಬಿತು. ಮಹಡಿಯ ಮೇಲಿನ ಬಾಲ್ಕನಿಯಲ್ಲಿ ಹಾಕಿರುವ ಸೋಫದಲ್ಲಿ ರಾತ್ರಿ ಪೂರ್ತಿ ಕುಳಿತಿದ್ದೆ. ಸುಮಾರು ರಾತ್ರಿ ಹನ್ನೊಂದರ ಹೊತ್ತಿಗೆ ಪತ್ನಿ ಬಂದಳು. ಅವಳು ನನ್ನನ್ನೇನು ಗಮನಿಸಿದಂತೆ ಕಾಣಲಿಲ್ಲ, ಅಥವ ಕಂಡರು ಏಕೊ ಕುಳಿತಿದ್ದಾರೆ ಅಂದುಕೊಂಡಳೇನೊ, ಬಟ್ಟೆ ಬದಲಿಸಿ ರೂಮಿಗೆ ಹೋಗಿ ಮಲಗಿ ಬಿಟ್ಟಳು.   ಅವಳ ಜೊತೆಯು ಮನಸನ್ನು ಹಂಚಿಕೊಳ್ಳಲು ಮನಸಾಗಲಿಲ್ಲ. ರಾತ್ರಿ ಪೂರ್ತಿ ಹೊರಗೆ ಕತ್ತಲಿನಲ್ಲಿ ಅಕಾಶವನ್ನು ಅದರಲ್ಲಿ ನಕ್ಷತ್ರಗಳನ್ನು ನೋಡುತ್ತ ಕುಳಿತ್ತಿದ್ದೆ. 
 
  ನನ್ನ ಮನ ನನ್ನೊಳಗೆ ಕುಸಿಯುತ್ತ ಹೋಗುತ್ತಿತ್ತು.  ಮನೆಯಲ್ಲಿರಲು ಆಸಕ್ತಿ ಬರುತ್ತಿರಲಿಲ್ಲ. ಸ್ನೇಹಿತರ ಜೊತೆ ಕುಳಿತು ಹರಟಲು ಮನಸಾಗುತ್ತಿರಲಿಲ್ಲ. ನನ್ನ ಫ್ಯಾಕ್ಟರಿಗಳಿಗೆ, ಆಡಳಿತ ಕಚೇರಿಗಳಿಗೆ ಬಲವಂತವಾಗಿ ಹೋಗಿ ಅಲ್ಲಿನ ವ್ಯವಹಾರ ಗಮನಿಸುತ್ತಿದ್ದೆ. ಆದರೆ ಏನು ಬೇಕಿನಿಸುತ್ತಿರಲಿಲ್ಲ. ನನಗೆ ಯಾವುದೊ ಬಂದನದಲ್ಲಿರುವಂತೆ ಭಾಸವಾಗುತ್ತಿತ್ತು. ನಾನು ನನ್ನದಲ್ಲದ ಲೋಕದಲ್ಲಿ ಜೀವಿಸುತ್ತಿದ್ದೇನೆ ಇಲ್ಲಿ ನಾನು ಹೊರಗಿನವ ಎನ್ನುವ ಭಾವ ಬಲವಾಗುತ್ತಿತ್ತು. ಬರುತ್ತ ಬರುತ್ತ ಅದೆ ಭಾವ ಬಲವಾಗಿ ನಾನು ಎಲ್ಲಿದ್ದರು ನನ್ನ ಕೆಲಸದಲ್ಲಿ ಮನವನ್ನು ತೊಡಗಿಸಲು ಆಗುತ್ತಿರಲಿಲ್ಲ. 
 
  ನನ್ನ ಮನದಲ್ಲಿ ದೊಡ್ಡದೊಂದು ಆಂದೋಲನ ಹುಟ್ಟುತ್ತಿತ್ತು. 'ನಾನು' ಯಾರು ಎಂಬ ಪ್ರಶ್ನೆ ನನ್ನಲ್ಲಿ ಸದಾ ನನ್ನ ಮನಸನ್ನು ಮರಕ್ಕೆ ಹತ್ತಿದ್ದ ಹುಳುವಿನಂತೆ ಕೊರೆಯುತ್ತಿತ್ತು. ಚಿಕ್ಕವಯಸಿನಲ್ಲಿ ನಾನೇನು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವನಲ್ಲ.   ತಂದೆಯನ್ನು ಕಳೆದುಕೊಂಡು ತಾಯಿಯ ಬಡತನದ ಆರೈಕೆಯಲ್ಲಿ ಬೆಳೆದವನು. ಆದರೆ ಹೇಗಾದರು ಸರಿ ಓದನ್ನು ಮುಂದುವರೆಸಲೆ ಬೇಕೆಂಬ ಹಟದಲ್ಲಿ ಅವರಿವರ ಕರುಣೆಯ ಆಶ್ರಯದಲ್ಲಿ ಓದು ಮುಗಿಸಿದವನು. ಆಗ ಎಲ್ಲರ ಬಾಯಿಯಲ್ಲಿ ವಿಧವಿಧವಾದ ಕರೆಗೆ ಪಾತ್ರನಾದವನು. "ಲೋ ವೆಂಕಿ" , 'ಏ ವೆಂಕಟ" , "ವೆಂಕ" , "ವೆಂಕಟೇಶ" , "ಮಧ್ಯಾನದ ಊಟದ ಹುಡುಗ" , "ಮೆಣಸಿನ ಪುಡಿ ತಾಯಮ್ಮನ ಮಗ" ಹೀಗೆ ಏನೆ ಕರೆದರು, ನಾನು  "ಹ್ಹೂ ಇಗೊ ಬಂದೆ" ಅನ್ನಬೇಕಿತ್ತು.  ಆದರೆ ಈಗ  'ನಾನು' ಆ ಹುಡುಗನಲ್ಲ. 
 
 ಹೇಗೊ ಓದು ಮುಗಿಸಿ ಅಲ್ಲಿ ಇಲ್ಲಿ ಸ್ವಲ್ಪ ಕಾಲ ಅವರಿವರಲ್ಲಿ ಕೆಲಸ ಮಾಡಿ. ನಂತರ ಇಬ್ಬರು ಗೆಳೆಯರು ಶಂಕರ ಹಾಗು ಗೋಪಾಲನ ಜೊತೆ ಸೇರಿ ಸಣ್ಣದಾಗಿ ಸೆಕೆಂಡ್ ಗ್ರೇಡ್ ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಸುವ ಫ್ಯಾಕ್ಟರಿ ಪ್ರಾರಂಬಿಸಿ ಅದರಲ್ಲೆ ಮುಂದುವರೆದು ಬೇರೆ ಬೇರೆ ರೀತಿಯ ವ್ಯವಹಾರದಲ್ಲಿ ತೊಡಗಿಸಿಕೊಂಡು ತನ್ನತನವನ್ನು ಸಾದಿಸಿದಾಗ ಅಮ್ಮ ತೃಪ್ತಿಯಿಂದ ಅಂದರು 'ನಮ್ಮ  ವೆಂಕಟೇಶ ಜೀವನದಲ್ಲಿ ಗೆದ್ದ'.  ಈಗ 'ನಾನು' ಆ ವೆಂಕಟೇಶ  ಅಲ್ಲ.
 
  ನನ್ನ ಸುಧಾರಿಸಿದ ಜೀವನದ ಸ್ಥಿಥಿ ಹಲವರ ಕಣ್ಣಿಗೆ ಕಾಣಿಸುವಂತದಾಗ ನನ್ನನ್ನು ಹುಡುಕಿಕೊಂಡು ಬಂದು ಹುಡುಗಿಯನ್ನು ಕೊಟ್ಟವರು ನಮ್ಮ ಮಾವ  ಅದೇ ವ್ಯವಹಾರ ಕ್ಷೇತ್ರದಲ್ಲಿದ್ದ ಶಿವರಾಮಯ್ಯನವರು. ಮದುವೆಯಾದ ಹೊಸದರಲ್ಲಿ ಹೊಸತನವು ಸೇರಿ ತನ್ನ ಪ್ರೀತಿಯ ಮಳೆಯನ್ನು ಸುರಿಸಿ ನನ್ನ ವ್ಯವಹಾರ ಕ್ಷೇತ್ರದಲ್ಲಿ  ಸಫಲತೆಯ ತುದಿಯನ್ನು ತಲುಪುವಂತೆ ಪ್ರೋತ್ಸಾಹ ನೀಡಿ ನನ್ನ ಒಲವನ್ನು ಗಳಿಸಿದ ಪತ್ನಿಗೆ ಈಗ ನಾನು ಪ್ರೀತಿಯ ಪತಿಯಾಗು ಉಳಿದಿಲ್ಲ. 'ನಾನು' ಆ ಪ್ರೀತಿಯ ಪತಿ ವೆಂಕಟೇಶನು ಅಲ್ಲ. 
 
 ಚಿಕ್ಕವಯಸಿನಲ್ಲಿ ಒಂದು ಕ್ಷಣ ನಾನು ಹೊರಗೆ ಹೋದರು 'ಓ' ಎಂದು ಅಳುತಿದ್ದಳು ನನ್ನ ಮಗಳು. ಅವಳನ್ನು ಹೆಗಲಮೇಲೆ ಹೊತ್ತೆ ಬೆಳೆಸಿದ್ದೆ. ಅವಳಿಗೆ ಪ್ರೀತಿಯ ತಂದೆಯಾಗಿದ್ದೆ. ಈಗ ಅವಳಿಗೆ 'ನಾನು' ಆ ಅಪ್ಪನು ಅಲ್ಲ. 
 
  ನನ್ನ ವ್ಯವಹಾರ ಬೆಳೆದಂತೆ ದಿನದಿನಕ್ಕು ನನ್ನ ಪ್ಯಾಕ್ಟರಿಗಳಲ್ಲಿ , ಆಫೀಸ್ ಗಳಲ್ಲಿ ಕೆಲಸಮಾಡುವ ಕೆಲಸಗಾರರ ಸಂಖ್ಯೆ ಹೆಚ್ಚುತ್ತಲೆ ಹೋಯಿತು. ಸಮಾಜದಲ್ಲಿ ನನ್ನ ಪ್ರತಿಷ್ಠೆ ದಿನದಿನಕ್ಕು ಹೆಚ್ಚುತ್ತಲೆ ಹೋಯಿತು.  ಈಗ ನನ್ನ ಅಧೀನದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ನಿಖರವಾಗಿ ನನಗೆ ತಿಳಿದಿಲ್ಲ. ನಾನು ಎದುರಿಗೆ ಬರುವಾಗ ಅವರೆಲ್ಲ ಎದ್ದು ನಿಂತು ಗೌರವ ತೋರಿಸುತ್ತ ವಂದಿಸುತ್ತಿದ್ದರು.  ಅವರು ದಿನಾ ವಂದಿಸುವ ಅವರ ಅನ್ನದಾತ ಅಂದರೆ ಅವರೆಲ್ಲರ ಬಾಸ್  ಸರ್. ವೆಂಕಟೇಶ್ ರವರು ಏಕೊ 'ನಾನು' ಎಂದು ನನಗೆ ಎಂದು ಅನ್ನಿಸಲೆ ಇಲ್ಲ. 
 
ಮತ್ತೆ 'ನಾನು' ಈಗ ಯಾರು ? 
 
ಏಕೊ ನನಗೆ ನನ್ನ ಈ ವ್ಯಕ್ತಿತ್ವದ ಹಿಂದೆ ಅಡಗಿರುವುದು ಅದಕ್ಕೆ ತಕ್ಕಂತೆ ನಟಿಸುವುದು ಎಲ್ಲವು ಹಿಂಸೆಯಾಗ ತೊಡಗಿತು. ನನಗೆ ಇದರಿಂದ ಬಿಡುಗಡೆ ಬೇಕಿತ್ತು. ನನಗೆ ಯಾವ ಸ್ಥಾನವು ಬೇಡ ನನಗೆ ಯಾವ ಹೆಸರು ಬೇಡ ನನಗೆ ಯಾವ ಬಂಧನವು ಬೇಡ. ಈ ಎಲ್ಲದರಿಂದ ನಾನು ಹೊರನಡೆಯಬೇಕು ಎಂಬ ಹಂಬಲ ಮನಸನ್ನೆಲ್ಲ ತುಂಬಿ ಗಟ್ಟಿಯಾಗುತ್ತ ಹೋಯಿತು. 
 
  ಒಂದು ಸಂಜೆ, ಅಂದು ಸ್ವಲ್ಪ ಬೇಗ ಮನೆಗೆ ಹೊರಟೆ, ಆದಿನ ಏಕೊ ಕಾರಿನ ಡ್ರೈವರ್ ಬಂದಿರಲಿಲ್ಲ. ಹಾಗಾಗಿ ನಾನೆ ಡ್ರೈವ್ ಮಾಡುತ್ತಿದ್ದೆ. ಮನದಲ್ಲಿ ಎಂತದೊ ವ್ಯಾಕುಲತೆ. ಟ್ರಾಫಿಕ್ ರಸ್ತೆಗಳನೆಲ್ಲ ದಾಟಿ ಮನೆಯ ಹತ್ತಿರ ಬರುತ್ತಿರುವಂತೆ ಸ್ವಲ್ಪ ಕಡಿಮೆ ಜನ ಸಂಚಾರದ ರಸ್ತೆಗಳು.  ಮನಸ್ಸು ಎಂತದೊ ಗಾಡ ಯೋಚನೆಯಲ್ಲಿ ತುಂಬಿತ್ತು.
 
 ಮನಸ್ಸು ಇದ್ದಕ್ಕಿದಂತೆ ಗಟ್ಟಿಯಾಯ್ತು. ನಿರ್ದಾರವಾಗಿ ಹೋಯ್ತು. ನನಗಾವ ಸಂಭಂದವು ಬೇಡ. ಯಾವ ವ್ಯವಹಾರ ವೈಭವಗಳು ಅಧಿಕಾರ ಅಂತಸ್ತುಗಳು ಬೇಡ. ರಸ್ತೆಯ ಪಕ್ಕ  ಕಾರನ್ನು ನಿಲ್ಲಿಸಿದೆ. ಎಲ್ಲಿ ಹೋಗುವದೆಂಬ ನಿರ್ದಾರವೇನು ಇರಲಿಲ್ಲ. ಎಲ್ಲಿಯಾದರು ಉತ್ತರಭಾರತ ಹಿಮಾಲಯದ ಕಡೆಹೋಗಬೇಕೆಂಬ ಅಸ್ವಷ್ಟ ನಿರ್ದಾರವೊಂದಿತ್ತು.  ಕಾರನ್ನು ನಿಲ್ಲಿಸಿದವನು ನನ್ನಲ್ಲಿದ್ದ ಹಣ. ಕಾರ್ಡುಗಳು ಡ್ರೈವಿಂಗ್ ಲೈಸನ್ಸ್ ,ಕೈಯಲ್ಲಿದ್ದ ರಿಷ್ಟ್ ವಾಚ್ ಉಂಗುರ ಕತ್ತಿನಲ್ಲಿದ್ದ ಚಿನ್ನದ ಸರ  ಮತ್ತೆ ಜೇಬಿನಲ್ಲಿ ಇರುವದನ್ನೆಲ್ಲ ಕಾರಿನ ಡ್ರೈವಿಂಗ್ ಸೀಟಿನ ಮೇಲಿಟ್ಟು ಕಾರಿನ ಬಾಗಿಲು ಹಾಕಿದೆ. ಹೋಗುವಾಗ ಅನ್ನಿಸಿತು ದಾರಿ ಖರ್ಚಿಗೆ ಸ್ವಲ್ಪವಾದರು ಹಣಬೇಕಿತ್ತೇನೊ ಅಂತ ಆ ಭಾವವನ್ನು ಕೊಡವಿದೆ. ಸದಾ ಬೆನ್ನುಹತ್ತಿರುವ ರಕ್ತದ ಒತ್ತಡ ಹಾಗು ಸಕ್ಕರೆ ಕಾಯಿಲೆಗೆ ಬೇಕಾದ ಮಾತ್ರೆಗಳಿಗೆ ಹಣಕ್ಕೆ ಏನು ಮಾಡುವುದು, ಒಂದು ಹೊತ್ತು ಮಾತ್ರೆ ತೆಗೆದುಕೊಳ್ಳದಿದ್ದರು ಕಾಯಿಲೆ ಜಾಸ್ತಿಯಾಗುತ್ತೆ  ಎಂಬ ಭಯ ಮನಸಿನಲ್ಲಿ ಒಮ್ಮೆ ಬಂದಿತು. ಎಲ್ಲವನ್ನು ಬಿಟ್ಟುಹೋಗುತ್ತಿರುವಾಗ ಈ ಕಾಯಿಲೆಯ ಚಿಂತೆ ಏಕೆ ಅದನ್ನು ಇಲ್ಲಿಯೆ ಬಿಟ್ಟು ಹೋಗುವುದು ಸರಿ ಎಂಬ ನಿರ್ದಾರ ಮನಸಿಗೆ ಬಂದಿತು. ಎಲ್ಲ ಚಿಂತೆಯನ್ನು ಬಿಡುತ್ತಿರುವಂತೆ ಮನಸ್ಸು ಹಗುರವಾಯಿತು.
 
 ಅಲ್ಲಿಂದ ಹೊರಟವನು ಯಾವ ದಿಕ್ಕಿಗೆ ನಡೆದೆನೊ ಎಷ್ಟು ಹೊತ್ತೊ ತಿಳಿಯಲಿಲ್ಲ. ಯಾವುದೊ ಮುಖ್ಯ ರಸ್ತೆಯಿರಬಹುದು ವಾಹನಗಳು ಓಡಾಡುತ್ತಿದ್ದವು. ಹಾಗೆ ತೀರ ಕತ್ತಲೆಯಾದಂತೆ ರಸ್ತೆಯಪಕ್ಕದಲ್ಲಿದ್ದ ಮರವೊಂದರ ಕೆಳಗೆ ಮಲಗಿದೆ. ಕಣ್ಣು ಮುಚ್ಚಿದೊಂದೆ ನನೆಪು ನಿದ್ದೆ ನನ್ನನ್ನು ಆವರಿಸಿತು. ಯಾವ ಕಾಲವಾಗಿತ್ತೊ ಅಂತಹ ನಿದ್ದೆ ಮಾಡಿ. 
 
 ನಿದ್ದೆಯಿಂದ ಎಚ್ಚೆತ್ತಾಗ ಸೂರ್ಯ ಹುಟ್ಟಿ ಬಹಳ ಕಾಲವಾಗಿತ್ತು. ಎದ್ದವನು ಮರದ ಕೆಳಗೆ ಹಾಗೆ ಸ್ವಲ್ಪ ಕಾಲ ಕುಳಿತಿದ್ದೆ. ರಸ್ತೆಯಲ್ಲಿ ಸಾಗುವ ವಾಹನಗಳಲ್ಲಿ ಕೆಲವರು ನನ್ನತ್ತಲೆ ನೋಡುತ್ತ ಸಾಗುತ್ತಿದ್ದರು.   ಎದ್ದವನ್ನು ರಸ್ತೆಪಕ್ಕದಲ್ಲಿಯೆ ದೇಹ ಬಾರ ಕಳೆದು ಹತ್ತಿರದಲ್ಲಿದ್ದ ಕೆರೆಯಲ್ಲಿ ಮುಖ ತೊಳೆದು ಮತ್ತೆ ಮುಖ್ಯರಸ್ತೆಗೆ ಬಂದು ನಡೆಯಲು ಪ್ರಾರಂಬಿಸಿದೆ. ಈಗ ಗಮನಿಸಿದೆ ನಾನು ಬೆಂಗಳೂರಿನಿಂದ ಕೋಲಾರದತ್ತ ಹೋಗುತ್ತಿದ್ದೆ. 
 
 ಸುಸ್ತಾಗುವವರೆಗು ಸುಮ್ಮನೆ ನಡೆಯುತ್ತಿದ್ದೆ ಯಾವ ಯಾವ ಗ್ರಾಮಗಳನ್ನು ಊರುಗಳನ್ನು ದಾಟಿದೆನೊ ತಿಳಿಯಲಿಲ್ಲ. ದೇವಾಲಯವೊಂದು ಎದುರಿಗೆ ಕಾಣಿಸಿತು. ಅದರ ಹತ್ತಿರ ಹೋಗಿ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತೆ. ಸ್ವಲ್ಪ ಸಮಯ ಕಳೆಯಿತು. 
ನಾನು ಅಹಾರ ತೆಗೆದುಕೊಂಡು ಇಪ್ಪತ್ತನಾಲಕ್ಕು ಘಂಟೆ ದಾಟಿತ್ತು. ದೇಹಕ್ಕೆ ಸುಸ್ತು ಅನ್ನಿಸುತ್ತಿತ್ತು. ಮನ ಮಾತ್ರ ಪ್ರಫುಲ್ಲವಾಗಿತ್ತು.
  ಒಳಗಿನಿಂದ ಬಂದ ದಂಪತಿಗಳು ದೇವರಿಗೆ ನೈವೈದ್ಯಮಾಡಿಸಿದ ಪ್ರಸಾದವನ್ನು ಅಲ್ಲಿದ್ದ ಕೆಲವರಿಗೆ ಹಂಚಿದರು. ನಾನು ಸುಮ್ಮನೆ ಕುಳಿತಿದ್ದೆ ಅವರು ನಾನು ಕುಳಿತಿರುವಲ್ಲಿಗೆ ಬಂದು ಕೈಗೆ ಎಲೆಯನ್ನು ಕೊಟ್ಟು ಎಲೆಯ ತುಂಬಾ ಪುಳಿಯೋಗರೆ ಮೊಸರನ್ನ ತುಂಬಿ ಹೋದರು. ನಾನು ಅದನ್ನು ತೃಪ್ತಿಯಿಂದ ತಿಂದವನು ಹತ್ತಿರದಲ್ಲಿದ್ದ ನಲ್ಲಿಯ  ನೀರನ್ನು ಕುಡಿದು ನಂತರ ಮಲಗಿಬಿಟ್ಟೆ. ಎಚ್ಚರವಾದಾಗ ರಾತ್ರಿ.  ಅಂದು ಅಲ್ಲಿಯೆ ಇರುವದೆಂದು ನಿರ್ದರಿಸಿದೆ. 
   ಬೆಳಗ್ಗೆ ಎದ್ದಾಗ ನಿನ್ನೆಯದೆಲ್ಲ ನೆನಪಿಗೆ ಬಂದಿತು. ನಾನು ಹೊರಟಾಗ   ರುಪಾಯಿ ಸಹ ನನ್ನ ಜೊತೆ ತಂದಿರಲಿಲ್ಲ. ಆದರೂ ಒಂದು ದಿನ ಕಳೆದಿದ್ದೆ. ನನಗೆ ಅನ್ನಿಸಿತು ಮನುಷ್ಯನಿಗೆ ಬದುಕಲು ಬೇಕಾದ ಅನ್ನ ಪಡೆಯಲು ಹಣದ ಅಗತ್ಯವೆ ಇಲ್ಲ. ನಾನು ಕುಳಿತಿದ್ದು ಹನುಮಂತ ದೇವಸ್ಥಾನದ ಪ್ರಾಂಗಣದಲ್ಲಿ. ಅಂದು ನಿರ್ಧರಿಸಿದೆ ಜೀವನದಲ್ಲಿ ಎಂತಹುದೆ ಸಂದರ್ಭವಿದ್ದರು ನಾನು ಹಣ ಮುಟ್ಟುವದಿಲ್ಲ ಏನಾಗುತ್ತದೆ ನೋಡೋಣ ಎಂದು. ಅಂದಿನಿಂದ ಇಂದಿನವರೆಗು ನಾನು ಹಣದ ತಂಟೆಗೆ ಹೋಗಲಿಲ್ಲ.
 
  ದಿನಕ್ಕೆ ಒಂದು ಊಟದಲ್ಲಿ ಬದುಕಬಹುದೆಂದು  ಅರಿವಾಗಿತ್ತು. ಆ ದಿನದಿಂದ ದಿನಕ್ಕೆ ಒಂದು ಹೊತ್ತು ಮಾತ್ರ  ತಿನ್ನುತ್ತಿದ್ದೇನೆ. ಮತ್ತು ವಿಚಿತ್ರವೆಂದರೆ ನಾನು ಇಲ್ಲಿಯವರೆಗು ಯಾವ ದಿನವು ಉಪವಾಸವಿಲ್ಲ. ಮಧ್ಯಾನ ಊಟದ ಸಮಯಕ್ಕೆ ಯಾರೊ ಬಂದು ನನಗೆ ಊಟ ಕೊಡುತ್ತಾರೆ.
 ಇಂದು ನನಗೆ ಅನ್ನವಿತ್ತವರು ನಾಳೆ ಸಿಗುವದಿಲ್ಲ, ನಾಳೆ ನನಗೆ ಯಾರು ಅನ್ನ ಹಾಕುವರೆಂಬುದು ನನಗೆ ಇಂದು ತಿಳಿದಿರುವದಿಲ್ಲ.
    ಅಲ್ಲಿಂದ ಹೊರಟು ತಿರುಪತಿ ತಲುಪಿದೆ. ಅಲ್ಲಿ ಸ್ವಲ್ಪ ಕಾಲವಿದ್ದು. ಉತ್ತರ ದೇಶಗಳತ್ತ ಚಲಿಸುತ್ತ ಹೋದೆ. ನನಗೆ ಮೊದಲೆ ಕನ್ನಡ ಇಂಗ್ಲೀಷ್ ಮತ್ತು ಹಿಂದಿ ಚೆನ್ನಾಗಿಯೆ ತಿಳಿದಿತ್ತು. ಹಾಗಾಗಿ ನನಗೆ ಯಾರೊಡನೆ ಮಾತನಾಡಲು ತೊಂದರೆ ಇರಲಿಲ್ಲ. ಆದರೆ ಬಹಳ ದಿನಗಳ ಕಾಲ ನನಗೆ ಯಾರ ಜೊತೆಯು ಮಾತನಾಡುವ ಅಗತ್ಯವೆ ಬರಲಿಲ್ಲ. ಅಯಾ ರಾಜ್ಯ ಪ್ರಾಂತ್ಯಗಳನ್ನು ದಾಟುವಷ್ಟರಲ್ಲಿ ಹೇಗೊ ಅಲ್ಲಿನ ಭಾಷೆ ನನಗೆ ಮಾತನಾಡುವಷ್ಟು ತಕ್ಕಮಟ್ಟಿಗೆ ಬಂದುಬಿಡುತ್ತಿತ್ತು.  
 
 ಉತ್ತರದ ವಾರಣಸಿಯನ್ನು ತಲುಪಿದೆ. ಅಲ್ಲಿನ ವಾತವರಣ ನನ್ನನ್ನು ಅಲ್ಲಿಯೆ ಬಹಳ ಕಾಲ ಇರಲು ಪ್ರೇರಿಪಿಸಿತು. ಪವಿತ್ರ ಗಂಗೆ ಹರಿಯುವ, ಪರಶಿವನು ಇರುವ ಸ್ಥಳ. ಗಂಗೆಯ ದಡದಲ್ಲಿ  ದಿನವು ಸಾವಿರಾರು ಭಕ್ತರು ಸಾಧು ಸಂತರು ಇರುತ್ತಿದ್ದರು. ನಾನು ಅವರೊಡನೆ ಒಂದಾಗಿ ಹೋದೆ. ಹೀಗೆ ಅವರೆ ಯಾರೊ ಕೊಟ್ಟ ಕಾವಿಯನ್ನು ಧರಿಸಲು ಪ್ರಾರಂಭಿಸಿದೆ. ಹಲವು ರೀತಿಯ ಸಾಧು ಸಂತರ ಪರಿಚಯವಾಯಿತು. ಆದರೆ ನಾನು ಮಾನಸಿಕವಾಗಿ ಒಬ್ಬನೆ ಇದ್ದೆ. ನನಗೆ ಏಕೊ ಯಾರ ಸಂಗವು ಬೇಡವಾಗಿತ್ತು. 
 
    ಕಾಶಿಯಲ್ಲಿ ಎಷ್ಟು ದಿನವಿದ್ದೆನೊ ತಿಳಿಯದು,  ಅಲ್ಲಿಂದ ಹೊರಟು ನಡಿಗೆಯಲ್ಲಿಯೆ ಬದರಿ ಕೇದಾರಗಳತ್ತ ಪಯಣಿಸಿ ಹಿಮಾಲಯದ ತಪ್ಪಲನ್ನು ಪ್ರವೇಶಿಸಿದೆ. ಅಲ್ಲಿಯ ಶುಭ್ರ ಪ್ರಕೃತಿಯ ಮಡಿಲಲ್ಲಿ ನಿರಾಂತಕವಾಗಿ ದಿನಗಳನ್ನು ಕಳೆಯುತ್ತ ಹೋದೆ. ಅಲ್ಲಿ ಚಳಿಗಾಲ ಪ್ರಾರಂಬವಾದರೆ ಚಳಿ ತಡೆಯದೆ ಅಲ್ಲಿನ ಸಾಧುಗಳೆಲ್ಲ ಕೆಳಗೆ ಹೊರಟು ಬೇರಡೆಗೆ  ಹೊರಟು ಹೋಗುತ್ತಿದ್ದರು. ಅಲ್ಲಿ ಕೆಲವೆ ಕೆಲವು ಜನ ಉಳಿಯುತ್ತಿದ್ದರು. ನಾನು ಕೆಲವಾರು ವರ್ಷ ಅಲ್ಲಿಯೆ ಇದ್ದೆ. ಚಳಿಯಲ್ಲಿ ಅಲ್ಲಿ ಆಲೂಗೆಡ್ಡೆಯ ಹೊರತು ಬೇರಾವ ಅಹಾರವು ಇರುತ್ತಿರಲಿಲ್ಲ. ದಿನಕ್ಕೊಮ್ಮೆ ಅದೆ ನಮ್ಮ ಅಹಾರವಾಗುತ್ತಿತ್ತು. ಚಳಿಗಾಲದಲ್ಲಿನ ಅಲ್ಲಿನ ನೀರವ ಮೌನ. ಸದಾ ಪ್ರಕೃತಿಯೊಡನೆ ಇರುತ್ತಿದ್ದ ನನ್ನ ಮನಸ್ಸು ಗಟ್ಟಿಯಾಗುತ್ತ ಹೋಯಿತು. ನನ್ನ ಪ್ರವೃತ್ತಿ ಬದಲಾಗುತ್ತ ಸಾಗಿತು. ದೇಹ ಮನಸ್ಸುಗಳು ಗಟ್ಟಿಯಾದವು. ನಾನು ಎಂಬ ಭಾವವೆ ಸತ್ತು ಹೋಯಿತು. 
 
ನಂತರ ಭಾರತವೆಂಬ ದೇಶವನ್ನು ಸುತ್ತುತ್ತ ಹೋದೆ. ದೇಶದ ಉದ್ದಗಲಕ್ಕು ಸಂಚರಿಸಿದೆ. ನನಗೆ ಅನ್ನಿಸುತ್ತೆ ಈ ಮಹಾನ್ ದೇಶದ ಆತ್ಮವಿರುವುದೆ ಅದರೆ ಅತಿಥಿ ಸತ್ಕಾರದ ಗುಣದಲ್ಲಿ, ಹಸಿದವನನ್ನು ಕಂಡರೆ ತುತ್ತು ಅನ್ನ ನೀಡಬೇಕೆನ್ನುವ ಭಾರತೀಯನ ಅಂತರ್ಗತ ಸ್ವಭಾವದಲ್ಲಿ. ಈ ಸ್ವಭಾವ ಪ್ರಪಂಚದ ಬೇರಾವ ದೇಶದಲ್ಲು ಇಲ್ಲವೇನೊ ಅನಿಸುತ್ತೆ. 
ಮನೆ ಬಿಟ್ಟ ನಂತರ ನಾನು ಕೇವಲ ದಿನಕ್ಕೆ ಒಂದು ಹೊತ್ತಿನ ಊಟ ಮಾತ್ರ ಮಾಡುತ್ತಿದ್ದೇನೆ. ನಾನು ಇಲ್ಲಿಯವರೆಗು ಯಾವ ದಿನವು ಉಪವಾಸವಿಲ್ಲ. ಮಧ್ಯಾನ ಊಟದ ಸಮಯಕ್ಕೆ ಯಾರೊ ಬಂದು ನನಗೆ ಊಟ ಕೊಡುತ್ತಾರೆ. 
"ಕಲ್ಲಿನ ಸಂದಿಯಲ್ಲಿ ಹುಟ್ಟಿದ ಕಪ್ಪೆಗೆ ಅಲ್ಲಿಗೆ ಅಹಾರವಿತ್ತು ಪೊರೆಯವನು ಯಾರೊ" ಎಂಬಂತ ದಾಸರ ನುಡಿಗಳು ನಮ್ಮ ಅನುಭವಕ್ಕೆ ಬರುವುದು ಕಷ್ಟಸಾದ್ಯ. ಆದರೆ ಜೀವನ ನನಗೆ ಆ ಅನುಭವವನ್ನು ಕಲಿಸಿತು, ಕೆಲವೊಮ್ಮೆ ಹೀಗೆ ನಡೆಯುತ್ತ ಕತ್ತಲಾದರೆ, ಅದು ಕಾಡೊ ಊರೊ ಚಿಂತಿಸದೆ ಮಲಗಿಬಿಡುತ್ತಿದ್ದೆ. ಒಮ್ಮೆ ಜನವಾಸವೆ ಇರದ ಸ್ಥಳದಲ್ಲಿ ಮರವೊಂದರ ಕೆಳಗೆ ಮಲಗುವಾಗ ಅಂದುಕೊಂಡೆ, ಇಂದು ನನಗೆ ಅನ್ನದ ಋಣವಿಲ್ಲ, ಉಪವಾಸವೆ ಸರಿ ಎಂದು. ನಿದ್ದೆ ಬರುವ ಮೊದಲೆ ಆ ದಾರಿಯಲ್ಲಿ ಯಾವುದೊ ಪಯಣಿಗರ ಗುಂಪೊಂದು ನಡೆಯುತ್ತ ಬಂದು ನಾನಿದ್ದ ಮರದ ಕೆಳಗೆ ಕುಳಿತು ತಮ್ಮ ಊಟದ ಬುತ್ತಿ ಬಿಚ್ಚಿದರು. ನನ್ನನ್ನು ಕಂಡು ನನಗು ತಮ್ಮ ಊಟವನ್ನೆ ಕೊಟ್ಟು ಉಪಚರಿಸಿದರು. ಇಂತ ಅನುಭವಗಳು ಅದೆಷ್ಟೊ"
 -----------------------------------
ಆತ ತಮ್ಮ ಮಾತು ನಡುವೆ ನಿಲ್ಲಿಸಿದರು. ಆತನ ದೃಷ್ಟಿ ಎಲ್ಲೊ ದೂರದಲ್ಲಿ ನೆಟ್ಟಿತ್ತು. 
ನನಗೆ ಏಕೊ ಮನಸಿಗೆ ಏನೆಲ್ಲ ಅನಿಸಿತು. ಪಾಪ ತನ್ನ ಹೆಂಡತಿ ಮಕ್ಕಳಿಂದ ನೋವು ತಿಂದು, ತನ್ನೆಲ್ಲವನ್ನು ತೊರೆದು, ದೇಶ ದೇಶ ಸುತ್ತುತ್ತ ಸನ್ಯಾಸಿಯ ಜೀವನವನ್ನು ನಡೆಸುತ್ತಿರುವ  ವೆಂಕಟೇಶ್ ಮೇಲೆ ಮರುಕ ಹುಟ್ಟಿತ್ತು. 
ನಾನು ಅವರನ್ನು ಕೇಳಿದೆ. 
"ನೀವು ನಿಮ್ಮ ಪತ್ನಿ ಹಾಗು ಮಗಳು ಇಬ್ಬರನ್ನು ಪುನಃ ನೋಡಲೆ ಇಲ್ಲವೆ?" 
ನಮ್ಮಿಬ್ಬರ ನಡುವೆ ಒಂದು ದೀರ್ಘಮೌನ. ಅವರು ಸ್ವಲ್ಪ ಮೆತ್ತನೆಯ ದ್ವನಿಯಲ್ಲಿ ಅಂದರು
"ಮಗು"  
ನಂತರ ಅವರು ನುಡಿದರು.
"ನೋಡುವ ಅವಶ್ಯಕತೆ ಇರಲಿಲ್ಲ. ಆದರು ನನಗೆ ಮನದ ಮೂಲೆಯಲ್ಲಿ ಎಲ್ಲೊ ಒಂದು ಭಾವವಿತ್ತು. ನಾನು ಅವರಿಬ್ಬರನ್ನು ಬಿಟ್ಟುಹೊರಟ್ಟಿದ್ದು, "ನಡು ನೀರಿನಲ್ಲಿ ಕೈಬಿಟ್ಟಂತೆ" ಆಯಿತ ಅವರಿಬ್ಬರ ಜೀವನ ನನ್ನಿಂದ ಏರುಪೇರಾಯಿತ. ಹಾಗಾಗಿ ಒಮ್ಮೆ ಇಲ್ಲಿಯ ಪರಿಸ್ಥಿಥಿ ತಿಳಿಯಲು ನಾನು ಈ ಬಾರಿ ದಕ್ಷಿಣಕ್ಕೆ ಬಂದೆ. ನಾನು ಅಂದುಕೊಂಡಂತೆ ಏನು ಇರಲಿಲ್ಲ. ಮಗಳಿಗೆ ಮದುವೆಯಾಗಿತ್ತು. ಹೆಂಡತಿ ನಾನು ಬಿಟ್ಟು ಹೋಗಿದ್ದ ಅಪಾರ ಐಶ್ವರ್ಯದಲ್ಲಿ ಮುಳುಗಿ ಸುಖವಾಗಿಯೆ ಇದ್ದಳು. ಅದಕ್ಕಿಂತ ಚಮತ್ಕಾರವೆಂದರೆ, ನಾನು ಬಿಟ್ಟುಹೋದಾಗಿನ  ನನ್ನ ಮನದ, ಭಾವದ  ಪರಿಸ್ಥಿಥಿಯ ಬಗ್ಗೆ ಅವರಾರಿಗು ಕಲ್ಪನೆಯೆ ಇರಲಿಲ್ಲ. ನಾನು ಕಾಣೆಯಾದ ಬಗ್ಗೆ ಅವರಿಗೆ ಅದರ ಮೂಲ ಕಾರಣ ಹುಡುಕಿಹೋಗುವಷ್ಟು ಕುತೂಹಲವೆ ಇರಲಿಲ್ಲ. ಯಾರಿಗು ನನ್ನ ಕಣ್ಮರೆಯ ಸ್ವಷ್ಟ ಚಿತ್ರವೆ ಇರಲಿಲ್ಲ. ಪೋಲಿಸರ ಹೇಳಿಕೆ ಎಂದರೆ, ಯಾರೊ ವೃತ್ತಿಯಲ್ಲಿನ ಶತ್ರುಗಳು ನನ್ನನ್ನು ಕಿಡ್ನಾಪ್ ಮಾಡಿರಬಹುದೆಂಬ ಗುಮಾನೆ, ಅದನ್ನು ನಂಬಿದ್ದರು. ನಂತರ ನಾನು ಎಂದಿಗೂ ಹಿಂದೆ ಬರಲಾರನೆಂದು ಅವರಿಗೆ ಅನ್ನಿಸಿದೊಡನೆ, ಅವರು ತಮ್ಮ ಜೀವನವನ್ನು ಕಂಡುಕೊಂಡರು. ಮತ್ತು ಪ್ರಸ್ತುತ ನೆಮ್ಮದಿಯಾಗಿಯೆ ಇದ್ದಾರೆ. ಇದನ್ನು ತಿಳಿದನಂತರ ನನ್ನೊಳಗೆ ಇದ್ದ ಸಣ್ಣದೊಂದು ಅಪರಾಧಿ ಭಾವವು ಇಲ್ಲವಾಯಿತು." 
 
 ಆ ಸನ್ಯಾಸಿ ತಮ್ಮ ಮಾತು ನಿಲ್ಲಿಸಿದರು. 
 
  ನನಗೆ ಪಿಚ್ ಅನ್ನಿಸಿತು . ಇಷ್ಟೇನ ಮನುಷ್ಯ ಮನುಷ್ಯನ ನಡುವಿನ ಸಂಭಂದ. ನಮ್ಮ ನಡುವಿನ ನಮ್ಮ ಅತ್ಮೀಯ ವ್ಯಕ್ತಿಯೊಬ್ಬ ಹೀಗೆ ಮಾಯವಾದರೆ. ಹೆಚ್ಚುಕಡಿಮೆ ಅದು ಸಾವಿಗೆ ಸಮಾನವ? . ನಂತರ ಅವನನ್ನು ಎಲ್ಲರು ಮರೆತು ಬಿಡುವರ? ಅನ್ನಿಸಿತು. ನನಗೆ ಮತ್ತೊಂದು ಭಾವ ಬಂದಿತು. ಈಗ ನಾನೇನಾದರು ಇರುವಂತೆಯೆ ಹೆಂಡತಿ ಮಕ್ಕಳನ್ನು ಬಿಟ್ಟು ಎಲ್ಲಿಯಾದರು ಹೊರಟುಹೋದರೆ, ಸ್ವಲ್ಪ ಕಾಲದಲ್ಲಿಯೆ ಅವರು ನನ್ನನ್ನು ಮರೆತುಬಿಡುವರಾ?" 
ಏನೆಲ್ಲ ಭಾವಗಳು ಕಾಡಿದವು.
 
ಮತ್ತೆ ಅವರನ್ನು ಕೇಳಿದೆ
 
"ತಪ್ಪು ತಿಳಿಯಬೇಡಿ. ಚಿಕ್ಕ ವಯಸಿನಲ್ಲಿ ನಿಮ್ಮ ಮಗಳು ದುಡುಕಿನಿಂದ ಒಂದು ಮಾತು ಆಡಿರಬಹುದು ಆದರೆ ಅದೇನು ಅಪರಾದವಲ್ಲ. ನೀವು ನಿಮ್ಮ ಮನೆಯನ್ನು ಬಿಟ್ಟು ಹೋಗುವಾಗ ನಿಮಗೆ ನಿಮ್ಮ ಹೆಂಡತಿ ಮಗಳ ಮೇಲಿದ್ದ ಕೋಪ ಈಗಲು ಇದೆಯ?" 
 
ಸಣ್ಣದೊಂದು ಕಿರುನಗೆ ಅವರ ಪೊದೆಮೀಸೆ, ಗಡ್ಡಗಳು ತುಂಬಿದ ಅವರ ಮುಖವನ್ನು ತುಂಬಿತು.
 
"ನೀನು ನನ್ನ ಮನಸನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ ಅನ್ನಿಸುತ್ತೆ, ಮಗು. ನಾನು ಮನೆಬಿಟ್ಟು ಹೋಗಲು ನನ್ನ ಪತ್ನಿಯ ಸ್ವಭಾವ, ಮಗಳ ಮನ ಕತ್ತರಿಸಿದ ಮಾತು ಕಾರಣ ಇರಬಹುದು. ಆದರೆ ಅದೇ ಪೂರ್ತಿ ಕಾರಣವಲ್ಲ ಅಲ್ಲವೆ. ಮನೆಯನ್ನು ಬಿಟ್ಟು ಹೊರಡಲು ನನ್ನ ಮನಸ್ಥಿಥಿ ಪಕ್ವಗೊಂಡಿತ್ತು. ಚಿಕ್ಕವಯಸಿನಿಂದ ಬೆಳೆದ ನನ್ನ ಜೀವನದ ಪರಿಸ್ಥಿಥಿಗಳು ನನ್ನ ಮನಸಿನ ಮೇಲೆ ಗಾಡ ಪ್ರಭಾವ ಮಾಡಿದ್ದವು. ಸುಖದ ಸುಪ್ಪತಿಗೆಯಲ್ಲಿದ್ದರು ನಾನು ಎಂದು ಅದರಲ್ಲಿ ಮುಳುಗಿರಲಿಲ್ಲ. ಅಧಿಕಾರ ಅಂತಸ್ತುಗಳು ನನ್ನಲ್ಲಿದ್ದರು ಅದು ನನ್ನ ಮನೋವೃತ್ತಿಯಾಗಿರಲಿಲ್ಲ.  ಬೇಸಿಗೆಯಲ್ಲಿ ಒಣಗಿನಿಂತ ಕಾಡು ಹೊತ್ತಿ ಉರಿಯುವಂತೆ ಮಾಡಲು ದೊಡ್ಡ ಬೆಂಕಿಯೇನು ಬೇಕಾಗಿಲ್ಲ. ಸಣ್ಣದೊಂದು ಕಿಡಿ ಸಾಕು ಕಾಡೆ ಹತ್ತಿ ಉರಿದು ಹೋಗುತ್ತದೆ. ಹಾಗೆ ಒಣಗಿನಿಂತ ನನ್ನ ಮನಸಿಗೆ ನನ್ನ ಮಗಳ ಮಾತು ಸಣ್ಣದೊಂದು ಕಿಡಿಯಾಯಿತು ಅಷ್ಟೆ. ಮಗಳಾಗಲಿ ಹೆಂಡತಿಯಾಗಲಿ ಅವರನ್ನು ನನ್ನ ಕತೆಯ ಕಳನಾಯಕಿಯರಂತೆ ಕಲ್ಪಿಸಿಕೊಳ್ಳುವುದು ನನಗೇನು ಇಷ್ಟವಿಲ್ಲ. ಅವರಿಬ್ಬರು ಇಂದಿನ ಸಮಾಜದಲ್ಲಿರುವ ಸಾಮಾನ್ಯ ಮನಸ್ಥಿಥಿಯವರು. ಅವರದು ಸಹಜ ನಡವಳಿಕೆ. ಇದನ್ನು ನಾನು ಅರಿತಿದ್ದೇನೆ. . ನನಗೆ ಅಂದು ಮನೆ ಬಿಟ್ಟುಹೋಗುವಾಗಲು ಅವರ ಮೇಲೆ ಕೋಪವಿರಲಿಲ್ಲ. ಈ ದಿನವು ಇಲ್ಲ. ನನ್ನ ಪರಿಸ್ಥಿಥಿಗೆ ನನ್ನ ಮನಸ್ಥಿಥಿಯೆ ಕಾರಣ, ನಾನೆ ಹೊಣೆ. ಮತ್ತೆ ನಾನು ಸುಖದ ಸುಪ್ಪತ್ತಿಗೆಯನ್ನು ಬಿಟ್ಟು ಬಂದು ಕಷ್ಟಪಡುತ್ತಿರುವೆನಂಬ ಭಾವವು ಇಲ್ಲ. ನಾನು ಈಗಿರುವ ಸ್ಥಿಥಿಯ ಬಗ್ಗೆ ನನಗಾವ ಅಸಮಾದಾನ ಅಥವ ಪಶ್ಚಾತಾಪವು ಇಲ್ಲ. ನಾನು ಈಗ  ಮನಸು ಬಯಸುವ ಸಹಜ ಸ್ಥಿಥಿಯಲ್ಲಿದ್ದೇನೆ ಮತ್ತು ಸುಖವಾಗಿಯೆ ಇದ್ದೇನೆ " 
ಎನ್ನುತ್ತ ಮಾತು ನಿಲ್ಲಿಸಿದರು. 
ನನಗೆ ಏನೊ ಹೊಳೆಯಿತು, ತುಂಬಾ ಬುದ್ದಿವಂತನಂತೆ  
"ನೀವು ಮತ್ತೆ ಏಕೆ ಸಂಸಾರಿಯಾಗಬಾರದು, ನಿಮಗೆ ತಿಳಿದಿದೆಯ, ಹಿಂದೊಮ್ಮೆ ನಮ್ಮಲ್ಲೆ ಒಬ್ಬರು ಸನ್ಯಾಸವನ್ನು ತೊರೆದು ಸಂಸಾರಕ್ಕೆ ಪ್ರವೇಶಿಸಿದರು, ಹಾಗಿರುವಾಗ ನೀವು ಮತ್ತೊಮ್ಮೆ ಸಂಸಾರಿಯಾದರೆ ಏನು ತಪ್ಪು?" ಎಂದೆ
 
 ಅವರ ಮುಖದಲ್ಲಿ ಸಣ್ಣನಗುವೊಂದು ತುಂಬಿತು
 
"ಮಗು ನೀನು ಮುಗ್ದನಂತೆ ಪ್ರಶ್ನಿಸುತ್ತಿ, ಅಥವ ನನ್ನ ಪರೀಕ್ಷೆ ಮಾಡುತ್ತಿದ್ದೀಯೊ ತಿಳಿಯದು. ಜೀವನದಲ್ಲಿ ಎಂದಿಗು ನಾವು ಹಿಂದೆ ನಡೆಯಲಾರೆವು, ಭೂತದಿಂದ ಭವಿಷ್ಯಕ್ಕೆ ನಮ್ಮ ಪಯಣವೆ ಹೊರತು, ಮತ್ತೆ ಭೂತಕ್ಕಲ್ಲ, ನೀನು ಹೇಳಿದ ಘಟನೆ ನಾನು ಕೇಳಿ ತಿಳಿದಿರುವೆ. ಬಹುಷಃ ಅವರು ಬಾಲಸನ್ಯಾಸಿಯಾಗದಿದ್ದರೆ ಈ ರೀತಿ ನಡೆಯುತ್ತಲೆ ಇರಲಿಲ್ಲ. ಒಮ್ಮೆ ಸಂಸಾರಿಯಾಗಿ ಸನ್ಯಾಸ ಸ್ವೀಕರಿಸಿದವನು ಪುನಃ ಸಂಸಾರಿಯಾಗಲಾರನು. ಅಷ್ಟಕ್ಕು ನಾನು ಸನ್ಯಾಸ ಸ್ವೀಕರಿಸಿಲ್ಲ. ನಾನು ನಿಯಮಬದ್ದವಾದ ಸನ್ಯಾಸಿಯಲ್ಲ. ಹಾಗೆ ನಾನು ಸಂಸಾರಿಯು ಅಲ್ಲ. ನಾನು ಬದುಕುತ್ತಿರುವ ಬದುಕು ನನ್ನ ಇಷ್ಟದ್ದು ಇಲ್ಲಿ ಯಾರ ಬಲವಂತವಿಲ್ಲ. ಪ್ರಕೃತಿಯಲ್ಲಿ ನೀನು ಏನೆಲ್ಲ ಕಾಣುವೆ ಹಸು ಕರು ಮರ ಭೂಮಿ ಆಕಾಶ ಗಾಳಿ ಬೆಳಕು ಹೀಗೆ .. ನಾನು ಅವುಗಳಲ್ಲಿ ಒಂದಾಗಿ ಬದುಕುತ್ತಿದ್ದೇನೆ. ನನಗೆ ಯಾವ ಹೆಸರು ಇಲ್ಲ ಮತ್ತು ನನಗೆ ಯಾವ ಸ್ಥಿಥಿಯು ಇಲ್ಲ. ಸಂಸಾರ, ಸನ್ಯಾಸ ನೀನು ಏನೆಲ್ಲ ಹೇಳುತ್ತಿಯೊ ನನಗೆ ಅ ಬಂದನಗಳ್ಯಾವು ಇಲ್ಲ. ನಾನು ಏನು ಎಂದು ನೀನು ಭಾವಿಸುವೆಯೊ ಅದು ನಾನು ಅಷ್ಟೆ" 
ಅವರು ಮಾತು ನಿಲ್ಲಿಸಿದರು. ಅವರನ್ನು ನೋಡುವಾಗ ಮತ್ತೆ ಮಾತನಾಡುವ ಬಗ್ಗೆ ಆಸಕ್ತಿ ಇರುವರಂತೆ ಕಾಣಿಸಲಿಲ್ಲ. ಆದರು ಕೇಳಿದೆ
"ಸ್ವಾಮಿ, ಸನ್ಯಾಸಿಗಳು ಮತ್ತು ಪೀಠದಲ್ಲಿರುವ ಸ್ವಾಮಿಗಳು ತತ್ವವನ್ನು ಭೋದಿಸುತ್ತಾರೆ, ಉಪದೇಶ ಕೊಡುತ್ತಾರೆ, ನೀವು ನನಗಾಗಿ ಯಾವ ತತ್ವ ಅಥವ ಉಪದೇಶವನ್ನು ಕೊಡಲಾರಿರ?"
 
ಅವರು ಈ ಬಾರಿ ಏಕೊ ನಗಲಿಲ್ಲ,ಗಂಭೀರವಾಗಿಯೆ ಹೇಳಿದರು
 
"ಮಗು ತತ್ವ ನೀತಿ ಇವೆಲ್ಲ ನಮ್ಮ ಜೀವನ ವಿಧಾನವಾಗಬೇಕು, ನಮ್ಮ ಮನೋಧರ್ಮವಾಗಬೇಕೆ ಹೊರತು ಉಪದೇಶವಾಗಬಾರದು. ನಾನು ನನ್ನ ಜೀವನ ಕತೆಯನ್ನೆ ನಿನ್ನ ಮುಂದೆ ಹೇಳಿದ್ದೇನೆ. ನನ್ನ ಜೀವನದಿಂದ ನೀನು ಕಲಿಯುವುದು ಏನಾದರು ಇದ್ದಲ್ಲಿ ಕಲಿ. ಇಲ್ಲದಿದ್ದಲ್ಲಿ ಮರೆತುಬಿಡು.ಅಷ್ಟೆ" ಎಂದರು.  
 
ನನಗೆ ಏಕೊ ಮಾತು ಸಾಕೆನಿಸಿತು.  
 
 ಸೂರ್ಯನ ಪ್ರಖರ ಕಿರಣಗಳು ಕಣ್ಣು ಮಂಜಾಗುವಂತೆ ಮಾಡುತ್ತಿದ್ದವು. ಸಮಯ ನೋಡಿಕೊಂಡೆ ನಡುಮಧ್ಯಾನ ದಾಟಿ ಹತ್ತಿರ ಎರಡು ಗಂಟೆಯಾಗಿತ್ತು. ಏನು ಇಷ್ಟುಹೊತ್ತು ಹೋದರು ಬೆಟ್ಟದ ಮೇಲೆ ಅಂದುಕೊಳ್ಳುವದರಲ್ಲಿ ದೂರದಲ್ಲಿ ಎಲ್ಲರು ಬರುತ್ತಿರುವುದು ಕಾಣಿಸಿತು. ಬಿಸಿಲಿನಲ್ಲಿ ಬರುತ್ತಿರುವ ಮಗಳು ಹಾಗು ಎಲ್ಲರ ಮುಖ ಆಯಾಸದಿಂದ ತುಂಬಿತ್ತು. ನಾನು ಕುಳಿತಿರುವುದನ್ನು ಕಂಡು ಹತ್ತಿರ ಬಂದ ಮಗಳು
 
"ಏಕಪ್ಪ ಇಲ್ಲಿ ಕುಳಿತಿದ್ದೀರಿ? ಮೊದಲೆ ನಿಮಗೆ ಹುಷಾರಿಲ್ಲ. ನಾನು ಹೇಳಿರಲಿಲ್ಲವೆ ತಣ್ಣಗೆ ನೆರಳಿರುವ ಜಾಗದಲ್ಲಿ ಕುಳಿತಿರಿ ಎಂದು" ಅಂದಳು.
 
ಬಿಸಿಲಿನಲ್ಲಿ ಬಸವಳಿದು ಬಂದವಳು ಅವಳು, ನಾನು ಬಿಸಿಲಿನಲ್ಲಿ ಕುಳಿತಿರುವ ಬಗ್ಗೆ ಆತಂಕ! . ನಾನು ಸುಮ್ಮನೆ ನಕ್ಕೆ 
"ಇದೆಂತ ಬಿಸಿಲಮ್ಮ, ನೀನು ಬೇಟ್ಟದ ಮೇಲೆ ಹೋಗಿ ಬಂದಿರುವಿ. ಹೀಗೆ ಇವರು ಸಿಕ್ಕರು ಮಾತನಾಡಿಸುತ್ತ ಕುಳಿತಿದ್ದೆ " ಎಂದೆ.
ಈಗ ನನ್ನ ಜೊತೆ ಇದ್ದ ಪಕೀರನಂತ ವೆಂಕಟೇಶ ರನ್ನು ಕಂಡ ಅವಳು ಮುಖ ಸಿಂಡರಿಸಿದಳು. 
"ಸರಿಯಪ್ಪ, ಹೊತ್ತಾಯಿತು ನಡೆಯಿರಿ ಊಟ ಮಾಡೋಣ, ಕಾರಿನಲ್ಲಿ ಬಿಸಿಬೇಳೆಬಾತ್ , ಮೊಸರನ್ನ ಹಾಗು ನೀರು ಎಲ್ಲವು ಇದೆಯಲ್ಲ" ಎಂದಳು.
ನಾನು "ನನ್ನದು ಹೋಟೆಲ್ ನಲ್ಲಿ ಊಟವಾಯಿತು ,ನಡೆಯಿರಿ ನೀವೆಲ್ಲ  ಮಾಡುವಿರಂತೆ" ಎಂದೆ.
ಅವಳು ಆಶ್ಚರ್ಯದಿಂದ " ಹೋಟೆಲ್ ನಲ್ಲಿ ಊಟಮಾಡಿದಿರ? ಏಕೆ ಮನೆಯಿಂದ ತಂದಿದ್ದೆ ನಿಮಗಾಗಿಯಲ್ಲವೆ, ಹೊರಗೆ ತಿಂದರೆ ಆರೋಗ್ಯ ಕೆಡುವುದು ಎಂದು, ಹೊರಗೇಕೆ ತಿಂದಿರಿ" ಎಂದಳು
"ಇಲ್ಲ, ಹಾಗೆ ಇವರಿಗೆ ಊಟ ಕೊಡಿಸಲು ಹೋದೆ, ನಾನು ಜೊತೆಗೆ ಮುಗಿಸಿದೆನಷ್ಟೆ ಅದೇನು ದೊಡ್ಡ ವಿಷಯ ಬಿಡು" ಎಂದೆ. 
"ಇದೇನಪ್ಪ , ನೀವು ಇವರ ಜೊತೆ ಊಟಕ್ಕೆ ಹೋದಿರ? , ಅವರಿಗೆ ಊಟಕೊಡಿಸಬೇಕಿದ್ದರೆ ದುಡ್ಡು ಕೊಟ್ಟಿದ್ದರೆ ಆಗಿತ್ತು, ಮತ್ತು ಬೇಕೆಂದರೆ ಕಾರಿನಲ್ಲಿ ಇರುವ ಅಡಿಗೆಯಲ್ಲಿ ಸ್ವಲ್ಪ ತೆಗೆದುಕೊಟ್ಟಿದ್ದರು ನಡೆಯುತ್ತಿತ್ತು, ನಿಮ್ಮದೆಲ್ಲ ವಿಚಿತ್ರ " ಎನ್ನುತ್ತ ಮುಖ ಸಪ್ಪೆ ಮಾಡಿದಳು. 
ನಮ್ಮಿಬ್ಬರ ಮಾತು ಕೇಳಿ ನಗುತ್ತ ಕುಳಿತ್ತಿದ್ದ ವೆಂಕಟೇಶ್ ರವರು ನನ್ನ ಮಗಳತ್ತ ತಿರುಗಿ 
"ಮಗು ನಿನಗಾವ ಚಿಂತೆಯು ಬೇಡ, ಈ ಸನ್ಯಾಸಿಗಾಗಿ ನಿನ್ನ ತಂದೆ ಹೋಟೆಲ್   ಅನ್ನ ತಿನ್ನ ಬೇಕಾಯಿತು, ಅವರ ಆರೋಗ್ಯಕ್ಕೆ ಯಾವುದೆ ತೊಂದರೆ ಬರಲ್ಲ. ಈಗ ಬೇಕಾದರೆ ನಿನ್ನ ಜೊತೆ ಬಂದು ಅವರು ಸ್ವಲ್ಪ ತಿನ್ನುತ್ತಾರೆ ಬಿಡು. ನೀನೇನು ಚಿಂತಿಸಬೇಡ" ಅಂದರು
 ಯಾವಾಗಲು 'ಪಟ್ ' ಎಂದು ಏನಾದರು ಪ್ರತ್ಯುತ್ತರ ಕೊಡುವ ಮಗಳು ಅದೇನೊ ಸನ್ಯಾಸಿ  ಮಾತು ಕೇಳಿ ಏನು ಉತ್ತರಕೊಡಲಿಲ್ಲ , ಆಗಲಿ ಎನ್ನುವಂತೆ ತಲೆ ಆಡಿಸಿದಳು.
ನಾನು " ಸ್ವಾಮಿ ನೀವು ನಮ್ಮ ಜೊತೆ ಬಂದು ಮನೆಯಿಂದ ತಂದಿರುವ ಅಹಾರ ಸ್ವಲ್ಪ ಸ್ವೀಕರಿಸಬಹುದಲ್ಲವೆ " ಎಂದು ಕೇಳಿದೆ. ಆತ ಪುನಃ ಜೋರಾಗಿ ನಕ್ಕುಬಿಟ್ಟರು
"ನನ್ನನ್ನು ಪರೀಕ್ಷೆ ಮಾಡುತ್ತೀರ, ಇರಲಿ. ಅದೆಲ್ಲ ಏನು ಬೇಡ, ನೀವು ಅವರೆಲ್ಲರ ಜೊತೆ ಹೋಗಿ ನಿಮಗಾಗಿ ಕಾಯುತ್ತಿರುವರು. ಊಟ ವಿಶ್ರಾಂತಿಯ ನಂತರ ನೀವು ಪುನಃ ಬೆಂಗಳೂರಿಗೆ ಹೊರಟಾಗ ಬಂದು ನಿಮ್ಮನ್ನು ಕಾಣುವೆನು, ಈಗ ಹೊರಡಿ" ಎಂದರು. 
ನಾನು ನಮ್ಮವರೆಲ್ಲರ ಜೊತೆ ಕಾರಿನತ್ತ ಹೊರಟೆ. ಮನೆಯಿಂದ ತಂದಿದ್ದ ತಿನಿಸನ್ನೆಲ್ಲ ಹೊರಗೆ ತೆಗೆದರು. ನೆರಳಿನಲ್ಲಿ ಕುಳಿತು ತಿನ್ನುವದೆಲ್ಲ ಮುಗಿಸಿ, ನೀರು ಕುಡಿದು. ಹಾಗೆ ಕಾಲುಚಾಚಿ ಸ್ವಲ್ಪ ವಿಶ್ರಾಂತಿ ಮಾಡಿದೆವು. ಎಲ್ಲರು ಬಿಸಿಲಿನಲ್ಲಿ ಬೆಟ್ಟ ಹತ್ತಿ ಇಳಿದು ದಣಿದಿದ್ದರು. ಬಿಸಿಲಿನ ಜಳಕ್ಕೆ ಎಂತದೊ ಜೊಂಪು. ಮತ್ತೆ ಎಲ್ಲ ಸಿದ್ದವಾಗಿ ಹೊರಟಾಗ ನಾಲಕ್ಕು ಗಂಟೆ ದಾಟಿತ್ತು. 
 
 ಕಾರಿನಲ್ಲಿ ಎಲ್ಲ ಕುಳಿತು ಬೆಂಗಳೂರಿನತ್ತ ಹೊರಟು ರಸ್ತೆಯಲ್ಲಿ ಸಾಗುವಾಗಲೆ, ದೂರದಲ್ಲಿ ಗಮನಿಸಿದೆ, ಬೆಳಗಿನಿಂದ ನನ್ನ ಜೊತೆ ಇದ್ದ ಆ ಸನ್ಯಾಸಿ ರಸ್ತೆಯ ಪಕ್ಕ ನಮ್ಮ ಕಾರಿನತ್ತ ನೋಡುತ್ತ ನಿಂತಿದ್ದರು. ನಾನು ಕಾರಿನ ಮುಂದಿನ ಸೀಟಿನಲ್ಲಿದ್ದೆ ಪಕ್ಕದಲ್ಲಿ ನನ್ನ ತಮ್ಮ ಡ್ರೈವ್ ಮಾಡುತ್ತಿದ್ದ. ನಾನು ತಮ್ಮನನ್ನು ಕುರಿತು
"ಒಂದು ಕ್ಷಣ ಅವರ ಹತ್ತಿರ ನಿಲ್ಲಿಸು" ಅಂತ ಗಡಿಬಿಡಿ ಮಾಡಿದೆ, ನನ್ನ ತಮ್ಮನಿಗೇನು ಅರ್ಥವಾಗಲಿಲ್ಲ 
"ಏತಕ್ಕೆ " ಅನ್ನುತ್ತಲೆ ಕಾರು ನಿಲ್ಲಿಸಿದ. ನಾನು ಬಾಗಿಲು ತೆರೆದು ಇಳಿದು , ಕಾರನ್ನು ಸುತ್ತು ಹಾಕಿ ಅವರ ಬಳಿ ಬಂದೆ. ಅವರು ಕಾರಿನ ಬಲಬಾಗದಲ್ಲಿದ್ದರು.
"ನಾವು ಹೊರಟೆವು ಸ್ವಾಮಿ ಹೋಗಿ ಬರುವೆವು" ಎಂದೆ. 
ಅದಕ್ಕವರು 
"ಒಳ್ಳೆಯದು ಮಗು ಒಳ್ಳೆಯದಾಗಲಿ, ಹೋಗಿ ಬಾ , ನಿನ್ನ ಮಗಳೆಲ್ಲಿ " ಎನ್ನುತ್ತ , ಕಾರಿನತ್ತ ತಿರುಗಿ , ಕಿಟಿಕಿಯ ಬಳಿ ಕುಳಿತಿದ್ದ ಅವಳನ್ನು 
" ಹೊರಟೆಯ ಮಗು ಒಳ್ಳೆಯದಾಗಲಿ ,ಎಲ್ಲಿ ನಿನ್ನ ಕೈಯನ್ನು ಹೊರಗೆ ಚಾಚು " ಎಂದರು. ಎಲ್ಲಕ್ಕು ಎಡಕೈ ಮೊದಲು ಬಳಸುವ ಅವಳ ಅಭ್ಯಾಸದ ಅರಿವಿದ್ದ ನಾನು ತಕ್ಷಣ 
"ಬಲಕೈಯನ್ನು ಕಿಟಕಿಯಿಂದ ಹೊರಗೆ ನೀಡು " ಎಂದು ಮಗಳಿಗೆ ತಿಳಿಸಿದೆ, ನನಗು ಅರ್ಥವಾಗಲಿಲ್ಲ., ಈ ಸನ್ಯಾಸಿ ಏನಕ್ಕಾಗಿ ಆ ರೀತಿ ಹೇಳಿದರು ಎನ್ನುವುದು. ಅವಳು ಬಲಕೈ ಅನ್ನು ಹೊರಗೆ ಚಾಚಿದಂತೆ
ಆತ ನಿದಾನವಾಗಿ ತಮ್ಮ ಕೈಯನ್ನು ಅವರು ಹಾಕಿದ್ದ , ನಿಲುವಂಗಿಯ ಬದಿಯ ಜೇಬಿನಲ್ಲಿ ತೂರಿಸಿದರು, ಜೀಬಿನಿಂದ ಏನನ್ನು ಹೊರತೆಗೆದು 
 
"ಮಗು ನನಗೆ ತುಂಬಾ ಹಿಂದೆ ಯಾರೊನನಗೆ ಕೊಟ್ಟರು, ಅದು ಇಷ್ಟು ದಿನ ನನ್ನ ಬಳಿಯೆ ಇತ್ತು. ಏಕೊ ಅದನ್ನು ನಿನಗೆ ಕೊಡಬೇಕೆಂದು ಮನಸ್ಸಿಗೆ ಪ್ರೇರಣೆಯಾಗುತ್ತಿದೆ. ಇಂದಿನಿಂದ ಇದು ನಿನ್ನ ಬಳಿ ಇರಲಿ.ಒಳ್ಳೆಯದಾಗಲಿ ಮಗು. ನಿನ್ನ ಅಪ್ಪನದು ತುಂಬ ಸರಳ ಸ್ವಭಾವ ಅವರನ್ನು ಪ್ರೀತಿಯಿಂದ ನೋಡಿಕೊ ಮಗು. ಸರಿ ಎಲ್ಲರು ಹೋಗಿ ಬನ್ನಿ ಒಳ್ಳೆಯದಾಗಲಿ" ಎನ್ನುತ್ತ , ಸ್ವಲ್ಪ ಹಿಂದೆ ಹೋಗಿ ನಿಂತರು. ನಾನು ಅವರಿಗೆ ಕೈಮುಗಿದು ಮತ್ತೆ ಸುತ್ತು ಹಾಕಿ ಕಾರಿನ ಒಳಗೆ ಬಂದು ಕುಳಿತೆ. ನಾವು ಹೊರಡುತ್ತಿರುವಂತೆ ಆತ ನಮ್ಮನ್ನೆ ನೋಡುತ್ತ ನಿಂತಿದ್ದರು. 
 
ಕಾರಿನಲ್ಲಿ ನಾವು ಸ್ವಲ್ಪ ಮುಂದೆ ಬಂದಂತೆ ನನಗೆ ಕುತೂಹಲವೆನಿಸಿ ಮಗಳನ್ನು ಕೇಳಿದೆ 
"ಅದೇನೆ ಅವರು ನಿನಗೆ ಏನೊ ಕೊಟ್ಟರಲ್ಲ " ಅಂತ ಪ್ರಶ್ನಿಸಿದೆ. 
ಆಗ ಅವಳು "ಅಪ್ಪ ಇದನ್ನು ನೋಡಿ " ಎನ್ನುತ್ತ, ಅವಳ ಕೈಯಲ್ಲಿದ್ದ ಚಿಕ್ಕ ವಸ್ತುವೊಂದನ್ನು ನನಗೆ ಕೊಟ್ಟಳು
 
"ನಾನು ಗಮನಿಸಿ ನೋಡಿದೆ, ಅದೊಂದು ಪುಟ್ಟ ಶಿವಲಿಂಗ ಎಷ್ಟು ಚಿಕ್ಕದು ಎಂದರೆ,ಅಂಗೈ ಮೇಲೆ ಪುಟ್ಟದಾಗಿ ಕೂಡುತ್ತಿತ್ತು, ನೋಡಲು ಮುದ್ದಾಗಿತ್ತು, ಮೊದಲಿಗೆ ಅದು ಗಾಜಿನದೇನೊ ಅನ್ನುವಾಗ ಹೊಳೆಯಿತು, ಅದು ಸ್ಪಟಿಕದ ಲಿಂಗ. ಸೂರ್ಯನ ಬೆಳಕು ಅದರಲ್ಲಲ್ಲೆ ಸಂಚರಿಸಿದಾಗ ಅದು ಹೊಳೆಯುತ್ತಿತ್ತು 
 
"ಇದು ಸ್ಪಟಿಕದ ಲಿಂಗ,ನೋಡು ಎಷ್ಟು ಚೆನ್ನಾಗಿದೆ " 
ಎನ್ನುತ್ತ ಅವಳ ಕೈಗೆ ಕೊಟ್ಟೆ. ಕಾರಿನಲ್ಲಿ ಎಲ್ಲರು, ನನ್ನ ಪತ್ನಿ , ನನ್ನ ತಮ್ಮನ ಪತ್ನಿ , ಅವರ ಮಗಳು ಅದನ್ನು ಪಡೆದು ತಿರುಗಿಸಿ ತಿರುಗಿಸಿ ನೋಡಿ ಸಂತಸ ಪಡುತ್ತಿದ್ದರು. ಅವರೆಲ್ಲರು , 
"ನೋಡು ಇವಳದಾದರೆ ಅದೃಷ್ಟ, ಸನ್ಯಾಸಿ ಇವಳಿಗೆ ಹರಸಿ ಕೊಟ್ಟ, ಒಳ್ಳೆ ಅದೃಷ್ಟವಂತೆ" ಅಂತ ಅವಳನ್ನು ಉಬ್ಬಿಸುವರೆ. 
 
ನನಗೆ ಒಂದು ಕ್ಷಣ ಮನಕ್ಕೆ ಅನ್ನಿಸಿತು 
"ಅಲ್ಲ ಈ ಸನ್ಯಾಸಿಯ ಬುದ್ದಿಯಾದರು ಎಂತದು, ಅವನನ್ನು ಜೊತೆಗೆ ಊಟಕ್ಕೆ ಕರೆದೋಯ್ದು, ಮಾತನಾಡಿಸಿ ಸೇವೆಮಾಡಿದವರು ನಾನು, ನನಗಾದರೆ ಎಂತದು ಕೊಡಲಿಲ್ಲ, ಒಳ್ಳೆಯದಾಗಲಿ ಎಂದು ಬಾಯಲ್ಲಿ ನುಡಿದು ಸುಮ್ಮನಾಗಿಬಿಟ್ಟ.  ಏನು ಇಲ್ಲದೆ ನನ್ನ ಮಗಳಿಗೆ ಸ್ಪಟಿಕದ ಲಿಂಗ ನೀಡಿ ಆಶೀರ್ವಾದ ಮಾಡಿದ " ಎನ್ನಿಸಿತು.
 
 ಅಮೇಲೆ ಇದ್ದಕ್ಕಿದಂತೆ ನನ್ನ ಚಿಂತನೆಯ ಬಗ್ಗೆ ನನಗೆ ನಾಚಿಕೆ ಎನಿಸಿತು. ಮನುಷ್ಯನನ್ನು ಅದೇಕೆ ಈ ಅಸೂಯೆ ಎಂಬ ಭಾವನೆ ಕಾಡುತ್ತದೆ, ಯಾರಿಗೆ ಏನು ಸಿಕ್ಕರು ನನಗೆ ಇಲ್ಲವೆಂಬ ಭಾವನೆ ಕಾಡುತ್ತದೆ, ಗೊತ್ತಾಗಲಿಲ್ಲ. ಈ ಭಾವನೆಯೆ ಎಲ್ಲ ಸಂಘರ್ಷಗಳಿಗು ಮೂಲವೇನೊ. 
 
  ಕಾರಿನಲ್ಲಿ ಎಲ್ಲರು ಆ ಸನ್ಯಾಸಿಯ ಬಗ್ಗೆ ಮಾತನಾಡುವರೆ. ನನಗೆ ಅದೇಕೊ ಅವನು ನನ್ನ ಬಳಿ ಕುಳಿತು ಮಾತನಾಡಿದ ಅವನ ವಿಷಯವನ್ನೆಲ್ಲ ಎಲ್ಲರ ಜೊತೆ ಕುಳಿತು ಚರ್ಚಿಸಲು ಮನಸಾಗಲಿಲ್ಲ.  ಅಲ್ಲದೆ ನನಗೆ ಎಂತದೊ ಮಂಪರು ಕವಿಯುತ್ತಿತ್ತು. ಈಗ ಎಲ್ಲರು ಸನ್ಯಾಸಿಗಳನ್ನು ಕುರಿತಾದ ಮಾತು ಪ್ರಾರಂಬಿಸಿದ್ದರು, ಅದು ಎಲ್ಲಿಗೆಲ್ಲಿಗೊ ಹೋಗುತ್ತಿತ್ತು,ಅಘೋರಿಗಳ ಬಗ್ಗೆ, ನಾಗ ಸನ್ಯಾಸಿಗಳ ಬಗ್ಗೆ ಹೀಗೆ ಏನೇನೊ ಚರ್ಚಿಸುತ್ತಿದ್ದರು. ಕ್ರಮೇಣ ನನಗೆ ಅವರೆಲ್ಲರ ಮಾತು ಕೇಳಿಸದಂತಾಯಿತು. ಅದೆಷ್ಟು ಹೊತ್ತಾಯಿತೊ, 
 
 ಮಗಳು ನನ್ನನ್ನು ಬುಜ ಅಲುಗಾಡಿಸಿ ಎಬ್ಬಿಸುತ್ತಿದ್ದಳು, 
"ಇದೆಂತ ನಿದ್ದೆ ಅಪ್ಪ , ಎದ್ದೇಳಿ , ಎಲ್ಲರು ಕಾರಿನಿಂದ ಇಳಿದಾಯಿತು" 
 
 ಆ~~ ಹೌದೆ , ಕಣ್ಣು ತೆರೆದು ನೋಡಿದೆ, ಸುತ್ತಲು ಗಮನಿಸಿದೆ, ಓ ಆಗಲೆ ನಮ್ಮ ಮನೆ ಬಂದಾಗಿದೆ, ಒಳ್ಳೆ ಗಡದ್ದು ನಿದ್ದೆ ಆಯಿತು. ಒಳಗೆ ಹೋದ ಕೂಡಲೆ ಪತ್ನಿಯನ್ನು ಕಾಡಿಸಿ ಬೇಗ ಒಂದು ಕಾಫಿ ಮಾಡಿಸಿದರೆ ಆಯಿತು, ಪ್ರಯಾಣದ ನಂತರ ಅಯಾಸ ಪರಿಹಾರ ಎಂದುಕೊಳ್ಳುತ್ತ ಕೆಳಗಿಳಿದೆ.  ಮನೆಯ ಒಳಗೆ ಹೋಗುವಾಗ ಅದೇಕೊ ಶಿವಗಂಗೆಯ ಅ ಸಾಧುವಿನ ನೆನಪು ದುತ್ತೆಂದು ಮನವನ್ನೆಲ್ಲ ತುಂಬಿತು.
 
-- ಮುಕ್ತಾಯ. 
 
Rating
No votes yet

Comments