ದ್ವಂದ್ವ

ದ್ವಂದ್ವ

ನಿರೀಕ್ಷೆಗಳೇ...

ನನ್ನ

ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ?

ಅತೃಪ್ತ ಜೀವನದಿ

ತೃಪ್ತಿಯ ಕೃತಕ ನಗುವನು ಚೆಲ್ಲಿ

ಮುಸುಕೆಳೆದು ಮಲಗಿದರೂ

ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು?

ಪ್ರತೀಕ್ಷೆಗಳೇ.....

ಬರಡು ಜೀವನವೆಂದು ಬಿಕ್ಕಿ,

ಕಣ್ಣ ಹನಿ ಉಕ್ಕಿದಾಗ

ಭೂತಕಾಲದ ನಗುವ ಸೆಲೆಯನು

ವರ್ತಮಾನದ ತೀರಗಳಿಗಪ್ಪಳಿಸಿ

ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ?

ಪರೀಕ್ಷೆಗಳೇ...

ನಾಲ್ಕು ದಿನದ ಜೀವನವು

ಬೇವು ಬೆಲ್ಲ, ಹಾವು ಹೂವಿನ ಹಾದರವು

ಇದುವೆಂದು ಕಲಿಸುವ ಗುರುಗಳೇ..

ದಿನವೂ ಬರುವಿರಿ ಕ್ಷಣ ಕ್ಷಣದ ಹೆಜ್ಜೆಯಲಿ

ಗುರುತ ಮೂಡಿಸಿ

ಮತ್ತೊಮ್ಮೆ ಛೇಡಿಸಿ,

ಜೀವನದ ನಕ್ಷೆಯಲಿ ಮೈಲಿಗಲ್ಲುಗಳಂತೆ

ಹುಟ್ಟುಹಾಕುವಿರಿ ಅನುಭವದ ಒರತೆಯನು

ಕಟ್ಟಿ ಹಾಕುವಿರಿ ಪ್ರೀತಿ-ದ್ವೇಷದ ಸರಪಳಿಯಲ್ಲಿ

ಜೀವನವ ತೇಯ್ದು ತೆವಳುವಾಗ...

ಇದನೇನೆಂದು ಕೊಳ್ಳಲಿ ಶಿಕ್ಷೆಯೇ?

ಅಥವಾ ಬದುಕಲಿರುವ ಅಪೇಕ್ಷೆಯೇ???

Rating
No votes yet

Comments