ನೋಡಿದೆ‍‍‍‍,ಮರುಗಿದೆ

ನೋಡಿದೆ‍‍‍‍,ಮರುಗಿದೆ

ಕವನ

-----೧-----

ಅಹಾ,ಎಷ್ಟು ಸುಂದರ?

ಎಂದುಕೊಂಡು ಹೋದೆ 

ಮನದಣಿಯೆ ನೋಡಿದೆ

ಕಲ್ಲು,ವಜ್ರಚೂರ್ಣಗಳ

 ಆವರಣ,

ನಾಲ್ಕು ಮೂಲೆಗಳಲ್ಲೂ

ಹಣತೆಗಳನ್ನಿಡಲು ಸ್ಥಳ

ಸುತ್ತಲೂ ರಂಗವಲ್ಲಿ

ಆವರಣದಲ್ಲಿಡೀ ಚಿತ್ರಗಳು

ಬಗೆಬಗೆಯ  ಅಲಂಕಾರಗಳು

ಅಬ್ಬಾ!

ಒಂದು ತುಳಸಿಯ ಕಟ್ಟೆಗೆ

ಇಷ್ಟೊಂದು 

ಅಲಂಕಾರವೇ!

ಆಶ್ಚರ್ಯಪಟ್ಟೆ

--೨-

ನಂತರ,

ಇಂದು  ತುಲಸೀಪೂಜೆಯಲ್ಲವೇ

ಅದಕ್ಕಾಗಿ ಈ ಅಲಂಕಾರ!

ಆಶ್ಚರ್ಯವಾಜಿಗೆ ನೆನಪಿನ

ಕಡಿವಾಣ ಹಾಕಿದೆ

ಪುನಃ ಪುನಃ ನೋಡಿದೆ

---೩---

ಸುಂದರವಾದ ಕಟ್ಟೆಯ ನಡುವೆ

ಹಣತೆಯ ಎಣ್ಣೆ ಬಿದ್ದು,ಬಿದ್ದು

ಕಪ್ಪಾದ ಮಣ್ಣು

ಆ ಎಣ್ಣೆ,ಮಣ್ಣುಗಳ

ಸಂಮಿಶ್ರಣದ ನಡುವೆ

ನೀರನ್ನಿದುವರೆಗೆ ಕಾಣದಂತಹ

ತುಲಸೀಗಿಡ!

--೪---

ಪುರಾತನ ಕವಿಯೊಬ್ಬ ಹೇಳಿದಂತೆ

ಅಮೃತವನ್ನುಂಡು

ಗಂಜಲದಲ್ಲಿ

ಬಾಯ ತೊಳೆದಂತಾಯ್ತು

ನೋಡಿದೆ

ಮನಸಾರೆ ಮರುಗಿದೆ,

ಮರಳಿದೆ

Comments