ಕೊಂಡಜ್ಜಿಯ ವರದರಾಜಸ್ವಾಮಿ ದೇವಾಲಯ

ಕೊಂಡಜ್ಜಿಯ ವರದರಾಜಸ್ವಾಮಿ ದೇವಾಲಯ

ಕೊಂಡಜ್ಜಿ ಹಾಸನ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಸೀಗೇಗುಡ್ಡ, ಗರುಡನಗಿರಿ ಹಾಗೂ ಚಂದ್ರದ್ರೋಣ ಪರ್ವತಗಳ ನಯನ ಮನೋಹರ ಪ್ರಕೃತಿ ರಮಣೀಯ ತಾಣದಲ್ಲಿರುವ ಈ ಗ್ರಾಮ ವರದರಾಜಸ್ವಾಮಿಯ ನೆಲೆವೀಡು,ಹಾಗೂ ನನ್ನ ಪ್ರೀತಿಯ ಅಜ್ಜಿ  ಊರು .

 

ಹಾಸನದಿಂದ ಉತ್ತರಕ್ಕೆ 17 ಕಿಲೋ ಮೀಟರ್ ದೂರದಲ್ಲರುವ ಇಲ್ಲಿ ಶ್ರೀವರದರಾಜಸ್ವಾಮಿ ನೆಲೆನಿಂತ ಬಗ್ಗೆ ಹಾಗೂ ಈ ಊರಿಗೆ ಕೊಂಡಜ್ಜಿ ಎಂಬ ಹೆಸರು ಬಂದ ಬಗ್ಗೆ ಊರಿನಲ್ಲಿ ಜನಜನಿತವಾದ ಕಥೆ ಇದೆ.

ಹೊಯ್ಸಳರ ದೊರೆ ವಿಷ್ಣುವರ್ಧನ ತನ್ನ ಪತ್ನಿ ಶಾಂತಲೆಯ ಕೋರಿಕೆ ತೀರಿಸಲು  ನಿಂತಿರುವ ಭಂಗಿಯ 18 ಅಡಿ ಎತ್ತರದ ಭವ್ಯವಾದ ಶ್ರೀವರದರಾಜಸ್ವಾಮಿ ವಿಗ್ರಹವನ್ನು ಮಾಡಿಸಿ ತಮಿಳುನಾಡಿನಿಂದ ಕುದುರೆ ಬಂಡಿಯಲ್ಲಿ ಬೇಲೂರಿಗೆ ತರಿಸಿದನಂತೆ. ಈ ಪ್ರತಿಮೆಯನ್ನು ಬೇಲೂರಿನ ಚೆನ್ನಕೇಶವ ದೇವಾಲಯದ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲು ಇಚ್ಛಿಸಿದ ಆದರೆ, ಗರ್ಭಗೃಹ ಚಿಕ್ಕದಾದ ಕಾರಣ ಪ್ರತಿಷ್ಠಾಪಿಸಲು ಸಾಧ್ಯವಾಗಲಿಲ್ಲ.

ಹೀಗೆ ಪ್ರತಿಷ್ಠಾಪನೆ ಆಗದೆ ಪ್ರಾಕಾರದಲ್ಲೇ ಉಳಿದ ವಿಗ್ರಹವನ್ನು ಒಬ್ಬ ಅಜ್ಜಿ ಕೊಂಡು ತಂದು, ತನ್ನೂರಿನಲ್ಲಿ ಪ್ರತಿಷ್ಠಾಪಿಸಿ, ಪುಟ್ಟ ಗುಡಿ ಕಟ್ಟಿಸಿದಳಂತೆ ಹೀಗಾಗೇ ವಿಗ್ರಹ ಕೊಂಡ ಅಜ್ಜಿಯ ಊರು ಕೊಂಡಜ್ಜಿ ಎಂದೇ ಖ್ಯಾತವಾಯಿತು.

ವರದರಾಜ ಸ್ವಾಮಿ ಅಥವಾ ಅಲ್ಲಾಳನಾಥ ವಿಷ್ಣುವಿನ 24 ದಿವ್ಯ ನಾಮಗಳಲ್ಲಿ ಒಂದು. ವರದರಾಜಸ್ವಾಮಿ ಜನಾರ್ದನನ ರೂಪವೆಂದು ಪುರಾಣಗಳು ಹೇಳುತ್ತವೆ. ಇಂಥ ಭವ್ಯ ಮೂರ್ತಿ ಇಲ್ಲಿ ನಿಂತಿರುವ ಭಂಗಿಯಲ್ಲಿದೆ. ಶಂಖ, ಚಕ್ರ, ಗದೆ ಮತ್ತು ಅಭಯ ಮುದ್ರೆಯನ್ನು ಹೊಂದಿರುವ ವಿಗ್ರಹದ ಬಲ ಎದೆಯ ಮೇಲೆ ಲಕ್ಷ್ಮೀ ವಿಗ್ರಹವಿದೆ. ಪ್ರತಿಮೆಯಲ್ಲಿನ ಕಿರೀಟ, ಯಜ್ಞೋಪವೀತ, ವಸ್ತ್ರ, ಒಡವೆಗಳಲ್ಲಿನ ಕುಸೂರಿ ಕೆತ್ತನೆ ಶಿಲ್ಪಿಯ ಕೈಚಳಕಕ್ಕೆ ಸಾಕ್ಷಿಯಾಗಿದೆ.  ಸೊಂಟಕ್ಕೆ ಸ್ವಾಮಿ ಕಟ್ಟಿರುವ ಪೀತಾಂಬರದ ಉತ್ತರೀಯಕ್ಕೆ ಹಾಕಿರುವ ಗಂಟನ್ನು ಸಹ ನೈಜವಾಗಿ ಶಿಲ್ಪಿ ಮೂಡಿಸಿದ್ದಾನೆ.

ಮಂದಸ್ಮಿತ ನಗುಮುಖದ ವಿಗ್ರಹ 11 ಅಡಿ ಎತ್ತರವಿದ್ದು, ನಾಲ್ಕು ಅಡಿ ಪಾಣಿಪೀಠದ ಮೇಲಿದೆ. ಗರ್ಭಗೃಹದ ಮೇಲಿನ ಛಾವಣಿಯಲ್ಲಿ ನಂದಿಯ ಉಬ್ಬು ಶಿಲ್ಪವಿರುವುದು ವಿಶೇಷವಾಗಿದೆ. ಈ ಸುಂದರ ವಿಗ್ರಹದ ಹಿಂದೆ ಹೊಯ್ಸಳ ಶೈಲಿಯ ಪ್ರಭಾವಳಿ ಇಲ್ಲದಿರುವುದೂ ಮತ್ತೊಂದು ವಿಶೇಷವಾಗಿದೆ. ಈ ಪ್ರತಿಮೆಯನ್ನು 14ನೇ ಶತಮಾನದಲ್ಲಿ ನಿರ್ಮಿಸಿರುವುದು ಇತಿಹಾಸದಿಂದ ತಿಳಿದುಬರುತ್ತದೆ.


ಇಷ್ಟು ಮನೋಹರವಾದ ವಿಗ್ರಹವಿರುವ ಈ ದೇವಾಲಯಕ್ಕೆ ಮೊದಲಿನಿಂದಲೂ ಯಾವುದೇ ವಿಶಿಷ್ಟ ರಕ್ಷಣೆ ಇಲ್ಲದಿದ್ದರೂ, ಸ್ವಾಮಿ ತನ್ನ ಸೌಂದರ್ಯ ರಕ್ಷಿಸಿಕೊಂಡಿದ್ದಾನೆ. ಈ ದೇವಾಲಯ ಇಂದು ತೀರಾ ಶಿಥಿಲಾವಸ್ತೆಯಲ್ಲಿದೆ.  ಇಂಥ ಅಪರೂಪದ ಹಾಗೂ ನೂರಾರು ವರ್ಷಗಳ ಐತಿಹಾಸಿಕ ಮಹತ್ವ ಇರುವ ದೇವಾಲಯವನ್ನು, ದೇವರನ್ನು ಉಳಿಸುವ ಕೆಲಸ ತುರ್ತಾಗಿ ಆಗಬೇಕಿದೆ.

Comments