ಅಂಡಾಂಡಭಂಡರ ಸಮ್ಮರ್ ಕ್ಯಾಂಪ್- ಮಲ್ಲೇಶ್ವರ

ಅಂಡಾಂಡಭಂಡರ ಸಮ್ಮರ್ ಕ್ಯಾಂಪ್- ಮಲ್ಲೇಶ್ವರ

 

 
ಅಂಡಾಂಡಭಂಡರ ಸಮ್ಮರ್ ಕ್ಯಾಂಪ್- ಮಲ್ಲೇಶ್ವರ
 
 
  
ನಿನ್ನೆ ಶನಿವಾರ ಮತ್ತೆ ಅದೇ ಇಮೈಲ್ ಬಂದಿತ್ತು ನನ್ನ ಜೀಮೈಲ್ ಗೆ 
"ಅಂಡಾಂಡ ಬಂಡರ ಸಮ್ಮರ್ ಕ್ಯಾಂಪ್"
ಎಲ್ಲ ವಿಧದ ಸಸ್ಯಹಾರ ಅಡುಗೆ ತಿಂಡಿಗಳ ವೊರ್ಕ್ ಶಾಪ್ ಮತ್ತು ಸಲಹೆ
ಮಲ್ಲೇಶ್ವರದ ಮೈದಾನ ಹತ್ತಿರ. 
ಸೂಚನೆ : ಗಂಡಸರಿಗೆ ಮಾತ್ರ 
 ಬಾನುವಾರ ಕ್ಯಾಂಪ ನಡೆಯುವ ಮಲ್ಲೇಶ್ವರದ ವಿಳಾಸವು ಇತ್ತು. ಸರಿ , ಇವರದು ಇರುವುದೆ. ಮತ್ತೆ ಅದೇ ಹಳೆ ಹಾಡು. ಏನೊ ಮೋಡಿ ಮಾಡಿ ನಮ್ಮ ಕೈಲೆಲ್ಲ ಅಡಿಗೆ ಮಾಡಿಸಿ ತಾನು 'ಸ್ವಾಹ' ಅಂದು ಬಿಡುತ್ತಾರೆ. ಹೋಗುವುದು ಬೇಡ ಎಂದು ನಿರ್ದರಿಸಿ ಸುಮ್ಮನಾದೆ. 
ಈ ಅಂಡಾಂಡ ಭಂಡರ ಕ್ಯಾಂಪ್ ಎಂದರೆ ನನಗೆ ಭಯ ಬಂದಿತ್ತು. 
ರಾತ್ರಿ ಜಯಂತ್ ರಿಂದ ಮೊಬೈಲ್ ಗೆ ಕರೆ ಬಂದಿತು, ಏನು ಸಾರ್ ವಿಷೇಶ ಎಂದೆ
"ನೀವು ನಾಳೆ ಬೆಳಗ್ಗೆ, ಮಲ್ಲೇಶ್ವರದ ಕ್ಯಾಂಪ್ ಗೆ ಬರಲ್ವ ?"  ಸಂಪದದ ಜಯಂತ್ ಕೇಳಿದರು.
"ಬೇಡ ಸಾರ್ ಒಮ್ಮೆ ನೋಡಿಯಾಯ್ತಲ್ಲ, ಪದೆ ಪದೆ ಏನಿರುತ್ತೆ ಹೋಗಲು" ಎಂದೆ 
"ಹಾಗಲ್ಲ, ಈ ಸಾರಿ ವಿಶೇಷವಿದೆ, ಅಂಡಾಂಡಭಂಡರ ಬುದ್ದಿ ಎಲ್ಲರಿಗು ಗೊತ್ತು, ಅವರು ಏನೊ ಮಾಡಿ ಹೊಟ್ಟೆ ತುಂಬಿಸಿಕೊಂಡು ಬಿಡುತ್ತಾರೆ, ಅದಕ್ಕಾಗಿ ನಾವು ಏನಾದರು ಮಾಡೋಣ ಎಂದು ಚಿಕ್ಕು (ಸಂಪದ ಚೇತನ್ ಕೂಡುವಳ್ಳಿ) ಕಾಲ್ ಮಾಡಿದ್ದರು. ಅವರೊಂದು ಪ್ಲಾನ್ ಮಾಡಿದ್ದಾರೆ, ಅಡುಗೆ ಎಲ್ಲ ಮುಗಿದ ಮೇಲೆ, ನಾವೆಲ್ಲ ಪಾತ್ರೆಯ ಹತ್ತಿರವೆ ಕಾವಲು ಕಾಯೋದು, ಅವರು ತಿನ್ನದಂತೆ ನೋಡಿಕೊಂಡು , ನಾವೆಲ್ಲ ಹಂಚಿಕೊಂಡು ತಿನ್ನೋದು ಒಟ್ಟೆಗೆ. ಈ ಸಾರಿ ಮೋಸ ಆಗಲ್ಲ" ಅಂತ ಏನೇನೊ ಹೇಳಿದರು. ಅದು ಹೇಗೊ ಕಡೆಗೆ ನಾನು ಜಯಂತ್ ಮಾತಿಗೆ ಮರುಳಾಗಿಬಿಟ್ಟೆ.
 
 ಬಾನುವಾರ ಮಲ್ಲೇಶ್ವರದ ವಿಳಾಸಕ್ಕೆ ತಲುಪುವಾಗ ಬೆಳಗ್ಗೆ ಒಂಬತ್ತರ ಸಮಯ. ಜಯಂತ್ ಹೊರಗೆ ನನಗಾಗಿ ಕಾಯುತ್ತಿದ್ದರು. ಜೊತೆಯಲ್ಲಿ ಚಿಕ್ಕು. ಮಲ್ಲೇಶ್ವರ ಚಲೋ ದಲ್ಲಿ ಸಿಕ್ಕಿದ್ದ ಅವರನ್ನು ಈಗ ನೋಡುತ್ತಿದ್ದೆ. ಮದುವೆಯ ನಂತರ ಎತಕ್ಕೊ ಸ್ವಲ್ಪ ಸಣ್ಣಗಾಗಿದ್ದರು.  ಅವರಿಗೆ ಹೇಗಾದರು ಸರಿ ಅನ್ನ ಸಾರು ಮಾಡುವುದು ಕಲಿತು ಹೆಂಡತಿಗೆ ಬಡಿಸುವ ಚಲ. ನನ್ನ ನೋಡುತ್ತ 
"ಹೇಗಿದ್ದೀರಿ ಪಾರ್ಥವ್ರೆ" ಅನ್ನುತ್ತ ನಕ್ಕರು. 
ಸುತ್ತ ನೋಡಿದೆ, ಅಂಡಾಂಡಭಂಡರ ಲಟಾರಿ ಸ್ಕೂಟರ್ ಗೋಡೆಗೆ ಒರಗಿ ನಿಂತಿತ್ತು, ಅದಕ್ಕೆ ಹಾಗೆ ನಿಲ್ಲಲ್ಲು ಸ್ಟಾಂಡ್ ಇಲ್ಲವಲ್ಲ, 
ಸರಿ ಎಲ್ಲರು ಒಳಗೆ ಹೋಗುವದೆಂದು ಅನ್ನುತ್ತಿರುವಾಗಲೆ ಮೊಬೈಲ್ ಗೆ ಕಾಲ್ ಬಂದಿತು. 
ಅ ಕಡೆಯಿಂದ ಆಸು ಹೆಗ್ಡೆಯವರು
"ಎಲ್ಲಿದ್ದೀರಿ , ಸ್ವಲ್ಪ ಮಾತಾಡಬೇಕು " ಅಂದರು , ಅದಕ್ಕೆ ನಾನು
"ಮಲ್ಲೇಶ್ವರದ ಅಂಡಾಂದ ಭಂಡ ಸಮ್ಮರ್ ಕ್ಯಾಂಪ್" ಎಂದೆ . 
ಅವರು ಅದೇನೊ ಬೇಸರದ ದ್ವನಿಯಲ್ಲಿ
"ನಿಮಗಿಂತ ಅ ತೆನಾಲಿ ರಾಮಕೃಷ್ಣನ ಬೆಕ್ಕಿಗೆ ಜಾಸ್ತಿ ಬುದ್ದಿ ಇದೆ ಬಿಡಿ" ಎನ್ನುತ್ತ ಕಾಲ್ ಕಟ್ ಮಾಡಿದರು. 
ಛೆ! ಇವರ ಮಾತೆ ಅರ್ಥವಾದದು , ನನಗು ತೆನಾಲಿ ರಾಮಕೃಷ್ಣನ ಬೆಕ್ಕಿತು ಎಲ್ಲಿಯ ಹೋಲಿಕೆ. 
ಆಸುರವರ ಮಾತು ಯಾವಾಗಲು ಹಾಗೆ ಪದ ಕಡಿಮೆ ಅರ್ಥ ಜಾಸ್ತಿ.
ಸರಿ ಒಳಗೆ ಹೊರಟೆವು. ಯಥಾ ಪ್ರಕಾರ ಸಭೆ ನಡೆದಿತ್ತು. ಎಲ್ಲರು ಸೇರಿದ್ದರು. ಈ ಬಾರಿ ಬೇರೆ ಬೇರೆ ಸಂಪದಿಗರು ಇರುವ ಹಾಗಿತ್ತು. ಸಪ್ತಗಿರಿ ಎಲ್ಲೊ ಕಾಣಲಿಲ್ಲ. ಜಯಂತ್ ಹತ್ತಿರ ಕೇಳಿದೆ 
"ಎಲ್ಲಿ ಸಪ್ತಗಿರಿ" ಎಂದು. ಅದಕ್ಕೆ ಅವರು 
" ಕಳೆದ ವಾರ ನಾವೆ ಮರಕ್ಕೆ ನೇತು ಹಾಕಿ ಬಂದಿದ್ದಿವಲ್ಲ , ಬಹುಷಃ ಸುದಾರಿಸಿಕೊಳ್ಳುತ್ತಿರಬಹುದು." ಎಂದರು. 
ಚಿಕ್ಕು ನಗುತ್ತಿದ್ದರು. 
ನೋಡುವಾಗ ಕವಿ ನಾಗರಾಜರು ಕಂಡರು. ನಾನು ಆಶ್ಚರ್ಯದಿಂದ ಹತ್ತಿರ ಹೋಗಿ
"ನೀವು ನಾಗರಾಜ್ ಸರ್ ಅಲ್ಲವೆ, ಇದೆನು ನೀವು ಬಂದಿರುವಿರಿ" ಎಂದೆ.
"ಹೌದು, ನಿನ್ನೆ ಚಕ್ರವರ್ತಿ ಯವರ ಮನೆಯಲ್ಲಿ , ಪಂಡಿತ ಸುಧಾಕರ ಚತುರ್ವೇದಿಯವರ ಸತ್ಸಂಗವಿತ್ತು ಬೆಂಗಳೂರಿಗೆ ಬಂದಿದ್ದೆ, ನಿಮ್ಮನ್ನೆಲ್ಲ ನೋಡಿದಂತಾಗುತ್ತೆ ಎಂದು ಬಂದೆ, ಮತ್ತೆ ಇಲ್ಲಿ ಅಂಡಾಂಡಭಂಡರು ಮಾಡಿಸುವ ಅಡುಗೆಯನ್ನು ಎಲ್ಲರಿಗು ಬಡಿಸುವ ಜವಾಬ್ದಾರಿ ನನ್ನದೆ. ಅದಕ್ಕೆ ಉಳಿದೆ " ಎಂದರು.
 ಈಗ ನನಗೆ ಸ್ವಲ್ಪ ದೈರ್ಯ ಬಂದಿತು. ಪರವಾಗಿಲ್ಲ, ನಾಗರಾಜರೆ ಹಾಗೆಂದ ಮೇಲೆ ಖಂಡೀತ, ನಮಗೆಲ್ಲ ಊಟದ ಯೋಗವಿದೆ ಅಂದುಕೊಂಡೆ. ನನ್ನನ್ನು ನೋಡಿ ಅಂಡಾಂಡಭಂಡರು ಸ್ಟೇಜಿನ ಮೇಲಿನಿಂದಲೆ ನಗುತ್ತಿದ್ದರು. ಅವರು ಮೈಕಿನಲ್ಲಿ ಹೇಳಿದರು
"ನೋಡಿ ನಮ್ಮ ಮಹಿಮೆ ಅರ್ಥ ಮಾಡಿಕೊಳ್ಳಿ, ಕಳೆದ ಬಾರಿ ನಮ್ಮ ಮೇಲೆ ಕೋಪಮಾಡಿ ಹೋದವರೆಲ್ಲ ಈ ಬಾರಿ ಮತ್ತೆ ಬಂದಿದ್ದಾರೆ, ದೇವರು ನಮ್ಮ ಮೂಲಕ ಅವರಿಗೆ ಆಶೀರ್ವಾದ ಮಾಡುತ್ತಿದ್ದಾರೆ," ಎಂದರು. 
ನನಗೆ ಎಂತದೊ ಮುಜುಗರ. ಇವರು ಈ ಬಾರಿಯು ಏನೊ ಸ್ಕೇಚ್ ಹಾಕಿರುತ್ತಾರೆ, ನಾನು ಚಿಕ್ಕು , ಜಯಂತ್ ಮಾತು ನಂಬಿ ಬರಬಾರದಿತ್ತು ಎನ್ನಿಸುತ್ತ ಇತ್ತು. 
ಸರಿ ಎಂದಿನಂತೆ ಅವರು ನಿಯಮಗಳನ್ನು ಹೇಳಿದರು. ಒಬ್ಬರು ಅಥವ ಇಬ್ಬರು ಸೇರಿ ಯಾವುದೆ ತಿನಿಸು ಮಾಡಬಹುದು. ಆದಷ್ಟು ಸಿಹಿ ತಿಂಡಿಗಳನ್ನು ಮಾಡಿ. ಎಲ್ಲರಿಗು ಬರುವಂತೆ ಹೆಚ್ಚಿನ ಪ್ರಮಾಣದಲ್ಲಿ ಮಾಡಿ.ಇತ್ಯಾದಿ. ಒಟ್ಟು ಇಪ್ಪತ್ತು ಜೊತೆಯವರು ಅಡುಗೆ ಮಾಡುವಷ್ಟು ಜಾಗ ವಿತ್ತು ಮೇಲಿನ ಹಾಲಿನಲ್ಲಿ. ಅಂಡಾಂಡಭಂಡರೆ ಸ್ವತಃ , ಅಡುಗೆ ತಯಾರಿಸುವ ವಿಧಾನಗಳಿದ್ದ ಪರಿವಿಡಿಯನ್ನು ವಿತರಿಸಿದರು. ನಾನು ಈ ಬಾರಿ ಮೈಸೂರುಪಾಕು ಮಾಡುತ್ತೇನೆ ಎಂದೆ. ಅಂ.ಭಂ.ರು ನಗುತ್ತ ಆಗಬಹುದು ಎಂದರು. ನಾನು ಅವರ ಪರಿವಿಡಿಯನ್ನು ತೆಗೆದು ಓದಿದಿ. ಅದರಲ್ಲಿ ಮೈಸೂರು ಪಾಕು ತಯಾರಿಸುವ ವಿಧಾನವಿತ್ತು. ನಾನು ಎಚ್ಚರಿಕೆಯಿಂದ ಓದಿಕೊಂಡೆ, ಸಕ್ಕರೆ ಹಾಗು ಕಡಲೆಹಿಟ್ಟು ಸಮಪ್ರಮಾಣ, ಮತ್ತು ತುಪ್ಪ ಅದರ ಎರಡುವರೆಯಿಂದ ಮೂರರಷ್ಟು. ಮಾಡುವ ವಿಧಾನವನ್ನು ಓದಿಕೊಂಡು ಪ್ರಾರಂಬಿಸಿದೆ. ನನ್ನ ಗಮನ ಪೂರ್ಣವಾಗಿ ತಯಾರಿಕೆಯ ಮೇಲಿತ್ತು. ಜಯಂತ್ ಪುಳಿಯೋಗರೆ ತಯಾರಿಸಿದರೆ, ಚಿಕ್ಕು ಮಾತ್ರ ಅನ್ನ ಸಂಬಾರ್ ತಯಾರಿಸುವ ಸಿದ್ದತೆಯಲ್ಲಿದ್ದರು. 
  ಈ ಬಾರಿ ಅದೇನೊ ಬಂದಿದ್ದ ಸಂಪದಿಗರೆಲ್ಲ ಹೊಸಮುಖ, ನಿಂಬೆ ಹಣ್ಣಿನ ಚಿತ್ರಾನ್ನ ಪಾನಕ ಮೊಸರನ್ನದ ತಯಾರಿ ನೋಡುವಾಗಲೆ ಅರ್ಥವಾಯಿತು ಓಹೊ ಹರೀಶ್ ಶರ್ಮರು ಎಂದುಕೊಂಡೆ, ಮುಖ ನೋಡೀ ನಕ್ಕರು , 
ನಾನು 'ಹಾಯ್' ಎಂದೆ. 
ನಾಗರಾಜರು ಮಾತ್ರ ಯಾವುದಕ್ಕು ಕೈಹಾಕದೆ  ಸುಮ್ಮನೆ ಕುಳಿತಿದ್ದರು. ಅವರು ನಿಶ್ಚಯ ಮಾಡಿದ್ದರು ಅಡುಗೆ ನಂತರ ಎಲ್ಲರಿಗು ಬಡಿಸುವುದು ನಾನು ಎಂದು. ಅಂ.ಭಂ. ಮಾತ್ರ ಆಗಾಗ್ಯೆ ಅವರನ್ನು ನೋಡಿ ನಗುತ್ತಿದ್ದರು. 
ಸುಮಾರು ಒಂದು ಘಂಟೆಹೊತ್ತಿಗೆ ಎಲ್ಲರ ಅಡುಗೆ ಮುಗಿಯಿತು. ಅಂ.ಭಂ.ರು ಎಲ್ಲರನ್ನು ಕುರಿತು
"ಈಗ ನೀವು ಮಾಡಿರುವ ಆಡುಗೆಯನ್ನು ಪಾತ್ರೆಯಲ್ಲಿ ಹಾಕಿ , ಇಲ್ಲಿ ಹಾಕಿರುವ ಟೇಬಲ್ ಮೇಲೆ ಸಾಲಾಗಿ ತಂದು ಜೋಡಿಸಿ, ನಂತರ, ಅಂ.ಭಂ. ಭಜನೆಯನ್ನು ಮುಗಿಸಿ ಎಲ್ಲರು ಒಟ್ಟೆಗೆ ಸ್ವೀಕರಿಸೋಣ, ನಿಮ್ಮೆಲ್ಲರಿಗೆ ಹಂಚುವ ಕೆಲಸವನ್ನು ನಾಗರಾಜರು ವಹಿಸಿಕೊಂಡಿದ್ದಾರೆ ಸಂತೋಷ" ಎಂದರು ನಗುತ್ತ.
ಸರಿ ಎಲ್ಲರು ಅವರುಗಳು ಮಾಡಿದ್ದ ಅಡುಗೆಯನ್ನು ತಂದು ಸಾಲಾಗಿ ಜೋಡಿಸಿದರು. ಚಿಕ್ಕು,ಜಯಂತ್ ಹಾಗು ನಾನು , ನಾವುಗಳು ಮಾಡಿದ್ದ ಅಡುಗೆಯನ್ನು ಪಕ್ಕ ಪಕ್ಕದಲ್ಲಿಯೆ ಇಟ್ಟು ನಿಂತೆವು.
ಅಂ.ಭಂ.ರು 
"ಸಂಪದ ಸ್ನೇಹಿತರೆ , ನೀವೆಲ್ಲ ಬೆಳಗಿನಿಂದ ಅಡುಗೆ ಮಾಡಿ ದಣಿದಿರುವಿರಿ. ಈಗ ಕೆಳಗೆ ಹೋಗಿ ತಣ್ಣನೆ ನೀರಿನಲ್ಲಿ ಮುಖ ತೊಳೆದು, ಪ್ರೆಶ್ ಆಗಿ ಬನ್ನಿ. ನಂತರ ಒಂದು ಪ್ರಾರ್ಥನೆ. ಆದಮೇಲೆ ಎಲ್ಲರು ಒಟ್ಟಿಗೆ ಕುಳಿತು ಭೋಜನ ಸ್ವೀಕರಿಸೋಣ, ಹಾಗೆ ನೀವು ಮನೆಯಿಂದ ತಂದಿರುವ ತಿಂಡಿಯ ಡಬ್ಬಿಗಳನ್ನು ಜೊತೆಗೆ ತನ್ನಿ, ಹೋಗಿ ನಿದಾನಕ್ಕೆ ಬನ್ನಿ ಪರವಾಗಿಲ್ಲ" ಎಂದರು.
ನನಗೆ ಅಂ.ಭಂ. ರ ಉಪಾಯ ಅರ್ಥವಾಗಿ ಹೋಗಿತ್ತು, ಎಲ್ಲರನ್ನು ಕೆಳಗೆ ಕಳುಹಿಸಿ ತಾವು ಎಲ್ಲರು ಮಾಡಿರುವ ತಿಂಡಿಗಳನ್ನು ಸ್ವಾಹ ಮಾಡಿ, ನಿದ್ದೆ ಮಾಡುವುದು. ಒಂದು ಸಾರಿ ಮೋಸ ಹೋಗಬಹುದು ನಾನು ಪದೆ ಪದೆ ಮೋಸಹೋಗಲು ಮೂರ್ಖನೆ?. ಎಲ್ಲರು ಕೆಳಗೆ ಹೊರಟರು ನಾವು ಅಂದರೆ ನಾನು,ಜಯಂತ್, ಚಿಕ್ಕು, ಹಾಗು ನಾಗರಾಜರು ಕೆಳಗೆ ಹೋಗದೆ ಅಲ್ಲಿಯೆ ಉಳಿದೆವು. 
"ಶಿಷ್ಯರೆ ನೀವೇಕೆ ಹೋಗುತ್ತಿಲ್ಲ" ಎಂದು ಅಂಡಾಂಡಭಂಡರು ಪ್ರಶ್ನಿಸಿದರು. 
"ನಮ್ಮ ಕೈ ಮೈಗಳೆನು ಕೊಳೆಯಾಗಿಲ್ಲ ಸ್ವಾಮಿ, ಸೆಕೆಯು ಇಲ್ಲ , ಅಲ್ಲದೆ ನಿಮ್ಮ ಸಾನಿದ್ಯದಲ್ಲಿ ತಣ್ಣಗಿದೆ, ಹಾಗಾಗಿ ಮುಖ ತೊಳೆಯಲು ಹೋಗಲಿಲ್ಲ" ಜಯಂತ್ ಉಪಾಯವಾಗಿ ಮಾತನಾಡಿದರು. 
ಅಂ.ಭಂ. ರು ನಗುತ್ತ 
"ಸರಿ ಸರಿ. ನೀವು ಅರಾಮವಾಗಿ ಕುಳಿತುಕೊಳ್ಳಿ, ನಾಗರಾಜರೆ ನೀವು ಕುಳಿತುಕೊಳ್ಳಿ ಬಡಿಸಲು ಇನ್ನು ತುಂಬಾ ಸಮಯವಿದೆ" ಎನ್ನುತ್ತ , ಹಾಗೆ ನನ್ನ ಕಡೆ ತಿರುಗಿ
"ಪಾರ್ಥರೆ ನಿಮ್ಮ ನಿದ್ದೆಯ ಸಮಸ್ಯೆ ಈಗ ಏನಾಯಿತು, ರಾತ್ರಿ ಸಮಯದಲ್ಲಿ ಕಣ್ತುಂಬ ನಿದ್ದೆ ಮಾಡುತ್ತ ಇದ್ದೀರ? ಹೇಗೆ ಮೊನ್ನೆ ಹೀಗೆ ನಿಮ್ಮ ನಿದ್ದೆ ಇಲ್ಲದ ರಾತ್ರಿಗಳ ಬರಹ ನೋಡಿದೆ" ಎಂದರು.
 ನಾನು ಉತ್ತರಿಸುವ ಮುಂಚೆಯೆ ಚಿಕ್ಕು 'ಆ,,,,,,,," ಎಂದು ದೊಡ್ಡದಾಗಿ ಆಕಳಿಸಿದರು. ಜಯಂತ ಅವರನ್ನು ನೋಡುತ್ತ ನಕ್ಕರು. 
ನಾನು
"ನಿಜ ಸ್ವಾಮಿ, ಅದೇಕೆ ನಿದ್ದೆಯದೆ ಸಮಸ್ಯೆ,  ರಾತ್ರಿಯೆಲ್ಲ ನಿದ್ದೆ ಬರುವದಿಲ್ಲ, ಹಗಲೆಲ್ಲ ನಿದ್ದೆ ಕಾಡುತ್ತದೆ " ಎಂದೆ. 
ತಲೆ ಮೇಲಿದ್ದ ಪ್ಯಾನ್ ತಿರುಗಲು ಪ್ರಾರಂಬಿಸಿ ತಣ್ಣನೆಯ ಗಾಳಿ ಬರುತ್ತಿತ್ತು. ಹಾಗೆ ಕುರ್ಚಿಯಲ್ಲಿ ಅರಾಮ ಕುಳಿತೆ. ಅಂ.ಭಂ.ರು
"ಪಾರ್ಥರೆ ನಾನು ಈಚೆಗೆ ಅಂತರ್ಜಾಲದಲ್ಲಿ ನಿದ್ದೆಯ ಬಗ್ಗೆ ಒಂದು ಲೇಖನ ಓದಿದೆ , ಅದ್ಯಾರೊ ಪುಣ್ಯಾತ್ಮ ಅವನ ಹೆಸರು " ಡಸ್ಟಿನ್ ಕರ್ಟಿಸ್  " ತುಂಬಾ ಚೆನ್ನಾಗಿ ಬರೆದಿರುವ. ಅದರ ವಿಷಯ ಕೇಳಿ ಎಂದು ಪ್ರಾರಂಬಿಸಿದರು.
"ನಾವು ಸಾಮಾನ್ಯವಾಗಿ ಇಪ್ಪತ್ತನಾಲ್ಕು ಗಂಟೆಗಳ ಜೀವನ ಚಕ್ರವನ್ನು ಅನುಸರಿಸಿ ನಿದ್ದೆ ಮಾಡುತ್ತೇವೆ, ಆದರೆ ಇಂದಿನ ಅಧುನಿಕ ಯುಗದಲ್ಲಿ ಅದನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು. ಅದನ್ನು ೨೮ ಗಂಟೆಗಳ ನಿದ್ದೆಯ ಚಕ್ರಕ್ಕೆ ಬದಲಾಯಿಸಿದರೆ ಉತ್ತಮ ಪರಿಣಾಮ ಇರುತ್ತದೆ" 
ನನಗೆ ಅರ್ಥವಾಗಲಿಲ್ಲ. 'ಅಲ್ಲ ದಿನದಲ್ಲಿ ಇರುವುದು ೨೪ ಗಂಟೆಗಳು ಅದೇಗೆ ೨೮ ಗಂಟೆಗಳ ಚಕ್ರ ಸಿಗುತ್ತದೆ ' ಅನ್ನುವ ಯೋಚನೆ ಜೊತೆಗೆ ಸ್ವಲ್ಪ ಕಣ್ಣು ಎಳೆಯಲು ಪ್ರಾರಂಬಿಸಿತು.
ಅವರು ಮುಂದುವರೆಸಿದರು " ಆತ ನಿದ್ದೆಯನ್ನು ಎರಡು ವಿಧವಾಗಿ ಗುರುತಿಸಿದ್ದಾರೆ, ಒಂದು 'ಕೋರ್ ನಿದ್ದೆ ' ಅಂದರೆ ದೀರ್ಘ ನಿದ್ದೆ ಅನ್ನೋಣ, ಮತ್ತೊಂದು 'ನ್ಯಾಪ್ ನಿದ್ದೆ'. ಅಂದರೆ ಅಲ್ಪ ಸಮಯ ಹತ್ತು- ಇಪ್ಪತ್ತು ನಿಮಿಷಗಳ ನಿದ್ದೆ. ಅಶ್ಚರ್ಯ ಎಂದರೆ ಎರಡು ತಾಸುಗಳು ಮಾಡುವ ದೀರ್ಘನಿದ್ದೆಯಷ್ಟೆ ಪರಿಣಾಮ ಇಪ್ಪತ್ತು ನಿಮಿಷಗಳು 'ನ್ಯಾಪ್  ನಿದ್ದೆ' ಯಲ್ಲಿ ದೊರೆಯುತ್ತದೆ, ಹಾಗಾಗಿ ಅವನು ಹೇಳುವ ಪ್ರಕಾರ ಎಂಟು ತಾಸುಗಳ ದೀರ್ಘ ನಿದ್ದೆಯನ್ನು ಎರಡು ತಾಸಿಗೆ ಇಳಿಸಿ, ಅದರ ಹಿಂದೆ ಮುಂದೆ ಎರಡು ನ್ಯಾಪ್ ನಿದ್ದೆಯನ್ನು ಅಳವಡಿಸಿಕೊಳ್ಳುವದರಿಂದ ಆರೋಗ್ಯ ಸುದಾರಿಸುತ್ತದೆ...." 
ಅವರು ಒಂದೆ ಸ್ವರದಲ್ಲಿ ಹೇಳುತ್ತಿರುವದರಿಂದ ನನಗೆ ನಿದ್ದೆಯನ್ನು ತಡೆಯಲಾರದೆ ನಿದಾನಕ್ಕೆ ಕುರ್ಚಿಯ ಮೇಲೆಯೆ ನಿದ್ದೆಗೆ ಜಾರುತ್ತಿದ್ದೆ, 
ಅಲ್ಲ ಇವರನ್ನು ಮಾಡಿರುವ ಆಡುಗೆ ತಿನ್ನದಂತೆ ಕಾಯುವುದು ಹೇಗೆ? ಪ್ರಶ್ನೆ ತಲೆಗೆ ಬಂದಿತು, ಅಯ್ಯೊ ಅದರಲ್ಲೇನು ನನಗೆ ನಿದ್ದೆ ಬಂದರೇನು, ಜಯಂತ್ ಹಾಗು ಚಿಕ್ಕು ಇದ್ದಾರೆ, ನಾಗರಾಜರಂತು ನಿದ್ದೆ ಮಾಡುವುದೆ ಇಲ್ಲ ಎಂಬ ಸಮಾದಾನ ಸಿಗುತ್ತಿರುವಂತೆ, ದೇಹ ನಿದ್ದೆಗೆ ಜಾರುತ್ತಿತ್ತು. 
ಅಂಡಾಂಡ ಭಂಡರು ಮುಂದುವರೆಸಿದ್ದರು ತಮ್ಮ ಮಾತನ್ನು 
"ಅಲ್ಲದೆ.. ನಾವು ನಿದ್ದೆಯ ಸಮಯದಲ್ಲಿ ಸಹ....." ಮುಂದಿನದೆಲ್ಲ ನನಗೆ ಕೇಳಿಸಲಿಲ್ಲ , 
ದೇಹ ಸುಖ ನಿದ್ದೆಗೆ ಜಾರಿತು, ತಲೆಯನ್ನು ಹಿಂದಕ್ಕೆ ಒರಗಿಸಿದೆ.
.
.
.
 ಸುತ್ತಲು ಎಲ್ಲರು ಮಾತನಾಡುತ್ತಿರುವುದು ಕೇಳಿಸಿತು, 'ಓಹ್... ಕುಳಿತಲ್ಲೆ ನಿದ್ದೆಗೆ ಜಾರಿದೆನಲ್ಲ' ಅಂತ ನಾಚಿಕೆ ಮುಜುಗರ ಅನ್ನಿಸಿ ತಕ್ಷಣ ಕಣ್ಣುಬಿಟ್ಟು ನೇರವಾಗಿ ಕುಳಿತೆ. ಎದುರಿಗೆ ನೋಡಿದರೆ ಅಂಡಾಂಡಭಂಡರು ಕಾಣಿಸಲಿಲ್ಲ. ಪಕ್ಕಕ್ಕೆ ತಿರುಗಿ ನೋಡಿದೆ, ಜಯಂತ್ ಹಾಗು ಚಿಕ್ಕು ಸಹ ನಿದ್ದೆಗೆ ಜಾರಿದ್ದಾರೆ,  ಓ .. ಇವರನ್ನು ನಂಬಿದರೆ ಅಷ್ಟೆ. ಎದುರಿಗೆ ನಾಗರಾಜರನ್ನು ನೋಡಿದೆ ಅವರು ಸಹ ಕುಳಿತಲ್ಲೆ ನಿದ್ದೆ!. 
"ಏನೊ ಮೋಸವಾಗಿದೆ" ಅನ್ನಿಸಿತು.
ಜಯಂತ್ ಹಾಗು ಚಿಕ್ಕುರನ್ನು ಕೂಗಿ ಎಬ್ಬಿಸಿದೆ, ಅವರ ಕೈ ಹಾಗು ಮುಖವೆಲ್ಲ ಗಲೀಜಾಗಿತ್ತು, ನೋಡಿದರೆ ಕೈಯೆಲ್ಲ ಮೊಸರನ್ನ ಮೆತ್ತಿಕೊಂಡಿದೆ. 
ನಾನು ಅವರನ್ನು ನೋಡುತ್ತಿರುವಂತೆ ಅವರು ನನ್ನನ್ನು ನೋಡುತ್ತಿರುವುದು ಕಾಣಿಸಿತು. ಮುಖ ಒರಸಿಕೊಳ್ಳಲು ಹೋದೆ , ನನ್ನ ಕೈಗೆ ಚಿತ್ರಾನ್ನ ಮೆತ್ತಿ ಕೊಂಡಿದೆ. ಇದೇನು ಸ್ವಚ್ಚವಾಗಿತ್ತಲ್ಲ ಪುನಃ ಏಕೆ ಕೈ ಮುಖಗಳೆಲ್ಲ ಗಲೀಜಾಗಿದೆ ಅರ್ಥವಾಗಲಿಲ್ಲ. 
 
ಕೆಳಗೆ ಹೋಗಿ ಬಂದ ಸಂಪದಿಗರೆಲ್ಲ ನಮ್ಮನ್ನೆ ನೋಡುತ್ತ ನಿಂತರು. ಅಷ್ಟರಲ್ಲಿ, ಅಂ.ಭಂ. ರ ದ್ವನಿ ಕೇಳಿಸಿತು.
"ಶಿಷ್ಯರೆ ಎಲ್ಲರು ಸಿದ್ದವಾಗಿ ಬಂದಿರ, ಈಗ ಭಜನೆ ಮಾಡೋಣ ನಂತರ ಊಟ" ಎಲ್ಲರು ಹಿಂದೆ ತಿರುಗಿನೋಡಲು, ಅಂ.ಭಂ.ರು ಶುಬ್ರವಾಗಿ ಕೈಕಾಲು,ಮುಖ ತೊಳೆದು, ಹೊಸದಾಗಿ ವಿಭೂತಿ ಹಚ್ಚಿ ಬಂದು ನಿಂತಿದ್ದರು. 
"ನನಗು ಮುಖ ತೊಳೆಯಬೇಕೆನಿಸಿತು, ಹಾಗಾಗಿ ನಾನು ಕೆಳಗೆ ಬಂದು ಫ್ರೆಶ್ ಆಗಿ ಬಂದೆ" ಎನ್ನುತ್ತ ಎಲ್ಲರು ನಮ್ಮ ಕಡೆ ನೋಡುವದನ್ನು ಕಂಡು 
"ಏಕೆ ಇವರ್ಯಾರು ಕೆಳಗೆ ಬರಲೆ ಇಲ್ಲ ಇಲ್ಲಿ, ಏನು ಮಾಡುತ್ತಿದ್ದರು " ಎನ್ನುತ್ತ ಹತ್ತಿರ ಬಂದು ನಮ್ಮ ಅವಸ್ಥೆ ಕಂಡು ನಗುತ್ತ ನಿಂತರು.
ಉಳಿದ ಸಂಪದಿಗರೆಲ್ಲ, ಸಂಶಯಪಡುತ್ತ ಪಾತ್ರೆಗಳನ್ನೆಲ್ಲ ತೆಗೆದು ನೋಡುತ್ತ ನಮ್ಮ ಅವಸ್ಥೆಯನ್ನು ಕಾಣುತ್ತ, ನಿರ್ದರಿಸಿದರು ಪಾತ್ರೆಗಳಲ್ಲಿ ಇದ್ದ ತಿಂಡಿ ಅಡುಗೆ ಯನ್ನು ನಾವು ಮೂವರು ಅಂದರೆ ಚಿಕ್ಕು, ಜಯಂತ್ ಹಾಗು ನಾನು ಮುಗಿಸಿದ್ದೇವೆ ಅಂದುಕೊಂಡು
"ಅಂ.ಭಂ.ಸ್ವಾಮಿಗಳೆ ನಾವೆಲ್ಲರು ಕೆಳಗೆ ಹೋದಾಗ ಈ ಮೂವರೆ ಎಲ್ಲ ಮುಗಿಸಿದ್ದಾರೆ " ಎಂದರು ಕೋಪದಿಂದ. 
ನನಗೆ ಅಘಾತವಾಗಿತ್ತು, ಆಗಿನ್ನು ನಿದ್ದೆಯಿಂದ ಎದ್ದಿರುವುದು, ಮೈಮುಖವೆಲ್ಲ ತಿಂಡಿ ಮೆತ್ತಿರುವುದು, ಎದುರಿಗೆ ಇದ್ದ ಜನ ಎಲ್ಲ ನೋಡುತ್ತ ನನಗೆ ಏನು ಮಾತನಾಡುವುದು ಹೊಳೆಯದೆ ನಿಂತೆ. ಜಯಂತ್ ಹಾಗು ಚಿಕ್ಕು ಸಹ ಹಾಗೆ , ಎಚ್ಚೆತ್ತ ನಾಗರಾಜರು ಏನು ತೋಚದೆ ನಿಂತಿದ್ದರು
ಆಗ ಅಂಡಾಂಡಭಂಡ ಸ್ವಾಮಿಗಳು
"ಪ್ರಿಯ ಶಿಷ್ಯರೆ ನೋಡಿದಿರ ಈ ಪಾರ್ಥಸಾರಥಿ ಹಾಗು ಗುಂಪಿನ ಚಿತಾವಣೆಯನ್ನು, ಎಲ್ಲ ಅವರೆ ತಿಂದು ನಮ್ಮ ಮೇಲೆ ಆರೋಪ ಹಾಕಲು ಪ್ರಯತ್ನಿಸಿದ್ದಾರೆ, ಕಳೆದ ಬಾರಿ ಬನಶಂಕರಿಯ ಸಮ್ಮರ್ ಕ್ಯಾಂಪ್ ನಲ್ಲು ಹೀಗೆ ಆಯಿತು, ನಮ್ಮ ಮೇಲೆ ಅಪಾದನೆ ಹೊರಸಲಾಯಿತು, ನಾವು ಅದನ್ನು ಶಿವ ವಿಷ ಸ್ವೀಕರಿಸಿದಂತೆ ತೆಗೆದುಕೊಂಡು ಮೌನವಾಗಿದ್ದೆವು. ಈ ಸಾರಿ ನೇರವಾಗಿ ನಿಮ್ಮ ಕಣ್ಣಿಗೆ ಬಿದ್ದಿದೆ ನೋಡಿ. ಈ ಸಾರಿಯು ಇವರ ತಪ್ಪು ನಿಮಗೆ ಕಾಣದಂತೆ ಇರಬೇಕೆಂದು ನಾವು ಬಯಸಿದ್ದೇವು. ಆದರೆ ಇವರ ಇನ್ನೊಂದು ತುಂಟತನ ನಮ್ಮ ಸಹನೆ ಕೆಡುವಂತೆ ಮಾಡಿದೆ. ನಮ್ಮ ಆತ್ಮೀಯ ಹಾಗು ಹೃದಯಸ್ಥರಾದ ಪ್ರಿಯ ಶಿಷ್ಯ ಸಪ್ತಗಿರಿಯವರನ್ನು ಏನೊ ನೆಪದಲ್ಲಿ ದೆವ್ವ ತೋರಿಸುವದಾಗಿ ನಂಬಿಸಿ ಊರ ಹೊರಗೆ ಕರೆದೋಯ್ದು, ದೊಡ್ಡ ಆಲದಮರಕ್ಕೆ ಅವರನ್ನು ತಲೆಕೆಳಗಾಗಿ ನೇತಾಡಿಸಿದ್ದಾರೆ, ಹಾಗು ಮತ್ತೊಬ್ಬ ಶಿಷ್ಯ ಸತೀಶರ ಕೈಗಳನ್ನು ಸೇರಿಸಿ ಕಟ್ಟಿಹಾಕಿ ಬಂದಿದ್ದಾರೆ. ಅರ್ದರಾತ್ರಿಯಲ್ಲಿ ಪಾಪ ಅವರ ಆರ್ತನಾದ ನಮ್ಮ ಕಿವಿಯನ್ನು ತಲುಪಿ ನಾವು ಹೋಗಿ ಕಾಪಾಡಬೇಕಾಯಿತು. ಇವರ ತುಂಟತನ ಹಾಗು ಅಪರಾದ ಸಹಿಸಲು ಇನ್ನು ನಮ್ಮಿಂದ ಸಾದ್ಯವಿಲ್ಲ, ಇವರು ತಮ್ಮ ತಪ್ಪನ್ನು ಅರ್ಥಮಾಡಿಕೊಳ್ಳುವವರೆಗು ನಮ್ಮ ಶಿಷ್ಯಗಣದಿಂದ ಇವರನ್ನು ಹೊರಹಾಕುತ್ತಿದ್ದೇವೆ" ಎಂದರು.
ಅಲ್ಲಿದ್ದ ಎಲ್ಲರು ಅಂಡಾಂಡಭಂಡರಿಗೆ ಜೈ ಎನ್ನುತ್ತ ಕೂಗುತ್ತಿದ್ದಾಗ ನಾನು ಅಲ್ಲಿದ್ದರೆ ಮತ್ತೆ ಅಪಾಯವೆಂದೆ ಭಾವಿಸಿ, ಮೆಲ್ಲಗೆ ಜಯಂತ್ ಹಾಗು ಚಿಕ್ಕುಗೆ ಸನ್ನೆ ಮಾಡುತ್ತ ಕೆಳಗೆ ಬಂದೆನು. 
 
ನನಗೆ ಅವರ 'ಕತ್ತರಿ' ಅರ್ಥವಾಗಿತ್ತು, ಎರಡು ಕಡೆಯು ನನಗೆ ಮಿಸುಕಲು ಆಗದಂತೆ ಮಾಡಿ, ಅವರು ಮಾತ್ರ ಸೊಗಸಾಗಿ ಊಟ ಭಾರಿಸಿದ್ದರು.
ಈಗ ನನಗೆ ಆಸುಹೆಗ್ಡೆಯವರು ಹೇಳಿದ ಮಾತು ನೆನಪಿಗೆ ಬಂದಿತು. "ನಿಮಗಿಂತ ತೆನಾಲಿ ರಾಮಕೃಷ್ಣನ ಬೆಕ್ಕೆ ಎಷ್ಟೋ ವಾಸಿ " 
 
ಕೆಳಗೆ ಬಂದಾಗ ಚಿಕ್ಕು "ಏನ್ ಪಾರ್ಥವ್ರೆ ಹೀಗೆ ಆಗೋಯ್ತು, ಹೋಗಲಿ ಬಿಡಿ ಇಲ್ಲೆ ಹಳ್ಳಿಮನೆಯಲ್ಲಿ ಏನಾದರು ತಿಂದು ಹೋಗೋಣ" ಎಂದರು, 
ಜಯಂತ್ ಸಪ್ಪಗಾಗಿದ್ದರು, ನನಗೆ ಕೋಪ ಜಾಸ್ತಿಯಾಯ್ತು , ಏನು ಮಾಡಲು ತೋಚದೆ ಅಂಡಾಂಡಭಂಡರ ಲಟಾರಿ ಸ್ಕೂಟರ್ ಸೀಟಿನ ಮೇಲೆ ಕೈನಿಂದ ಬಲವಾಗಿ ಗುದ್ದಿದ್ದೆ. ಅದಕ್ಕೆ ಏನಾಯಿತೊ ಕಾಣೆ. ಸುಮ್ಮನಿದ್ದ ಸ್ಕೂಟರ್, ಸ್ಟಾರ್ಟ್ ಮಾಡುವ ಚಾವಿ ಇಲ್ಲದಿದ್ದರು ಸ್ಟಾರ್ಟ್ ಆಯಿತು, ಅದರ ಕರ್ಕಶ ಶಬ್ದ ಅಲ್ಲೆಲ್ಲ ತುಂಬಿತು. ಗಾಭರಿಬಿದ್ದ ಜಯಂತ್ 
'ಸಾರ್ ಇನ್ನು ಇದರ ಶಬ್ದಕ್ಕೆ ಎಲ್ಲ ಕೆಳಗೆ ಬರುತ್ತಾರೆ' ಎನ್ನುತ್ತ ಅದನ್ನು ಆಫ್ ಮಾಡೋದು ಹೇಗೆ ಅಂತ ಹುಡುಕುತ್ತಲಿದ್ದರು, ಅವರು ಸೀಟಿನ ಹತ್ತಿರ ಕೈ ಆಡಿಸಿದರು, ಆಗ ಸ್ಕೂಟರ್ ನ ಹಾರ್ನ್ ಇದ್ದಕಿದ್ದಂತೆ ಜೋರಾಗಿ "ಕೂಊಊಊಊಊಊಊಊಊಊ" ಎನ್ನುತ್ತ ಕೂಗಲು ಮೊದಲಿಟ್ಟಿತ್ತು, 
ಒಳ್ಳೆ ಪ್ಯಾಕ್ಟರಿ ಸೈರನ್ ತರ ಶಬ್ದ ಬರುತ್ತಿತ್ತು. 
ನಮಗೆ ಏನು ಮಾಡಲು ತೋಚಲಿಲ್ಲ ಆಗ ನಾನು 'ಜಯಂತ್ ಮೊದಲು ಇಲ್ಲಿಂದ ಓಡೋಣ, ಚಿಕ್ಕು ನೀವು ಹೊರಡಿ' ಎನ್ನುತ್ತ , ನನ್ನ ಸ್ಕೂಟರ್ ಹತ್ತಿ ಹೊರಟೆ. 
ಮೇಲಿನಿಂದ ಭಜನೆಯ ಶಬ್ದ ಜೋರಾಗಿ ಕೇಳುತ್ತಿತ್ತು. 
 
ಡೊಂಗಿ ದಾಸರಿವರು
ಕಲಿಯುಗ ಡೊಂಗಿದಾಸರಿವರು||
ಹಣೆಯಲಿ ಉದ್ದುದ್ದ ನಾಮವ ತೀಡುತ
ಪರಹಿತ ಚಿಂತನೆ ಬಾಯಲಿ ಹಾಡುತ
ಮನದಲಿ ಲೋಭದ ಸ್ವಾರ್ಥದಿ ತೇಲುತ
ಒಳಗೊಂದು ಹೊರಗೊಂದು ಕಾಯಕ ಚರಿಸುವ ||ಡೊಂಗಿ ದಾಸ.||
 
ನಡೆಯಂತೆ ನುಡಿಯದು ಇರಬೇಕೆನ್ನುತ
ನಡೆ ನುಡಿ ಇಬ್ಬಗೆ ತುಂಬಿ ತೋರುತ
ಮಾತಿನ ಅರಮನೆ ಬೆರಗನು ಮೆರೆಸುತ
ಬಾಳಿನ ತತ್ವವ ಗಾಳಿಗೆ ತೂರುವ ||ಡೊಂಗಿ ದಾಸ.||
-- ಡೊಂಗಿ ದಾಸರಿವರು
ಕಲಿಯುಗ ಡೊಂಗಿದಾಸರಿವರು||
ಹಣೆಯಲಿ ಉದ್ದುದ್ದ ನಾಮವ ತೀಡುತ
ಪರಹಿತ ಚಿಂತನೆ ಬಾಯಲಿ ಹಾಡುತ
ಮನದಲಿ ಲೋಭದ ಸ್ವಾರ್ಥದಿ ತೇಲುತ
ಒಳಗೊಂದು ಹೊರಗೊಂದು ಕಾಯಕ ಚರಿಸುವ ||ಡೊಂಗಿ ದಾಸ.||
 
ನಡೆಯಂತೆ ನುಡಿಯದು ಇರಬೇಕೆನ್ನುತ
ನಡೆ ನುಡಿ ಇಬ್ಬಗೆ ತುಂಬಿ ತೋರುತ
ಮಾತಿನ ಅರಮನೆ ಬೆರಗನು ಮೆರೆಸುತ
ಬಾಳಿನ ತತ್ವವ ಗಾಳಿಗೆ ತೂರುವ ||ಡೊಂಗಿ ದಾಸ.||
=============================================================
 
ಸೂಚನೆ: 
ಸಮ್ಮರ್ ಕ್ಯಾಂಪ್ ಸರಣಿ ಮುಗಿಯಿತು. 
Rating
No votes yet

Comments