ಪ್ರತೀಕ್ಷೆ

ಪ್ರತೀಕ್ಷೆ

ಕವನ

 ಆಕಾಶದ ಹನಿಗಾಗಿ ಕಾತರದಿಂದ

ಕೈ ಬಾಯಿಗಳನ್ನಗಲಿಸಿ ಚಾಚಿರುವೆ ಕಾದಿರುವೆ

ಹೇಗೋ ಸಾಗಬೇಕಲ್ಲ ಬಾಳಬಂಡಿ!

ಮೋಡವಿಲ್ಲದ ನಭದಲ್ಲಿ-ಎಲ್ಲೋ ಒಂದೆಡೆ

ಉಳಿದಿರುವುದೇನೋ 

ಜೀವಜಲದ ಸೆಲೆ-ನೆಲೆ?

ಬಿದ್ದೀತು-ಬಿದ್ದೀತು-

ಬಿಟ್ಟಿಲ್ಲ ಆಸೆ

ಸುತ್ತಲಿನ ನೆಲಕೆ ಹಸಿರು ಹೊದಿಕೆ

ಮೈಗೆ ಎಳೆಯ ತಳಿರಿನ ರವಿಕೆ

ಅಲಂಕಾರದ ಈ ಕನಸು, ಕನವರಿಕೆ

ನನಸಾಗುವ ಅಮೃತಗಳಿಗೆ

ಎಂದು ಬರುವುದೋ-

ಎಂದಾದರೂ ಬರದೇ ಇರಲಾರದು

ಆ ಮಧುರ ಕ್ಷಣವು

ನುಡಿಯುವೆನು  ಕ್ಷೀಣ

 ದನಿಯಲ್ಲಿ-

ಆದರೂ ಸ್ಪಷ್ಟವಾಗಿ!

Comments