ಸ೦ಜು ಮತ್ತು ಪ್ರಿಯ (ಕಥೆ)
ಅರ್ಧ ಗಂಟೆಯಿಂದ ಮೊಬೈಲ್ ಒಂದೇ ಸಮನೆ ಹೊಡೆದು ಕೊಳ್ಳುತ್ತಿತ್ತು. ಮೀಟಿಂಗ್ ನಲ್ಲಿ ಇದ್ದಿದ್ದರಿಂದ ಫೋನನ್ನು ಎತ್ತಿರಲಿಲ್ಲ. ಮೀಟಿಂಗ್ ಮುಗಿಸಿಕೊಂಡು ಆಚೆ ಬಂದು ಫೋನ್ ನೋಡಿದರೆ ಹೆಸರಿರದ ಯಾವುದೋ ನಂಬರಿನಿಂದ ಕರೆ ಬಂದಿತ್ತು. ಒಂದು ಕ್ಷಣಕ್ಕೆ ಆ ನಂಬರ್ ಯಾವುದೆಂದು ನೆನಪಾಗಲಿಲ್ಲ. ಆದರೆ ಎಲ್ಲೋ ನೋಡಿದ ನಂಬರ್ ಇದ್ದ ಹಾಗೆ ಇದೆ ಎನಿಸುತ್ತಿತ್ತು. ಅಷ್ಟರಲ್ಲಿ ಹಿಂದಿನಿಂದ ಯಾರೋ ಪ್ರಿಯ ಎಂದು ಕರೆದಂತಾಯಿತು ತಿರುಗಿ ನೋಡಿದರೆ ಮ್ಯಾನೇಜರ್ ನಿಂತಿದ್ದರು. ನಾನು ಮೊಬೈಲ್ ಪಕ್ಕಕ್ಕಿಟ್ಟು ಎಸ್ ಸಾರ್ ಎಂದೆ. ಪ್ರಿಯ ಯು ಡಿಡ್ ಎ ಗ್ರೇಟ್ ಜಾಬ್ ಎಂದರು. ನಾನು ಥ್ಯಾಂಕ್ಸ್ ಎಂದೆ. ಹಾ ಪ್ರಿಯ ಹಾಗೆ ಹೊಸ ಟ್ರೈನಿ ಬಂದಿದ್ದಾರೆ ಸಂಜಯ್ ಎಂದು ಅವರಿಗೆ ಸ್ವಲ್ಪ ಟೀಮ್ ಪರಿಚಯ ಮಾಡಿಸಿಬಿಡಿ ಎಂದು ಹೊರಟರು. ಸಂಜಯ್ ಎಂದ ತಕ್ಷಣ ಮೊಬೈಲ್ ನಲ್ಲಿದ್ದ ನಂಬರ್ ನೆನಪಾಯಿತು. ಹೌದು ಇದು ಸಂಜಯ್ ದೆ ನಂಬರ್. ಅದೇ ಸಂಜಯ್ ಮತ್ತೆ ಬಂದನ ಎಂದು ಆಚೆ ಕೂತಿದ್ದ ಹುಡುಗನ ಕಡೆ ನೋಡಿದೆ. ಅಲ್ಲ ಆ ಸಂಜಯ್ ಅಲ್ಲ ಎಂದು ಖಾತ್ರಿ ಆಯಿತು. ಆದರೆ ಇವನೇಕೆ ಮತ್ತೆ ಫೋನ್ ಮಾಡುತ್ತಿದ್ದಾನೆ. ಅದೂ ಎರಡು ವರ್ಷದ ನಂತರ ಎಂದುಕೊಳ್ಳುತ್ತಿದ್ದ ಹಾಗೆ ಮತ್ತೆ ಮೊಬೈಲ್ ರಿಂಗಾಯಿತು. ಫೋನ್ ಎತ್ತಲೋ ಬೇಡವೋ ಎಂದುಕೊಂಡು ಎತ್ತಿದೆ.
ಹಾಯ್ ಪ್ರಿಯ...ನಾನು ಗೊತ್ತಿದ್ದರೂ ಹಲೋ ಯಾರು ಎಂದೆ..ಪ್ರಿಯ ನಾನು ಸಂಜಯ್ ಮಾತಾಡುತ್ತಿರುವುದು. ಯಾವ ಸಂಜಯ್....ಪ್ರಿಯ ನನಗೆ ಗೊತ್ತು ನಿನಗೆ ನನ್ನ ಮೇಲೆ ಎಷ್ಟು ದ್ವೇಷ ಇದೆ ಎಂದು ಅದು ಸಹಜ ನಾನು ನಿನಗೆ ಮಾಡಿದ ದ್ರೋಹಕ್ಕೆ ನಿನ್ನ ದ್ವೇಷ ಸಹಜ. ಆದರೆ ನೆನ್ನೆ ಮೇಲ್ ನಲ್ಲಿ ನಿನ್ನ ಮದುವೆಯ ಆಹ್ವಾನ ಪತ್ರಿಕೆ ತಲುಪಿತು ಬಹಳ ಸಂತೋಷ ಆಯಿತು. ಪ್ರಿಯ ನಿನಗೇನೂ ಅಭ್ಯಂತರ ಇಲ್ಲದಿದ್ದರೆ ನಿನ್ನನ್ನು ಭೇಟಿ ಮಾಡಿ ಸ್ವಲ್ಪ ಮಾತಾಡಬಹುದ? ಪ್ಲೀಸ್ ಇಲ್ಲ ಎನ್ನಬೇಡ. ಸಂಜಯ್ ನಾನು ನಿನಗೆ ಆಹ್ವಾನ ಪತ್ರಿಕೆ ಕಳಿಸಿದ ಉದ್ದೇಶ ಏನು ಗೊತ್ತ ನನಗೆ ನಿನಗಿಂತ ಒಳ್ಳೆಯ ಹುಡುಗ ಸಿಕ್ಕಿದ್ದಾನೆ. ನಾನು ನಿನ್ನನ್ನು ಮರೆತು ಹಾಯಾಗಿ ಮದುವೆ ಆಗುತ್ತಿದ್ದೇನೆ ಎಂದು ತಿಳಿಸಲಷ್ಟೇ ಕಳುಹಿಸಿದ್ದು. ಇನ್ಯಾವುದೇ ಉದ್ದೇಶದಿಂದಲ್ಲ. ನನಗೆ ನಿನ್ನ ಮುಖ ಸಹ ನೋಡುವ ಉದ್ದೇಶ ಇಲ್ಲ. ದಯವಿಟ್ಟು ಮತ್ತೆ ಮತ್ತೆ ನನಗೆ ತೊಂದರೆ ಕೊಡಬೇಡ ಎಂದು ಕಾಲ್ ಕಟ್ ಮಾಡಿದೆ.
ನೆನಪುಗಳ ಸುರುಳಿ ಬಿಚ್ಚಿಕೊಂಡಿತು. ಮೂರು ವರ್ಷಗಳ ಹಿಂದೆ ಆಗಷ್ಟೇ ಇಂಜಿನಿಯರಿಂಗ್ ಮುಗಿಸಿ ಹೊಸದಾಗಿ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಮೊದಲ ಕೆಲಸವಾದ್ದರಿಂದ ಸಹಜವಾಗೇ ಸ್ವಲ್ಪ ಭಯವಿತ್ತು. ಆದರೆ ಸಂಜಯ್ ನನ್ನಲ್ಲಿದ್ದ ಆ ಭಯವನ್ನು ದೂರ ಮಾಡಿ ಧೈರ್ಯ ತುಂಬಿದ. ಸಂಜಯ್ ತುಂಬಾ ಸುಂದರ, ಆಕರ್ಷಕ, ಚುರುಕಾದ ವ್ಯಕ್ತಿತ್ವ ಹೊಂದಿದ ಹುಡುಗ. ಮೊದಲ ನೋಟದಲ್ಲೇ ಯಾರನ್ನಾದರೂ ಸೆಳೆದುಬಿಡುವ ಆಕರ್ಷಣೆ ಇತ್ತು ಅವನ ಕಣ್ಣಲ್ಲಿ. ಇಡೀ ಕಂಪನಿ ಯಲ್ಲಿದ್ದ ಬಹಳಷ್ಟು ಹುಡುಗಿಯರು ಅವನ ಹಿಂದೆ ಬಿದ್ದಿದ್ದರೂ ಅವನು ಮಾತ್ರ ಯಾರಿಗೂ ಸೋತಿರಲಿಲ್ಲ. ಎಲ್ಲರನ್ನೂ ಸ್ನೇಹದಿಂದಲೇ ಕಾಣುತ್ತಿದ್ದ. ಒಂದು ರೀತಿಯಲ್ಲಿ ಸಂಜಯ್ ಎಲ್ಲರಿಗೂ ಬೇಕಾದ ವ್ಯಕ್ತಿ ಆಗಿದ್ದ. ಕೆಲಸದಲ್ಲೂ ಅಷ್ಟೇ ನಿಷ್ಣಾತನಾಗಿದ್ದ. ಕೆಲವೇ ದಿನಗಳಲ್ಲಿ ಸಂಜಯ್ ಬಹಳ ಆಪ್ತನಾಗಿಬಿಟ್ಟಿದ್ದ.
ಅದೇನೋ ಗೊತ್ತಿಲ್ಲ ಬೇರೆಲ್ಲರಿಗಿಂತಲೂ ಸಂಜಯ್ ನನ್ನ ಜೊತೆ ಹೆಚ್ಚು ಹತ್ತಿರವಾಗತೊಡಗಿದ್ದ. ನನಗೂ ಅವನ ಸ್ನೇಹ ಬಹಳ ಖುಷಿ ಕೊಟ್ಟಿತ್ತು. ಬೇರೆ ಹುಡುಗಿಯರಿಗೆ ಸ್ನೇಹ ಇಷ್ಟ ಆಗದೆ ಕೆಲವರು ನನ್ನ ಬಳಿ ಬಂದು ಸಂಜಯ್ ಬಗ್ಗೆ ಕೆಟ್ಟದಾಗಿ ಹೇಳಿದ್ದರು. ಆದರೆ ನನಗೆ ಸಂಜಯ್ ಬಗ್ಗೆ ಅಪಾರ ನಂಬಿಕೆ ಇತ್ತು. ಆದ್ದರಿಂದ ಅವರ್ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ನನ್ನ ಪಾಡಿಗೆ ಸಂಜಯ್ ಜೊತೆ ಸ್ನೇಹವನ್ನು ಮುಂದುವರಿಸಿದ್ದೆ. ದಿನ ಕಳೆದಂತೆ ನಮ್ಮಿಬ್ಬರ ಸ್ನೇಹ ಬಲವಾಗುತ್ತ ಹೋಯಿತು.
ಅಂದು ಪ್ರೇಮಿಗಳ ದಿನ ಇತ್ತು. ನಾನು ಎಂದಿನಂತೆ ಆಫೀಸಿಗೆ ಹೋಗಿ ನನ್ನ ಕ್ಯುಬಿಕಲ್ ಬಳಿ ಹೋದಾಗ ಅಲ್ಲಿ ಮೇಜಿನ ಮೇಲೆ ಒಂದು ಕೆಂಪು ಡಬ್ಬ ಇತ್ತು. ಅದೊಂದು ಗಿಫ್ಟ್ ಬಾಕ್ಸ್ ಆಗಿತ್ತು. ಅದರ ಮೇಲೆ ಹೃದಯದ ಚಿತ್ರಗಳು ಇದ್ದವು. ಜೊತೆಯಲ್ಲಿ ಒಂದು ಗ್ರೀಟಿಂಗ್ ಕಾರ್ಡ ಕೂಡಾ ಇತ್ತು. ಆದರೆ ಎಲ್ಲೂ ಯಾರಿಂದ ಎಂದು ಸುಳಿವಿರಲಿಲ್ಲ. ಕುತೂಹಲದಿಂದ ಆ ಡಬ್ಬವನ್ನು ತೆಗೆದರೆ ಅದರಲ್ಲಿ ಒಂದು ಉಂಗುರ ಇತ್ತು. ಅಷ್ಟರಲ್ಲಿ ಹಿಂದಿನಿದ ಬಂದ ಸಂಜಯ್ ಪ್ರಿಯ ಗಿಫ್ಟ್ ಚೆನ್ನಾಗಿದ್ಯ ಎಂದ. ನನಗೆ ಏನು ಹೇಳಬೇಕೋ ಗೊತ್ತಾಗದೆ ಅವನನ್ನೇ ನೋಡುತ್ತಿದ್ದೆ. ಅವನೇ ಮುಂದುವರೆದು ಪ್ರಿಯ ನನಗೆ ನೀನೆಂದರೆ ತುಂಬಾ ಇಷ್ಟ ಐ ಲವ್ ಯು ಎಂದ.
ಅನಿರೀಕ್ಷಿತವಾದ ಈ ಘಟನೆಯಿಂದ ಕೆಲಕಾಲ ಏನು ಹೇಳಬೇಕೋ ಗೊತ್ತಾಗದೆ ಸುಮ್ಮನೆ ನೋಡುತ್ತಿದ್ದೆ. ಪ್ರಿಯ ಇದರಲ್ಲಿ ಬಲವಂತವೇನೂ ಇಲ್ಲ. ನಿನಗಿಷ್ಟ ಇದ್ದರೆ ಮಾತ್ರ ಈ ಗಿಫ್ಟ್ ತಗೋ ಇಲ್ಲವಾದರೆ ವಾಪಸ್ ಕೊಟ್ಟುಬಿಡು ನನಗೇನು ಸ್ವಲ್ಪ ಬೇಜಾರಾಗತ್ತೆ ಆದರೆ ಪರವಾಗಿಲ್ಲ ಎಂದ. ನಾನು ಸ್ವಲ್ಪ ಹೊತ್ತು ಯೋಚಿಸಿ ಅವನು ಕೊಟ್ಟ ಉಂಗುರವನ್ನು ನನ್ನ ಕೈ ಬೆರಳಿಗೆ ಹಾಕಿಕೊಂಡೆ. ಅವನು ಆಫೀಸ್ ಎನ್ನುವುದನ್ನು ಮರೆತು ಜೋರಾಗಿ ಕಿರುಚಿಕೊಂಡ. ನನಗೆ ಬಹಳ ಮುಜುಗರವಾಗಿ ತಲೆ ತಗ್ಗಿಸಿಕೊಂಡು ಬಿಟ್ಟೆ.
ನಂತರ ಇಬ್ಬರ ಮನೆಯಲ್ಲೂ ಮಾತಾಡಿ ಮದುವೆಗೆ ಸಮ್ಮತಿ ಪಡೆದುಕೊಂಡೆವು. ಇಬ್ಬರ ಮನೆಯಲ್ಲೂ ಏನೂ ತೊಂದರೆ ಆಗಲಿಲ್ಲ. ಆಗಸ್ಟ್ ೧೫ ರಂದು ನಿಶ್ಚಿತಾರ್ಥ ಎಂದು ನಿಗದಿ ಪಡಿಸಿದರು. ಅಂದು ಅಗಸ್ಟ್ ೧೪ ಮನೆಯಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದವು. ನಾನು ಸಂಜಯ್ ಜೊತೆ ಮಾತಾಡಲು ಫೋನ್ ಮಾಡಿದರೆ ಅವನ ಫೋನ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಬಹುಶಃ ಚಾರ್ಜ್ ಇಲ್ಲವೇನೋ ಸ್ವಲ್ಪ ಹೊತ್ತಿನ ನಂತರ ಮಾಡೋಣ ಎಂದುಕೊಂಡು ಸುಮ್ಮನಾದೆ. ಮತ್ತೆ ಒಂದು ಘಂಟೆ ಬಿಟ್ಟುಕೊಂಡು ಮಾಡಿದರೆ ಆಗಲೂ ಸ್ವಿಚ್ ಆಫ್ ಎಂದೆ ಬರುತ್ತಿತ್ತು. ಹೋಗಲಿ ಮನೆಗೆ ಫೋನ್ ಮಾಡೋಣ ಎಂದುಕೊಂಡರೆ ಮನೆಯ ನಂಬರ್ ರಿಂಗಾಗುತ್ತಿತ್ತು ಆದರೆ ಯಾರೂ ಫೋನ್ ತೆಗೆದುಕೊಳ್ಳುತ್ತಿರಲಿಲ್ಲ. ನನಗೇಕೋ ಗಾಭರಿಯಾಯಿತು. ಅಷ್ಟರಲ್ಲಿ ಅಪ್ಪ ಬಂದು ನೋಡಮ್ಮ ಸಂಜಯ್ ಅಪ್ಪ ಅಮ್ಮ ಯಾರೂ ಸಿಗುತ್ತಿಲ್ಲ, ಒಂದು ಸಲ ಸಂಜಯ್ ಗೆ ಫೋನ್ ಮಾಡಿ ಕೊಡು. ನಾಳೆ ಬೆಳಿಗ್ಗೆ ಛತ್ರಕ್ಕೆ ಎಷ್ಟೊತ್ತಿಗೆ ಬರುತ್ತಾರೋ ಕೇಳಬೇಕು. ಅವರು ಬರುವ ವೇಳೆಗೆ ನಾವೆಲ್ಲಾ ಅಲ್ಲಿರಬೇಕು ಎಂದರು. ಅಪ್ಪ, ಸಂಜಯ್ ಫೋನ್ ಸ್ವಿಚ್ ಆಫ್ ಆಗಿದೆ, ಮನೆ ನಂಬರ್ ಯಾರೂ ಎತ್ತುತ್ತಿಲ್ಲ ಎಂದಾಗ ಅಪ್ಪ ಬಹಳ ಗಾಭರಿಯಾಗಿ ಸರಿ ಇರಮ್ಮ ಬಹುಶಃ ಎಲ್ಲೋ ಆಚೆ ಹೋಗಿರಬೇಕು ನಾನು ಮನೆಯ ಬಳಿಯೇ ಹೋಗಿ ನೋಡಿ ಬರುತ್ತೇನೆ ಎಂದು ಹೊರಟರು.
ನಾನು ಸತತವಾಗಿ ಸಂಜಯ್ ನಂಬರ್ ಗೆ, ಮನೆಯ ನಂಬರ್ ಗೆ ಪ್ರಯತ್ನಿಸುತ್ತಲೇ ಇದ್ದೆ. ಆದರೆ ಆ ಕಡೆಯಿಂದ ಯಾವುದೇ ಉತ್ತರವಿರದಿದ್ದಾಗ ಬಹಳ ಕಳವಳ ಉಂಟಾಯಿತು. ಅಪ್ಪ ಹೋಗಿ ಸುಮಾರು ಎರಡು ಘಂಟೆ ಆಗಿತ್ತು. ತಿರುಗಿ ಬಂದ ಅಪ್ಪ, ಅವರ ಮನೆ ಬೀಗ ಹಾಕಿದೆ, ಸುಮಾರು ಹೊತ್ತು ಅಲ್ಲೇ ಕಾದಿದ್ದೆ ಆದರೆ ಯಾರೂ ಬರಲಿಲ್ಲ. ನಂತರ ಪಕ್ಕದ ಮನೆಯವರನ್ನು ವಿಚಾರಿಸಿದಾಗ ಬೆಳಿಗ್ಗೆ ಇಂದಲೇ ಮನೆ ಬೀಗ ಹಾಕಿದೆ ಎಂದು ಹೇಳಿದರು. ಯಾಕೋ ಏನೋ ಯಡವಟ್ಟಾಗಿದೆ ಅನಿಸುತ್ತಿದೆ ಎಂದು ಚಿಂತಿಸುತಾ ಕುಳಿತರು. ಸಂಜೆ ಕಳೆದು ರಾತ್ರಿ ಆಗಿತ್ತು ಆದರೆ ಸಂಜಯ್ ಆಗಲಿ ಅವರ ಮನೆಯವರಿಂದ ಯಾವುದೇ ಉತ್ತರ ಇರಲಿಲ್ಲ. ಒಂದು ಕಡೆ ಅಮ್ಮ ಅಪ್ಪ ಇಬ್ಬರೂ ಕಣ್ಣೀರು ಸುರಿಸುತ್ತ ಕುಳಿತಿದ್ದಾರೆ. ಬೆಳಗಾಯಿತು ಒಬ್ಬೊಬ್ಬರೇ ಮನಗೆ ಬರಲು ಆರಂಭಿಸಿದರು, ಕೆಲವರು ಫೋನ್ ಮಾಡುತ್ತಿದ್ದರು ಛತ್ರದ ಅಡ್ರೆಸ್ಸ್ ಕೇಳಿಕೊಂಡು. ಎಲ್ಲರಿಗೂ ಅಪ್ಪ ಉತ್ತರ ಕೊಡುತ್ತಿದ್ದರು. ನಾನು ಮಾತ್ರ ರೂಮು ಬಿಟ್ಟು ಆಚೆ ಬರಲಿಲ್ಲ. ಅಪ್ಪ ಎಲ್ಲರಿಗೂ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂದು ಫೋನ್ ಮಾಡಿ ತಿಳಿಸುತ್ತಿದ್ದರು. ಸಂಜಯ್ ಮತ್ತು ಅವನ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸಂಜೆಯ ಹೊತ್ತಿಗೆ ಎಲ್ಲರಿಗೂ ಉತ್ತರ ಕೊಟ್ಟು ಕೊಟ್ಟು ಅಪ್ಪ ಹೈರಾಣಾಗಿ ಬಿಟ್ಟಿದ್ದರು. ಮನೆಯಲ್ಲಿ ಒಂದು ರೀತಿ ಸ್ಮಶಾನ ಮೌನ ಆವರಿಸಿ ಬಿಟ್ಟಿತ್ತು. ಅಮ್ಮ ನನಗೆ ಸಮಾಧಾನ ಮಾಡುತ್ತಿದ್ದರು.
ಹಾಗೆ ದಿನಗಳು ಕಳೆಯಿತು, ಸಂಜಯ್ ನ ಬಗ್ಗೆ ಯಾವುದೇ ಸುಳಿವು ಸಿಕ್ಕಲಿಲ್ಲ. ಆಫೀಸಿನಲ್ಲೂ ಅವನ ಬಗ್ಗೆ ಯಾರಿಗೂ ಏನೂ ಮಾಹಿತಿ ಗೊತ್ತಿರಲಿಲ್ಲ. ಇದ್ದಕ್ಕಿದ್ದಂತೆ ಸಂಜಯ್ ಏಕೆ ಹೀಗೆ ಮಾಡಿದ ಎಂದು ಒದ್ದಾಡುತ್ತಲೇ ತಿಂಗಳುಗಳು ಕಳೆದು ಹೋಯಿತು. ಮನೆಯಲ್ಲಿ ಅಪ್ಪ ಅಮ್ಮ ಬೇರೆ ಹುಡುಗನನ್ನು ನೋಡುತ್ತೇವೆ ಜಾಸ್ತಿ ದಿನ ಆದರೆ ಸಂಬಂಧಿಕರು ತಲೆಗೊಂದರಂತೆ ಮಾತಾಡಿ ಕೊಳ್ಳುತ್ತಾರೆ ಎಂದು ಹೇಳಿದರೂ ನನಗೇಕೋ ಸಂಜಯ್ ನನ್ನು ಮರೆಯಲು ಕಷ್ಟವಾಗುತ್ತಿತು. ಆದರೆ ಕಾಲ ಕ್ರಮೇಣ ಅಪ್ಪ ಅಮ್ಮನ ಕಷ್ಟ ನೋಡಲಾಗದೆ ಸಂಜಯ್ ನನ್ನು ಮರೆಯಲು ಶುರು ಮಾಡಿದೆ. ನಂತರದ ಕೆಲವು ತಿಂಗಳಲ್ಲೇ ಆಕಾಶ್ ಎಂಬ ಹುಡುಗನನ್ನು ನೋಡಿದ್ದರು ಅಪ್ಪ ಅಮ್ಮ. ನನಗೂ ಇಷ್ಟವಾಗಿದ್ದ ಆಕಾಶ್. ಹಾಗಾಗಿ ಮದುವೆ ನಿಶ್ಚಯ ಮಾಡಿದ್ದರು. ನನ್ನ ಸಂಜಯ್ ನ ಸಂಬಂಧ ಮುರಿದು ಬಿದ್ದಾಗಿನಿಂದ ಕಳಿಸಿದ ಯಾವುದೇ ಮೇಲ್ ಗೆ ರಿಪ್ಲೈ ಮಾಡದ ಸಂಜಯ್ ಈಗ ಮದುವೆ ಪತ್ರಿಕೆಗೆ ಉತ್ತರ ಕೊಟ್ಟಿದ್ದು ಯಾಕೆಂದು ಅರ್ಥವಾಗಿರಲಿಲ್ಲ. ಅದೂ ಅಲ್ಲದೆ ಭೇಟಿ ಮಾಡಬೇಕು, ಮಾತಾಡಬೇಕು ಎನ್ನುತ್ತಿದ್ದಾನೆ. ಈ ಸಲ ಮತ್ತೆ ಫೋನ್ ಮಾಡಿದರೆ ಹೋಗಿ ಭೇಟಿ ಮಾಡಿ ಅವನಿಗೆ ಸರಿಯಾಗಿ ಮರ್ಯಾದೆ ಮಾಡಿ ಬರಬೇಕು, ಇನ್ಯಾವುದೇ ಹುಡುಗಿಗೂ ಅವನು ಈ ರೀತಿ ಮೋಸ ಮಾಡಬಾರದು ಎಂದು ನಿರ್ಧರಿಸಿಕೊಂಡು ಅವನ ಕರೆಗೆ ಕಾಯುತ್ತಿದ್ದೆ. ಮತ್ತೆ ಕರೆ ಮಾಡಿದ ಸಂಜಯ್ ಪ್ರಿಯ ಒಂದೇ ಒಂದು ಸಲ ನಿನ್ನನ್ನು ಭೇಟಿ ಮಾಡಬೇಕು ದಯವಿಟ್ಟು ಇಲ್ಲ ಎನ್ನಬೇಡ ಎಂದ. ಸರಿ ಆಗಲಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ ನಮ್ಮ ಆಫೀಸಿನ ಬಳಿ ಬಾ. ಎರಡು ವರ್ಷದ ನಂತರ ಇಂದು ಎಲ್ಲರನ್ನೂ ಮತ್ತೆ ನೋಡಬೇಕು ಎನಿಸುತ್ತಿದೆ ಎಂದು ಹೇಳಿ ಫೋನ್ ಇಟ್ಟ.
ಮಾರನೆ ದಿನ ಬೆಳಿಗ್ಗೆ ನಾನು ಆಫೀಸಿನಲ್ಲಿ ಇದ್ದಾಗ ಸಂಜಯ್ ಮತ್ತೆ ಫೋನ್ ಮಾಡಿ ಪ್ರಿಯ ಆಫೀಸಿನ ಕ್ಯಾಂಟೀನ್ ನಲ್ಲಿ ಇದ್ದೇನೆ ಬಾ ಎಂದ. ಆಗಷ್ಟೇ ಕಾಫಿ ಸಮಯ ಮುಗಿದಿದ್ದರಿಂದ ಕ್ಯಾಂಟೀನ್ ನಲ್ಲಿ ಹೆಚ್ಚು ಜನ ಇರಲಿಲ್ಲ. ಅಲ್ಲೊಂದು ಮೂಲೆಯಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದ. ಬಹುಶಃ ಅವನೇ ಇರಬೇಕು ಎಂದುಕೊಂಡು ಬಳಿ ಬಂದೆ ಅವನೇ ಸಂಜಯ್. ಆದರೆ ಅವನು ಮೊದಲಿನಂತೆ ಇರಲಿಲ್ಲ. ವಿಪರೀತ ಸಣ್ಣ ಆಗಿದ್ದ, ಮುಖದಲ್ಲಿ ಕಾಂತಿ ಇರಲಿಲ್ಲ, ಕಣ್ಣುಗಳ ಸುತ್ತ ಕಪ್ಪಾಗಿದ್ದವು. ಆ ಕಣ್ಣುಗಳಲ್ಲಿ ಮೊದಲಿದ್ದ ಆಕರ್ಷಣೆ ಇರಲಿಲ್ಲ. ನಾನು ಅವನ ಮುಂದೆ ಕೂತೆ ಅವನು ನನ್ನನ್ನು ನೋಡಿ ಹಾಯ್ ಪ್ರಿಯ ಕಂಗ್ರಾಟ್ಸ್ ಮದುವೆ ನಿಶ್ಚಯ ಆಗಿದ್ದಕ್ಕೆ ಎಂದ. ಸಂಜಯ್ ಆಯ್ತಲ್ಲ ದಯವಿಟ್ಟು ಇಲ್ಲಿಂದ ಹೊರಟು ಹೋಗು ನನಗೆ ನಿನ್ನ ಮುಖ ನೋಡಲೂ ಇಷ್ಟವಿಲ್ಲ ಎಂದಿದ್ದಕ್ಕೆ. ಖಂಡಿತ ಪ್ರಿಯ ಇನ್ಯಾವತ್ತು ನಿನಗೆ ತೊಂದರೆ ಕೊಡುವುದಿಲ್ಲ. ಆದರೆ ಹೋಗುವ ಮುಂಚೆ ಒಂದು ಸಣ್ಣ ವಿಷಯ ಹೇಳಬೇಕು. ನಿನಗೆ ಈ ವಿಷಯ ಹೇಳಬಾರದು ಎಂತಲೇ ಇದ್ದೆ. ಆದರೆ ಹೇಳದಿದ್ದರೆ ನಿನ್ನ ಮನಸಿನಲ್ಲಿ ನಾನೆಂದಿಗೂ ಕೆಟ್ಟವನಾಗೆ ಇದ್ದು ಬಿಡುತ್ತೇನೆ. ಅದಕ್ಕಾಗಿ ಈಗ ಆ ವಿಷಯ ಹೇಳುವ ಸಮಯ ಬಂದಿದೆ.
ಪ್ರಿಯ ನಾನು ಇನ್ನು ಹೆಚ್ಚು ದಿನ ಬದುಕುವುದಿಲ್ಲ. ಹೆಚ್ಚೆಂದರೆ ಇನ್ನು ಒಂದು ತಿಂಗಳು ಅಷ್ಟೇ. ನಮ್ಮ ನಿಶ್ಚಿತಾರ್ಥಕ್ಕೆ ಇನ್ನು ಒಂದು ದಿನ ಬಾಕಿ ಇತ್ತು ಅಷ್ಟೇ, ಅಂದು ಆಗಸ್ಟ್ ೧೩ ನಿನ್ನ ಜೊತೆ ಮಾತಾಡಿಕೊಂಡು ಮನೆಗೆ ಹೋಗಬೇಕಾದರೆ ದಾರಿಯಲ್ಲಿ ತಲೆ ತಿರುಗಿ ಬಂದು ಗಾಡಿಯಿಂದ ಬಿದ್ದುಬಿಟ್ಟೆ. ಯಾರೋ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದರು. ಎಲ್ಲ ಪರೀಕ್ಷೆಗಳು ಮಾಡಿದ ನಂತರ ನನಗೆ ಕಾನ್ಸೆರ್ ಎಂದು ಹೇಳಿದರು. ಅದೂ ಕಾಪಾಡುವ ಹಂತ ದಾಟಿ ಬಿಟ್ಟಿದೆ ಎಂದು ತಿಳಿಸಿದರು. ನನಗೆ ಆಗ ಏನು ಮಾಡಬೇಕೋ ತಿಳಿಯಲಿಲ್ಲ. ಆ ಸಮಯದಲ್ಲಿ ನಿನಗೆ ಹೇಗೆ ವಿಷಯ ತಿಳಿಸುವುದು ಎಂದು ಗೊತ್ತಾಗಲಿಲ್ಲ. ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದಿ ಎಂದು ನನಗೆ ಗೊತ್ತಿತ್ತು. ಈ ವಿಷಯ ತಿಳಿದರೆ ನೀನೇನು ಆಗುತ್ತೀಯೋ ಎಂದು ಭಯವಾಯಿತು. ಅಪ್ಪ ಅಮ್ಮನಿಗೆ ನಾನೇ ಬಲವಂತ ಮಾಡಿ ರಾತ್ರೋ ರಾತ್ರಿ ಮನೆ ಬಿಟ್ಟು ಹೊರಟು ಹೋದೆವು. ನಂತರ ಒಂದೂವರೆ ವರ್ಷ ಅಮೆರಿಕಾದಲ್ಲಿದ್ದ ನನ್ನ ಚಿಕ್ಕಪ್ಪನ ಮನೆಯಲ್ಲಿ ಇದ್ದೆವು. ಅಲ್ಲೂ ಸಹ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯಿತು. ಅದರಿಂದಲೇ ಎರಡು ವರ್ಷಗಳ ಕಾಲ ನನ್ನ ಸಾವನ್ನು ಮುಂದೂಡಿಕೊಂಡು ಬಂದಿದ್ದೇನೆ. ಕಳೆದ ವಾರ ನಿನ್ನ ಮೇಲ್ ನೋಡಿದ ಮೇಲೆ ಭಾರತಕ್ಕೆ ವಾಪಸ್ ಬಂದು ನಿನ್ನನ್ನು ಭೇಟಿ ಮಾಡಬೇಕೆನಿಸಿತು ಎಂದು ಮಾತು ನಿಲ್ಲಿಸಿದ.ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಕಣ್ಣುಗಳು ನೀರಿನಿಂದ ತುಂಬಿಕೊಂಡು ಎಷ್ಟು ತಡೆಯಬೇಕು ಎಂದುಕೊಂಡರೂ ಆಗದೆ ಗಳಗಳನೆ ಅತ್ತು ಬಿಟ್ಟೆ. ಪ್ರಿಯ ನನಗೆ ಗೊತ್ತು ನಿನಗೆ ವಿಷಯ ತಿಳಿದರೆ ಹೀಗೆ ನೊಂದುಕೊಳ್ಳುತ್ತೀಯ ಎಂದು ಇಷ್ಟು ದಿವಸ ನಿನ್ನಿಂದ ಕಣ್ಮರೆ ಆಗಿದ್ದೆ. ಆದರೆ ಯಾಕೋ ಸಾಯುವ ಮುಂಚೆ ನಿನಗೆ ವಿಷಯ ತಿಳಿಸಬೇಕು ಎನಿಸಿತು ಅದಕ್ಕೆ ಬಂದೆ ಅಷ್ಟೇ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ಪ್ರಿಯ ಇನ್ಯಾವತ್ತೂ ನಿನಗೆ ಫೋನ್ ಮಾಡುವುದಿಲ್ಲ ನನ್ನ ಮುಖವನ್ನು ತೋರಿಸುವುದಿಲ್ಲ ಎಂದು ಎದ್ದು ಹೊರಟು ಹೋದ. ನನಗೆ ಏನೂ ಮಾತಾಡಲು ತೋಚದೆ ಅವನು ಹೋದ ಹಾದಿಯನ್ನೇ ನೋಡುತ್ತಾ ಕುಳಿತು ಬಿಟ್ಟೆ....
Comments
ಉ: ಸ೦ಜು ಮತ್ತು ಪ್ರಿಯ (ಕಥೆ)
In reply to ಉ: ಸ೦ಜು ಮತ್ತು ಪ್ರಿಯ (ಕಥೆ) by makara
ಉ: ಸ೦ಜು ಮತ್ತು ಪ್ರಿಯ (ಕಥೆ): ಕರುಳು ಕಿತ್ತಿ ಕೈಗೆ ಕೊಡು...???
In reply to ಉ: ಸ೦ಜು ಮತ್ತು ಪ್ರಿಯ (ಕಥೆ): ಕರುಳು ಕಿತ್ತಿ ಕೈಗೆ ಕೊಡು...??? by venkatb83
ಉ: ಸ೦ಜು ಮತ್ತು ಪ್ರಿಯ (ಕಥೆ): ಕರುಳು ಕಿತ್ತಿ ಕೈಗೆ ಕೊಡು...???
In reply to ಉ: ಸ೦ಜು ಮತ್ತು ಪ್ರಿಯ (ಕಥೆ) by makara
ಉ: ಸ೦ಜು ಮತ್ತು ಪ್ರಿಯ (ಕಥೆ)
In reply to ಉ: ಸ೦ಜು ಮತ್ತು ಪ್ರಿಯ (ಕಥೆ) by makara
ಉ: ಸ೦ಜು ಮತ್ತು ಪ್ರಿಯ (ಕಥೆ)
In reply to ಉ: ಸ೦ಜು ಮತ್ತು ಪ್ರಿಯ (ಕಥೆ) by Chikku123
ಉ: ಸ೦ಜು ಮತ್ತು ಪ್ರಿಯ (ಕಥೆ)
In reply to ಉ: ಸ೦ಜು ಮತ್ತು ಪ್ರಿಯ (ಕಥೆ) by makara
ಉ: ಸ೦ಜು ಮತ್ತು ಪ್ರಿಯ (ಕಥೆ)
In reply to ಉ: ಸ೦ಜು ಮತ್ತು ಪ್ರಿಯ (ಕಥೆ) by Prathik Jarmalle
ಉ: ಸ೦ಜು ಮತ್ತು ಪ್ರಿಯ (ಕಥೆ)