ಮುಂಗಾರು ಮಳೆಯಲ್ಲಿ (ಕಥೆ)

ಮುಂಗಾರು ಮಳೆಯಲ್ಲಿ (ಕಥೆ)

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...
ಕಾರಿನಲ್ಲಿ ಈ ಹಾಡು ಬರುತ್ತಿತ್ತು. ಜೊತೆ ಜೊತೆಗೆ ನಾನೂ ಸಹ ಗುನುಗುತ್ತಿದ್ದೆ. ಅದೇನೋ ಗೊತ್ತಿಲ್ಲ ಮುಂಗಾರು ಮಳೆ ಸಿನೆಮಾ ಬಂದು ಐದಾರು ವರ್ಷ ಆಗಿರಬಹುದು ಆದರೆ ಈ ಹಾಡು ಮಾತ್ರ ಪ್ರತಿ ಬಾರಿ ಕೇಳಿದಾಗಲೂ ಹೊಚ್ಚ ಹೊಸದರಂತೆ, ಉಲ್ಲಾಸದಾಯಕವಾಗಿರುತ್ತದೆ. ಬಹುಶಃ ಆ ಸಿನೆಮಾ ತಂಡ ಕೂಡ ಇಷ್ಟು ಸಲ ಆ ಹಾಡನ್ನು ಕೇಳಿರುತ್ತಾರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಅಷ್ಟು ಸಲ ಕೇಳಿ ಬಿಟ್ಟಿದ್ದೇನೆ. ಈಗ ನನ್ನ
ಕಾರು ಹೊಸನಗರ ದಾಟಿ ಕೊಡಚಾದ್ರಿಯ ಕಡೆ ಹೊರಟಿತ್ತು. ಗಾಳಿಪಟ ಸಿನೆಮಾ ನೋಡಿದ ಮೇಲೆ ಒಮ್ಮೆಯಾದರೂ ಕೊಡಚಾದ್ರಿ ಬೆಟ್ಟಕ್ಕೆ ಹೋಗಬೇಕು ಅಂದುಕೊಂಡಿದ್ದೆ. ಎರಡು ವರ್ಷದ ಮುಂಚೆ ಸ್ನೇಹಿತರೊಡಗೂಡಿ ಕೊಡಚಾದ್ರಿ ಬೆಟ್ಟಕ್ಕೆ ಬಂದಿದ್ದೆ. ಆ ನಂತರ ಮತ್ತೆ ಈಗಲೇ ಅಂದರೆ ಎರಡು ವರ್ಷದ ನಂತರ ಅಲ್ಲಿಗೆ ಹೋಗುತ್ತಿದ್ದೇನೆ. ಆಚೆ ಹದವಾಗಿ ಮಳೆ ಬೀಳುತ್ತಿದೆ. ಆಗಸ್ಟ್ ತಿಂಗಳ ಮಳೆ ಬೀಳುವ ಸಮಯಕ್ಕೆ ಹೊರಟಿದ್ದೆ ನಾನು. ವಾತಾವರಣ ಅ೦ತೂ ಎರಡು ಮಾತಿಲ್ಲ. ಬೆಂಗಳೂರಿನ ಧೂಳು,ಬಿಸಿಲು ದೂರ ಮಾಡಿಕೊಂಡು ಬಂದಿದ್ದ ನನಗೆ
ಅಲ್ಲಿನ ವಾತವಾರಣ ಮನಸಿಗೆ ಮುದ ನೀಡಿತ್ತು. ಕಾರಿನ ಕಿಟಕಿಯ ಗಾಜನ್ನು ಕೆಳಗಿಳಿಸಿ ಸಣ್ಣಗೆ ಬೀಳುತ್ತಿದ್ದ ಮಳೆ ಹನಿಗೆ ಮುಖ ಕೊಟ್ಟೆ. ಸುತ್ತಲೂ ಹಚ್ಚ ಹಸಿರು, ತಣ್ಣನೆ ಗಾಳಿ ಚಿಟಪಟ ಮಳೆ ಹನಿ ಮುಖದ ಮೇಲೆ ಬೀಳುತ್ತಿದ್ದ ಹಾಗೆ ಮನಸು ಎರಡು ವರ್ಷದ ಕೆಳಗೆ ಓಡಿತ್ತು.
ಎರಡು ವರ್ಷದ ಕೆಳಗೆ...
ಆಗಷ್ಟೇ ಗಾಳಿಪಟ ಸಿನೆಮಾ ನೋಡಿಕೊಂಡು ಆಚೆ ಬಂದ ನಾನು ಮತ್ತು ನನ್ನ ಸ್ನೇಹಿತರು ನಮ್ಮ ಮುಂದಿನ ಪ್ರವಾಸ ಕೊಡಚಾದ್ರಿ ಬೆಟ್ಟ ಎಂದು ನಿರ್ಧರಿಸಿ ಬಿಟ್ಟಿದ್ದೆವು. ಕಳೆದ ಬಾರಿ ಮುಂಗಾರು ಮಳೆಯಲ್ಲಿ ಜೋಗವನ್ನು ನೋಡಿದ ಮೇಲೆ ಅಲ್ಲಿಗೆ ಹೋಗಿ ಗಣೇಶ ನಿಂತ ಜಾಗಕ್ಕೆ ಹೋಗಿ ಆ ಮಜಾ ಅನುಭವಿಸಿ ಬಂದಿದ್ದೆವು. ಈ ಬಾರಿ ಕೊಡಚಾದ್ರಿ ಬೆಟ್ಟದ ಸೌಂದರ್ಯಕ್ಕೆ ಮರುಳಾಗಿ ಅಲ್ಲಿಗೆ ಹೋಗಬೇಕೆಂದು ನಿರ್ಧರಿಸಿದ್ದೆವು. ಆಗಲೂ ಇದೆ ಆಗಸ್ಟ್ ತಿ೦ಗಳು.ನಾನು ಮತ್ತು ನಾಲ್ಕು ಜನ ಸ್ನೇಹಿತರು ಕಾರು ಮಾಡಿಕೊಂಡು ಹೊರಟೆ ಬಿಟ್ಟೆವು. ಸಿನೆಮಾದಲ್ಲಿ ತೋರಿಸಿದ್ದ ಪರಿಸರವನ್ನು ಮನಸಿನಲ್ಲಿ ತುಂಬಿಕೊಂಡು ಹೊರಟಿದ್ದ ನಮಗೆ ಅದೇ ರೀತಿಯ ವಾತಾವರಣ ಸಿಕ್ಕಿತ್ತು. ಬೆಟ್ಟದ ಕೆಳಗೆ ಕಾರು ನಿಲ್ಲಿಸುತ್ತಿದ್ದ ಹಾಗೆಯೇ ನಮ್ಮನ್ನು ಸ್ವಾಗತಿಸಲೆಂದು ಮಳೆರಾಯ ಆಗಮಿಸಿದ.
ಎಲ್ಲಿ ನೋಡಿದರು ಹಸಿರು. ಬೆಟ್ಟದ ಮೇಲಿನಿಂದ ಏಳುತ್ತಿದ್ದ ಹೊಗೆ, ಗಾಢವಾಗಿ ಕವಿದಿದ್ದ ಮಂಜು, ಪಕ್ಕದಲ್ಲಿದ್ದ ಮನೆಯಿಂದ ಬರುತ್ತಿದ್ದ ಒಲೆ ಉರಿಯ ಹೊಗೆಯ ವಾಸನೆ, ಮಣ್ಣಿನ ಆ ಘಮ ಎಲ್ಲ ಸೇರಿಕೊಂಡು ಮನಸು ಹಾಗೂ ದೇಹ ತೇಲುತ್ತಿರುವಂತೆ ಭಾಸವಾಗುತ್ತಿತ್ತು.
ವಾರದ ದಿನಗಳು ಆದ್ದರಿಂದ ಹೆಚ್ಚು ಜನರು ಇರಲಿಲ್ಲ. ನಮ್ಮ ಕಾರನ್ನು ಅಲ್ಲೇ ನಿಲ್ಲಿಸಿ ಪಕ್ಕದಲ್ಲಿದ್ದ ಹೋಟೆಲ್ ನಲ್ಲಿ ಕಾಫಿ ಕುಡಿದು. ಅಲ್ಲೇ ಇದ್ದ ಕಾಲುವೆಯಲ್ಲಿ ಸ್ನಾನಮಾಡಲು ಹೋದೆವು. ಕೊರೆಯುತ್ತಿರುವ ಚಳಿಯಲ್ಲಿ ಹೇಗೆ ಸ್ನಾನ ಮಾಡುವುದು ಎಂದುಕೊಂಡು ನೀರಿನೊಳಗೆ ಇಳಿದರೆ ನೀರು ಬೆಚ್ಚಗಿತ್ತು. ಮಳೆ ಹನಿ ಬೀಳುತ್ತಲೇ ಇತ್ತು. ಹಾಗೆ ಸ್ನಾನ ಮಾಡಿ ಮೇಲೆ ಬಂದ ಮೇಲೆ ಚಳಿ ಶುರುವಾಯಿತು. ಮತ್ತೆ ಅದೇ ಹೋಟೆಲ್ ಗೆ ಬಂದು ಬಿಸಿ ಬಿಸಿ ಇಡ್ಲಿ, ಬನ್ಸ್ ತಿಂದುಕೊಂಡು ಟ್ರೆಕ್ ಮಾಡಲು ಶುರುಮಾಡಿದೆವು. ಆಹ್ಲಾದಕರವಾದ ವಾತಾವರಣದಲ್ಲಿ ಮಾತಾಡಿಕೊಂಡು ಟ್ರೆಕ್ ಮಾಡಿದ್ದು ಗೊತ್ತೇ ಆಗಲಿಲ್ಲ. ಬೆಟ್ಟದ ಮೇಲೆ ಬಂದು ಮೊದಲೇ ಐ.ಬಿ ಯಲ್ಲಿ ರೂಮು ಕಾಯ್ದಿರಿಸಿದ್ದರಿಂದ ಅಲ್ಲಿ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದು ಕೊ೦ಡು ಮಧ್ಯಾಹ್ನದ ಮೇಲೆ ಆಚೆ ಹೋಗೋಣ ಎಂದುಕೊಂಡು ಸ್ವಲ್ಪ ದೂರ ಹೋಗಿ ಒಂದಷ್ಟು ಫೋಟೋ ತೆಗೆಯುತ್ತಿದ್ದೆವು ಅಷ್ಟರಲ್ಲೇ ಧಾರಾಕಾರ ಮಳೆ ಶುರುವಾಯಿತು. ಸೀದಾ ಓಡಿ ವಾಪಸ್ ಐ ಬಿ ಗೆ ಬಂದು ಬಾಲ್ಕನಿಯಲ್ಲಿ ಕೂತು ಮಳೆಯ ನರ್ತನವನ್ನು ನೋಡುತ್ತಾ ಕುಳಿತಿದ್ದೆವು. ಆಗ ಶುರುವಾದ ಮಳೆ ರಾತ್ರಿಯಾದರೂ ಕಡಿಮೆ ಆಗಲಿಲ್ಲ. ಬೆಟ್ಟದ ಮೇಲೆ ಫೈರ್ ಕ್ಯಾಂಪ್ ಹಾಕಬಹುದೆಂದುಕೊಂಡು ಬಂದಿದ್ದ ನಮ್ಮ ಆಸೆಗೆ ವರುಣ ದೇವ ಅಡ್ಡಿ ಪಡಿಸಿದ್ದ. ಬೇರೆ ವಿಧಿ ಇಲ್ಲದೆ ಭಟ್ಟರ ಮನೆಯಲ್ಲಿ ಊಟ ಮಾಡಿ ಸುಮಾರು ಹೊತ್ತು ಮಾತನ್ನಾಡಿ ಎಲ್ಲರೂ ನಿದ್ರೆಗೆ ಜಾರಿದ್ದೆವು.
ಬೆಳಗಿನ ಜಾವ ಕಿಟಕಿಯಿಂದ ಬೀಸುತ್ತಿದ್ದ ತಣ್ಣನೆ ಗಾಳಿಗೆ ನನ್ನ ನಿದ್ರಾ ದೇವಿ ಎಚ್ಚೆತ್ತುಗೊಂಡು ಆಚೆ ಹೋಗು ಎಂದು ಪ್ರೇರೇಪಿಸಿದಳು. ಸಮಯ ನೋಡಿದೆ ಆರು ಗಂಟೆ ತೋರಿಸುತ್ತಿತ್ತು. ಆಚೆ ಮಳೆ ಸಂಪೂರ್ಣ ನಿಂತಿತ್ತು. ಇನ್ನೂ ಪೂರ್ತಿ ಬೆಳಕಾಗಿರಲಿಲ್ಲ. ಉಳಿದವರನ್ನು ಎಬ್ಬಿಸಿ ಬನ್ನಿ ಆಚೆ ಹೋಗೋಣ ಎಂದರೆ ಎಲ್ಲರೂ ನಿರಾಕರಿಸಿದರು. ನಾನೊಬ್ಬನೇ ಕ್ಯಾಮೆರಾವನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಹೊರಟೆ ಬಿಟ್ಟೆ. ವಾವ್...ಅದೊಂದು ಅಭೂತಪೂರ್ವ ಅನುಭವ. ರಾತ್ರಿ ಪೂರ್ತಿ ಬಿದ್ದಿದ್ದ ಮಳೆಯಿಂದ ನೆಲವೆಲ್ಲ ಒದ್ದೆಯಾಗಿ ಎಲ್ಲೆಲ್ಲೂ ಅದೊಂಥರ ಸುಮಧುರ ವಾಸನೆ ತುಂಬಿಕೊಂಡಿತ್ತು. ಗಾಳಿ ಅಂತೂ ಆಹಾ ಎಷ್ಟು ಆಹ್ಲಾದಕರವಾಗಿತ್ತೆಂದರೆ ಸ್ವರ್ಗದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು. ನಡೆಯುತ್ತಾ ನಡೆಯುತ್ತಾ ಸನ್ ರೈಸ್ ಪಾಯಿಂಟ್ ಗೆ ಬಂದೆ. ಇಡೀ ಪ್ರದೇಶ ನಿರ್ಜನವಾಗಿತ್ತು ನಾನೊಬ್ಬನೇ ನಿಂತಿದ್ದೇನೆ ಯಾಕೋ ಒಂದು ಕ್ಷಣ ಭಯ ಆದಂತೆ ಆಯಿತು. ಸುತ್ತಲೂ ಬೆಟ್ಟ ಸಾಲುಗಳು, ಆಚೆ ಬರಲು ಹಾತೊರೆಯುತ್ತಿದ್ದ ಸೂರ್ಯನಿಗೆ ಮೋಡಗಳು ಗೋಡೆ ಕಟ್ಟಿ ತಡೆಯೊಡ್ಡಿದ್ದವು. ಒಂದಷ್ಟು ಫೋಟೋಗಳನ್ನು ತೆಗೆದು ಇನ್ನೇನು ವಾಪಸ್ ಹೋಗೋಣ ಎಂದು ಸುತ್ತಲೂ ಒಮ್ಮೆ ಕಣ್ಣಾಡಿಸಿದಾಗ ಅಲ್ಲೊ೦ದು ತುದಿಯಲ್ಲಿ ಯಾರೋ ನಿಂತಂತೆ ಭಾಸವಾಯಿತು. ಈ ಸಮಯದಲ್ಲಿ ಯಾರಪ್ಪ ಎಂದು ಸ್ವಲ್ಪ ಹತ್ತಿರ ಹೋಗಿ ನೋಡೋಣ ಎಂದುಕೊಂಡು ಬಳಿ ಹೋದೆ.
ಅಚ್ಚ ಬಿಳಿ ಬಣ್ಣದ ಚೂಡಿದಾರ್ ಮೇಲೆ ಕಂದು ಬಣ್ಣದ ಶಾಲೊಂದನ್ನು ಹೊದ್ದು ತನ್ನ ಉದ್ದನೆಯ ಕೂದಲನ್ನು ಗಾಳಿಗೆ ಬಿಟ್ಟು ಒಬ್ಬಳು ನಿಂತಿದ್ದಳು. ಆ ಅಸ್ಪಷ್ಟ ಬೆಳಕಿನಲ್ಲೂ ಅವಳ ಮುಖ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬ್ರಹ್ಮದೇವರು ಅವಳಿಗಾಗೆ ವಿಶೇಷ ಸಮಯವನ್ನು ತೆಗೆದುಕೊಂಡು ಸೃಷ್ಟಿಸಿದ್ದ೦ತೆ ಅನಿಸಿತು. ಅಂಥಾ ಸೌಂದರ್ಯ ಅವಳದು. ಆ ಕಣ್ಣು, ಮೂಗು ತುಟಿ ಗುಳಿ ಬೀಳುವ ಆ ಕೆನ್ನೆಗಳು, ಆ ಕೂದಲು ವಾವ್ ಎಂದು ಅವಳನ್ನೇ ಎವೆಇಕ್ಕದೆ ನೋಡುತ್ತಾ ಮೈ ಮರೆತು ಒಂದು ಹೆಜ್ಜೆ ಪಕ್ಕಕ್ಕೆ ಇಟ್ಟೆ ಅಷ್ಟೇ ರಾತ್ರಿ ಬಿದ್ದ ಮಳೆಯಿಂದ ಒದ್ದೆ ಆಗಿದ್ದ ನೆಲ ಜಾರಿ ಒಂದು ಕಾಲು ಬೆಟ್ಟದ ತುದಿಯಿಂದ ಕೆಳಗೆ ಬಂದು ಬಿಟ್ಟಿತ್ತು. ನಾನು ಪಕ್ಕದಲ್ಲಿದ್ದ ಗಿಡವೊಂದನ್ನು ಬಲವಾಗಿ ಹಿಡಿದುಕೊಂಡು ಜೋರಾಗಿ ಕಿರುಚಿಕೊ೦ಡೆ. ಕೆಳಗೆ ನೋಡಿದರೆ ಪ್ರಪಾತ. ಕೈಯಲ್ಲಿ ಹಿಡಿದಿದ್ದ ಗಿಡ ಅದೂ ಜಾರುತ್ತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ಆ ಚೆಲುವೆ ತಾನು ಹೊದ್ದಿದ್ದ ಶಾಲನ್ನು ತೆಗೆದು ನನ್ನೆಡೆಗೆ ಹಾಕಿ ನಾನು ಮೇಲೆ ಬರಲು ಸಹಾಯ ಮಾಡಿದಳು. ಮೊದಲೇ ಅವಳ ಸೌಂದರ್ಯ ನೋಡಿ ಬೆರಗಾಗಿದ್ದ ನನಗೆ ಅದನ್ನು ಮುಂದುವರಿಕೊಂಡು ಹೋಗಲು ಆ ದೇವರೇ ಈ ರೀತಿ ನನ್ನನ್ನು ಬೀಳಿಸಿದ ಎಂದುಕೊಂಡು ಮನದಲ್ಲೇ ಆ ದೇವರಿಗೆ ಒಂದು ಧನ್ಯವಾದ ಹೇಳಿ ಅವಳ ಕಡೆ ನೋಡಿ ಅವಳಿಗೆ ಥ್ಯಾಂಕ್ಸ್ ಹೇಳಿ ನನ್ನ ಪರಿಚಯ ಮಾಡಿಕೊಂಡೆ.
ಅವಳು ತನ್ನ ಪರಿಚಯ ಮಾಡಿಕೊಂಡಳು. ಅವಳು ಅಲ್ಲೇ ಬೆಟ್ಟದ ಮೇಲಿರುವ ಭಟ್ಟರ ಮಗಳೆಂದು ಸಧ್ಯಕ್ಕೆ ಬೆಂಗಳೂರಿನಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀರ ಎ೦ದು ಕೇಳಿದಳು.
ನನಗೆ ಆಶ್ಚರ್ಯವಾಗಿ ನಾನ್ಯಾಕ್ರೀ ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಎಂದು ಕೇಳಿದ್ದಕ್ಕೆ ಮತ್ತೆ ಯಾಕೆ ಅಲ್ಲಿ ಬಿದ್ದಿರಿ ಎಂದಳು. ನಾನು ಕೂಡಲೇ ನಿಮ್ಮ ಅಂದವನ್ನು ನೋಡಿ ಮರುಳಾಗಿ ಬಿದ್ದು ಬಿಟ್ಟೆ ಎಂದಾಗ ಅವಳು ತುಟಿಯಂಚಲ್ಲಿ ನಗುವೊಂದನ್ನು ಚೆಲ್ಲಿದಳು. ನೂರು ವಾಟ್ ನ ಬಲ್ಬು ಹತ್ತಿದಂತಾಯಿತು. ಅವಳ ನಗು ಅಷ್ಟು ಸೊಗಸಾಗಿತ್ತು. ನಾನು ಇನ್ನೇನೋ ಹೇಳೋಣ ಎಂದು ಬಾಯ್ತೆರೆಯುವಷ್ಟರಲ್ಲಿ ಅವಳು ನನ್ನೆಡೆಗೆ ನೋಡಿ ನಿಮಗೆ ಒಂದು ವಿಷಯ ಹೇಳಬೇಕು ಅನಿಸುತ್ತಿದೆ. ಹೇಳಿದ ಮೇಲೆ ಇವಳೆಂಥ ಹುಡುಗಿನಪ್ಪ, ಸ್ವಲ್ಪವೂ ಲಜ್ಜೆ ಇಲ್ಲದೆ ಮಾತಾಡುತ್ತಿದ್ದಾಳೆ ಎಂದುಕೊಳ್ಲಬಾರದು ಎಂದಳು.
ನನಗೇನೋ ವಿಚಿತ್ರ ಎನಿಸಿ ಹೇಳಿ ಅದೇನು ಎಂದಿದ್ದಕ್ಕೆ. ನೋಡಿ ಅದೇನೋ ಗೊತ್ತಿಲ್ಲ ನಿಮ್ಮನ್ನು ನೋಡಿದ ತಕ್ಷಣ ನನಗೆ ನಿಮ್ಮ ಮೇಲೆ ಮನಸಾಗಿದೆ ಐ ಲವ್ ಯೂ ಎಂದಳು. ತಕ್ಷಣ ಮಳೆ ಶುರುವಾಯಿತು. ಇಬ್ಬರೂ ಅಲ್ಲೇ ಪಕ್ಕದಲ್ಲಿದ್ದ ಸರ್ವಜ್ಞ ಪೀಠದ ಬಳಿ ಬಂದು ನಿಂತೆವು. ಒಂದೆಡೆ ನನಗೆ ರೋಗಿ ಬಯಸಿದ್ದು ಹಾಲು ಅನ್ನ ಎನ್ನುವ ಪರಿಸ್ಥಿತಿ ಆಗಿದ್ದರೆ ಮತ್ತೊಂದೆಡೆ ದೀಡೀರನೇ ಒಂದು ಹುಡುಗಿ ಐ ಲವ್ ಯೂ ಎಂದಳಲ್ಲ ಹೇಗೆ ಪ್ರತಿಕ್ರಿಯಸಬೇಕೋ ತಿಳಿಯದೆ ಗೊಂದಲದಲ್ಲಿದ್ದೆ. ನಾನು ಸ್ವಲ್ಪ ಹೊತ್ತು ಮೌನವಾಗಿದ್ದನ್ನು ಕಂಡು ಮತ್ತೆ ಅವಳೇ ಶುರು ಮಾಡಿದಳು. ನೋಡಿ ಇಲ್ಲೀವರೆಗೂ ನನಗೆ ಯಾರನ್ನು ನೋಡಿದರೂ ಹೀಗೆ ಅನಿಸಿರಲಿಲ್ಲ. ನನಗೆ ಒಂದು ಆಸೆ ಇತ್ತು ಯಾವ ವ್ಯಕ್ತಿಯನ್ನು ನೋಡಿದಾಗ ನನ್ನ ಮನಸಿನಲ್ಲಿ ಪ್ರೀತಿ ಹುಟ್ಟುತ್ತದೋ ಅವರನ್ನೇ ಮದುವೆ ಆಗಬೇಕು ಎಂದುಕೊಂಡಿದ್ದೆ ಎಂದುಕೊಂಡು ದಿಗಂತದ ಕಡೆ ಮುಖ ಮಾಡಿ ತಿರುಗಿದಳು.
ನಾನು ಶುರು ಮಾಡಿದೆ. ನೋಡಿ ನಿಮ್ಮನ್ನು ಮೊದಲ ಬಾರಿ ಕಂಡ ತಕ್ಷಣ ನನ್ನ ಮನಸಿನಲ್ಲೂ ಅದೇ ಭಾವನೆ ಉಂಟಾಯಿತು. ನನಗೂ ನೀವೆಂದರೆ ತುಂಬಾ ಇಷ್ಟ ಆದರೆ ನಿಮ್ಮ ಮನೆಯವರು ನಮ್ಮ ಮನೆಯವರು ಎಲ್ಲರೂ ಒಪ್ಪಬೇಕಲ್ಲವ ಯಾರೊಬ್ಬರು ಒಪ್ಪದಿದ್ದರೂ ಇದು ಸಾಧ್ಯವಿಲ್ಲ ಎಂದು ಇನ್ನು ಮಾತು ಮುಗಿಸಿರಲಿಲ್ಲ ಅಷ್ಟರಲ್ಲಿ ಅವಳು ಅಳಲು ಶುರು ಮಾಡಿದಳು.
ನನಗೆ ಬಹಳ ಗಾಭರಿಯಾಗಿ ಸಮಾಧಾನ ಮಾಡೋಣ ಎಂದು ಮುಂದೆ ಬಂದು ಅವಳನ್ನು ನೋಡಿದ ತಕ್ಷಣ ಜೋರಾಗಿ ಕಿಟಾರನೆ ಕಿರುಚಿಬಿಟ್ಟೆ. ತಕ್ಷಣ ಸ್ನೇಹಿತರೆಲ್ಲರೂ ನನ್ನನ್ನು ಜೋರಾಗಿ ಅಲುಗಾಡಿಸಿ ಎಬ್ಬಿಸಿ ಯಾಕೋ ಏನಾಯ್ತೋ ಎಂದು ಕೇಳಿದಾಗ ಏನೂ ಇಲ್ಲ ಕೆಟ್ಟ ಕನಸು ಎಂದು ಸುಮ್ಮನಾದೆ. ನಂತರ ಎಲ್ಲರೂ ಎದ್ದು ಸ್ನಾನ ಮಾಡಿ ಭಟ್ಟರ ಮನೆಗೆ ತಿಂಡಿ ತಿನ್ನಲು ಹೋದೆವು. ರಾತ್ರಿ ಕತ್ತಲಲ್ಲಿ ಭಟ್ಟರ ಮನೆ ಸರಿಯಾಗಿ ಕಾಣಿಸಿರಲಿಲ್ಲ. ತುಂಬಾ ಸುಂದರವಾಗಿತ್ತು ಅವರ ಮನೆ. ಮೇಲಿನ ಮಾಡಿಗೆ ಸೌತೆಕಾಯಿಗಳನ್ನು ಕಟ್ಟಿದ್ದರು, ಇನ್ನೊಂದೆಡೆ ಒಣಗಿದ ತೆಂಗಿನಕಾಯಿಗಳನ್ನು ಕಟ್ಟಿದ್ದರು. ಉದ್ದನೆ ಹಾಲು, ಒಳಗಡೆ ಎರಡು ಮೂರು ರೂಮುಗಳಿದ್ದವು. ಎಲ್ಲವನ್ನೂ ನೋಡುತ್ತಿದ್ದ ಹಾಗೆ
ಇದ್ದಕ್ಕಿದ್ದಂತೆ ಅಲ್ಲಿದ್ದ ಒಂದು ಫೋಟೋ ನನ್ನ ಗಮನ ಸೆಳೆಯಿತು. ಅದೊಂದು ಹುಡುಗಿಯ ಫೋಟೋ. ಹೌದು ಅದೇ ಹುಡುಗಿ ಬೆಳಿಗ್ಗೆ ನನ್ನ ಕನಸಿನಲ್ಲಿ ಬಂದ ಹುಡುಗಿಯ ಫೋಟೋ. ನನಗೆ ಬಹಳ ಆಶ್ಚರ್ಯವಾಯಿತು. ಇದೇನಿದು ಕನಸಿನಲ್ಲಿ ಕಂಡ ಹುಡುಗಿ ಫೋಟೋ ಇಲ್ಲಿದೆ ಎಂದು ಕುತೂಹಲ ತಡೆಯಲಾರದೆ ಒಳಗಡೆ ಹೋಗಿ ಭಟ್ಟರನ್ನು ಅಲ್ಲಿರುವ ಫೋಟೋ
ಯಾವುದೆಂದು ಕೇಳಿದಾಗ ಅವರು ಕಣ್ಣೀರಿಡಲು ಶುರು ಮಾಡಿದರು. ಯಾಕೆಂದು ಕೇಳಿದಾಗ ಕಳೆದ ವರ್ಷ ತಾನು ಇಷ್ಟ ಪಟ್ಟ ಹುಡುಗನನ್ನು ಮದುವೆ ಮಾಡಿಸಲು ಒಪ್ಪಲಿಲ್ಲವೆಂದು ಇಲ್ಲೇ ಬೆಟ್ಟದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು ಎಂದು ಕಣ್ಣೀರನ್ನು ಒರೆಸಿಕೊಂಡು. ಈಗಲೂ ಬೆಳಗಿನ ಹೊತ್ತು ಬೆಟ್ಟ ತುದಿಯಲ್ಲಿ ಕಾಣಿಸಿಕೊಳ್ಳುತ್ತಾಳಂತೆ ಹಾಗಂತ ಜನ ಹೇಳುತ್ತಾರೆ ಆದರೆ ಇದುವರೆಗೂ ನನಗೊಮ್ಮೆಯಾದರೂ ಕಂಡಿಲ್ಲ ಎಂದು ತಮ್ಮ ಕೆಲಸದಲ್ಲಿ ತೊಡಗಿದರು. ನನಗೆ ಎಲ್ಲವೂ ಗೊಂದಲಮಯವಾಗಿ ಅನಿಸುತ್ತಿತ್ತು.
ಆದಿನ ಪೂರ್ತಿ ಬೆಟ್ಟದ ಮೇಲೆಲ್ಲಾ ಸುತ್ತಾಡಿದೆವು. ಎಲ್ಲರೂ ಸಂತೋಷದಿಂದಿದ್ದರೆ ನನಗೆ ಮಾತ್ರ ಅದೇ ವಿಷಯ ಕೊರೆಯುತ್ತಿತ್ತು. ಅಂದು ರಾತ್ರಿಯೇ ಅಲ್ಲಿಂದ ಹೊರತು ವಾಪಸ್ ಬೆಂಗಳೂರಿಗೆ ಬಂದು ಬಿಟ್ಟೆವು. ಬೆಂಗಳೂರಿಗೆ ಬಂದ ಮೇಲೂ ತುಂಬಾ ದಿವಸ ಆ ಆ ವಿಷಯ ಕಾಡುತ್ತಿತ್ತು. ಕಾಲಾಂತರದಲ್ಲಿ ಆ ವಿಷಯ ನನ್ನ ಮನಸಿನಿಂದ ಮರೆಯಾಗಿತ್ತು.
ರೀ ರೀ ಏನ್ರೀ ಯೋಚನೆ ಮಾಡ್ತಿದೀರ ಎಂದು ನನ್ನ ಹೆಂಡತಿ ಕರೆದಾಗ ವಾಸ್ತವಕ್ಕೆ ಬಂದೆ. ಬೆಟ್ಟದ ಬುಡಕ್ಕೆ ಬಂದು ತಲುಪಿ ಕಾರು ನಿಲ್ಲಿಸಿ ಒಮ್ಮೆ ಸುತ್ತಲೂ ನೋಡಿದೆ. ಏನೂ ಬದಲಾಗಿಲ್ಲ ಎರಡು ವರ್ಷದ ಹಿಂದೆ ಹೇಗಿತ್ತೋ ಹಾಗೆಯೇ ಇದೆ. ಅಲ್ಲೇ ಹೋಟೆಲ್ ನಲ್ಲಿ ಕಾಫಿ ಕುಡಿದು ಖಾಸಗಿ ಜೀಪಿನಲ್ಲಿ ಬೆಟ್ಟದ ಮೇಲೆ ಹೋಗಿ ಐ ಬಿ ಯಲ್ಲಿ ಸ್ನಾನಾದಿಗಳನ್ನು ಮುಗಿಸಿ ತಿ೦ಡಿ ತಿನ್ನಲು ಭಟ್ಟರ ಮನೆಗೆ ಬರೋಣ ಎಂದು ಬಂದರೆ ಭಟ್ಟರ ಮನೆ ಇದ್ದ ಜಾಗದಲ್ಲಿ ಖಾಲಿ ಜಾಗ ಇತ್ತು. ಅಲ್ಲೇ ಪಕ್ಕದಲ್ಲಿದ್ದ ಮನೆಯಲ್ಲಿ ಕೇಳಿದಾಗ ಅವರು ಇಲ್ಲಿ ಖಾಲಿ ಮಾಡಿ ಎಲ್ಲೋ ಹೊರಟು ಹೋದರು. ಅವರಿಗೆ ಅವರ ಮಗಳ ನೆನಪು ಬಹಳವಾಗಿ ಕಾಡಿ ಅಪರಾಧಿ ಪ್ರಜ್ಞೆ ಮೂಡುತ್ತಿತ್ತು. ಇಲ್ಲೇ ಇದ್ದಾರೆ ಅದು ಇನ್ನೂ ಹೆಚ್ಚಾಗುತ್ತದೆ ಎಂದು ಭಾವಿಸಿ ಖಾಲಿ ಮಾಡಿ ಹೊರಟು ಹೋದರು ಎಂದರು...  

 

Rating
No votes yet

Comments