ಶ್ರಾವಣದಲ್ಲಿ ಸಾರಸ್ವತರ ಚೂಡಿ ಪೂಜೆ

ಶ್ರಾವಣದಲ್ಲಿ ಸಾರಸ್ವತರ ಚೂಡಿ ಪೂಜೆ


ಸಂಪದದಲ್ಲಿ ಶ್ರಾವಣ ಬಂತು ಓದಿದ ಮೇಲೆ ಶ್ರಾವಣದಲ್ಲಿ ನಾವು ಆಚರಿಸೋ ಚೂಡಿ ಪೂಜೆಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲೋದು ಕೊಂಕಣಿಗಳಾಗಿ ನನ್ನ ಕೆಲಸ ಅನ್ನಿಸ್ತು. ಹಾಗಾಗಿ, ಕನ್ನಡದ ಕೈಂಕರ್ಯಕ್ಕಾಗಿ ನಮ್ಮ ಕಛೇರಿಯವರು ನಡೆಸುತ್ತಿರುವ ಕನ್ನಡ ಸಾಹಿತ್ಯ ಕೂಟದ  ಕನ್ನಡ ಸಾಹಿತ್ಯಮಾಲೆ ಗೆ ನಿಮ್ಮೂರಿನ ವಿಶಿಷ್ಟ ಆಚರಣೆಗಳು, ಸಂಪ್ರದಾಯಗಳು ಅನ್ನೋ ಶೀರ್ಷಿಕೆಯಡಿ ಲೇಖನಗಳು ಆಹ್ವಾನಿಸಲ್ಪಟ್ಟಾಗ ಬರೆದ ಲೇಖನವನ್ನ ಇಲ್ಲೂ ಯಾಕೆ ಪ್ರಕಟಿಸಬಾರದು ಅನ್ನಿಸಿ, ಅದನ್ನೇ ಸಂಪದಿಗರ ಓದಿಗೆ ಪ್ರಸ್ತುತಪಡಿಸಿದ್ದೇನೆ.

  ನಿಮ್ಮೂರಿನ ವಿಶಿಷ್ಟ ಆಚರಣೆಗಳು, ಸಂಪ್ರದಾಯಗಳು ಅನ್ನೋ ಶೀರ್ಷಿಕೆ ಕಂಡಾಗ ನನಗೆ ಧುತ್ತನೆಎದುರಾದ ಮೂಲಭೂತ ಪ್ರಶ್ನೆ ನಾನು ಯಾವ ಊರಿನವಳು ಅಂತ.

ನಿಮ್ಮ ಹತ್ರ ಇವತ್ತು ಧೈರ್ಯ ಮಾಡಿ ಹೇಳಿಯೇ ಬಿಡುತ್ತೇನೆ ನಮ್ಮಂಥಾ ಕೊಂಕಣಿಗರ ತ್ರಿಶಂಕು ಸ್ಥಿತಿಯ ಅಳಲು. ಹಲವಾರು ತಲೆಮಾರುಗಳಿಂದ ಇಲ್ಲಿಯೇ ಇದ್ದರೂ ಬೆಂಗಳೂರಿನ ಮೂಲನಿವಾಸಿಗಳು ನಾವಲ್ಲ, ಮೂಲನಿವಾಸಿಗಳು ನಮ್ಮನ್ನ ನೀವ್ ಬಿಡಿ ಉಪ್ಪು ನೀರವ್ರುಅಂತ ಛೇಡಿಸ್ತಾರೆ(?) ಅಲ್ಲಿ ಮಂಗಳೂರಿನವ್ರು ನೀವು ಬೆಂಗಳೂರಿಗರ ಹಾಗಲ್ಲ ನಾವು ಅಂತಾರೆ!! ಅದಕ್ಕೇ ನಮ್ಮೂರಿನ ವಿಶಿಷ್ಟ ಆಚರಣೆಗಳ ಬಗ್ಗೆ ಅಂತಾ ಭೌಗೋಳಿಕ ಮಿತಿಯನ್ನ ಹಾಕಿಕೊಳ್ಳದೇ ನಮ್ಮ ಅಂದರೆ ಸಾರಸ್ವತರ ಒಂದು ವಿಶಿಷ್ಟ ಆಚರಣೆಯ ಬಗ್ಗೆ ಬರೆಯಹೊರಟಿದ್ದೇನೆ.

 ಅದಕ್ಕೆ ಸ್ಸ್ವಲ್ಪ ವಿಷಯಾಂತರ ಮಾಡಿಯೇ ಲೇಖನ ಮುಂದುವರಿಸ ಬೇಕು, ಸಾರಸ್ವತರ ಬಗ್ಗೆ ಹೆಚ್ಚು ಗೊತ್ತಿಲ್ಲದ ಕೆಲವು ಓದುಗ ಮಹಾಶಯರಿಗೆ ಅವರನ್ನು ಪರಿಚಯಿಸುವುದು ನನ್ನ ಆದ್ಯ ಕರ್ತವ್ಯ.ನಾವು ಸಾರಸ್ವತರ ಹೆಜ್ಜೆ ಗುರುತು ಮೊದಲು ಸಿಗೋದು,ಅಂದಿನ ಕಾಶ್ಮೀರದ ಗುಪ್ತಗಾಮಿನಿ ನದಿ ಸರಸ್ವತಿ (ಅದಕ್ಕೇ ಸಾರಸ್ವತರು)ಯ ದಡದಲ್ಲಿ.

ದಾಳಿಕೋರರಿಗೆ ಅಂಜಿ,ದಕ್ಷಿಣದೆಡೆಗೆ ಧಾವಿಸಿ ಬರುವಾಗ ಹರಿಯುವ ನೀರಾದ ಭಾಷೆಗೆ ಕಟ್ಟೆ ಕಟ್ಟದೇ ಬಹಳಷ್ಟು ಭಾಷೆಗಳ ಪ್ರಭಾವದಿಂದ ನಮ್ಮದೇ ಭಾಷೆ ಸೃಷ್ಟಿಸಿ, ಪಶ್ಚಿಮ ಭಾರತದ ಪರಶುರಾಮ ನಿರ್ಮಿತ ಕೊಂಕಣ ಪ್ರದೇಶದಲ್ಲಿ ಹೆಚ್ಚುಕಾಲ ನೆಲೆಸಿ,ಆ ಭಾಷೆಯನ್ನ ಕೊಂಕಣಿ ಎಂದು ಹೆಸರಿಸಿದೆವು. ಕೊಂಕಣದ ಗೋವೆಯಲ್ಲೇ ಕುಲದೇವರನ್ನೂ ಸ್ಥಾಪಿಸಿ, ಕಾಲಕ್ರಮೇಣ ಮತಾಂತರಕ್ಕೆ ಹೆದರಿ, ಕನ್ನಡಮ್ಮನ ಆಸರೆಯಲ್ಲಿ ನಿರುಮ್ಮಳವಾಗಿರಲು ಬಯಸಿ,ಉತ್ತರ ಕನ್ನಡ ಹಾಗೂ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೆಲೆಸಿ,  ಅಲ್ಲಿಯ ಗ್ರಾಮಗಳ ಹೆಸರಿದಿಂದಲೇ ಕುಟುಂಬಗಳನ್ನ ಗುರುತಿಸುವ ಪರಿ ಬೆಳೆಸಿಕೊಂಡೆವು. ಮುಂದೆ ಉದ್ಯೋಗವನ್ನರಸುತ್ತಾ, ಆಸುಪಾಸಿನ ಊರುಗಳಿಗೆ ವಲಸೆ ಬಂದೆವು.

 ಪ್ರಸ್ತುತದಲ್ಲಿ ಕರುನಾಡಿನಲ್ಲೇ ನೂರಾರು ವರ್ಷಗಳಿಂದ ನೆಲೆಸಿ, ನೆಮ್ಮದಿಯ ಆಶ್ರಯ ಪಡೆದಿದ್ದರಿಂದ ಕನ್ನಡಮ್ಮನ ಮಡಿಲೇ ನಮಗೆ ಸ್ವರ್ಗ, ನಾವು ಆಕೆಯ ಹೆಮ್ಮೆಯ ದತ್ತು ಪುತ್ರರು. ಎಲ್ಲಕ್ಕಿಂತಾ ಮಿಗಿಲಾಗಿ ಕನ್ನಡಿಗರು. ಕನ್ನಡ ಪುರೋಹಿತರಾದ ಪಂಜೆ ಮಂಗೇಶರಾಯರು,ಮೊಳಹಳ್ಳಿ ಶಿವರಾಯರು, ಬೆನಗಲ್ ರಾಮರಾಯರು, ಪಡುಕೋಣೆ ರಮಾನಂದರಾಯರು, ಕಾರ್ನಾಡು ಸದಾಶಿವರಾಯರು, ಗೌರೀಶ್ ಕಾಯ್ಕಿಣಿಯವರು, ಗಿರೀಶ್ ಕಾರ್ನಾಡರು, ಜಯಂತ್ ಕಾಯ್ಕಿಣಿಯವರು ಪ್ರಸಿದ್ಧ ಸಾರಸ್ವತ ಕೊಂಕಣಿ ಕನ್ನಡಿಗರಲ್ಲಿ ಕೆಲವರು.

 ನಮ್ಮ ಕೆಲವು ಆಚರಣೆಗಳು ಸಂಪ್ರದಾಯಗಳು ಕೊಂಚ ವಿಭಿನ್ನ ಹಾಗೆಯೇ ವಿಶಿಷ್ಟ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ ಅನ್ಬೇಡಿ ಮತ್ತೆ!!

ಈಗ ನಾನು ಹೇಳಹೊರಟಿರೋ ಆಚರಣೆಯನ್ನ ಇತರರು ಆಚರಿಸುವ ಬಗ್ಗೆ ನನಗೆ ತಿಳಿಯದೇ ಇರೋದ್ರಿಂದ ವಿಶಿಷ್ಟ ಅನ್ನೋದು ನಿಜಕ್ಕೂ ಸೂಕ್ತ.

 ಎಲ್ಲಾ ಭಾರತೀಯರಂತೇ ನಮಗೂ ಶ್ರಾವಣ ಪ್ರಿಯವಾದ ಮಾಸ.  ಭೂತಾಯಿಯೂ ಸಹ ಈ ಮಾಸದಲ್ಲಿ ಸುಂದರ ಹೂವುಗಳನ್ನೂ ವಿವಿಧಬಗೆಯಹಣ್ಣುಗಳನ್ನೂ  ನೀಡೋದ್ರಿಂದ ಕೊಂಕಣಿ ಗೃಹಿಣಿಯರು ಕುಲದೇವರ ಆರಾಧನೆಗೆ ಮಾಡೋ ವಿಶಿಷ್ಟ ಆಚರಣೆಯಾದ  ಚೂಡಿಪೂಜೆಗೆ ಇದು ಅತ್ಯುತ್ತಮ ಕಾಲ.

 ಏನಪ್ಪಾ ಈ ಚೂಡೀ ಪೂಜೆ ಎಂದು ಯೋಚಿಸುತ್ತಿದ್ದೀರಾ? ಅದನ್ನೇ ನಾನೀಗ ಹೇಳಹೊರಟಿದ್ದೇನೆ. ಕೊಂಕಣಿ ಸಾರಸ್ವತ ಮುತ್ತೈದೆಯರು ಪ್ರತಿ ಶ್ರಾವಣ ಶುಕ್ರವಾರ ಹಾಗೂ ಭಾನುವಾರ ನೆರವೇರಿಸೋ  ಈ ಚೂಡಿ ಪೂಜೆಯಲ್ಲಿ ಗರಿಕೆಯದು ಮಹತ್ವದ ಪಾತ್ರ .

 ಮೊದಲಿಗೆ ಚೂಡಿ ತಯಾರಿ. ಚೂಡಿ ತಯಾರಿಕೆಗೆ ಐದು ಗರಿಕೆಯ ಚಿಗುರು ಹುಲ್ಲುಗಳನ್ನ ಆರಿಸಿ,ಅವುಗಳ ಜೊತೆ ಕೆಂಪು, ಹಳದಿ ರತ್ನಗಂಧೀ, ಕರಾವಳಿಯಲ್ಲಿ ಸಿಗುವ ಬೆಕ್ಕಿನುಗುರು, ಕುದುರೆ ಕಾಲು (ಬಹುಶಃ ಆಕಾರ ಹೋಲುವುದರಿಂದ)ಎಂಬ ಪುಟಾಣಿ ಗಿಡದ ಎಲೆಗಳು ಇವು ಸಿಗದ ಪ್ರಾಂತ್ಯಗಳಲ್ಲಿ ಇತರೆ ಯಾವುದಾದರೂ ಐದು ಹೂ (ದೊಡ್ಡ ಹೂವಾದರೆ ಪಕಳೆಗಳನ್ನೂ) ಸೇರಿಸಿ ಕಟ್ಟುವ ಚಿಕ್ಕಹೂ ಗುಚ್ಛಗಳೇ ಚೂಡಿಗಳು , ಹೀಗೆ ಕಟ್ಟಿದ ಐದು ಚೂಡಿಗಳನ್ನು ಸಣ್ಣ ರಂಗೋಲಿ, ಹೂಗಳಿಂದ ಅಲಂಕರಿಸಿದ ತುಳಸಿಯ ಬಳಿಯಲ್ಲಿ ತಾಂಬೂಲದ ಜೊತೇಲ್ಲಿ ಇರಿಸಿ,ಅರಿಷಿಣ ಕುಂಕುಮ,ಅಗರಬತ್ತಿಗಳಿಂದ ಪೂಜಿಸುವುದು ಚೂಡಿಪೂಜೆ. ಹೀಗೆ ಪೂಜಿಸಿದ ಚೂಡಿಗಳನ್ನ ಮೊದಲಿಗೆ ತುಳಸಿಗೂ,ಕುಲದೇವ್ರಿಗೂ,ರಂಗೋಲಿ ಬಿಡಿಸಿ ಹೂವಿನಿಂದ ಅಲಂಕರಿಸಿದ ಹೊಸ್ತಿಲಿನ ಬಲಭಾಗಕ್ಕೂ ಅರ್ಪಿಸಲಾಗುತ್ತದೆ.

 ನಂತರ ಪೂಜಿಸಿದ ಚೂಡಿಯನ್ನು ತಾನು ಮುಡಿದ ಮುತ್ತೈದೆ,ಅರಿಷಿಣ ಕುಂಕುಮ, ವೀಳ್ಯೆದೆಲೆಯೊಂದಿಗೆ ಅತ್ತೆ,ತಾಯಿ ಮೊದಲಾಗಿ ಐದು ಜನ ಮುತ್ತೈದೆಯರಿಗೆ ಚೂಡಿ ಕೊಡು-ಕೊಳ್ಳುವ ಕಾರ್ಯಕ್ರಮಕ್ಕೆ ಶುಭಾರಂಭ ಮಾಡುತ್ತಾಳೆ.

 ಗರಿಕೆ ಹುಲ್ಲು ಅಥವಾ ದೂರ್ವಾಪತ್ರೆ ಎಲ್ಲರಿಗೂ ತಿಳಿದಂತೆ ಗಣಪತಿಗೆ ಪ್ರಿಯ. ಗರಿಕೆಯ  ವೈಶಿಷ್ಟ್ಯವೆಂದರೆ, ಅದರ ಚಿಗುರು ಅಥವಾ ಅಂಕುರ ಒಂದರಿಂದ ಕವಲೊಡೆದು ಮತ್ತೊಂದು ಗರಿಕೆಯಾಗಿ ಎರಡಾಗಿ ಬೆಳೆಯುತ್ತದೆ. ಹೀಗೆ ಸಾಂಕೇತಿಕವಾಗಿ ಗರಿಕೆಯೊಂದಿಗೆ ಕಟ್ಟಿದ ಹೂವನ್ನ ಶ್ರಾವಣ ಶುಕ್ರವಾರ ಮುತ್ತೈದೆತನದ ಕುರುಹಾಗಿ, ಕೊಟ್ಟ ಹಾಗೂ ತೆಗೆದುಕೊಂಡ ಮುತ್ತೈದೆಯ ವಂಶ ಅಥವಾ ಸಂತತಿಯೂ, ನಿಲ್ಲದೇ ಉತ್ತಮೋತ್ತಮವಾಗಿ ಬೆಳೆಯಲಿ ಎಂದು ಮುಡಿಯಲು ಕೊಡುವುದೇ ಈ ಆಚರಣೆಯ ಹಿಂದಿರುವ ಆಶಯ.

 ಜೊತೆಗೇ ಗರಿಕೆಗಿರುವ ಔಷಧೀಯ ಗುಣಗಳೂ ಸಹ ಸರ್ವವಿದಿತ.ಈಗೀಗ ನಗರವಾಸಿಗಳ ಸೌಲಭ್ಯಕ್ಕೆ ಕಟ್ಟಿ ತಯಾರಿಸಿದ ಚೂಡಿಗಳು ಸಿಕ್ಕರೂ ನಾವೇ ಆರಿಸಿ ಕಟ್ಟಿರುವ ಚೂಡಿಯ ಹಿಂದಿರುವ ಖುಷಿಯೇ ಬೇರೆ!

 ಪೂಜೆಯನ್ನ ಇನ್ನಷ್ಟು ಜನಪ್ರಿಯವಾಗಿಸಲು ಉಂಡ್ಲಕಾಳು (ಉಕ್ಕಡಿಸಿದ ಅಕ್ಕಿ ಅಥವಾ ಗೋಧಿ ಹಿಟ್ಟಿನ ಸಣ್ಣ ಸಣ್ಣ ಗೋಲಿಗಳನ್ನ, ತುಪ್ಪದಲ್ಲಿ ಕರಿದು ತೆಂಗಿನ ತುರಿ ಮತ್ತು ಬೆಲ್ಲದ ಚೂರ್ಣದೊಂದಿಗೆ ಬೆರೆಸಿ ಮಾಡುವ ಒಂದು ಸವಿ ಸವಿ ಖಾದ್ಯ, ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಇದು ಪ್ರಿಯ), ಸೇವಿಗೆ, ಸಿಹಿಕಡುಬು, ರಸಾಯನ, ಶೀರಾ ಮುಂತಾದ ಭಕ್ಷ್ಯಗಳಲ್ಲಿ ಯಾವುದಾದರೂ ಒಂದನ್ನು ಪ್ರತಿ ಚೂಡಿಪೂಜೆಗೆ ನೈವೇದ್ಯಕ್ಕೆ ತಯಾರಿಸುವುದು ಮತ್ತೊಂದು ಪರಿಪಾಠ.

 ಹೀಗೆ ಹೆಚ್ಹು ಡಂಭಾಚಾರ, ಶ್ರಮಗಳಿಲ್ಲದೇ ಅರ್ಥಪೂರ್ಣವಾಗಿ ಆಚರಿಸುವ ಈ ಚೂಡಿಪೂಜೆ, ಹೊಸ ಮದುವಣಗಿತ್ತಿಯರಿಗಂತೂ ಉಡುಗೊರೆಯನ್ನೂ ಸಹ ಕೊಡಿಸುತ್ತದೆ.

 ಒಟ್ಟಿನಲ್ಲಿ ಪೂಜೆ ಬರೀ ಗೃಹಿಣಿಯರೇ ಮಾಡುವುದಾದರೂ ಮನೆಯ ಇತರರೂ ಆ ಸಂಭ್ರಮದಲ್ಲಿ ಪಾಲ್ಗೊಂಡು,ಶ್ರಾವಣದ ಪ್ರತಿ ಶುಕ್ರವಾರ ಹಾಗೂ ಭಾನುವಾರ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ,  ಆಪ್ತೇಷ್ಟರನ್ನು ಭೇಟಿಮಾಡಿ  ಹಾರೈಸಿ ಅವರಿಗೆ ಚೂಡಿ ಕೊಡುವ ಈ ಸಂಪ್ರದಾಯ ನಿಜಕ್ಕೂ ವಿಶೇಷ ಮತ್ತು ಅರಿಯಲರ್ಹ.

 ಕಾಲಕ್ರಮೇಣ ಧಾವಂತದ ಬದುಕಿನಲ್ಲಿ ಇದು ನಶಿಸಿಹೋಗಬಾರದೆಂಬುದಷ್ಟೇ ನನ್ನ ಹಂಬಲ.

Rating
No votes yet

Comments