ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು:‍ ಒಂದು ಪ್ರತಿಸ್ಪಂದನ‌

ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು:‍ ಒಂದು ಪ್ರತಿಸ್ಪಂದನ‌

ನನ್ನ ಈ ಹಿಂದಿನ ’ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು’ ಬರಹಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನಾ ರೂಪದಲ್ಲಿ ಈ ಲೇಖನವನ್ನು ಬರೆಯುತ್ತಿದ್ದೇನೆ. 
ಮುಖ್ಯವಾಗಿ ಆಸು ಹೆಗ್ಡೆಯವರ  ಹುಡುಕುವಿಕೆ ಸದಾ ಸ್ವಾಗತ.  ಪ್ರೊ. ಜಿ.ವೆಂಕಟಸುಬ್ಬಯ್ಯರವರು ಒಬ್ಬ ಭಾಷಾವಿಜ್ಞಾನಿ. ಡಿ.ಎನ್. ಶಂಕರಭಟ್ ರವರು ಮತ್ತೊಬ್ಬ  ಭಾಷಾವಿಜ್ಞಾನಿ. ವೆಂಕಟಸುಬ್ಬಯ್ಯರವರು ಪ್ರಜಾವಾಣಿಯ ’ಇಗೋ ಕನ್ನಡದ ಮೂಲಕ ಪ್ರಸಿದ್ಧರೂ ಹೌದು. ಅವರು ಬಳಕೆ ಪದಗಳಿಗೆ ಅರ್ಥವನ್ನು ನೀಡಿರುತ್ತಾರೆ. ’ಸಭಿಕರೇ’ ಎಂದು ಸಂಬೋಧಿಸುವುದು ಬಳಕೆಯಲ್ಲಿದೆ. ಆದುದರಿಂದ”ಸಭಾಸದ’ ಎಂಬ ಅರ್ಥವನ್ನೂ  ಬರೆದಿರುತ್ತಾರೆ. ಬಳಸಬಹುದು. ಬಳಸಿರಿ. ಏಕೆಂದರೆ ಅದು ರೂಢಿಯಲ್ಲಿದೆ. ಆದರೆ ’ಸಭಾಸದರೇ’ ಅಥವಾ ’ಸಭ್ಯರೇ’ ಎಂದು ಸಂಬೋಧಿಸುವುದು ಹೆಚ್ಚು ಸೂಕ್ತ. 
’ಅಂತರರಾಷ್ತ್ರೀಯ ’ ಎಂಬ ಪದ ಹೆಚ್ಚು ಬಳಕೆಯಲ್ಲಿದೆ. ’ಅಂತರ್ರಾಷ್ಟ್ರೀಯ’ ಎಂತಲೂ ಕೆಲವರು ಬರೆಯುತ್ತಾರೆ. ಇದು ಎರಡು ಸಂಸ್ಕೃತ ಪದಗಳ ಸೇರುವಿಕೆಯಿಂದಾದ ಪದ. ಸಂಸ್ಕೃತದಲ್ಲಿ ಎರಡು ರೇಫಗಳು ಸೇರಿದರೆ ಪೂರ್ವಪದದ ಅಂತ್ಯಾಕ್ಷರವು ದೀರ್ಘವಾಗುತ್ತದೆ. ಸಂಸ್ಕೃತ ಮೂಲಪದಗಳನ್ನು ಗಮನಿಸಿದರೆ ಕನ್ನಡ ಪದಗಳಲ್ಲಿದ್ದಂತೆ ’ಜರ್ರನೆ’, ತಿರ್ರನೆ’ ಮೊದಲಾದ ರಕಾರಕ್ಕೆ ರಕಾರದ ಒತ್ತಿರುವ ಅಕ್ಷರಗಳಿಲ್ಲ. ಅಂತರ್ ರಾಷ್ಟ್ರೀಯ, ಪುನರ್ ರಚನೆ ಮೊದಲಾದ ಸಂದರ್ಭಗಳಲ್ಲಿ ಮಾತ್ರ ಪೂರ್ವ ಪದದ ಕೊನೆಯ ಅಕ್ಷರವು ದೀರ್ಘವಾಗುತ್ತದೆ. ’ಅಂತರ್ಜಾತೀಯ’. ಪುನರ್ ಉತ್ಪತ್ತಿ (ಪುನಃ ಉತ್ಪತ್ತಿ) ಎಂಬಲ್ಲಿ ’ಪುನರುತ್ಪತ್ತಿ’ ಎಂದಾಗುತ್ತದೆ. ’ಪುನರ ಉತ್ಪತ್ತಿ’ ಎಂಬುದಲ್ಲವಲ್ಲ. ರ್ ಕಾರಕ್ಕೆ ಇಕಾರ ಸೇರಿ ಗುಣಿತವಾಗಿದೆ. ರೇಫದ ಮುಂದೆ ಸ್ವರಾಕ್ಷರಗಳು ಬಂದರೆ ಈ ರೀತಿ. ವ್ಯಂಜನಾಕ್ಷರಗಳು ಬಂದರೆ ಬಂದ ವ್ಯಂಜನ ಯಾವುದು ಎನ್ನುವುದರ ಮೇಲೆ ನಿರ್ಧಾರ. ಪುನ:ಪುನ: ಇಲ್ಲಿ ಪುನರ್ಪುನ: ಎಂದಾಗುವುದಿಲ್ಲ. ರೇಫದ ಮುಂದೆ  ಉಪಾಧ್ಮಾನೀಯ(ಪಕಾರ) ಬಂದರೆ ಬರವಣಿಗೆಯಲ್ಲಿ ವಿಸರ್ಗ ಹಾಗೆಯೇ ಉಳಿದು ಉಚ್ಚಾರಣೆಯಲ್ಲಿ ಮಾತ್ರ ’ಪುನಫ್ ಪುನ” ಎಂದಾಗುತ್ತದೆ. ಕಂಠಸ್ಥಾನೀಯ ( ಕಕಾರ) ಬಂದರೆ. ಉದಾ: ಅಂತ:ಕಲಹ. ಹಾಗೆಯೇ ಉಳಿಯುತ್ತದೆ. ಉಚ್ಚಾರಣೆಯಲ್ಲಿ ಅಂತಹ್ ಕಲಹ) ಎಂದಾಗುತ್ತದೆ. ಸಕಾರ ಪರವಾದಾಗ ಒಂದು ರೀತಿ ಹೀಗೆ ಪರವಾಗುವ ಅಕ್ಷರಗಳಿಗನುಗುಣವಾಗಿ ಶಬ್ದಗಳಿರುತ್ತವೆ. 
ತತ್ ಪದಕ್ಕೆ ಅರ್ಥ ’ಅದು’ ಎಂದು. ನಮ್ಮ ಇಂದ್ರಿಯಗಳಿಗೆ ಗೋಚರವಾಗದ ಚೇತನವನ್ನು ’ತತ್’ ಎಂದು ಕರೆದರು” ಅದಕ್ಕೆ ಸಂಬಂಧಿಸಿದ’ ಎಂಬರ್ಥದಲ್ಲಿ ಬಳಕೆ. ಅದನ್ನು ಕೊನೆಯಲ್ಲಿ ಸಾಧಿಸುವುದೇ ಸಿದ್ಧಾಂತ. ಇಲ್ಲಿ ’ಅದು’ ಮೊದಲು ಗೋಚರವಾಗದಿರುವುದು. ಅಂತಹ ವಿಚಾರಗಳಿಗೆ ಸಂಬಂಧಿಸಿದ ಎನ್ನುವಲ್ಲಿ ’ತತ್’  ತತ್ ತ್ವ (ತತ್ತ್ವ) ಎಂದಾಗುತ್ತದೆ. ಇದು ಸರಿಯಾದ ಪದ. ನಾನು ’ತತ್ವ’ ಎಂಬ ರೂಢಿಯಲ್ಲಿರುವ ಪದವನ್ನೇ ಹೆಚ್ಚಾಗಿ ಬಳಸುತ್ತೇನೆ. 
ಇನ್ನು ಶಂಕರಭಟ್ ರವರ ಪ್ರಕಾರ ಸಂಸ್ಕೃತ ಅಲ್ಲ. ಸಂಸ್ಕ್ರುತ. ಕೃಷಿ ಅಲ್ಲ. ಕ್ರುಷಿ.  ಅವರು ಸಂಶೋಧನೆ ಮಾಡಿ ಕನ್ನಡಕ್ಕೆ ಈಗಿರುವ ಋಕಾರ, ಮಹಾಪ್ರಾಣಾದಿ ಹಲವು ಅಕ್ಷರಗಳು ಅಗತ್ಯವಿಲ್ಲ ಎಂದಿದ್ದಾರೆ. ಆಡುಮಾತಿನ ರೂಪದಲ್ಲಿ ಬರವಣಿಗೆ ಇರಬೇಕು ಎಂಬುದು ಅವರ ವಾದ. ಅವರ ಹೆಸರನ್ನು ಆಡುಭಾಷೆಯಲ್ಲಿ ಬರೆಯುವುದಾದರೆ ’ಸಂಕ್ರುಬಟ್ರು’ ಎಂದು ಬರೆಯಬಹುದು. ನನ್ನ ಹೆಸರು ನಂಜುಂಡ. ಉಚ್ಚಾರಣೆಯಲ್ಲಿ ನಞ್ಜುಣ್ಡ ಎಂದು ಉಚ್ಚರಿಸಲಾಗುತ್ತದೆ. ಉಚ್ಚಾರಣೆಯಂತೆ ಬರವಣಿಗೆ ಇರಬೇಕು ಎಂದಾದರೆ ’ನಞ್ಜುಣ್ಡ ’ ಎಂದು ಬರೆಯುವುದು ಸೂಕ್ತ. ಅಂತ ಎನ್ನುವುದನ್ನು ಅನ್ತ ಎಂದು ಉಚ್ಚರಿಸುವುದೇ ಸರಿ. ಅನುಸ್ವಾರದ ಮುಂದೆ ಪರವಾದ  ವ್ಯಂಜನಾಕ್ಷರದ ಕೊನೆಯ ಅನುಸ್ವಾರ ಯಾವುದಿದೆಯೋ ಅದರಂತೆ ಉಚ್ಚಾರಣೆ ಇರುತ್ತದೆ. ಅಂತ( ಅಂ= ಅಮ್ ತ) ಅಮ್ತ ಎಂದು ಉಚ್ಚರಿಸುವುದಿಲ್ಲ..”ಹಾವು’ ಪದವನ್ನು ಉಚ್ಚರಿಸಿರಿ.  ಮಧ್ಯದಲ್ಲಿ ಅಂವ್ ಎಂಬ ಉಚ್ಚಾರ ಏಕೆ. ಇವೆಲ್ಲಾ ಅತ್ಯಂತ ಸ್ವಾರಸ್ಯಕರವಾಗಿದೆ. 
ಮಧ್ಯಂತರ ಎಂದು ಬಳಸುತ್ತಾರೆ. ಅದು ಹೇಗೆ ಸರಿ ? ಮಧ್ಯ+ಅಂತರ = ಮಧ್ಯಾಂತರ ಅಲ್ಲವೇ?.ಸಾಮಾನ್ಯ ವ್ಯಾಕರಣ ನಿಯಮ ತಿಳಿದವರಿಗೂ ಇದು ಸವರ್ಣದೀರ್ಘಸಂಧಿಯಾಗಬೇಕು ಎಂದು ತಿಳಿಯಬೇಕು. ಆದರೂ ರೂಢಿ ನಮ್ಮನ್ನು ತಪ್ಪು ಪದಗಳ ಬಳಕೆಯತ್ತ ಕೊಂಡೊಯ್ಯುತ್ತದೆ. 
ಕೊನೆಯದಾಗಿ, ನಾನು, ನೀವು, ಎಲ್ಲರೂ ’ಸೃಜನಶೀಲ’ ಎಂಬುದು ಸರಿ ಎಂದು ತಿಳಿದಿದ್ದೇವೆ. ಸಂಕ್ರುಬಟ್ರು ’ಸ್ರುಜನಶೀಲ’ ಎನ್ನುತ್ತಾರೆ. ಶತಾವಧಾವಿ ಆರ್. ಗಣೇಶ್ ರವರು ’ಸರ್ಜನಶೀಲ’ ಎಂಬುದು ಸರಿಯಾದ ಪದ ಎಂದಿದ್ದಾರೆ. ಸಂಕ್ರುಬಟ್ರ ಅಭಿಪ್ರಾಯ ಮಾತಿನಂತೆ ಬರವಣಿಗೆ ಇರಬೇಕು ಎಂತಾದಲ್ಲಿ ಸರಿ. ನನ್ನ, ನಿಮ್ಮ, ಎಲ್ಲರ ಬಳಕೆ ’ಸೃಜನಶೀಲ’ ಇರುವುದರಿಂದ ಪ್ರಜಾಪ್ರಭುತ್ವದ ಪ್ರಕಾರ ನಮ್ಮದು ಸರಿ. ಅವಧಾನಿಯವರು ಬಳಕೆ ಸರಿ ಎಂದು ಮನದಟ್ಟಾಗಿದೆ. ಆದರೆ ಬಳಸಲು ಮನಸ್ಸಾಗುತ್ತಿಲ್ಲ.  ತಪ್ಪನ್ನು ತಪ್ಪು ಎಂದು ತಿಳಿಯುವುದೇ ಸರಿ. ಸರಿಯನ್ನು ಸರಿಯೆಂದು ತಿಳಿಯುವುದು ಸರಿಯಲ್ಲ. ಏಕೆಂದರೆ ಮತ್ತೊಂದು ಮೇಲ್ಮಟ್ಟದ ಸರಿ ಇರಬಹುದು.
 

 

Rating
Average: 2 (1 vote)

Comments