ಸಾರಗ್ರಾಹಿಯ ರಸೋದ್ಗಾರಗಳು -11
ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯ, ಪ್ರಖರ ಸತ್ಯವಾದಿಯಾದ 116 ವರ್ಷಗಳ ಪಂ. ಸುಧಾಕರ ಚತುರ್ವೇದಿಯವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಆಸಕ್ತಿಯುಳ್ಳವರಿಗಾಗಿ ಅವರ ವಿಳಾಸ ಹೀಗಿದೆ: #286/ಸಿ, ಶ್ರೀ ಕೃಷ್ಣ ಸೇವಾಶ್ರಮ ರಸ್ತೆ, ಜಯನಗರ 5ನೆಯ ಬ್ಲಾಕ್, ಬೆಂಗಳೂರು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . .
-ಕ.ವೆಂ.ನಾಗರಾಜ್.
****************
ವಿಶ್ವಚೇತನ
ಭಗವಂತ ಸರ್ವಶಕ್ತ, ಸರ್ವವ್ಯಾಪಕ, ನಿರಾಕಾರ. ಯಜುರ್ವೇದದ ಈ ಮಂತ್ರ ಕೇಳಿ:
ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ|| (ಯಜು.೪೦.೫.)
[ತತ್ ಏಜತಿ] ಅದು ವಿಶ್ವಕ್ಕೆ ಗತಿ ನೀಡುತ್ತದೆ. [ತತ್ ನ ಏಜತಿ] ಅದು ಸ್ವತಃ ಚಲಿಸುವುದಿಲ್ಲ. [ತತ್ ದೂರೇ] ಅದು ದೂರದಲ್ಲಿದೆ. [ತತ್ ಉ ಅಂತಿಕೇ] ಅದೇ ಹತ್ತಿರದಲ್ಲಿಯೂ ಇದೆ. [ತತ್ ಅಸ್ಮ ಸರ್ವಸ್ಯ ಅಂತಃ] ಅದು ಇದೆಲ್ಲದರ ಒಳಗೂ ಇದೆ. [ತತ್ ಉ ಅಸ್ಯ ಸರ್ವಸ್ಯ ಬಾಹ್ಯತಃ] ಅದೇ ಇದೆಲ್ಲದರ ಹೊರಗೂ ಇದೆ. ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂತಿರುವ, ಎಲ್ಲಾಕಡೆ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ನಿಜವಾಗಿ ಅದಿರುವುದು ಹಾಗೆಯೇ.
ಬ್ರಹ್ಮಾಂಡದ ಸೃಷ್ಟಿ
ದಿಕ್ಕುಗಳು ಎನ್ನುವುದು ಸ್ಥಳ ಗುರುತಿಸುವುದು, ದಿಸೆ ತೋರಿಸುವ ಸಲುವಾಗಿ ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದೇ ಹೊರತು ಮತ್ತೇನಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಒಂದು ಅರ್ಥದಲ್ಲಿ ಸರಿಯಿರಬಹುದು. ಆ ಸೂರ್ಯನೂ ಸಹ ತನ್ನ ಚಲನೆಯ ಪಥವನ್ನು ಬದಲಿಸುತ್ತಾನೆ. ಬಳಕೆಯಲ್ಲಿ ನಾವು ಪೂರ್ವ, ಪಶ್ಚಿಮ, ಇತ್ಯಾದಿ ಎಂಟು ದಿಕ್ಕುಗಳನ್ನು ಬಳಸುತ್ತೇವೆ. ನಮಗೆ ಪೂರ್ವವೆನಿಸುವ ಒಂದು ಸ್ಥಳ ಇನ್ನೊಬ್ಬರಿಗೆ ಪಶ್ಚಿಮವಾಗಬಹುದು. ವಾಸ್ತವವಾಗಿ ನಮ್ಮ ಸುತ್ತಲೂ ಇರುವ ೩೬೦ ಡಿಗ್ರಿ ಪ್ರದೇಶದ ಒಂದೊಂದು ಡಿಗ್ರಿಯೂ ಒಂದೊಂದು ದಿಕ್ಕು. ಈಗ ಹೇಳಲಾಗುತ್ತಿರುವ ಜ್ಯೋತಿಷ್ಯ ಎಂಬುದಕ್ಕೆ ಅರ್ಥವಿಲ್ಲ. ಬ್ರಹ್ಮಾಂಡದ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಜನರನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಅವುಗಳೇ ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯೀ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಅವನೇ ಭಗವಂತ. ಈ ವಿಶಾಲ ಬ್ರಹ್ಮಾಂಡವನ್ನು ಆ ಪರಮಾತ್ಮ ಇದ್ದಲ್ಲೇ ಇದ್ದು ನಿಯಂತ್ರಿಸುತ್ತಿದ್ದಾನೆ. ಇದನ್ನು ಅರಿಯದಿದ್ದರೆ ಅವನಿಗೆ ನಷ್ಟವೇನೂ ಇಲ್ಲ. ನಾನು ಎಷ್ಟೋ ವಿದ್ವಾಂಸರನ್ನು ನಕ್ಷತ್ರಗಳು ಎಷ್ಟಿವೆ ಎಂಬುದು ಗೊತ್ತೇ? ಎಂದು ಪ್ರಶ್ನಿಸಿದ್ದೇನೆ. ಯಾರಿಗೂ ಉತ್ತರಿಸಲು ಆಗಿಲ್ಲ. ಸರ್ ಸಿ.ವಿ. ರಾಮನ್ರವರನ್ನೂ ಕೇಳಿದ್ದೆ. ಅವರು "ಪೋಯಾ, ಪೋಯಾ! ನಾನು ಸಣ್ಣವನು, ಇಷ್ಟು ದೊಡ್ಡ ಬ್ರಹ್ಮಾಂಡವನ್ನು ಅರಿಯುವ, ಅಳೆಯುವ ಶಕ್ತಿ ನನ್ನಂತಹವರಿಗೆ ಎಲ್ಲಿ ಬರಬೇಕು?" ಎಂದು ಹೇಳಿದ್ದರು.
ಬ್ರಹ್ಮಚರ್ಯ
ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವವರು ಎಂದು ಅರ್ಥವಲ್ಲ. ಬ್ರಹ್ಮನಲ್ಲಿ ಸಂಚಾರ ಮಾಡುವ ಶಕ್ತಿಯಿರುವವನು ಎಂದು ಅರ್ಥ. ಈ ಮನುಷ್ಯ ಜನ್ಮ ದೊಡ್ಡದು. ಅದನ್ನು ಭೌತಿಕ ಸುಖಭೋಗಕ್ಕಾಗಿ ಮಾತ್ರ ಎಳಸದೆ ಈ ಜನ್ಮದ ಅರ್ಥ ತಿಳಿದು ಸತ್ಕರ್ಮಕ್ಕಾಗಿ ಬಳಸಬೇಕು. ಹಾಗೆ ಮಾಡದಿದ್ದರೆ ನಂತರದಲ್ಲಿ ಮತ್ತೆ ಇನ್ನು ಯಾವಾಗಲೋ ಮನುಷ್ಯ ಸಿಕ್ಕುವುದು! ಮನುಷ್ಯಜನ್ಮ ಎಷ್ಟೋ ಜನ್ಮಗಳನ್ನು ದಾಟಿಬಂದ ನಂತರ ಸಿಕ್ಕಿದೆ. ಇದನ್ನು ಸಾರ್ಥಕಪಡಿಸಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಗಳಾಗಬೇಕಾದುದು ಮನುಷ್ಯಜನ್ಮದ ಉದ್ದೇಶ. ಯಾರೋ ಹೇಳುತ್ತಿದ್ದರು, ಲಕ್ಷಾಂತರ ಜನ್ಮಗಳ ನಂತರ ಮನುಷ್ಯನಾಗಿ ಹುಟ್ಟಿದ್ದೇವೆ, ಪುನಃ ಕೆಳಗೆ ಹೋಗುತ್ತೇವೆಯೇ? ಮೇಲೆ ಹತ್ತಿ ಬಂದಿದ್ದೇವೆ, ಕೆಳಗೆ ಇಳಿಯುತ್ತೇವೆಯೇ? ಸರಿಯಾಗಿ ಮನುಷ್ಯನಂತೆ ನಡೆಯದಿದ್ದರೆ ಮನುಷ್ಯರಾಗೇ ಹುಟ್ಟುತ್ತೇವೆಂದು ಹೇಳಲಾಗುವುದಿಲ್ಲ. ನಾವು ಮಾಡಿದ ಕರ್ಮವನ್ನು ನಾವು ಭೋಗಿಸಲೇಬೇಕು. ಇದು ಭಗವಂತನ ನಿಯಮ. ನಾನು ಬಹಳಷ್ಟು ಸನ್ಯಾಸಿಗಳನ್ನು ನೋಡಿದ್ದೇನೆ - ಕಾವಿ ಬಟ್ಟೆ ಸನ್ಯಾಸಿಗಳು, ಬಿಳಿ ಬಟ್ಟೆ ಸನ್ಯಾಸಿಗಳು, ಹಳದಿ ಬಟ್ಟೆ ಸನ್ಯಾಸಿಗಳು, ಕಪ್ಪು ಬಟ್ಟೆ ಸನ್ಯಾಸಿಗಳು, ಹೀಗೆ. ಸನ್ಯಾಸಿಗಳು ಎಂದರೆ ಎಲ್ಲವನ್ನೂ ಬಿಟ್ಟವರು, ಅವರೇನು ಬಿಟ್ಟಿದ್ದಾರೆ? ಹಸಿವಾದಾಗ ಭವತಿ ಭಿಕ್ಷಾಂದೇಹಿ ಅನ್ನುತ್ತಾರೆ, ಛಳಿಯಾದಾಗ ಬೆಚ್ಚಗೆ ಹೊದ್ದುಕೊಳ್ಳುತ್ತಾರೆ! ಸನ್ಯಾಸಿಗಳೆಂದರೆ ಭೌತಿಕ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಪರಮಾತ್ಮನ ಕುರಿತು ಧ್ಯಾನದಲ್ಲಿ ತೊಡಗಿಕೊಂಡವರು ಎನ್ನುತ್ತಾರೆ. ಅಂತಹ ನಿಜವಾದ ಸನ್ಯಾಸಿಗಳು ಎಷ್ಟು ಜನ ಇದ್ದಾರೆ?
ನೋಯಿಸದಿರೋಣ
ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ. ಪಿಪ್ಪಲಾದ ಎಂಬ ಋಷಿಗೆ ಆ ಹೆಸರು ಬಂದದ್ದು ಆತ ಕೆಳಗೆ ಬಿದ್ದಿದ್ದ ಫಲವನ್ನು ಮಾತ್ರ ತಿನ್ನುತ್ತಿದ್ದರಿಂದ. ಗೌತಮನಿಗೆ ಅಕ್ಷಪಾದ -ಅಂದರೆ ಕಾಲಿನಲ್ಲಿ ಕಣ್ಣಿದ್ದವನು- ಎಂಬ ಹೆಸರೂ ಇತ್ತು. ಆತ ನಡೆದಾಡುವಾಗ ಯಾವುದೇ ಕ್ರಿಮಿ, ಕೀಟಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಅವರುಗಳು ಅಷ್ಟರಮಟ್ಟಿಗೆ ಇತರರನ್ನು ನೋಯಿಸಬಾರದೆಂಬ ಮನೋಭಾವ ಹೊಂದಿದ್ದರು. ಮಾತು ಅನ್ನುವುದು ಬಾಣವಿದ್ದಂತೆ. ಆಡಿದ ಮೇಲೆ ಮುಗಿಯಿತು. ಬಾಣ ತನ್ನ ಗುರಿಯನ್ನು ಛೇದಿಸುವಂತೆ ಪಾಪವನ್ನು ದೂರ ಮಾಡುವಂತಿರಬೇಕು, ಇತರರನ್ನು ಚುಚ್ಚುವಂತಿರಬಾರದು. ಮನಸ್ಸಿಗೆ ಹಿತ, ಸಂತೋಷ ತರಬೇಕು. ನಮಗೆ ಕೆಟ್ಟದಾದಾಗ, ತೊಂದರೆಯಾದಾಗ ಪರಮಾತ್ಮನನ್ನು ದೂಷಿಸುವುದು ಸರಿಯಲ್ಲ. ನಮಗೆ ಕೆಟ್ಟದಾಗಲು ಕಾರಣ ನಮ್ಮ ತಪ್ಪೇ ಹೊರತು ಪರಮಾತ್ಮನದಲ್ಲ ಎಂಬುದನ್ನು ಅರಿಯಬೇಕು. ನಮಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕೇ ಹೊರತು ಅವನನ್ನು ಬಯ್ಯಬಾರದು. ನಾವು ಹೊಗಳಿದರೂ ಅಷ್ಟೆ, ತೆಗಳಿದರೂ ಅಷ್ಟೆ, ಪರಮಾತ್ಮ ಪರಮಾತ್ಮನೇ. ಅವನು ನಿರ್ಲಿಪ್ತ. ಹೊಗಳುತ್ತಾರೆಂದು ಒಳ್ಳೆಯದು ಮಾಡುತ್ತಾನೆ, ತೆಗಳುತ್ತಾರೆಂದು ಕೆಟ್ಟದು ಮಾಡುತ್ತಾನೆ ಎಂದು ಭಾವಿಸುವುದು ಮೂರ್ಖತನ. ಎಲ್ಲಿ ನ್ಯಾಯ, ಸತ್ಯ, ಧರ್ಮ ಇರುತ್ತದೋ ಅಲ್ಲಿ ಭಗವಂತನಿರುತ್ತಾನೆ. ಇದರ ಅರಿವಾದರೆ ಪಾಪ ಮಾಡಲು ಧೈರ್ಯ ಬರುವುದಿಲ್ಲ.
ಒಳ್ಳೆಯ ದಾರಿ
ಪರಮಾತ್ಮ ಎಂದೂ ಸಾಕಾರ ರೂಪಿ ಅಲ್ಲವೇ ಅಲ್ಲ, ಸಾಕಾರನೆಂದಾಕ್ಷಣ ಸರ್ವಶಕ್ತ, ಸರ್ವವ್ಯಾಪಕ ಭಗವಂತನನ್ನು ಮಿತಿಗೊಳಿಸಿದಂತೆ! ಆತ ಅನುಭವಗಮ್ಯನೇ ಹೊರತು ಕಣ್ಣಿನಿಂದ ಕಾಣಲಾಗುವುದಿಲ್ಲ. ಹೃದಯದಲ್ಲಿ ಕಾಣಬೇಕು, ಅನುಭವಿಸಬೇಕು! ಸ್ವರ್ಗ, ನರಕ ಅನ್ನುವುದು ಬೇರೆ ಇಲ್ಲ. ಇಲ್ಲೇ ಇದೆ. ಸ್ವರ್ಗ ಅಂದರೆ ಮೇಲೇರುವುದು, ನರಕ ಅಂದರೆ ಕೆಳಕ್ಕೆ ಇಳಿಯುವುದು. ನಮ್ಮ ನಡವಳಿಕೆಗಳು ಸರಿಯಿದ್ದರೆ, ಸತ್ಕರ್ಮ ಮಾಡಿದರೆ ನಾವು ಸ್ವರ್ಗ ಕಾಣುತ್ತೇವೆ, ಇಲ್ಲದಿದ್ದರೆ ಕೆಳಗೆ ಬೀಳುತ್ತೇವೆ. ನನ್ನನ್ನು ನಾಸ್ತಿಕನೆಂದು ದೂರುವವರೂ ಇದ್ದಾರೆ. ಆಸ್ತಿಕರೆಂದರೆ ಯಾರು? ನಾಸ್ತಿಕರು ಯಾರು? ಅರ್ಥರಹಿತ ಸಂಪ್ರದಾಯಗಳು, ಆಚರಣೆಗಳನ್ನು ಪೋಷಿಸುವ ಆಸ್ತಿಕರೆನಿಸಿಕೊಳ್ಳುವವರಿಗಿಂತ ನಾಸ್ತಿಕರೇ ಮೇಲು! ಜ್ಞಾನಿಗಳಾದವರು ವಿಚಾರ ತಿಳಿದವರಾಗಿದ್ದು ಯಾರು ಏನೇ ಹೇಳಿದರೂ ತಪ್ಪುದಾರಿಗೆ ಎಳೆಯಲ್ಪಡುವುದಿಲ್ಲ. ಆದರೆ ತಿಳುವಳಿಕೆ ಕಡಿಮೆಯಿದ್ದವರನ್ನು ದಾರಿ ತಪ್ಪಿಸುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಕ್ಷಮಿಸಬೇಕು, ನಾನು ಆಡಿದ ಮಾತುಗಳು ಕಟುವಾಗಿ ಕಾಣಬಹುದು, ಆದರೆ ಸತ್ಯ ಸತ್ಯವೇ. ನಾನು ಯಾರನ್ನೂ ನೋಯಿಸಲು ಉದ್ದೇಶಿಸಿಲ್ಲ, ಕೆಟ್ಟ ಭಾವನೆಯಿಂದ ಮಾತನಾಡಿಲ್ಲ, ಪಂಡಿತನೆಂದು ಭಾವಿಸಿ ಆಡಿಲ್ಲ. ಒಳ್ಳೆಯ ವಿಚಾರ ಮಾಡೋಣ, ವಿಮರ್ಶೆ ಮಾಡೋಣ, ಒಳ್ಳೆಯ ದಾರಿಯಲ್ಲಿ ನಡೆಯೋಣ.
*************
ಹಿಂದಿನ ಲೇಖನಕ್ಕೆ ಲಿಂಕ್:
Comments
ಉ: ಸಾರಗ್ರಾಹಿಯ ರಸೋದ್ಗಾರಗಳು -11
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -11 by nanjunda
ಉ: ಸಾರಗ್ರಾಹಿಯ ರಸೋದ್ಗಾರಗಳು -11
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -11 by venkatb83
ಉ: ಸಾರಗ್ರಾಹಿಯ ರಸೋದ್ಗಾರಗಳು -11
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -11 by venkatb83
ಉ: ಸಾರಗ್ರಾಹಿಯ ರಸೋದ್ಗಾರಗಳು -11
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -11 by ಗಣೇಶ
ಉ: ಸಾರಗ್ರಾಹಿಯ ರಸೋದ್ಗಾರಗಳು -11
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -11 by nanjunda
ಉ: ಸಾರಗ್ರಾಹಿಯ ರಸೋದ್ಗಾರಗಳು -11
ಉ: ಸಾರಗ್ರಾಹಿಯ ರಸೋದ್ಗಾರಗಳು -11
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -11 by partha1059
ಉ: ಸಾರಗ್ರಾಹಿಯ ರಸೋದ್ಗಾರಗಳು -11
ಉ: ಸಾರಗ್ರಾಹಿಯ ರಸೋದ್ಗಾರಗಳು -11
In reply to ಉ: ಸಾರಗ್ರಾಹಿಯ ರಸೋದ್ಗಾರಗಳು -11 by Chikku123
ಉ: ಸಾರಗ್ರಾಹಿಯ ರಸೋದ್ಗಾರಗಳು -11