ಶ್ರಾವಣಿ ಕಲ್ಯಾಣ (ಕಥೆ)
ಟಪ್..ಟಪ್..ಎಂದು ಹನಿಯಿಂದ ಶುರುವಾದ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಮನೆಯಲ್ಲಿ ಕುಳಿತು ಕಿಟಕಿಯಲ್ಲಿ ಮಳೆಯನ್ನು ನೋಡುತ್ತಿದ್ದ ಹಾಗೆ ನನ್ನ ಮನಸಿನಲ್ಲೊಂದು ಆಲೋಚನೆ ಬಂತು. ಥೇಟ್ ತೆಲುಗು ಸಿನೆಮಾದಲ್ಲಿ
ತೋರಿಸುವ ಹಾಗೆ ಜೋರಾಗಿ ಬೀಳುತ್ತಿರುವ ಮಳೆಯಲ್ಲಿ ಬಿಳಿ ಚೂಡಿದಾರ್ ತೊಟ್ಟ ಹುಡುಗಿ ಮಳೆ ಬರುವ ಮುಂಚೆ ಕೈಯಲ್ಲಿ ಕೊಡೆ ಹಿಡಿದುಕೊಂಡು ಮಳೆ ಬಂದ ತಕ್ಷಣ ಆ ಕೊಡೆಯನ್ನು ಪಕ್ಕಕ್ಕೆ ಬಿಸಾಕಿ ತನ್ನ ಎರಡೂ ಕೈಗಳನ್ನು ಅಗಲವಾಗಿ
ಚಾಚಿ ಮುಖವನ್ನು ಮೇಲೆತ್ತಿ ಮಳೆ ಹನಿಗೆ ಮುಖ ಕೊಟ್ಟು, ಅಲ್ಲೇ ಪಕ್ಕದ ಬಸ್ ನಿಲ್ದಾಣದಲ್ಲಿ ನಿಂತಿರುವ ಸ್ಕೂಲ್ ಮಕ್ಕಳನ್ನು ಕರೆದು ಮಳೆಯಲ್ಲಿ ಅವರ ಜೊತೆ ನಾಟ್ಯ ಮಾಡಿ ಸುತ್ತಲೂ ಯಾರೊಬ್ಬರೂ ಮಳೆಯಲ್ಲಿ ಇಲ್ಲದೆ ಇದ್ದಾಗ ಇವಳಿಗಾಗಿಯೇ
ಎಂಬಂತೆ ಐಸ್ ಕ್ರೀಮ್ ಗಾಡಿಯವನೊಬ್ಬ ಇವಳ ಬಳಿ ಬಂದು ಇವಳಿಗೆ ಒಂದು ಐಸ್ ಕ್ರೀಂ ಕೊಟ್ಟು ಅವಳು ಆ ಮಳೆಯಲ್ಲಿ ಐಸ್ ಕ್ರೀಂ ತಿನ್ನುತ್ತಿದ್ದಾಗ ಜೋರಾಗಿ ಸಿಡಿಲೊಂದು ಬಡಿದು ಆ ಬೆಳಕಿನಲ್ಲಿ ಇವಳ ಮುಖ ಇನ್ನಷ್ಟು ಪ್ರಕಾಶಿತವಾಗಿ ಕಾಣುವಂತೆ ನನಗೂ ಒಬ್ಬಳು ಹುಡುಗಿ ಕಾಣಿಸಬಾರದ ಎಂದು ಆಲೋಚನೆ ಬಂದು ಯಾರಾದರೂ ಬರುತ್ತಾರ ಎಂದು ಮಳೆಯನ್ನೇ ನೋಡುತ್ತಾ ನಿಂತಿದ್ದೆ.
ಥೇಟ್ ಹಾಗೆ ಅಲ್ಲದಿದ್ದರೂ ಒಬ್ಬಳು ಹುಡುಗಿ ಕೊಡೆ ಹಿಡಿದು ನಡೆದು ಬರುತ್ತಿದ್ದಳು. ಅವಳ ಕೈಯಲ್ಲಿ ಐಸ್ ಕ್ರೀಂ ಇರಲಿಲ್ಲ, ಅವಳು ಬಿಳಿ ಚೂಡಿದಾರ್ ಕೂಡ ತೊಟ್ಟಿರಲಿಲ್ಲ. ಜೋರಾಗಿ ಬಂದ ಗಾಳಿಗೆ ಅವಳ ಕೊಡೆ ಹಿಂದೆ ಹೋಗಿ ಅವಳ ಮುಖ ಕಂಡಿತು. ವಾವ್..ಅವಳು ನಿಜಕ್ಕೂ ಅಪ್ಸರೆ ಎಂಥಹ ಚೆಲುವು ನಾನು ಇದುವರೆಗೂ ಇಂಥಹ ಚೆಲುವೆಯನ್ನು ನೋಡೇ ಇರಲಿಲ್ಲ. ಹಣೆಯ ಮೇಲಿನಿಂದ ಇಳಿಬಿದ್ದ ಮುಂಗುರಳನ್ನು ಹಿಂದಕ್ಕೆ ಹಾಕಿ ಹಾಗೆ ನನ್ನ ಕಡೆ ಒಮ್ಮೆ ನೋಡಿದಳೆನಿಸಿತು ಆದರೆ ಅದು ಸಾಧ್ಯ ಇಲ್ಲ. ಏಕೆಂದರೆ ನಮ್ಮ ಮನೆ ಇದ್ದದ್ದು ಮೊದಲನೇ ಮಹಡಿಯಲ್ಲಿ. ನೋಡ ನೋಡುತ್ತಿದ್ದ ಹಾಗೆ ಅವಳು ಕಾಣೆ ಆಗಿಬಿಟ್ಟಳು. ಎಲ್ಲಿ ಹೋದಳೋ ಎಂದು ಬಾಲ್ಕನಿ ಗೆ ಬಂದು ನೋಡಿದರೆ ಎಲ್ಲೂ ಕಾಣಲಿಲ್ಲ ಛೆ ಎಂದುಕೊಳ್ಳುತ್ತಿದ್ದ ಹಾಗೆ ಮನೆಯ ಕಾಲಿಂಗ್ ಬೆಲ್ ಸದ್ದಾಯಿತು ಹೋಗಿ ಬಾಗಿಲು ತೆರೆದರೆ ಆಚೆ ಹೋಗಿದ್ದ ಅಮ್ಮ ತರಕಾರಿ ತೆಗೆದುಕೊಂಡು ಬಂದಿದ್ದರು. ನಾನು ಒಳಗೆ ಬರುತ್ತಿದ್ದ ಹಾಗೆ ಅಮ್ಮ ಒಳಗೆ ಬಂದು ಬಾಮ್ಮ ಒಳಗೆ ಎಂದರು. ನಾನು ಇನ್ಯಾರೋ ಬಂದಿದ್ದಾರೆ ಎಂದು ನೋಡಿದರೆ ಅರೆ ಅದೇ ಹುಡುಗಿ ನಿಂತಿದ್ದಾಳೆ. ಇಷ್ಟು ಹೊತ್ತು ನಾನು ಮಳೆಯಲ್ಲಿ ನೋಡಿದ್ದ ಅದೇ ಚೆಲುವೆ ಈಗ ನಮ್ಮ ಮನೆಯಲ್ಲಿದ್ದಾಳೆ. ನನಗೆ ಒಳಗೊಳಗೇ ಸಂತೋಷ ಆಗುತ್ತಿದ್ದರೆ ಮತ್ತೊಂದೆಡೆ ಆದರೆ ಇಲ್ಲಿ ಯಾಕೆ ಬಂದಿದ್ದಾಳೆ ಎಂದು ಅವಳನ್ನೇ ನೋಡುತ್ತಾ ನಿಂತುಬಿಟ್ಟೆ.
ಅಮ್ಮ ಎರಡು ಮೂರು ಬಾರಿ ಜಯಂತ್..ಜಯಂತ್..ಎಂದು ಕರೆದಾಗ ವಾಸ್ತವಕ್ಕೆ ಬಂದು ಏನಮ್ಮ ಎಂದಿದ್ದಕ್ಕೆ ಈ ಹುಡುಗಿ ನಮ್ಮ ಪಕ್ಕದ ಫ್ಲಾಟ್ ಗೆ ಹೊಸದಾಗಿ ಬಂದಿರುವ ಹುಡುಗಿ ಶ್ರಾವಣಿ ಅಂತ. ಅವರಮ್ಮ ಆಚೆ ಹೋಗಬೇಕಾದರೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಅದಕ್ಕೆ ಇವಳು ಪಾಪ ಆಚೆ ಮಳೆಯಲ್ಲಿ ನಿಂತಿದ್ದಳು ಎಂದರು. ನಾನು ಹೌದಮ್ಮ ಪಾಪ ಎಂದೆ. ಏನಂದೆ ಎಂದರು ಅಮ್ಮ. ಏನಿಲ್ಲಮ್ಮ ಇಂಥ ಸಮಯದಲ್ಲಿ ಸಹಾಯ ಮಾಡದಿದ್ದರೆ ಪಾಪ ಬರುತ್ತದೆ ಅಂದೇ ಅಷ್ಟೇ ಎಂದು ಒಳಗೆ ಹೋದೆ. ಶ್ರಾವಣಿ ನನ್ನನ್ನೇ ನೋಡಿ ನಗುತ್ತಿದಳು. ರೂಮಿನ ಒಳಗೆ ಹೋಗಿ ಹುಚ್ಚೆದ್ದು ಕುಣಿಯಲಾರಂಭಿಸಿದೆ. ಆಹಾ ನನ್ನ ಅದೃಷ್ಟ ಇಂಥ ಸೌಂದರ್ಯವತಿ ನಮ್ಮ ಮನೆಯ ಪಕ್ಕದಲ್ಲಿ....ವಾವ್ ಎಂದುಕೊಳ್ಳುತ್ತಿದ್ದ ಹಾಗೆ ಮತ್ತೊಮ್ಮೆ ಕಾಲಿಂಗ್ ಬೆಲ್ ಸದ್ದಾಯಿತು. ನಾನೇ ಹೋಗಿ ಬಾಗಿಲು ತೆರೆದೇ. ಎದುರಿಗೆ ಒಬ್ಬರು ಹೆಂಗಸು ನಿಂತಿದ್ದರು. ಥಟ್ಟನೆ ಇವರನ್ನು ಎಲ್ಲೋ ನೋಡಿದ ಹಾಗೆ ಅನಿಸುತ್ತಿದೆ ಎಂದು ಯೋಚಿಸುತ್ತಿದ್ದ ಹಾಗೆ ಅರೆ ಇವರು ಶೋಭಾ ಮೇಡಂ ಅಲ್ಲವೇ...ಅರೆ ಇವರೇಕೆ ಇಲ್ಲಿ ಎಂದು ಆಲೋಚಿಸುತ್ತಾ ನನ್ನ ನೆನಪಿನ ಸುರುಳಿ ಹದಿನೈದು ವರ್ಷದ ಹಿಂದೆ ಓಡಿತು.
ಆಗ ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನಮ್ಮ ಶಾಲೆಯಲ್ಲಿ ಒಬ್ಬ ಹುಡುಗ ಹಾಗೆ ಒಬ್ಬ ಹುಡುಗಿಯನ್ನು ಪಕ್ಕಪಕ್ಕದಲ್ಲಿ ಕೂಡಿಸುತ್ತಿದ್ದರು. ನಾನು ನೋಡಲು ತುಂಬಾ ಮುದ್ದಾಗಿದ್ದಿದ್ದರಿಂದ ಶಾಲೆಯ ಎಲ್ಲ ಉಪಾಧ್ಯಾಯರಿಗೆ ನನ್ನ ಕಂಡರೆ ತುಂಬಾ ಇಷ್ಟ. ಆಗಷ್ಟೇ ಹೊಸದಾಗಿ ಕನ್ನಡ ಕಲಿಸಲು ನಮ್ಮ ಶಾಲೆಗೇ ಉಪಾಧ್ಯಾರಾಗಿ ಶೋಭಾ ಎಂಬುವವರು ನೇಮಕರಾಗಿದ್ದರು.
ಅಂದು ಅವರ ಮೊದಲ ತರಗತಿ. ಹಾಗೆಯೇ ನನ್ನ ಪಕ್ಕದಲ್ಲಿ ಹೊಸ ಹುಡುಗಿ ಒಬ್ಬಳು ಬಂದಿದ್ದಳು. ಅತ್ತ ಶೋಭಾ ಮೇಡಂ ಬೋರ್ಡ್ ಕಡೆ ತಿರುಗಿ ಬರೆಯುತ್ತಿದ್ದರೆ ನನ್ನ ಪಕ್ಕದಲ್ಲಿದ್ದ ಹುಡುಗಿ ನನಗೆ ಒಂದು ಚಾಕಲೇಟ್ ಕೊಟ್ಟಳು. ನಾನು ಥ್ಯಾಂಕ್ಸ್ ಎಂದು ಹೇಳಿ ಅವಳ ಕೈಗೆ ಮುತ್ತು ಕೊಟ್ಟು ಬಿಟ್ಟೆ. ಆಗೆಲ್ಲ ನಮಗೊಂದು ಅಭ್ಯಾಸ ಇತ್ತು. ಯಾರಾದರೂ ಏನಾದರೂ ಉಡುಗೊರೆ ಕೊಟ್ಟರೆ ಅವರ ಕೈಗೆ ಮುತ್ತು ಕೊಡುತ್ತಿದ್ದೆವು. ಅದೇ ರೀತಿ ಅವಳಿಗೂ ಮುತ್ತು ಕೊಟ್ಟೆ. ಆದರೆ ಆ ಹುಡುಗಿ ಸೀದಾ ಎದ್ದು ಹೋಗಿ ಶೋಭಾ ಮೇಡಂ ಬಳಿ ಏನೋ ಹೇಳಿದಳು. ಮೇಡಂ ಪಾಠ ನಿಲ್ಲಿಸಿ ಕೈಲಿ ಬೆತ್ತ ಹಿಡಿದು ನನ್ನ ಬಳಿ ಬಂದು ಏನೋ ಹುಡುಗಿ ಕೈಗೆ ಮುತ್ತು ಕೊಡ್ತೀಯ ಎಂದು ನನ್ನ ಅಂಗೈ ಮೇಲೆ ಬೆತ್ತದಿಂದ ಎರಡು ಬಾರಿಸಿದ್ದರು. ಅಂದಿನಿಂದ ಮುತ್ತು ಕೊಡುವ ಪರಿಪಾಠ ನಿಂತು ಹೋಗಿತ್ತು.
ಈಗ ಅದೇ ಶೋಭಾ ಮೇಡಂ ನಮ್ಮ ಮನೆಯ ಮುಂದೆ ಏನಿದು ಆಶ್ಚರ್ಯ, ಆಗ ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಈಗ ಚಾಡಿ ಹೇಳಲು ಬಂದಿದ್ದಾರ..ಛೆ ಛೆ ಹಾಗೆಲ್ಲ ಏನೂ ಇರುವುದಿಲ್ಲ ಎಂದು ಅಂದುಕೊಳ್ಳುತ್ತಿದ್ದಾಗ ಹಿಂದಿನಿಂದ ಅಮ್ಮ ಬಂದು ಅದೇನೋ ಮನೆಗೆ ಬಂದವರನ್ನು ಬಾಗಿಲ ಬಳಿಯೇ ನಿಲ್ಲಿಸಿ ಏನು ಮಾಡುತ್ತಿದ್ದೀಯ, ಶೋಭಾ ಬನ್ನಿ ಒಳಗೆ ಎಂದು ನನ್ನನ್ನು ಪಕ್ಕಕ್ಕೆ ತಳ್ಳಿ ಅವರನ್ನು ಒಳಗೆ ಕರೆದುಕೊಂಡು ಬಂದರು. ಶೋಭಾ ಇವನು ನನ್ನ ಮಗ, ಜಯಂತ್ ಇವರು ಶೋಭಾ ಅಂತ ಶ್ರಾವಣಿ ಅವರ ಅಮ್ಮ ಎಂದರು. ನೀವು ಮಾತನಾಡುತ್ತಾ ಇರಿ ನಾನು ಕಾಫಿ ತರುತ್ತೀನಿ ಎಂದು ಅಮ್ಮ ಒಳಗೆ ಹೋದರು.
ಏನು ಮಾಡ್ತಾ ಇದ್ದೀಯ ಜಯಂತ್ ಎಂದು ಕೇಳಿದ್ದಕ್ಕೆ, ನಾನೊಂದು ಸಾಫ್ಟ್ವೇರ್ ಕಂಪನಿ ಯಲ್ಲಿ ಕೆಲಸ ಮಾಡುತ್ತೀನಿ ಮೇಡಂ ಎಂದೆ. ಅದೇನು ಜಯಂತ್ ಮೇಡಂ ಎನ್ನುತ್ತಿದ್ದೀಯ ಆಂಟಿ ಎಂದು ಕರಿ ಎಂದರು. ಮೇಡಂ ಅದೂ...ಅದೂ ನಾನು ನಿಮ್ಮ ಹಳೆ ಸ್ಟುಡೆಂಟ್ ಹಾಗಾಗಿ ಮೇಡಂ ಅಂತಾನೆ ಬರತ್ತೆ ಎಂದೆ. ಹೌದಾ ಜಯಂತ್ ನನಗೆ ನೆನಪೇ ಇಲ್ಲ. ಯಾವ ಸ್ಕೂಲಿನಲ್ಲಿ ಯಾವ ಕ್ಲಾಸಿನಲ್ಲಿ ಇದ್ದೆ ನೀನು. ನಾನು ಹೇಳುವಷ್ಟರಲ್ಲಿ ಅಮ್ಮ ಒಳಗಿನಿಂದ ಕಾಫಿ ತೆಗೆದುಕೊಂಡು ಬಂದು ಅವರು ಮತ್ತಿನ್ನೇನೋ ಮಾತಾಡಲು ಶುರು ಮಾಡಿದರು. ನಾನು ಶ್ರಾವಣಿ ಕಡೆ ತಿರುಗಿ ಹಾಯ್ ಶ್ರಾವಣಿ ನೀವೇನು ಮಾಡುತ್ತಿರುವುದು ಎಂದು ಕೇಳಿದ್ದಕ್ಕೆ ಅವಳೂ ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದಳು. ಇಬ್ಬರೂ ಕಾಫಿ ಕುಡಿದು ಮುಗಿಸಿ ಹೊರಡುವಾಗ ಶ್ರಾವಣಿ ನನ್ನ ಬಳಿ ಬಂದು ಜಯಂತ್ ಈಗಲೂ ಕೈಗೆ ಮುತ್ತು ಕೊಡುತ್ತ ಇದ್ದೀಯ ಎಂದು ಕಣ್ಣು ಮಿಟುಕಿಸಿ ಅವರ ಅಮ್ಮನ ಹಿಂದೆ ಹೊರಟಳು. ನನಗೆ ಒಂದು ಕ್ಷಣ ಏನೂ ಅರ್ಥವಾಗದೆ ನಂತರ ಎಲ್ಲ ಅರ್ಥವಾಯಿತು ಓಹೋ ನಾನು ಶಾಲೆಯಲ್ಲಿ ಮುತ್ತು ಕೊಟ್ಟ ಹುಡುಗಿಯೇ ಶ್ರಾವಣಿ ಅವರ ಅಮ್ಮನೇ ಶೋಭಾ ಮೇಡಂ....
ಸ್ವಲ್ಪ ದಿನದಲ್ಲೇ ನಾನು ಶ್ರಾವಣಿ ಒಳ್ಳೆಯ ಸ್ನೇಹಿತರಾಗಿಬಿಟ್ಟೆವು. ಹಾಗೆಯೇ ನನ್ನಮ್ಮ ಹಾಗೂ ಶ್ರಾವಣಿಯ ಅಮ್ಮ ಬಹಳ ಆಪ್ತರಾಗಿಬಿಟ್ಟಿದ್ದರು. ಒಂದು ದಿನ ನಾನು ಕೆಲಸದಿಂದ ಬರುವ ಹೊತ್ತಿಗೆ ಮನೆಯಲ್ಲಿ ಶ್ರಾವಣಿಯ ಅಪ್ಪ ಅಮ್ಮ ಹಾಗೂ ನನ್ನ ಅಮ್ಮ ಅಪ್ಪ ಎಲ್ಲರೂ ಕುಳಿತು ಮಾತನಾಡುತ್ತಿದ್ದರು. ನಾನು ಶ್ರಾವಣಿಯ ಅಪ್ಪ ಅಮ್ಮನಿಗೆ ಹಾಯ್ ಹೇಳಿ ರೂಮಿಗೆ ಹೋದೆ. ಸ್ವಲ್ಪ ಹೊತ್ತಿನ ನಂತರ ಅಮ್ಮ ಕೂಗಿದರು ಜಯಂತ್ ಸ್ವಲ್ಪ ಬಾ ಇಲ್ಲಿ ಎಂದು. ನಾನು ಅಲ್ಲಿ ಹೋದಾಗ ಶ್ರಾವಣಿಯ ಅಮ್ಮ ನನ್ನನ್ನು ಕುರಿತು ಏನಪ್ಪಾ ಜಯಂತ್ ಶ್ರಾವಣಿಯನ್ನು ಮದುವೆ ಆಗುತ್ತೀಯ ಎಂದರು. ದಿಡೀರನೆ ಬಂದ ಪ್ರಶ್ನೆಯಿಂದ ನನಗೆ ತಕ್ಷಣ ಏನು ಹೇಳಬೇಕೋ ಗೊತ್ತಾಗಲಿಲ್ಲ. ಮತ್ತೆ ಅವರೇ ಶುರು ಮಾಡಿ ನೋಡಪ್ಪ ಶ್ರಾವಣಿಗೆ ನೀನು ಬಹಳ ಹಿಡಿಸಿದ್ದೀಯ ನಿಮ್ಮ ಮನೆಯವರಿಗೂ ಶ್ರಾವಣಿ ಹಿಡಿಸಿದ್ದಾಳೆ ನಿಮ್ಮಿಬ್ಬರ ಜಾತಕವೂ ಬಹಳ ಚೆನ್ನಾಗಿ ಕೂಡಿ ಬಂದಿದೆ. ಇನ್ನು ನಿನ್ನ ಒಪ್ಪಿಗೆ ಒಂದೇ ಬಾಕಿ. ಇದರಲ್ಲಿ ಒತ್ತಾಯವೇನೂ ಇಲ್ಲ. ಸಮಯ ತೆಗೆದುಕೊಂಡು ನಿಧಾನವಾಗಿ
ಯೋಚಿಸಿ ನಿನ್ನ ನಿರ್ಧಾರ ತಿಳಿಸು ಎಂದರು. ಆಂಟಿ ಹಾಗೇನೂ ಇಲ್ಲ ದೊಡ್ಡವರು ನೀವು ಹೇಗೆ ನಿರ್ಧರಿಸುತ್ತೀರೋ ಹಾಗೆ ಆಗಲಿ (ನನ್ನ ಮನಸ್ಸಿನಲ್ಲಿ ಇದ್ದದ್ದನ್ನು ನೀವೇ ಹೇಳಿದ್ದೀರಿ, ಸಧ್ಯ ನನಗೆ ಕಷ್ಟ ತಪ್ಪಿತು) ನನಗೆ ಈ ಮದುವೆ ಒಪ್ಪಿಗೆ ಇದೆ ಆಂಟಿ.
ಏನಪ್ಪಾ ಇದು ಆಶ್ಚರ್ಯ ಮದುವೆಯ ಬಗ್ಗೆ ಯೋಚನೆಯೇ ಇರದಿದ್ದವನಿಗೆ ಇದ್ದಕ್ಕಿದ್ದಂತೆ ಮದುವೆ ನಿಶ್ಚಯವಾಗಿ ಅದೂ ತಾನು ಮೆಚ್ಚಿದ ಹುಡುಗಿಯ ಜೊತೆ, ಅದೂ ಯಾವುದೇ ತೊಂದರೆ ಇಲ್ಲದೆ ಯಾರ ಅಡೆತಡೆಯೂ ಇಲ್ಲದೆ ಇಷ್ಟು ನಿರಾಯಾಸವಾಗಿ ನಡೆದುಹೋಗುತ್ತಿದೆ. ಇನ್ನೇನು ಮುಂದಿನ ವಾರವೇ ಮದುವೆ. ಎಷ್ಟು ಬೇಗ ಎಲ್ಲ ನಡೆದು ಹೋಯಿತು...
ಮದುವೆ ಮನೆಯ ಮುಂದೆ ಜಯಂತ್ ವೆಡ್ಸ್ ಶ್ರಾವಣಿ ಅಂತ ಹೂವಿನಲ್ಲಿ ಬೋರ್ಡ್ ಹಾಕಿದ್ದಾರೆ. ಎಲ್ಲರೂ ಬರುತ್ತಿದ್ದಾರೆ ನಾನು ಮತ್ತು ಶ್ರಾವಣಿ ಹಸೆಯ ಮೇಲೆ ಕುಳಿತಿದ್ದೇವೆ. ಮಂತ್ರಘೋಷಗಳು, ನಾದಸ್ವರ ಮೊಳಗುತ್ತಿದೆ. ಎಲ್ಲ ಸುಸೂತ್ರವಾಗಿ ನಡೆಯುತ್ತಿತ್ತು. ಇನ್ನೇನು ಕನ್ಯಾದಾನದ ಸಮಯ ನಾನು ಶ್ರಾವಣಿಯ ಕೈಯಲ್ಲಿರುವ ಕಾಯನ್ನು ನನ್ನ ಕೈಯಲ್ಲಿ ಹಿಡಿದು ನಿಂತಿದ್ದೇನೆ. ಶೋಭಾ ಆಂಟಿ ಹಾಗೂ ಅವರ ಯಜಮಾನರು ಹಾಲಿನ ತಂಬಿಗೆ ಹಿಡಿದಿದ್ದಾರೆ. ಅಷ್ಟರಲ್ಲಿ......
***
***
***
***
ಶ್ರಾವಣಿಯ ತಾಯಿ ನನ್ನ ಪಕ್ಕದಲ್ಲಿ ಬಂದು ಜಯಂತ್ ಇನ್ನು ಮುಂದೆ ಶ್ರಾವಣಿ ಬಿಟ್ಟು ಬೇರೆ ಯಾರ ಕೈಗೂ ಮುತ್ತು ಕೊಡಬೇಡ ಎಂದು ನಕ್ಕು ಕನ್ಯಾದಾನ ಮಾಡಲು ಮುಂದಾದರು
Comments
ಉ: ಶ್ರಾವಣಿ ಕಲ್ಯಾಣ (ಕಥೆ)
In reply to ಉ: ಶ್ರಾವಣಿ ಕಲ್ಯಾಣ (ಕಥೆ) by venkatb83
ಉ: ಶ್ರಾವಣಿ ಕಲ್ಯಾಣ (ಕಥೆ)
ಉ: ಶ್ರಾವಣಿ ಕಲ್ಯಾಣ (ಕಥೆ)
In reply to ಉ: ಶ್ರಾವಣಿ ಕಲ್ಯಾಣ (ಕಥೆ) by Vinutha B K
ಉ: ಶ್ರಾವಣಿ ಕಲ್ಯಾಣ (ಕಥೆ):ಈ ಕಥೆ ಮತ್ತು ತಿರುವುಗಳು...???
In reply to ಉ: ಶ್ರಾವಣಿ ಕಲ್ಯಾಣ (ಕಥೆ):ಈ ಕಥೆ ಮತ್ತು ತಿರುವುಗಳು...??? by venkatb83
ಉ: ಶ್ರಾವಣಿ ಕಲ್ಯಾಣ (ಕಥೆ):ಈ ಕಥೆ ಮತ್ತು ತಿರುವುಗಳು...???
In reply to ಉ: ಶ್ರಾವಣಿ ಕಲ್ಯಾಣ (ಕಥೆ) by Vinutha B K
ಉ: ಶ್ರಾವಣಿ ಕಲ್ಯಾಣ (ಕಥೆ)
ಉ: ಶ್ರಾವಣಿ ಕಲ್ಯಾಣ (ಕಥೆ)
In reply to ಉ: ಶ್ರಾವಣಿ ಕಲ್ಯಾಣ (ಕಥೆ) by sasmi90
ಉ: ಶ್ರಾವಣಿ ಕಲ್ಯಾಣ (ಕಥೆ)
ಉ: ಶ್ರಾವಣಿ ಕಲ್ಯಾಣ (ಕಥೆ)
In reply to ಉ: ಶ್ರಾವಣಿ ಕಲ್ಯಾಣ (ಕಥೆ) by kavinagaraj
ಉ: ಶ್ರಾವಣಿ ಕಲ್ಯಾಣ (ಕಥೆ)