ಕತೆ ಬರೆಯುವ ತಂತ್ರಾಂಶದ ಕತೆ ಕೇಳಿ

ಕತೆ ಬರೆಯುವ ತಂತ್ರಾಂಶದ ಕತೆ ಕೇಳಿ

 ಕತೆ ಬರೆಯುವ ತಂತ್ರಾಂಶದ ಕತೆ ಕೇಳಿ
ನರೇಟಿವ್‌ಸಯನ್ಸ್ ಎನ್ನುವ ಕಂಪೆನಿಯು ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಿದ್ದು,ಅದು ಕತೆ ಬರೆಯುವ ಜಾಣ್ಮೆ ಹೊಂದಿದೆ ಎನ್ನಲಾಗಿದೆ.ಕಂಪೆನಿಯು ಮೊದಲಿಗೆ ಬೇಸ್‌ಬಾಲ್ ಪಂದ್ಯದ ಮುಖ್ಯಾಂಶಗಳ ವರದಿಯನ್ನು ಸವಿಸ್ತಾರ ವರದಿಯಾಗಿ ಮಾರ್ಪಡಿಸಲು ತಂತ್ರಾಂಶ ಬಳಸಿ,ಯಶಸ್ವಿಯಾಯಿತು.ಈಗದು ಇತರ ಸಂಕ್ಷಿಪ್ತ ಮಾಹಿತಿಗಳನ್ನು ಕತೆಯಾಗಿ ಮಾರ್ಪಡಿಸುವ ತಂತ್ರಾಂಶ ಅಭಿವೃದ್ಧಿ ಪಡಿಸಿದೆ.ಕಂಪ್ಯೂಟರ್ ಬರೆವ ಈ ರೀತಿಯ ಕತೆ ಅಥವಾ ವರದಿಗಳು ಕುತೂಹಲಕಾರಿಯಾಗಿರುತ್ತವೆ,ಜನರಿಗೆ ರುಚಿಸುತ್ತದೆ ಎನ್ನುವುದನ್ನು ಹೆಚ್ಚಿನವರು ಒಪ್ಪರು.ಕಂಪ್ಯೂಟರ್ ಏನಿದ್ದರೂ ವರದಿ ಒಪ್ಪಿಸಬಹುದು,ಹೆಚ್ಚಿನವರಿಗಿದು ಒಪ್ಪಿಗೆಯಾಗದು ಎಂದು ಟೀಕಾಕಾರರು ಮೂಗು ಮುರಿದಿದ್ದಾರೆ.
-------------------------------------
ಆರ್ಸೆನಿಕ್ ಕಬಳಿಸುವ ಬ್ಯಾಕ್ಟೀರಿಯಾ:ಸಂಶೋಧನೆ ಬರೀ ಬೊಗಳೆಯೇ?
ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ ಪ್ರಾಯೋಜಿಸಿದ ಸಂಶೋಧನೆಯೊಂದು ಬಹು ಸುದ್ದಿಯಲ್ಲಿತ್ತು.ಅದಕ್ಕೆ ಕಾರಣ ಸಂಶೋಧಕರು ತಾವೊಂದು ಬ್ಯಾಕ್ಟೀರಿಯಾದ ತಳಿ ಅಭಿವೃದ್ಧಿ ಪಡಿಸಿದ್ದು,ಅದು ಆರ್ಸೆನಿಕ್ ಎನ್ನುವ ವಿಷಕಾರಿ ಲೋಹವನ್ನು ಆಹಾರವಾಗಿ ಬಳಸುತ್ತದೆ ಎಂದು "ಸಯನ್ಸ್" ಎಂಬ ಸಂಶೋಧನಾ ಪ್ರಬಂಧಗಳಿಗೆ ಮೀಸಲಿರಿಸಿದ ಪತ್ರಿಕೆಯಲ್ಲಿ ಪ್ರಬಂಧ ಪ್ರಕಟಿಸಿದ್ದರು.ಸಂಶೋಧಕರು ಬಳಸಿದ ವಿಧಾನ,ಫಲಿತಾಂಶಗಳನ್ನು ಅವರು ಪ್ರಸ್ತುತ ಪಡಿಸಿದ ರೀತಿಗೆ ಸಂಬಂಧಿಸಿ,ಪತ್ರಿಕೆಗೆ ಬಹಳ ಪ್ರತಿಕ್ರಿಯೆಗಳು ಬಂದುವು.ವೈಜ್ಞಾನಿಕ ಸಮುದಾಯ,ಈ ಸಂಶೋಧನೆಯನ್ನು ಸುಲಭವಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ.ಫೆಲಿಸಾ ಎನ್ನುವ ಸಂಶೋಧಕರು ಆರ್ಸೆನಿಕ್ ತಿನ್ನುವವೆನ್ನಲಾದ ಬ್ಯಾಕ್ಟೀರಿಯಾದ ತಳಿಯನ್ನು ಪಡೆದುಕೊಂಡು,ತಮ್ಮದೇ ವಿಧಾನ ಅನುಸರಿಸಿ,ಪ್ರತ್ಯೇಕವಾಗಿ ಪ್ರಯೋಗಗಳನ್ನು ಕೈಗೊಂಡರು.ತಮ್ಮ ಪ್ರಯೋಗ ವಿಧಾನಗಳು,ಅದರ ಮುನ್ನಡೆ-ಹಿನ್ನಡೆಗಳನ್ನು ಅವರು ತಮ್ಮ ಸಂಶೋಧನಾ ಬ್ಲಾಗ್‌ನಲ್ಲಿ ಪ್ರಕಟಿಸುತ್ತಾ ಬಂದರು.ಕೊನೆಗೆ ಅವರಿಗೆ ಲಭಿಸಿದ ಫಲಿತಾಂಶವು,ಬ್ಯಾಕ್ಟೀರಿಯಾಗಳು ಆರ್ಸೆನಿಕ್ ತಿಂದು ಬದುಕಬಲ್ಲುವು ಎನ್ನುವುದಕ್ಕೆ ಪೂರಕವಾಗಿರಲಿಲ್ಲ.ಈಗವರು ತಮ್ಮ ಪ್ರಬಂಧವನ್ನು "ಸಯನ್ಸ್" ಪತ್ರಿಕೆಗೆ ಕಳುಹಿಸಿದ್ದಾರೆ.ಮಾತ್ರವಲ್ಲ,ಅದನ್ನು ಮುಕ್ತ ಸಂಶೋಧನಾ ಪತ್ರಿಕೆಯಾದ http://arxiv.org ನಲ್ಲೂ ಪ್ರಕಟಿಸಿದ್ದಾರೆ.
------------------------------------
ಪೇಸ್‌ಬುಕ್:ಬಿಂಗ್ ಮೂಲಕ ಶೋಧಿಸಿ



ಬಿಂಗ್ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಶೋಧ ಸೇವೆ.ಜನಪ್ರಿಯತೆಯಲ್ಲಿ ಇದು ಗೂಗಲ್ ಶೋಧಕ್ಕೆ ಹೋಲಿಸಿದರೆ ಭಾರೀ ಹಿಂದಿದೆ.ಬಿಂಗ್ ಅಮೆರಿಕಾ ಅಂತರ್ಜಾಲ ಮಾರುಕಟ್ಟೆಯ ಬರೇ ಹದಿನೈದು ಭಾಗವನ್ನು ತನ್ನದಾಗಿಸಿಕೊಂಡಿದೆ.ಗೂಗಲ್ ಆದರೋ ಅರುವತ್ತಕ್ಕೂ ಹೆಚ್ಚು ಭಾಗಕ್ಕೆ ಲಗ್ಗೆ ಹಾಕಿದೆ.ಈಗ ಬಿಂಗ್ ಅನ್ನು ಜನಪ್ರಿಯವಾಗಿಸುವತ್ತ ಮೈಕ್ರೋಸಾಫ್ಟ್ ಫೇಸ್‌ಬುಕ್‌ನತ್ತ ಮುಖ ಮಾಡಿದೆ.ಬಿಂಗ್ ಶೋಧದಲ್ಲಿ ಫೇಸ್‌ಬುಕ್ ತಾಣದಲ್ಲಿ ಕಾಣಿಸಿಕೊಂಡ ವಿಷಯಗಳೂ ಒಳಗೊಳ್ಳಲಿವೆ.ಮಾತ್ರವಲ್ಲ ಶೋಧ ಫಲಿತಾಂಶದಲ್ಲಿ ಅದನ್ನು ಪ್ರತ್ಯೇಕವಾಗಿ ತೋರಿಸಲಾಗುತ್ತದೆ.ಈ ರೀತಿಯಲ್ಲಿ,ಫೇಸ್‌ಬುಕ್ ಬಳಕೆದಾರರ ಒಲವು ಬಿಂಗ್ ಕಡೆ ಹೆಚ್ಚಬಹುದು ಎನ್ನುವುದು ಮೈಕ್ರೋಸಾಫ್ಟ್ ನಿರೀಕ್ಷೆಯಾಗಿದೆ.ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ವಿಷಯಗಳನ್ನೂ ಒಳಗೊಳ್ಳುವುದಕ್ಕೆ ಮೈಕ್ರೋಸಾಫ್ಟ್ ತೀರ್ಮಾನಿಸಿದೆ.ಅವುಗಳ ಪೈಕಿ ಟ್ವಿಟರ್,ಲಿಂಕ್ಡಿನ್,ಗೂಗಲ್ ಪ್ಲಸ್ ತಾಣಗಳೂ ಸೇರಿವೆ.ಸದ್ಯ ಮೈಕ್ರೋಸಾಫ್ಟ್ ಕಂಪೆನಿ ಫೇಸ್‌ಬುಕ್‌ನ ಶೇರುಗಳನ್ನು ಇನ್ನೂರೈವತ್ತು ದಶಲಕ್ಷ ಡಾಲರು ತೆತ್ತು ಖರೀದಿಸಿದೆ.ಫೇಸ್‌ಬುಕ್ ಐಪಿಓ ನಂತರ ಈ ಶೇರುಗಳ ಬೆಲೆ ಒಂದು ಬಿಲಿಯನ್ ಡಾಲರುಗಳಿಗೆ ಏರಲಿದೆ.
---------------------------------------
ಮಾತೃಗಳಿಗೆ ಮಾತ್ರಾ ಈ ಟ್ಯಾಬ್ಲೆಟ್!



ಮಹಿಳೆಯರಿಗೆ ಅದರಲ್ಲೂ ವೃತ್ತಿಪರ ಮಹಿಳೆಯರಿಗೆ ಸೂಕ್ತವಾದ ಟ್ಯಾಬ್ಲೆಟ್ ಸಾಧನ ಈಗ ಲಭ್ಯವಿದೆ.ಮಿಲಾಗ್ರೋಹ್ಯೂಮನ್‌ಟೆಕ್ ಕಂಪೆನಿಯ ಮಿಲಾಗ್ರೋ ಟ್ಯಾಬ್ಲೆಟ್ ಸಾಧನದಲ್ಲಿ ಅರುವತ್ತು ತಂತ್ರಾಂಶಗಳನ್ನು ಆರಂಭದಲ್ಲೇ ಅನುಸ್ಥಾಪಿಸಿ ಒದಗಿಸಲಾಗುತ್ತದೆ.http://www.milagrowhumantech.com ತಾಣದಲ್ಲಿ ವಿವರಗಳು ಲಭ್ಯವಿದ್ದು,ಮುನ್ನೂರು ಗ್ರಾಮಿಗೂ ಕಡಿಮೆ ತೂಗುವ ಈ ಟ್ಯಾಬ್ಲೆಟ್,ಸುಂದರ ರೂಪದಿಂದ ಹೆಂಗೆಳೆಯರ ಕಣ್ಸೆಳೆಯಬಹುದು ಎನ್ನುವುದು ಲೆಕ್ಕಾಚಾರ.ಫ್ಯಾಶನ್,ಅಡುಗೆ ಪಾಕವಿಧಾನಗಳ ತಂತ್ರಾಂಶಗಳನ್ನು ಅನುಸ್ಥಾಪಿಸಿರುವುದು ಇದನ್ನು ಮಹಿಳೆಯರಿಗೆ ಸೂಕ್ತ ಎಂದು ಮಾರ್ಕೆಟ್ ಮಾಡಲು ಎನ್ನುವುದು ಸ್ಪಷ್ಟ."ಮಹಿಳೆಯರಿಗೆ ಸೂಕ್ತ" ಎನ್ನುವುದು ಮಾರ್ಕೆಟಿಂಗ್ ತಂತ್ರವಿರಲೂ ಬಹುದು.ವೇಗದ ಸಂಸ್ಕಾರಕ,ಒಂದು ಜೀಬಿ ಸಾಮರ್ಥ್ಯದ ರಾಮ್ ಸ್ಮರಣಕೋಶ,ಕೆಪಾಸಿಟಿವ್ ಸ್ಪರ್ಶ ಸಂವೇದಿ ತೆರೆ,ತ್ರೀಜಿ ಸಂಪರ್ಕ,ವೈಫೈ ಲಭತೆ ಇದರಲ್ಲಿ ಸಿಗುವ ಮುಖ್ಯ ಸವಲತ್ತುಗಳಾಗಿವೆ.
---------------------------------------
 ಗೂಗಲ್ ಮ್ಯಾಪ್‌ಗೆ ಕೊಕ್ ನೀಡಲಿರುವ ಆಪಲ್
ಆಪಲ್ ಕಂಪೆನಿಯ ಸಾಧನಗಳಲ್ಲಿ ಗೂಗಲ್ ಮ್ಯಾಪ್ ಮೂಲಕ ನಕಾಶೆಯನ್ನು ತೋರಿಸಲಾಗುತ್ತಿದೆ.ಈಗ ಆಪಲ್ ಕಂಪೆನಿಯ ಸ್ವಂತ ತ್ರೀಡಿ ಮ್ಯಾಪ್ ಅಪ್ಲಿಕೇಶನ್ ಸಿದ್ಧವಾಗಿರುವ ಕಾರಣ ಸಾಧನಗಳ ಆಪರೇಟಿಂಗ್ ವ್ಯವಸ್ಥೆಯ ಮುಂದಿನ ಆವೃತ್ತಿ ಐಓಎಸ್6ನಲ್ಲಿ ತನ್ನದೇ ಮ್ಯಾಪ್ ಅಪ್ಲಿಕೇಶನ್ ಸೇರಿಸಿ,ಗೂಗಲ್ ಮ್ಯಾಪ್ ಕೈಬಿಡಲಿದೆ ಎನ್ನುವುದು ಈಗ ಕೇಳಿ ಬರುತ್ತಿರುವ ಗುಸುಗುಸು ಸುದ್ದಿ.ತ್ರೀಡಿ ಮ್ಯಾಪ್ ನಗರಗಳ ಮೂರು ಆಯಾಮ ವೀಕ್ಷಣೆಗೆ ಅವಕಾಶ ಒದಗಿಸಿ,ಹೊಸ ಅನುಭವ ನೀಡಲಿದೆ.
-----------------------------------------
ಬರುತ್ತಿದೆ ಫೇಸ್‌ಬುಕ್ ಅಪ್ಲಿಕೇಶನ್ ಸ್ಟೋರ್
ಸಾಮಾಜಿಕ ಜಾಲತಾಣಗಳನ್ನು ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ಜಾಲಾಡಲು ಬೇಕಾಗುವ ತಂತ್ರಾಂಶಗಳನ್ನು ಫೇಸ್‌ಬುಕ್ ಮೂಲಕ ವಿತರಿಸಲು,ಪ್ರತ್ಯೇಕ ಅಪ್ಲಿಕೇಶನ್ ಸ್ಟೋರನ್ನು ಆರಂಭಿಸಲು ಫೇಸ್‌ಬುಕ್ ನಿರ್ಧರಿಸಿದೆ.ಈ ನಿರ್ಧಾರ ಸದ್ಯವೇ ಕಾರ್ಯಗತವಾಗಲಿದೆ.ತಂತ್ರಾಂಶ ಅಭಿವೃದ್ಧಿ ಪಡಿಸಿದವರು ಇದನ್ನು ಮಾರಲು ನಿರ್ಧರಿಸಿದರೆ,ಅದಕ್ಕೂ ಅವಕಾಶ ನೀಡಲು ಫೇಸ್‌ಬುಕ್ ಸಿದ್ಧವಿದೆ.ಗೂಗಲ್ ಮತ್ತು ಆಪಲ್ ಕಂಪೆನಿಗಳೀಗಾಗಲೇ ಇಂತಹ ಅಪ್ಲಿಕೇಶನ್ ಸ್ಟೋರ್‌ಗಳನ್ನು ಹೊಂದಿವೆ.ಅವುಗಳಿಗೆ ಸ್ಪರ್ಧೆ ನೀಡುವುದು ಫೇಸ್‌ಬುಕ್ ಉದ್ದೇಶವಿದ್ದಂತಿಲ್ಲ.ಗ್ರಾಹಕರಿಗೆ ಅನುಕೂಲ ಕಲ್ಪಿಸುವುದೇ ಈ ನಿರ್ಣಯದ ಹಿಂದಿನ ಉದ್ದೇಶವಿರಬಹುದು.ಇಲ್ಲಿ ಲಭ್ಯವಾಗುವ ತಂತ್ರಾಂಶಗಳು ಯಾವುದೇ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸುವ ಸಾಧನದಲ್ಲೂ ಕೆಲಸ ಮಾಡುವ ಗುಣ ಹೊಂದಿರಬೇಕಾಗುತ್ತದೆ ಎನ್ನುವುದು,ಈ ಅಪ್ಲಿಕೇಶನ್‌ಗಳ ಮಹತ್ವವನ್ನು ಹೆಚ್ಚಿಸಲಿವೆ.
---------------------------------------
ಎನ್ ಎಂ ಎ ಎಂ ಐ ಟಿ,ನಿಟ್ಟೆಯಲ್ಲಿ ಮೇ 15 ಮತ್ತು 16ರಂದು  ಅಂತಾರಾಷ್ಟ್ರೀಯ ಸಮಾವೇಶ
ನಿಟ್ಟೆ ಎನ್ ಎಂ ಎ ಎಂ ಐ ಟಿಯಲ್ಲಿ ಮೇ 15 ಮತ್ತು 16ರಂದು ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಐ ಸಿ ಇ ಟಿ ಇ 2012ವನ್ನು ಆಯೋಜಿಸಲಾಗಿದೆ. ಸಮಾವೇಶದಲ್ಲಿ ಸದ್ಯೋಭವಿಷತ್ತಿನಲ್ಲಿ ಮೂಡಿಬರುತ್ತಿರುವ ತಾಂತ್ರಿಕ ಪ್ರವೃತ್ತಿಗಳ ಬಗ್ಗೆ ಕಂಪ್ಯೂಟರ್,ಐಟಿ,ಇಲೆಕ್ಟ್ರಾನಿಕ್ಸ್,ವಿದ್ಯುತ್,ಬಯೋಟೆಕ್ನಾಲಜಿ,ಸಿವಿಲ್,ಮೆಕಾನಿಕಲ್ ವಿಭಾಗಗಳ ಸಂಶೋಧಕರು ಮತ್ತು ಸ್ನಾತಕೋತ್ತರ ಪದವೀಧರರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಸಮಾವೇಶದ ಆಯೋಜಕರು ಮುನೂರೈವತ್ತಕ್ಕು ಹೆಚ್ಚು ಪ್ರಬಂಧಗಳನ್ನು ದೇಶ ಮತ್ತು ಪರದೇಶದ ಸಂಶೋಧಕರಿಂದ ಸ್ವೀಕರಿಸಿದ್ದು,ಪರಿಶೀಲನೆಯ ಬಳಿಕ ಅವುಗಳ ಪೈಕಿ ನೂರೈವತ್ತಮೂರು ಪ್ರಬಂಧಗಳನ್ನು ಆಯ್ದು,ಸಮಾವೇಶದ ದಿನಗಳಂದು ಮಂಡಿಸಲು ಅವಕಾಶ ನೀಡಿದ್ದಾರೆ.
UDAYAVANI
*ಅಶೋಕ್‌ಕುಮಾರ್ ಎ

Comments