ಕೈಕೇಯಿಯ ವರ ಮತ್ತು ಶಾಪ‌

ಕೈಕೇಯಿಯ ವರ ಮತ್ತು ಶಾಪ‌

ಕೇಕೇಯ ದೇಶದ ರಾಜನ ಮಗಳು ಕೈಕೇಯಿ. ಕೈಕೇಯಿ ಬಹಳ ಒಳ್ಳೆಯ ಸ್ವಭಾವದ ನೋಡಲು ಸುಂದರವಾದ ಹುಡುಗಿಯಾಗಿದ್ದಳು. ಆಗ ಕೈಕೇಯಿಗೆ ಏಳೆಂಟು ವರ್ಷ ಇರಬಹುದು.ಒಮ್ಮೆ ಕೇಕೇಯ ರಾಜನ ಅರಮನೆಗೆ ಒಮ್ಮೆ ಒಬ್ಬರು ಋಷಿಮುನಿಗಳು ಆಗಮಿಸಿದರು. ನಾವು ದೇಶ ಸಂಚಾರ ಕೈಗೊಳ್ಳುತ್ತಾ ನಿಮ್ಮಲ್ಲಿಗೆ ಬಂದಿದ್ದೇವೆ. ಸ್ವಲ್ಪ ದಿವಸ ಇಲ್ಲೇ ತಂಗಲು ನಿರ್ಧರಿಸಿದ್ದೇವೆ ಎಂದು ಕೇಳಿದಾಗ ಕೇಕೇಯ ರಾಜ ಆಗಲೆಂದು ಸಮ್ಮತಿಸಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿ ಅವರ ಸೇವೆಗೆ ಕೈಕೇಯಿಯನ್ನು ನೇಮಿಸಿದನು. ಕೈಕೇಯಿಯನ್ನೇ ಯಾಕೆ ನೇಮಿಸಿದನೆಂದರೆ ಋಷಿಮುನಿಗಳು ಆಗಮಿಸಿದಾಗ ಅವರ ಸೇವೆಗೆ ಯಾರಾದರೂ ಸೇವಕರನ್ನು ಬಿಟ್ಟರೆ ಅವರು ಸರಿಯಾಗಿ ಸೇವೆ ಮಾಡುತ್ತಾರೋ ಇಲ್ಲವೋ ಎಂಬ ಸಂಶಯದಿಂದ ಕೈಕೇಯಿಯನ್ನು ಅವರ ಸೇವೆಗೆ ಬಿಟ್ಟನು.
 


ಕೈಕೇಯಿ ಹಿರಿಯರಾದ ಋಷಿಮುನಿಗಳಿಗೆ ಕಾಯಾ ವಾಚಾ ಮನಸಾ ಸೇವೆ ಸಲ್ಲಿಸುತ್ತಿದ್ದಳು. ಅತಿ ಕಡಿಮೆ ಕಾಲದಲ್ಲಿ ಕೈಕೇಯಿ ಹಾಗೂ ಋಷಿಮುನಿಗಳಿಗೆ ಒಳ್ಳೆಯ ಸಲಿಗೆ ಬೆಳೆದುಬಿಟ್ಟಿತ್ತು. ಎಂಥಹ ಸಲಿಗೆ ಎಂದರೆ ಅಜ್ಜ ಮೊಮ್ಮಗಳ ಸಲಿಗೆ ಬೆಳೆದು ಬಿಟ್ಟಿತ್ತು. ಕೈಕೇಯಿ ಹೆಚ್ಚು ಹೊತ್ತು ಋಷಿಗಳ ಕೋಣೆಯಲ್ಲೇ ಕಳೆಯುತ್ತಿದ್ದಳು. ಸದಾಕಾಲ ಅವರ ಸೇವೆ ಮಾಡುತ್ತಾ, ಅವರಿಗೆ ಬೇಕಾದನ್ನು ಒದಗಿಸುತ್ತ, ಅವರೊಡನೆ ಮಾತನಾಡುತ್ತ, ಅವರಿಂದ ಕಥೆ, ದೇವರನಾಮಗಳನ್ನು ಕೇಳುತ್ತಾ ಕಾಲ ಕಳೆಯುತ್ತಿದ್ದಳು.
 


ಒಮ್ಮೆ ಋಷಿಗಳು ಅಪರಾಹ್ನದಲ್ಲಿ ಒಳ್ಳೆಯ ಭೋಜನ ಮುಗಿಸಿ ಸುಖ ನಿದ್ರೆಯಲ್ಲಿದ್ದರು. ಆಗ ಕೈಕೇಯಿ ಬಂದು ಅವರನ್ನು ಎಬ್ಬಿಸಲು ಪ್ರಯತ್ನಿಸಿದಳು ಆದರೆ ಋಷಿಗಳು ಗಾಢ ನಿದ್ರೆಯಲ್ಲಿದ್ದರಿಂದ ಎಚ್ಚರಗೊಳ್ಳಲಿಲ್ಲ. ಆಗ ಕೈಕೇಯಿಗೊಂದು ದುರ್ಬುದ್ಧಿ ಹೊಳೆಯಿತು. ಅಜ್ಜ ಹೇಗಿದ್ದರೂ ಒಳ್ಳೆ ನಿದ್ರೆಯಲ್ಲಿದ್ದಾರೆ ಅವರಿಗೆ ಸ್ವಲ್ಪ ವಿನೋದ ಮಾಡೋಣ, ಸ್ವಲ್ಪ ಕುಚೋದ್ಯ ಮಾಡೋಣ ಎಂದು ಎಣಿಸಿ ತನ್ನ ಕೋಣೆಗೆ ಹೋಗಿ ತಾನು ಬಳಸುತ್ತಿದ್ದ ಸೌಂದರ್ಯದ ಸಾಮಗ್ರಿಗಳನ್ನು ಋಷಿಗಳ ಕೋಣೆಗೆ ತಂದಳು. ಮಲಗಿದ್ದ ಋಷಿಮುನಿಗಳಿಗೆ ತಾನು ಬಳಸುತ್ತಿದ್ದ ಚೂರ್ಣವನ್ನು ಅವರ ಮುಖಕ್ಕೆ ಬಳಿದು, ಹಣೆಗೆ ಕುಂಕುಮವನ್ನು ಇಟ್ಟು, ಕಣ್ಣಿಗೆ ಕಾಡಿಗೆ ಹಚ್ಚಿ, ಕೆನ್ನೆಯ ಮೇಲೆ ಒಂದು ದೃಷ್ಟಿ ಬೊಟ್ಟನ್ನು ಇಟ್ಟು ಅವರು ಎದ್ದ ಕೂಡಲೇ ಅವರು ನೋಡಿಕೊಳ್ಳಲೆಂದು ಅವರ ಮುಂದೆ ಒಂದು ದೊಡ್ಡ ಕನ್ನಡಿಯನ್ನು ತಂದಿಟ್ಟು ಅವರು ಏಳುವುದನ್ನೇ ಕಾಯುತ್ತಾ ಕುಳಿತಳು.
 


ಕೈಕೇಯಿ ಒಳಗೊಳಗೇ ಸಂತೋಷಗೊಂಡು ನಗುತ್ತಿದ್ದಳು. ಅಜ್ಜ ಎದ್ದ ಕೂಡಲೇ ತನ್ನ ಮುಖವನ್ನು ನೋಡಿಕೊಂಡು ತನಗೆ ಗುರುತು ಸಿಗದಂತಾಗಬೇಕು ಎಂದು ಕಾಯುತ್ತಿದ್ದಳು. ಸ್ವಲ್ಪ ಹೊತ್ತಿನ ನಂತರ ನಿದ್ರೆಯಿಂದ ಎಚ್ಚೆತ್ತ ಋಷಿಗಳು ಎದುರಿಗಿದ್ದ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಂಡು ಅವರಿಗೆ ಆಶ್ಚರ್ಯವಾಯಿತು. ಇದೇನಿದು ನನ್ನ ಮುಖ ಹೀಗೆ ತಯಾರಾಗಿದೆ ಎಂದು ಚಿಂತಿಸುತ್ತಿದ್ದರು. ಅಷ್ಟರಲ್ಲಿ ಕೈಕೇಯಿ ಜೋರಾಗಿ ನಗಲು ಶುರುಮಾಡಿದರು. ಇದರಿಂದ ಕುಪಿತಗೊಂಡ ಋಷಿಗಳು ಕೈಕೇಯಿಗೆ ಶಾಪ ಕೊಟ್ಟುಬಿಟ್ಟರು. ನನ್ನ ಮುಖಕ್ಕೆ ಹೀಗೆ ಮಸಿ ಬಳಿದ ನಿನಗೆ ಮುಂದೆ ನಿನ್ನ ಮುಖಕ್ಕೂ ಮಸಿ ಬಳಿಯುವಂತಾಗಲಿ. ಅದೂ ಅಳಿಸುವಂಥ ಮಸಿ ಅಲ್ಲ. ಜನ ನಿನ್ನನ್ನು ನೋಡಿ ಅಸಹ್ಯ ಪಡುವಂತಾಗಬೇಕು ಅಂಥಹ ಮಸಿ ನಿನ್ನ ಮುಖಕ್ಕೆ ಬಳಿಯಲಿ ಎಂದು ಶಾಪ ನೀಡಿ ಇನ್ನು ನಿನ್ನ ಮನೆಯಲ್ಲಿ ಉಳಿಯುವುದಿಲ್ಲ ಎಂದು ಅಲ್ಲಿಂದ ಸರಸರನೆ ಹೊರಟು ಬಿಟ್ಟರು. ಋಷಿಮುನಿಗಳು ಹೊರಟ ಭರದಲ್ಲಿ ತಮ್ಮ ಒಂದು ಸಾಲಿಗ್ರಾಮದ ಪೆಟ್ಟಿಗೆಯನ್ನು ಅಲ್ಲೇ ಬಿಟ್ಟು ಹೊರಟಿದ್ದರು. ಅದನ್ನು ಕಂಡ ಕೈಕೇಯಿ ಆ ಪೆಟ್ಟಿಗೆಯನ್ನು ಹಿಡಿದು ಅವರ ಹಿಂದೆಯೇ ಓಡಿ ಬಂದು ಅಜ್ಜ ನೀವೊಂದು ಪೆಟ್ಟಿಗೆಯನ್ನು ಬಿಟ್ಟು ಬಂದಿದ್ದೀರಿ ತೆಗೆದುಕೊಳ್ಳಿ ಎಂದು ಆ ಪೆಟ್ಟಿಗೆಯನ್ನು ಕೊಟ್ಟಳು.
 


ತಾನು ಅಷ್ಟೆಲ್ಲ ಕೋಪ ಮಾಡಿಕೊಂಡು ಶಾಪ ಹಾಕಿದರೂ ನನ್ನ ಮೇಲಿನ ಗೌರವದಿಂದ ನಾನು ಬಿಟ್ಟ ವಸ್ತುವನ್ನು ಮರಳಿ ತಂದು ಕೊಟ್ಟಳಲ್ಲ ಎಂದು ಅಭಿಮಾನ ಮೂಡಿ ಯಾವ ಕೈಯಿಂದ ನೀನು ನನ್ನ ವಸ್ತುವನ್ನು ತಂದು ಕೊಟ್ಟೆಯೋ ಆ ನಿನ್ನ ಕೈ ವಜ್ರದಂತೆ ಕಠಿಣವಾಗಲಿ, ಅಭೇಧ್ಯವಾಗಲಿ ಎಂದು ವರವನ್ನು ಕೊಟ್ಟರು.
 


ಕಾಲಾಂತರದಲ್ಲಿ ಕೈಕೇಯಿ ದಶರಥನ ಜೊತೆ ವಿವಾಹವಾದಳು. ಒಮ್ಮೆ ದಶರಥ ಯುದ್ಧಕ್ಕೆಂದು ಹೊರಟಿದ್ದಾಗ ಕೈಕೇಯಿಯನ್ನೂ ಸಹ ಯುದ್ಧ ತೋರಿಸಲೆಂದು ಜೊತೆಯಲ್ಲಿ ಕರೆದೊಯ್ದಿದ್ದನು. ಯುದ್ಧ ನಡೆಯುತ್ತಿದ್ದಾಗ ದಶರಥನ ಚಕ್ರದ  ಕಡಾಣಿ ಆಚೆ ಬಂದು ರಥದ ಚಕ್ರ ಆಚೆ ಬರುತ್ತಿತ್ತು. ಚಕ್ರ ಆಚೆ ಬರುತ್ತಿರುವುದನ್ನು ಕಂಡ ಕೈಕೇಯಿ ಎಲ್ಲಿ ಚಕ್ರ ಆಚೆ ಬಂದರೆ ದಶರಥ ರಥದಿಂದ ಕೆಳಗೆ ಬೀಳುತ್ತಾನೆ ಎಂದು ಯೋಚಿಸಿ ಆ  ಕಡಾಣಿಯಿದ್ದ ಜಾಗದಲ್ಲಿ ತನ್ನ ಕೈಯನ್ನು ಇಟ್ಟು ಬಿಟ್ಟಳು. ರಥ ವೇಗವಾಗಿ ಓಡುತ್ತಿದೆ. ಮುನಿಗಳು ಕೊಟ್ಟ ಶಾಪದಿಂದ ಕೈಕೇಯಿಯ ಕೈಗೆ ಯಾವುದೇ ಅಪಾಯವೂ ಆಗಲಿಲ್ಲ.  ನಂತರ ಯುದ್ಧವೆಲ್ಲ ಮುಗಿದ ಮೇಲೆ ಕೈಕೇಯಿ ಚಕ್ರದ  ಕಡಾಣಿಯಿದ್ದ ತೂತಿನಲ್ಲಿ ಕೈ ಇಟ್ಟಿದ್ದನ್ನು ಕಂಡು ದಶರಥ ದಂಗಾಗಿ ಹೋದ. ಕೈಕೇಯಿ ಯಾಕೆ ಅಲ್ಲಿ ಕೈ ಇಟ್ಟಿದ್ದೀಯ ಎಂದು ಕೇಳಿದಾಗ ಅಲ್ಲಿದ್ದ  ಕಡಾಣಿ  ಆಚೆ ಬಂದು ಚಕ್ರ ಆಚೆ ಬರುತ್ತಿತ್ತು. ಅದಕ್ಕೆ ಅಲ್ಲಿ ನನ್ನ ಕೈಯನ್ನು ಇಟ್ಟು ಚಕ್ರ ಆಚೆ ಬರದಂತೆ ತಡೆದೆ ಎಂದಳು.
ಇದರಿಂದ ಸಂತಸಗೊಂಡ ದಶರಥ ಕೈಕೇಯಿ ನಿನ್ನ ಧೈರ್ಯ ಹಾಗೂ ಸಾಹಸದಿಂದ ಇಂದು ನನ್ನ ಪ್ರಾಣ ರಕ್ಷಣೆ ಮಾಡಿದ್ದೀಯ. ಅದಕ್ಕಾಗಿ ನಿನಗೆ ಎರಡು ವರಗಳನ್ನು ಕೊಡುತ್ತೇನೆ. ನೀನು ಯಾವಾಗ ಬೇಕಾದರೂ ಈ ವರಗಳನ್ನು ಕೇಳಬಹುದು ಎಂದು ವರ ನೀಡಿದನು.
(ಮುಂದೆ ಕೈಕೇಯಿ ಮಂಥರೆಯ ದುಷ್ಟ ಬುದ್ಧಿಯಿಂದ ಪ್ರೇರಿತಳಾಗಿ ರಾಮನ ಪಟ್ಟಾಭಿಷೇಕ ತಡೆಯಲು ದಶರಥನನ್ನು ಆ ಎರಡು ವರವನ್ನು ಕೇಳುತ್ತಾಳೆ.)

Rating
No votes yet

Comments