ದಿಕ್ಕು ತಪ್ಪಿ, ದಿಕ್ಕು ತಪ್ಪಿಸುತ್ತಿರುವ ಟಿ.ವಿ ಸುದ್ದಿ ವಾಹಿನಿಗಳು ...

ದಿಕ್ಕು ತಪ್ಪಿ, ದಿಕ್ಕು ತಪ್ಪಿಸುತ್ತಿರುವ ಟಿ.ವಿ ಸುದ್ದಿ ವಾಹಿನಿಗಳು ...

 ಸರಿಸುಮಾರು ೧೦೦ ಕೆ.ಜಿಗೆ ತೂಗುವ ಆತನ ಮೈಯೆಲ್ಲಾ ವಿಭೂತಿಮಯ. ಕೊರಳಿನಿಂದ ಹೊಟ್ಟೆಯ ಹೊಕ್ಕುಳನ್ನು ತಾಕುವಷ್ಟು ಉದ್ದದ ಹಲವು ರುದ್ರಾಕ್ಷಿ ಮಾಲೆಗಳು. ಎತ್ತರದ ಆಕರ್ಷಕ ಆಸನದ ಮೇಲೆ ಪ್ರತಿಷ್ಟಾಪಿಸಲ್ಪಟ್ಟಿರುವ ವ್ಯಕ್ತಿಯ ಬಾಯಲ್ಲಿ ಅನಿಯಮಿತವಾಗಿ ಬರುತ್ತಿರುವ ಹಿತೋಪದೇಷಗಳು.

ಅಲ್ಲೆಲ್ಲೋ ಒಂದು ಗುಹೆ, ಅದರಲ್ಲಿದೆ ಅಚ್ಚರಿಯ ಕಲ್ಲು, ಮುಟ್ಟಿದರೆ ನಿಮ್ಮ ಪಾಪವೆಲ್ಲಾ ಮಾಯ….ಮತ್ತಿನ್ನಲ್ಲೋ ಇದೆ ಒಂದು ಕೆರೆ ಅದರ ನೀರಿನಲ್ಲಿ ಮಿಂದೆದ್ದರೆ ನಿಮ್ಮ ಕಷ್ಟ ಕಾರ್ಪಣ್ಯ ಅಷ್ಟ ದರಿದ್ರಗಳಿಗೂ ವಿರಾಮ.. ಹೀಗೂ ಉಂಟೇ..????

ಮುಂದೆ ಕಾದಿದೆ…..ಬರಲಿದೆ ಭೀಕರ ಪ್ರಳಯ, ಇದರಿಂದ ಜಗತ್ತು ಸರ್ವನಾಷ. ಅಲ್ಲೋಲ-ಕಲ್ಲೋಲ ಎಬ್ಬಿಸಲಿದೆ ಸುನಾಮಿ..ಇಡೀ ವಿಶ್ವವೇ ಮುಳಗಲಿದೆ ಸಮುದ್ರದಲ್ಲಿ..

ಕ್ಷಮಿಸಿಇವೆಲ್ಲಾ ನಮ್ಮ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವಂತ ಕಾರ್ಯಕ್ರಮಗಳ ಒಂದು ಪಕ್ಷಿನೋಟ. ಇಂದು ಹುಟ್ಟಿಕೊಂಡಿರುವ ಟಿ.ವಿ ದೃಶ್ಯ ಮಾಧ್ಯಮಗಳ ಲೆಕ್ಕ ಬೆಳೆಯುತ್ತಲೇ ಇದೆ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಮಾದ್ಯಮಗಳಿಗೆ ಯಾವುದೇ ಬೇಲಿಯೇ ಇದ್ದಂತಿಲ್ಲ. ಟಿ.ವಿ೯, ಟಿವಿ೫, ನ್ಯೂಸ್೯, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಟಿವಿ, ಟಿವಿ. ಇತ್ಯಾದಿ..ಇತ್ಯಾದಿ..೨೪ ಘಂಟೆಗಳ ನಿರಂತರ ಸುದ್ದಿಪ್ರಸಾರಕ್ಕಾಗಿ ಚಾನೆಲ್ಗಳು ಮೀಸಲು. ಅದೆಂತಹ ಸುದ್ದಿಯೇ ಆಗಿರಬಹುದು ಅಥವಾ ಅಸಲು ಸುದ್ದಿಯೇ ಅಲ್ಲದಿರಬಹುದು, ಒಟ್ಟಿನಲ್ಲಿ ಹೇಳಲಿಕ್ಕೊಂದು ವಿಷಯ, ಬಿತ್ತರಿಸಲೊಂದು ಮಾಧ್ಯಮ, ನೋಡಲಿಕ್ಕೆಂದು ಪ್ರೇಕ್ಷಕರು

ಹಲವು ಲಕ್ಷ ಜನರು ನೋಡುವಂತಹ, ಜನರಿಗೆ ಬೇಗ ಮುಟ್ಟುವಂತಹ ಮಾದ್ಯಮಗಳ ಪೈಕಿ ಟಿ.ವಿ ಸುದ್ದಿವಾಹಿನಿಗಳದ್ದು ಪ್ರಥಮ ಸ್ಥಾನ. ಆದರೆ ಇಂತಹ ಸುದ್ದಿವಾಹಿನಿಗಳು ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಒಮ್ಮೆ ವಿವೇಚನೆ ಮಾಡಿದ್ದಲ್ಲಿ ಆಘಾತವಾಗುವುದು ನಿಶ್ಷಿತ. ಮೇಲೆ ತಿಳಿಸಿದಂತಹ ವಿಷಯಗಳು ಇಂತಹ ಚಾನೆಲ್ಗಳಲ್ಲಿ ದಿನನಿತ್ಯವೂ ಪ್ರಸಾರವಾಗುತ್ತಿರುತ್ತದೆ. ಒಂದು ಚಾನೆಲ್ ಒಂದು ಕಾರ್ಯಕ್ರಮವನ್ನು ಪ್ರಸಾರ ಮಾಡಿದರೇ ಹಳ್ಳಕ್ಕೆ ಬೀಳುವ ಕುರಿಗಳ ಹಿಂಡಿನಂತೆ ಎಲ್ಲಾ ವಾಹಿನಿಗಳಲ್ಲೂ ಅದೇ ರೀತಿಯ (ಕು)ರಿಕಥೆ. ಆದರೆ ಇಲ್ಲಿ ಹಳ್ಳಕ್ಕೆ ಬೀಳುವುದು ಮಾತ್ರ ಪ್ರೇಕ್ಷಕ.

ಇಂತಹುದೇ ಒಂದು ವಾಹಿನಿಯಲ್ಲಿ ಪ್ರಸಾರವಾದ ಸುದ್ದಿವಿಷಯವೊಂದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ವಿಷಯವೆಂದರೆ, ಒಬ್ಬ ವ್ಯಕ್ತಿ ಒಂದು ನಾಯಿಯನ್ನು ಸಾಕಿರುತ್ತಾನೆ. ನಾಯಿಯ ನಿಷ್ಟೆ ಎಷ್ಟೆಂದರೆ ಆತ ಹೋದಲ್ಲೆಲ್ಲಾ ಸಾಕು ನಾಯಿಯೂ ಸಹಾ ಹಿಂಬಾಲಿಸುತ್ತಿರುತ್ತದೆ. ಸುದ್ದಿ ಇಷ್ಟೇ ಆದರೆ ಇದರ ಪ್ರಸಾರ ಮಾತ್ರ ಬರೋಬ್ಬರಿ ಅರ್ಧ ಘಂಟೆ, ಮದ್ಯ ಮಧ್ಯದಲ್ಲಿ ಬ್ರೇಕು ಇದ್ದರೂ ಸುದ್ದಿ ಹೇಳುತ್ತಿದ್ದವರ ಬಾಯಿಗೆ ಮಾತ್ರ ಯಾವುದೇ ಬ್ರೇಕು ಇರಲಿಲ್ಲ. ನಾಯಿ ಹಿಂಬಾಲಿಸುತ್ತಿರುವ ವೀಡಿಯೋ ದೃಶ್ಯಗಳು..ಹಿನ್ನೆಲೆಯಲ್ಲಿ ಸುದ್ದಿಯ ಪ್ರಸಾರ..ಸಾಕುನಾಯಿ ಮಾಲೀಕನ ಸಂದರ್ಶನ

ಇಲ್ಲಿ ಮತ್ತೊಂದು ಉದಾಹರಣೆಯನ್ನು ನೀಡಬಯಸುತ್ತೇನೆ. ದೇಶದ ಪ್ರಥಮ ಪ್ರಜೆಯೆಂದು ಗೌರವಿಸಲ್ಪಡುವ ಉನ್ನತವಾದ ಸ್ಥಾನವನ್ನು ಅಲಂಕರಿಸಿರುವ ಶ್ರೀಮತಿ ಪ್ರತಿಭಾ ಪಾಟೀಲ್  ರವರು ತಮ್ಮ ಅಧಿಕಾರವನ್ನು ದುರ್ವಿನಿಯೋಗ ಮಾಡಿಕೊಂಡಿರುವ ಬಗ್ಗೆ ವೆಬ್ಸೈಟ್ ಒಂದರಲ್ಲಿ ಆಧಾರಗಳ ಸಮೇತ ಸುದ್ದಿ ಪ್ರಕಟಿಸಲಾಗಿದ್ದು. ಇದರ ಬಗ್ಗೆ ಸಾಮಾಜಿಕ ತಾಣಗಳಾದ ಫೇಸ್ಬುಕ್, ಟ್ವಿಟರ್ ಗಳಲ್ಲಿಯೂ ಸಹಾ ಅಗಣಿತವಾದ ಚರ್ಚೆಗಳಾಗಿದ್ದವು. ಸುದ್ದಿಯ ಸಾರ ಈ ರೀತಿಯಾಗಿತ್ತು

ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಹಗಲು ರಾತ್ರಿ ಹೋರಾಡುವ ಯೋಧರ ವಸತಿಗೃಹಕ್ಕಾಗಿ ಮೀಸಲಾಗಿಟ್ಟಿದ್ದ ಸುಮಾರು ೨,೬೧,೦೦೦ ಚದರ ಅಡಿ ವಿಸ್ತೀರ್ಣದ ಭೂಮಿಯಲ್ಲಿ ನಮ್ಮ ಹೆಮ್ಮೆಯ ಪ್ರಥಮ ಪ್ರಜೆ ಶ್ರೀಮತಿ ಪ್ರತಿಭಾ ಪಾಟೀಲ್ ರವರಿಗಾಗಿ ಅದ್ದೂರಿ, ಭವ್ಯ ಸುಸಜ್ಜಿತವಾದ ಬಂಗಲೆಯ ನಿರ್ಮಾಣ...!!!! ಇದಕ್ಕೂ ಮುನ್ನ ಮಾನ್ಯ ಪ್ರತಿಭಾ ಪಾಟೀಲ್ ರವರು ಹುದ್ದೆಗೇರಿದ ಕೆಲವೇ ಕಾಲದಲ್ಲಿ ಇವರಿಂದ ರಾಷ್ಟ್ರಪತಿ ಭವನದ ಪುನರ್‍ ನಿರ್ಮಾಣ ಕಾರ್ಯಕ್ಕಾಗಿ ಹಲವು ಕೋಟಿಗಳ ವ್ಯಯ..!!! ಇದಾದ ಕೆಲವೇ ವರ್ಷಗಳಲ್ಲಿ ತಮ್ಮ ವೇತನದಲ್ಲಿ 300% ಹೆಚ್ಚಳ ಮಾಡಿಕೊಂಡ ಹೆಗ್ಗಳಿಗೆ..!!!ದೇಶದ ಬಡತನ ರೇಖೆಯನ್ನು ರೂ.೩೨ (ದಿನದ ಸಂಪಾದನೆ) ಗೆ ಸೀಮಿತಗೊಳಿಸಿದ್ದ ದೇಶದಲ್ಲಿ ಶ್ರೀಮತಿ ಪ್ರತಿಭಾ ಪಾಟೀಲ್ ರವರ ಓಡಾಟಕ್ಕಾಗಿ ಸುಮಾರು 6 ಕೋಟಿ ಬೆಲೆ ಬಾಳುವ ಮರ್ಸಿಡಸ್ ಕಾರ್‍.!!!

ಮಾಹಿತಿ: (http://www.sandeepweb.com/2012/04/16/shame-on-you-madam/)

ದುರ್ವಿಧಿಯೆಂದರೆ ಸಮಾಜದ ದೃಷ್ಟಿಯಿಂದ ಸೂಕ್ತವಾದ ಹಾಗೂ ಮಹತ್ವವೆನಿಸುವ ಇಂತಹ ಸಂಗತಿಗಳ ಬಗ್ಗೆ ನಮ್ಮ ಮಾಧ್ಯಮಗಳು ಬೆಳಕು ಚೆಲ್ಲುವುದೇ ಇಲ್ಲ. ಟಿ.ಆರ್‍.ಪಿ ಹಿಂದೆ ಬಿದ್ದಿರುವ ಮಾದ್ಯಮಗಳಿಗೆ ಮೌಲ್ಯಗಳೇ ಇಲ್ಲವೇ..??? ಕೆಲಸಕ್ಕೆ ಬಾರದ ವಿವಾದಗಳನ್ನು ವೈಭವೀಕರಿಸುತ್ತಾ...ಚಪ್ಪ ಚಪ್ಪಲಿಯಲ್ಲಿ ಹೊಡೆದಾಡುವಂತಹ ದೃಶ್ಯಗಳನ್ನು ಪದೇ ಪದೇ ತೋರಿತ್ತಾ..ಪವಾಡಗಳನ್ನು, ಪವಾಡಪುರುಷರನ್ನು ಬಯಲು ಮಾಡುವುದರ ಬದಲಾಗಿ ಇವುಗಳಿಗೆ ಮತ್ತಷ್ಟು ಉತ್ತೇಜನ ನೀಡುವ ರೀತಿಯಲ್ಲಿ ಬಿಂಬಿಸುತ್ತಾ..ತಮ್ಮ ಕಿಸೆಗಳನ್ನು ತುಂಬಿಸಿಕೊಳ್ಳುತ್ತಿವೆ.

ಒಂದು ಕಡೆ ಡಬ್ಬಂಗ್ ವಿರೋಧಿ ಎಂಬ ಹುಚ್ಚು ನೀತಿಯಿಂದಸತ್ಯಮೇವ ಜಯತೇಯಂತಹ ಮೌಲ್ಯಯುತವಾದ ಕಾರ್ಯಕ್ರಮಗಳ ವೀಕ್ಷಣೆಯಿಂದ ಕನ್ನಡಿಗರು ವಂಚಿತರಾಗುತ್ತಿದ್ದರೆ, ಮತ್ತೊಂದೆಡೆ ಸುದ್ದಿವಾಹಿನಿಗಳಿಂದ ಇಂತಹ ಹಳಸಲು ಕಾರ್ಯಕ್ರಮಗಳನ್ನು ವೀಕ್ಷಿಸಬೇಕಾದ ಕರ್ಮ ಕನ್ನಡಗಿರ ಪಾಲಿಗೆ ಬಂದಿದೆ.

ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕಾಗಿರುವ ಇಂತಹ ಮಾದ್ಯಮಗಳು ಈಗ ಅನುಸರಿಸುತ್ತಿರುವ ದಾರಿಯಾದರೂ ಎಂತಹುದು..?? ಖಂಡಿತವಾಗಿಯೂ ಈಗಿನ ಪರಿಸ್ಥಿತಿಯಲ್ಲಿ ಇಂತಹ ಟಿ.ವಿ ಸುದ್ದಿವಾಹಿನಿಗಳಿಗೆ ಲಗಾಮು ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ಬಗ್ಗೆ ಜನರೂ ಸಹಾ ಚಿಂತಿಸುವ ಸಮಯ ಬಂದೊದಗಿದೆ. ಸಮಾಜದಲ್ಲಿ ಅರಿವಿನ ಬೀಜವನ್ನು ಬಿತ್ತುವುದರ ಬದಲಾಗಿ ಮೌಢ್ಯತೆಯನ್ನು ಸಾರುತ್ತಾ, ವಿವೇಚನಾರಹಿತವಾಗಿ ಅನಗತ್ಯವಾದ ಸುದ್ದಿಗಳಿನ್ನು ಪ್ರಸಾರ ಮಾಡುತ್ತಿರುವ ಸುದ್ದುವಾಹಿನಿಗಳ ನಿಯಂತ್ರಣ ಆದ್ಯತೆಯ ವಿಷಯವಾಗಬೇಕಾಗಿದೆಏನಂತೀರಾ,,???

 

Comments