ಕುರುಡು ನಂಬಿಕೆಗಳ ಸುತ್ತ...

ಕುರುಡು ನಂಬಿಕೆಗಳ ಸುತ್ತ...

 ಮೊನ್ನೆ ಆಫೀಸಿನಿಂದ ಬೇಗ ಬಂದು, ಮುಖ ತೊಳೆದುಕೊಂಡು ಫ್ರೆಶ್ ಆಗಿ ಕುಳಿತುಕೊಂಡಿದ್ದೆ. ಹಾಗೆ ಟಿವಿ ನಲ್ಲಿ ಏನಾದ್ರು ಕಾರ್ಯಕ್ರಮ ನೋಡೋಣವೆಂದು ಟಿವಿ ಹಾಕಿದೆ. ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ಬರ್ತಾ ಇತ್ತು. ರಾಯಲ್ ಚಾಲೆಂಜರ್ಸ್ ನವರದು ಬೌಲಿಂಗ್ ಸರದಿ. ಮುಂಬೈ ನವರು ಹಿಗ್ಗಾ ಮುಗ್ಗಾ ಚಚ್ತಾ ಇದ್ರು. ಹಾಗೆ ಪಕ್ಕ ಕುಳಿತಿದ್ದ ಜಾವೇದ್ ಗೆ "ಏನ ಲೇ ಇವ್ರು ಹೀಗೆ ಬೌಲಿಂಗ್ ಮಾಡ್ತಾ ಇದಾರೆ ? ಮೋಸ್ಟ್ಲಿ ವಿಜಯ ಮಲ್ಯ ಅವರದು ಕೆಟ್ಟ ಕಾಲ ನಡೀತಾ ಇದೆ ಅನ್ಸುತ್ತೆ. ಕಿಂಗ್ ಫಿಷೆರ್ ನಷ್ಟ ಅನುಭವಿಸ್ತಾ ಇದೆ. ಯು ಬಿ ಸಿಟಿ ನ ಮಾರ್ತಾ ಇದಾರಂತೆ. ಹೇಗ್ ಇದ್ದವರು ಹೇಗಾದ್ರಪ್ಪ!!",ಅಂದೆ. ಆಗ ಅವನು "ನಿಂಗೊತ್ತಾ ಅವ್ರು ಯು ಬಿ ಸಿಟಿ ಮಾರೋದಿಕ್ಕೆ ಮೂಲ ಕಾರಣ ಅದರ ಎತ್ತರ ಅದರ ಹತ್ತಿರ ಇರುವ ಗಣೇಶ ಗುಡಿಯ ಎತ್ತರಕ್ಕಿಂತ ತುಂಬಾ ಜಾಸ್ತಿ ಇದೆ ಅಂತೆ. ಅದಕ್ಕೆ ಅವರಿಗೆ ನಷ್ಟ ಅಂತೆ. ಮೊನ್ನೆ ಟಿವಿ ಲಿ ಹೇಳ್ತಾ  ಇದ್ದರಪ್ಪ" ,ಎಂದ. ಅದಕ್ಕೆ ನಾನು, ಎಲಾ ಇವನ ಗಣೇಶನ ಗುಡಿ ಎತ್ತರಕ್ಕೂ ಮತ್ತು ವಿಜಯ ಮಲ್ಯ ಅವ್ರು ನಷ್ಟದಲ್ಲಿರೋಕೂ ಏನಪ್ಪಾ ಸಂಬಂಧ ಎಂದು ಯೋಚಿಸಿದೆ. ಮೋಸ್ಟ್ಲಿಗಣೇಶ ಗುಡಿಲಿ ಕುಳಿತುಕೊಂಡು "ಈ ಮನುಷ್ಯ ನನ್ನ ಮನೆಗಿಂತಲೂ ಎತ್ತರವಾದ ಕಟ್ಟಡ ಕಟ್ಟಿಸಿದ್ದಾನೆ. ಇರ್ಲಿ ಒಂದು ಕೈ ನೋಡೇ ಬಿಡೋಣ", ಎಂದು ವಿಚಾರ  ಮಾಡಿ,ಪಾಪ! ವಿಜಯ ಮಲ್ಯ ಅವರ ಬೆನ್ನು ಬಿದ್ದಿರಬೇಕೆಂದು ಅಂದುಕೊಂಡೆ ! ಜಾವೇದ್ನ ಮಾತು ಕೇಳಿ ಒಳಗೆ ಇಂಟರ್ನೆಟ್ ನೋಡುತ್ತಾ ಕುಳಿತಿದ್ದ ಸುನೀಲ್ ಹೊರಗೆ ಬಂದು ಇನ್ನೊಂದು ಸುದ್ದಿ ಹೇಳಿದ. ಅದು ಕೂಡ ಗುಡಿಯ ಎತ್ತರಕ್ಕೆ ಸಂಬಧಿಸಿದಂತೆ. ಅದು ರಾಮೋಜಿ ಫಿಲಂ ಸಿಟಿ ಗೆ ಸಂಬಂಧಿಸಿದ್ದಾಗಿತ್ತು. ಅಲ್ಲೂ ಕೂಡ ಒಂದು ಕಟ್ಟಡ ಯಾವುದೋ ಗುಡಿಗಿಂತ ಎತ್ತರ ಇದ್ದಿದುದರಿಂದ ರಾಮೋಜಿ ರಾವ್ ಅವರು ರಾಮೋಜಿ ಫಿಲಂ ಸಿಟಿ ಅನ್ನು ಮಾರಿದರಂತೆ!!!! ಇದನ್ನು ಕೇಳಿ ನನಗೆ ತುಂಬಾ ನಗು ಬಂದಿತು.ಅರೆ ! ಇದೇನಿದು ದೇವರು ಎಲ್ಲ ಕೆಲಸ ಕಾರ್ಯ ಬಿಟ್ಟು ಕಟ್ಟಡಗಳನ್ನು ಅಥವಾ ಫಿಲಂ ಸಿಟಿಗಳನ್ನು ಮಾರಲು ರಿಯಲ್ ಎಸ್ಟೇಟ್ ವ್ಯಾಪಾರ ಶುರು ಮಾಡಿದ್ನಾ ಅಂತ ಅನ್ನಿಸ್ತು.ಇದನ್ನೆಲ್ಲಾ ನೋಡ್ತಾ ಇದ್ದರೆ ಟಿವಿ ಚಾನೆಲ್ ನವರು ಪಾಪ ಯಾರ ಯಾರಿಗೋ ನಷ್ಟವಾದರೆ ಅದನ್ನ  ದೇವರ ತಲೆಗೆ ಕಟ್ಟಿ ತಮ್ಮ ಕಾರ್ಯಕ್ರಮದ ಟಿ ಆರ್ ಪಿ ರೇಟಿಂಗ್ ಅನ್ನು ಹೆಚ್ಚಿಸಿಕೊಳ್ಳುತಿದ್ದಾರೆನ್ನಿಸಿತು.ಅಲ್ಲ ಟಿ ವಿ ಚಾನೆಲ್ಲನಂಥಾ ಪ್ರಭಾವಿ ಮಾಧ್ಯಮವೇ ಇಂಥ ವಿಷಯಗಳನ್ನು ಜನರಿಗೆ ತೋರಿಸಿ ಜನರಲ್ಲಿ ಕುರುಡು ನಂಬಿಕೆಗಳನ್ನು ಹೆಚ್ಚಿಸುತ್ತಿರುವದು ಎಷ್ಟು ಸರಿ ಎನ್ನಿಸಿತು.

ಇದೆ ರೀತಿ ಜನರ ಜೀವನದಲ್ಲಿ ತುಂಬಾ ಕುರುಡು ನಂಬಿಕೆಗಳು ಹಾಸು ಹೊಕ್ಕಾಗಿ ಸೇರಿಕೊಂಡಿವೆ. ಈ ಕುರುಡು ನಂಬಿಕೆಗಳು ನೆಗಡಿ ಕೆಮ್ಮುಗಳ ಹಾಗೆ ಅಂಟು ಜಾಡ್ಯಗಳ ತರಹ.ಇವುಗಳನ್ನು ಹರಡಿಸುವದು ತುಂಬಾ ಸುಲಭ.ಅದೇ ರೀತಿ ಈ ಮೂಢ ನಂಬಿಕೆಗಳು ಸಮಾಜದ ಕಾನ್ಸೆರ್ ಇದ್ದ ಹಾಗೆ. ಒಂದು ಸಲ ಇವು ಹಬ್ಬಿದವೆಂದರೆ ಮುಗೀತು ಅವುಗಳನ್ನು ಕಿತ್ತೆಸೆಯುವದು ತುಂಬಾ ಕಷ್ಟ. ಸಾಮಾನ್ಯವಾಗಿ ನಮ್ಮ ಪೂರ್ವಿಕರು ಕೆಲವೊಂದು ಆಚರಣೆಗಳನ್ನು ಕೆಲವು ವೈಜ್ಞಾನಿಕ ಹಿನ್ನಲೆಯಲ್ಲಿ ರೂಪಿಸಿಕೊಂಡರು. ಈ ಆಚರಣೆಗಳೇ ಮುಂದೆ ಯಾವ ಯಾವ ಕಾರಣಗಳಿಂದಲೋ ಏನೋ ಮೂಧನಂಬಿಕೆಗಳಾಗಿ ಮಾರ್ಪಾಟು ಹೊಂದಿದವು. ಈ ಮೂಢ ನಂಬಿಕೆಗಳೆಲ್ಲ ಸೇರಿ ಇಂದು ಪ್ರಾಣಿಗಳಾದ ಬೆಕ್ಕು,ಕಾಗೆ,ಗೂಬೆ,ಹಂದಿ ಮುಂತಾದವುಗಳನ್ನು ತಪ್ಪಿತಸ್ತರನ್ನಾಗಿಯೂ, ದೇವರುಗಳ್ಳನ್ನು ಒಬ್ಬ ಕಟ್ಟಡ ಮಾರುವ ದಲ್ಲಾಲಿಗಳಾಗಿಯೂ ರೂಪಿಸಿವೆ. ಇಂತಹ ಕೆಲವೊಂದು ಉದಾಹರಣೆಗಳ ಬಗ್ಗೆ ಈಗ ನೋಡೋಣ.

ಸಾಮಾನ್ಯವಾಗಿ ನಾವು ಮನೆಗಳಲ್ಲಿ ಉಗುರು ಕತ್ತರಿಸುವದು ಹಗಲು ಹೊತ್ತಿನಲ್ಲಿಯೇ.ರಾತ್ರಿ ಏನಾದರೂ ಉಗುರು ಕತ್ತರಿಸಿಕೊಂಡರೆ ಮನೆಯಲ್ಲಿ ಬೈಯುತ್ತಾರೆ. ಹೀಗೇಕೆ ಅಂತ ನಾನು ತುಂಬಾ ದಿವಸಗಳಿಂದ ಯೋಚನೆ ಮಾಡುತಿದ್ದೆ.ಕಡೆಗೊಂದು ದಿನ ಅಮ್ಮನನ್ನು ಕೇಳಿಯೇ ಬಿಟ್ಟೆ. ಆಗ ಅಮ್ಮ ಹೇಳಿದ್ದು ಏನೆಂದರೆ, ಹಿಂದಿನ ಕಾಲದಲ್ಲಿ ದೀಪಗಳ ಬಳಕೆ ತುಂಬಾ ಕಡಿಮೆ ಇದ್ದಿತು. ಮತ್ತು ಜಾಸ್ತಿ ಜನರು ಕಾಲಿನಲ್ಲಿ ಚಪ್ಪಲಿ ಹಾಕಿಕೊಳ್ಳದೆ ನಡೆಯುತ್ತಿದ್ದರು. ಸಾಮಾನ್ಯವಾಗಿ ಉಗುರುಗಳ ಅಂಚುಗಳು ಚೂಪಾಗಿಯೂ ಮತ್ತು ಕೊಳೆಯಿಂದ ಕೂಡಿರುತ್ತದೆ.ಅದಕ್ಕೆ ಯಾರಾದರು ಉಗುರು ಮೆಟ್ಟಿದರೆ ಅದು ಚುಚ್ಚಬಾರದು ಎಂದು ರಾತ್ರಿ ಉಗುರು ಕತ್ತರಿಸಬಾರದೆಂದು ಹೇಳುತ್ತಾರೆ.ಅದಕ್ಕೆ ಪೂರ್ವಿಕರು ರಾತ್ರಿ ಉಗುರು ಕತ್ತರಿಸಿದರೆ ಆಯುಷ್ಯ ಕಡಿಮೆಯಾಗುತ್ತದೆಂದು ಹೇಳಿ ಭಯ ಹುಟ್ಟಿಸಿ,ರಾತ್ರಿ ಉಗುರು ಕತ್ತಿರಸಬಾರದಂತೆ ಮಾಡಿದರು. ಅದೇ ರೀತಿ ಕಾಗೆ,ಗೂಬೆ ಅಥವಾ ಬಾವಲಿಗಳನ್ನು ನೋಡಿ ಜನ ಅಪಶಕುನವೆಂದು ಓಡುತ್ತಾರೆ. ಅದಕ್ಕೂ ಕೂಡ ಕಾರಣ ಇದೆ. ಸಾಮಾನ್ಯವಾಗಿ ಕಾಗೆ ಮಾಂಸಹಾರಿ ಪಕ್ಷಿ.ಅದರ ಕೂಗು ಕೂಡ ಕರ್ಕಶ.ಮನೆಯಲ್ಲಿ ಅಕ್ಕಿ ಮುಂತಾದ ಕಾಲು ಕಡಿಗಳನ್ನು ಒಣಗಿಸುವದು ಮಾಳಿಗೆಯ ಮೇಲೆಯೇ.ಆಗ ಯಾವದಾದರೂ ಕಾಗೆ ಮಾಂಸವನ್ನು ಕಚ್ಚಿಕೊಂಡು ಮಾಳಿಗೆಯ ಮೇಲೆ ಬಂದರೆ ಎಲ್ಲಿ ಆ ಮಾಂಸ ಒಣಗಿಸಲು ಇಟ್ಟ ಪದಾರ್ಥಗಳ ಮೇಲೆ ಬಿದ್ದೀತೋ ಎಂಬ ಭಯದಿಂದ ಕಾಗೆ ಮನೆಯ ಮೇಲೆ ಕೂಡಬಾರದು ಎಂದು ನಿಯಮ ಮಾಡಿದ್ದಾರೆ. ಆದರೆ ಅದು ಗೊತ್ತಿಲ್ಲದ ಜನ ಕಾಗೆ ಮನೆಯ ಮೇಲೆ ಕುಳಿತರೆ ಅಪಶಕುನವೆಂದು ಬಗೆಯುತ್ತಾರೆ.ಅದೇ ರೀತಿ ಗೂಬೆ ಬಾವಲಿಗಳು ವಾಸಿಸುವದು  ಪಾಳು ಬಿದ್ದ ಮನೆಗಳಲ್ಲಿ ಅಥವಾ ಕಟ್ಟಡಗಳಲ್ಲಿ. ಅದಕ್ಕೆ ಕಾರಣ ಅವು ಸಾಮಾನ್ಯವಾಗಿ ಬೇಟೆಯಾದುವದು ರಾತ್ರಿಗಳಲ್ಲಿ. ಆದ ಕಾರಣ ಹಗಲಿನಲ್ಲಿ ಅವು ನಿದ್ದೆ ಮಾಡುತ್ತವೆ.ಅದಕ್ಕೆ ಅವು ಆರಿಸಿಕೊಳ್ಳುವದು ನಿರ್ಜನವಾದ ಪಾಳು ಮನೆಗಳನ್ನ. ಆದರೂ ಕೂಡ ಜನ ಅದನ್ನು ಅರ್ಥ ಮಾಡಿಕೊಳ್ಳದೆ ವಿನಾ ಕಾರಣ ಆ ಪಾಪದ ಪ್ರಾಣಿಗಳನ್ನು ದೂಷಿಸುತ್ತಾರೆ. ಹಾಗೆಯೇ ಎಲ್ಲಿಯಾದರೂ ಹೋಗಬೇಕಾದರೆ ಬೆಕ್ಕು ಅಡ್ಡ ಬಂದಿತೆಂದರೆ ಅದು ಅಪಶಕುನವಂತೆ. ಅರೆ! ಬೆಕ್ಕಿನ ಕೆಲಸವೇ ಒಂದು ಮನೆಯಿಂದ ಇನ್ನೊಂದು ಮನೆಗೆ ಆಹಾರಾನ್ವೇಷಣೆಗೆ ಹೋಗುವದು. ಆದರೆ ನಾವು ಮನೆಗಳ ಮಧ್ಯೆ ಅಡ್ಡಾಡುವ ದಾರಿಗಳನ್ನು ಮಾಡಿದರೆ ಪಾಪ ! ಬೆಕ್ಕಿನದೇನು ತಪ್ಪು ? ಆದರೂ ಕೂಡ ಅದು ಅಪಶಕುನವೇ.ಅದೇ ರೀತಿ ಹಲ್ಲಿಗಳನ್ನು ಸಾಯಿಸಿದರೆ ಪಾಪ ಬರುತ್ತದೆಂಬ ಮೂಢನಂಬಿಕೆ ಇದೆ. ಅದಕ್ಕೆ ನಿಜವಾದ ಕಾರಣವೆಂದರೆ ಹಲ್ಲಿಗಳು ಮನೆಯೊಳಗಿದ್ದರೆ ಕೀಟಗಳನ್ನು ಸ್ವಾಹಾ ಮಾಡಿ ನಮ್ಮನ್ನು ಕೀಟ ಭಾದೆಗಳಿಂದ ರಕ್ಷಿಸುತ್ತವೆ. ಆದ ಕಾರಣ ಅವನ್ನು ಕೊಂದರೆ ಪಾಪ ಎಂದು ನಿಯಮ ಮಾಡಿರುವದು. ಆದರೆ ಇದು ಕೂಡ ಒಂದು ದೊಡ್ಡ ಕುರುಡು ನಂಬಿಕೆಯಾಗಿ ಪರಿಣಮಿಸಿದೆ. ಅದೇ ರೀತಿ ಇಲಿ ಮುಂತಾದ ಧಾನ್ಯ ಪೀಡಕಗಳನ್ನು ತಿನ್ನುವ ಹಾವುಗಳನ್ನು ಕೊಂದರೆ ಪಾಪ ಎನ್ನುವದು ಅವು ರೈತನ ಮಿತ್ರನಾದುದರಿಂದ. ಆದ ಕಾರಣಕ್ಕೆ ಪಾಪ! ಪರಮೇಶ್ವರನ ಕೊರಳಿನಲ್ಲಿ ಸ್ಕಾರ್ಪ್ ನ ಹಾಗೆ ಹಾವನ್ನು ಹಾಕಿ ಅದಕ್ಕೆ ಪೂಜ್ಯನೀಯ ಸ್ಥಾನ ಕೊಟ್ಟಿದ್ದು !! ಪಾಪ ! ಪಾರ್ವತಿಯ ಕಷ್ಟ ಕೇಳುವರು ಯಾರು!

ಹೀಗೆಯೇ ಈ ಮೂಢನಂಬಿಕೆಗಳು ಪ್ರಾಣಿಗಳ ವಿಷಯದಲ್ಲಿ ಮಾತ್ರ ಸೀಮಿತವಾಗಿಲ್ಲ ಅವು ಜೋತಿಷ್ಯಶಾಸ್ತ್ರಕ್ಕೂ ವಕ್ಕರಿಸಿಕೊಂಡಿವೆ.ಸಾಮಾನ್ಯವಾಗಿ ಜೋತಿಷ್ಯಶಾಸ್ತ್ರ ನಿಂತಿರುವದು ಗ್ರಹಗಳು ಮತ್ತು ನಕ್ಷತ್ರಗಳ ನಡುವಿನ ಗುರುತ್ವಾಕರ್ಷಣೆ ಬಲ ಮತ್ತು ಅವುಗಳ ನಡುವಿನ ದೂರದ ಆಧಾರದ ಮೇಲೆ. ಹುಣ್ಣಿಮೆಯ ದಿನಗಳಲ್ಲಿ ಚಂದ್ರನ ಮತ್ತು ಭೂಮಿಯ ನಡುವಿನ ಗುರುತ್ವಾಕರ್ಷಣೆಯ ಬಲದ ನಡುವೆ ವ್ಯತ್ಯಾಸವಾಗುವದರಿಂದ ಸಾಗರಗಳಲ್ಲಿ ಉಬ್ಬರವಿಳಿತಗಲಿರುತ್ತವೆ. ಅದಕ್ಕೆ ಕಾರಣ ಗುರುತ್ವ ಬಲದ ಬದಲಾವಣೆಯ ಪರಿಣಾಮ ಸಾಗರದ  ಲವಣಯುಕ್ತ ನೀರಿನ ಮೇಲೆ ಆಗುವದರಿಂದ.ಅದೇ ರೀತಿ ಮನುಷ್ಯನ ದೇಹವೂ ಕೂಡ ಶೇಕಡಾ ೯೦ ರಷ್ಟು ನೀರಿನಿಂದ ಕೂಡಿರುವಾದರಿಂದ ಗ್ರಹಗತಿಗಳ ಬದಲಾವಣೆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಸ್ಥಿತಿಗಳನ್ನು ನಿರ್ಧರಿಸುತ್ತವೆ.ನಾವು ಹುಟ್ಟುವ ಕಾಲದಲ್ಲಿ ಇರುವ ಗ್ರಹಗತಿಗಳ ಮತ್ತು ಅದರಿಂದಾಗುವ ಗುರುತ್ವ ಬಲದ ಬದಲಾವಣೆಗಳು ನಮ್ಮ ದೇಹರಚನೆ ಗಳನ್ನೂ ನಿರ್ಧರಿಸುತ್ತವೆ. ಹೀಗೆ ಜ್ಯೋತಿಷ್ಯಶಾಸ್ತ್ರ ಗುರುತ್ವಾಕರ್ಷಣೆ ಶಕ್ತಿ ಎಂಬ ವೈಜ್ಞಾನಿಕ ಆಧಾರದ ಮೇಲೆ ರೂಪುಗೊಂಡಿದೆ. ವಸ್ತುಸ್ಥಿತಿ ಹೀಗಿರುವಾಗ ಕೆಲವರು ನಾನು ತ್ರಿಕಾಲ ಜ್ಞಾನಿ. ನನ್ನಲ್ಲಿ ಮಂತ್ರ ಶಕ್ತಿ ಇದೆ,ತಂತ್ರ ಶಕ್ತಿ ಇದೆ ಎಂದು ಬುರುಡೆ ಬಿಡುತ್ತಿರುತ್ತಾರೆ. ಇಂತಹ ಪೊಳ್ಳು ಮನುಷ್ಯರಿಂದಲೇ ಸಮಾಜದಲ್ಲಿ ಮೂಢನಂಬಿಕೆಗಳು ತುಂಬಿ ತುಳುಕಾಡುತ್ತಿರುವದು.ಇವರಿಗೆ ಟಿ ವಿ ಮಾಧ್ಯಮದವರ,ರಾಜಕೀಯ ವ್ಯಕ್ತಿಗಳ ಬೆಂಬಲ ಬೇರೆ. ಇನ್ನು ಮೇಲಾದರೂ ಜನ ಎಚ್ಚೆತ್ತುಕೊಂಡು ಇಂತಹ ನಂಬಿಕೆಗಳನ್ನು ಸಮಾಜದಿಂದ ಕಿತ್ತೊಗೆದು ಉನ್ನತ ವಿಚಾರಗಳ ಬಿತ್ತನೆ ಮಾಡಬೇಕಾಗಿದೆ.ಇದು ನಮ್ಮೆಲ್ಲರ ಆದ್ಯ ಕರ್ತವ್ಯ. ಇಲ್ಲವಾದಲ್ಲಿ ನಮ್ಮ ಮುಂದಿನ ಪೀಳಿಗೆಯವರು ಕೂಡ ಬೆಕ್ಕು,ಕಾಗೆಗಳನ್ನು ದ್ವೇಷಿಸಬೇಕಾಗುತ್ತದೆ!!!!!

Comments