ನನ್ನ ಬಾಲ್ಯದ ನೆನಪುಗಳು : ಎತ್ತಿನ ಗಾಡಿಯ ಪಯಣ

ನನ್ನ ಬಾಲ್ಯದ ನೆನಪುಗಳು : ಎತ್ತಿನ ಗಾಡಿಯ ಪಯಣ

 ನನ್ನ ಬಾಲ್ಯದ ನೆನಪುಗಳು  : ಎತ್ತಿನ ಗಾಡಿಯ ಪಯಣ


ಅಗೆಲ್ಲ ನಾನಿನ್ನು   ಏಳು ಏಂಟನೆ ಕ್ಲಾಸ್ ಓದುತ್ತಿದ್ದ ಕಾಲ ಅನ್ನಿಸುತ್ತೆ. ಬೇಸಿಗೆ ರಜಾ ಬಂದರೆ ಆಯ್ತು ನಮಗೆಲ್ಲ್ಸ ಸಂಭ್ರಮ. ಅಮ್ಮನ ಜೊತೆ ಸೇರಿ ಊರಿಗೆ ಅಂದರೆ ನಮ್ಮ ತಂದೆಯವರ ಊರು ತುಮಕೂರು ಹತ್ತಿರದ ಹಳ್ಳಿ,   ದೊಡ್ಡನಾರುವಂಗಲಕ್ಕೆ ಹೊರಡುತ್ತಿದ್ದೆವು. ಕೆಲವು ಸಾರಿ ಬೆಂಗಳೂರಿಗೆ ಸೋದರಮಾವನ ಮನೆಗೆ. 

 ಹಳ್ಳಿಗೆ ಹೋದರೆ ಅಲ್ಲಿ ಸಾಕಷ್ಟು ಜೊತೆ ಸಿಗುತ್ತಿತ್ತು. ನಮ್ಮ ಕಡೆಯ ಚಿಕ್ಕಪ್ಪ ನಮಗೆ ಜೊತೆ. ಅವರ ಜೊತೆ ಸುತ್ತಾಟ ಹೆಚ್ಚು. ಮತ್ತೆ ಕೆಲವು ಗೆಳಯರು (ಅನಂತ ಎಂಬ ..). ಚಿಕ್ಕಪ್ಪ ಜೊತೆ ಸೇರಿದರೆ ಕೆಲವು ಆಕರ್ಷಣೆಗಳು ,   ತುಳಿಯಲು ಸೈಕಲ್ ಸಿಗುತ್ತೆ ಎನ್ನುವುದು. ಅಲ್ಲದೆ ಅವರ ಜೊತೆ ಸೇರಿ ಗದ್ದೆ ಬಯಲಿಗೆ ಹೋಗಿ ಪಂಪ್ ಹೌಸ್ ನಿಂದ ನೀರು ಹಾಯಿಸುವುದು. ಹೊಲದಲ್ಲಿ ಅವರು ನಾಣಿಮಾಡಿಸುತ್ತಿದ್ದ ಮಾವಿನ ಸಸಿಗಳನ್ನು ನೆಡುವುದು. ಹೀಗೆ ಏನೇನೊ. ಹಾಗೆ ಮನೆಯಲ್ಲಿದ್ದ ದನಗಳ ಒಡನಾಟ. ನಮಗೆ ಸಾಕಷ್ಟು ಮನಸೂರೆ ಮಾಡುವ ವಾತಾವರಣವಿರುತ್ತಿತ್ತು.
 
ಒಮ್ಮೆ ಹೀಗಾಯ್ತು ನೋಡಿ. ನಾವು ಅಮ್ಮನ ಜೊತೆ ಹಳ್ಳಿಗೆ ಹೋದಾಗ ಕೆ,ಜಿ,ಎಫ್ ನಿಂದ ನಮ್ಮ ಇನ್ನೊಬ್ಬ ಚಿಕ್ಕಪ್ಪನ ಕಾಗದ ಬಂದಿತು ನಾನು ಇಂತ ಟ್ರೈನ್ ಗೆ ಊರಿಗೆ ಬರುತ್ತಿದ್ದೇನೆ ಎಂದು. ರೈಲ್ವೆ ಸ್ಟೇಷನ್ ಇದ್ದಿದ್ದು ನಮ್ಮ ಹಳ್ಳಿಯಿಂದ ನೇರದಾರಿಯಲ್ಲಿ ಹೋದರೆ ಸುಮಾರು ಮೂರು ಕಿ.ಮಿ. ದೂರದ ಮಲ್ಲಸಂದ್ರ ಎಂಬ ಗ್ರಾಮದಲ್ಲಿ. ಆದರೆ ಆಗೆಲ್ಲ ರಸ್ತೆ ಇರಲಿಲ್ಲ. ಗಾಡಿ ಹೋಗಬೇಕೆಂದರೆ  ಸ್ವಲ್ಪ ಸುತ್ತುದಾರಿಯಿಂದ ಐದು ಆರು ಕಿ.ಮಿ. ದೂರ ಹೋಗಬೇಕಿತ್ತು. ನಮ್ಮ ಕಡೆಯ ಚಿಕ್ಕಪ್ಪ ಚಂದ್ರ ಎಂದು ಹೆಸರು, ಅವರು ನನ್ನನ್ನು 
"ಬರ್ತಿಯೇನೊ, ಮಲ್ಲಸಂದ್ರಕ್ಕೆ ಗಾಡಿಯಲ್ಲಿ ಹೋಗಿ ಲಕ್ಷ್ಮಿನಾರಯಣನ್ನ ಕರೆದುಕೊಂಡು ಬರೋಣ" ಎಂದರು. 
ಮನೆಯಲ್ಲಿ ಮೊದಲಿಗೆ ಬೇಡ ಎಂದರು ಅದಕ್ಕೆ ಕಾರಣ ಹೊಸ ಎತ್ತುಗಳು. ಮನೆಯಲ್ಲಿ ಹುಟ್ಟಿ ಬೆಳೆದ ಅವನ್ನು ಆಗಿನ್ನು ಗಾಡಿಗೆ ಕಟ್ಟುತ್ತಿದ್ದರು. ಅವು ಸಾಕಷ್ಟು ಚಂಡಿತನ ಮಾಡುತ್ತಿದ್ದವು ಹೇಳಿದಂತೆ ಕೇಳುತ್ತಿರಲಿಲ್ಲ. ಆದರೆ ನಮ್ಮ ಚಿಕ್ಕಪ್ಪ ಹೇಗೊ ನಮ್ಮ ತಾತನನ್ನು , ನನ್ನ ಅಮ್ಮನನ್ನು ಒಪ್ಪಿಸಿ ನನ್ನನ್ನು ಜೊತೆಗೆ ಕರೆದು ಕೊಂಡು ಹೊರಟರು. ಮಧ್ಯಾನ ಸುಮಾರು ಮೂರುಗಂಟೆ ಇರಬಹುದೇನೊ ಹೊರಟಾಗ. ಸಂಜೆ ಐದಕ್ಕೆ ಅ ರೈಲು ಬರುತ್ತಿತ್ತು. 
 

  ನಮ್ಮ ಪ್ರಯಾಣ ಚೆನ್ನಾಗಿಯೆ ಇತ್ತು. ಮೊದಲಿಗೆ ಚಿಕ್ಕಪ್ಪ ಗಾಡಿ ಹೂಡಿ ಹೊರಟಾಗ, ಮನೆಯ ಕೆಲಸದಾಳು ಎಚ್ಚರಿಸಿದ, ಸ್ವಾಮೀರ , ಇವುಗಳು ಸರಿಯಿಲ್ಲ, ಹುಶಾರು , ಎಂದು ಎತ್ತುಗಳ ಬಗೆಗೆ, ಆದರೆ ನಮ್ಮ ಚಿಕ್ಕಪ್ಪ ಉಡಾಫೆ ಮಾಡಿದರು. ಅದೇನೊ ಬಿಡೊ ಮನೆ ಎತ್ತುಗಳು ನನಗೆ ತಿಳಿಯದೆ ಎಂದು. ಹಳ್ಳಿ ದಾಟಿದ ನಂತರ ನಾನೆ ಗಾಡಿ ಓಡಿಸಲು ಕುಳಿತೆ, ನನಗೆ ಸಂಭ್ರಮ , ಇಂತ ದೇವರಂತ ಎತ್ತುಗಳನ್ನು ಕುರಿತು ಇವ್ರೆಲ್ಲ ಹೀಗೆ ಹೇಳ್ತಾರಲ್ಲ ಅಂತ ನನಗೆ ಬೇಸರ. ಸರಿ ಹೀಗೆ ಕೆರೆಯ ಏರಿ ದಾಟಿ, ಮಣ್ಣಿನ ರಸ್ತೆಯಲ್ಲಿ ಮುಂದುವರೆದು. ಮುಖ್ಯ ರಸ್ತೆಯನ್ನು ಸೇರಿದೆವು. ಇನ್ನು ಸುಮಾರು ಮುಕ್ಕಾಲು ಒಂದು ಕಿ.ಮಿ. ಅಷ್ಟೆ ಅಲ್ಲಿಂದ ರೈಲ್ವೆ ಸ್ಟೇಷನ್. 

 ಮುಖ್ಯರಸ್ತೆ ಸೇರುತ್ತಲೆ ಎತ್ತುಗಳ ಕೊಸರಾಟ ಪ್ರಾರಂಬವಾಯಿತು. ಹಳ್ಳಿಯಲ್ಲಿ ಇದ್ದು ಅಭ್ಯಾಸವಾಗಿದ್ದ ಅವು ಹೊಸ 
ವಾತಾವರಣಕ್ಕೆ  ತುಂಬಾ ಹೆದರುತ್ತಿದ್ದವು. ಎದುರಿಗೆ ಒಂದು ಬಸ್ ಅಥವ ಲಾರಿ ಬಂದರು,. ಗಾಭರಿ ಬಿದ್ದು ತೂಯ್ದಾಡಿದರೆ ನಮಗೆ ಅವುಗಳನ್ನು ಹತೋಟಿಗೆ ತರುವುದೊಂದು ಕಷ್ಟ. ಕಡೆಗೆ ನಮ್ಮ ಚಿಕ್ಕಪ್ಪ ಕೆಳಗೆ ಇಳಿದು ನಿದಾನವಾಗಿ ಎತ್ತುಗಳಿಗೆ ದೈರ್ಯ ತುಂಬುತ್ತ ಗಾಡಿಯಮುಂದೆ ನಡೆಯುತ್ತ ಇದ್ದರೆ ನಾನು ರಾಜನಂತೆ ಕುಳಿತು ಓಡಿಸುತ್ತಿದ್ದೆ. ಹಾಗು ಹೀಗು 
ರೈಲ್ವೆ ನಿಲ್ದಾಣ ಕಾಣಿಸಿತು. ಸರಿ ಎತ್ತುಗಳನ್ನು ಬಿಚ್ಚಿ , ಅವುಗಳನ್ನು ಗಾಡಿಯ ನೊಗಕ್ಕೆ ಕಟ್ಟಿ. ಹುಲ್ಲು ಹಾಕಿದ ಚಿಕ್ಕಪ್ಪ 
"ನೀನು ಸ್ವಲ್ಪ ಗಾಡಿಯ ಹತ್ತಿರವೆ ಇರು, ಇವು ಹೆದರುತ್ತವೆ, ನಾನು ಹೋಗಿ ರೈಲು ಎಷ್ಟುಹೊತ್ತಿಗೆ ಬರುತ್ತೆ ಎಂದು ತಿಳಿದು ಬರುವೆ
ಎಂದು ಹೊರಟರು" . ನಾನು ಸರಿ ಎಂದು ಗಾಡಿಯ ಪಕ್ಕವೆ ನಿಂತಿದ್ದೆ. 

 ಐದು ಹತ್ತು ನಿಮಿಷವಾಗಿರಬಹುದೇನೊ, ತುಮಕೂರಿನಿಂದ ಪ್ರಯಾಣಿಕರ ರೈಲೊಂದು ಮಲ್ಲಸಂದ್ರಕ್ಕೆ ಬಂದಿತು, ಆಗಿನ್ನು ಸ್ಟೀಮ್ ಎಂಜಿನ್ ಗಳ ಕಾಲ. ಅವುಗಳ ಕರ್ಕಶ ಶಬ್ದ , ಅಲ್ಲದೆ ನಿಲ್ದಾಣ ಹತ್ತಿರ ಬರುವಂತೆ ರೈಲು ಜೋರಾಗಿ
"ಕೂಊಊಊಊಊಊಊಊಊಊಊ" ಎಂದು  ಕೂಗು ಹಾಕಿತು. 
 ನಾನು , ಹತ್ತಿರವೆ ಕಾಣುತ್ತಿದ್ದ ಟ್ರಾಕ್ ಮೇಲೆ ರೈಲನ್ನು ನೋಡುತ್ತಿರುವಂತೆ ಅನಾಹುತ ನಡೆದು ಹೋಯಿತು, 

 ಆ ಭಯಂಕರ ಶಬ್ದಕ್ಕೆ ಹೆದರಿದ, ಎರಡು ಎತ್ತುಗಳು, ಗಾಡಿಯ ನೊಗದ ಸುತ್ತ ನರ್ತನ ಮಾಡುತ್ತ, ಜೋರಾಗಿ ಹಗ್ಗವನ್ನು ಎಳೆದು  ಕೊಂಡವು ಅದು ಹೇಗೊ ಒಂದು ಎತ್ತು ಹಗ್ಗ ಹರಿದುಕೊಂಡಿತು. ನಾನು ಏನಾಯ್ತು ಅಂತ ಅರ್ಥಮಾಡಿಕೊಳ್ಳುವದರಲ್ಲಿ ಬಿಡಿಸಿಕೊಂಡ ಎತ್ತು , ನಾನು ಉಹಿಸದ ವೇಗದಲ್ಲಿ ಟಾರ್ ರಸ್ತೆಯಲ್ಲಿ ,  ಓಡುತ್ತ ಕಣ್ಮರೆಯಾಯಿತು. ನಾನು ಸಾಹಸಬಿದ್ದು ಇನ್ನು ಗಾಡಿಯ ಹತ್ತಿರವೆ ಇದ್ದ ಮತ್ತೊಂದು ಎತ್ತನ್ನು ಅದರ ಮೂಗುದಾರ ಹಿಡಿದು ಸಮಾದಾನ ಪಡಿಸಿದೆ. 
  
 ಸುಮಾರು ಹತ್ತು ಹದಿನೈದು ನಿಮಿಷ ಕಳೆಯಿತು, ರೈಲು ಹೊರಟುಹೋಯಿತು. ನಂತರ ನಮ್ಮ ಚಿಕ್ಕಪ್ಪ ನಿದಾನವಾಗಿ ನಡೆಯುತ್ತ ಗಾಡಿಯ ಹತ್ತಿರ ಬರುತ್ತಿರುವುದು ಕಾಣಿಸಿತು. ಬಂದವರೆ
"ನೋಡೊ ಪಾರ್ಥ ನಾವು ಬಂದಿದ್ದೆಲ್ಲ ದಂಡ, ರೈಲಿನಲ್ಲಿ ಯಾರು ಬರಲೆ ಇಲ್ಲ, ನಡೆ ಹಿಂದಿರುಗೋಣ" ಎನ್ನುತ್ತ ನನ್ನನ್ನು ನೋಡಿ
"ಇನ್ನೊಂದು ಎತ್ತು ಎಲ್ಲಿ ಹೋಯಿತು" ಎಂದು ಕೇಳಿದರು.
ನಾನು ಏನು ಉತ್ತರ ಹೇಳಲಿ. ಸರಿ ಹೀಗೆ ಆಯ್ತು, ರೈಲು ಬಂತಲ್ಲ ಆ ಶಬ್ದಕ್ಕೆ ಹೆದರಿ ಹಗ್ಗ ಹರಿದು ಓಡಿ ಹೋಯ್ತು ಅಂತೆಲ್ಲ ಗಾಭರಿ ಬಿದ್ದು ತಿಳಿಸಿದೆ. 
ಅದಕ್ಕವರು :'ಇದೊಳ್ಳೆ ಗ್ರಾಚಾರ ಬಂದಿತಲ್ಲ" ಎನ್ನುತ್ತ ಯಾವ ದಿಕ್ಕಿಗೆ ಹೋಯ್ತು ಅಂತೆಲ್ಲ ಕೇಳಿ, ನೀನೆಲ್ಲೆ ಇರು ಎಂದು ತಿಳಿಸಿ ಹುಡುಕುತ್ತ ಹೊರಟರು. 

ಸುಮಾರು ಒಂದು ಗಂಟೆಗು ಅಧಿಕಕಾಲ ಒಂಟಿಯಾಗಿ ಕಾಯುತ್ತ ಕುಳಿತೆ, ಇದೇನು ಗ್ರಹಚಾರ ದೇವರೆ, ಏನೊ ಗಾಡಿ ಓಡಿಸಿ ಮಜಾ ತೆಗೆದುಕೊಳ್ಳುವ ಅಂತ ಬಂದರೆ ಹೀಗೆಲ್ಲ ಆಯ್ತಲ್ಲ ಅಂತ. ಸರಿ ಚಿಕ್ಕಪ್ಪ ಎತ್ತಿನೊಂದಿಗೆ ಬೆವರು ಸುರಿಸುತ್ತ ಬರುವಾಗ ಸಂಜೆ ಆರುಗಂಟೆ ದಾಟಿತ್ತು. 
"ನೋಡೊ ಓಡಿ ಗೊಲ್ಲಳ್ಳಿ ಕಾಡು ಸೇರಿಬಿಟ್ಟಿತ್ತು, ನಾನು ಕರೆದರು ಹತ್ತಿರಕ್ಕೆ ಬರಲು ಭಯ ಬೀಳುತ್ತೆ ಮುಂಡೇದು, ಹೇಗೊ ಹುಲ್ಲುತೋರಿಸಿ ಸಮಾದಾನ ಪಡಿಸಿ ಕರೆತಂದೆ ಸಾಕಾಯ್ತಪ್ಪ ಇನ್ನೆಂದು ಇದರ ತಂಟೆಗೆ ಹೋಗಲ್ಲ" ಎಂದರು. 
*******************

ಸರಿ ಅಲ್ಲಿಂದ ಹೊರಟು ಊರ ರಸ್ತೆ ಸೇರುವಾಗ, ಆಗೆ ಕತ್ತಲು ಅನ್ನುವುದು ತುಂಬಿಕೊಂಡುಬಿಡ್ತು. ಹೇಗೊ ನಿದಾನವಾಗಿ ಬರುತ್ತಿದ್ದೆವು. ಊರ ಸಮೀಪ ಬಂದೆವು ಅನ್ನಿಸುತ್ತೆ, ಊರಹೊರಗಿನ, ಹೊಸಕೆರೆ ಎಂದು ಕರೆಯುವ ಕೆರೆಯ ಏರಿಯ ಮೇಲೆ ಗಾಡಿ ತಲುಪಿತು. ಆಗ ಎದುರಿಗೆ ದೂರದಲ್ಲಿ ರಸ್ತೆಯಲ್ಲಿ ಯಾರೊ ನಡೆದು ಹೋಗುತ್ತಿರುವುದು ಕಾಣಿಸಿತು. ಚಿಕ್ಕಪ್ಪ ಸುಮ್ಮನಿರದೆ
"ಯಾರು ಹೋಗುತ್ತಿರುವುದು" ಎಂದು ಕೂಗಿ ಕೇಳಿದರು. ಮುಂದಿದ್ದ ವ್ಯಕ್ತಿ 
"ನಾನು ವೆಂಕಟೇಶ, ಎನ್ನುತ್ತ ಈಗಿನ್ನು ರೈಲಿಗೆ ಬಂದಿದ್ದಾಗಿ ತಿಳಿಸಿದ" ಸರಿ, ಗೊತ್ತಾಯ್ತು, ಹಳ್ಳಿಯಲ್ಲಿ ನಮ್ಮ ಮನೆ ಮುಂದಿನ ಮನೆಯವರು ಮಂಗಳೂರಿನ, ಫರ್ಟಿಲೈಸರ್ ಕಂಪನಿಯಲ್ಲಿ ಕೆಲಸದಲ್ಲಿದ್ದವನು
"ಹಾಗಿದ್ದರು ನಿಲ್ಲು , ಏಕೆ ನಡೆದು ಹೋಗ್ತೀಯ , ಗಾಡಿಯಲ್ಲಿ ಬರುವೆಯಂತೆ" ಎಂದರು. 
ಮುಂದೆ ರಸ್ತೆಯಲ್ಲಿ ನಡೆಯುತ್ತಿದ್ದ ಅವನು, ನಿಂತು ಹಿಂದೆ ಬಂದ, ಬಹುಷ ಅವನು ಕಪ್ಪು ಶರ್ಟ್ ದರಿಸಿದ್ದ, ಕೈಯಲ್ಲಿ ಕೊಡೆಯೊ ಎಂತದೊ ಇತ್ತು, ಕತ್ತಲಲ್ಲಿ ಅವನ ಅಸ್ವಸ್ಟ ರೂಪ ನಾನು ಕಾಣುತ್ತಿರುವಂತೆ, ನಮ್ಮ ಹೆದರುಪುಕ್ಕ ಎತ್ತುಗಳು ಏನು ಭಾವಿಸಿದವೊ ಏನೊ ತಿಳಿಯಲಿಲ್ಲ, ಬೆದರಿದ ಅವು  ರಸ್ತೆ ಬಿಟ್ಟವು, ಇದಕ್ಕಿದ್ದಂತೆ ಎಡಕ್ಕೆ ತಿರುಗಿ ವೇಗವಾಗಿ ಓಡಿದವು,  ನಮ್ಮ ಪುಣ್ಯವೊ ಏನೊ ಬಲಕ್ಕೆ ತಿರುಗಿದಲ್ಲಿ ತುಂಬಿದ ಕೆರೆಯಿತ್ತು, ಆದರೆ ಎಡಕ್ಕೆ ಏರಿಯ ಕೆಳಗಿನ ಬಾಗ, ಗಾಡಿಯು ಆ ಏರಿಯ ಕಲ್ಲಿನ ಗೋಡೆಯ ಮೇಲೆ ವೇಗವಾಗಿ ಇಳಿಯುತ್ತ, ಉರುಳಿತು, ಚಿಕ್ಕಪ್ಪ ಗಾಬರಿಯಿಂದ ಕೂಗಿದರು
"ಬೇಗ ಕೆಳಗೆ ಹಾರು" ಎಂದು. ನಾನು ಹೇಗೊ ಜಂಪ್ ಹೊಡೆದೆ, ಅವರು ಹೇಗೆ ಇಳಿದರೊ ಗಮನಿಸಲಿಲ್ಲ, 
ನಾನು ಅರೆಬೆಳಕಲ್ಲಿ ಕಾಣುವಾಗ
ಗಾಡಿ ಕೆಳಗೆ ಉರುಳಿಬಿದ್ದಿದ್ದು, ಚಕ್ರವು ಮೇಲ್ಮುಕವಾಗಿದ್ದು, ಬಿದ್ದ ವೇಗಕ್ಕೆ ಚಕ್ರ ವಿಷ್ಣು ಚಕ್ರದಂತೆ ತಿರುಗುತ್ತಿತ್ತು, ಅದಕ್ಕಿಂತ ಘೋರವೆಂದರೆ ಎತ್ತುಗಳು, ಸಿಕ್ಕಿಹಾಕಿಕೊಂಡಿದ್ದು, ಅವುಗಳ ಕುತ್ತಿಗೆಗೆ, ಹಗ್ಗ ನೇಣುಹಾಕಿದಂತೆ ಬಿಗಿದ್ದಿದ್ದವು. ಅವುಗಳು ಉಸಿರಾಡಲು ಕಷ್ಟ ಪಡುತ್ತಿದ್ದವು. ಹತ್ತಿರ ಬಂದ ವೆಂಕಟೇಶ ಕೂಗಿದ
"ಏಕೆ ಏನಾಯ್ತು" ಎಂದು. ಚಿಕ್ಕಪ್ಪ ಅವನು ಸೇರಿ, ಹೇಗೊ ಮಾಡಿ ಎತ್ತುಗಳ ಕುತ್ತಿಗೆಯ ಹಗ್ಗ ಬಿಡಿಸಿದರು, ನಾನು ಸ್ವಲ್ಪ ಸಹಾಯ ಮಾಡಿದೆ. ನಂತರ ಚಿಕ್ಕಪ್ಪ "ವೆಂಕಟೇಶ ಏಕೊ ಎತ್ತು ಹೆದರಿದೆ, ನೀನು ಹೊರಟುಬಿಡು " ಎಂದರು 
ಅವನು ಹೋದ ನಂತರ
ಅವರು , ಅಲ್ಲಿಂದ ಅರ್ದ ಕಿ,ಮಿ, ದೂರದಲ್ಲಿದ್ದ ಪೆರ್ಮನಹಳ್ಳಿ ಎಂಬಲ್ಲಿಗೆ ಹೋಗಿ  ಎಂಟು ಹತ್ತು ಜನರನ್ನು ಕರೆತಂದರು
ಅವರೆಲ್ಲ ಸೇರಿ ಅದೇನೊ ಮಾಡಿ ಗಾಡಿಯನ್ನು ನೇರ ನಿಲ್ಲಿಸಿ ಎಳೆದು ಕೆರೆ ದಡ ದಾಟಿಸಿ, ಮುಂದಿನ ಮಣ್ಣು ರಸ್ತೆಗೆ ಮುಟ್ಟಿಸಿದರು.

 ನಂತರ ಎತ್ತುಗಳನ್ನು ಕಟ್ಟಿ , ನಾವು ಗಾಡಿಯಲ್ಲಿ ಕೂತರೆ ಅವರು ನಾಲ್ಕೈದು ಜನ ನಮ್ಮ ಜೊತೆಗೆ, ನಮ್ಮ ಹಳ್ಳಿಯ ತನಕ ಸುಮಾರು ಒಂದು ಕಿ,ಮಿ. ಬಂದು , ನಾವು ಊರ ಒಳಗೆ ಬಂದಮೇಲೆ ಅವರು ನಮಗೆ ಹೇಳಿ ಹೊರಟರು. ಹಾಗು ಹೀಗು ಮಾಡಿ ದೂರದಲ್ಲಿ ನಮ್ಮ ಮನೆ ಕಾಣಿಸಿದಾಗ ನಮಗೆ ಸಮಾದಾನ. ನಾವು ಮನೆ ತಲುಪವ ವೇಳೆಗಾಗಲೆ ಮುಂದೆ ಹೋಗಿದ್ದ ವೆಂಕಟೇಶನಿಂದ ವಿಷಯವೆಲ್ಲ ತಿಳಿದಿದ್ದ ಮನೆ ಮಂದಿಯೆಲ್ಲ ಗಾಭರಿಯಿಂದ ಜಗಲಿಯಲ್ಲಿ ನಿಂತು ನಮ್ಮನ್ನು ಕಾಯುತ್ತಿದ್ದರು. 
 
 
 
 
 
 ----------------------------------------------------------------------------
ಹಳೆಯ ನೆನಪುಗಳು :
 
 
 
 
 
Rating
No votes yet

Comments