ASK ಅಂದ್ರೆ ಅತ್ತೆ ಸೊಸೆ ಕದನ !!

ASK ಅಂದ್ರೆ ಅತ್ತೆ ಸೊಸೆ ಕದನ !!

 

ಹೌದ್ರಿ ... ASK ಅಂದ್ರೆ ಅತ್ತೆ ಸೊಸೆ ಕದನ ... ಬೇಕಿದ್ರೆ ಯಾರನ್ನೇ ask ಮಾಡಿ :-)

 

ಯಾರನ್ನೇನು ಕೇಳ್ತೀರ ಬಿಡಿ ... ನಾನೇ ಹೇಳಿಬಿಡ್ತೀನಿ ... ಸತ್ಯಮೇವ ಜಯತೆ ಅಮೀರ್’ನ ರೀತಿ ನಾನೂ ಒಂದು ಟೂರ್ ಹೊರಟೆ ... ಅಲ್ಲಿ ಮಾಡಿದ ಡೇಟಾ ಕಲೆಕ್ಷನ್’ಗೆ ನಿಮ್ಮ ಮುಂದೆ.

 

ಮಗ ಮದುವೆಯಾಗಿ ಬೀದಿ ಬಂದ ... ಅಂದ್ರೆ ತನ್ನ ಬೀದೀಗೆ ಬಂದ ... ತಾಯಿ ನೋಡಿದಳು ... ಏನೂ ಹೇಳದೆ, ಅಲ್ಯೂಮಿನಿಯಮ್ ತಟ್ಟೆ ಗೊರೆದುಕೊಂಡು ಮಿಕ್ಕ ಅನ್ನ ಉಂಡು "ಲೇ ಮೂದೇವಿ, ಆ ಚೊಂಬು ನೀರು ತತ್ತಾ" ಅಂದ್ಲು ಸೊಸೆಗೆ. ಮಗನಿಗೆ ರೇಗಿತು "ಯವ್ವಾ, ಏನು ಆ ಪಾಟಿ ಎಗರ್ಲಾಡ್ತಿ? ಅವಳು ನನ್ ಹೆಂಡ್ರು. ಅಂಗೆಲ್ಲ ಎಗರಾಡಿದ್ರೆ ನಾನು ಮನೆ ಬಿಟ್ಟು ಓಯ್ತೀನಿ ನೋಡು" ಕೆಟ್ಟದಾಗಿ ನಕ್ಕು ನುಡಿದಳವಳು "ಲೇ ಬಿಕನಾಸಿ. ನಿನ್ದ್ಯಾವುದ್ಲಾ ಮನೆ? ಓಯ್ತಾನಂತೆ ಓಯ್ತಾನೆ. ಒಪ್ಪತ್ತು ಊಟ ಹುಟ್ಸೋ ಮಕವಾ ಇದು. ತಿರುಬೋಕಿ ತಿರುಕ್ಕೊಂಡು ಗೂಳಿ ಇದ್ದಂಗೆ ಇದ್ಯ ಅಷ್ಟೇಯಾ .. ಕೆಲ್ಸ ಬರಾಕಿಲ್ಲ, ಭಿಕ್ಷೆ ಕೇಳಾಕಿಲ್ಲ ... ನಿಂದೂ ಒಂದು ಜಲ್ಮಾನಾ? ಸಾಲದ್ದಿಕ್ಕೆ ಯಾವೋಳ್ನೋ ಕಟ್ಕೊಂಡ್ ಬಂದವ್ನೆ. ಎಲ್ಲ ಸಿಕ್ಕಿದ್ಲು ಈ ಮೂದೇವಿ" 

 

ಸೊಸೆ ಎಗರಾಡಿದ್ಲು "ಲೇ! ಏನ್ಲಾ ನೋಡ್ತಿದ್ಯಾ? ಯಾಕೆ ನಿಮ್ಮವ್ವ ಇಂಗಾಡ್ತವ್ಳೇ? ಒಸಿ ಅವ್ಳಿಗೆ ಹೇಳು ನಾನ್ಯಾರಂತ?" ಮಗ "ನೋಡವ್ವ, ಮತ್ತೆ ಯೋಳ್ತೀವ್ನಿ. ಹಂಗೆಲ್ಲ ಅನ್ನಬ್ಯಾಡ. ಇವ್ಳಪ್ಪ ದೋಡ್ ಮನ್ಷ. ಯಾವ್ದೋ ಪಿಲಂ ಮಾಡಿ ಬೀದಿಗೆ ಬಂದವ್ನೆ ಅಷ್ಟೇಯಾ. ಇವ್ಳು ಇದಾನ್ ಸೌಧ ಹತ್ತಿರ ಬ್ಯಾಡೋದು. ಎಷ್ಟೋ ಕಿತ ಬಿಳೀ ಬಟ್ಟೇಯವ್ರ ಜೊತ್ಗೇ ಬೇಡವ್ಳೇ, ತಿಳ್ಕಾ ..." ಅವ್ವ ಮೂದಲಿಸಿದಳು "ಅದ್ಕೇ ಕಣ್ಲಾ ನಿನಗೆ ಮೂದೇವಿ ಅನ್ನಾದು. ಎಷ್ಟ್ಲಾ ಕೊಟ್ಟ ಆ ವಯ್ಯ ಈ ಮೂದೇವೀನ್ನ ಕಟ್ಕೊಳ್ಳೋಕ್ಕೆ?"

 

ಇದು ಭಿಕ್ಷುಕರ ಒಂದು ಪರ್-ಪಂಚ ಇರಬಹುದು ಆದ್ರೆ ಅತ್ತೆ-ಸೊಸೆ ಕದನ ಮಾತ್ರ ಅದೇ !! ಮುಂದೆ ಹೋದೆ ....

 

ಬೆಂಗಳೂರು ಮಹಾನಗರದಲ್ಲೂ ಕೆಲವೆಡೆ ಹಳ್ಳಿ ವಾತಾವರಣ ಇದೆ ... ಅಂದ್ರೆ ಗದ್ದೆ-ಹೊಲ ಇತ್ಯಾದಿ ಅಲ್ಲದಿದ್ದ್ರೂ, ಆ ರೀತಿಯ ಜನ ಇದ್ದಾರೆ.

 

"ಲೇ ! ಚೆಲ್ವಿ ... ನೀ ಸೊಂಟದ್ ಮ್ಯಾಲೆ ಆ ಹಸಿರೂ ಬಿಂದಿಗೇ ಹೊತ್ಕೊಂಡು ಟಿಂಗೂ ಟಿಂಗೂ ಅಂತ ಬತ್ತಾ ಇದ್ರೆ, ನನ್ನೆದೆ ಡವ್ವಾ ಡವ್ವಾ ಅಂತ ಹೊಡ್ಕೊಳ್ತದೆ ಕಣೇ" ಅಂದ ಕೆಂಚ ... ಬೀದೀ ನಲ್ಲಿ ತಾವ ಆಚೆ ಮನೆ ಸುಬ್ಬಿ ಜೊತೆ ಜಗಳ ಕಾದುಕೊಂಡು ನೀರು ತಂದಾಗ ಕೆಂಚ ಆಡಿದ ಮಾತಿದು. ಕೆಂಚಿಯ ಮನದಾಗಿನ  ಸಿಟ್ಟು-ದುಗುಡವೆಲ್ಲ ಕರಗಿ "ಏ! ಛೀ!! ಹೋಗು ... ನಂಗೆ ನಾಚ್ಗೆ ಆಯ್ತದೆ" ಅಂತ ನುಲಿದಳು. ಅಷ್ಟರಲ್ಲೇ "ಸುರುವಾಯ್ತಾ ನಿಮ್ಮಗಳ ಪಿರೂತಿ ... ಲೇ ಕೆಂಚ .. ನನ್ನ ಮಗನೇ .. ಥೂ ! ಆಹಹಹಾ ನೋಡವನ್ನಾ .. ಬಾಯಿ ಬಿಟ್ಕಂಡ್ ಅವಳ್ನೇ ನೊಡ್ತಿರಾದು ... ಅವ್ಳೇನಾ ಒಸಿ ಥೆಳ್ಳಗೆ ಬೆಳ್ಳಗೆ ವೈನಾಗಿದ್ದಿದ್ದಿದ್ರೆ ಇನ್ನೇನು ಕಥೆನೋ ... ಕಪ್ಪಿಟ್ಟಿರೋ ಪಾತ್ರೆ ಮುಖದ್ ತಾವ ತಂದ್ರೆ ಪಾತ್ರೆ ಯಾವ್ದೋ ಮಕ ಯಾವ್ದೋ ಗೊತ್ತಗಕ್ಕಿಲ್ಲ" ಅಂತ ಸಿಡಿ ಸಿಡಿ ಮಾಡ್ತಾ ಪಾತ್ರೆ ಕುಕ್ಕಿದಳು ಸಿದ್ದವ್ವ. ಸಿಡಿದಳಾ ಕೆಂಚಿ "ಅದೇನ್ ಅಂಗೆ ನನ್ ಮಕ ನೋಡ್ತೀಯಾ. ಆ ನಿಮ್ಮವ್ವಾ ನನ್ ಗುಣಗಾನ ಮಾಡ್ತಾ ಇದ್ರೆ ಕೇಳ್ಕೊಂಡ್ ಕುಂತಿದ್ದೀಯಲ್ಲ ಗೂಬೆ ಥರ? ಆ ಪಾತ್ರೆ ನನ್ ಮನೆಯಾಗಿಂದ ತಂದಿದ್ದು, ಕುಕ್ಕ ಬ್ಯಾಡ ಅನ್ನು ಅವ್ಳ್ಗೆ" 

 

ಸಿದ್ದವ್ವ ಬಿಟ್ಟಾಳ್ಯೇ? "ಆಹಹಹಾ! ತಂದ್ಬಿಟವ್ಳೆ ತಂದ್ಬಿಟವ್ಳೆ ... ಸುಮ್ಕೆ ತಂದ್ಯಾ? ಕೊಟ್ಟಿಲ್ವಾ ನನ್ ಮಗನ್ನ?" ... "ಹೌದು ಹೌದು ... ನನ್ ಕರಿ ಮುಷಡಿ ಮಗನ್ನ ಕಟ್ಕೊಲ್ಲೋಕ್ಕೆ ನಮ್ಮಪ್ಪ ಕಟ್ ಕೊಟ್ಟಿಲ್ವಾ ಪೆಟ್ಗೆ ಅಂಗ್ಡಿಯಾ? ಈ ನಿನ್ ಮಗನಿಗೆ ಬಾಯಿ ಬಿಟ್ರೆ ನಾಲ್ಕ್ ಹಲ್ಲೇ ಇಲ್ಲ. ಇಂಥಾ ಸುಂದ್ರಂಗೆ ನನ್ಕಿಂತಾ ಸುಂದರಿ ಬೇಕಿತ್ತೇನೋ. ನನ್ ಬಗ್ಗೆ ಯೋಳ್ತೀಯಲ್ಲ ನಿನ್ ಮಕ ನೋಡ್ಕಂಡಿದ್ಯಾ? ಈ ಮಕ ನೋಡೇ ಅವತ್ತು ಹೋದೋನು ಇನ್ನೂ ಬಂದಿಲ್ಲ ನಂ ಮಾವ" ... 

 

ಎಲ್ಲರ ಬಣ್ಣ ಎಲ್ಲರಿಗೂ ತಿಳಿದ್ ಮ್ಯಾಕೆ ಎಲ್ಲೆಡೆ ಶಾಂತ. "ಲೇ ಕೆಂಚಿ" ಅಂದ ಕೆಂಚನ ತಲೆ ಮೇಲೆ ಬಿಂದಿಗೆ ನೀರು ಸುರಿದಿತ್ತು !

 

ನನ್ನ ಮುಂದಿನ ಹೆಜ್ಜೆ ಅತ್ಯದ್ಭುತವಾದ ’ಮಧ್ಯಮ ವರ್ಗ’ದವರತ್ತ ... ಬಡತನ ಒಪ್ಪಿಕೊಳ್ಳದ ಸಿರಿವಂತಿಗೆಯ ಕನಸಿನಲ್ಲೇ ವಿಹರಿಸುತ್ತ ಸಾಗೋ ಮಧ್ಯಮ ವರ್ಗ ...

 

ಮಾಧವ ನುಡಿದ "ಲೇ ರಮ್ಯ! ಉಪ್ಪಿಟ್ಟು ಬೊಂಬಾಟಾಗಿದೆ. ಇನ್ನೂ ಸ್ವಲ್ಪ ಹಾಕು" ... ಅಲ್ಲೇ ತುಳಸೀ ಕಟ್ಟೇ ಸುತ್ತುತ್ತ ಅವನಮ್ಮ "ಅಲ್ಲಾ! ನಾನು ಸೊಂಟ ಮುರ್ಕೊಂಡ್ ಇಷ್ಟು ವರ್ಷ ಮಾಡಿ ಹಾಕ್ದೆ. ಒಂದು ದಿನಕ್ಕೂ ಒಂದು ಒಳ್ಳೇ ಮಾತನಾಡದೆ, ಈಗ ಈ ಸುಪನಾತಿ ಮಾಡಿರೋ ಉಪ್ಪು ಖಾರ ಇಲ್ಲದ್ ಈ ಡಯಟ್ ಉಪ್ಪಿಟ್ಟನ್ನ ಮೆಚ್ಚಿಕೊಂಡು ತಿಂದದ್ದೇ ತಿಂದಿದ್ದು. ರಾಮ ರಾಮ" ... ರಮ್ಯ ಖಾರವಿಲ್ಲದ ಉಪ್ಪಿಟ್ಟು ಮೆಂದು ಖಾರವಾಗೇ ನುಡಿದಳು "ತುಳಸೀ ಕಟ್ಟೆ ಸುತ್ತಿಕೊಂಡು ಇದಾ ಮಾತಾಡೋದು ನಿಮ್ಮಮ್ಮ. ರಾಮಾ-ಕೃಷ್ಣಾ ಅಂತ ಇರೋದು ಬಿಟ್ಟು ಅದ್ಯಾಕೆ ಹಂಗೆ ವಟಾ-ವಟಾ ಅಂತಾರೆ?" ... "ಹೋಗ್ಲಿ ಬಿಡು ಡಿಯರ್, ನೀನ್ಯಾಕೆ ತಲೆ ಕೆಡಿಸಿಕೊಳ್ತೀಯಾ?"... ಅತ್ತೆ ತಮ್ಮ ಯಜಮಾನರ ಕಡೆ ತಿರುಗಿ ನುಡಿದಳು "ನನ್ ಮಗ ಡಬಲ್ ಡಿಗ್ರಿ ಗ್ರಾಜುಯೇಟು ... ಎಷ್ಟೋ ಹುಡುಗೀರು ಸಾಲಾಗಿ ನಿಂತಿದ್ರು ಕಟ್ಟಿಕೊಳ್ಳೋಕ್ಕೆ. ಬಸ್ ಸ್ಟಾಪಿನಲ್ಲಿ ಕಂಡ ಬ್ಯೂಟಿ ಕ್ವೀನು ಇವನಿಗೆ ಇಷ್ಟವಾಯ್ತು. ಬ್ಯಾಡ ಅಂತ ಬಡ್ಕೊಂಡೆ ... ಲವ್ವು ಗಿವ್ವು ಅಂದೋನಿಗೆ ನಿಮ್ ಸಪೋರ್ಟ್ ಬೇರೆ. ಕಾರು ಹಾಳಾಗಿ ಹೋಗ್ಲಿ ಒಂದು ಸ್ಕೂಟರ್ ಗತಿ ಇಲ್ಲ ಅತ್ತೆ ಮನೆಯಿಂದ" 

 

ರಮ್ಯಳ ನೇರವಾದ ಹೊಡೆತ ಈಗ "ಕಾರು ಓಡಿಸೋ ಮುಖವಾ ನಿಮ್ಮ ಮಗನದು? ಒಬ್ನೇ ಮಗ ಅಂತ ಕಾಲೇಜಿನಲ್ಲಿದ್ದಾಗ್ಲೂ ಡಬ್ಬಿ ತೊಗೊಂಡ್ ಹೋಗಿ ಕೊಡೋ ಜನರನ್ನ ನಾನೆಂದಿಗೂ ಕಾಣೆ. ಕಾಲೇಜು ಬಿಟ್ಟ ಕೂಡ್ಲೇ ಮನೆಗೆ ಬಂದು ಕುಡುಮಿಕೊಂಡು ಕೂತ್ಕೊಳ್ಳೋವ್ರಿಗೆ ಎರಡೇನು ನಾಲ್ಕು ಡಿಗ್ರೀನೂ ಸಿಗುತ್ತೆ. ಬರೀ ಪುಸ್ತಕದ ಬದನೇಕಾಯಿ. ಹೊರಗಿನ ಪ್ರಪಂಚದ ಅರಿವೇ ಇಲ್ಲದ್ ಪ್ರಾಣಿ. ಸ್ಕೂಟರ್’ನಲ್ಲಿ ಹೋದ್ರೆ ಎಲ್ಲಿ ಮುಖ ಕಪ್ಪಿಟ್ಟು ಹೋಗುತ್ತೋ ಅಂತ ಬಸ್ಸಲ್ಲಿ ಓಡಾಡ್ತಿದ್ ಪ್ರಾಣಿಗೆ ನಾನು ಕಣ್ಣಿಗ್ ಬಿದ್ದೆ. ಹೋಟ್ಲಿಗೆ ಹೋದ್ರೆ ಅಲ್ಲೊಂದು ಸೀನ್. ಪೆಪ್ಸಿ ಕುಡಿದ್ರೆ ಶೀತ ಆಗುತ್ತೆ ಅಂತ ಬಿಸಿ ಹಾರ್ಲಿಕ್ಸ್ ಕುಡೀತಿದ್ ಭೂಪ ನಿಮ್ ಮಗ. ನನ್ ಕರ್ಮ" 

 

ಇನ್ನೂ ಎಲ್ಲೆಲ್ಲೀಗೆ ಹೋಗಿತ್ತೋ ಈ ಮಾತುಗಳ ಸಮರ. ನಾನು ಸೈಲೆಂಟಾಗಿ ಇಂದಿರಾನಗರದ ಸಿರಿವಂತರ ಮನೆಗೆ ಹೊರಟಿದ್ದೆ!

 

"Son, this is not good. I have a feeling Rashmi is not suitable to this family." "Why mamma? wnat happened? She is a PhD like me. She is good looking and .. . "ಇಲ್ಲ ದೀಪಕ್, ನಿಂಗೆ ಅರ್ಥ ಆಗಲ್ಲ. ಲಾಸ್ಟ್ ವೀಕ್ ನನ್ ಕ್ಲಬ್ ಫ್ರೆಂಡ್ಸ್ ಮನೆಗೆ ಬಂದಾಗ, ಇವಳು ಸೀರೆ ಉಟ್ಕೊಂಡ್, ಎಲ್ಲರಿಗೂ ಜ್ಯೂಸ್ ತಂದುಕೊಟ್ಲು. I was so embarassed. she looked like a maid to me. nonsense". ದೀಪಕ್ ಸೀದ ಎದ್ದು ರೂಮಿಗೆ ಹೋದ. ಅಲ್ಲಿ ರಶ್ಮಿ ಕೇಳಿದಳು "ಆಯ್ತಾ ನಿಮ್ಮಮ್ಮನ ಕಂಪ್ಲೈಂಟು. ನಾನು ಸೀರೆ ಉಟ್ಟರೆ ಇವರಿಗೆ ಹಿಂಸೇನಾ? ನಮ್ಮ ಮನೆ ಪೂಜೆಗೆ ನಿಮ್ಮಮ್ಮ ಯಾವ ಡ್ರಸ್’ನಲ್ಲಿ ಬಂದಿದ್ರು ದೀಪಕ್? ಜೀನ್ಸ್ ಪ್ಯಾಂಟು, ಸ್ಲೀವ್ಲೆಸ್ಸ್ ಟಾಪ್. ದೊಡ್ಡವರಾಗಿ ಹೀಗಾ ಬರೋದು ಪೂಜೆಗೆ? ಎಲ್ಲಿ ಹ್ಯಾಗೆ ಬರಬೇಕು ಅಂತ ಅವರಿಗೆ ನಾನು ಹೇಳಿಕೊಡಬೇಕಾ? ಅಣ್ಣನ ಮದುವೆಗೆ ಬಂದಿದ್ದೋರು ಹೋಟಲ್’ನಲ್ಲಿ ರೂಮ್ ಮಾಡಿಕೊಂಡು ಇದ್ರು. ಗಿಫ್ಟ್ ಕೊಟ್ಟು ಊಟಕ್ಕೆ ಹೋಟಲ್’ಗೆ ಹೋದ್ರು. ನಮ್ಮ ಅಪ್ಪ-ಅಮ್ಮನ ಜೊತೆ ಮಾತೇ ಇಲ್ಲ. ನನಗೆ ಈ ಮನೆಯಲ್ಲಿ ಇರೋದಕ್ಕೆ ಆಗಲ್ಲ. you make a decision.". ಒಂದೇ ಸೂರಿನಡಿ ಇದ್ದೂ ನೆಮ್ಮದಿ ಇಲ್ಲದೆ ನೆಡೆಸೋ ಜೀವನಕ್ಕೆ ಒಂದು ಉದಾಹರಣೆ ...

 

ಸಿರಿವಂತರ ಮನೆಯ ಶೀತಲ ಯುದ್ದದ ಒಂದು ಇಣುಕು ನೋಟವಿದು.

 

ಇನ್ನೂ ಒಂದು ಮಜಲು ಮೇಲೆ ಹೋದರೆ ಹೇಗೆ ಇರುತ್ತೆ? ಅಂತ ಅನ್ನಿಸಿತು ... ಆದರೆ ಮನಸ್ಸಾಗಲಿಲ್ಲ ... ಅದೇ ಸೀರೆಯೋ, ಸ್ಕರ್ಟೋ ವರ್ಷದಲ್ಲಿ ಎರಡನೇ ಬಾರಿ ಹಾಕಿದಳು ಸೊಸೆ ಅಂತ ಅತ್ತೆಗೆ ಸಿಟ್ಟೋ? ಸೊಸೆಯ ಕಂಪನಿಯ ಶೇರ್’ಗಳನ್ನು ಕೊಳ್ಳುವ ಇರಾದೆ ಇರುವ ಅತ್ತೆಯೋ? ಆ ಲೆವಲ್’ನ ಡೀಲಿಂಗ್ಸ್ ನನಗೆ ಅರ್ಥಾವಾಗೋಲ್ಲ ... ನಿಮಗೆ?

 

 

Comments