ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ಪ್ರೇಮ-ಕಾಮ ವಾಂಛೆಗಳು
ಇಲ್ಲಿ ಲಿಬಿಯಾದಲ್ಲಿ ಈಗಷ್ಟೆ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. ನಾವು ಹೀಟರ್ ಗಳನ್ನು ಎತ್ತಿಟ್ಟು ಏಸಿ (ಏರ್ ಕಂಡಿಷ್ನರ್) ಗಳನ್ನು ಹಾಕಿಕೊಂಡು ಕುಳಿತಿದ್ದೇವೆ. ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಎನ್ನುವಂತೆ ಇಲ್ಲಿ ಯುದ್ಧ ನಿಂತರೂ ಗುಂಡಿನ ಮೊರೆತ ಮಾತ್ರ ಇನ್ನೂ ನಿಂತೇ ಇಲ್ಲ. ಇನ್ನೂ ಆಗಾಗ ಅಲ್ಲಲ್ಲಿ ಸಣ್ಣ ಪುಟ್ಟ ಗಲಭೆಗಳು, ಗುಂಪು ಘರ್ಷಣೆಗಳು ಸಂಭವಿಸುತ್ತಲೇ ಇವೆ. ಮೊನ್ನೆಯಷ್ಟೆ ಘಾಟ್ನಲ್ಲಿರುವ ಗಡಾಫಿಯ ಮಾಜಿ ಅಂಗರಕ್ಷಕಿಯನ್ನು ಬಂಧಿಸಲು ಬಂದ ‘ಜಿಂತಾನ್’ ಮಿಲ್ಟ್ರಿ ಪಡೆಗಳು ಹಾಗೂ ಘಾಟ್ನ ಜನರ ನಡುವೆ ಗುಂಡಿನ ಚಕಮಕಿ ನಡೆದು ದೊಡ್ಡ ಗಲಾಟೆಯೇ ನಡೆದುಹೋಯಿತು. ಸಧ್ಯ, ಗಲಾಟೆಯಲ್ಲಿ ಯಾರಿಗೂ ಏನೂ ಆಗಲಿಲ್ಲ! ಈ ಘಟನೆಯ ನೆನಪು ಇನ್ನೂ ಹಸಿಹಸಿಯಾಗಿರುವಾಗಲೇ ಇನ್ನೊಂದು ಕೆಟ್ಟ ಸುದ್ಧಿ ಬಂದಿದೆ. ಇಲ್ಲಿಂದ ಆರನೂರು ಕಿಲೋಮೀಟರಿನಷ್ಟು ದೂರವಿರುವ ಸೆಭಾದಲ್ಲಿ ಎರಡು ಬೇರೆ ಬೇರೆ ಬುಡಕಟ್ಟು ಜನಾಂಗಗಳ ನಡುವೆ ತೀವ್ರ ಘರ್ಷಣೆ ನಡೆದು ಆ ಘಟನೆಯಲ್ಲಿ ಸುಮಾರು ಇನ್ನೂರು ಜನ ಸತ್ತು ಅನೇಕರು ಗಾಯಗೊಂಡಿದ್ದಾರೆ. ಈಗ ಅಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆಯಾದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.
ಈ ಎಲ್ಲದರ ಮಧ್ಯ ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಋತುಮಾನ ಬದಲಾವಣೆಗನುಗುಣವಾಗಿ ಒಂದೆರೆಡು ಬಿರುಗಾಳಿಗಳು ಬಂದುಹೋಗಿವೆ. ಈ ಸಾರಿ ಅವು ಹೇಳಿಕೊಳ್ಳುವಷ್ಟು ದೊಡ್ಡವಾಗಿರದಿದ್ದರೂ ಎಂದಿನಂತೆ ಸಹರಾದ ಉಸುಕಿನ ಕಣಗಳನ್ನೆಲ್ಲಾ ಬಾಚಿಕೊಂಡು ಬಂದು ಮನೆಯೊಳಗೆ ತಂದುಹಾಕಿದವು. ನಾವು ಈ ಬಿರುಗಾಳಿಯನ್ನು ಶಪಿಸುತ್ತಾ ಹಾಗೂ ನಾವಿರುವ ಪರಿಸ್ಥಿತಿಗೆ ನಾವೇ ಮರುಕಪಡುತ್ತಾ ಮೂಗು ಮುಚ್ಚಿಕೊಂಡು ಅವನ್ನೆಲ್ಲಾ ಎತ್ತಿ ಆಚೆ ಹಾಕಿದೆವು. ಚಳಿಗಾಲ ಮುಗಿದು ಬೇಸಿಗೆಕಾಲ ಕಾಲಿಡುವ ಸಂಕ್ರಮಣ ಕಾಲಘಟ್ಟದಲ್ಲಿಯೇ ಈ ಬಿರುಗಾಳಿಗಳು ಅದೆಲ್ಲಿರುತ್ತವೋ ಒಮ್ಮಿಂದೊಮ್ಮೆಲೆ ಧುತ್ತೆಂದು ಇಳಿದು ನಮ್ಮ ಪ್ರಾಣ ತೆಗೆಯುತ್ತವೆ. ಅವು ಒಮ್ಮೊಮ್ಮೆ ಎಷ್ಟೊಂದು ಭಯಂಕರವಾಗಿರುತ್ತವೆಂದರೆ ನಮ್ಮ ಪಕ್ಕದಲ್ಲಿಯೇ ಇರುವ ವ್ಯಕ್ತಿಯನ್ನು ನಮಗೆ ಕಾಣದಷ್ಟು ಧೂಳಿನ ಕಣಗಳಿಂದ ಮುಚ್ಚಿಹಾಕಿಬಿಡುತ್ತವೆ. ಜೊತೆಗೆ ನಮ್ಮ ಮೂಗಿನೊಳಕ್ಕೆ ಹೊಕ್ಕು ಉಸಿರಾಟಕ್ಕೂ ತೊಂದರೆಯುನ್ನುಂಟು ಮಾಡುತ್ತವೆ. ಆಗೆಲ್ಲಾ ನಾವು ಬೇಗಬೇಗನೆ ಮನೆಯೊಳಕ್ಕೆ ಸೇರಿಕೊಂಡು ಫ್ಯಾನು ಹಾಕಿಕೊಂಡು ಕುಳಿತುಬಿಡುತ್ತೇವ.
ಈ ಬೇಸಿಗೆ ಯಾಕಾದರೂ ಬರುತ್ತದೋ? ಬರೀ ಬಿರುಗಾಳಿಗಳನ್ನೇ ಹೊತ್ತುತರುತ್ತದೆ! ಜೊತೆಗೆ ಉರಿ ಉರಿವ ಬಿಸಿಲು ಬೇರೆ! ಬೇಸಿಗೆಯನ್ನು ಜಗತ್ತಿನ ಯಾವ ಜನ ತಾನೇ ಇಷ್ಟಪಟ್ಟಾರು ಇಂಗ್ಲೆಂಡಿನವರನ್ನು ಹೊರತುಪಡಿಸಿ? ಅವರಿಗೋ ವರ್ಷಪೂರ್ತಿ ಚಳಿ! ಸುರಿವ ಹಿಮದ ನಡುವೆ ದಪ್ಪದಪ್ಪನೆಯ ಉಣ್ಣೆ ಸ್ವೆಟರ್ ಗಳನ್ನು ಹಾಕಿಕೊಂಡು, ತಲೆಗೆ ತರಾವರಿ ಟೋಪಿ ಧರಿಸಿ ಚಳಿಗೆ ನಡುಗುತ್ತಾ ಓಡಾಡುವದೆಂದರೆ ಅವರಿಗೆ ಎಲ್ಲಿಲ್ಲದ ಕಿರಿಕಿರಿ! ಜೊತೆಗೆ ಪ್ರಕೃತಿಯೆಲ್ಲಾ ಹಿಮದಿಂದ ಮುಚ್ಚಿಹೋಗಿ ಇಡಿ ವಾತಾವರಣ ಒಂಥರಾ ಖಿನ್ನತೆಗೊಳಗಾದದಂತೆ ಕಾಣುತ್ತಿರುತ್ತದೆ. ಹೀಗಾಗಿ ಅವರು ಬೇಸಿಗೆ ಬರುವದನ್ನೇ ಕಾಯುತ್ತಿರಿತ್ತಾರೆ. ಅದಕ್ಕಾಗಿ ಹಂಬಲಿಸುತ್ತಿರುತ್ತಾರೆ! ಬೇಸಿಗೆಯ ಬಿಸಿಲಿಗೆ ಹೆಪ್ಪುಗಟ್ಟಿದ ಹಿಮವೆಲ್ಲಾ ಕರಗಿಹೋಗಿ ಗಿಡಮರಗಳೆಲ್ಲಾ ಹಚ್ಚಹಸಿರಾಗಿ ಕಾಣಿಸುತ್ತವೆ. ಸತ್ತ ಪ್ರಕೃತಿಗೆ ಜೀವ ಮರಳಿಬರುತ್ತದೆ. ಇಡಿ ವಾತಾವರಣ ಆಹ್ಲಾದಕರತೆಯಿಂದ ಕಂಗೊಳಿಸತೊಡಗುತ್ತದೆ. ಈ ಸಮಯದಲ್ಲಿ ಜನ ಹುಚ್ಚೆದ್ದು ಕುಣಿಯುತ್ತಾರೆ. ಎಲ್ಲೆಡೆ ಹಾಡು, ಕುಣಿತ, ಕೇಕೆ, ಸಂತೋಷಗಳು ತುಂಬಿತುಳುಕುತ್ತವೆ. ನೋಡಲು ಎಲ್ಲವೂ ಆಪ್ಯಾಯಮಾನ. ಬಹುಶಃ, ಈ ಬೇಸಿಗೆಯೊಂದನ್ನು ಬಿಟ್ಟರೆ ಅಲ್ಲಿ ಬೇರೇನೂ ನೋಡಲು ಸುಂದರವಾಗಿ ಕಾಣುವದಿಲ್ಲ ಅಂತ ಕಾಣುತ್ತದೆ. ಅದಕ್ಕೇ ಇರಬೇಕು ಶೆಕ್ಷಪೀಯರ್ ತನ್ನ ಸ್ಪುರದ್ರೂಪಿ ಗೆಳೆಯ ಸೌಥ್ಆಂಪ್ಟನ್ನ್ನು ಬೇಸಿಗೆಯ ಒಂದು ದಿನಕ್ಕೆ ಹೋಲಿಸಿದ್ದು. ಬಹುಶಃ, ಅವನಿಗೆ ಇದಕ್ಕಿಂತ ಸುಂದರವಾದ ಬೇರೆ ಉಪಮೆಗಳು ಸಿಗಲಿಲ್ಲವೇನೋ! ಇಂಗ್ಲೆಂಡಿನವರೂ ಸೇರಿದಂತೆ ಜಗತ್ತಿನ ಕೆಲವೇ ಕೆಲವು ಜನ ಬೇಸಿಗೆಯನ್ನು ಇಷ್ಟಪಡುತ್ತಾರೆ. ಅದಕ್ಕಾಗಿ ಹಾತೊರೆಯುತ್ತಾರೆ. ಇನ್ನುಳಿದವರೆಲ್ಲಾ ಬೇಸಿಗೆಯನ್ನು ಶಪಿಸುವವರೇ! ಭಾರತೀಯರಿಗೂ ಬೇಸಿಗೆಯೆಂದರೆ ಅಷ್ಟಕ್ಕಷ್ಟೆ! ಒಂಥರಾ ಅಲರ್ಜಿ! ಉರಿಉರಿವ ಬಿಸಿಲು, ಕಿರಿಕಿರಿ ಎನಿಸುವ ಸೆಖೆ, ಗಾಳಿಯನ್ನೇ ಬೀಸದ ಮರಗಿಡಗಳು ಯಾರಿಗೆ ತಾನೆ ಇಷ್ಟವಾದೀತು? ಹೀಗಾಗಿ ನಮ್ಮಲ್ಲಿ ಕವಿಗಳು ಬೇಸಿಗೆಯ ಆರಂಭದ ಕಾಲವನ್ನು ಮಾತ್ರ ಸುಂದರ ಕಾವ್ಯವಾಗಿ ಚಿತ್ರಿಸಿದ್ದಾರೆ. ಆಮೇಲಿನಿದನ್ನು ಯಾರೂ ಬರೆಯುವ ಗೋಜಿಗೆ ಹೋಗಿಲ್ಲ. ಒಂದುವೇಳೆ ಬರೆದರೂ ಅದು ಬೆವರಿನ ಕಾಲ, ಸೊಳ್ಳೆಗಳ ಕಾಲ, ಕರೆಂಟು ಹೋಗುವ ಕಾಲ ಎಂದು ಬರೆಯಲ್ಪಡುತ್ತದೇನೋ!
ಅದೆಲ್ಲಾ ಇರಲಿ. ಈ ಮರುಭೂಮಿಗೆ ಇರುವದು ಎರಡೇ ಎರಡು ಕಾಲ. ಒಂದು ಚಳಿಗಾಲ. ಮತ್ತೊಂದು ಬೇಸಿಗೆ. ಎರಡೂ ಎಕ್ಸ್ಟ್ರೀಮ್! ಇನ್ನು ಮರಭೂಮಿಯಲ್ಲಿ ಮಳೆಯ ಮಾತೆಲ್ಲಿ? ಅಂದಹಾಗೆ ಇಲ್ಲಿಯ ಜನ ಚಳಿಗಾಲ ಮತ್ತು ಬೇಸಿಗೆಕಾಲಗಳೆರೆಡನ್ನೂ ಸರಿ ಸಮನಾಗಿ ಸ್ವೀಕರಿಸುತ್ತಾರೆ. ನಮ್ಮಂತೆ ಚಳಿಗಾಲ ಬಂದಾಗ ಎಷ್ಟು ಚಳಿಯೆಂದು ಗೊಣಗುವದಾಗಲಿ, ಬೇಸಿಗೆ ಬಂದಾಗ ಅಯ್ಯೋ ಯಾಕಾದರು ಬಂತೋ ಈ ಕೆಟ್ಟಬಿಸಿಲು ಎಂದು ಶಪಿಸುವದಾಗಲಿ ಯಾವತ್ತೂ ಮಾಡುವದಿಲ್ಲ. ಯಾವುದಕ್ಕೂ ಹೆದರದೆ ಬಂದದ್ದನ್ನು ಬಂದಂತೆ ಸ್ವೀಕರಿಸುವ ಮನೋಭಾವನೆಯನ್ನು ಈ ಸಹರಾ ಮರಭೂಮಿ ಅವರಿಗೆ ಕಲಿಸಿಕೊಟ್ಟಿದೆ. ಚಳಿಗಾಲದಲ್ಲಿ ಬಿಸಿಬಿಸಿ ಗ್ರೀನ್ ಟೀ ಕುಡಿಯುತ್ತಾ, ಹುಕ್ಕಾಗಳನ್ನು ಸೇದುತ್ತಾ, ಅಲ್ಲಲ್ಲಿ ಬೆಂಕಿಕಾಯಿಸುತ್ತಾ, ಇಲ್ಲವೇ ಚೆಸ್ ಅಥವಾ ಸ್ನೂಕರ್ ಆಡುತ್ತಾ ಜಗತ್ತಿನ ಪರಿವೇ ಇಲ್ಲದಂತೆ ತಮ್ಮ ಪಾಡಿಗೆ ತಾವು ಸುಖಿಸುತ್ತಾರೆ. ಹಾಗೇಯೇ ಬೇಸಿಗೆಯಲ್ಲಿ ತಂಪುಪಾನೀಯಗಳನ್ನು ಹೀರುತ್ತಾ ಪಾರ್ಕುಗಳಲ್ಲೋ ಇಲ್ಲವೇ ಸಾರ್ವಜನಿಕ ಸ್ಥಳಗಳಲ್ಲೋ ಸರಿರಾತ್ರಿಯವರೆಗೂ ಕುಳಿತು ಹರಟೆಹೊಡೆಯುತ್ತಾರೆ. ಆದರೆ ನಮಗೆ ಇಲ್ಲಿನ ಸುಡುಸುಡು ಬಿಸಿಲಿಗಿಂತ ಗಡಗಡ ನಡುಗುವ ಚಳಿಯೇ ಚೆಂದ. ಜೊತೆಗೆ ಸಂಸಾರ ಒಟ್ಟಿಗೆ ಇದ್ದರಂತೂ ಮುಗಿದೇಹೋಯಿತು! ಪ್ರತಿವರ್ಷವೂ ಒಂದೊಂದು ಮಗು ಒಂದರ ಹಿಂದೊಂದರಂತೆ ಪುಂಖಾನುಪುಂಖವಾಗಿ ಹೊರಬರುತ್ತವೆ. ಹಾಗಂತ ನಾವು ನಾವೇ ಆಗಾಗ ತಮಾಷೆ ಮಾಡಿಕೊಳ್ಳುತ್ತಿರುತ್ತೇವೆ. ಒಮ್ಮೆ ನಮ್ಮ ಕಾಲೇಜಿನ ‘ಸುಡಾನಿ’ ಸಹದ್ಯೋಗಿಯೊಬ್ಬ ಈ ಚಳಿಗಾಲ ಮುಗಿದು ಮುಂದಿನ ಚಳಿಗಾಲ ಬರುವಷ್ಟೊತ್ತಿಗೆ ಏಕಕಾಲಕ್ಕೆ ಮೂರನ್ನು (Triplet) ಹಡೆದು ಅವನ್ನು ಸಂಬಾಳಿಸಲಾಗದೆ ಗೋಳಾಡುತ್ತಿದ್ದರೆ ನಾವೆಲ್ಲಾ ಬಿದ್ದುಬಿದ್ದು ನಗುತ್ತಿದ್ದೆವು. ಅವನೊಬ್ಬನೇ ಏನು? ಇಲ್ಲಿರುವ ಇತರೆ ಅರಬರು (ಜೋರ್ಡಾನಿಗಳು, ಇರಾಕಿಗಳು, ಈಜಿಪ್ಸಿಯನ್ಗಳು) ತಮ್ಮ ಸಂಸಾರದೊಟ್ಟಿಗೆ ನೆಮ್ಮದಿಯಿಂದಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ನಮ್ಮಲ್ಲಿ ಸಣ್ಣದೊಂದು ಹೊಟ್ಟೆಯುರಿ ಏಳುತ್ತದೆ. ಎಷ್ಟೊಂದು ಅದೃಷ್ಟವಂತರು ಇವರು! ಎಷ್ಟು ಸಲೀಸಾಗಿ ತಾವು ಹೋದಲ್ಲೆಲ್ಲಾ ತಮ್ಮ ಸಂಸಾರವನ್ನು ಹೊತ್ತೊಯ್ಯುತ್ತಾರೆ! ಈ ಅರಬರಿಗೆ ತಮ್ಮ ಮಕ್ಕಳ ಬಗ್ಗೆ ಅಂಥಾ ಉದಾತ್ತ ಕನಸುಗಳಾಗಲಿ, ಧ್ಯೇಯಗಳಾಗಲಿ ಇರುವದಿಲ್ಲ. ಅಥವಾ ‘ಇಂಗ್ಲೀಷ್ ಮೀಡಿಯಂ’ ಸ್ಕೂಲಿನಲ್ಲೇ ಓದಿಸಬೇಕೆಂಬ ಕಟ್ಟಾ ಇರಾದೆ ಅವರಿಗಿರುವದಿಲ್ಲ. ಅರೇಬಿ ಭಾಷೆಯೊಂದು ಗೊತ್ತಿದ್ದರೆ ಸಾಕು ಎಲ್ಲಿ ಬೇಕಾದರೂ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಮುಂದಾಗುತ್ತಾರೆ. ಮೇಲಾಗಿ ಅವರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಮ್ಮಷ್ಟು ಘನವಾಗಿ ಯೋಚಿಸುವದಿಲ್ಲ. ಹೀಗಾಗಿ ಅವರು ಹೋದಲ್ಲೆಲ್ಲಾ ಸಹಜವಾಗಿ ತಮ್ಮ ಸಂಸಾರವನ್ನು ಕರೆದೊಯ್ಯುತ್ತಾರೆ. ಹೆಂಡತಿಯೊಟ್ಟಿಗೆ ಆ ಕೊರೆವ ಚಳಿಯಲ್ಲೂ ಬಿಸಿಬಿಸಿಯಾಗಿರುತ್ತಾರೆ. ಆದರೆ ನಾವು ಹಾಗಲ್ಲ. ನಮ್ಮ ಮಕ್ಕಳು ಹುಟ್ಟುವ ಮುಂಚೆಯೇ ಅವು ಹೀಗೀಗೇ ಇರಬೇಕು, ಇಂತಿಂಥದೇ ಸ್ಕೂಲಿನಲ್ಲಿ ಓದಬೇಕು, ಇಂತಿಂಥದೇ ಆಗಬೇಕು ಎಂದು ಮೊದಲೇ ತೀರ್ಮಾನಿಸಿ ಅದಕ್ಕೆ ಎಲ್ಲ ತಯಾರಿಯನ್ನು ಮಾಡಿಟ್ಟುಕೊಳ್ಳುತ್ತೇವೆ. ಎಷ್ಟೇ ಆಗಲಿ ನಾವು ಭಾರತೀಯರಲ್ವಾ? ನಮ್ಮ ಸುಖಕ್ಕಿಂತ ನಮ್ಮ ಮಕ್ಕಳ ಸುಖಕ್ಕಾಗಿಯೇ ಹೆಣಗುವವರು! ಹೀಗಿರುವಾಗ ಇಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಗಳೇ ಇಲ್ಲದ, ಇದ್ದರೂ ಹೇಳಿಕೊಳ್ಳುವಂತ ಗುಣಮಟ್ಟವಿರದ ಸ್ಕೂಲುಗಳಲ್ಲಿ ಹೇಗೆ ತಾನೆ ನಾವು ನಮ್ಮ ಮಕ್ಕಳನ್ನು ಓದಿಸಲು ಮುಂದಾದೇವಿ? ಹೀಗಾಗಿ ಆ ಕೊರೆವ ಚಳಿಯಲ್ಲಿ ಉಕ್ಕುವ ನಮ್ಮ ಕಾಮನೆಗಳನ್ನು ಬಲವಂತವಾಗಿ ಹತ್ತಿಕ್ಕುತ್ತಾ, ನಮ್ಮ ಬಿಸಿಯುಸುರುಗಳಿಗೆ ನಾವೇ ಸಾಕ್ಷಿಯಾಗುತ್ತಾ ಹೀಟರ್ ಗಳ ಮುಂದೆ ಕುಳಿತುಕೊಂಡು ಮೈ ಬೆಚ್ಚಗಾಗಿಸಿಕೊಳ್ಳುವದರಲ್ಲಷ್ಟೇ ತೃಪ್ತಿ ಕಾಣುತ್ತೇವೆ. ಅತ್ತ ಅಲ್ಲಿಯೂ ಇರದ ಇತ್ತ ಇಲ್ಲಿಯೂ ಇರದ ಮನಸ್ಥಿತಿಯಲ್ಲಿ ಒಳಗೊಳಗೆ ಒದ್ದಾಡುತ್ತಾ, ಒಂಟಿತನ ಅನುಭವಿಸುತ್ತಾ, ನಮ್ಮ ಊರಿನ ಬಗೆಗೆ ಮೆಲುಕು ಹಾಕುತ್ತಾ ಬದುಕನ್ನು ಕಟ್ಟಿಕೊಳ್ಳಲು ನಾವಿಲ್ಲಿ ತಳವೂರುತ್ತೇವೆ. ಅಲ್ಲಿ ನಮ್ಮ ಹೆಂಡಿರು ನಮ್ಮ ಮಕ್ಕಳ ಭವಿಷ್ಯದ ಬಗೆಗೆ ಬಣ್ಣಬಣ್ಣದ ಕನಸುಗಳನ್ನು ಹೆಣೆಯುತ್ತಾ, ನಮ್ಮ ಗೈರುಹಾಜರಿಯಲ್ಲೂ ಸಂಸಾರವನ್ನು ಸರಿದೂಗಿಸುತ್ತಾ, ನಮ್ಮ ಬರುವಿಕೆಗಾಗಿ ಕಾಯುತ್ತಾ ನಿಟ್ಟುಸಿರುಬಿಡುತ್ತಿರುತ್ತಾರೆ. ಒಂದರ್ಥದಲ್ಲಿ ನಾವು ಲಕ್ಷ್ಮಣರು! ಅವರು ಊರ್ಮಿಳೆಯರು!! ಇಬ್ಬರೂ ಒಬ್ಬರಿಗೊಬ್ಬರು ವಿರಹವೇದನೆಯನ್ನನುಭವಿಸುತ್ತಾ ಬದುಕಿನ ಒಂದಷ್ಟು ವರ್ಷಗಳನ್ನು ವನವಾಸದಲ್ಲಿ ಕಳೆದುಬಿಡುತ್ತೇವೆ! ಹೀಗೆ ಕಳೆಯುವದರ ಬಗ್ಗೆ ನಮಗೆ ಜಿಜ್ಞಾಸೆಯಾಗಲಿ, ಬೇಜಾರಾಗಲಿ ಇರುವದಿಲ್ಲ! ಬದುಕನ್ನು ಕಟ್ಟಿಕೊಳ್ಳುವ ಭರಾಟೆ ಮತ್ತು ಪ್ರಪಂಚಕ್ಕೆ ಸಾಧಿಸಿ ತೋರಿಸುವ ಚಪಲ ನಮಗೆ. ಹೀಗಿರುವಾಗ ನಮಗೆ ಈ ತೆರದ ಬದುಕು ಅನಿವಾರ್ಯವಾಗುತ್ತದೆ.
ನಾನು ಈ ಮೊದಲೇ ಹೇಳಿದಂತೆ ಇಲ್ಲಿ ಲಿಬಿಯಾದಲ್ಲಿ ಅಸಾಧ್ಯ ಚಳಿ! ಈ ಚಳಿಗೆ ಒಳಗೆ ಥರ್ಮಲ್ ವೇರ್ಸ್, ಮೇಲೊಂದು ದಪ್ಪನೆಯ ಸ್ವೆಟರ್, ಕೈಗಳಿಗೆ ಉಣ್ಣೆಯ ಗ್ಲೌಸುಗಳನ್ನು ಧರಿಸಿ ಹೀಟರ್ ಮುಂದೆ ಕುಳಿತುಕೊಂಡು, ಬಿಸಿಬಿಸಿ ಚಹಾ ಹೀರುವದೇ ಒಂದು ಸ್ವರ್ಗಸುಖ! ಜೊತೆಗೆ ಅವಳು ಇದ್ದಿದ್ದರೆ............? ಅಬ್ಬಾ, ಅದರ ಮಜಾನೇ ಬೇರೆ! ಖೋಡಿ ಮನಸ್ಸು ಮತ್ತೆ ಮತ್ತೆ ಇಲ್ಲದ್ದಕ್ಕಾಗಿ ಹಪಹಪಿಸುತ್ತದೆ! ಇದೇ ಹೊತ್ತಿನಲ್ಲಿ ನಮ್ಮ ಕೆಲಸದವನು ‘ಮೊರೆಟ್ಯಾನಿಯನ್’ ಹುಡುಗಿಯರ ಆಸೆ ತೋರಿಸುತ್ತಾನೆ. ಇವರ ಹೆಸರು ಕೇಳುತ್ತಿದ್ದಂತೆ ಕಿಬ್ಬೊಟ್ಟೆಯೊಳಗಿಂದ ಆಸೆಯೊಂದು ಛಳ್ಳೆಂದು ಸಿಡಿದು ಇಡಿ ಮೈಯನ್ನೆಲ್ಲಾ ವ್ಯಾಪಿಸಿಬಿಡುತ್ತದೆ. ಈ ಹುಡುಗಿಯರು ಲಿಬಿಯಾದ ಬಹಳಷ್ಟು ಹೋಟೆಲ್ಗಳಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಾರೆ. ಹೆಸರಿಗಷ್ಟೆ ವೇಟರ್ ಕೆಲಸ. ಆದರೆ ಅವಕಾಶ ಸಿಕ್ಕರೆ ಮೈ ಮಾರಿಕೊಳ್ಳಲು ತಯಾರಿರುತ್ತಾರೆ. ನೋಡಲು ಹೆಚ್ಚುಕಮ್ಮಿ ಯೂರೋಪಿಯನ್ನರಂತಿದ್ದು ಮೈಕೈ ತುಂಬಿಕೊಂಡು ಆಕರ್ಷಕವಾಗಿ ಕಾಣುತ್ತಾರೆ. ಸದಾ ಸ್ವಚ್ಛ ಸ್ವಚ್ಛ! ಇವರ ಮೈ ಘಮಲು ಮೂಗಿಗೆ ಬಡಿಯುತ್ತಿದ್ದಂತೆ ದೇಹ ತಾನೇ ತಾನಾಗಿ ಕಾವೇರುತ್ತದೆ. ಹೊರಟುಬಿಡೋಣ, ದೇಹದ ವಾಂಛೆಗಳನ್ನು ಒಮ್ಮೆ ತೀರಿಸಿಕೊಂಡುಬಿಡೋಣ. ಹತ್ತಿಟ್ಟ ಕಾಮನೆಗಳನ್ನು ಒಮ್ಮೆ ಹೊರಗೆಡವಿ ಸುಖದಸುಪ್ಪತಿಗೆಯಲ್ಲಿ ತೇಲೊಣ ಅನಿಸುತ್ತೆ. ಆದರೆ ಮರುಕ್ಷಣ ನಮ್ಮ ಹೆಂಡತಿಯರಿಗೆ ಮೋಸಮಾಡುತ್ತಿದ್ದೇವೇನೋ ಎಂಬ ಗಿಲ್ಟ್ ಕಾಡಲು ಶುರುವಾಗುತ್ತದೆ (ಅಂದರೆ ನಾವು ನಿಜವಾಗಿಯೂ ನಮ್ಮ ಹೆಂಡತಿಯರನ್ನು ಪ್ರೀತಿಸುತ್ತಿದ್ದೇವೆಂದರ್ಥ). ಜೊತೆಗೆ ಪರದೇಶದಲ್ಲಿ ಏನೇನು ರೀತಿರಿವಾಜುಗಳಿರುತ್ತವೋ? ಸಿಕ್ಕಿಹಾಕಿಕೊಂಡರೆ ಏನು ಮಾಡುವದು? ದೇಹ ಬೇಕೆನ್ನುತ್ತದೆ. ಆದರೆ ಮನಸ್ಸು ಬೇಡವೆನ್ನುತ್ತದೆ. ಮೇಲಾಗಿ ಇವರು, ನಮ್ಮ ಕೆಲಸದವನು ಹೇಳುವಷ್ಟು ಸುಲಭವಾಗಿ ಸಿಗುವದಿಲ್ಲ! ಬಲು ಚಾಲಾಕಿ ಹೆಂಗಸರು! ಇತ್ತ ಸೂಳೆಯರಿಗೆ ಸೂಳೆಯರೂ ಅಲ್ಲ. ಅತ್ತ ಗರತಿಯರಿಗೆ ಗರತಿಯರೂ ಅಲ್ಲ. ಹಾಗೆಲ್ಲಾ ಕರೆದ ತಕ್ಷಣ ಬರುವವರಲ್ಲ! ಮೊದಲು ಗಂಡಸರು ಇವರನ್ನು ಆಕರ್ಷಿಸಬೇಕು. ಕಣ್ಣಲ್ಲೇ ಕಾಮ ಸಂದೇಶಗಳನ್ನು ಕಳಿಸಬೇಕು. ರೋಮ್ಯಾಂಟಿಕ್ ಆಗಿ ಮಾತನಾಡುತ್ತಾ ಹತ್ತಿರವಾಗಬೇಕು, ಒಂದೆರೆಡು ಫ್ಲರ್ಟ್ ಮಾಡಬೇಕು. ಸುಳ್ಳೇಸುಳ್ಳು ಒಂದು ಲವ್ ಹುಟ್ಟಿಸಬೇಕು. ವ್ಯವಹಾರ ಕುದುರಿಸಬೇಕು. ಆಮೇಲಿನಿದ್ದರೂ ಮುಂದಿನದೆಲ್ಲಾ; ಅದೂ ಅವರು ಆ ಗಂಡಸರನ್ನು ಇಷ್ಟಪಟ್ಟರೆ ಮಾತ್ರ.
ನಾವು ಮೊದಲು ಅವಕಾಶಕ್ಕಾಗಿ ಹಂಬಲಿಸುತ್ತೇವೆ. ಅದು ಸಿಕ್ಕಮೇಲೆ ಅಪರಾಧಿ ಪ್ರಜ್ಞೆ ಭಾವದಿಂದ ಹಿಂದೇಟು ಹಾಕುತ್ತೇವೆ. ಕೊನೆಗೆ ಇದ್ಯಾವುದೂ ಬೇಡ ಎಂದು ನಾವು ನಾವೇ ಸಾಯಂಕಾಲದ ಹೊತ್ತು ಆ ಚಳಿಯಲ್ಲಿ ಇದ್ದಿಲು ಒಲೆಗಳನ್ನು ಇಟ್ಟುಕೊಂಡು ಸಹರಾ ಮರಭೂಮಿಯತ್ತ ಹೊರಟುಬಿಡುತ್ತೆವೆ. ಅಲ್ಲಿ ಒಂದಷ್ಟು ಒಣಗಿದ ಕುರುಚಲು ಟೊಂಗೆಗಳನ್ನು ಹುಡುಕಿ ತಂದು, ಗುಡ್ಡೆಹಾಕಿ, ಬೆಂಕಿಹಚ್ಚಿ, ಟೀ ಕಾಯಿಸಿಕೊಂಡು ಮೈ ಕಾಯಿಸುತ್ತಾ ಕುಳಿತುಬಿಡುತ್ತೇವೆ. ಸಿಗರೇಟು ಸೇದುವವರು ಸಿಗರೇಟು ಸೆದುತ್ತಾರೆ. ಒಂದಷ್ಟು ಪೋಲಿ ಜೋಕುಗಳನ್ನು ಹೇಳುವವರು ಪೋಲಿ ಜೋಕು ಹೇಳುತ್ತಾರೆ. ರಾಜಕೀಯದ ಬಗ್ಗೆ ಮಾತನಾಡುವವರು ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಇವತ್ತು ಕಾಲೇಜಿನಲ್ಲಿ ಏನಾಯಿತು? ಮೀಟಿಂಗ್ನಲ್ಲಿ ಏನು ನಡೆಯಿತು? ಯಾವ ಹುಡುಗಿ ಯಾವ ಹುಡುಗನ ಜೊತೆ ಓಡಾಡುತ್ತಿದ್ದಾಳೆ? ನಿನ್ನೆ ರಾತ್ರಿ ಹಾಟ್ ಬರ್ಡ್ ಚಾನೆಲ್ನಲ್ಲಿ ಯಾವ್ಯಾವ ಹಾಟ್ ಮೂವಿಗಳನ್ನು ನೋಡಿದೆವು? ಮುಂದಿನವರ್ಷ ಎಷ್ಟು ಇನ್ಕ್ರೀಮೆಂಟು ಕೊಡುತ್ತಾರೆ? ಇತ್ಯಾದಿ ವಿಷಯಗಳ ಬಗ್ಗೆ ಸಣ್ಣದೊಂದು ಗಾಸಿಪ್ ಮಾಡುತ್ತೇವೆ. ಆನಂತರ ನಮ್ಮ ಮಾತು ಅವಳ ಕಡೆ ಹೊರಳುತ್ತದೆ. ಅವಳು ಎಂದರೆ ರೀಮ್; ನನ್ನ ವಿದ್ಯಾರ್ಥಿನಿ. ಇವಳು ಓದುತ್ತಿರುವದು ನಮ್ಮ ಡಿಪಾರ್ಟ್ಮೆಂಟಿನಲ್ಲಿ. ನೋಡಲು ತುಂಬಾ ಚನ್ನಾಗಿದ್ದಾಳೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ರೂಪವತಿ. ಅವಳ ಇಂಗ್ಲೀಷು ಅಷ್ಟೇ ಸುಸ್ಪಷ್ಟ ಮತ್ತು ನಿರರ್ಗಳ. ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಮಾತನಾಡುತ್ತಾಳೆ; ಅದೂ ಬ್ರಿಟಿಷ್ accentನಲ್ಲಿ! ಜೊತೆಗೆ ಬುದ್ಧಿವಂತೆ. ಪ್ರತಿ ಸಾರಿ ಓದುವದರಲ್ಲಿ ಯಾರಿಗೂ ಮೊದಲ ಸ್ಥಾನವನ್ನು ಬಿಟ್ಟುಕೊಡುವದಿಲ್ಲ. ಈ ಕಾರಣಕ್ಕೇನೋ ಎಲ್ಲರ ಮಚ್ಚುಗೆಗೆ ಪಾತ್ರವಾಗಿದ್ದಾಳೆ. ಇವಳನ್ನು ಕೆಲವರು “Queen Cleopatra of Ghat College” ಎಂತಲೂ ಇನ್ನು ಕೆಲವರು “an apple of everyone’s eyes” ಎಂತಲೂ ಕರೆಯುತ್ತಾರೆ. ಹುಡಗರಂತೂ ಒಂದಲ್ಲ ಒಂದು ಕಾರಣ ಹುಡುಕಿ ಅವಳನ್ನು ಮಾತನಾಡಿಸಲು ಹಾತೊರೆಯುತ್ತಿರುತ್ತಾರೆ.
ಲೆಕ್ಚರರ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ವಿನಾಕಾರಣ ಇವಳನ್ನು ಹುಡುಕಿಕೊಂಡು ಹೋಗುತ್ತಾರೆ. ಏನಾದರೊಂದು ನೆಪ ಹುಡುಕಿ ಇವಳೊಟ್ಟಿಗೆ ಮಾತನಾಡಲು ನೋಡುತ್ತಾರೆ. ಅವಳಿಗೆ ಏನಾದರು ಫೇವರ್ ಮಾಡಬಹುದಾ ನೋಡುತ್ತಾರೆ. ಹಾಗೆ ನೋಡಿದರೆ ಇವಳು ನಮ್ಮ ಇಡಿ ಡಿಪಾರ್ಟ್ಮೆಂಟಿನಲ್ಲಿ ನನ್ನೊಟ್ಟಿಗೆ ಮತ್ತು ನಮ್ಮ ಎಚ್.ಒ.ಡಿ. ಜೊತೆಗಷ್ಟೇ ಚನ್ನಾಗಿ ಮಾತನಾಡುವದು. ಬಾಕಿಯವರ ಜೊತೆ ಅಷ್ಟಕ್ಕಷ್ಟೆ. ಹೀಗಾಗಿ ನನ್ನ ಸಹೋದ್ಯೋಗಿಗಳೆಲ್ಲಾ ನನ್ನನ್ನು ಆಗಾಗ ಅವಳ ಹೆಸರು ಹೇಳಿ ರೇಗಿಸುವದುಂಟು. ಅವರು ಹಾಗೆ ರೇಗಿಸುವಾಗಲೆಲ್ಲಾ ಖುಶಿಯಾಗುತ್ತದೆ. ಇಲ್ಲದ ಆಸೆಗಳು ಮನದಲ್ಲಿ ಹುಟ್ಟಿಕೊಳ್ಳುತ್ತವೆ. ಹೀಗೆ ಒಂದು ಸಾರಿ ಅವಳೊಟ್ಟಿಗೆ ಮಾತನಾಡುವಾಗ ಕೇಳಿದ್ದೆ “ರೀಮ್, ಅರೇಬಿಕ್ ಭಾಷೆಯಲ್ಲಿ ನಿನ್ನ ಹೆಸರಿನ ಅರ್ಥವೇನು?” ಅವಳು ಕಿಲಕಿಲ ನಗುತ್ತಾ, ಹುಬ್ಬುಹಾರಿಸುತ್ತಾ “deer (ಜಿಂಕೆ)” ಎಂದು ಹೇಳಿದ್ದಳು. ಜೊತೆಗೆ ನನ್ನ ಹೆಸರಿನರ್ಥ ಚನ್ನಾಗಿದೆ ಅಲ್ವ? ಎಂದು ಹೆಮ್ಮೆಯಿಂದ ಬೀಗಿದ್ದಳು. ನಿಜ, ಅವಳು ನಿಜವಾಗಲೂ ಜಿಂಕೆಯಂತೆ ಇದ್ದಾಳೆ. ನಿಂತಲ್ಲಿ ನಿಲ್ಲಲಾರಳು. ಕುಂತಲ್ಲಿ ಕೂರಲಾರಳು. ಪಾದರಸದಂತೆ ಅತ್ತ ಇತ್ತ ಓಡಾಡುತ್ತಲೇ ಇರುತ್ತಳೆ. ಅವಳದು ತುಂಟ ಕಂಗಳು, ಹರಿವ ತೊರೆಯ ಝುಳುಝುಳು ನಿನಾದದ ದನಿ. ಬಳಕುವ ನಡು! ಅಬ್ಬಾ ಎಂಥವನಾದರು ಅವಳನ್ನು ನೋಡಿ ಹುಚ್ಚನಾಗುತ್ತಾನೆ. ಹೀಗೆ ಒಮ್ಮೆ ನನ್ನ ಭಾರತೀಯ ಸಹೋದ್ಯೋಗಿಯೊಬ್ಬ ಅವಳ ಬಗ್ಗೆ ಸುಖಾಸುಮ್ಮನೆ ಪ್ರೀತಿಯ ಮಧುರ ಭಾವನೆಯೊಂದು ಬೆಳೆಸಿಕೊಂಡು ಹುಚ್ಚನಾಗಿಬಿಟ್ಟಿದ್ದ. ಎಷ್ಟು ಹುಚ್ಚನೆಂದರೆ ಅವಳಿಗೋಸ್ಕರ ಈಗಾಗಲೇ ಮದುವೆಯಾಗಿ ಇಂಡಿಯಾದಲ್ಲಿ ಬಿಟ್ಟಿರುವ ತನ್ನ ಹೆಂಡತಿಯನ್ನು ಬೇಕಾದರು ಬಿಡಲು ತಯಾರಾಗಿದ್ದ. ಆದರೆ ಅವಳು ಇವನ ಪ್ರೀತಿಯ ಬೇಡಿಕೆಯನ್ನು ಅತ್ಯಂತ ನಾಜೂಕಾಗಿ ನಿರಾಕರಿಸಿ ಅವನನ್ನು ಮತ್ತಷ್ಟು ಹುಚ್ಚಳನ್ನಾಗಿ ಮಾಡಿದ್ದಳು.
ಒಂದುವೇಳೆ ಅವಳು “ಹೂಂ” ಎಂದಿದ್ದರೆ ಏನಾಗುತ್ತಿತ್ತು? ಅವಳೊಟ್ಟಿಗೆ ಅವನ ಮದುವೆಯಾಗುತ್ತಿತ್ತು. ಅವಳು ಇವನ ಮೇಡಮ್ (ಅರೇಬಿ ಭಾಷೆಯಲ್ಲಿ “ಮೇಡಮ್” ಅಂದರೆ ಹೆಂಡತಿ ಎಂದರ್ಥ) ಆಗುತ್ತಿದ್ದಳು. ಆಮೇಲೆ ಅವನಿಗೆ ಇಲ್ಲಿಯ ಗ್ರೀನ್ ಕಾರ್ಡ್, ಸಿಟಿಜನ್ಶಿಪ್ ಸಿಗುತ್ತಿತ್ತು. ಮಾತ್ರವಲ್ಲ ಅಮೆರಿಕದಲ್ಲೋ, ಬ್ರಿಟನ್ನಲ್ಲೋ ಹೆಚ್ಚಿನ ವಿಧ್ಯಾಭ್ಯಾಸ ಮಾಡಲು ಸರಕಾರದಿಂದ ಸ್ಕಾಲರ್ಶಿಪ್ ಸಹ ಸಿಗುತ್ತಿತ್ತು, ಇದೆಲ್ಲಾ ಮುಗಿಸಿದ ಬಳಿಕ ಇಲ್ಲಿ ಆತ ಬಹಳ ಬೇಗನೆ ಉನ್ನತ ಹುದ್ದೆಯನ್ನೂ ಅಲಂಕರಿಸಬಹುದಿತ್ತು. ಇದೆಲ್ಲವೂ ಆತನಿಗೆ ಕೇವಲ ಒಂದು ಹುಡುಗಿಯನ್ನು ಮದುವೆಯಾಗುವದರಿಂದ ಸಿಕ್ಕುಬಿಡುತ್ತಿತ್ತು. ಆದರೆ ಆತ ಇಸ್ಲಾಂಗೆ ಮತಾಂತರ ಹೊಂದಬೇಕು, ಮೊದಲೆರೆಡು ವರ್ಷ ಭಾರತಕ್ಕೆ ಹೋಗದೇ ಇರಬೇಕು, ಭಾರತದೊಂದಿಗಿನ ತನ್ನ ತಂತುಗಳನ್ನು ಕ್ರಮೇಣ ಕಡಿದುಕೊಳ್ಳುತ್ತಾ ಬರಬೇಕು. ನಿಧಾನಕ್ಕೆ ಇಲ್ಲಿ ಬೇರಿಳಿಸುತ್ತಾ ಹೊಸ ಬದುಕು, ಹೊಸ ನೆನಪುಗಳನ್ನು ಕಟ್ಟಿಕೊಳ್ಳಬೇಕು. ಒಂದುವೇಳೆ ಅವನು ಭಾರತಕ್ಕೆ ವಾಪಾಸು ಹೋದರೂ ಇಷ್ಟೆಲ್ಲಾ ಗೊತ್ತಿದ್ದ ಅವನನ್ನು ಅವರ ಮನೆಯವರು ಹೃದಯಪೂರ್ವಕವಾಗಿ ಸ್ವೀಕರಿಸುತ್ತಾರೆಯೇ? ಒಂದು ರಿತಿಯಲ್ಲಿ ಅವಳು ಅವನನ್ನು ನಿರಾಕರಿಸಿದ್ದು ಒಳ್ಳೆಯದೇ ಆಯಿತು. ಇಲ್ಲವಾದರೆ ಅವನ ಊರಿನಲ್ಲಿ ಅವನನ್ನೇ ನಂಬಿಕೊಂಡು ಬದುಕುತ್ತಿರುವ ಜೀವಗಳ ಕತೆ ಏನಾಗಿರುತ್ತಿತ್ತು? ಆದರೆ ಇಲ್ಲಿ ನಾಲ್ಕೈದು ಜನ ಭಾರತೀಯರು ಭಾರತದೊಟ್ಟಿಗಿನ ತಮ್ಮ ಸಂಬಂಧಗಳನ್ನು, ತಂತುಗಳನ್ನು ಕಡಿದುಕೊಂಡು ಇಲ್ಲಿಯ ಹುಡುಗಿಯರೊಟ್ಟಿಗೆ ಮದುವೆಮಾಡಿಕೊಂಡು ಹಾಯಾಗಿದ್ದಾರೆ. ಅವರಿಗೆ ಈ ಕುರಿತು ಯಾವುದೇ ಗಿಲ್ಟ್ ಆಗಲಿ, ತಪ್ಪಿನ ಅರಿವಾಗಲಿ ಇಲ್ಲ. ಕೇಳಿದರೆ ಅದೆಲ್ಲಾ ‘ಅಲ್ಲಾ’ಹುನ ಇಚ್ಛೆಯಾಗಿತ್ತು ಎಂದು ಹೇಳುತ್ತಾರೆ. ನಾವೆಲ್ಲಾ ಅವರನ್ನು ‘ಖರ್ಜೂರ ಬೆಳೆವ ಹೊಲದಲ್ಲಿ ಮಲ್ಲಿಗೆ ಬಳ್ಳಿಯನ್ನು ನೆಟ್ಟವರು’ ಎಂದು ತಮಾಷೆ ಮಾಡುತ್ತಿರುತ್ತೇವೆ.
ಇಲ್ಲಿಯ ಹುಡುಗಿಯರನ್ನು ಪ್ರೀತಿಸಬಾರದು. ಪ್ರೀತಿಸಿದ ಮೇಲೆ ಅದಕ್ಕೆ ಬದ್ಧವಾಗಿರಬೇಕು. ಇಲ್ಲವಾದರೆ ಸುಮ್ಮನೆ ಬಿಟ್ಟಾರೆಯೇ ಈ ಅರಬ್ಬರು? ಈ ಹಿಂದೆ ಈಜಿಪ್ಟ್ ಮೂಲದ ಕ್ರಿಶ್ಚನ್ ಡಾಕ್ಟರನೊಬ್ಬನ ಮನೆಗೆ ಇಲ್ಲಿನ ಕಾಲೇಜು ಹುಡುಗಿಯೊಬ್ಬಳು ದಿನಾಲೂ ಮಧ್ಯಾಹ್ನದ ಹೊತ್ತು ಹೋಗಿ ಬಂದು ಮಾಡುತ್ತಿದ್ದಾಳೆ ಎನ್ನುವದೇ ಭಾರೀ ಸುದ್ಧಿಯಾಗಿ ಅವನನ್ನು ಸಾಯಿಸಲು ಹೋಗಿದ್ದರು. ಕೊನೆಗೆ ಇಸ್ಲಾಂಗೆ ಮತಾಂತರ ಹೊಂದಿ ಅವಳನ್ನು ಮದುವೆಯಾಗು ಇಲ್ಲ ದೇಶ ಬಿಡು ಎಂಬ ಒತ್ತಡ ಹೇರಿದರು. ಅವನು ಸುಮ್ಮನೆ ದೇಶ ಬಿಟ್ಟುಹೋದ. ಇನ್ನೊಂದು ಸಾರಿ ಇನ್ನೊಬ್ಬ ವಿದೇಶಿ ಡಾಕ್ಟರು ತನ್ನ ತಪಾಸಣಾ ಕೋಣೆಯಲ್ಲಿ ನನ್ನ ವಿದ್ಯಾರ್ಥಿಯೊಬ್ಬಳನ್ನು ತಪಾಸಣೆಯ ನೆಪದಲ್ಲಿ ಅನವಶ್ಯಕವಾಗಿ ಅವಳ ಅಂಗಾಂಗಗಳನ್ನು ಮುಟ್ಟಿ ಲೈಂಗಿಕವಾಗಿ ಹಿಂಸಿಸಿದ ಎಂಬ ಕಾರಣಕ್ಕೆ ಅವನನ್ನು ಗಡಿಪಾರು ಮಾಡಲಾಯಿತು. ಈ ಎರಡು ಘಟನೆಗಳು ಬೇರೆಯವರನ್ನು ಎಚ್ಚರದಲ್ಲಿಟ್ಟಿವೆ. ಇವೆರೆಡು ಕಾಮದ ಕಥೆಗಳು. ಆದರೆ ಪ್ರೇಮಕ್ಕೆ ಸಂಬಂಧ ಪಟ್ಟ ಅನೇಕ ಕಥೆಗಳು ಆಗಾಗ ಹುಟ್ಟಿ ಸಾಯುತ್ತಿರುತ್ತವೆ. ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ನಮ್ಮ ಓರಿಸ್ಸಾದ ಡಾಕ್ಟರೊಬ್ಬರು ತಮ್ಮ ಕೋರಿಯನ್ ನರ್ಸ್ ಒಬ್ಬಳ ಪ್ರೇಮಪಾಶಕ್ಕೆ ಸಿಲುಕಿದ್ದರು. ಅವರ ಪ್ರೀತಿ ಅದ್ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಆ ಪುಣ್ಯಾತ್ಮ ಈಗಾಗಲೇ ಪ್ರೀತಿಸಿ ಮದುವೆಯಾದ ತನ್ನ ಡಾಕ್ಟರ್ ಹೆಂಡತಿಯನ್ನು ಹಾಗೂ ಎದೆಮಟ್ಟ ಬೆಳೆದುನಿಂತ ತನ್ನ ಇಬ್ಬರು ಗಂಡು ಮಕ್ಕಳನ್ನು ಬಿಡಲು ತಯಾರಾಗಿದ್ದ. ಸಾಲದ್ದಕ್ಕೆ ಅವರು ಪ್ರೀತಿಸುವ ಸಮಯದಲ್ಲೇ ಆತ ಭಾರತಕ್ಕೆ ಬಂದಾಗ ಆತನ ಪ್ರೇಯಸಿ ಕೇಳಿದಳೆಂದು ಅಲ್ಲಿಂದ ಎಳೆನೀರನ್ನು ತಂದುಕೊಟ್ಟಿದ್ದರು. ಅದಕ್ಕೋಸ್ಕರ ಚೆಕಿನ್ ಸಮಯದಲ್ಲಿ ಎಕ್ಸೆಸ್ ಲಗೇಜ್ ಫೀಸು ಎಂದು ಸಾವಿರಗಟ್ಟಲೆ ದಂಡ ತೆತ್ತಿದ್ದರು. ಅವಳೋ ಒಂದೇ ಗುಟಿಕಿನಲ್ಲಿ ಅವೆಲ್ಲವನ್ನೂ ಕುಡಿದು ಬೀಸಾಡಿದ್ದಳು. ಇವರೋ ಸೋಮರ್ಸೆಟ್ ಮೌಮ್ನ “ದಿ ಲಂಚಾನ್” ಕಥೆಯಲ್ಲಿನ ನಾಯಕ ಹೀಗೆ ಪರಿಚಯವಾದ ಹುಡುಗಿಯೊಬ್ಬಳಿಗೆ ತನ್ನ ಬಳಿ ಇರುವ ಹಣವನ್ನೆಲ್ಲಾ ಖರ್ಚುಮಾಡಿ ಒಂದು ಲಂಚ್ ಕೊಡಿಸಿ ತೃಪ್ತಿಪಡುವಷ್ಟೇ ತೃಪ್ತಿಪಟ್ಟಿದ್ದರು. ಅವರು ಇನ್ನೇನು ಮದುವೆಯಾಗುತ್ತಾರೆ ಎನ್ನುವಷ್ಟರಲ್ಲಿ ಅವರ ಕೆಲವು ಸಹೋದ್ಯೋಗಿಗಳು ಅವರಿಗೊಂದಿಷ್ಟು ಬುದ್ಧಿವಾದ ಹೇಳಿ ಈ ಮದುವೆಯನ್ನು ಅದ್ಹೇಗೋ ತಪ್ಪಿಸಿದ್ದರು. ಮುಂದೆ ಸ್ವಲ್ಪ ದಿನದಲ್ಲಿಯೇ ಆ ನರ್ಸ್ ತನ್ನ ದೇಶಕ್ಕೆ ವಾಪಾಸ್ ಹೋದಳು. ಇವರು ಸ್ವಲ್ಪ ದಿವಸ ದೇವದಾಸ್ನಂತೆ ಇದ್ದು ಕ್ರಮೇಣ ಸಹಜ ಸ್ಥಿತಿಗೆ ಮರಳಿದ್ದರು.
ಹೀಗೆ ಸ್ನೇಹಿತರನ್ನು, ಬಂಧುಗಳನ್ನು, ಸಂಸಾರವನ್ನು ಬಿಟ್ಟು ಕೆಲಸ ಹುಡುಕಿ ಬಂದ ನಮ್ಮಂತವರದು ಒಂಥರಾ ಸತ್ತ ಬದುಕು. ಅತ್ತ ಅಲ್ಲಿಯೂ ಇರದ ಇತ್ತ ಇಲ್ಲಿಯೂ ಇರದ ಮಾನಸಿಕ ಸಂಘರ್ಷಗಳ ನಡುವೆ ಜರ್ಜರಿತರಾಗುತ್ತಾ ನಾವು ಒದೊಂದು ಸಾರಿ ಸಂಪೂರ್ಣವಾಗಿ ಕುಗ್ಗಿಹೋಗುತ್ತೇವೆ. ದೈಹಿಕವಾಗಿ ಮಾತ್ರ ಇಲ್ಲಿರುತ್ತೇವೆ. ಆದರೆ ಮನಸ್ಸೆಲ್ಲಾ ಪೂರ್ತಿ ನಮ್ಮನಮ್ಮ ಊರುಗಳಲ್ಲಿರುತ್ತದೆ. ಆದರೆ ಪ್ರತಿವರ್ಷ ಎರಡು ತಿಂಗಳಗಳ ಕಾಲ ರಜೆಗೆಂದು ಅಲ್ಲಿಗೆ ಹೋದಾಗ ಕಟ್ಟಿಕೊಂಡುಬಂದ ನೆನಪುಗಳು ಹಾಗೂ ಇಲ್ಲಿ ಕುಳಿತು ಭವಿಷ್ಯದ ಬಗೆಗೆ ಹೆಣೆಯುವ ಕನಸುಗಳು ಮಾತ್ರ ನಮ್ಮನ್ನು ಜೀವಂತವಾಗಿಡುತ್ತವೆ. ನಾವೇನೋ ದೊಡ್ಡ ಹುದ್ದೆಯಲ್ಲಿ ಇರುವವರು, ಒಳ್ಳೆ ಸಂಬಳ ಎಣಿಸುವವರು. ನಮ್ಮ ಹತ್ತಿರ ಮತ್ತು ನಮ್ಮ ಕುಟಂಬದವರ ಹತ್ತಿರ ಲ್ಯಾಪ್ಟಾಪ್ ಮತ್ತು ಇಂಟರ್ನೆಟ್ ಸೌಲಭ್ಯ ಇದ್ದೇ ಇರುತ್ತದೆ. ಹೀಗಾಗಿ ನಾವು ನಮ್ಮ ಮನೆಯವರ ಜೊತೆ ಬೇಕೆಂದಾಗ ಮಾತಾಡಿ ಒಂದಷ್ಟು ಮನಸ್ಸು ಹಗುರ ಮಾಡಿಕೊಳ್ಳುತ್ತೇವೆ. ಅಂತೆಯೇ ತೀರ ಇಂಟರ್ನೆಟ್ ಇಲ್ಲದ ಬಂಧುಗಳನ್ನು ಫೋನಿನ ಮೂಲಕ ಸಂಪರ್ಕಿಸಿ ಖುಶಿಯಾಗಿರುತ್ತೇವೆ. ಆದರೆ ಕೇವಲ ಮೂವತ್ತು ಸಾವಿರ ರೂಪಾಯಿಗೋಸ್ಕರ (ಊಟ ಮತ್ತು ಸಾಮೂಹಿಕ ವಸತಿ ಉಚಿತ) ಇಲ್ಲಿಗೆ ದುಡಿಯಲು ಬಂದ ಮೇಸ್ತ್ರಿಗಳು, ಪ್ಲಂಬರ್ ಗಳು, ಎಲೆಕ್ಟ್ರೀಶಿಯನ್ಗಳ ಕಥೆ ಕೇಳುವದಂತೂ ಬೇಡವೇ ಬೇಡ. ಅವರಿಗೆ ಲ್ಯಾಪ್ಟಾಪ್, ಇಂಟರ್ನೆಟ್ ಕನಸಿನ ಮಾತು. ಹೋಗಲಿ ಫೋನು ಆದರೂ ಮಾಡಿ ಮಾತಾಡೋಣವೆಂದರೆ ಭಾರಿ ಮೊತ್ತವನ್ನು ತೆರಬೇಕಾಗುತ್ತದೆಂದು ಸುಮ್ಮನಿದ್ದುಡುತ್ತಾರೆ. ಮಾಡಿದರೂ ಹತ್ತೋ ಹದಿನೈದು ದಿವಸಗಳಿಗೊಂದು ಸಾರಿ ಮಾಡುತ್ತಾರೆ. ಮಾತನಾಡುವದನ್ನೆಲ್ಲಾ ಒಂದು ಹಾಳೆಯಲ್ಲಿ ಬರೆದುಕೊಂಡು ಬಡಬಡನೆ ಮಾತನಾಡಿ ಮುಗಿಸುತ್ತಾರೆ. ಅದೂ ಕೇವಲ ಐದಾರು ನಿಮಿಷಗಳಷ್ಟು ಮಾತ್ರ. ಇಂಥವರು ತಮ್ಮ ಕಾಮನೆಗಳನ್ನಷ್ಟೇ ಅಲ್ಲ ಭಾವನೆಗಳನ್ನು ಕೂಡ ಹತ್ತಿಕ್ಕಿ ಬದುಕುತ್ತಾರೆ. ನಾವು ವರ್ಷಕ್ಕೆ ಎರಡು ಸಾರಿ ನಮ್ಮ ಊರಿಗೆ ಹೋಗಿಬರುತ್ತೇವೆ. ಅವರೋ ಎರಡು ವರ್ಷಕ್ಕೋ ಮೂರು ವರ್ಷಕ್ಕೋ ಒಂದು ಸಾರಿ ಹೋಗಬೇಕು; ಅದೂ ಅವರ ಕಾಂಟ್ರ್ಯಾಕ್ಟರ್ ವಿಮಾನದ ಟಿಕೇಟ್ಗಳನ್ನು ತೆಗೆದುಕೊಟ್ಟರೆ ಮಾತ್ರ. ಇನ್ನು ಯಾರದಾದರೂ ಸಾವಿನ ಸುದ್ದಿ ಬಂದರೆ ಅವರ ಅಂತ್ಯಸಂಸ್ಕಾರಕ್ಕೆ ಹೋಗಲಾರದೆ ಸತ್ತವರನ್ನು ನನಪುಗಳಲ್ಲಿ ಬದುಕಿಸಿಕೊಂಡು ರೂಮಲ್ಲಿ ಒಬ್ಬರೇ ಕುಳಿತು ಅಳುತ್ತಾರೆ. ಮಾರನೆಯ ದಿನ ಮತ್ತೆ ಎಂದಿನಂತೆ ಕೆಲಸಕ್ಕೆ ಹೋಗುತ್ತಾರೆ. “ಸಾಕು ಇಲ್ಲಿಯ ಪರದೇಶಿ ಬದುಕು. ಮತ್ತೆ ಬರುವದು ಬೇಡ” ಎಂದು ಪ್ರತಿಸಾರಿ ಅಂದುಕೊಂಡು ಹೋಗುತ್ತೇವೆ. ಆದರೆ ನಮಗಾಗಿ ಊರುಗಳಲ್ಲಿ ನಮ್ಮನ್ನು ವಾಪಸ್ ವಿಮಾನ ಹತ್ತಿಸಲು ಹೊಸ ಸಮಸ್ಯೆಗಳು ಕಾಯುತ್ತಿರುತ್ತವೆ. ಮಕ್ಕಳ ವಿದ್ಯಾಭ್ಯಾಸವೊ, ಮನೆಯ ಕಷ್ಟವೊ, ತಂಗಿತಮ್ಮರ ಮದುವೆಯೊ ನಮ್ಮನ್ನು ಹಿಮ್ಮೆಟ್ಟಿಸುತ್ತವೆ. ಹೋಗಲಿ ಇಲ್ಲೇ (ಭಾರತದಲ್ಲಿ) ಇದ್ದುಕೊಂಡು ಕೆಲಸ ಮಾಡೋಣವೆಂದರೆ ಇಲ್ಲಿ ಕೊಡುವ ಸಂಬಳ ಅಲ್ಲಿಗಲ್ಲಿಗೆ ಸರಿಹೋಗುತ್ತದೆ. ಮೇಲಾಗಿ ನಾವು ದೊಡ್ಡ ಮೊತ್ತದ ಸಂಬಳ ಎಣಿಸಿದವರು ಸಣ್ಣ ಸಂಬಳಕ್ಕೆ ಕೆಲಸಮಾಡಲು ನಮ್ಮ ಮನಸ್ಸು ಒಗ್ಗಿಕೊಳ್ಳುವದಿಲ್ಲ. ಬಹುಶಃ, ನಮ್ಮೆಲ್ಲಾ ಕಮಿಟ್ಮೆಂಟ್ಗಳು ಮುಗಿದು, ಮನೆಯೊಂದನನ್ನು ಕಟ್ಟಿ, ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್ ಅಂತಾದ ಮೇಲೆಯಷ್ಟೇ ನಾವಿಲ್ಲಿ ಕೆಲಸ ಮಾಡಲು ಅಣಿಯಾಗುತ್ತದೇನೋ? ಈ ಎಲ್ಲ ಕಾರಣಕ್ಕಾಗಿ ನಾವು ಎಂದಿನಂತೆ ಅಲ್ಲಿಯ ನೆನಪುಗಳೊಂದಿಗೆ ಹಾರಿಬಂದು ಇಲ್ಲಿ ಕುಳಿತು ಹೊಸಹೊಸ ಕನಸುಗಳನ್ನು ಹೆಣೆಯುತ್ತಾ ಮತ್ತೆ ನಮ್ಮ ಕೆಲಸದಲ್ಲಿ ಮಗ್ನರಾಗುತ್ತೇವೆ.
ಖ್ಯಾತ ಇಂಗ್ಲೀಷ್ ಲೇಖಕಿ ಶೋಭಾ ಡೇ ಹೇಳುತ್ತಾರೆ; Money is sexier than sex. ಈ ಮಾತು ಅಪ್ಪಟ ಸತ್ಯ ಅಲ್ಲವೇ?
-ಉದಯ್ ಇಟಗಿ
Comments
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
In reply to ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ... by nanjunda
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
In reply to ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ... by venkatb83
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
In reply to ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ... by venkatb83
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
In reply to ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ... by venkatb83
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
In reply to ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ... by ಗಣೇಶ
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
In reply to ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ... by uday_itagi
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...
ಉ: ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ...