"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೩)

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೩)

    ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೨)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%E0%B2%A4-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AE-%E0%B3%A8/24/05/2012/36809

ವೇದಾಂತ ದರ್ಶನದ ಸಂಕ್ಷಿಪ್ತ ಸಾರಾಂಶ

    ವೇದಾಂತ ಕೃತಿಯ ತಿರುಳನ್ನು ಈ ರೀತಿಯಾಗಿ ಪ್ರಚುರಪಡಿಸಬಹುದು:

ಮೊದಲನೆಯ ಅಧ್ಯಾಯ

    ವಿವಿಧ ಉಪನಿಷತ್ತುಗಳಲ್ಲಿ ಉಕ್ತವಾಗಿರುವ ಹಲವಾರು ತತ್ವಗಳನ್ನು ಸಮನ್ವಯಗೊಳಿಸಿರುವುದರಿಂದ ಮೊದಲನೆಯ ಅಧ್ಯಾಯವನ್ನು 'ಸಮನ್ವಯಾಧ್ಯಾಯ' ಎಂದು ಕರೆದಿದ್ದಾರೆ. ಈ ಅಧ್ಯಾಯವು ೩೯ ಅಧಿಕರಣಗಳುಳ್ಳ ೧೩೪ ಸೂತ್ರಗಳನ್ನೊಳಗೊಂಡಿದೆ.

    ಈ ಕೃತಿಯು "ಅಥತೋ ಬ್ರಹ್ಮಜಿಜ್ಞಾಸ" ಎನ್ನುವ ಪ್ರಸಿದ್ಧ ನುಡಿಯಿಂದ ಪ್ರಾರಂಭವಾಗುತ್ತದೆ (ಈಗ, ಆದ್ದರಿಂದ ಬ್ರಹ್ಮನನ್ನು ಅರಿಯುವ ಮಹದಾಸೆಯಿಂದ). ಬ್ರಹ್ಮವನ್ನು ಅರಿಯುವುದರಿಂದ ಅದು ನಮ್ಮನ್ನು ಜನನ-ಮರಣಗಳ ಚಕ್ರದಿಂದ ಬಿಡುಗಡೆಗೊಳಿಸಿ ಮೋಕ್ಷ ಅಥವಾ ಅಪವರ್ಗದೆಡೆಗೆ ಕೊಂಡೊಯ್ಯುವುದರಿಂದ ಬ್ರಹ್ಮದ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯ ಅವಶ್ಯಕತೆಯಿದೆ. ಈ ಬಗೆಯಾಗಿ ಬ್ರಹ್ಮದ ಮಹತ್ವವಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು; ಪ್ರಸಿದ್ಧವಾದ ಉಪನಿಷತ್ತುಗಳಲ್ಲಿ ಬ್ರಹ್ಮದ ಬಗ್ಗೆ ಉಲ್ಲೇಖವಿರುವ ಹಲವಾರು ವಿಷಯಗಳನ್ನು ಈ ಶಾಸ್ತ್ರಗ್ರಂಥವು ಚರ್ಚಿಸುತ್ತದೆ. ಬ್ರಹ್ಮನಿಂದಲೇ ಈ ಜಗತ್ತು ಉದ್ಭವವಾಗಿ, ಅವನಲ್ಲೇ ಅಂತರ್ಗತವಾಗಿದ್ದು ಮತ್ತು ಸೃಷ್ಟಿ ಚಕ್ರವು ಮುಗಿದ ಬಳಿಕ ಅವನಲ್ಲಿಯೇ ಲೀನವಾಗುತ್ತದೆ. ಬ್ರಹ್ಮನ ಬಗ್ಗೆ ನಮಗೆ ತಿಳಿವುಂಟುಮಾಡುವ ಅಥವಾ ಜ್ಞಾನವನ್ನು ಒದಗಿಸಲು ಇರುವ ಏಕೈಕ ಸಾಧನವೆಂದರೆ ಶ್ರುತಿ ಅಥವಾ ಉಪನಿಷತ್ತುಗಳು.

    ಬ್ರಹ್ಮವೊಂದೇ ಈ ಜಗತ್ತಿನ ಅಂತಿಮ ಕಾರಕನಾಗಿದ್ದು; ಸಾಂಖ್ಯರು ಪ್ರತಿಪಾದಿಸುವಂತೆ ಪ್ರಕೃತಿ ಅಥವಾ ಪ್ರಧಾನವು ಕಾರಣವಲ್ಲ; ಏಕೆಂದರೆ ಪ್ರಕೃತಿಯು ಜಡವಾದದ್ದು. ಒಂದು ಜಡವಸ್ತುವಿನ ಆಲೋಚನೆ ಅಥವಾ ಇಚ್ಛೆಯಿಂದ ಇಷ್ಟು ಪರಿಪೂರ್ಣವಾದ ವಿಶ್ವವನ್ನು ಸೃಷ್ಟಿಸಲು ಎಂದಿಗೂ ಸಾಧ್ಯವಿಲ್ಲ.

    ಈ ಬ್ರಹ್ಮನು ಆನಂದಮಯನು ಅಥವಾ ಪೂರ್ಣ ಸಂತೋಷದಿಂದ ತುಂಬಿರುವವನು. ಅವನು ಅದ್ವಿತೀಯನು ಮತ್ತು ಸರ್ವಾಂತರಯಾಮಿಯು. ಅವನು ಈ ವಿಶ್ವ ಹಾಗೂ ಜೀವಾತ್ಮರುಗಳಲ್ಲಿ ಅಂತರ್ಗತನಾಗಿರುವವನು. ಸೂರ್ಯ ಅಥವಾ ಆದಿತ್ಯನಲ್ಲಿ ಮತ್ತು ಕಣ್ಣಿನಲ್ಲಿರುವ ಬೆಳಕಾಗಿರುವವನು ಕೂಡ ಬ್ರಹ್ಮನೇ. ಅವನು ಆಕಾಶ, ಪ್ರಾಣ, ಭೂಮ ಮತ್ತು ಅಕ್ಷರ ಎನ್ನುವ ಹೆಸರಿನಿಂದಲೂ ಕರೆಯಲ್ಪಡುತ್ತಾನೆ. 'ಅಂಗುಷ್ಟ ಮಾತ್ರ ಪುರುಷ' (ಕೈಯ ಹೆಬ್ಬೆರಿಳಿನಷ್ಟು ಗಾತ್ರದವನು) ಎಂದು ಹೇಳಲ್ಪಟ್ಟಿರುವವನು ಜೀವಾತ್ಮ ಅಥವಾ ಪ್ರತ್ಯೇಕ ಆತ್ಮನಲ್ಲ ಅದೂ ಕೂಡ ಬ್ರಹ್ಮವೇ. ಆದ್ದರಿಂದ ಆತ್ಮ ಎನ್ನುವ ಶಬ್ದವೂ ಅವನನ್ನು ಕುರಿತೇ ಹೇಳಲ್ಪಟ್ಟಿದೆ.

    ಬಾದರಾಯಣನು ಆಶ್ಮರಾಥ್ಯ, ಔದುಲೋಮಿ ಮತ್ತು ಕಾಶಕೃತ್ಸ್ನ ಇವರ ಅಭಿಪ್ರಾಯಗಳನ್ನು ಈ ಅಧ್ಯಾಯದ ಮೊದಲನೇ ಪಾದದಲ್ಲಿ ಉಲ್ಲೇಖಿಸುತ್ತಾನೆ. ಆಶ್ಮರಾಥ್ಯನು, ಜೀವಾತ್ಮ ಮತ್ತು ಪರಮಾತ್ಮ(ಬ್ರಹ್ಮವು) ಒಂದೇ ಆಗಿದ್ದರೂ ಕೂಡ ಬೆಂಕಿ ಮತ್ತು ಅದರ ಕಿಡಿಯಂತೆ ಪ್ರತ್ಯೇಕವಾದವುಗಳು ಎನ್ನುತ್ತಾನೆ.  ಔದುಲೋಮಿಯು, ಆತ್ಮವು ಬಂಧನಕ್ಕೊಳಪಟ್ಟಾಗ (ಪ್ರಾಪಂಚಿಕ ಬಂಧನ) ಬ್ರಹ್ಮನಿಂದ ಪ್ರತ್ಯೇಕವಾಗಿರುತ್ತದೆ ಆದರೆ ಅದು ಮುಕ್ತಿಯನ್ನು (ಪ್ರಾಪಂಚಿಕತೆಯಿಂದ ಬಿಡುಗಡೆ) ಹೊಂದಿದಾಗ ಅದು ಬ್ರಹ್ಮದೊಂದಿಗೆ ಏಕವಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾನೆ. ಕಾಶಕೃತ್ಸ್ನನು, ಇದೇ ಬ್ರಹ್ಮವು ಜೀವಾತ್ಮವಾಗಿರುವುದರಿಂದ ಎರಡೂ ಒಂದೇ ಎಂದು ಹೇಳುತ್ತಾನೆ. ಹೀಗೆ  ಹಲವು ಕೃತಿಕಾರರ ಅಭಿಪ್ರಾಯಗಳನ್ನು ಕೊಟ್ಟರೂ ಕೂಡ ಬಾದರಾಯಣನು ತನ್ನದೇ ಆದ ಅನಿಸಿಕೆಯನ್ನು ವ್ಯಕ್ತಪಡಿಸುವುದಿಲ್ಲ.

    ಈ ಅಧ್ಯಾಯದ ಕಡೆಯ ಭಾಗವು ಬ್ರಹ್ಮವು ಈ ಜಗತ್ತಿನ  'ಉಪಾದಾನಕಾರಣ' (ವಸ್ತುತಃ ಕಾರಣನು ಅಂದರೆ ಸೃಷ್ಟಿ ರಚೆನೆಗೆ ಬೇಕಾದ ವಸ್ತುಗಳನ್ನು ಒದಗಿಸುವವನು) ಮತ್ತು 'ನಿಮಿತ್ತ ಕಾರಣನು' (ಸೃಷ್ಟಿ ರಚನೆಯನ್ನು ಕೈಗೊಳ್ಳುವವನು) ಎಂದು ಘೋಷಿಸುತ್ತದೆ.

ಎರಡನೆಯ ಅಧ್ಯಾಯ

    'ಅವಿರೋಧಾಧ್ಯಾಯ'ವೆಂದು ಹೆಸರಿಸಲ್ಪಟ್ಟಿರುವ ಈ ಅಧ್ಯಾಯವು ೪೭ ಅಧಿಕರಣಗಳಿಂದ ೧೫೭ ಸೂತ್ರಗಳನ್ನು ಹೊಂದಿದೆ. ವೇದಾಂತ ತತ್ವಕ್ಕೆ ಒದಗಬಹುದಾದ ಯಾವುದೇ ವಿಧವಾದ ಅವಿರೋಧವನ್ನು ತೊಡೆದು ಹಾಕುವ ದೃಷ್ಟಿಯಿಂದ ಇದು ರಚಿತವಾಗಿದೆ.

    ವೇದಾಂತವು ಸ್ಮೃತಿ(ಎರಡನೇ ಸಾಲಿನ ಶಾಸ್ತ್ರಗಳಾದ ಭಗವದ್ಗೀತೆ ಮತ್ತು ಆಪಸ್ತಂಭ ಧರ್ಮಸೂತ್ರ)ಗಳಿಗೆ ಮತ್ತು ತರ್ಕ (ಪರ್ಯಾಲೋಚನೆ ಮತ್ತು ಕಾರಣ) ಗ್ರಂಥಗಳಿಗೆ ವಿರುದ್ಧವಾಗಿಲ್ಲ. ಆದರೆ ಸಾಂಖ್ಯ ದರ್ಶನದ ಮತಕ್ಕೆ ವ್ಯತಿರೇಕವಾಗಿರುವುದು ಸುಳ್ಳಲ್ಲ.  ಉಪನಿಷತ್ತುಗಳಲ್ಲಿ ಸೃಷ್ಟಿಯ ಬಗ್ಗೆ ಉಲ್ಲೇಖವಾಗಿರುವ ವಿವಿಧ ಉದ್ಘೋಷಣೆಗಳಲ್ಲಿ ವೈರುಧ್ಯತೆಯಿಲ್ಲ; ಈ ವಿಷಯವನ್ನು ಸ್ಪಷ್ಟಪಡಿಸುವುದೇ ಈ ಅಧ್ಯಾಯದ ಬೋಧನೆಯಲ್ಲಿರುವ ಹೊಣೆಯಾಗಿದೆ.

    ಬಾದರಾಯಣನ ಕಾಲದಲ್ಲಿ ವೇದಾಂತ ಸಿದ್ಧಾಂತವನ್ನು ಒಪ್ಪಿಕೊಳ್ಳದ ಹಲವಾರು ಶಾಖೆಗಳಿದ್ದಾಗ್ಯೂ ಕೂಡ ಅದರಲ್ಲಿ ಸಾಂಖ್ಯವು ಅತ್ಯಂತ್ಯ ಪ್ರಬಲವಾಗಿತ್ತು. ಆದ್ದರಿಂದ ವೇದಾಂತೇತರರ ಅಭಿಪ್ರಾಯಗಳನ್ನು ಖಂಡಿಸುವಾಗ ಸಾಂಖ್ಯಕ್ಕೆ ವಿಶೇಷ ಗಮನವನ್ನು ಕೊಡಲಾಗಿದೆ.

    ಈ ಅಧ್ಯಾಯದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಹಲವಾರು ವಿಷಯಗಳಲ್ಲಿ, 'ಕಾರಣ(ಅಂತರ್ಗತವಾದದ್ದು) ಮತ್ತು ಕಾರ್ಯ(ಬಹಿರ್ಗತವಾದದ್ದು/ಹೊರಗೆ ಕಾಣಲ್ಪಡುವುದು)'ಕ್ಕೆ ಇರುವ ಸಂಭಂದದ ಕುರಿತಾಗಿ ವಿಶೇಷವಾಗಿ ಚರ್ಚಿಸಲ್ಪಟ್ಟಿದೆ. ಸಾಂಖ್ಯ ದರ್ಶನವು ಇದನ್ನು 'ಸತ್-ಕಾರ್ಯ-ವಾದ' ಎನ್ನುತ್ತದೆ ಅದು ಪ್ರತಿಪಾದಿಸುವುದೇನೆಂದರೆ, "ಕಾರ್ಯವು ಕಾರಣದಲ್ಲೇ ಅಡಗಿದೆ" (ಸತ್=ಇದೆ). ಅದು ಸೃಷ್ಟಿ ಕ್ರಿಯೆಯಲ್ಲಿ ಕೇವಲ ಅನಾವರಣೆಗೊಳ್ಳುತ್ತದೆಯೇ ಹೊರತು ಹೊಸದಾಗಿ ಉದ್ಭವಿಸುವುದಿಲ್ಲ; ಏಕೆಂದರೆ ನಿಜವಾದುದನ್ನು ನಿಜವಲ್ಲದ ವಸ್ತುವಿನಿಂದ ಸೃಷ್ಟಿಸಲಾಗದು. ಆದರೆ ವೈಶೇಷಿಕ ದರ್ಶನವು "ಅಸತ್-ಕಾರ್ಯ-ವಾದ" ಎಂದರೆ ಪೂರ್ವದಲ್ಲಿ ಇರದೇ ಇದ್ದದ್ದು (ಅಸತ್) ಈಗ ಹೊಸದಾಗಿ ಹೊರಹೊಮ್ಮುತ್ತದೆ ಎಂದು ಪ್ರತಿಪಾದಿಸುತ್ತದೆ.  ಮೊದಲನೆಯದರಲ್ಲಿ, ಕಾರ್ಯವು ಉಪಾದಾನ ಕಾರಣದಲ್ಲಿ (ವಸ್ತುತಃ ಕಾರಣದಲ್ಲಿ) ಅಡಗಿತ್ತು ಅಥವಾ ಅಂತರ್ಗತವಾಗಿತ್ತು ಎಂದು ತಿಳಿಸಿದರೆ; ಎರಡನೆಯದರಲ್ಲಿ ನಿಮಿತ್ತ ಕಾರಣ (ಆಯೋಜನೆಯ ಕಾರಣ)ವು ದೃಢವಾಗಿ ಹೇಳಲ್ಪಟ್ಟಿದೆ. ಬಾದರಾಯಣನು ಈ ಎರಡೂ ಅಭಿಪ್ರಾಯಗಳನ್ನು ಭಾಗಶಃ ಒಪ್ಪಿಕೊಂಡು, ಉಪನಿಷತ್ ವಾಕ್ಯಗಳ ಆಧಾರದ ಮೇಲೆ ಹೀಗೆ ಉದ್ಘೋಷಿಸುತ್ತಾನೆ, ಅದೇನೆಂದರೆ ಬ್ರಹ್ಮವು "ಅಭಿನ್ನಾನಿಮಿತ್ತ-ಉಪಾದಾನ-ಕಾರಣ"; ಅಂದರೆ ಬ್ರಹ್ಮವು ನಿಮಿತ್ತ ಕಾರಣವೂ ಹೌದು ಮತ್ತು ಉಪಾದಾನ ಕಾರಣವೂ ಹೌದು. ಆದ್ದರಿಂದ ಈ ಪ್ರಪಂಚವು ಬ್ರಹ್ಮನಿಂದ ಹೊರತಾಗಿಲ್ಲ (ಪ್ರತ್ಯೇಕವಾಗಿಲ್ಲ). ಈ ಪ್ರಪಂಚವು ಅನೇಕ ಜಡವಸ್ತುಗಳಿಂದ ಕೂಡಿದೆಯಾದ್ದರಿಂದ ಅದು ಚೈತನ್ಯ ಸ್ವರೂಪಿಯಾದ ಬ್ರಹ್ಮದಿಂದ ಸೃಷ್ಟಿಸಲ್ಪಟ್ಟಿಲ್ಲ ಎನ್ನುವ ಆಕ್ಷೇಪಣೆಯು ಸ್ವೀಕಾರಾರ್ಹವಲ್ಲ ಏಕೆಂದರೆ ಸಾಮಾನ್ಯ ಮನುಷ್ಯನಿಂದ ಗ್ರಹಿಸಲ್ಪಡಲಾಗದ ಇಂತಹ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಅಂತಿಮ ಪ್ರಮಾಣಗಳಾಗಿರುವ ಶ್ರುತಿಗಳು ಹೀಗೆಂದು ಸಾರುತ್ತವೆಯಾದ್ದರಿಂದ.

    ಬ್ರಹ್ಮನಿಗೆ ಈ ಸೃಷ್ಟಿಯ ರಚನೆಯ ಹಿಂದೆ ಯಾವುದೇ ಸ್ವಾರ್ಥದ ಉದ್ದೇಶವಿಲ್ಲ ಏಕೆಂದರೆ ಅವನು ಆತ್ಮತೃಪ್ತಿಯಿಂದ ಕೂಡಿದವನು. ಜೀವಿಗಳ ಕರ್ಮ ಅಥವಾ ಫಲಗಳಿಗನುಸಾರವಾಗಿ ನ್ಯಾಯವು ಕೊಡಮಾಡಲ್ಪಡುತ್ತದೆಯಾದ್ದರಿಂದ, ಈ ಸೃಷ್ಟಿಯಲ್ಲಿ ಯಾವುದೇ ರೀತಿಯ ಪಕ್ಷಪಾತ ಅಥವಾ ಕ್ರೂರತ್ವವು ಇಲ್ಲ. ಈ ಸೃಷ್ಟಿಯ ಮೂಲ ಉದ್ದೇಶವೇ ಜೀವಿಗಳನ್ನು ಆನಂದ ಅಥವಾ ಪರಮಸಂತೋಷದೆಡೆಗೆ ಸಾಗಲು ಸಹಾಯ ಮಾಡುವುದೇ ಆಗಿದೆ. ಈ ಪರಮಾನಂದವನ್ನು ಸ್ವಚ್ಛಿದಾನಂದ ಸ್ವರೂಪವಾದ ಬ್ರಹ್ಮದಲ್ಲಿ ಐಕ್ಯವಾಗುವುದರೊಂದಿಗೆ ಹೊಂದಬಹುದು.

    ಸಾಂಖ್ಯ ದರ್ಶನವಲ್ಲದೆ ಇತರೇ ಶಾಖೆಗಳಾದ ವೈಶೇಷಿಕ, ಬೌದ್ಧ, ಜೈನ, ಪಾಶುಪತ ಮತ್ತು ಭಾಗವತರಾದ 'ಪಾಂಚರಾತ್ರ'ರು ಇವುಗಳನ್ನೂ ಕೂಡ ಕೂಲಂಕುಷವಾಗಿ ಅಭ್ಯಸಿಸಿ ಅವನ್ನು ವೇದಾಂತ ದರ್ಶನದಲ್ಲಿ ಸ್ಪಷ್ಟವಾಗಿ ಅಲ್ಲಗಳೆಯಲಾಗಿದೆ.

ಮೂರನೆಯ ಅಧ್ಯಾಯ

    ಮೂರನೆಯ ಅಧ್ಯಾಯವಾದ 'ಸಾಧನಾಯಾಧ್ಯಾಯ'ವು ಅತೀ ಉದ್ದವಾಗಿದ್ದು, ೬೭ ಅಧಿಕರಣಗಳಲ್ಲಿ ಹರಡಲ್ಪಟ್ಟ ೧೮೬ ಸೂತ್ರಗಳಿಂದ ಕೂಡಿದೆ. ಹೀಗೆಂದು ಕರೆದಿದ್ದರೂ ಕೂಡ ಇದರಲ್ಲಿ ವೈವಿಧ್ಯಮಯವಾದ ವಿಷಯಗಳ ಚರ್ಚೆಯಿದೆ. ಸಾಧನಾಧ್ಯಾಯವೆಂದು ಕರೆಯಲ್ಪಟ್ಟಿದ್ದರೂ ಕೂಡ ಇದರಲ್ಲಿ ಹಲವು ವೈವಿಧ್ಯಮಯ ವಿಷಯಗಳನ್ನು ಎತ್ತಿಕೊಳ್ಳಲಾಗಿದೆ. ಅವುಗಳೆಂದರೆ; ಜನ್ಮಾಂತರದ ಮೂಲಕ ಆತ್ಮನು ಬೇರೊಂದು ದೇಹದೊಳಗೆ ಸೇರುವುದು, ಜೀವಿಯ ಕನಸಿನ-ಸೃಷ್ಟಿ, ಜೀವಿಯು  ಈಶ್ವರ ಅಥವಾ ಭಗವದಿಚ್ಛೆಯಂತೆ ತನ್ನ ಕರ್ಮಫಲಗಳನ್ನು ಅನುಭವಿಸುವುದು, ಉಪನಿಷತ್ತಿನಲ್ಲಿ ಹೇಳಲ್ಪಟ್ಟಿರುವ ಹಲವು ರೀತಿಯ ವಿದ್ಯೆಗಳು ಅಥವಾ ಧ್ಯಾನಪದ್ಧತಿಗಳು ಮತ್ತು ಅವುಗಳ ಬಗ್ಗೆ ಸ್ಪಷ್ಟನೆ, ಒಂದೇ ವಿದ್ಯೆಯ ಬಗ್ಗೆ ವಿವಿಧ ಉಪನಿಷತ್ತುಗಳು ಬೇರೆ ಬೇರೆ ರೀತಿಯಲ್ಲಿ ಹೇಳಿದ್ದನ್ನು ಸಮನ್ವಯಗೊಳಿಸುವುದು, ವೈದಿಕ ಕರ್ಮಗಳಿಂದ ಪ್ರಭಾವಿತನಾಗದೇ ಸ್ವತಂತ್ರನಾಗಿರುವ ಆತ್ಮ ಅಥವಾ ಬ್ರಹ್ಮದ ಬಗೆಗಿನ ಜ್ಞಾನ, ವಿವಿಧ ಆಶ್ರಮಗಳಿಗೆ (ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ) ವಿಧಿಸಲ್ಪಟ್ಟಿರುವ ಯಜ್ಞಯಾಗಾದಿ ವೈದಿಕ ಕ್ರಿಯೆಗಳ ಬಗ್ಗೆ ಕೆಲವೊಂದು ಸ್ಪಷ್ಟನೆಯನ್ನು ಕೊಡುವುದಲ್ಲದೇ ಪ್ರಾಯಶ್ಚಿತ್ತ (ಮಾಡಿದ ತಪ್ಪಿಗೆ ಪರಿಹಾರವಾಗಿ ಕೈಗೊಳ್ಳುವ ವೈಧಿಕ ಕ್ರಿಯೆ) ಕುರಿತಾದ ಪ್ರಸ್ಥಾವನೆ, ಮೊದಲಾದವು.

ನಾಲ್ಕನೆಯ ಅಧ್ಯಾಯ

    'ಫಲಾಧ್ಯಾಯ'ವೆಂದು ಕರೆಯಲ್ಪಡುವ ಈ ಅಧ್ಯಾಯವು ಅತೀ ಚಿಕ್ಕದಾಗಿದ್ದು ೩೮ ಅಧಿಕರಣಗಳಿಂದ ಕೂಡಿದ ಇದರಲ್ಲಿ ಕೇವಲ ೭೮ ಸೂತ್ರಗಳು ಹೇಳಲ್ಪಟ್ಟಿವೆ.  ಮರಣಾನಂತರ ಜೀವವು; ಬೆಳಕಿನ ಪಥ ಅಥವಾ ದೇವ ಮಾರ್ಗವೆಂದು ಕರೆಯಲ್ಪಡುವ 'ಅರ್ಚಿರಾದಿಮಾರ್ಗ' ಅಥವಾ 'ದೇವಯಾನ'ದ ಮೂಲಕ ಬ್ರಹ್ಮಲೋಕಕ್ಕೆ ಕೈಗೊಳ್ಳುವ  ಯಾತ್ರೆಯ ಕುರಿತಾಗಿ ಇದರಲ್ಲಿ ಪ್ರಮುಖವಾಗಿ ಚರ್ಚಿಸಲ್ಪಟ್ಟಿದೆ.

    ಯಾವನು ಮೋಕ್ಷಕಾಮಿಯಾಗಿರುತ್ತಾನೋ ಅಥವಾ ಮುಕ್ತನಾಗ ಬಯಸುತ್ತಾನೋ ಅವನು ಶ್ರವಣ (ಶ್ರುತಿಗಳಲ್ಲಿ ಹೇಳಲ್ಪಟ್ಟಿರುವ ಆತ್ಮ/ಬ್ರಹ್ಮದ ಕುರಿತಾಗಿ ಬಲ್ಲವರಿಂದ ತಿಳಿದುಕೊಳ್ಳುವುದು) ಮೊದಲಾದ ಸಾಧನೆಗಳನ್ನು ಬ್ರಹ್ಮ ಸಾಕ್ಷಾತ್ಕಾರವಾಗುವವರೆಗೆ ಅಭ್ಯಾಸ ಮಾಡಬೇಕು. ಉಪನಿಷತ್ತುಗಳಲ್ಲಿ ಪ್ರಚುರಿತವಾಗಿರುವ ವಿವಿಧ ರೀತಿಯ ಉಪಾಸನೆಗಳು ಅಥವಾ ಧ್ಯಾನದ ವಿಧಾನಗಳು ಜೀವಿಯನ್ನು ಮೋಕ್ಷ ಸಾಧನೆಯೆಡೆಗೆ ಕೊಂಡೊಯ್ಯುತ್ತವೆ. ಬ್ರಹ್ಮಜ್ಞಾನವನ್ನು ಹೊಂದಿದ ನಂತರ 'ಸಂಚಿತ ಕರ್ಮ'ವು (ಜನ್ಮಾಂತರಗಳಿಂದ ಸಂಚಯ/ಶೇಖರಗೊಂಡ ಕರ್ಮ) ನಾಶವಾಗುತ್ತದೆ. ಸಾಕ್ಶಾತ್ಕಾರದ ನಂತರ ಮಾಡುವ 'ಆಗಾಮಿ ಕರ್ಮ'ವು ಯಾವುದೇ ಫಲವನ್ನು ನೀಡುವುದಿಲ್ಲ. ಈಗ ಹೊಂದಿರುವ ದೇಹಕ್ಕೆ ಕಾರಣವಾದ 'ಪ್ರಾರಬ್ಧ ಕರ್ಮ'ವನ್ನು ಅನುಭವಿಸುವುದರ ಮೂಲಕವಷ್ಟೇ ಕಳೆದುಕೊಳ್ಳಬಹುದು.

    ಯಾವ ಜೀವಿಯು ಕಠಿಣ ಆಧ್ಯಾತ್ಮಿಕ ಸಾಧನೆಗಳಾದ 'ತಪಸ್' (ನಿಯಮ ಬದ್ಧ ಜೀವನ), 'ಶ್ರದ್ಧಾ' (ಅಚಲವಾದ ನಂಬಿಕೆ) ಮತ್ತು 'ಬ್ರಹ್ಮಚರ್ಯ' (ಇಂದ್ರಿಯ ನಿಗ್ರಹ), ಅದಲ್ಲದೆ ಬ್ರಹ್ಮನ ಕುರಿತಾದ ಧ್ಯಾನ ಮೊದಲಾದ ವಿದ್ಯೆಗಳನ್ನು ಕೈಗೊಳ್ಳುವನೋ, ಅವನು ಮರಣಾನಂತರ ಬೆಳಕು, ಹಗಲು, ಶುಕ್ಲ ಪಕ್ಷ ಮೊದಲಾವುಗಳಿಂದ ಕೂಡಿದ 'ಅರ್ಚಿರಾದಿಮಾರ್ಗ' ಅಥವಾ 'ಬೆಳಕಿನ ಪಥ'ದ ಮೂಲಕ ಬ್ರಹ್ಮಲೋಕವನ್ನು ಸೇರಿ ಅಲ್ಲಿಂದ ಹಿಂತಿರುಗುವುದಿಲ್ಲ. 

    ಅರ್ಚಿರಾದಿಮಾರ್ಗದ ವಿವರಣೆಯಲ್ಲಿ ಕಂಡು ಬರುವ ಕೆಲವು ನ್ಯೂನ್ಯತೆಗಳನ್ನು ಸರಿಯಾದ ನಿಷ್ಕರ್ಷೆ ಹಾಗೂ ಚರ್ಚೆಯ ಮೂಲಕ ಈ ಅಧ್ಯಾಯದಲ್ಲಿ ಸರಿಪಡಿಸಲಾಗಿದೆ.

    ವೇದಾಂತ ದರ್ಶನವು "ಅನಾವೃತ್ತಿಃ ಶಬ್ದಾತ್" (ಇದರಿಂದ ಹಿಂತಿರುಗುವುದಿಲ್ಲ, ಏಕೆಂದರೆ ಶ್ರುತಿಗಳು ಹಾಗೆ ಸಾರುತ್ತವಾದ್ದರಿಂದ) ಎನ್ನುವ ಉದ್ಘೋಷವನ್ನು ಒತ್ತು ಕೊಡುವ ಉದ್ದೇಶದಿಂದ ಎರಡು ಬಾರಿ ಪುನರುಚ್ಛರಿಸಿ ಕೊನೆಗೊಳ್ಳುತ್ತದೆ; ಅಂದರೆ ಜೀವಿಯು ಬ್ರಹ್ಮಲೋಕದಿಂದ ಈ ಐಹಿಕ ಜೀವನಕ್ಕೆ ಹಿಂತಿರುಗುವುದಿಲ್ಲ. ಮುಕ್ತ ಪುರುಷ ಅಥವಾ ಬಂಧಮುಕ್ತನಾದ ಆತ್ಮ ಇವುಗಳ ವಿವರಣೆಯೂ ಸೂಕ್ತ ಸಂದರ್ಭಗಳಲ್ಲಿ ನಮಗೆ ವೇದಾಂತ ದರ್ಶನದಲ್ಲಿ ದೊರಕುತ್ತವೆ. ಈ ವಿಷಯಗಳಲ್ಲಿ ಜೈಮಿನಿ, ಔದುಲೋಮಿ ಮತ್ತು ಬಾದರಿ ಇವರ ಅಭಿಪ್ರಾಯಗಳನ್ನೂ ಇದರಲ್ಲಿ ಉಲ್ಲೇಖಿಸಲಾಗಿದೆ.

ಮುಂದುವರೆಯುವುದು..........................
=============================================================================================
ವಿ.ಸೂ.:ಇದು ಸ್ವಾಮಿ ಹರ್ಷಾನಂದ ವಿರಚಿತ "The six systems of Hindu Philosophy - A Primer"ಯಲ್ಲಿಯ Vedanta Darshanaನದ ೮೦.೬ ರಿಂದ ೮೭ನೆಯ ಪುಟದ ಅನುವಾದದ ಭಾಗ.

==============================================================================================
 

Rating
No votes yet

Comments