ನೀವ್ ಏನ್ ಹೇಳ್ತೀರಾ ? ಪುರಸ್ಕಾರ ತಿರಸ್ಕಾರ ಹಾಗು ನಿರ್ಲಕ್ಷ

ನೀವ್ ಏನ್ ಹೇಳ್ತೀರಾ ? ಪುರಸ್ಕಾರ ತಿರಸ್ಕಾರ ಹಾಗು ನಿರ್ಲಕ್ಷ

ಪುರಸ್ಕಾರ ತಿರಸ್ಕಾರ ಹಾಗು ನಿರ್ಲಕ್ಷ ಯಾವುದೆ ಕೆಲಸಕ್ಕೆ ಪ್ರತಿಫಲದ ನಿರೀಕ್ಷೆ ಮಾಡದಿರು. ಕೇವಲ ಕರ್ತ್ಯವ್ಯವೆಂದು ಬಗೆದು ನಿನ್ನ ಕೆಲಸವನ್ನು ಮಾಡು ಎಂದು ಭಗವದ್ಗೀತೆಯ ನುಡಿ ನಮಗೆ ನಿರ್ದೇಶಿಸುತ್ತದೆ. ಈ ತತ್ವವನ್ನು ನಾವು ಒಪ್ಪಿಕೊಳ್ಳಲೆ ಬೇಕು ಏಕೆಂದರೆ ಅದರಲ್ಲಿ ಸತ್ಯವಿದೆ. ಆದರೆ ನಿಜವಾಗಿ ಆಚರಣೆಯಲ್ಲಿ ಇದನ್ನು ತರಲು ಸಾದ್ಯವೆ?. ನಾವು ಮಾಡುವ ಪ್ರತಿಕೃತಿಯ ಹಿಂದೆ ಸಹ ಯಾವುದೊ ಒಂದು ನಿರೀಕ್ಷೆ ಇರುತ್ತದೆ. ಸಣ್ಣದೊಂದು ಸಂಗತಿ ನೆನಪಿಸಿಕೊಳ್ಳಿ ಮನೆಯಲ್ಲಿರುವ ನಿಮ್ಮ ಮಗುವಿಗೆ ಚಾಕಲೇಟ್ ತೆಗೆದುಕೊಂಡು ಹೋಗುವಿರಿ, ಕಡೆಗೆ ಮಗುವಿನ ಮುಖದಲ್ಲಿ ನಗುವೊಂದರ ನಿರೀಕ್ಷೆ ಮಾಡುವಿರಿ. ಹಾಗೆ ಪತ್ನಿಗೆ ಎರಡು ಮೊಳ ಹೂವು ಕೊಂಡೋಯ್ದರು ಸಣ್ಣದೊಂದು ಪ್ರಸನ್ನತೆಯ ನಗುವಿನ ನಿರೀಕ್ಷೆ. ಹಾಗಿರುವಾಗ ಯಾವುದೊ ಪ್ರತಿಫಲವಿಲ್ಲದೆ ಕೆಲಸಮಾಡುವೆವು ಎಂಬ ಭಾವವೇಕೆ. ಈ ಪ್ರಸಂಗ ಏಕೆ ಬಂತೆಂದರೆ ಮೊದಲು ಶ್ರೀ ಹರಿಹರಪುರದ ಶ್ರೀಧರರ ' ಇಂತ ಪುಣ್ಯಾತ್ಮರು ಈಗಲು ಇದ್ದಾರೆ' ಎಂಬ ಲೇಖನದ ಪ್ರತಿಕ್ರಿಯೆ ಹಾಕುವಾಗ. ಮತ್ತೆ ಕುಮಾರ್ ಹಾಸನ ಇವರ 'ಮಳೆಯ ಸದ್ದು ..ಮುಕ್ತಾಯ'ದ ಪ್ರತಿಕ್ರಿಯೆಯನ್ನು ಓದುವಾಗ. ನಾವು ಮಾಡುವ ತೀರ ಸ್ವಂತದ್ದಲ್ಲದ ಪ್ರತಿಕೆಲಸದಲ್ಲು ನಮ್ಮಲ್ಲಿ ಅಂತರ್ಗತವಾಗಿ ಪ್ರತಿಫಲದ ನಿರೀಕ್ಷೆ ಇದ್ದೆ ಇರುತ್ತದೆ. ಸಾದಾರಣವಾಗಿ ಎಲ್ಲರಲ್ಲಿ ಇರುವುದು ಪುರಸ್ಕಾರದ ನಿರೀಕ್ಷೆಯೆ, ಸಹಜವಾಗಿ ಇರುತ್ತದೆ. ಆದರೆ ಕೆಲವೊಮ್ಮೆ ನಮ್ಮ ನಿರೀಕ್ಷೆಗೆ ವಿರುದ್ದವಾಗಿ ತಿರಸ್ಕಾರ ಅಥವ ಖಂಡನೆ ದೊರೆಯುತ್ತದೆ. ಆಗೆಲ್ಲ ನಮಗೆ ಅನ್ನಿಸುತ್ತದೆ 'ಅಯ್ಯೊ ನನಗೆ ಈ ಉಸಾಬರಿ ಏಕೆ ಬೇಕಿತ್ತು, ಕೇಳದೆ ಯಾರಿಗು ಉಪಕಾರ ಮಾಡಲು ಹೋಗಬಾರದು, ಗಾದೆ ಗೊತ್ತಿರುವುದೆ ಕರೆಯದೆ ಬರುವವನ... ' ಹೀಗೆಲ್ಲ ಗೋಳಾಡುತ್ತೆವೆ. ಅಲ್ಲವೆ?. ಆದರೆ ಒಮ್ಮೆ ಅನ್ನಿಸುತ್ತದೆ ಈ ಪುರಸ್ಕಾರ ತಿರಸ್ಕಾರ ಅಥವ ಮಂಡನೆ ಖಂಡನೆಗಳಲ್ಲಿ ಜೀವವಿರುತ್ತದೆ ಎಂದು. ನಾವು ಅಭಿಪ್ರಾಯ ವ್ಯಕ್ತಪಡಿಸುವಾಗ ನಮ್ಮನ್ನು ಯಾರಾದರು ಅನುಮೋದಿಸಿದರೆ ಅಥವ ನೀವು ಮಾಡಿದ್ದು ತುಂಬಾ ಸರಿ ಎಂದು ಬೆನ್ನು ತಟ್ಟಿದರೆ ಅಗ ನಮ್ಮೊಳಗೆ ಖುಷಿಯೊ ಖುಷಿ. ಬದಲಾಗಿ ವಿರೋದ ಬಂದಿತೊ, ನಮ್ಮ ಮನಸಿಗೆ ವಿರುದ್ದವಾಗಿ ಅಭಿಪ್ರಾಯ ಬಂದಿತೊ ಆಗ ನಮಗೆ ಅರಿವಿಲ್ಲದೆ ನಮ್ಮ ಮನ ಮುದುಡುತ್ತದೆ. ಮುಖ ಚಿಕ್ಕದಾಗುತ್ತದೆ ಅಥವ ಅಭಿಮಾನ ಭಂಗವಾದರಂತು ಭಯಂಕರ ಕೋಪವೆ ಬಂದುಬಿಡುತ್ತದೆ. ಆದರು ಕೆಲವೊಮ್ಮೆ ಅನ್ನಿಸುತ್ತದೆ ನಿರ್ಲಕ್ಷಕ್ಕಿಂತ ಈ ತಿರಸ್ಕಾರ ಅಥವ ಖಂಡನೆಯೆ ಪರವಾಗಿಲ್ಲ ನಮ್ಮ ಮನಸ್ಸು ಜೀವಂತವಾಗಿರುತ್ತದೆ ಎಂದು. ನಮ್ಮ ಅಭಿಪ್ರಾಯಗಳಿಗೆ ಅಥವ ಕೆಲಸಗಳಿಗೆ ಒಮ್ಮೆ ತೀವ್ರ ನಿರ್ಲಕ್ಷದ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಅದು ತುಂಬಾನೆ ಹಿಂಸೆ. ನಾಲ್ವರು ಮಾತನಾಡುತ್ತ ಕುಳಿತಿದ್ದಾರೆ ಅಂದುಕೊಳ್ಳಿ , ಮೂವರ ಮಾತಿನ ನಡುವೆ ನಿಮ್ಮ ಮಾತನ್ನು ಯಾರು ಕೇಳಿಸಿಕೊಳ್ಳುತ್ತಿಲ್ಲ, ಅಥವ ನೀವು ಮಾತನಾಡುವಾಗಲು ನಿರ್ಲಕ್ಷ ಮಾಡಿ ಅದಕ್ಕೆ ಯಾವ ಬೆಲೆಯು ಕೊಡದೆ ಅವರ ಪಾಡಿಗೆ ಅವರು ಮಾತು ಮುಂದುವರೆಸಿದರೆ ನಿಮಗೆ ಆಗ ಕೋಪ ಬರುವದಿಲ್ಲ ಬದಲಿಗೆ ಮನಸು ಮುದುಡಿ ಹೋಗುತ್ತದೆ, ಅಥವ ಮನಸ್ಸು ಸತ್ತಂತೆ ಅನಿಸುತ್ತದೆ ಅಲ್ಲವೆ. ಹಾಗಾಗಿ ನಮ್ಮ ಯಾವುದೆ ಕೃತಿಗೆ ನಾವು ಪ್ರಥಮವಾಗಿ ಪುರಸ್ಕಾರವನ್ನು ನಿರೀಕ್ಷಿಸುತ್ತೇವೆ ಹೋಗಲಿ ತಿರಸ್ಕಾರ ಖಂಡನೆ ಇದ್ದರು ಪರವಾಗಿಲ್ಲ ಆದರೆ ನಿರ್ಲಕ್ಷವನ್ನು ಸಹಿಸಲಾಗುವದಿಲ್ಲ. ನಾನಂತು ತಿರಸ್ಕಾರ ನಿರ್ಲಕ್ಷದ ನಡುವೆ ತಿರಸ್ಕಾರವನ್ನೆ ಸ್ವಾಗತಿಸುತ್ತೇನೆ. ಈ ವಾದಗಳ ಹಿನ್ನಲೆಯಲ್ಲಿ ಸಂಪದದಲ್ಲಿ ನಾವು ಬರೆಯುವ ಯಾವುದೆ ಬರಹಗಳನ್ನು ನೋಡಿ. ಕೆಲವೊಮ್ಮೆ ಪ್ರತಿಕ್ರಿಯೆಗಳಿಲ್ಲ ಎಂದು ಬೇಸರ ಪಡುತ್ತಾರೆ, ಅಲ್ಲಿ ಪುರಸ್ಕಾರದ ನಿರೀಕ್ಷೆ ಇರುತ್ತದೆ, ಆದರೆ ಕೆಲವೊಮ್ಮೆ ನಾವು ಬರೆಯುವ ಲೇಖನದ ವಸ್ತುವು ಯಾರಿಗೋ ಹಿಡಿಸದೆ ಖಂಡನೆಯು ಬರಬಹುದು. ಎಲ್ಲವು ಸ್ವಾಗತವೆ. ಆದರೆ ಮತ್ತೊಂದು ಸಂದರ್ಭ ಊಹಿಸಿಕೊಳ್ಳಿ,. ನಾವು ಹದಿನೈದು ದಿನ ಶ್ರಮವಹಿಸಿ ಬರೆದು ಲೇಖನವನ್ನೊ ಕಥೆಯನ್ನೊ ಸಂಪದದಲ್ಲಿ ಮೇಲೆರಿಸಿದಿವಿ ಅಂದುಕೊಳ್ಳಿ. ಅದಕ್ಕೆ ಒಂದೆ ಒಂದು 'ಹಿಟ್ಸ್' (ಅದು ನಮ್ಮ ಬೆನ್ನು ನಾವೆ ತಟ್ಟಿರುವುದು) ಮತ್ತು ಯಾವುದೆ ಪ್ರತಿಕ್ರಿಯೆ ಇಲ್ಲ ಅಂದುಕೊಂಡರೆ ಮನಸಿಗೆ ಘಾಸಿ ಎನಿಸುತ್ತದೆ ಅಲ್ಲವೆ. ಈಗ ನೀವು ಏನ್ ಹೇಳ್ತೀರ ಪುರಸ್ಕಾರ ತಿರಸ್ಕಾರ ಮತ್ತು ನಿರ್ಲಕ್ಷಗಳಲ್ಲಿ ನೀವು ಯಾವ ಒಂದನ್ನು ಬೇಡ ಎನ್ನುತೀರ?
Rating
No votes yet

Comments