ಚಿತ್ರಗುಪ್ತ....ಹೀಗೆ ಇರಬಹುದೇ!?
ನಾವು ಏನನ್ನಾದರೂ ಯೋಚಿಸುತ್ತೇವೆ. ಇನ್ನೊಬ್ಬರನ್ನು ದ್ವೇಷಿಸುತ್ತೇವೆ, ಪ್ರೀತಿಸುತ್ತೇವೆ, ಅವರ ಗುಣಗಳನ್ನು ಪದೇಪದೇ ನಮ್ಮ ಮನಃಪಟಲದ ಮೇಲೆ ತಂದುಕೊಳ್ಳುತ್ತೇವೆ. ಆಗಾಗ ಅದನ್ನು ಜ್ಞಾಪಿಸಿಕೊಳ್ಳುತ್ತೇವೆ. ಅಂದರೆ ನಾವು ಯೋಚಿಸಿದ್ದೆಲ್ಲವೂ ನಮ್ಮ ಸೂಕ್ಷ್ಮ ಶರೀರದಲ್ಲಿ ಗುಪ್ತವಾಗಿ ಚಿತ್ರಿಸಲ್ಪಟ್ಟಿರುತ್ತದೆ.(ಪಿಕ್ಚರೈಸೇಷನ್ ). ಹೀಗೆ ಗುಪ್ತವಾಗಿ ಚಿತ್ರಿಸಲ್ಪಟ್ಟಿರುವುದನ್ನೇ "ಚಿತ್ರಗುಪ್ತ" ಎಂದು ಕರೆಯಬಹುದು. ನಮ್ಮ ಸ್ಥೂಲಶರೀರದಲ್ಲಿ ನಾವು ಏನಾಗಿರುತ್ತೇವೆಯೋ ಸೂಕ್ಷ್ಮ ಶರೀರದಲ್ಲಿ ಅದಾಗಿರುವುದಿಲ್ಲ. ನಾವು ಯಾವ ಆಲೋಚನೆಯನ್ನು ಯಾರ ಬಗ್ಗೆ ಮಾಡುತ್ತಿರುತ್ತೇವೆಯೋ ಅವರಗುಣಗಳ ಚಿತ್ರಣ ನಮ್ಮಲ್ಲಿ ಮೂಡಿರುತ್ತದೆ. ನಾವು ಒಳ್ಳೆಯದನ್ನೇ ಮಾಡುತ್ತಿದ್ದರೂ ಇನ್ನೊಬ್ಬರ ಕೆಟ್ಟಗುಣಗಳನ್ನು ಮನನ ಮಾಡಿಕೊಳ್ಳುತ್ತಿದ್ದರೆ ಸೂಕ್ಷ್ಮಶರೀರದಲ್ಲಿ ನಾವು ಕೆಟ್ಟವರೇ ಆಗಿರುತ್ತೇವೆ. ಇದಕ್ಕೆ ಒಂದು ದೃಷ್ಟಾಂತವನ್ನು ಕೊಡಬಹುದು. ಒಂದು ಬೆಕ್ಕು ಇಲಿಯನ್ನು ಭೇಟೆಯಾಡಲು ಮನಸ್ಸಿನ ತುಂಬಾ ಇಲಿಯ ರೂಪ, ಅದರ ಓಡಾಟ, ಗುಣ ಮೊದಲಾದವುಗಳನ್ನು ಚಿತ್ರಿಸಿಕೊಂಡು ಅದರ ಒಳಮನಸ್ಸು "ಇಲಿ" ಆಗಿರುತ್ತದೆ. ಅದೇ ರೀತಿ ಬೆಕ್ಕಿನಿಂದ ತಪ್ಪಿಸಿಕೊಳ್ಳಲು ಇಲಿ ಬೆಕ್ಕಿನ ರೂಪ. ಅದರ ಓಡಾಟ, ಗುಣ ಮೊದಲಾದವುಗಳನ್ನು ಚಿತ್ರಿಸಿಕೊಂಡು ಅದರ ಒಳಮನಸ್ಸು "ಬೆಕ್ಕು" ಆಗಿರುತ್ತದೆ. ಸ್ಥೂಲಶರೀರದ ಅವಸಾನದನಂತರ ಬೆಕ್ಕು ಇಲಿಯಾಗುತ್ತದೆ, ಇಲಿ ಬೆಕ್ಕಾಗುತ್ತದೆ. ಇದು ಕಲ್ಪನೆ. ಆದುದರಿಂದ ನಾವು ಯಾವುದನ್ನು ಚಿಂತಿಸುತ್ತೇವೆಯೋ ಅದೇ ಚಿತ್ರಗುಪ್ತ ಬರೆಯಲ್ಪಟ್ಟ ಚಿತ್ರಣ. ಅಂದರೆ ನಾವು ಸದಾ ಒಳ್ಳೆಯದನ್ನೇ ಚಿಂತಿಸಬೇಕು ಎಂಬುದು ವಿದಿತವಾಯಿತು. ಆದರೆ ಇನ್ನೊಂದು ವಿಚಾರ. ನಾವು "ಒಳ್ಳೆಯದು" ಎಂದು ಯಾವುದನ್ನಾದರೂ ತೀರ್ಮಾನ ಮಾಡಬೇಕಾದರೆ "ಕೆಟ್ಟದ್ದು " ಯಾವುದು ಎಂಬ ತಿಳುವಳಿಕೆ ನಮಗೆ ಇರಬೇಕು. ಅಂದರೆ ಕೆಟ್ಟದ್ದೂ ಕೂಡ ನಮ್ಮೊಳಗೇ ಇದೆ ಎಂದಾಯಿತು. ಒಳ್ಳೆಯ ಚಿಂತನೆಯಿಂದ ಮನಸ್ಸಿನಲ್ಲಾಗುವ ಅಲೆ ಅದರ ವಿರುದ್ಧ ಅಲೆಯನ್ನೂ ಹುಟ್ಟು ಹಾಕಿರುತ್ತದೆ. ಆದುದರಿಂದಲೇ ಪಾಪ ಮಾಡಿದರೂ ಪುನರ್ಜನ್ಮ ಇದೆ, ಪುಣ್ಯ ಮಾಡಿದರೂ ಪುನರ್ಜನ್ಮ ಇದೆ ಎಂದು ಮಹಾತ್ಮರು ಹೇಳುತ್ತಾರೆ. ಪಾಪಪುಣ್ಯಗಳೆರಡನ್ನೂ ಮಾಡಬಾರದೆಂದರೆ ನಾವು ಮನಸ್ಸಿನಲ್ಲಿ "ಒಳ್ಳೆಯದು-ಕೆಟ್ಟದ್ದು, ಗುಣ-ದೋಷ, ಸುಖ-ದುಃಖ, ರಾಗ-ದ್ವೇಷ" ಮೊದಲಾದ ವಿಚಾರಗಳಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬಾರದು. ತೀರ್ಮಾನರಹಿತ ಮನಸ್ಸಿನಲ್ಲಿ ವಿರುದ್ಧ ಅಲೆಗಳು ಏಳುವುದಿಲ್ಲ. ಚಿತ್ರಗುಪ್ತ ಗುಪ್ತವಾಗಿ ಚಿತ್ರಿಸಿಕೊಳ್ಳುವುದನ್ನು ನಿಲ್ಲಿಸುತ್ತಾನೆ. ಆದರೆ ಇದೆಲ್ಲಾ ಸಾಧ್ಯವೇ? ಸಾಧ್ಯಾಸಾಧ್ಯದ ಚಿಂತನೆ ಓದುಗರಿಗೆ ಬಿಟ್ಟಿದೆ. ಪಾಪಪುಣ್ಯ, ಜನ್ಮಾಂತರ ಹಾಗೂ ಈ ಸಿದ್ಧಾಂತದ ಬಗೆಗೆ ಯಾವುದೇ ಪೂರ್ವಾಗ್ರಹವಿಲ್ಲ.
Comments
ಉ: ಚಿತ್ರಗುಪ್ತ....ಹೀಗೆ ಇರಬಹುದೇ!?
In reply to ಉ: ಚಿತ್ರಗುಪ್ತ....ಹೀಗೆ ಇರಬಹುದೇ!? by kavinagaraj
ಉ: ಚಿತ್ರಗುಪ್ತ....ಹೀಗೆ ಇರಬಹುದೇ!?
In reply to ಉ: ಚಿತ್ರಗುಪ್ತ....ಹೀಗೆ ಇರಬಹುದೇ!? by Prakash Narasimhaiya
ಉ: ಚಿತ್ರಗುಪ್ತ....ಹೀಗೆ ಇರಬಹುದೇ!?
ಉ: ಚಿತ್ರಗುಪ್ತ....ಹೀಗೆ ಇರಬಹುದೇ!?
ಉ: ಚಿತ್ರಗುಪ್ತ....ಹೀಗೆ ಇರಬಹುದೇ!?