ಬದುಕು...........ಒಂದಷ್ಟು ಹರಟೆ

ಬದುಕು...........ಒಂದಷ್ಟು ಹರಟೆ

When I am happy, I see the happiness in others. When I am depressed, I notice that people's eyes look sad.
When I am weary, I see the world as boring and unattractive.
- Steve Chandler -

 
                      ಈ ಬದುಕನ್ನು  ಒಂದು ರೀತಿಯ ರಹಸ್ಯ, ವಿಚಿತ್ರ, ಸುಂದರ, ಅಸಹನೀಯ, ನಿರೀಕ್ಷೆ, ಇತ್ಯಾದಿಯಾಗಿ ಹಲವಾರು ವಿಚಾರವಂತರು ತಮ್ಮ ವಿಚಾರಗಳನ್ನು ಧಾಖಲಿಸಿದ್ದಾರೆ. ಪ್ರತಿಯೊಬ್ಬರೂ ಬದುಕನ್ನ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅರ್ಥಮಾಡಿಕೊಂಡು ಬದುಕುತ್ತಿದ್ದಾರೆ. ಸುಖ, ದುಃಖ, ನೋವು, ನಲಿವು, ಪ್ರೀತಿ, ದ್ವೇಷ, ರೋಗ,ಬಡತನ, ಸಿರಿತನ, ಇತ್ಯಾದಿ ಮಜಲುಗಳ ಮಧ್ಯೆ ಬದುಕು ಸವೆಯುತ್ತಿದೆ. ಬದುಕು ಕೆಲವರಿಗೆ ಅರ್ಥಪೂರ್ಣವೆನಿಸಿದರೆ ಕೆಲವರಿಗೆ ಅರ್ಥಹೀನ. ಕೆಲವರಿಗೆ ಸುಂದರ ಮತ್ತೆ ಕೆಲವರಿಗೆ ನಿರಾಶೆ.    "ಏಕೆ ಹೀಗೆ? ಹಾಗಾದರೆ ಬದುಕು ಎಂದರೆ ನಿಜವಾದ ಅರ್ಥದಲ್ಲಿ ಏನು?" ಎಂಬ ಪ್ರಶ್ನೆ ಯುವಕನೊಬ್ಬನ ಮನಸ್ಸಿನಲ್ಲಿ ಹುಟ್ಟಿತು. ಸಾಕಷ್ಟು ಯೋಚಿಸಿದ,ಸರಿಯಾದ  ಉತ್ತರ ಸಿಗಲಿಲ್ಲ.
                      ತನ್ನ ಸುತ್ತಲ ಪ್ರಪಂಚ ನೋಡುತ್ತಾ ಹೊರಟ.  ಎಲ್ಲರು ಬದುಕು ನಡೆಸುತ್ತಿರುವವರೇ, ಯಾರನ್ನು ಕೇಳುವುದು? ದಾರಿ ಮಧ್ಯದಲ್ಲಿ ಯುವಕ ಯುವತಿಯರ ತಂಡವನ್ನು ಕಂಡು ವಿಚಾರಿಸಿದ. " ಅಯ್ಯೋ , ಈಗಲೇ ಬದುಕಿನ ಚಿಂತೆ ಏಕೆ? ಮೊದಲು ಖುಷಿಯಾಗಿ ಬದುಕೋಣ."ಎಂದು ಮುಂದೆ ಸಾಗಿದರು. ನಂತರದಲ್ಲಿ ಒಬ್ಬ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರನ್ನು ಕಂಡು ಬದುಕಿನ ಬಗ್ಗೆ ವಿಚಾರಿಸಿದ. ಅವರು " ಈ ವರಗೆ ಬದುಕು ಹೀಗೆ ನಿರ್ಧಿಷ್ಟ  ಎಂದು ಹೇಳುವ ಯಾವ ಪುಸ್ತಕವನ್ನು ನಾನು  ಓದಿಲ್ಲ. ಹುಡುಕುತ್ತೇನೆ, ಸಿಕ್ಕರೆ ನಿನಗೆ ತಿಳಿಸುತ್ತೇನೆ." ಎಂದು ಜಾರಿಕೊಂಡ.
                      ಏನಿದು? ಬದುಕಿಗೆ ಅರ್ಥವೇ ಗೊತ್ತಿಲ್ಲದೇ ನಾವೆಲ್ಲಾ ಬದುಕುತ್ತೀದ್ದೆವೆಯೇ?  ಎಂದು ಯುವಕ ಚಿಂತೆಗೆ ಒಳಗಾದ. ನಿರಾಶನಾಗದೆ ಮಧ್ಯ ವಯಸ್ಕ ಸಂಸಾರಸ್ತನಲ್ಲಿ  ಬದುಕಿನ ಬಗ್ಗೆ ಕೇಳಿದ. " ನಾನು ಈಗಾಗಲೇ ಅರ್ಧ ಜೀವನ ಸವೆಸಿದ್ದೇನೆ, ಮಕ್ಕಳ ಜವಾಬ್ದಾರಿ ಇನ್ನು ಇದೆ. ನನ್ನದಾಗಿ ಒಂದು ಮನೆ ಇಲ್ಲ. ಸಂಸಾರದ ಜವಾಬ್ದಾರಿಯೆಲ್ಲ ಮುಗಿದಮೇಲೆ ಬದುಕಿನ ಬಗ್ಗೆ ಚಿಂತಿಸುತ್ತೇನೆ " ಎಂಬ ಉತ್ತರ ಬಂತು. ಕೊಂಚ ನಿರಾಶನಾದರು ಬದುಕಿನ ಬಗ್ಗೆ ತಿಳಿಯುವ ಕುತೂಹಲ ಜಾಸ್ತಿ ಇತ್ತು. ನಂತರದಲ್ಲಿ ತನಗೆ ಸಿಕ್ಕ ವಯೋವ್ರುದ್ದ ,ಸಂಗೀತಗಾರ , ರಾಜಕಾರಣಿ ಹೀಗೆ ಎಲ್ಲರಲ್ಲೂ ವಿಚಾರಿಸಿದ. ಯಾರಿಂದಲೂ ಸಮರ್ಪಕ ಉತ್ತರ ಸಿಗಲಿಲ್ಲ.
                     ಬೇಸರವಾಯಿತು, ನಿರ್ಜನ ಪ್ರದೇಶಕ್ಕೆ ಹೋಗಿ ಅಲ್ಲಿ ಗಿಡ ಮರ, ಹರಿಯುವ ನೀರು, ಹಸಿರು ನೆಲ, ಬೆಟ್ಟ ,ನೀಲಿ ಆಕಾಶ ಎಲ್ಲವನ್ನು ನೋಡಿದ ಮೇಲೆ   ಮನಸ್ಸು ಶಾಂತವಾಯಿತು. ಸ್ವಲ್ಪ ಸಮಯದ ನಂತರದ, ಹತ್ತಿರದಲ್ಲೇ ದ್ಯಾನಸಕ್ತನಾಗಿದ್ದ ಒಬ್ಬ ವಯೋವ್ರುದ್ದ  ಸನ್ಯಾಸಿಯಲ್ಲಿ  ಹೋಗಿ ಬದುಕಿನ ಬಗ್ಗೆ ತಿಳಿಸಲು ಪ್ರಾರ್ಥಿಸಿದ. ಸನ್ಯಾಸಿ ನಸುನಗುತ್ತ, " ಬದುಕು ಎಂದರೆ ಸವಿಜೇನು, ಬದುಕು ಎಂದರೆ ಸದಾಕಾಲ ಹರಿವ ನೀರು; ಬದುಕು ಎಂಬುದು ಸುಂದರ ಸಂಗೀತ; ಬದುಕು ಎಂದರೆ ಸುಂದರ,ಪರಮ ಪ್ರೇಮ ಹಾಗು ಭಕ್ತಿ. ಇದನ್ನು ಸರಿಯಾಗಿ ಅರ್ಥ ಮಾಡಿಕೊ, ಬದುಕಿನ ಅರ್ಥ ತಿಳಿಯುತ್ತದೆ. ನಂತರದಲ್ಲಿ ನಿನಗೆ ಅನುಭವವಾಗುತ್ತದೆ." ಎಂದು ಹೇಳಿದ. ನಮ್ಮ ಯುವಕನಿಗೆ ಹೆಚ್ಚು ಅರ್ಥವಾಗದ್ದಿದ್ದರು ಸಮಾಧಾನವಾಯಿತು. ನಮಸ್ಕರಿಸಿ ಹೊರಟ. 
                     ಹೌದು, ಬದುಕು ಎನ್ನುವುದಕ್ಕೆ ಇಂಥದೇ ಅರ್ಥ ಎನ್ನುವ ಯಾವ ನಿರ್ಧಿಷ್ಟ ಉತ್ತರ ಇಲ್ಲ. ಬದುಕಿನಲ್ಲಿ ಎಲ್ಲವು ಅನಿವಾರ್ಯಗಳೇ! ಯಾವುದರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿಸಿಕೊಳ್ಳುವ ಪ್ರಯತ್ನಕ್ಕಿಂತ ಎದುರಿಸುವ ಎದೆಗಾರಿಕೆ ತೋರಿದಲ್ಲಿ ಬದುಕು ಸಹ್ಯವೆನಿಸುತ್ತದೆ.ನಾವು ಹೇಗೆ ಭಾವಿಸುತ್ತೇವೋ ಹಾಗೆ ನಮಗೆ ಬದುಕು ಕಾಣುತ್ತದೆ. ಕಣ್ಣಿಗೆ ಬಣ್ಣದ ಕನ್ನಡಕ ಹಾಕಿಕೊಂಡಂತೆ. ಯಾವ ಬಣ್ಣದ್ದು ಎಂಬುವುದರ ಮೇಲೆ ಬದುಕಿನ ಬಣ್ಣ ನಿರ್ಭರವಾಗುತ್ತದೆ. ನಮ್ಮ ಮನಸ್ಸಿನ  ಸ್ಥಿತಿಯ ಮೇಲೆ ಬದುಕು ತೋರುತ್ತದೆ. ಈ ಮೇಲಿನ ಉದಾಹರಣೆಗಳು ಇದನ್ನೇ ಹೇಳುತ್ತವೆ. ಬದುಕಿನ ಅರ್ಥ ಹುಡುಕುವ ಬದಲಿಗೆ, ಬದುಕಿನಲ್ಲಿ ಹೇಗಿರಬೇಕೆನ್ನುವ ಬಗ್ಗೆ ಚಿಂತಿಸಿ  ಬಾಳುವೆ ಮಾಡಿದರೆ  ಹೆಚ್ಚು ಉಪಯುಕ್ತ. ಕನ್ನಡಿಯನ್ನು ಒರಸಿ ಶುಚಿಮಾಡಿದಂತೆ, ಮನ- ಮನೆಯ ಒಳಗೂ ಹೊರಗು ನಿತ್ಯ ಗುಡಿಸಿ ಕಸ ತೆಗೆದರೆ, ಬಾಳುವೆ ಮಾಡುವ ಬದುಕು ಹೊಸತಾಗಿ ಕಾಣಲು ಸಹಕಾರಿ. ಆಗ ಬದುಕು ಅಮೂಲ್ಯ ಎನಿಸಬಹುದು, ಸಾರ್ಥಕ ಎನಿಸಬಹುದು, ಶಾಂತೆನಿಸಬಹುದು.
                     ನೀವೇನು ಹೇಳುತ್ತೀರಾ?.................

 

Comments