ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೨

ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ ೨

ಸತತ ಮೂರು ತಿಂಗಳ ಪರಿಶ್ರಮದಿಂದ ನಾವು ಮಾಡಿದ್ದ ಪ್ರಾಜೆಕ್ಟ್ ಕ್ಲೈಂಟ್ ಅಪ್ರೂವ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದ.  

ಪ್ರಾಜೆಕ್ಟ್ ಅಪ್ರೂವ್ ಆದ ಸಂತಸದಲ್ಲಿ ಟೀಮ್ ಔಟಿಂಗ್ ಹೋಗುವುದೆಂದು ನಿರ್ಧರಿಸಲಾಗಿತ್ತು.  ಎಲ್ಲರೂ ಖುಷಿಯಲ್ಲಿದ್ದರು. ಮೃದುಲ ನನ್ನದೇ ಟೀಮ್ ಆಗಿದ್ದರು ಮೂರು ತಿಂಗಳಿನಲ್ಲಿ ಸತತ ಕೆಲಸದಿಂದ ಹೆಚ್ಚು ಮಾತನಾಡಲು ಆಗಿರಲಿಲ್ಲ. ಅವಳನ್ನು ಪೀಜಿಗೆ ಬಿಡುವಾಗಲೂ ಕೆಲಸದ್ದೆ ಮಾತುಕತೆ ಆಗಿತ್ತು. ಮೂರು ತಿಂಗಳಿಂದ ಊರಿಗೂ ಹೋಗಿರಲಿಲ್ಲ. ಆದ್ದರಿಂದ ಟೀಮ್ ಔಟಿಂಗ್ ಮುಗಿಸಿ ಬಂದ ನಂತರ ಊರಿಗೆ ಹೋಗಿ ಬರಲು ಇಬ್ಬರೂ ಒಂದು ವಾರದ ರಜ ಕೇಳಿ ಅದಕ್ಕೆ ಒಪ್ಪಿಗೆಯೂ ಆಗಿತ್ತು.

 

ಎಲ್ಲರೂ ಟೀಮ್ ಔಟಿಂಗ್ ಎಂದು ಮಡಿಕೇರಿ ಗೆ ಹೋಗಿದ್ದೆವು. ಅಲ್ಲಿನ ಸುಂದರ ವಾತಾವರಣ ಕಂಡು ಎಲ್ಲರೂ ಸಂತೋಷದಲ್ಲಿ ನಲಿದಾಡಿದ್ದರು. ಬೆಳಗಿನಿಂದ ಸಂಜೆಯವರೆಗೂ ಎಲ್ಲ ಪ್ರದೇಶಗಳನ್ನೂ ನೋಡಿ ರಾತ್ರಿ ರೆಸಾರ್ಟ್ ಗೆ ಮರಳಿ ಅಲ್ಲಿ ಕ್ಯಾಂಪ್ ಫೈರ್ ಸಿದ್ಧಪಡಿಸಿ ಎಲ್ಲರೂ ಅದರ ಸುತ್ತ ಕುಳಿತು ಹರಟೆ ಹೊಡೆಯುತ್ತಿದ್ದೆವು.

 

ನಾವು ಒಂದು ಮೂರು ಜನ ಹುಡುಗರು ಬೆಂಕಿಯ ಒಂದು ಪಕ್ಕದಲ್ಲಿ ಕುಳಿತಿದ್ದರೆ ಮತ್ತೊಂದು ಬದಿಯಲ್ಲಿ ಮೃದುಲ ಅವಳ ಸ್ನೇಹಿತೆಯರ ಜೊತೆ ಕೂತಿದ್ದಳು. ಆ ಬೆಂಕಿಯ ಬೆಳಕಿನಲ್ಲಿ ಅವಳ ಮುದ್ದಾದ ಮುಖ ಮತ್ತಷ್ಟು ಸೊಗಸಾಗಿ ಕಾಣುತ್ತಿತ್ತು. ಆಗಸದಲ್ಲಿದ್ದ ಹುಣ್ಣಿಮೆಯ ಚಂದಿರನು ಸಹ ಇವಳ ಅಂದವನ್ನು ಕಂಡು ನಾಚಿ ಮೋಡದ ಮರೆಯಾಗಿ ಬಿಟ್ಟಿದ್ದ.

 

ಇದ್ದಕ್ಕಿದ್ದಂತೆ ಮನಸಿನಲ್ಲಿ ಏನೋ ಒಂದು ರೀತಿ ಅನಿಸಿತು....

ತಕ್ಷಣ ಎಚ್ಚೆತ್ತು ಇದೇನಿದು ಹೀಗೇಕೆ ಅನಿಸಿತು ನನಗೆ ಎಂದು ಆಲೋಚಿಸುತ್ತ ಮತ್ತೆ ಸ್ನೇಹಿತರ ಜೊತೆ ಮಾತಾಡುತ್ತಾ ಮತ್ತೊಮ್ಮೆ ಮೃದುಲಳನ್ನು ನೋಡಿದೆ. ಈ ಬಾರಿ ಸರಿಯಾಗಿ ನಾನು ನೋಡುವ ಹೊತ್ತಿಗೆ ಅವಳು ಕೂಡ ನನ್ನನ್ನು ನೋಡಿದಳು. ಏನೆಂದು ಕಣ್ಣ ಹುಬ್ಬನ್ನು ಮೇಲಕ್ಕೆ ಎಗರಿಸುತ್ತ ಕೇಳಿದಳು. ನಾನು ಏನೂ ಇಲ್ಲ ಎಂದು ಕತ್ತನ್ನು ಅಲ್ಲಾಡಿಸಿದೆ.

 

ತಕ್ಷಣ ಮನಸಿನಲ್ಲಿ ಮತ್ತದೇ ಅನುಭವ ಆಯಿತು...ಅರೆ ಇದೇನಿದು ಇಷ್ಟು ವರ್ಷ ಇಲ್ಲದ್ದು ಇದ್ದಕ್ಕಿದ್ದಂತೆ ನನಗೆ ಹೀಗೇಕೆ ಅನಿಸುತ್ತಿದೆ ಎಂದು ಯೋಚಿಸುತ್ತಿದ್ದೆ.

 

ಅಷ್ಟರಲ್ಲಿ ಸ್ನೇಹಿತರು ಎಲ್ಲರೂ ಎದ್ದು ಬೆಂಕಿಯ ಸುತ್ತ ಕುಣಿಯಲು ಶುರು ಮಾಡಿದರು. ನಾನು ಸುಮ್ಮನೆ ಕುಳಿತಿದ್ದೆ. ಮೃದುಲ ಬಂದು ನನ್ನ ಕೈ ಹಿಡಿದು ಬಾರೋ ಕುಣಿಯೋಣ ಎಂದು ಎಳೆದಳು.

 

ಇಷ್ಟು ವರ್ಷದಲ್ಲಿ ನನ್ನ ಅವಳ ನಡುವೆ ಅದೆಷ್ಟೋ ಬಾರಿ ಸ್ಪರ್ಶ ಆಗಿದ್ದರೂ ಯಾವತ್ತೂ ಅನಿಸದಿದ್ದದ್ದು ಇವತ್ತು ಮಾತ್ರ ಯಾಕೆ ಹೀಗಾಗುತ್ತಿದೆ ಎಂದು ಅವಳು ನನ್ನ ಕೈ ಹಿಡಿದೊಡನೆ ಅನಿಸಿತು. ಬಹುಶಃ ಮಡಿಕೇರಿಯ ಹವಾಮಾನದ ಪ್ರಭಾವವೇನೋ ಗೊತ್ತಿಲ್ಲ....ಅಥವಾ...ಏನೋ ಒಂದೂ ಗೊತ್ತಾಗುತ್ತಿಲ್ಲ ಒಟ್ಟಿನಲ್ಲಿ ನನ್ನ ಮನಸು ಮೊದಲಿನಂತೆ ಇರಲಿಲ್ಲ....

 

ಮೊಟ್ಟ ಮೊದಲ ಬಾರಿಗೆ ಅವಳ ಸ್ಪರ್ಶ ನನ್ನಲ್ಲಿ ಕಂಪನ ಮೂಡಿಸಿತ್ತು. ತಕ್ಷಣ ಅವಳ ಕೈಯಿಂದ ನನ್ನ ಕೈ ಬಿಡಿಸಿಕೊಂಡು ಬೇಡ ಕಣೆ ನೀನು ಹೋಗು ನಾನು ಇಲ್ಲೇ ಕೂತಿರುತ್ತೇನೆ ಎಂದು ಸುಮ್ಮನೆ ಕುಳಿತು ಅವಳನ್ನೇ ನೋಡುತ್ತಿದ್ದೆ.

 

ಪ್ರತಿ ಬಾರಿ ಅಮ್ಮ ಅವಳನ್ನು ಸೊಸೆ ಎಂದು ಕರೆಯುತ್ತಿದ್ದಾಗ, ಊರಿನವರು ನಮ್ಮಿಬ್ಬರನ್ನು ನೋಡಿ ರೇಗಿಸುತ್ತಿದ್ದಾಗ, ಆಫೀಸಿನಲ್ಲಿ ಸಹೋದ್ಯೋಗಿಗಳು ನಮ್ಮಿಬ್ಬರ ಸಂಬಂಧ ಅರಿತು ರೇಗಿಸುವಾಗ ಯಾವಾಗಲೂ ಇಲ್ಲದ್ದು ಅದು ಹೇಗೆ ಸಡನ್ನಾಗಿ ಆಯಿತು....

ಹೌದು ನನಗೆ ಮೃದುಲಳ ಮೇಲೆ ಪ್ರೀತಿ ಉಂಟಾಗಿತ್ತು....ಈ ಪ್ರೀತಿಯೇ ಹೀಗಾ....!!!

ಮಡಿಕೇರಿ ಇಂದ ಬಂದಾಗಿನಿಂದ ನಾನು ಮೊದಲಿನಂತೆ ಇರಲಿಲ್ಲ. ಯಾಕೋ ಮನಸು ಗೊಂದಲದ ಗೂಡಾಗಿ ಬಿಟ್ಟಿತ್ತು. ಮೃದುಲ ನನ್ನ ಬಳಿ ಮಾತಾಡಲು ಬಂದಾಗಲೆಲ್ಲ ಅವಳಿಗೆ ಸರಿಯಾಗಿ ಮುಖ ಕೊಟ್ಟು ಮಾತಾಡಲು ಆಗುತ್ತಿರಲಿಲ್ಲ.

 

ಅವಳು, ಯಾಕೋ ಚೇತೂ ಮಡಿಕೇರಿ ಇಂದ ಬಂದಾಗಿನಿಂದ ಒಂದು ಥರ ಆಡ್ತಾ ಇದ್ದೀಯ? ಬಹುಶಃ ಮಡಿಕೇರಿಯ ಚಳಿಗೆ ಎಲ್ಲೋ ನಿನಗೆ ಅರಳು ಮರಳು ಆಗಿರಬೇಕು. ಯಾವುದಕ್ಕೂ ಒಂದು ಸಲ ಡಾಕ್ಟರ ಹತ್ತಿರ ತೋರಿಸು ಎ೦ದು ನಕ್ಕು ತನ್ನ ಜಾಗಕ್ಕೆ ಹೊರಟಳು.

 

ಅರಳು ಮರಳಲ್ಲ ಮೃದುಲ ನಿನ್ನ ಮೇಲೆ ಪ್ರೀತಿ ಉಂಟಾಗಿದೆ ಎಂದು ಹೇಳಬೇಕು ಎ೦ದುಕೊಂಡೆ ಆದರೆಗಂಟಲು ಬಿಟ್ಟು ಮಾತು ಆಚೆ ಬರಲು ಸಿದ್ಧವಿರಲಿಲ್ಲ. ಯಾಕೋ ಕೆಲಸ ಮಾಡಲು ಸಹಾ ಮೂಡ್ ಇರಲಿಲ್ಲ. ಹೇಗಿದ್ದರೂ ನಾಳೆ ಇಂದ ಒಂದು ವಾರ ರಜಾ ಹಾಕಿದ್ದೇನೆ ಈಗಲೇ ಮನೆಗೆ ಹೊರಟು ಬಿಡೋಣ ಎಂದು ಮೃದುಲಳಿಗೆ ಹೇಳದೆ ಸಿಸ್ಟಂ ಆಫ್ ಮಾಡಿ ಮನೆಗೆ ಹೊರಟು ಬಿಟ್ಟೆ.
Rating
No votes yet

Comments