ಬಹಿಷ್ಕೃತ!

ಬಹಿಷ್ಕೃತ!

ಮತ್ತೆ ಇಂದು ನಿನ್ನ ಪಕ್ಕದಲ್ಲಿ ನಡೆಯುತ್ತಿದ್ದೇನೆ
ನಿನ್ನ ಕಣ್ಣುಗಳಲ್ಲಿ ಮತ್ತದೇ ಭಾವನೆ;
ನಿನ್ನ ಮುಂದುವರಿಕೆ ನಾನೆಂಬ ಕಾಮನೆ
ನಿನಗೆ ನೀ ಕಟ್ಟಿದ ಪ್ರತಿಷ್ಟೆಯ ಮರದ ನೆರಳಿನಲ್ಲಿ
ನಾನು ಹೂ ಬಿಟ್ಟು ಫಲಕೊಡಬೇಕೆಂಬ ನಿರೀಕ್ಷೆ
ನನ್ನ ಬಗೆಗಿನ ಕಥೆಗಳಲ್ಲಿ ಇದೂ ಸೇರಿ
ನಾನಾಗಬಲ್ಲೆ ಮಹಾನ್ ಎಂಬ ಪೀಠದ ಉತ್ತರಾಧಿಕಾರಿ
ಎಂಬ ಅಭಿಮಾನ;ಹೆಮ್ಮೆ!
ನನಗೋ ಸ್ವಾತಂತ್ರ್ಯದ ಇಕ್ಕೆಲಗಳಲ್ಲಿ
ಒಂದೊಂದು ರೆಕ್ಕೆಯ ಕಟ್ಟಿ
ಮತ್ತೆ ಎಲ್ಲವನ್ನೂ ಮೀರಿ ಹಾರುವಾಸೆ
ನನ್ನ ಕನಸುಗಳನ್ನು ನಿನ್ನ ಕನಸುಗಳೆಂದು ನೀನು ಹೇಳಿದರೂ
ನೀ ಒಪ್ಪುವ ಕಲ್ಪನೆಗಳಲ್ಲಿ ನನ್ನ ಕನಸಿಗೆ ಸ್ಥಾನವಿದ್ದರೆ
ನೀನೂ ಅದಕ್ಕೆ ಬಣ್ಖ ಹಚ್ಚುವೆ,
ಆ ಕನಸನ್ನು ಮರಿಯೆಂಬಂತೆ ಸಾಕುವೆ
ಇಲ್ಲದಿದ್ದಲ್ಲಿ ಅದ್ಯಾವುದೋ ಚರಂಡಿ ಕೊಳಚೆ ನೀರನ್ನು ಚೆಲ್ಲಿ
ನಿನ್ನ ಭಗ್ನ ಆಸೆಗಳಿಂದ
ನನ್ನ ಇನ್ನೊಂದು ಕನಸಿನ ಮೂರ್ತಿಯನ್ನು ಕೆಡವಿಬಿಡುವೆ
ಇಂದು ನಿನ್ನ ಪಕ್ಕ ನಾನು ನಡೆಯುತ್ತಿದ್ದರೂ
ಕೌತುಕದ ಕಂಗಳಿಂದ ನೀನು ನನ್ನ ನೋಡುತ್ತಿದ್ದರೂ
ನನಗೆ ಗೊತ್ತಿದೆ
ನನ್ನ ದೃಷ್ಟಿಯಿಂದ ನೀನೆಂದಿಗೂ ನನ್ನ ನೋಡಲಾರೆ
ನೋಡಿದರೆ ತಿಳಿವುದು ನಿನಗೆ -
ಇಲ್ಲಿ ಪ್ರತಿಷ್ಟೆಗಳಿಗೆ ಸ್ಥಾನವಿಲ್ಲ
ಇಲ್ಲಿ ಸ್ವಾತಂತ್ರ್ಯಕ್ಕೆ ಅಂಕೆಯಿಲ್ಲ
ನೋಡು ಒಮ್ಮೆ -
ಆಗ ತಿಳಿಯುವುದು ನಿನಗೆ
ನಾನು ಯಾರ ಕೈಗೂ ಸಿಗದ
ಯಾವ ಬಂಧನಗಳಲ್ಲೂ ಬಂಧಿಸಲ್ಪಡದ
ಯಾವ ಪ್ರತಿಷ್ಟೆಗೂ ಒಗ್ಗದ
ಎಲ್ಲವನ್ನೂ ಒಳಗೊಂಡೂ ಎಲ್ಲೂ ಸಲ್ಲದೆ
ನಿನ್ನ ಲೋಕಕ್ಕೆ ಹೊರಗಾದವ; ಬಹಿಷ್ಕೃತ!
 

Rating
No votes yet

Comments