ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?
ಗೌರವಾನ್ವಿತ ಸಾಹಿತಿಗಳು ಸ್ವಲ್ಪ ಯೋಚಿಸಬೇಕಾಗಿದೆ.. ಸರ್ಕಾರವು ಆರನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಲು ಹೊರಟರೆ ಅದನ್ನು ಇವರು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಸಾಹಿತಿಗಳು ಹೇಳುತ್ತಿರುವ ಕಾರಣ "ಕನ್ನಡಕ್ಕೆ ಧಕ್ಕೆ!". ಇದನ್ನು ಸ್ವಲ್ಪ ವಿವೇಚಿಸೋಣ.
ನಿಜ, ಕನ್ನಡಕ್ಕೆ ತೊಂದರೆ ಆಗಬಹುದು. ಆದರೆ ಸರ್ಕಾರ ಆಂಗ್ಲ ಮಾಧ್ಯಮ ತರಲು ಹೊರಟಿರುವುದು ಸರ್ಕಾರಿ ಶಾಲೆಗಳಲ್ಲಿ. ಅಂದರೆ ನಿಸ್ಸಂಶಯವಾಗಿ ಅಲ್ಲಿ ಓದುತ್ತಿರುವ ಮಕ್ಕಳು ( ಕನಿಷ್ಟ ೯೫% ) ಬಡ ಮಕ್ಕಳೇ ಹೊರತೂ ಶ್ರೀಮಂತರಲ್ಲ. ಇಂದು ಹಳ್ಳಿಯ ಅಲ್ಪಸ್ವಲ್ಪ ಹಣವಂತರೂ ಸಹ ತಮ್ಮ ಮಕ್ಕಳನ್ನು ಹತ್ತಿರದ ಪಟ್ಟಣದ ಆಂಗ್ಲ (ಖಾಸಗಿ) ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳಿಲ್ಲದೇ ಅವು ಮುಚ್ಚಿಕೊಳ್ಳುತ್ತಿವೆ. ಅಂದರೆ ದುಡ್ಡಿರುವ ಮಕ್ಕಳು ಆಂಗ್ಲ ಕಲಿತು ಬೆಂಗಳೂರಿನಂತಹ ನಗರದಲ್ಲಿ ಉತ್ತಮ ಕೆಲಸ ಹಿಡಿಯಲು ತಯಾರಾದರೆ ಬಡ ಮಕ್ಕಳು ಕನ್ನಡವನ್ನು ಮಾತ್ರ ಕಲಿತು ತೀರಾ ಕೆಳ ಮಟ್ಟದ ಕೆಲಸಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಏಕೆಂದರೆ ಬೆಂಗಳೂರಿನ ಚಿಕ್ಕದೊಂದು ರಿಯಲ್ ಎಸ್ಟೇಟ್ ಕಚೇರಿಗೆ ಸಹಾಯಕನಾಗಿ ಸೇರಲಿಕ್ಕೂ ಆಂಗ್ಲ ಬಂದರೆ ಹೆಚ್ಚು ಸಂಬಳ ಮತ್ತು ಅವಕಾಶವಿದೆ. ಅಷ್ಟೇಕೆ ಕೊನೆ ಪಕ್ಷ ದೊಡ್ಡದೊಂದ ಹೋಟೆಲಿನಲ್ಲಿ ಸರ್ವರ್ ಆಗಲಿಕ್ಕೂ ಆಂಗ್ಲ ಗೊತ್ತಿದ್ದರೆ ಸಂಬಳ ಜಾಸ್ತಿ ಸಿಗುತ್ತದೆ. ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸೇರಲಿಕ್ಕಂತೂ ಆಂಗ್ಲ ಬೇಕೇ ಬೇಕು. ಸರ್ಕಾರಿ ನೌಕರಿಗೆ ಸೇರಲು ಲಂಚ ನಿಡಲೂ ಸಹ ಹಣ ಬೇಕು. ಸರ್ಕಾರಿ ಕೆಲಸಗಳನ್ನೂ ದುಡ್ಡಿರುವವರೇ ಹೊಡೆದುಕೊಳ್ಳುತ್ತಿದ್ದಾರೆ. ವರ್ಷದ ವರೆಗೆ ಸರ್ಕಾರಿ ನೌಕರರು ಮೊಳೆ ಜಡಿದುಕೊಂಡು ಕೂರುವುದರಿಂದ ಬೇರೆಯವರಿಗೆ ಅವಕಾಶವಾದರೂ ಎಲ್ಲಿ ? ಅಂದರೆ ಉತ್ತಮ ಹುದ್ದೆ ಮತ್ತು ದುಡ್ಡು ಮತ್ತೆ ಹಣವಂತರ ಮಕ್ಕಳಿಗೇ ದೊರೆಯುವಂತಾಗುತ್ತದೆಯೇ ಹೊರತೂ ಬಡವರ ಮಕ್ಕಳು ಹೋಟೆಲು, ಬಾರ್ ಕೆಲಸಗಳಿಗೇ ಸೇರಬೇಕಾದ ಸ್ಥಿತಿ ಇದೆ.
ಇಂತಹ ಸಂದರ್ಭದಲ್ಲಿ ಕಾಗೇರಿಯವರು ಒಂದು ಉತ್ತಮ ಆದೇಶ ನೀಡಿದ್ದಾರೆ. ಅವರ ಆದೇಶದಲ್ಲಿ ಏನು ತಪ್ಪಿದೆ ಸಾಹಿತಿಗಳೇ ? ಒಂದರಿಂದ ಐದನೇ ತರಗತಿಯವರೆಗೆ ಕನ್ನಡ ಕಲಿತಿರುವ ಮಕ್ಕಳು ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಪಡೆದು ಆಂಗ್ಲವನ್ನೂ ಚೆನ್ನಾಗಿ ಕಲಿತರೆ ಅದರಿಂದ ಕನ್ನಡಕ್ಕೆ ಏನೂ ಧಕ್ಕೆ ಇಲ್ಲ. ಕನ್ನಡಕ್ಕೆ ಧಕ್ಕೆ ಬಂದಿರುವುದು ಯುಕೆಜಿ, ಎಲ್ಕೆಜಿ ಹಾಗೂ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಸೇರುವ ಮಕ್ಕಳಿಂದ.
ಇಷ್ಟಕ್ಕೂ ಬಡವರ ಮಕ್ಕಳು ಮಾತ್ರ ಕನ್ನಡ ಉಳಿಸಲಿ, ಶ್ರೀಮಂತರ ಮಕ್ಕಳು ಆಂಗ್ಲ ಕಲಿತು ಉದ್ದಾರವಾಗಲಿ ಅನ್ನುವ ಸಾಹಿತಿಗಳ ಉದ್ದೇಶ ನ್ಯಾಯ ಸಮ್ಮತವಲ್ಲ. ಕನ್ನಡಾಭಿಮಾನ ಎಲ್ಲರಲ್ಲೂ ಬೆಳೆಯುವಂತಹ ಹೋರಾಟಗಳನ್ನು ಇವರು ರೂಪಿಸುವುದು ಬಿಟ್ಟು ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಲು ಹೊರಟಿದ್ದಾರೆ. ಇವರಲ್ಲಿ ಎಷ್ಟು ಜನ ಸಾಹಿತಿಗಳ ಮಕ್ಕಳು ಕನ್ನಡ ಸರ್ಕಾರಿ ಶಾಲೆಯಲ್ಲೇ ಕಲಿತಿದ್ದಾರೆ ? ಬಡವರ ಸ್ಥಿತಿ ಇವರಿಗೇನು ಅರ್ಥವಾಗಿದೆ ? "ಭಾಷೆಗಿಂತಲೂ ಮೊದಲು ಹೊಟ್ಟೆಪಾಡು ಮುಖ್ಯವಾಗುತ್ತದೆ" ಎಂದು ಪೂರ್ಣಚಂದ್ರ ತೇಜಸ್ವಿಯವರೇ ಹೇಳಿದ್ದರು. ಆದರೂ ಬಡವರನ್ನು ಮಾತ್ರ ಆಂಗ್ಲದಿಂದ ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹಿಂದಿ ಹೇರಿಕೆ ವಿರುದ್ಧ ಮಾತ್ರ ಈ ಸಾಹಿತಿಗಳು ಸೊಲ್ಲೆತ್ತಿದ್ದು ಇದುವರೆಗು ಕಂಡು ಬಂದಿಲ್ಲ.
ಕನ್ನಡವನ್ನು ಉಳಿಸಲು ಆಂಗ್ಲ ಮಾಧ್ಯಮ ವಿರೋಧಿಸುವ ಇವರು ಮೊದಲು ಕಡ್ಡಾಯವಿರುವ ಹಿಂದಿಯನ್ನು ಐಚ್ಚಿಕ ವಿಷಯವಾಗುವಂತೆ ಹೋರಾಡಲಿ. ಹಿಂದಿಯನ್ನು ಅನಗತ್ಯವಾಗಿ ಹೇರಿಕೆ ಮಾಡಲಾಗಿದೆ. ಇದರಿಂದ ಹಳ್ಳಿಯ ಕನ್ನಡದ ಬಡ ಮಕ್ಕಳು ಮೂರು ಭಾಷೆಯನ್ನು ಕಲಿಯಲಾಗದೇ ತೊಳಲಾಡುತ್ತಿದ್ದಾರೆ. ಹಿಂದಿಯನ್ನು ಕಿತ್ತೊಗೆದರೆ ಕನ್ನಡ ಮತ್ತು ಆಂಗ್ಲವನ್ನು ಚೆನ್ನಾಗಿ ಕಲಿತು ಉತ್ತಮ ಕೆಲಸ ಹಿಡಿದು ಉದ್ದಾರವಾಗಲು ಅನುಕೂಲವಾಗುತ್ತದೆ. ಹಾಗೂ ಕರ್ನಾಟಕ ಸರ್ಕಾರಿ ನೌಕರಿಯು ಕನ್ನಡ ಮಾಧ್ಯಮದಲ್ಲಿ ಕಲಿತವರಿಗೇ ಮೀಸಲಾಗುವಂತೆ ಹೋರಾಡಲಿ.
Comments
ಉ: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?
In reply to ಉ: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ? by venkatb83
ಉ: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?
ಉ: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?
In reply to ಉ: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ? by darshi
ಉ: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?
ಉ: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?
In reply to ಉ: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ? by basho aras
ಉ: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?