ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) ‍ ಕೊನೆಯ ಭಾಗ‌

ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) ‍ ಕೊನೆಯ ಭಾಗ‌

ವಾಸ್ತವ

 

ಅಮಾವಾಸ್ಯೆಯ ಕತ್ತಲಿನಲ್ಲಿ ಆಷಾಢ ಮಾಸದ ಗಾಳಿಯಲ್ಲಿ ಬೆಟ್ಟದ ತುಟ್ಟ ತುದಿಯಲ್ಲಿ ಮಲಗಿ ಆಗಸವನ್ನು ನೋಡುತ್ತಾ ಣ್ಣಲ್ಲಿ ತುಂಬಿದ್ದ ಜಲಧಾರೆಯನ್ನು ನ್ನಷ್ಟಕ್ಕೆ ತಾನು ಹರೆಯಲು ಬಿಟ್ಟು ಮುಂದಿನ ನಿರ್ಧಾರದ ಬಗ್ಗೆ ಯೋಚಿಸುತ್ತಿದ್ದಾಗ ಮೊಬೈಲಿಗೆ ಬಂದ ಕರೆಯಿಂದ ಮತ್ತೆ ವಾಸ್ತವಕ್ಕೆ ಬಂದೆ. 

 

ಎಲ್ಲಿದ್ಯ ಚೇತನ್ ಎಂದು ಅಮ್ಮ ಕೇಳಿದ್ದಕ್ಕೆ...ಇಲ್ಲೇ ಬೆಟ್ಟದ ಬಳಿ ಬಂದಿದ್ದೀನಮ್ಮ ಇನ್ನೊಂದು ಅರ್ಧ ಗಂಟೆಯಲ್ಲಿ ಮನೆಯಲ್ಲಿ ಇರುತ್ತೇನೆ ಎಂದು ಮತ್ತೆ ಆಗಸ ನೋಡುತ್ತಾ ಕುಳಿತೆ.

 

ಒಂದೊಂದೇ ಮೆಟ್ಟಿಲನ್ನು ಇಳಿಯುತ್ತ ರಸ್ತೆಗೆ ಬಂದಾಗ ಮತ್ತೊಮ್ಮೆ ಫೋನ್ ರಿಂಗಣಿಸಿತು. ಯಾರೆಂದು ನೋಡಿದರೆ ಅವಳೇ ಫೋನ್ ಮಾಡಿದ್ದಳು. ಫೋನ್ ಎತ್ತಿ ಹಲೋ ಎಂದ ತಕ್ಷಣ ಏನು ಚೇತನ್ ನಾಳೆ ಆಫೀಸಿನಲ್ಲಿ ಅವನಿಗೆ ನನ್ನ ಪ್ರೇಮದ ವಿಷಯ ತಿಳಿಸುತ್ತೀಯ ಎಂದು ಕೇಳಿದಳು. ಮೃದುಲ ನೀನೇನೂ ಯೋಚನೆ ಮಾಡಬೇಡ ....ಎಲ್ಲ ಒಳ್ಳೆಯದೇ ಆಗುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಫೋನ್ ಇಟ್ಟು ಮನೆಗೆ ಬಂದೆ.

 

ಮನೆಗೆ ಬಂದ ತಕ್ಷಣ ಅಮ್ಮ ಏನೋ ಚೇತು ಇಷ್ಟೊತ್ತಿನಲ್ಲಿ ಅದೂ ಅಮಾವಾಸ್ಯೆ ದಿವಸ ಬೆಟ್ಟದ ಮೇಲೆ ಯಾಕೋ ಹೋಗಿದ್ದೆ? ಎಷ್ಟು ಗಾಭರಿ ಆಯ್ತು ಗೊತ್ತ ನನಗೆ.

 

ಏನಿಲ್ಲಮ್ಮ ಗಾಳಿ ಚೆನ್ನಾಗಿ ಬೀಸ್ತುತ್ತಿತ್ತು ಸುಮ್ಮನೆ ಮೇಲೆ ಹೋಗಿ ಸ್ವಲ್ಪ ಹೊತ್ತು ಕೂತು ಬಂದೆ. ಸರಿ ಸರಿ ಊಟ ಮಾಡಿ ಮಲಗು. ನಾಳೆ ಬೆಳಿಗ್ಗೆ ಬೇಗನೆ ಏಳಬೇಕು ಎಂದರು. 

 

ಆಗಲೇ ನಾವು ಹಳ್ಳಿಗೆ ಬಂದು ವಾರ ಕಳೆದು ಹೋಗಿತ್ತು. ನಾಳೆ ಇಂದ ಯಥಾಪ್ರಕಾರ ಅದೇ ಆಫೀಸ್ ಅದೇ ಕ್ಯುಬಿಕಲ್ ಅದೇ ಮ್ಯಾನೇಜರ್ ಅದೇ ಮೃ...ಇಲ್ಲ ಅದೊಂದು ಮಾತ್ರ ಅದೇ ಆಗಿ ಉಳಿದಿರುವುದಿಲ್ಲ...ಈಗ ಅವಳು ಬೇರೆಯವನ ಮೃದುಲ....ನಾನು ಮೃದುಲಳ ಪ್ರೇಮದಿಂದ ವಂಚಿತನಾದ ಚೇತನ್....ಲೈಫು ಇಷ್ಟೇನೆ ಎಂದು ಮಲಗಿಕೊಂಡೆ...

 

ಮರುದಿನ ಅವಳಿಗಿಂತ ಮುಂಚೆಯೇ ಹೊರಟು ಬೆಂಗಳೂರಿಗೆ ಹೋಗೋಣ ಎಂದುಕೊಂಡಿದ್ದೆ. ಆದರೆ ಅವಳು ನಾನು ಸಿದ್ಧವಾಗುವ ವೇಳೆಗೆ ಮನೆಗೆ ಬಂದು ಕೂತಿದ್ದಳು. ಬೇರೆ ವಿಧಿ ಇಲ್ಲದೆ ಇಬ್ಬರೂ ಒಟ್ಟಿಗೆ ಹೊರಟೆವು. ಆದರೆ ಬಸ್ಸಿನಲ್ಲಿ ಅವಳನ್ನು ಬೇರೆ ಸೀಟಿನಲ್ಲಿ ಕೂಡಿಸಿ ನಾನು ಬೇರೆ ಸೀಟಿನಲ್ಲಿ ಕೂತಾಗ ಅವಳು ಏನೂ ಮಾತಾಡೆ ಸುಮ್ಮನೆ ಕಣ್ಣಿನಿಂದ ಂದು ನೋಟ ಬೀರಿದ್ದಳು.

 

ಆ ಒಂದು ನೋಟ ಸಾಕು ಅವಳ ಮನಸಿನಲ್ಲಿ ಕುದಿಯುತ್ತಿರುವ ಸಾವಿರ ಮಾತುಗಳನ್ನು ಹೇಳಲು...

 

ಆಫೀಸಿಗೆ ಬಂದು ವಾರದಿಂದ ಬಂದಿದ್ದ ಮೇಲ್ಗಳನ್ನು ಚೆಕ್ ಮಾಡಿ ಸ್ವಲ್ಪ ಹೊತ್ತು ಎಲ್ಲರ ಜೊತೆ ಮಾತಾಡಿ ಒಂದು ಸುತ್ತು ಕಾಫಿ ಕುಡಿದು ಮತ್ತೆ ಸಿಸ್ಟಂ ಬಳಿ ಬಂದು ಕೂತೆ. ಕೆಲಸ ಹೆಚ್ಚಾಗಿ ಏನೂ ಇರಲಿಲ್ಲ.

 

ಮಡಿಕೇರಿಯ ಫೋಟೋಗಳನ್ನು ನೋಡುತ್ತಾ ಕುಳಿತಿದ್ದೆ. ಪ್ರತಿಯೊಂದು ಫೋಟೋಗಳನ್ನು ನೋಡುತ್ತಿದ್ದಾಗ ಆ ನೆನಪುಗಳು ಮರುಕಳಿಸುತ್ತಿದ್ದವು. ಪ್ರತಿಯೊಂದು ಫೋಟೋದಲ್ಲೂ ಮೃದುಲ ಬಹಳ ಮುದ್ದಾಗಿ ಕಾಣುತ್ತಿದ್ದಳು. ಇಷ್ಟು ವರ್ಷದಿಂದ ಹೆಚ್ಚೂ ಕಡಿಮೆ ಪ್ರತಿ ದಿವಸ ಅವಳನ್ನೇ ಪ್ರತ್ಯಕ್ಷವಾಗಿ ನೋಡುತ್ತಿದ್ದರೂ ಯಾವತ್ತೂ ಅವಳು ಇಷ್ಟು ಮುದ್ದಾಗಿ ಕಂಡಿರಲಿಲ್ಲ. ಆದರೆ ಅದೇನು ವಿಚಿತ್ರವೋ ಏನೋ ಅವಳ ಮೇಲೆ ಪ್ರೀತಿ ಶುರುವಾದಾಗಿನಿಂದ ಅವಳು ಮುದ್ದಾಗಿ ಕಾಣುತ್ತಿದ್ದಳು.

 

ಅವಳ ಫೋಟೋವನ್ನು ಜೂಮ್ ಮಾಡಿ ನೋಡುತ್ತಿದ್ದಾಗ ಹಿಂದಿನಿಂದ ಯಾರೋ ಬಂದು ನಿಂತಂತಾಯಿತು. ತಿರುಗಿ ನೋಡಿದರೆ ಅವಳೇ ನಿಂತಿದ್ದಳು. ನನಗೆ ಒಂದು ರೀತಿ ಮುಜುಗರವಾಗಿ ತಕ್ಷಣ ಬೇರೆ ಫೈಲ್ ಒಂದನ್ನು ಓಪನ್ ಮಾಡಿ ಕೂತೆ. ಯಾಕೋ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗಲಿಲ್ಲ. ಎಲ್ಲಿ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನನ್ನ ಕಳ್ಳ ಮನಸ್ಸು ಅವಳಿಗೆ ಗೊತ್ತಾಗುತ್ತದೆ ಎಂದು ಸಿಸ್ಟಂ ಕಡೆ ನೋಡುತ್ತಾ ಹೇಳು ಮೃದುಲ ಎಂದೆ. ಚೇತೂ ಬಿಡುವಿದ್ದರೆ ಸ್ವಲ್ಪ ನನ್ನ ಜೊತೆ ಕ್ಯಾಂಟೀನ್ ಗೆ ಬರ್ತೀಯ. ಮೃದುಲ ಈಗಷ್ಟೇ ಕಾಫಿ ಆಯ್ತು ನಂದು. ಚೇತೂ ಕಾಫಿ ಕುಡಿಯಲು ಕರೆಯುತ್ತಿಲ್ಲ. ನಿನ್ನ ಬಳಿ ಮಾತಾಡಬೇಕು ಬಾ ಎಂದಳು. ಸರಿ ಎಂದು ಎದ್ದು ಅವಳ ಹಿಂದೆ ಕ್ಯಾಂಟೀನ್ ಗೆ ಹೋದೆ.

 

ಸ್ವಲ್ಪ ಹೊತ್ತು ಇಬ್ಬರ ನಡುವೆ ಮೌನ ನೆಲೆಸಿತ್ತು. ಆಗಷ್ಟೇ ಕಾಫಿ ಕುಡಿದಿದ್ದರೂ ಮತ್ತೆ ಒಂದು ಕಪ್ ಕಾಫಿ ಹಿಡಿದುಕೊಂಡು ಸುಮ್ಮನೆ ಆಗಸದ ಕಡೆ ನೋಡುತ್ತಾ ನಿಂತಿದ್ದೆ. ಇಬ್ಬರ ಕಪ್ ಗಳು ಖಾಲಿ ಆಗಿದ್ದರೂ ಮಾತಿನ್ನೂ ಶುರು ಆಗಿರಲಿಲ್ಲ. ನಾನೇ ಶುರು ಮಾಡಿದೆ. ಏನೋ ಮಾತಾಡಬೇಕಿತ್ತು ಎಂದು ಸುಮ್ಮನೆ ನಿಂತಿದ್ದೀಯಲ್ಲ ಮೃದುಲ. ಹೇಳು ಏನು ವಿಷಯ?

 

ಅದೇ ಚೇತೂ ನಾನು ನೆನ್ನೆ ಹೇಳಿದ್ದೆನಲ್ಲ ಅದರ ಬಗ್ಗೆ ಏನಾದರೂ ಚಿಂತೆ ಮಾಡಿದೆಯ? ಯಾವಾಗ ಹೇಳ್ತಾ ಇದ್ದೀಯ? ಚೇತೂ ಅವನು ಏನಾದರೂ ಒಪ್ಪದೇ ಇದ್ದರೆ ನಾನು ಬದುಕುವುದಿಲ್ಲ ಕಣೋ...

 

ಹೇ ಮೃದುಲ ಸುಮ್ಮನೆ ಹುಚ್ಚಿ ಹಾಗೆ ಆಡಬೇಡ. ಮೊದಲು ಅವನೊಡನೆ ಮಾತಾಡುತ್ತೀನಿ ಆಮೇಲೆ ನೋಡೋಣ. ಅವನ ಹೆಸರು ಏನು?

 

ಅವನ ಹೆಸರು ಗೊತ್ತಿಲ್ಲ ಚೇತೂ. 

 

ಏನು ಹೆಸರು ಗೊತ್ತಿಲ್ವಾಇಲ್ಲ ಕಣೋ... ಹ್ಮ್....ಹೋಗಲಿ ಅವನು ಎಲ್ಲಿ ಇರುತ್ತಾನೆ ಹೇಳು. ಹೋಗಿ ಮಾತಾಡುತ್ತೇನೆ.

 

ಬ್ಲಾಕ್ ನಲ್ಲಿಆರನೇ ಅಂತಸ್ತಿನಲ್ಲಿ ಎಡಗಡೆಯಲ್ಲಿ ಐದನೇ ಸಾಲಿನಲ್ಲಿ ಎಂಟನೆ ಕ್ಯುಬಿಕಲ್ ನಲ್ಲಿ ಕೂಡುತ್ತಾನೆ. ಹ್ಮ್ ಸರಿ ನೀನು ಇಲ್ಲೇ ಇರು ನಾನು ಹೋಗಿ ಮಾತಾಡಿ ಬರುತ್ತೇನೆ.

ಚೇತೂ ತಗೋ ಇದೊಂದು ಲೆಟರ್ ಅವನ ಕೈಗೆ ಕೊಡು.

 

ಏನೇ ಲವ್ ಲೆಟರ್ ಎಲ್ಲ ಬರಿಯಕ್ಕೆ ಶುರು ಮಾಡಿದ್ದೀಯ...ಸರಿ ಸರಿ....ಕೊಡು ಎಂದು ಅಲ್ಲಿಂದ ಭಾರವಾದ ಮನಸಿನಿಂದ ಚೆ ಬಂದು ಅವಳು ಹೇಳಿದ್ದ ಜಾಗಕ್ಕೆ ಹೋಗೋಣ ಎಂದುಕೊಂಡೆ. ಅಷ್ಟರಲ್ಲಿ ಮೊಬೈಲ್ ಗೆ ನನ್ನ ಕಲೀಗ್ ಕರೆ ಮಾಡಿ ಚೇತೂ ಅರ್ಜೆಂಟ್ ಮೀಟಿಂಗ್ ಇದೆ ಮ್ಯಾನೇಜರ್ ಕರೀತಾ ಇದಾರೆ ಎಂದ. ಸರಿ ಈಗಲೇ ಬಂದೆ ಎಂದು ಮೃದುಲ ಗೆ ಕರೆ ಮಾಡಿ ಮೃದುಲ ಅರ್ಜೆಂಟ್ ಮೀಟಿಂಗ್ ಇದೆ ನಾನು ಅವನ ಜೊತೆ ಆಮೇಲೆ ಮಾತಾಡುತ್ತೀನಿ ಕೂಡಲೇ ಮೀಟಿಂಗ್ ಗೆ ಬಾ ಎಂದು ಮೀಟಿಂಗ್ ಗೆ ಹೋದೆ.

 

ಹೊಸ ಪ್ರಾಜೆಕ್ಟ್ ಒಂದರ ಕುರಿತು ಮೀಟಿಂಗ್ ನಡೆಯುತ್ತಿತ್ತು. ಮ್ಯಾನೇಜರ್ ಒಂದು PPT ತೋರಿಸಿ ಏನೋ ಹೇಳುತ್ತಿದ್ದಾನೆ. ಆದರೆ ಅದ್ಯಾವುದು ನನ್ನ ಕಿವಿಯೊಳಗೆ ಹೋಗುತ್ತಿಲ್ಲ. ಮೃದುಲ ಹೇಳಿದ ಒಂದೊಂದು ಮಾತುಗಳು ಕಿವಿಗೆ ಅಪ್ಪಳಿಸುತ್ತಿತ್ತು. ಒಂದು ಸಂದರ್ಭದಲ್ಲಿ ನನ್ನ ಮೈ ರೋಮಾಂಚನವಾಯಿತು. ಏಕೆಂದರೆ ಮೃದುಲ ಹೇಳಿದ ಜಾಗದ ವಿವರ ಮತ್ತೊಮ್ಮೆ ಮನಸಿನಲ್ಲಿ ಅವಲೋಕಿಸಿದೆ.

 

ತಕ್ಷಣ ಎದ್ದು ಸರ್ ಅರ್ಜೆಂಟಾಗಿ ಆಚೆ ಹೋಗಬೇಕು ಹತ್ತು ನಿಮಿಷದಲ್ಲಿ ಬರುತ್ತೇನೆ ಎಂದು ಆಚೆ ಬಂದು ನನ್ನ ಕ್ಯುಬಿಕಲ್ ಬಳಿ ಹೋಗಿ ಅವಳು ಕೊಟ್ಟ ವಿವರವನ್ನು ಮತ್ತೊಮ್ಮೆ ಯೋಚಿಸಿ ನೋಡಿದರೆ ಅದು ನನ್ನದೇ ಕ್ಯುಬಿಕಲ್. ಅಂದರೆ ಅವಳು ನನ್ನನ್ನೇ ಇಷ್ಟ ಪಡುತ್ತಿದ್ದಾಳ ಎಂದು ಅವಳು ಕೊಟ್ಟಿದ್ದ ಲೆಟರ್ ಆಚೆ ತೆಗೆದು ಓದಲು ಶುರು ಮಾಡಿದೆ.

 

ಚೇತೂ...

 

ನನಗೆ ಪ್ರೇಮ ಪತ್ರ ಬರೆದು ಅಭ್ಯಾಸ ಲ್ಲ ಕಣೋ. ಹೇಗೆ ತೋಚುತ್ತದೋ ಹಾಗೆ ಬರೆದಿದ್ದೇನೆ.

 

ಚೇತೂ ಚಿಕ್ಕಂದಿನಿಂದ ಮನೆಯಲ್ಲಿ ಅಪ್ಪ ಅಮ್ಮ, ನಿನ್ನ ಅಪ್ಪ ಅಮ್ಮ, ಆಮೇಲೆ ಊರವರು ನಮ್ಮಿಬ್ಬರನ್ನು ನೋಡಿದಾಗಲೆಲ್ಲ ಗಂಡ ಹೆಂಡತಿ ಎಂದು ರೇಗಿಸುತ್ತಿದ್ದರು ನೆನಪಿದೆಯ..ಆಗೆಲ್ಲ ದೆಲ್ಲ ಸುಮ್ಮನೆ ತಮಾಷೆಗೆ ಎಂದುಕೊಂಡು ಸುಮ್ಮನಾಗಿದ್ದೆ.

 

ಆದರೆ ಬೆಳೆಯುತ್ತ ಬೆಳೆಯುತ್ತ ಅದು ನಿಜವಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಎನಿಸತೊಡಗಿತು. ಆದರೆ ಪ್ರತಿ ಬಾರಿ ಯಾರಾದರೂ ಹಾಗೆ ರೇಗಿಸಿದರೆ ನೀನು ಅವರ ಮಾತನ್ನು ತೆಗೆದು ಹಾಕಿ ಬಿಡುತ್ತಿದ್ದೆ. ಆದ್ದರಿಂದ ನಿನ್ನ ಬಳಿ ಹೇಗೆ ಹೇಳಬೇಕೋ ತಿಳಿಯುತ್ತಿರಲಿಲ್ಲ.

 

ಚೇತೂ ನಾವಿಬ್ಬರೂ ಒಟ್ಟಿಗೆ ಓದಿದೆವು ಅಲ್ಲವ...ಅದು ಕಾಕತಾಳೀಯ ಅಲ್ಲ ಕಣೋ. ಸ್ಕೂಲ್ ಮುಗಿದ ಮೇಲೆ ನೀನು ಯಾವ ಕಾಲೇಜ್ ಸೇರಿದೆಯೋ ನಾನೂ ಅಪ್ಪನಲ್ಲಿ ಬಲವಂತ ಮಾಡಿ ಅದೇ ಕಾಲೇಜ್ ಗೆ ಸೇರಿದೆನಂತರ ಬಿ  ಗೂ ಅಷ್ಟೇ ಕಣೋ. ಆಗಲಾದರೂ ನೀನು ರ್ಥ ಮಾಡ್ಕೊತೀಯ ಎಂದುಕೊಂಡಿದ್ದೆ. ಆದರೆ ನೀನು ಮಾತ್ರ ಸ್ವಲ್ಪವೂ ಬದಲಾಗಲಿಲ್ಲ. ಆದರೂ ನಾನು ಸೋಲಬಾರದು ಎಂದು ಮತ್ತೆ ನೀನು ಸೇರಿದ ಕಂಪನಿ ಗೆ ಸೇರಿದೆ. ಆದರೆ ಇಲ್ಲಿ ನನ್ನ ಅದೃಷ್ಟವಶಾತ್ ಇಬ್ಬರನ್ನೂ ಒಂದೇ ಟೀಮ್ ನಲ್ಲಿ ಹಾಕಿದ್ದರು.  

 

ನಾನು ಎಷ್ಟು ಬಾರಿ ನಿನ್ನನ್ನು ಮದುವೆ ಮಾಡಿಕೊ ಎಂದು ಕೇಳುತ್ತಿದ್ದೆ ಅಲ್ಲವ...ಅದು ತಮಾಷೆಗೆ ಕೇಳುತ್ತಿದ್ದದ್ದು ಅಲ್ಲ ಕಣೋ. ನಿಜವಾಗಿಯೂ ನಿನ್ನ ಮದುವೆ ಮಾಡಿಕೊಳ್ಳುವ ಉದ್ದೇಶದಿಂದಲೇ ಕೇಳುತ್ತಿದ್ದೆ. ಒಮ್ಮೆಯಾದರೂ ನೀನು ಒಪ್ಪಿಗೆ

ನೀಡುತ್ತೀಯೇನೋ ಎಂದು ಕಾಯುತ್ತಿದ್ದೆ. ಆದರೆ ನೀನು ತಮಾಷೆ ಎಂದು ಸುಮ್ಮನಾಗಿಬಿಡುತ್ತಿದ್ದೆ.

 

ಕಳೆದ ವಾರ ನಾವು ಮಡಿಕೇರಿಗೆ ಹೋಗಿದ್ದಾಗ ನಿನಗೆ ನೆನಪಿದೆಯ ನಾವು ಕ್ಯಾಂಪ್ ಫೈರ್ ಸುತ್ತ ಡಾನ್ಸ್ ಮಾಡುತ್ತಿದ್ದಾಗ ನಿನ್ನ ಕೈ ಹಿಡಿದು ಎಳೆಯಲು ಬಂದಾಗ ನೀನು ನನ್ನ ಕೈಯಿಂದ ಬಿಡಿಸಿಕೊಂಡೆ. ಅಂದು ರಾತ್ರಿ ನಾನು ಎಷ್ಟು ಅತ್ತಿದ್ದೇನೆ ಗೊತ್ತ. ಅಲ್ಲಿಂದ ಬಂದ ಮೇಲೆ ಯಾಕೋ ನನ್ನ ಕೈಲಿ ತಡೆಯಲು ಆಗುತ್ತಿಲ್ಲ ಚೇತೂ.. ಇನ್ನು ತಡ ಮಾಡಿದರೆ ಎಲ್ಲಿ ನಿನ್ನನ್ನು ಕಳೆದುಕೊಳ್ಳುತ್ತೇನೋ ಎಂದು ಭಯವಾಗುತ್ತಿತ್ತು. ಆದರೆ ಮಡಿಕೇರಿಯಿಂದ ಬಂದಾಗಿನಿಂದ ನಿನ್ನ ವರ್ತನೆಯೇ ಬದಲಾಗಿ ಬಿಟ್ಟಿತ್ತು.

 

ಮಡಿಕೇರಿಯಿಂದ ವಾಪಸ್ ನಾವು ಊರಿಗೆ ಹೋದಾಗ ಅಂದು ನಾನು ನಿಮ್ಮ ಮನೆಗೆ ಬಂದಿದ್ದಾಗ ನೀನು ನನ್ನ ಮೇಲೆ ರೇಗಿದಾಗ, ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದಾಗ ಅತ್ತೆ ನನ್ನನ್ನು ತಡೆದು ಸಮಾಧಾನ ಮಾಡುತ್ತಿದ್ದಾಗ ಹೇಳಿದರು. ನೆನ್ನೆ ಸಂಜೆ ನನ್ನ ಮೇಲೂ ಕೂಗಾಡಿದ. "ನಿನ್ನನ್ನು ಸೊಸೆ ಎಂದಿದ್ದಕ್ಕೆ ಯಾಕೆ ಪದೇ ಪದೇ ಸೊಸೆ ಎನ್ನುತ್ತೀಯ ಅವಳೇನು ನನ್ನನ್ನು ಮದುವೆ ಆಗುತ್ತಾಳ ಎಂದು" ಹೇಳಿದರು. ಆಗ ಗೊತ್ತಾಯಿತು ಚೇತೂ ನೀನು ಸಹ ನನ್ನನ್ನು ಇಷ್ಟ ಪಡುತ್ತಿದ್ದೀಯ ಎಂದು. ಆದರೆ ಹೇಳಲು ಹಿಂಜರಿಯುತ್ತಿದ್ದೀಯ ಎಂದು.

 

ಅದಕ್ಕೆ ನಿನ್ನ ಬಳಿ ಬೇರೆ ಹುಡುಗನನ್ನು ಇಷ್ಟ ಪಡುತ್ತಿದ್ದೇನೆ ಎಂದು ಸುಳ್ಳು ಹೇಳಿದೆ. ಆಗ ನಿನ್ನಲ್ಲಿ ಉಂಟಾದ ಬದಲಾವಣೆ ನನಗೆ ಖಾತ್ರಿ ಆಯಿತು ನೀನು ನನ್ನನ್ನು ಪ್ರೀತಿಸುತ್ತಿದ್ದೀಯ ಎಂದು..

 

ಚೇತೂ ಐ ಲವ್ ಯೂ ಕಣೋ....

 

ಲೆಟರ್ ಓದಿ ಮುಗಿಸಿ ಹಿಂತಿರುಗಿ ನೋಡಿದರೆ ಅಲ್ಲಿ ಮೃದುಲ ನಿಂತಿದ್ದಾಳೆ. ಇಬ್ಬರ ಕಣ್ಣಂಚಲ್ಲೂ ಆನಂದದ ಕಂಬನಿ ತುಂಬಿತ್ತು.
Rating
No votes yet

Comments