' ಸೂರ್ಯಾಸ್ತ '
ಕವನ
ವಿಶಾಲ ನೀಲ ದಿಗಂತ
ಹಬ್ಬಿ ಹರಡಿದೆ
ಹಸಿರು ಸೀರೆಯ ಹಾಸು
ಗುಡ್ಡ ಬೆಟ್ಟ ಸಿರಿ ಕಂದರಗಳ
ಸುತ್ತಿ ಸುಳಿದು
ದೂರಾತಿ ದೂರದಲಿ
ಅಂಬರ ದಿಗಂತಗಳು
ಕೂಡುವೆಡೆಯಲ್ಲಿ ಸಾಗರ
ಭುವಿಯ ಸಂಗಮದಲ್ಲಿ
ಮೂಡಿರುವ
ಬೆಳ್ಳಿ ಕಡಲಂಚು
ನೀಲಿ ಬಟ್ಟಲನು
ಬೋರಲಿಟ್ಟಂತೆ
ಅವ್ಯಕ್ತ ಅನಂತ ದಿಗಂತ
ಪಡುವಣದ ದಿಶೆಗೆ
ಸರಿದ ನೇಸರ
ಕೆಂಪಾದ ರಂಗಾದ
ಸುವರ್ಣ ವರ್ಣದಳೆದ
ದಿನಕರನ ವಿಧ ವಿಧದ
ರೂಪಗಳ ಅನಾವರಣ
ಸಂಜೆಯ ಸೂರ್ಯ
ಬೋರಲಾಗಿಟ್ಟ ಕುಂಭ
ಗಗನದಂಗಣದಲ್ಲಿ
ತಿರುಗುವ ಬುಗುರಿ
ಅಂಡಾಕಾರ
ಫರಂಗಿ ಟೋಪಿಯ ರೂಪ
ಸಣ್ಣಾತಿ ಸಣ್ಣ ಗೆರೆಯಾಗಿ
ಕಡಲಲ್ಲಿ ಲೀನ
ಗಗನದ ತುಂಬೆಲ್ಲ
ಆವರಿಸಿದೆ
ಬಂಗಾರ ಬಣ್ಣದ ಛಾಯೆ
ಮೋಡಗಳ ಅಂಚಿಗೆ
ಸುವರ್ಣ ರೇಖೆ
ಸೂರ್ಯಬಿಂಬ ಕಣ್ಮರೆಯಾಗಿ
ಊದು ಬಣ್ಣದ ಛಾಯೆ
ನೀಲ ವರ್ಣದ ಮಬ್ಬು
ಮಬ್ಬಾದ ಅವಕುಂಠನ
ದೂರದ ಬಾನಿನಲಿ
ಚುಕ್ಕಿಗಳು ಅರಳಿ
ನಿಶೆಯು ಆವರಿಸಿದಳು
ಜಗದ ತುಂಬ
ಮೂಕ ವಿಸ್ಮಿತನಿಲ್ಲಿ
ಭಾವುಕ ನೋಡುಗ
ದೇವನ ವಿಸ್ಮಯ ಸೃಷ್ಟಿಗೆ
*
Comments
ಉ: ' ಸೂರ್ಯಾಸ್ತ '
In reply to ಉ: ' ಸೂರ್ಯಾಸ್ತ ' by swara kamath
ಉ: ' ಸೂರ್ಯಾಸ್ತ '
ಉ: ' ಸೂರ್ಯಾಸ್ತ '
In reply to ಉ: ' ಸೂರ್ಯಾಸ್ತ ' by venkatb83
ಉ: ' ಸೂರ್ಯಾಸ್ತ '