ಕತೆ : ಒಂದು ಕೊಲೆಯ ಸುತ್ತ [ಬಾಗ-4] . ಮುಕ್ತಾಯ.

ಕತೆ : ಒಂದು ಕೊಲೆಯ ಸುತ್ತ [ಬಾಗ-4] . ಮುಕ್ತಾಯ.

ಮೊದಲ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ :ಒಂದುಕೊಲೆಯ ಸುತ್ತ [ಬಾಗ೧]

ಎರಡನೆ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾದಿ :ಒಂದು ಕೊಲೆಯ ಸುತ್ತ [ಬಾಗ೨]

ಮೂರನೆ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ :ಒಂದು ಕೊಲೆಯ ಸುತ್ತ [ಬಾಗ೩] 

... ಮುಂದೆ ಓದಿ 

 

ಕತೆ : ಒಂದು ಕೊಲೆಯ ಸುತ್ತ [ಬಾಗ-4] 

 
  ಕಿರಣ್ ತನ್ನ ಮನೆಯಲ್ಲಿ ಇರಲಿಲ್ಲ. ಎಲ್ಲಿಗೆ ಹೋಗಿರುವನೆಂದು ಸಹ ಮನೆಯಲ್ಲಿದ್ದವರಿಗೆ ಗೊತ್ತಿಲಿಲ್ಲ.  ಮಗ ಬಂದಾನೆಂದು ಕುಳಿತಿರುವ ತಾಯಿಯ ಜೀವ, ಜೊತೆಗೆ ಅವನ ಇಬ್ಬರು ತಂಗಿಯರು. 
ಕಿರಣನ ಸ್ನೇಹಿತರ ಬಗ್ಗೆ ಕೇಳಿದ್ದಕ್ಕೆ ಆಕೆ ಗೋಳಾಟ ಮತ್ತೆ ಹೆಚ್ಚಿತ್ತು 
"ನೋಡಿ, ಮನೆಗೆ ಮಾರಿ ಊರಿಗೆ ಉಪಕಾರಿ ಎಂದರೆ ಇವನೆ ನೋಡಿ, ತನ್ನ ತಂಗಿಯರಿಗೆ ಒಂದು ಜೊತೆ ಬಟ್ಟೆ ತರುವದಿಲ್ಲ, ಅವರು ಹರಿದ ಬಟ್ಟೆಯನ್ನೆ ಸರಿಮಾಡಿ ಉಡುತ್ತಾರೆ,  ಮನೆಗೆ ಯಾವ ಸಹಾಯ ಮಾಡುವದಿಲ್ಲ, ಅದ್ಯಾರೊ ಅವನ ಸ್ನೇಹಿತನಿಗೆ ಕಾರು ಕೊಡಿಸಿದ್ದಾನೆ ಎಂದು ಎಲ್ಲರು ಬಂದು ಹೇಳುತ್ತಾರೆ,  ಅವನ ಸ್ವಭಾವವೆ ನಮಗೆ ಅರ್ಥವಾಗಲ್ಲ, ಅವನ ಸ್ನೇಹಿತರು, ಯಾರೊ ಬರಿ ಆಟೋ ಡ್ರೈವರ್ ಗಳು, ಟ್ಯಾಕ್ಸಿ ಡ್ರೈವರ್ ಗಳು, ಅವರಾದರು ಸರಿ ಇರುವರ,  ಎಲ್ಲ ಕೆಟ್ಟ ಅಭ್ಯಾಸದವರೆ, ನಿನಗೆ ನಿನ್ನ ತಂದೆ ಕೊಡಿಸಿ ಹೋದ ಕೆಲಸವಿದೆ ಓದಿದ ಹುಡುಗ, ಸರಿಯಾಗಿರೊ ಎಂದರೆ ಇವನಿಗೆ ಅವರ ಸಹವಾಸವೆ ಬೇಕು ಏನು ಮಾಡುವುದು ಹೇಳಿ"  ಎಂದರು ಆಕೆ
 
ಮತ್ತೆ 'ಅವರ ಹೆಸರೇನು, ನೀವು ನೋಡಿದ್ದೀರ' ಎನ್ನುವ ಪ್ರಶ್ನೆಗೆ
 
"ಇಲ್ಲ ಅವರ್ಯಾರು ನಮ್ಮ ಮನೆಯ ಒಳಗೆ ಬರುತ್ತಿರಲಿಲ್ಲ, ರಸ್ತೆಯಲ್ಲಿ ನಿಂತು ವಾಹನ ಹಾರ್ನ್ ಬಾರಿಸೋರು, ಇಲ್ಲ ಮೊಬೈಲ್ ಗೆ ಕಾಲ್ ಮಾಡೋರು, ಇವನು ಓಡಿಹೋಗೋನು, ನನಗೆ ತಿಳಿದಂತೆ ಮೂರು ನಾಲಕ್ಕು ಜನರಿದ್ದಾರೆ, ಅಯ್ಯಪ್ಪ, ಮುರಳಿ, ಶಿವ ಅಂತಲೊ ಏನೊ ಹೆಸರುಗಳು, ಇಲ್ಲೆ ಮಲ್ಲೇಶ್ವರದ ಸರ್ಕಲ್ ಹತ್ತಿರದ ಆಟೋ ಸ್ಟಾಂಡ್ ನಲ್ಲಿ ಯಾವಾಗಲು ಇರ್ತಾರಂತೆ" ಎಂದಳು ಆಕೆ.
 
 ಕಿರಣನ ಅಮ್ಮನಿಗೆ ಒಳಗೆ ಹೋದ ರಾಜಾರಾಮ್ ಮತ್ತು ಚಕ್ರಪಾಣಿ ಇಬ್ಬರು ಸಿವಿಲ್ ಡ್ರೆಸ್ ನಲ್ಲಿ ಇದ್ದದ್ದು,  ಪೋಲಿಸರು ಎಂದು ತಿಳಿಯಲೆ ಇಲ್ಲ , ಇವರಾರೊ ಕಿರಣನ ಸೊಸೈಟಿಯಿಂದ ಬಂದಿರುವ ಅಧಿಕಾರಿಗಳು ಅಂತಲೆ ಭಾವಿಸಿ ಉತ್ತರಿಸಿದ್ದಳು ಅಮಾಯಕಳಾದ ಆಕೆ. 
 
ಅಲ್ಲಿಂದ ಹೊರಟು , ದಯಾನಂದ ಹಾಗು ಚಕ್ರಪಾಣಿಯವರು ಮನೆಗೆ ಊಟಕ್ಕೆ ಹೋಗಿಬರುವದಾಗಿ ತಿಳಿಸಿ ಹೊರಟು ಹೋದರು,  ದಾರಿಯಲ್ಲಿ ನಾಯಕ್ ಹಾಗು ರಾಜಾರಾಮ್ ಹೈಗ್ರೌಂಡ್ಸ್ ಪೋಲಿಸ್ ಸ್ಟೇಷನ್ ಬಳಿ ಇಳಿದುಕೊಂಡು, ಹತ್ತಿರದ ಹೋಟೆಲ್ ನಲ್ಲಿ ಊಟ ಮುಗಿಸಿ ಇಬ್ಬರು ಸ್ಟೇಷನ್ ನಲ್ಲಿ ಬಂದು ಕುಳಿತರು. ಕಾನ್ ಸ್ಟೇಬಲ್ ಮಂಜುನಾಥ ಹಾಜರಾದ 
"ನಮಸ್ಕಾರ್ ಸಾರ್, ಬೆಳಗ್ಗೆ ಇಂದ ಕಾಣ್ಲೆ ಇಲ್ಲ ಸಾರ್, ಏನ್ ಸಾರ್ ಹೋಗಿ ಊಟ ತರೋದ, ನಮ್ಮ ಪಳಿನಿ ಹೋಟೆಲ್ ನಲ್ಲಿ ಚೆನ್ನಾಗೆಯೆ ಇರುತ್ತೆ, ಜೊತೆಗೆ ಒಂದು ಪ್ಲೇಟ್ ಪಕೋಡ ಕಟ್ಟಿಸಿ ಬಿಡ್ತೀನಿ" ಎಂದ.
ನಾಯಕ್ ನಗುತ್ತ ಹೇಳಿದರು.
"ಅದೆಲ್ಲ ಬೇಡಯ್ಯ, ನಮ್ಮದು ಊಟ ಆಯ್ತು, ನೀನು ಮತ್ತೊಂದು ಕೆಲಸ ಮಾಡಬೇಕಲ್ಲ, ಇಲ್ಲೆ ಮಲ್ಲೇಶ್ವರ, ಶೇಷಾದ್ರಿಪುರ ಅಂತ ಆಟೋ ಓಡಿಸುತ್ತ ಇರುವ ಇಬ್ಬರು ಡ್ರೈವರ್ ಹೆಸರು ಕೊಡ್ತೀನಿ, ಅಯ್ಯಪ್ಪ ಮತ್ತು ಮುರಳಿ ಅಂತ, ಒಬ್ಬ ಗಡ್ಡ ಬಿಟ್ಟಿರಬಹುದು, ವಯಸ್ಸು ಇಪ್ಪತೈದರಿಂದ ಮೂವತ್ತರ ಒಳಗೆ,  ಮಲ್ಲೇಶ್ವರ ಸರ್ಕಲ್ ಅಥವ ಮಧ್ಯದಲ್ಲಿ ಎಲ್ಲೊ ಇರ್ತಾರೆ ಅವರು ಅಥವ ಅವರ ಬಗ್ಗೆ ಗೊತ್ತಿರುವ ಆಟೋದವರು , ಸ್ನೇಹಿತರು , ಹೇಗಾದರು ನೀನು ಹಿಡಿದು ತರಬೇಕು, ಅವರನ್ನು ನೀನೇನು ಹೆದರಿಸಬೇಡ. ಸುಮ್ಮನೆ ಕರೆತಂದರೆ ಸಾಕು, ಮತೊಂದು ಕ್ಲೂ ಈಚೆಗೆ ಆಟೋ ಡ್ರೈವರ್ ಅಯ್ಯಪ್ಪ ಒಂದು ಕಾರು ಕೊಂಡಿದ್ದಾನೆ, ಅವನು ಸಹಕಾರನಗರದ ಸೊಸೈಟಿಯ ಕೆಲಸಗಾರ ಕಿರಣ್ ಎಂಬುವನ ಸ್ನೇಹಿತ. ನಿನಗೆ ಸಾದ್ಯವ? " ಎಂದ ನಾಯಕ್. 
 
ಮಂಜುನಾಥ ಒಂದು ಘಳಿಗೆ ಸುಮ್ಮನೆ ನಿಂತ
 
"ಸಾರ್, ನೀವು ಇಷ್ಟು  ದಿನಗಳಲ್ಲಿ ನನಗೆ ಕಾಫಿ ತಾ, ಊಟ ತಾ , ಸಿಗರೇಟು ತಾ ಎಂದು ಕೆಲಸ ಹೇಳ್ತಿದ್ರಿ,  ಇಷ್ಟು ವರ್ಷಕ್ಕೆ  ಒಂದು ಬಾರಿ ತಲೆ ಉಪಯೋಗಿಸುವ ಕೆಲಸ ಹೇಳ್ತಿದ್ದೀರಿ,  ನಾನು ಖಂಡೀತ ಮಾಡ್ತೀನಿ ಸಾರ್, ಬೇಕಾದರೆ ನೋಡಿ, ಹೊರಗೆ ಪಳಿನಿ ಹೋಟೆಲ್ ಗೆ ಹೇಳಿ ಕಾಫಿ ಕಳಿಸಿ ಹೋಗ್ತೀನಿ, ನನ್ನ ಕಾಲ್ ಗೆ ಕಾಯ್ತಾ ಇರಿ" ಅವನ ದ್ವನಿಯಲ್ಲಿ  ಎಂತದೊ ಸಂತಸ ಜೊತೆಗೆ, ದನ್ಯತಾಭಾವ ಗುರುತಿಸಿದ ನಾಯಕ್ ನಗುತ್ತ ಸುಮ್ಮನಾದ.
 
ಅವನು ಹೇಳಿದಂತೆ ಸ್ವಲ್ಪ ಹೊತ್ತಿನಲ್ಲೆ , ಕಾಫಿ ಸಿಗರೇಟ್ ಬಂದಿತು. ಇಬ್ಬರು ಕಾಫಿ ಕುಡಿಯುತ್ತ ಹಾಗೆ ರಿಲಾಕ್ಸ್ ಮಾಡಿದರು, ಮಧ್ಯಾಹ್ನ ಊಟದ ಸಮಯವಾದ್ದರಿಂದ ಗಲಾಟೆಯೆ ಸ್ವಲ್ಪ ಕಡಿಮೆ, ನಾಯಕ್ ಗೆ ನಿನ್ನೆಯಿಂದ ಓಡಾಡುತ್ತಿರುವುದು ಆಯಾಸ ಎನಿಸಿದರು, ಎಂತದೊ ಕೆಲಸದಲ್ಲಿ ಸಂತಸವು ಇತ್ತು. ಮಂಜುನಾಥ ಹೊರಟು ಒಂದು ಘಂಟೆಯ ಮೇಲಾಗಿತ್ತು. ರಾಜಾರಾಮ್ ರವರು
 
"ಸರಿ ನಾಯಕ್ , ನಾನು ಹೊರಡುತ್ತೇನೆ, ಮತ್ತೆ ಸಿಗುತ್ತೇನೆ, ಈ ಕೇಸಿನ ಬಗ್ಗೆ ಚರ್ಚಿಸುವ " ಎನ್ನುತ್ತ ಎದ್ದರು. 
 
ನಾಯಕನ ಮೊಬೈಲ್ ರಿಂಗ್ ಆಯಿತು, ಆ ಕಡೆಯಿಂದ ಮಂಜುನಾಥ
 
"ಸಾರ್ ನಾನು ಮಂಜುನಾಥ,  ಹತ್ತು ನಿಮಿಶ ಅಲ್ಲೆ ಇರಿ ಸಾರ್ , ನಿಮ್ಮ ಸ್ನೇಹಿತ್ರು ಇದ್ದರಾಲ್ಲ, ಸಿ.ಸಿ.ಬಿ ನೋರು, ಅವರ್ಗು ಇರಕ್ಕೆ ಹೇಳಿ, ನಾನು ಒಂದು ಸುದ್ದಿಯ ಜೊತೆ ಬರ್ತಾ ಇದ್ದೀನಿ" 
ರಾಜಾರಾಮ್ ರವರಿಗೆ  ಇದನ್ನು ತಿಳಿಸಿದ ನಾಯಕ್ ಸ್ವಲ್ಪ ಹೊತ್ತು ಕಾದು ಹೊರಡುವಂತೆ ತಿಳಿಸಿದ. ಅವರು ಕುತೂಹಲದಿಂದ ಸರಿ ಎಂದು ಕುಳಿತರು. 
 
ಮಂಜುನಾಥ ಹೇಳಿದಂತೆ, ಹತ್ತು ನಿಮಿಷದಲ್ಲಿ ಅವನು ಒಂದು ಆಟೋದಲ್ಲಿ ಬಂದಿಳಿದ. ಜೊತೆಗೆ ಆಟೋ ಡ್ರೈವರ್ ನನ್ನು ಒಳಗೆ ಕರೆತಂದ, ನಾಯಕನತ್ತ ನೋಡುತ್ತ ನುಡಿದ
"ಸಾರ್, ಇವನು ವೇಲು ಅಂತ, ಆಟೋ ಡ್ರೈವರ್, ಮಲ್ಲೇಶ್ವರದವನೆ, ಇವನಿಗೆ ಆ ಮುರಳಿ, ಮತ್ತು ಅಯ್ಯಪ್ಪ ಎಲ್ಲ ಚೆನ್ನಾಗಿಯೆ ಗೊತ್ತಂತೆ, ಅವರ ಜೊತೆ ಎರಡು ವರ್ಷದ ಕೆಳಗೆ, ಶಬರಿಮಲೈಗೆ ಹೋಗಿದ್ದನಂತೆ, ಮತ್ತೆಲ್ಲ ನಿಮಗೆ ಏನು ಬೇಕೊ ಅದನ್ನು ನೀವು ವಿಚಾರಿಸಿಕೊಳ್ಳಿ " ಎನ್ನುತ್ತ ನಿಂತ.
 ನಾಯಕ್ ಮಂಜುನಾಥನನ್ನು ಮೆಚ್ಚಿಗೆಯಿಂದ ನೋಡಿದರೆ, ರಾಜಾರಾಮ್ ರವರು ಅವನನ್ನು , 
"ವೆರಿ ಗುಡ್, ಮಂಜುನಾಥ್ ' ಎಂದು ಅಭಿನಂದಿಸಿದರು. ಯಾವ ಹಿನ್ನಲೆಯು ಗೊತ್ತಿಲ್ಲದ ಡ್ರೈವರ್ ವೇಲು ಮಾತ್ರ ಇವರನ್ನು ನೋಡುತ್ತ ನಿಂತಿದ್ದ. 
 
ರಾಜಾರಾಮ್ ವೇಲುವನ್ನು ಮಾತನಾಡಿಸುತ್ತ
 
"ವೇಲು , ಯಾವುದೊ ಕೇಸಿಗೆ ಕೆಲವು ಇನ್ ಫರ್ ಮೇಶನ್ ಬೇಕಾಗಿದೆ, ಸ್ವಲ್ಪ ನಿನ್ನ ಸ್ನೇಹಿತ, ಇದ್ದಾನಲ್ಲಪ್ಪ ಅಯ್ಯಪ್ಪ ಅನ್ನುವನು ಅವನನ್ನು ಕರೆತರಬೇಕಲ್ಲ , ಆಗುತ್ತಾ" ಎಂದರು. 
 
"ಏಕೆ ಸಾರ್, ಅಯ್ಯಪ್ಪ ನ , ಅವನು ಊರಿನಲ್ಲಿ ಇರೋದು ಡೌಟು ಸಾರ್, ಮೂರು ನಾಲಕ್ಕು ದಿನದಿಂದ ಅವನು ಸಿಕ್ಕಿಲ್ಲ, ಅವನು ಅವನ ನೆಂಟರ ಮನೆಗೆ ಹೋಗ್ತೀನಿ ಅಂತಿದ್ದ" ಎಂದ. 
"ಹೌದ, ವೇಲು, ಏನು ಮಾಡೋದು, ತುಂಬಾ ಅರ್ಜೆಂಟ್  ಇತ್ತಲ್ಲಪ್ಪ, ನಮ್ಮ ಬಾಸ್ ಗಳು ಸುಮ್ಮನೆ ತಲೆ ತಿಂತಾರೆ, ಈಗ ಏನಾದರು ಮಾಡಿ ಆ ಅಯ್ಯಪ್ಪನ ನೋಡ್ಬೇಕಲ್ಲ" ಎಂದರು. 
"ಏನು ಅರ್ಜೆಂಟ್ ಸಾರ್, ನನಗೆ ಗೊತ್ತಿದ್ದರೆ ನಾನೆ ಹೇಳ್ತೀನಿ ಕೇಳಿ " ಎಂದ ಅಮಾಯಕ ವೇಲು. 
"ಹಾಗಲ್ಲಪ್ಪ, ಅದು ಅವನ ಸ್ನೇಹಿತರಿಗೆ ಸೇರಿದ ವಿಶಯ,    ಅವನು ಸಿಗ್ತಾ ಇಲ್ಲ, ಅಲ್ಲದೆ ಒಂದು ರಹಸ್ಯವಿದೆ ನಿನಗೆ ನೇರವಾಗಿ ತಿಳಿಸುವಂತಿಲ್ಲ, ನೀನು ಹೆದರಬೇಡ, ನೀನು ಸಹಾಯ ಒಂದು ಮಾಡು, ನಿನಗೆ ಮುಂದೆ ಏನು ಬೇಕಾದರು ಅನುಕೂಲ ನಾನು ಮಾಡಿಕೊಡುತ್ತೇನೆ ನೋಡು ಈಗ ನನಗೆ ಹೇಗಾದರು ಸರಿ ಅಯ್ಯಪ್ಪ ಅನ್ನುವನನ್ನು ಬೇಟಿಯಾಗಬೇಕು " ಎಂದರು. 
"ಸಾರ್, ನನಗೆ ಸಹಾಯಮಾಡಲು ಏನು ತೊಂದರೆ ಎಲ್ಲ, ಆದರೆ ಅವನು ಊರಿನಲ್ಲಿ ಇಲ್ಲ, ತಮಿಳುನಾಡಿನ ಅವನ ನೆಂಟರ ಮನೆಗೆ ಹೋಗ್ತೀನಿ ಅಂತಿದ್ದ, ಈಗ ಅವನು ಇಲ್ಲಿ ಇಲ್ವಲ್ಲ ಹೇಗೆ ಕರೆತರಲಿ?"
"ಸರಿ ನೀನು ಹೇಳೋದು ನಿಜಾನೆ, ಅವನ ನೆಂಟನ ಮನೆ ಅಂದ್ಯಲ್ಲ ನಿನಗೆ ವಿಳಾಸ ಗೊತ್ತ, ನಾನೆ ಹೇಗಾದರು, ಸರಿ ಬೇಟಿ ಮಾಡಲು ನೋಡ್ತೇನೆ?"
"ಇಲ್ಲ ಸರ್ ನನಗೆ ವಿಳಾಸ ಹೇಳಲು ಗೊತ್ತಿಲ್ಲ, ಆದರೆ ಅವನ ನೆಂಟನ ಮನೆ ನೋಡಿ ಗೊತ್ತಿದೆ, ಹಿಂದೆ ಶಬರಿಮಲೈ ಮತ್ತು ತಮಿಳುನಾಡು ಟೂರು ಹೋಗುವಾಗ ಅವನ ಜೊತೆ ನಾನು ಅವರ ಮನೇಗೆ ಹೋಗಿದ್ವಿ, ಮದ್ಯಾನ ಊಟ ಅವರ ಮನೇಲೆ ಮಾಡಿದ್ವಿ" ಎಂದ.
"ಅಂದರೆ ನೀವು ಮನೆ ನೋಡಿದ್ದಿ ಅಂತ ಆಯ್ತು, ಈಗ ಅಲ್ಲಿಗೆ ಹೋಗಿಬರಲು ಸಾದ್ಯವ, ನಾನು ನಿನ್ನ ಜೊತೆ ಬರ್ತೇನೆ ಬೇಕಾದ್ರೆ" ಎಂದರು. 
" ಸಾರ್, ಅವನು ಹೋಗಿರುವುದು ತಮಿಳುನಾಡಿನ ವೆಲ್ಲೂರು ಸಮೀಪದ ಅಂಬೂರು ಎಂಬ ಊರಿಗೆ, ಬೇಗ ಅಂದ್ರು ಅಲ್ಲಿಗೆ ತಲುಪಲು , ಇಲ್ಲಿಂದ ಹೊರಟರೆ ನಾಲಕ್ಕು ಗಂಟೆ ಬೇಕು. ನನಗೆ ಒಮ್ಮೆ ಮಾತ್ರ ಹೋದ ನೆನಪು, ಅಲ್ಲಿಯ ಮುರುಘ ದೇವಾಸ್ಥಾನದ ಪಕ್ಕದ ಗಲ್ಲಿಯಲ್ಲಿ ಅವರ ಮನೆಗೆ ಹೋಗಿದ್ದ ನೆನಪಿದೆ, ಆದರೆ ವಿಳಾಸ ಹೇಳಕ್ಕೆ ಬರಲ್ಲ" 
"ಸರಿ ಈಗ ಹೊರಟರಾಯಿತು"  ಕೈಯಲ್ಲಿದ್ದ ವಾಚ್ ನೋಡುತ್ತ ನುಡಿದರು, ರಾಜಾರಾಮ್ 
"ಈಗಿನ್ನು ಮೂರು ಕಾಲು ಘಂಟೆ, ನಾಲಕ್ಕಕ್ಕೆ ಹೊರಟರು, ರಾತ್ರಿ ಎಂಟಕ್ಕೆ ಅಲ್ಲಿಗೆ ತಲುಪುತ್ತೇವೆ, ಅವನ ಜೊತೆ ಸ್ವಲ್ಪ ಮಾತನಾಡಬೇಕು, ಮುಗಿಸಿ ರಾತ್ರಿ ಹನ್ನೆರಡಕ್ಕೆ ಬೆಂಗಳೂರಿಗೆ ಹಿಂದೆ ಬಂದುಬಿಡಬಹುದು, ಬೇಕಾದರೆ ನಮ್ಮ ಜೀಪಿನಲ್ಲೆ ಹೋಗಿ ಬರೋಣ" ಎಂದರು.  
 ವೇಲುಗೆ ಆಶ್ಚರ್ಯ , ಇದೆಂತದು ಹೀಗೆ ಅರ್ಜೆಂಟ್ ಮಾಡ್ತಾ ಇದ್ದಾರೆ ಅದೇನು ಮಾತು ಇದ್ದೀತು ನಾಯಕ್ ಸ್ನೇಹಿತ ಅನ್ನೊ ಈ ವ್ಯಕ್ತಿಗೆ, ಇವನು ಯಾರಿರ ಬಹುದು ಯಾರಾದರು ರಾಜಕೀಯದವನ ಅಂತ ಯೋಚಿಸಿದ ವೇಲು. 
"ಸಾರ್ , ಅದು ಹೇಗೆ ಸಾರ್ , ನಾನು ಮನೆಗು ಹೇಳಿ ಬಂದಿಲ್ಲ, ಅಲ್ಲದೆ ನಾಳೆ ಬೆಳಗ್ಗೆ ಎದ್ದು ಹೋದರಾಗಲ್ವೆ ಬೇಕಾದರೆ ಬರ್ತೀನಿ" ಎಂದ ವೇಲು ಅರ್ದ ಮನಸ್ಸಿನಿಂದ
"ಹಾಗಲ್ಲಪ್ಪ , ನಿನಗೆ ಗೊತ್ತಿಲ್ಲ ಶುಭಸ್ಯ ಶೀಘ್ರಂ ಅಂತಾರೆ ದೊಡ್ಡೋವ್ರು, ನನಗೆ ಈಗ ಅಂದರೆ ಈಗಲೆ ಆಗಿ ಬಿಡಬೇಕು, ನಾಯಕ್ ನೀನು ವೇಲುಗೆ ಹೇಳಿ ಒಪ್ಸಪ್ಪ, ನಾನು ಎರಡೆ ನಿಮಿಷ ಬರ್ತೇನೆ" ಎನ್ನುತ್ತ ಸ್ಟೇಷನ್ನಿನಿಂದ ಹೊರಬಂದು. ತಮ್ಮ  ಚೀಫ್ ದಯಾನಂದರಿಗೆ ಪೋನಿನಲ್ಲಿ ಮಾತನಾಡಿದರು,
"ಸಾರ್, ಈಗಲೆ ಹೊರಟು ಬಿಡ್ತೇವೆ ಸಾರ್, ನಾಳೆ ಎಂದರೆ ಹೇಗೋ, ನಮ್ಮ ಪಾರ್ಟಿಗಳು ತಪ್ಪಿಸಿಕೊಂಡರೆ ಕಷ್ಟ, ನಾನು ಚಕ್ರಪಾಣಿಯವರಿಗೆ ಮಾತನಾಡ್ತೇನೆ ಸಾರ್ , ನೀವು ಹೇಳಿ, ನಮ್ಮ ಜೀಪಿನಲ್ಲಿ ನಾನು ನಾಯಕ್ ಮತ್ತು ವೇಲು ಜೊತೆಗೆ ಒಬ್ಬರು ಹೋಗ್ತೀವಿ, ನಮ್ಮ ಜೀಪನ್ನು , ಒಂದು ವ್ಯಾನ್ ಹಿಂಬಾಲಿಸಲಿ ಸಾರ್, ಅದರಲ್ಲಿ ನಾಲಕ್ಕು , ಸಬ್ ಇನ್ಸ್ ಪೆಕ್ಟರ್, ಹಾಗು ನಾಲಕ್ಕು ಕಾನ್ ಸ್ಟೇಬಲ್ ಇರಲಿ ಸಾಕು, ಆದರೆ ನಮ್ಮ ಜೀಪಿಗೆ ಅವರು ಕಾಣಿಸಿಕೊಳ್ಳುವುದು ಬೇಡ, ನಾನು ಅವರ ಕಾಂಟಾಕ್ಟ್ ನಲ್ಲಿರುತ್ತೇನೆ" ಎಂದರು.
ಅದಕ್ಕೆ ದಯಾನಂದ್ "ನೀವನ್ನುವುದು ಸರಿ, ಈಗಲೆ ಹೊರಡಿ, ಕೇಸ್ ಬೇಗ  ಕನ್ಸಾಲಿಡೇಟ್ ಆಗಲಿ ನಮಗೆ ಒತ್ತಡ ತಪ್ಪುತ್ತೆ, ನಾನು ಚಕ್ರಪಾಣಿಯವರಿಗೆ ಎಲ್ಲ ಕನ್ವೇ ಮಾಡ್ತೇನೆ, ನೀವು ಹೊರಟ ಹತ್ತು ನಿಮಿಶಕ್ಕೆ ಅವರು ಹೊರಡ್ತಾರೆ, ಇನ್ನೊಂದು ವಿಷಯ,  ನೀವು ಹೇಳ್ತಿರೊ, ಅಂಬೂರಿನಲ್ಲಿ , ಪೋಲಿಸ್ ಎಸ್ ಪಿ ನಮ್ಮ ಬೆಂಗಳೂರಿನೋನೆ  ಪನ್ನೀರ್ ಸೆಲ್ವಂ ಅಂತ ಹೆಸರು ನನ್ನ ಜೊತೆ ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಓದಿದೋನು, ನೀವು ಹೋಗಿ ಬೆಂಗಳೂರಿನ ಜನ ಅಂದ್ರೆ ಸಾಕು ಏನು ಬೇಕಾದ್ರು ಹೆಲ್ಪ್ ಮಾಡ್ತಾನೆ, ನಾನು ಅವನಿಗೆ ಪೋನ್ ಮಾಡ್ತೀನಿ, ನೀವು ಹೆಲ್ಪ್ ತಗೋಳ್ಳಿ , ವಿಶ್ ಯು ಆಲ್ ಸೆಕ್ಸಸ್ " ಅಂತ ವಿಶ್ ಮಾಡಿದ್ರು 
 
 ಸರಿಯಾಗಿ ನಾಲಕ್ಕು ಗಂಟೆ ಮೂವತ್ತು ನಿಮಿಶಕ್ಕೆ , ನಾಯಕ್, ರಾಜಾರಾಮ್, ವೇಲು ಕುಳಿತ ಸಿ.ಸಿ.ಬಿ   ಜೀಪ್ ಆಗಲೆ ಎಲೆಕ್ಟ್ರಾನಿಕ್ ಸಿಟಿಯ ಮೇಲು ಸೇತುವೆ ದಾಟಿ , ೮೦ ಕಿ.ಮಿ. ವೇಗದಲ್ಲಿ ತಮಿಳುನಾಡಿನ ಕಡೆ ಓಡುತ್ತಿತ್ತು. ವೇಲುಗೆ ಇನ್ನು ಅರ್ಥವಾಗಿರಲಿಲ್ಲ, ಇವರು ಅಯ್ಯಪ್ಪನ ಹತ್ತಿರ ಅದೇನು ಅಂತ ಅರ್ಜೆಂಟ್ ಮಾತನಾಡಬೇಕು. ಪಾಪ ವೇಲು ಫೋನಿನಲ್ಲಿ ಮನೆಗೆ ತಾನು ತಡವಾಗಿ ಬರುವದಾಗಿ ತಿಳಿಸಿ ಗಡಿಬಿಡಿಯಲ್ಲಿ ಹೊರಟಿದ್ದ. ಅವನ ಆಟೋ   ಹೈಗ್ರೌಂಡ್ಸ್ ಪೋಲಿಸ್ ಸ್ಟೇಶನ್ ನಲ್ಲಿಯೆ ಇದ್ದಿತ್ತು, ಮಂಜುನಾಥನು ಸ್ವಲ್ಪ ತಮಾಶಿಯಾಗಿಯೆ
"ನಿನ್ನ ಆಟೋ ಇಲ್ಲಿಯೆ ಇರುತ್ತದೆ ಬೇಗ ಬಂದುಬಿಡಪ್ಪ, ನಮ್ಮವರನ್ನು ನಂಬುವುದು ಕಷ್ಟ, ನೀನು ಬರುವುದು ತಡ ಮಾಡಿದರೆ, ನಿನ್ನ ಆಟೋ ಪಾರ್ಟ್ ಗಳನ್ನು ಬಿಚ್ಚಿ ಮಾರಿಕೊಂಡು ಬಿಡ್ತಾರೆ" ಅಂತ ಹೆದರಿಸಿದ್ದ. 
ಎಲ್ಲರು ನಕ್ಕರೆ ವೇಲು ಮಾತ್ರ ಅದು ನಿಜವೇನೊ ಅಂತಲೆ ಹೆದರಿದ್ದ.  
 
  ಇವರ ವಾಹನ ಅಂಬೂರು ತಲುಪಲು ಕಡಿಮೆ ಅಂದರು ರಾತ್ರಿ ಎಂಟುವರೆ ಒಂಬತ್ತು ಗಂಟೆಯಾಗಬಹುದು, ದಾರಿಯಲ್ಲಿ ನಾಯಕ್ ಹಾಗು ರಾಜಾರಾಮ್ ಸ್ವಲ್ಪ ಮೌನ ವಹಿಸಿದ್ರು, ವೇಲು ಎದುರು ಮಾತು ಬೇಡ ಅಂತ. ದಾರಿಯಲ್ಲಿ ಕಾಪೀಗೆ ಅಂತ ಹತ್ತು ನಿಮಿಶಕ್ಕೆ ಇಳಿದಾಗ, ಹಿಂದೆ  ಪೋಲಿಸ್ ವ್ಯಾನ್ ಬರುತ್ತಿರುವುದು ಕನ್ ಫರ್ಮ್ ಮಾಡಿಕೊಂಡರು ರಾಜಾರಾಮ್.  ನಾಯಕ್ ಮಾತ್ರ ಅವರ ಜೊತೆ ಮಾತನಾಡುತ್ತ, 
"ಸಾರ್ , ಕಾರಿನ ಫಸಲ್ ಒಂದು ಸಾಲ್ವ ಆಗಬೇಕಿದೆ ಅನ್ನಿಸುತ್ತೆ, ಅದನ್ನು ಟ್ರೇಸ್ ಮಾಡಬೇಕು" ಅಂದ. ರಾಜಾರಾಮ್ ಸಹಿತ, 
"ಬಿಡಿ , ಈಗ ಈ ಅಯ್ಯಪ್ಪ ಏನಾದರು ಸಿಕ್ಕಿದರೆ, ಆ ಕಾರಿನ ವಿಷಯವು ತಿಳಿಯುತ್ತೆ" ಎನ್ನುವಾಗ, ಮೂತ್ರ ವಿಸರ್ಜೆನೆಗೆಂದು ಹಿಂದೆ ಹೋಗಿದ್ದ  ವೇಲು,  ಬರುವಾಗ ಕಡೆಯಲ್ಲಿ ಇವರ ಮಾತು ಕೇಳಿಸಿಕೊಂಡು
"ಯಾವ ವೆಹಿಕಲ್ ಸಾರ್ ನೀವು ಮಾತಾಡ್ತೀರೋದು,  ಅದೆ ಅಯ್ಯಪ್ಪನ ಹೊಸ ಕಾರಿನದ? ಏನು ಸಮಸ್ಯೆ " ಎಂದ.
ತಕ್ಷಣ ರಾಜಾರಾಮ್ ಮಾತು ಬದಲಾಯಿಸಿದರು
"ಹೌದೂರಿ, ಅದೇ ಈಗ ಸಮಸ್ಯೆ ಬಂದಿರೋದು, ಅದೇನೊ ನಿಮ್ಮ ಅಯ್ಯಪ್ಪ  ತಮಿಳುನಾಡಿನ ಕಾರ್ ತಂದಿದ್ದಾರಂತೆ, ಆದರೆ ಇವರು ಸೆಕೆಂಡ್ ಹ್ಯಾಂಡ್ ಕೊಳ್ಳುವ ಮೊದಲೆ ಅಲ್ಲಿ ತಮಿಳುನಾಡಿನಲ್ಲಿ ಆ ಕಾರಿನಲ್ಲಿ ಒಂದು ಕೊಲೆಯ ಪ್ರಯತ್ನವಾಗಿದೆ, ನಿಮ್ಮ ಅಯ್ಯಪ್ಪ ಗೊತ್ತಿಲ್ಲದೆ ಅದನ್ನು ಕೊಂಡಿದ್ದಾರೆ ಅನ್ನಿಸುತ್ತೆ, ನಮಗೆ ತಮಿಳು ನಾಡಿನ ಪೋಲಿಸರು,ವಿವರ ಕೇಳ್ತಿದ್ದಾರೆ, ಅದಕ್ಕೆ ನಾವು ಹೊರಟಿರುವುದು " ಅಂತ ಕತೆ ಕಟ್ಟಿದರು, ವೇಲು ತಕ್ಷಣ ನಂಬಿಬಿಟ್ಟ.
"ಅಯ್ಯೊ ಹೌದಾ ಸಾರ್, ನೀವು ಮೊದಲೆ ವಿಷಯ ತಿಳಿಸುವದಲ್ವ,  ನಾನು ಹೇಳ್ತಿದ್ದೆ, ಆ ಕಾರನ್ನು ನನಗೆ ಕೊಟ್ಟು ಅದನ್ನು  ರಿಪೇರಿಗೆ ಬಿಡು ಅಂತ ಅಯ್ಯಪ್ಪ ಹೇಳಿ ಹೋಗಿದ್ದ, ಅದೇನೊ ಮುಂದೆ ನೆಗ್ಗಿ ಹೋಗಿದೆ, ಅದನ್ನು ತರುವಾಗಲೆ ಹಾಗೆ ಆಗಿತಂತೆ,  ಅಲ್ಲೆ ಮಲ್ಲೇಶ್ವರದ ವಿನಾಯಕ ಕಾರ್ ಸರ್ವಿಸ್ ಸೆಂಟರ್ ಗೆ ಕೊಟ್ಟಿದ್ದೇನೆ, ನಾಳೆ ಕೊಡಬಹುದು, ಈಗ ಏನು ಸಮಸ್ಯೆಯಾಗುತ್ತ ಸಾರ್ " ಎಂದ. 
 
ನಾಯಕ್ ಹಾಗು ರಾಜಾರಾಮ್ ಮುಖ ಮುಖ ನೋಡಿಕೊಂಡರು, ಅದೇನೊ ಈ ಕೇಸಿನಲ್ಲಿ ಎಲ್ಲವು ಸಾಕ್ಷಿಗಳು ಕಾಲಿಗೆ ತೊಡರುತ್ತಿವೆ,  ತಿಂಗಳು ಅಂದುಕೊಂಡದ್ದು  ಎರಡು ಮೂರು ದಿನದಲ್ಲೆ ಸಾಲ್ವ್ ಆಗುವಂತಿದೆ ಅಂದುಕೊಂಡರು ರಾಜಾರಾಮ್  . ಮತ್ತೆ ದಯಾನಂದ್ ಗೆ ಮೊಬೈಲ್ ಮಾಡಿ ವಿಷಯ ತಿಳಿಸಿದರು.  
"ಸಾರ್ ಆ ಕಾರು ಮಲ್ಲೆಶ್ವರದ ವಿನಾಯಕ ಕಾರ್ ಸರ್ವಿಸ್ ಸೆಂಟರ್ ನಲ್ಲಿದೆ " ಎಂದು. 
--------------------- ..................
 
 
 ಇವರ ಕಾರು ಅಂಬೂರು ತಲುಪುವಾಗ ರಾತ್ರಿ  ಎಂಟುಗಂಟೆ, ನಲವತ್ತು ನಿಮಿಷ , ಊರ ಹೊರಗೆ ಸ್ವಲ್ಪ ಕಾಯುತ್ತ ನಿಂತರು, ಹಿಂದಿನಿಂದ ಬರುತ್ತಿರುವ ವ್ಯಾನಿಗೆ, ವೇಲುಗೆ  ಅವರು ಕಾಯುತ್ತಿರುವದೇತಕ್ಕೆ ಎನ್ನುವುದು ತಿಳಿಯಲಿಲ್ಲ. ನಂತರ ಅವರು ಅಲ್ಲಿಯ ಪೋಲಿಸ್ ಸ್ಟೇಶನ್ ಗೆ ಹೋಗಿ ಅಲ್ಲಿಯ ಸಬ್ ಇನ್ಸ್ ಪೆಕ್ಟರ್ ನನ್ನು ಬೇಟಿಮಾಡಿ ತಾವು ಬಂದಿರುವ ವಿಷಯ ತಿಳಿಸಿದರು, ದಯಾನಂದ ಸಾಹೇಬರ ಕಾಲ್ ಕೆಲಸ ಮಾಡಿತ್ತು, ಅಲ್ಲಿನವರೆಲ್ಲ ಎಲ್ಲ ಸಹಕಾರಕ್ಕೆ ಸಿದ್ದರಾದರು. ಮತ್ತೆ ಹಿಂದಿನಿಂದ ವ್ಯಾನ್ ಬಂದು ಸೇರಿ ಕೊಂಡಿತು. ವೇಲುಗೆ ದಾರಿ ತೋರಿಸು ನಡಿ, ಎಂದು ಹೊರಟಾಗ ವೇಲುಗೆ ಎಂತದೊ ಅನುಮಾನ , ಕೇವಲ ಅಯ್ಯಪ್ಪನನ್ನು ಬೇಟಿಮಾಡಲು ಇಷ್ಟೊಂದು ಏರ್ಪಾಡೇಕೆ, ಇದರಲ್ಲಿ ಎಂತದೊ ಮೋಸವಿದೆ ಎಂದು ಅವನಿಗೆ ಅನಿಸ ಹತ್ತಿತ್ತು, ಆದರೆ ಸುತ್ತಲು ಬರಿ ಪೋಲಿಸರು, ಅವನು ಏನುಮಾಡುವ ಹಾಗಿರಲಿಲ್ಲ. ಎರಡು ವರ್ಷದ ಹಿಂದೆ ಬಂದ ನೆನಪಿನಿಂದ ಅವನು , ಅಂಬೂರಿನ ಮುರುಘ ದೇವಾಲಯದ ಪಕ್ಕದ ಸಂದಿಯಲ್ಲಿ ಹೋಗಿ 
"ಸಾರ್ ಜೀಪಿ ನಿಲ್ಲಿಸಿ ಇಲ್ಲಿಂದ ವಾಹನ ಹೋಗುವದಿಲ್ಲ,  ಹತ್ತಿಪ್ಪತ್ತು ಅಡಿಯಷ್ಟು ನಡೆಯಬೇಕು " ಎಂದ, 
ಅವನಿಗೆ ಎರಡು ವರ್ಷದ ಹಿಂದೆ ಬಂದ ಸ್ಥಳಕ್ಕೆ ಸರಿಯಾಗಿ ಬಂದಿರುವದಕ್ಕೆ ಸಂತಸ.
ವೇಲು ಜೊತೆ ಜೊತೆಯಾಗಿ, ರಾಜಾರಾಮ್, ನಾಯಕ್, ಅಲ್ಲಿಯ ಅಧಿಕಾರಿ ಗೋಪಿನಾಥ್, ಹಿಂದೆ ವ್ಯಾನಿನನಲ್ಲಿದ್ದ ಇಬ್ಬರು ಇನ್ಸ್ ಪೆಕ್ಟರ್ ಎಲ್ಲ ಹೊರಟರು,
"ಸಾರ್ ಇದೆ ಮನೆ, ದೀಪ ಇನ್ನು ಉರೀತಿದೆ, ಎದ್ದಿರಬಹುದು" ಎಂದ.
ಆಗ ರಾಜಾರಾಮ್ , 'ವೇಲು ನೀನು ಒಂದು ಕೆಲಸ ಮಾಡು, ನೀನು ಹಿಂದೆ ಹೋಗಿ, ನಾವು ಬಂದ ವ್ಯಾನಿನಲ್ಲಿ ಕುಳಿತುಕೊ, ನಾವು ಇಲ್ಲಿ ಬಂದಿರುವುದು ನಿನ್ನ ಸ್ನೇಹಿತ , ಅಯ್ಯಪ್ಪ ಹಾಗು ಇತರ ಅವನ ಗೆಳೆಯರನ್ನು ಹಿಡಿಯಲು, ಅವರು ಒಂದು ಕೊಲೆಯಲ್ಲಿ ಬಾಗಿಯಾಗಿದ್ದಾರೆ, ನೀನೇನು ಗಾಭರಿಯಾಗಬೇಡ, ಸದ್ಯಕ್ಕೆ ಅವರೆಲ್ಲ ನಿನ್ನ ನೋಡುವುದು ಬೇಡ" ಎಂದರು. 
 
ವೇಲುಗೆ ಗಾಬರಿಯಾಗಿ , ಕಾಲು ನಡುಗಿತು, ಇದೆಂತದು ನನಗೆ ಯಾವ ಸುಳಿವು ಕೊಡದೆ ನನ್ನನ್ನು ಹೀಗೆ ಸುಳ್ಳು ಹೇಳಿ ಕರೆದು ತಂದರಲ್ಲ, ಪಾಪ ಅಯ್ಯಪ್ಪ ನನ್ನು ನಾನೆ ಪೋಲಿಸಿಗೆ ಕೊಟ್ಟ ಹಾಗೆ ಆಯ್ತು, ಆದರೆ ಇವರೇನು ಹೇಳುತ್ತಿದ್ದಾರೆ, ಅಯ್ಯಪ್ಪ ಯಾವ ಕೊಲೆ ಮಾಡಿದ. ಹೀಗೆಲ್ಲ ಯೋಚಿಸುತ್ತ , ವೇಲು ಮಂಕಾಗಿ ನಿದಾನಕ್ಕೆ ಹೋಗಿ, ಅವರು ಹೇಳಿದಂತೆ , ತಾನು ಬಂದಿದ್ದ ಜೀಪಿನಲ್ಲಿ ಹೋಗಿ ಕುಳಿತ, ಪಕ್ಕದಲ್ಲಿ ಡ್ರೈವರ್ ಇವನ ಮುಖ ನೋಡಿ ನಕ್ಕ.
 
 ----  ----------------
 
 ಮುಂದಿನದೆಲ್ಲ  ಪೋಲಿಸರ  ನಿರೀಕ್ಷೆಯಂತೆ ನಡೆಯಿತು. ಅಲ್ಲಿ ಅಯ್ಯಪ್ಪ , ಕಿರಣ, ಶಿವ ಅಲ್ಲದೆ ಮತ್ತೊಬ್ಬ ಅವರ ಗೆಳೆಯ ಮುರಳಿ ಕಣ್ಣು ಕಣ್ಣು ಬಿಟ್ಟರು. ಅಷ್ಟು ದೂರದ ಬೆಂಗಳೂರಿನಿಂದ ತಮ್ಮ ವಾಸನೆ ಹಿಡಿದು ಅವರು ಬಂದುದ್ದು ಹೇಗೆ ಎಂದು ಅವರಿಗೆ ಗೊತ್ತಾಗಲಿಲ್ಲ. ಬಾಗಿಲು ತೆರೆಯುವಾಗಲೆ ಕಾಣಿಸಿದ ಪೋಲಿಸನ್ನು ಕಂಡು ಅಯ್ಯಪ್ಪನ ಚಿಕ್ಕಪ್ಪನು ಗಾಬರಿ ಬಿದ್ದ.  ನಾಲ್ವರನ್ನು ಹಿಡಿದು, ಬೇಡಿ ತೊಡಿಸಿ, ಎಳೆದು ತಂದು ಮುಂದಿದ್ದ ವ್ಯಾನಿನಲ್ಲಿ ಎಲ್ಲರನ್ನು ಕೂಡಿಸಿದರು, ಹಿಂದೆಯೆ ಬೆಂಗಳೂರಿನಿಂದ ಬಂದಿದ್ದ, ಸಬ್ ಇನ್ಸ್ ಪೆಕ್ಟರ್ ಗಳು , ಕಾನ್ಸ್ ಟೇಬಲ್ಸ್ ಎಲ್ಲರು ಹತ್ತಿ ಕೂತರು, ಜೊತೆಗೆ ರಾಜಾರಾಮ್, ನಾಯಕ್, ಎಲ್ಲರು ಅಂಬೂರಿನ ಪೋಲಿಸ್ ಸ್ಟೇಶನ್ ತಲುಪಿದರು, ಅಲ್ಲಿ ಕೆಲವು ಫಾರ್ಮಾಲಿಟೀಸ್ ಮುಗಿಯುವಾಗ ಅರ್ದಗಂಟೆಯಾಯಿತು, ಎಲ್ಲರು ಅಲ್ಲಿಯೆ  ಇಡ್ಲಿ ತರಿಸಿ ತಿಂದರು, ಅಲ್ಲಿಂದ ಬೆಂಗಳೂರಿನ ಕಡೆಗೆ ಮತ್ತೆ ಪೋಲಿಸ್ ವ್ಯಾನ್ ತಿರುಗಿದಾಗ, ಸರಿ ರಾತ್ರಿ ಹನ್ನೆರಡು ಗಂಟೆ. 
 ನಾಯಕ್ ಅಂದರು ರಾಜಾರಾಮ್ ಬಳಿ 
"ಮತ್ತೆ ನಾಲಕ್ಕು ಗಂಟೆಗಿಂತ ಹೆಚ್ಚು ಕಾಲ ಗಾಡಿಯಲ್ಲಿಯೆ ಕೂಡಬೇಕು, ನಿದ್ದೆಯಂತು ದೂರ ಉಳಿಯಿತು. ಸಮಯ ಕಳೆಯುವುದು ಹೇಗೆ?" 
 
ರಾಜಾರಾಮ್ ಗಟ್ಟಿಯಾಗಿ ನಕ್ಕರು. " ನಿದ್ದೆ ಎಲ್ಲಿ ಬಂತು, ನಮಗೂ ನಿದ್ದೆಯಿಲ್ಲ, ನಮ್ಮ ಕೈಲಿ ಸಿಕ್ಕಿರುವರಿಗು ನಿದ್ದೆಯಿಲ್ಲ. ಸುಮ್ಮನೆ ಕೂಡಲು ಸಮಯವೆಲ್ಲಿದ್ದೆ, ಈಗ ಇಂಟರಾಗೇಶನ್ ಪ್ರಾರಂಬವಾಗಬೇಕಲ್ಲ"
  
    ಮತ್ತೇನು,  ಪೋಲಿಸ್ ವ್ಯಾನ್ ಬೆಂಗಳೂರಿನ ಹತ್ತಿರ ಬರಲು ಸುಮಾರು ನಾಲಕ್ಕು ಗಂಟೆ ತೆಗೆದು ಕೊಂಡಿತು,  ಅಂಬೂರಿನಿಂದ ಬೆಂಗಳೂರಿನವರೆಗು ಅರ್ದರಾತ್ರಿಯಲ್ಲಿ ಹೆದ್ದಾರಿಯಲ್ಲಿ ಅದೇ ವಾಹನದಲ್ಲೆ  ರಾಜಾರಾಮ್ , ನಾಯಕ್ ಮತ್ತು ಉಳಿದ ಸಬ್ ಇನ್ಸ್ ಪೆಕ್ಟರ್ ಗಳು  ಕೈದಿಗಳ ವಿಚಾರಣೆ ಪ್ರಾರಂಬಿಸಿದರು. 
 ಬೆಂಗಳೂರಿಗೆ ತಲುಪುವ ವೇಳೆಗೆ ಹೆಚ್ಚು ಕಡಿಮೆ, ಪ್ರಕರಣದ ಅಪರಾದಿಗಳ ವಿಚಾರಣೆ ಮುಗಿದಿತ್ತು. ಕಿರಣ್ , ಅಯ್ಯಪ್ಪ, ಮುರಳಿ ಹಾಗು ಶಿವ ತಮ್ಮ ಅಪರಾದಗಳನ್ನು ಒಪ್ಪಿಕೊಂಡಿದ್ದರು.
------------------------------------------- -------
 
ಮಿರ್ಜಿ ಸಾಹೇಬರ ಪ್ರೆಸ್ ಮೀಟ್ : 
 
 ಪೋಲಿಸ್ ಕಮೀಶನರ್ ಮಿರ್ಜಿ ಸಾಹೇಬರು , ಮರುದಿನವೆ ಪ್ರೆಸ್ ಮೀಟ್ ಕರೆದಿದ್ದರು. ಅವರು ಕೊಲೆಯ ಎಲ್ಲ ವಿವರಗಳನ್ನು ಒದಗಿಸಿದರು. ಕಿರಣ್ , ತನ್ನ ತಂದೆಯ ಸಾವಿನ ನಂತರ ಅವರು ಕೆಲಸ ಮಾಡುತ್ತಿದ್ದ ಸೊಸೈಟಿಯಲ್ಲಿಯೆ ಕೆಲಸಕ್ಕೆ ಸೇರಿಕೊಂಡ. ಚಿಕ್ಕ ವಯಸಿನಿಂದಲೆ ದಾರಿ ತಪ್ಪಿದ್ದ ಅವನು ಕೈಗೆ ಹಣ ಸಿಗುವಂತಾದಗ, ಅದರ ದುರುಪಯೋಗಕ್ಕೆ ಮನಸ್ಸು ಕೊಟ್ಟ, ಅದಕ್ಕೆ ಇಂಬುಗೊಟ್ಟಂತೆ ಅವನ ಸ್ನೇಹಿತರು. ಕೋತಿಗೆ ಹೆಂಡ ಕುಡಿಸಿದಂತೆ ಆಗಿತ್ತು ಅವನ ಸ್ಥಿಥಿ. ತನಗೆ ಬೇಕಾದ ಎಲ್ಲ ದುಶ್ಚಟಗಳಿಗೂ ತಾನು ಕೆಲಸ ಮಾಡುವ ಸೊಸೈಟಿಯ ಹಣ ಲಪಟಾಯಿಸುತ್ತಿದ್ದ. ಸೊಸೈಟಿಯಲ್ಲಿ , ಇನ್ನು ಚಿಕ್ಕವನು ಎಂಬ ಭಾವನೆ, ಅವನ ತಂದೆಯ ಮೇಲಿದ್ದ ನಂಭಿಕೆ, ಇವನನ್ನು ಯಾರು ಗಮನಿಸದಂತೆ ಮಾಡಿತ್ತು.  ಈ ರೀತಿ ಒಂದೆರಡು ವರ್ಷಗಳಲ್ಲಿ ಇವನು ಸೊಸೈಟಿಗೆ ಮೋಸ ಮಾಡಿದ ಹಣ ಹಲವು ಲಕ್ಷ ದಾಟಿತ್ತು, ಇಂತಹ ಸಂದರ್ಭದಲ್ಲಿ ಮಹಾಂತೇಶ್ , ಸೊಸೈಟಿಗೆ ಆಡಿಟಿಂಗ್ ಗೆ ಬರುವದಾಗಿ ಸೂಚನೆ ಕಳಿಸಿದ್ದ. ಅದೊಂದು ರೊಟಿನ್ ಡ್ಯೂಟಿ, ಆದರೆ ಮಹಾಂತೇಶನ ಬಗ್ಗೆ ಮೊದಲೆ ಬಹಳ ಕೇಳಿದ್ದ ಕಿರಣ್ ಮಾತ್ರ ಹೆದರಿಹೋಗಿದ್ದ. ಅವನು ಬಂದ ದಿನವೆ ತನ್ನ ಕರೆಸಿ ವಿವರ ಕೇಳಿ ಮರುದಿನ ಬರುವದಾಗಿ ತಿಳಿಸಿ ಹೋಗಿದ್ದ. ಕಿರಣ್ ಗೆ ಈ ಪರಿಸ್ಥಿಥಿಯಿಂದ ಪಾರಾಗಬೇಕಿತ್ತು. ಹೆಚ್ಚು ಕಡಿಮೆಯಾದರೆ, ತನ್ನ ಕೆಲಸವು ಹೋಗುವುದು, ಜೈಲು ಸೇರಬೇಕಾಗಬಹುದು. ಅವನು ಚಿಂತಿಸಿದ.
 
 ಅವನಿಗೆ ಹೊಳೆದ ಉಪಾಯವೆಂದರೆ, ಹೇಗಾದರು ಸರಿ ಮಹಾಂತೇಶ ಸೊಸೈಟಿಗೆ ಆಡಿಟಿಂಗ್ ಗೆ ಬರದಂತೆ ಮಾಡುವುದು, ಅಂದರೆ ಅವನ ಮೇಲೆ ಅಟ್ಯಾಕ್ ಮಾಡಿ ಅವನು ಆಸ್ಪತ್ರೆ ಸೇರಿದರೆ  ಸರಿ  ಎನ್ನುವ ಭಾವ. ಸದಾ ತನ್ನ ಜೊತೆ ಸುತ್ತುವ ಅಯ್ಯಪ್ಪ, ಮುರುಳಿ, ಶಿವ ಎಂಬುವರನ್ನು ಸರಿಮಾಡಿಕೊಂಡ. ಈಚೆಗೆ ಅವನು ಹಣಕೊಟ್ಟು ಅಯ್ಯಪ್ಪನಿಗೆ ಒಂದು ಕಾರು ಕೊಡಿಸಿದ್ದ, ಅದರ ಋಣ ಬೇರೆ ಇದ್ದಿತ್ತು , ಆಟೋ ಡ್ರೈವರ್ ಅಯ್ಯಪ್ಪನ ಮೇಲೆ. ಉಳಿದವರಿಗು ಕಿರಣ್ ಹಣ ಕೊಡಲು ಸಿದ್ದನಾದ, ಅದಕ್ಕು ಸೊಸೈಟಿಯ ಹಣವೆ ಅವನು ಉಪಯೋಗಿಸಿದ್ದು. 
 
 ಮಹಾಂತೇಶ್ ಮೊದಲ ದಿನ ಸೊಸೈಟಿಗೆ ಬಂದು ಅಲ್ಲಿಂದ ಹೊರಟ ತಕ್ಷಣ , ತನ್ನ ಸ್ನೇಹಿತರಿಗೆ ಮೊಬೈಲ್ ನಲ್ಲಿ ಸುದ್ದಿ ಮುಟ್ಟಿಸಿದ. ಅವರು ಕಾರಿನಲ್ಲಿ ಮಹಾಂತೇಶ ನನ್ನು ಹಿಂಬಾಲಿಸಿದರು. ಮೇಖ್ರೀ ಸರ್ಕಲ್ ಗೆ ಮುಂಚೆಯೆ ಅವರು ಅಟ್ಯಾಕ್ ಮಾಡಲು ಬಯಸಿದ್ದರು. ಆದರೆ ಸಂಜೆಯ ಟ್ರಾಫಿಕ್ ಅವರನ್ನು ತಡೆದಿತ್ತು. ಕಡೆಗೆ ಏಟ್ರಿಯ ಹೋಟೆಲ್ ಹತ್ತಿರ ಬಂದಾಗ ಅವರು ತಮ್ಮ ಕೆಲಸಕ್ಕೆ ಇಳಿದರು. ಮೊದಲಿಗೆ ಅವನನ್ನು ಘಾಸಿಗೊಳಿಸಿ ಆಸ್ಪತ್ರೆ ಸೇರುವಂತೆ ಮಾಡುವುದು ಅವರ ಉದ್ದೇಶ. ಆದರೆ ಮಹಾಂತೇಶ್ ಕಿರಣ್ ನನ್ನು ನೋಡಿದ್ದ., ಹಾಗಾಗಿ ಕಡೆಯಲ್ಲಿ ಅವರು ತಮ್ಮ  ಪ್ಲಾನ್ ಬದಲಿಸಿದರು. ಮುಗಿಸಿಬಿಡಲು ಯೋಚಿಸಿದ್ದರು. ಮಹಾಂತೇಶ್ ಐದು ದಿನ ಆಸ್ಪತ್ರೆಯಲ್ಲಿ ನರಳಿ ಕಡೆಗೆ ಪ್ರಾಣ ಬಿಟ್ಟಾಗ ಅವರೆಲ್ಲ ನೆಮ್ಮದಿಯಾಗಿ ಇನ್ನು ತಮ್ಮ ಹೆಸರು ಹೊರಗೆ ಬರಲ್ಲ ಎಂದು ಇದ್ದರು. ಆದರೆ ಪೋಲಿಸರು, ಮಹಾಂತೇಶನ ಕೊಲೆಯ ಜಾಡು ಹಿಡಿದು. ಸೊಸೈಟಿ ವರೆಗು ಬಂದಾಗ ಮಾತ್ರ ಕಿರಣ್ ಗಾಭರಿಯಾಗಿದ್ದ. ಕಡೆಗೆ ಸ್ವಲ್ಪ ದಿನಗಳ ಕಾಲ ಊರು ಬಿಡುವುದು ಕ್ಷೇಮವೆಂದು ಭಾವಿಸಿ ಹೊರಟಿದ್ದರು, ಕಡೆಗೆ ಪೋಲಿಸರ ಚಾಕಚಕ್ಯತೆಯಿಂದ ಸಿಕ್ಕಿಬಿದ್ದು ತಮ್ಮ ತಪ್ಪು ಒಪ್ಪಿಕೊಂಡಿದ್ದರು. 
 
 ಇದನ್ನು ಬೇದಿಸಲು ಸಿಸಿಬಿಯವರು ಕ್ರೈಮ್ ಪೋಲಿಸರ ಎರಡು ನೂರಕ್ಕು ಹೆಚ್ಚು ಜನರು ಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು. 
 
  ಪ್ರೆಸ್ ನವರು ಕೇಳಿದ ಯಾವ ಪ್ರಶ್ನೆಗೆ ಉತ್ತರ ಕೊಡಲು, ಸಹ ಮಿರ್ಜಿ ಸಾಹೇಬರು ಅಸಹನೆಯಿಂದ ಸಿಡುಕಿದರು, ಅವರಿಗೆ ಕಿರಿಕಿರಿ ಉಂಟುಮಾಡಿದ ಮೀಡಿಯ ಬಗ್ಗೆ ಅದೇನೊ ಅಸಹನೆ.  ಮಾದ್ಯಮದವರು ಒಂದು ಪ್ರಶ್ನೆ
"ಕೊಲೆಯ ಹಿಂದೆ ಯಾವುದೊ ಹುಡುಗಿ ಇದ್ದಾಳೆ, ಎಂದು, ಮತ್ತು ಸರ್ಕಾರಿ ಇದ್ದಾರೆ ಎಂದು ಸುದ್ದಿ ಇದೆಯಲ್ಲ" . ಎಂದು ಕೇಳಿದಾಗ ಅವರು ಉರಿದು ಬಿದ್ದರು
"ಯಾರ್ರಿ, ನಿಮಗೆ ಹೇಳಿದ್ದು ಹಾಗಂತ, ಅವರನ್ನು ತೋರಿಸಿ, ನಮ್ಮವರು ಯಾರು ಹಾಗೆ ಹೇಳಿಲ್ಲವಲ್ಲ." ಎಂದೆಲ್ಲ ಕೂಗಾಡಿದರು. ಕಡೆಗೊಮ್ಮೆ ಮಾಧ್ಯಮದವರ ಕುತೂಹಲವು ತಣ್ಣಗಾಯಿತು.
 
 ------------------------------------------------------  -    -    -
 
 ಒಂದೆರಡು ದಿನಗಳ ನಂತರವೇನೊ. ನಾಯಕ್ ಸುಮ್ಮನೆ ಕುಳಿತ್ತಿದ್ದ ಪೋಲಿಸ್ ಸ್ಟೇಶನ್ ನಲ್ಲಿ, ಹೊರಗಿನಿಂದ ಬಂದ ಮಂಜುನಾಥ ನುಡಿದ
"ಇನ್ನೇನು ಆಯ್ತಲ್ಲ ಸರ್ , ಎಲ್ಲ ಕೇಡಿಗಳು ಸಿಕ್ಕಿದರಲ್ಲ ಬಿಡಿ , ಪಾಪ ಆ ಪ್ರಾಮಾಣಿಕ ಅಧಿಕಾರಿ ಮಹಾಂತೇಶನ ಆತ್ಮಕ್ಕೆ ಸಂತಸ ವಾಗುತ್ತೆ ಅಲ್ವ?" 
 
 ಪೋಲಿಸ್ ಸ್ಟೇಶನ್ ನಲ್ಲಿ ಆತ್ಮ ಎಂದೆಲ್ಲ ಪದ ಕೇಳಿದ ನಾಯಕ್ , ಅವನ ಮುಖವನ್ನೆ ನೋಡಿದ 
" ಅದೇನೊ ಸರಿ ನೀನು ಹೇಳೋದು, ಆದರೆ ನಾವಿರುವ ಪರಿಸ್ಥಿಥಿ ನೋಡು, ನಾವೇನೊ ಕಷ್ಟ ಬಿದ್ದು ಎಲ್ಲ ಅಪರಾದಿಗಳನ್ನು ಹಿಡಿದು ತರುತ್ತೇವೆ, ಆದರೆ ಅವರನ್ನು ಕಾನುನಿನ ಅಡಿಯಲ್ಲಿ ತರೋದೆ ಒಂದು ಕಷ್ಟದ ಕೆಲಸ.  ಹೀಗೆ ಅಂತ ಹೇಗೆ ಹೇಳೋದು. ಅವರು ಬೈಲ್ ಪಡೆದು ಹೊರಬರಬಹುದು. ಕೇಸು ಸೆಟ್ಲ್ ಆಗಲು ಎಷ್ಟು ಕಾಲ ಬೇಕೊ ಆಗ ನಾನು ನೀನು ಎಲ್ಲಿರುತ್ತೇವೆ , ಇವೆಲ್ಲ ಯಾರಿಗೆ ಗೊತ್ತಿದೆ ಹೇಳು. ಮತ್ತೆ ನಾವು ಎಷ್ಟೆ ಶ್ರಮ ಪಟ್ಟರು, ಕೋರ್ಟಿನಲ್ಲಿ ಸರ್ಕಾರಿ ವಕೀಲರು ಕೇಸನ್ನು ಹೇಗೆ ನಡೆಸುತ್ತಾರೆ ಎಂಬುದರ ಮೇಲೆ ಇವರಿಗೆ ಆಗುವ ಶಿಕ್ಷೆ ಎಲ್ಲ ನಿರ್ದಾರ ಆಗೋದು, 
 
   ಹೋಗಲಿ ಬಿಡು ಅದೆಲ್ಲ ಯಾಕೆ? ಅಲ್ಲದೆ ನನಗೆ ಇನ್ನೊಂದು ಚಿಂತೆ ಕಾಡುತ್ತೆ, ಅದೇನೊ ಈಗಿನ ಜನಾಂಗ ಹೀಗೆ ಆಗುತ್ತಿದೆ, ಯುವಕರೆ ಇಂತ ಕ್ರಿಮಿನಲ್ ಆಕ್ಟಿವಿಟಿ ನಲ್ಲಿ ಸೇರುತ್ತಾರೆ, ಈಗ ನೋಡು ಎಲ್ಲರು ಬರಿ ೨೦ ರಿಂದ ಮೂವತ್ತು ವರ್ಷದವರು ಅವರ ಮನೆಯವರ ಪರಿಸ್ಥಿಥಿ ನೋಡು ಇದೆಲ್ಲ ಆ ಹುಡುಗರ ಯೋಚನೆಗೆ ಏಕೆ ಬರಲ್ಲ" ತನ್ನ ಮಾತು ನಿಲ್ಲಿಸಿದ ನಾಯಕ್ 
 
"ನೀವು ಹೇಳೋದು ಸರಿಯೆ ಸಾರ್, ಅದರೇನು ಮಾಡೋದು, ಈಗ ಎಲ್ಲ ಇರೋದೆ ಹಾಗೆ ಅಲ್ವ ಸಾರ್, ನಾವು ಎಲ್ಲ ಹೀಗಿದೆ ಅಂತ ಕೊರಗುವದಕ್ಕಿಂತ, ನಾವು ಸರಿಯಾಗಿದ್ದರೆ ಆಯ್ತು, ಎಲ್ಲರು ಹಾಗೆ ಭಾವಿಸಿದರೆ , ಒಂದು ದಿನ ಎಲ್ಲವು ಸರಿ ಹೋಗುತ್ತೇನೊ ಯಾರಿಗೆ ಗೊತ್ತು " ಎಂದ.  ನಾಯಕ್ , ಮಂಜುನಾಥನ ತರ್ಕಕ್ಕೆ ಆಶ್ಚರ್ಯದಿಂದ ಅವನತ್ತ ನೋಡಿದ
----------------------------------------
 
ಮುಗಿಯಿತು:  
 
ಸಂಪದಿಗರೆ : ಈ ಕತೆಯು ನಿಜ ಘಟನೆಯನ್ನು ಆದರಿಸಿದ್ದರು, ನಾನು ಹೀಗೆ ಆಗಿರಬಹುದು ಎಂಬ ಕಲ್ಪನೆಯಲ್ಲಿ ಮಾತ್ರ ಬರೆದಿರುವೆ. ಕೆಲವು ನಿಜವಾದ ಹೆಸರುಗಳನ್ನು ಬಳಸಿರುವುದು ಕತೆಗೆ ಸಹಜತೆ ಕೊಡಲು ಮಾತ್ರ. ಪತ್ರಿಕೆ ಹಾಗು ಮಾಧ್ಯಮಗಳ ಸುದ್ದಿ ನನ್ನ ಕತೆಗೆ ವಸ್ತು. 
 
-ಪಾರ್ಥಸಾರಥಿ
 
ಚಿತ್ರ ಮೂಲ : ndtv.com  ( ಚಿತ್ರವನ್ನು  download ಮಾಡಿ ನಂತರ edit ಮಾಡಿದ್ದೇನೆ)
 
Rating
No votes yet

Comments