”ಥಟ್ ಅಂತ ಹೇಳಿ” - ನಡೆದು ಬಂದ ದಾರಿ

Submitted by naasomeswara on Thu, 06/14/2012 - 19:07

ಬೆಂಗಳೂರು ದೂರದರ್ಶನದ ಇತಿಹಾಸದಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಟೆಲಿವಿಷನ್ ಚರಿತ್ರೆಯಲ್ಲಿ ಇಂದು ಇತಿಹಾಸ ನಿರ್ಮಾಣವಾಗುತ್ತಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಒಂದು ಕ್ವಿಜ್ ಕಾರ್ಯಕ್ರಮವು ನಿರಂತರವಾಗಿ ೨೦೦೦ ಕಂತುಗಳಲ್ಲಿ ಪ್ರಸಾರವಾಗಿಲ್ಲ.  ಆದರೆ ನಿಮ್ಮ ನೆಚ್ಚಿನ ಚಂದನ ವಾಹಿನಿಯು ಈಗ ಇಂತಹ ರಾಷ್ಟ್ರೀಯ ದಾಖಲೆಯನ್ನು ಮಾಡಿದೆ. ನಮ್ಮ ನಿಮ್ಮೆಲ್ಲರ ಜನಪ್ರಿಯ ಕಾರ್ಯಕ್ರಮ ಥಟ್ ಅಂತ ಹೇಳಿ. ನಿಮ್ಮ ಈ ಕ್ವಿಜ್ ಕಾರ್ಯಕ್ರಮ, ಕಳೆದ ವರ್ಷ ಜೂನ್ ೩೦ ಕ್ಕೆ ಸರಿಯಾಗಿ  ನಿರಂತರವಾಗಿ ೧೭೫೬ ಕಂತುಗಳು ಪ್ರಸಾರವಾಗಿ ಲಿಮ್ಕ ದಾಖಲೆಯನ್ನು ಸೇರಿದೆ. ಕಳೆದ ತಿಂಗಳು ಪ್ರಮಾಣ ಪತ್ರ ನಮ್ಮ ಕೇಂದ್ರವನ್ನು ತಲುಪಿದೆ ಹಾಗೂ ಈ ಬಗ್ಗೆ ದಾಖಲೆಯು ೨೦೧೨ ಲಿಮ್ಕ ದಾಖಲೆಯ ಪುಸ್ತಕದಲ್ಲಿ ಸೇರಿದೆ.

ಥಟ್ ಅಂತ ಹೇಳಿ ಕಾರ್ಯಕ್ರಮದ ೨೦೦೦ ಕಂತಿನ ಮುದ್ರಣ ಕಾರ್ಯ ೧೭.೦೬.೨೦೧೨ ರಂದು ನಡೆಯಲಿದೆ. ಇದು ನಿಜಕ್ಕೂ ನಮಗೆಲ್ಲ ಐತಿಹಾಸಿಕ ದಿನ. ಈ ರಾಷ್ಟ್ರೀಯ ದಾಖಲೆ ನಿಮ್ಮ ಸಮಕ್ಷಮದಲ್ಲಿ ಆಗಬೇಕು, ಅದಕ್ಕೆ ನೀವೆಲ್ಲ ಸಾಕ್ಷಿಗಳಾಗಬೇಕು ಎಂಬ ಮಹದಾಸೆಯಿಂದ ಮೈಸೂರಿನ ಶ್ರೀ ಸಚ್ಚಿದಾನಂದ ಗಣಪತಿ ಅವರ ಆಶ್ರಮದ ನಾದಮಂಟಪದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇದರಲ್ಲಿ ಭಾಗವಹಿಸಲು ನಿಮಗೆಲ್ಲರಿಗೂ ಹೃತ್ಪೂರ್ವಕವಾಗಿ ಸ್ವಾಗತವನ್ನು ಕೋರುತ್ತಿದ್ದೇವೆ.

          ವಿಶ್ವದಾಖಲೆ:

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅನ್ವಯ, ೧೧ ನೆಯ ಡಿಸೆಂಬರ್ ೨೦೧೦ ರಂದು ಬೆಲ್ಜಿಯಂ ದೇಶದ ಘೆಂಟ್ ಫ್ಲಾಂಡರ್ಸ್ ಎಕ್ಸ್-ಪೊ ಸಭಾಂಗಣದಲ್ಲಿ ನಡೆದ ”ಕ್ವಿಜ್ ಪಾರ್ ಲೈಫ್” ಎನ್ನುವ ಕ್ವಿಜ್ ಕಾರ್ಯಕ್ರಮದಲ್ಲಿ, ೨೨೮೦ ಜನರು ಭಾಗವಹಿಸಿದ್ದರು. ಇದು ವಿಶ್ವ ದಾಖಲೆ! ೧೭.೦೬.೨೦೧೨ ರಂದು ನಡೆಯಲಿರುವ ೨೦೦೦ ಕಂತಿನ ಮುದ್ರಣ ಕಾರ್ಯದಲ್ಲಿ ನನಗೆ ಅನ್ನಿಸುವ ಹಾಗೆ ೨೨೮೦ ಗಿಂತಲೂ ಹೆಚ್ಚಿನ ಜನರು ಸೇರಲಿದ್ದೀರಿ. ಈ ಸಭಾಂಗಣದಲ್ಲಿ ಸುಮಾರು ೪೦೦೦ ಜನರು ಕುಳಿತುಕೊಳ್ಳಬಹುದು ಎನ್ನುವುದು ಆಶ್ರಮದವರ ಲೆಕ್ಕಾಚಾರ. ನೀವು ಎಷ್ಟೇ ಜನರು ಬಂದರೂ ಸಹಾ, ನೀವೆಲ್ಲರೂ ಅಂದಿನ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೀರಿ. ಚೀಟಿಯನ್ನು ಎತ್ತುವುದರ ಮೂಲಕ, ನಿಮ್ಮ ನಡುವಿನಿಂದಲೇ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತೇವೆ. ಸ್ಪರ್ಧೆಯಲ್ಲಿ ಸ್ಪರ್ಧಿಗಳು ಯಾವುದಾದರೂ ಪ್ರಶ್ನೆಗೆ ಸರಿಯಾದ ಉತ್ತರವನ್ನು ಕೊಡಲಿಲ್ಲವೆಂದರೆ, ಆ ಪ್ರಶ್ನೆಗೆ ಉತ್ತರವನ್ನು ಕೊಡುವ ಅವಕಾಶ ತಮಗೆ ದೊರೆಯಲಿದೆ. ಹಾಗಾಗಿ ಅಂದಿನ ಕ್ವಿಜ್ ಕಾರ್ಯಕ್ರಮದಲ್ಲಿ ತಾವೆಲ್ಲರೂ ಸ್ಪರ್ಧಿಗಳು ಎನ್ನುವುದನ್ನು ಬಹಳ ಸಂತೋಷದಿಂದ ದಾಖಲಿಸುತ್ತಿದ್ದೇನೆ. ಬಹುಶಃ ಇಂದಿನ ಕಾರ್ಯಕ್ರಮವು ವಿಶ್ವದಾಖಲೆಯ ಕ್ವಿಜ್ ಕಾರ್ಯಕ್ರಮವಾಗಲಿದೆ ಎಂದು ನನ್ನ ಅನಿಸಿಕೆ.

ಕ್ವಿಜ್:

ತಮಗೆಲ್ಲ ಕ್ವಿಜ್ ಎಂದರೆ ಏನು ಎನ್ನುವುದು ಗೊತ್ತು. ಆದರೆ ಈ ಕ್ವಿಜ್ ಎನ್ನುವ ಶಬ್ಧದ ಅರ್ಥ ಏನು ಎಂದು ಗೊತ್ತೆ? ಈ ಶಬ್ಧವನ್ನು ಮೊದಲು ಯಾರು ಬಳಸಿದರು, ಯಾವಾಗ ಬಳಸಿದರು ಹಾಗೂ ಎಲ್ಲಿ ಬಳಸಿದರು ಎನ್ನುವುದು ಗೊತ್ತೆ? ಈ ಬಗ್ಗೆ ಪ್ರಚಲಿತ ಕಥೆಯು ಕುತೂಹಲಕರವಾಗಿದೆ.

          ೧೭೯೧ ನೆಯ ಇಸವಿ. ಬ್ರಿಟೀಶ್ ಸಾಮ್ರಾಜ್ಯದ ಡಬ್ಲಿನ್ ನಗರ. ಡಬ್ಲಿನ್ ನಗರದಲ್ಲಿ ಡಬ್ಲಿನ್ ರಂಗ ಮಂದಿರದ ಮಾಲಿಕ ಜೇಮ್ಸ್ ಡ್ಯಾಲಿ. ಒಂದು ದಿನ ಆತನು ತನ್ನ ಗೆಳೆಯರೊಡನೆ ೨೪ ಗಂಟೆಗಳ ಕಾಲದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಇರದಿರುವ ಒಂದು ಹೊಸ ಶಬ್ದವನ್ನು ಸೇರಿಸಬಹುದು ಎಂದನು. ಆಗ ಅವನ ಗೆಳೆಯರು ನೀನು ಹೇಳಿದ್ದನ್ನು ಮಾಡಿ ತೋರಿಸು ಎಂದು ಪಂದ್ಯ ಕಟ್ಟಿದರು. ಇದನ್ನು ಒಪ್ಪಿದ ಜೇಮ್ಸ್ ಡ್ಯಾಲಿ, ಒಂದಷ್ಟು ಬೀದಿ ಹುಡುಗರನ್ನು ಕರೆದನು. ಅವರಿಗೊಂದಿಷ್ಟು ಹಣವನ್ನು ಹಾಗೂ ಸೀಮೆಸುಣ್ಣದ ಪೆಟ್ಟಿಗೆಯನ್ನು ನೀಡಿದನು. ಡಬ್ಲಿನ್ ನಗರದ ಎಲ್ಲ ಮನೆಯಗಳ ಬಾಗಿಲಿನ ಮೇಲೆ ಕ್ವಿಜ್ ಎಂಬ ಶಬ್ಧವನ್ನು ಬರೆಯುವಂತೆ ಹೇಳಿದನು. ಹುಡುಗರು ಬರೆದರು. ಮರುದಿನ ಎಲ್ಲರು ತಮ್ಮ ಮನೆಯ ಬಾಗಿಲಿನ ಮೇಲಿದ್ದ, ಅದುವರೆಗೂ ತಾವು ಕೇಳಿರದೇ ಇದ್ದ ಕ್ವಿಜ್ ಶಬ್ಧವನ್ನು ಓದಿದರು. ಏನು ಹೀಗಂದರೆ ಎಂದು ಎಲ್ಲರು ಒಬ್ಬರನ್ನೊಬ್ಬರು ಪ್ರಶ್ನೆ ಮಾಡಲಾರಂಬಿಸಿದರು. ಯಾರಿಗೂ ಉತ್ತರ ಗೊತ್ತಿರಲಿಲ್ಲ. ಸ್ವಯಂ ಜೇಮ್ಸ್ ಡ್ಯಾಲಿಗೂ ಸಹಾ ಉತ್ತರ ಗೊತ್ತಿರಲಿಲ್ಲ. ಆ ಕ್ಷಣದಲ್ಲಿ ಅವನ ಮನಸ್ಸಿನಲ್ಲಿ ಬಂದ ಕ್ವಿಜ್ ಶಬ್ಧವನ್ನು ಬಳಸಿದ್ದ ಅಷ್ಟೆ. ಆದರೆ ಕೇವಲ ೨೪ ಗಂಟೆಯಲ್ಲಿ ಕ್ವಿಜ್ ಎನ್ನುವ ಶಬ್ದ ಡಬ್ಲಿನ್ ನಗರವಾಸಿಗಳ ನಾಲಿಗೆಯ ಮೇಲೆ ನಲಿಯಲಾರಂಭಿಸಿತು. ಕೊನೆಗೆ ಇಂಗ್ಲೀಷ್ ಭಾಷೆಯನ್ನು ಪ್ರವೇಶಿಸಿದ ಈ ಶಬ್ದ ಪ್ರಶ್ನೆ ಕೇಳುವುದು ಎಂಬ ಅರ್ಥವನ್ನು ಪಡೆಯಿತು.

          ಕ್ವಿಜ್ಎನ್ನುವ ಶಬ್ಧಕ್ಕೆ ಕನ್ನಡದ ಸಮಶಬ್ದ ಯಾವುದು? ಬಜ್ ರ್  ಎನ್ನುವ ಶಬ್ಧಕ್ಕೆ ಸಮ ಶಬ್ದ ಯಾವುದು? ನಮ್ಮ ಕಾರ್ಯಕ್ರಮದಲ್ಲಿ ಈ ಎರಡು ಇಂಗ್ಲೀಷ್ ಶಬ್ಧಗಳು ಬಳಕೆಯಾಗುತ್ತಿರುವುದಕ್ಕೆ ಅನೇಕರು ಬೇಸರ ವ್ಯಕ್ತ ಪಡಿಸಿರುವರು. ಈ ಎರಡು ಶಬ್ಧಗಳಿಗೆ ಕನ್ನಡ ಸಮಶಬ್ಧಗಳು ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ; ಅವನ್ನೇ ಬಳಸುತ್ತೇನೆ ಎಂದು ಅವರಿಗೆ ಸಮಜಾಯಿಶಿ ನೀಡಿರುವೆ. ಕ್ವಿಜ್ ಶಬ್ಧಕ್ಕೆ ರಸಪ್ರಶ್ನೆ ಎಂಬ ನುಡಿಗಟ್ಟನ್ನು ಬಳಸಿರುವನು. ಆದರೆ ಇದು ಕ್ವಿಜ್ ಶಬ್ಧ ಮೂಲ ಅರ್ಥವನ್ನು ಪ್ರತಿನಿಧಿಸುವುದಿಲ್ಲ. ಇನ್ನು ಬಜ್ ರ್ ಎನ್ನುವ ಶಬ್ದ. ಸ್ಪರ್ಧಿಯು ಸಾಧನವನ್ನು ಒತ್ತಿದಾಗ ಅದು ಬಜ್ ಜ್ ಜ್ ಜ್ ಜ್... ಎಂದು ಶಬ್ಧ ಮಾಡುವುದರಿಂದ ಅದನ್ನು ಬಜರ್ ಎಂದು ಕರೆಯುತ್ತಾರೆ. ಬಜ್ ಜ್ ಎಂದು ಶಬ್ಧ ಮಾಡುವ ಸಾಧನ ಎಂದು ಇದರ ಅರ್ಥ. ಇದನ್ನು ಕನ್ನಡದಲ್ಲಿ ಹೇಗೆ ಹೇಳುವುದು? ಹಾಗಾಗಿ ಈ ಎರಡು ಇಂಗ್ಲೀಷ್ ಶಬ್ಧಗಳನ್ನೇ ನಮ್ಮ ಕಾರ್ಯಕ್ರಮದಲ್ಲಿ ಉಳಿಸಿಕೊಂಡಿದ್ದೇವೆ.

          ಕ್ವಿಜ್ ಶಬ್ದ ಬ್ರಿಟೀಶ್ ಮೂಲದಿಂದ ಬಂದಿದ್ದರೂ ಸಹಾ ಕ್ವಿಜ್ ಪರಿಕಲ್ಪನೆ ಭಾರತೀಯರಿಗೆ ಹೊಸದಲ್ಲ. ಕ್ವಿಜ್ ಪರಿಕಲ್ಪನೆಯನ್ನು ನಾವು ಉಪನಿಷತ್ತುಗಳಲ್ಲಿ ಕಾಣಬಹುದು. ಆದರೆ ಇಂದಿನ ಕ್ವಿಜ್ ಅರ್ಥದ ಜಗತ್ತಿನ ಮೊದಲ ಕ್ವಿಜ್-ನ್ನು ನಾವು ಮಹಾಭಾರತದಲ್ಲಿ ಕಾಣಬಹುದು. ಮಹಾಭಾರತದ ವನಪರ್ವದಲ್ಲಿ ಯಮಧರ್ಮನು ಯುಧಿಷ್ಠಿರನೊಡನೆ ನಡೆಸುವ ಯಕ್ಷಪ್ರಶ್ನೆ ಅಥವ ”ಧರ್ಮ-ಬಕ ಉಪಖ್ಯಾನ”ವು ಜಗತ್ತಿನ ಮೊದಲ ಕ್ವಿಜ್ ಎನ್ನಬಹುದು.  ಬಕ ರೂಪಿ ಯಮಧರ್ಮನು ಬಾಯಾರಿ ಬಳಲಿದ ಯುಧಿಷ್ಟಿರನಿಗೆ ಕೇಳುವ ಪ್ರಶ್ನೆಗಳು, ಆ ಪ್ರಶ್ನೆಗಳಿಗೆ ಸ್ವಲ್ಪವೂ ತಡವರಿಸದೆ ಯುಧಿಷ್ಟಿರನು ನೀಡುವ ಉತ್ತರ, ಇಂದಿಗೂ ಸಹಾ ನಮ್ಮನ್ನು ಬೆರಗುಗೊಳಿಸುತ್ತದೆ. ಪ್ರಾಚೀನ ಗ್ರೀಕ್ ಸಾಹಿತ್ಯದಲ್ಲಿ ಸ್ಫಿಂಕ್ಸ್ ರಾಕ್ಷಸಿ ಈಡಿಪಸ್-ನಿಗೆ ಕೇಳುವ ಪ್ರಶ್ನೆಗಳು, ಬಹುಶಃ ಪಾಶ್ಚಾತ್ಯ ಜಗತ್ತಿನ ಮೊದಲ ಕ್ವಿಜ್ ಆಗಿರಬಹುದು.  ಬ್ರಿಟನ್ ಮತ್ತು ಅಮೆರಿದ ಶೈಕ್ಷಣಿಕ ವ್ಯವಸ್ಥೆಯ ಒಂದು ಭಾಗವಾಗಿ ಕ್ವಿಜ್ ಜನಪ್ರಿಯವಾಯಿತು. ಬ್ರಿಟೀಷರೊಡನೆ ಭಾರತವನ್ನು ಪ್ರವೇಶಿಸಿದ ಕ್ವಿಜ್, ಶಾಲಾ ಕಾಲೇಜುಗಳಲ್ಲಿ ಜನಪ್ರಿಯವಾಗಿದೆ. ಆನಂತರ ಆಕಾಶವಾಣಿ ಹಾಗೂ ದೂರದರ್ಶಗಳ ಮೂಲಕ ಕ್ವಿಜ್ ನಾಡಿನಾದ್ಯಂತ ಅಪಾರ ಜನಪ್ರೀತಿಯನ್ನು ಗಳಿಸಿದೆ ಎನ್ನುವುದು ತಮಗೆಲ್ಲ ತಿಳಿದಿರುವಂತಹ ವಿಷಯ. 

          ಪಕ್ಷಿನೋಟ:

ಈ ಶುಭ ಸಂದರ್ಭದಲ್ಲಿ ನಾವು ನಡೆದು ಬಂದ ಹಾದಿಯತ್ತ ಒಮ್ಮೆ ಪಕ್ಷಿನೋಟವನ್ನು ಹರಿಸುವುದು ಉಚಿತ ಎಂದು ನನ್ನ ಭಾವನೆ. ಈ ವಿಶ್ಲೇಷಣೆ ನಮ್ಮ ಮುಂದಿನ ಹಾಗಿ ಹೇಗಿರಬೇಕು ಎನ್ನುವುದರ ಪರಿಕಲ್ಪನೆಗೆ ಮೂಲ ಸಾಮಾಗ್ರಿಯನ್ನು ಒದಗಿಸುತ್ತದೆ.

          ಥಟ್ ಅಂತ ಹೇಳಿ ಕಾರ್ಯಕ್ರಮದ ಮೊದಲ ಕಂತು ಜನವರಿ ೪, ೨೦೦೨ ರಲ್ಲಿ, ಅಂದರೆ ಇಂದಿಗೆ ಸುಮಾರು ೧೦ ವರ್ಷಗಳ ಹಿಂದೆ ಆಯಿತು. ಈ ಕಾರ್ಯಕ್ರಮದ ಪರಿಕಲ್ಪನೆ ಬೆಂಗಳೂರು ದೂರದರ್ಶನ ಕೇಂದ್ರದ ಅಂದಿನ ನಿರ್ದೇಶಕರು ಹಾಗೂ ಇಂದಿನ ಆಕಾಶವಾಣಿ ಮತ್ತು ದೂರದರ್ಶನ ದಕ್ಷಿಣವಲಯದ ಹೆಚ್ಚುವರಿ ಮಹಾ ನಿರ್ದೇಶಕರಾಗಿರುವ ಶ್ರೀ.ಆರ್.ವೆಂಕಟೇಶ್ವರುಲು ಅವರದ್ದು. ಈ ಕ್ವಿಜ್ ಕಾರ್ಯಕ್ರಮವನ್ನು ಶ್ರೀಮತಿ ಉಷಾ ಕಿಣಿ ಅವರು ನಿರ್ಮಿಸಿದರು ಹಾಗೂ ಕ್ವಿಜ್ ಮಾಸ್ಟರ್ ಕೆಲಸವನ್ನು ನಾನು ವಹಿಸಿಕೊಂಡೆ.

          ಪ್ರಾರಂಭದಲ್ಲಿ ಥಟ್ ಅಂತ ಹೇಳಿ ಕಾರ್ಯಕ್ರಮವು ಹದಿನೈದು ದಿನಗಳಿಗೊಮ್ಮೆ ಪ್ರಸಾರವಾಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರು. ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಕನ್ನಡ-ಕನ್ನಡಿಗ-ಕರ್ನಾಟಕ ಕುರಿತ ಕ್ವಿಜ಼್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಹಾಗೆಯೇ ವಿಜ್ಞಾನ ಸಂಬಂಧಿತ ವಿಶೇಷ ಕ್ವಿಜ಼್ ಸ್ಪರ್ಧೆಯನ್ನು ಸಹಾ ಆಯೋಜಿಸಿದ್ದೆವು.

          ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಹೊಸ ಸ್ವರೂಪವನ್ನು ತಂದೆವು. ಒಬ್ಬ ಸ್ಪರ್ಧಿಯ ಜೊತೆಯಲ್ಲಿ ಹದಿನೈದು ಪ್ರಶ್ನೆಗಳನ್ನು ಕೇಳುವ, ಒಂದು ಗಂಟೆಯ ಅವಧಿಯಲ್ಲಿ ಮೂವರು ಸ್ಪರ್ಧಿಗಳಿಗೆ ಅವಕಾಶವನ್ನು ಮಾಡಿಕೊಡುವ ಹೊಸ ಸ್ವರೂಪದ ಕ್ವಿಜ್ ಕಾರ್ಯಕ್ರಮ ಅತ್ಯಲ್ಪ ಕಾಲದಲ್ಲಿಯೇ ಅಪಾರ ಜನಪ್ರಿಯತೆಯನ್ನು ಪಡೆಯಿತು. ನಾವು ೧೦೦ ಕಂತುಗಳನ್ನು ಪೂರ್ಣಗೊಳಿಸಿದಾಗ ಇನ್ಫೋಸಿಸ್ ಪ್ರತಿಷ್ಠಾನದ ಶ್ರೀಮತಿ ಸುಧಾ ಮೂರ್ತಿಯವರನ್ನು ಮುಖ್ಯ ಅತಿಥಿಗಳನ್ನಾಗಿ ಸ್ವಾಗತಿಸಿದ್ದೆವು. ಅವರು ಒಬ್ಬರ ಬದಲು ಮೂವರನ್ನು ಇಟ್ಟುಕೊಂಡು ಕ್ವಿಜ್ ನಡೆಸಿದರೆ ಅದು ಸ್ಪರ್ಧಾತ್ಮಕವಾಗಿರುತ್ತದೆ ಎಂದರು. ಹಾಗಾಗಿ ಮೂವರು ಸ್ಪರ್ಧಿಗಳ ಜೊತೆಯಲ್ಲಿ ನಡೆಸುವ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮವನ್ನು ತಾವೆಲ್ಲರೂ ಮೆಚ್ಚಿರುವ ಕಾರಣ, ಈ ಕಾರ್ಯಕ್ರಮವು ಇಂದು ೨೦೦೦ ಕಂತುಗಳನ್ನು ಪೂರೈಸುತ್ತಿದೆ.

          ಮೇಲೆ ಥಟ್ ಅಂತ ಹೇಳಿ ಕಾರ್ಯಕ್ರಮ, ಕೇವಲ ಕ್ವಿಜ್ ಕಾರ್ಯಕ್ರಮವಾಗಿರದೆ ಅನೇಕ ಪ್ರಯೋಗಗಳ ಕ್ಷೇತ್ರವಾಗಿದೆ. ಅನೇಕ ನಾವಿನ್ಯತೆಯನ್ನು ಹಾಗೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದೆವು. ಅವನ್ನು ನೀವು ಮೆಚ್ಚಿದ್ದೀರಿ. ಅವುಗಳನ್ನು ಕೆಲವನ್ನು ತಮ್ಮ ಮುಂದೆ ಈಗ ಇಡಲಿದ್ದೇನೆ.

೧.      ಈ ಸಮಾಜದಲ್ಲಿ ತಿಳಿದೋ ತಿಳಿಯದೆಯೋ ಕೆಲವು ಅಪರಾಧಗಳನ್ನು ಮಾಡಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುತ್ತಾರೆ. ಅಂತಹವರನ್ನು ಸತ್ಪ್ರಜೆಗಳನ್ನಾಗಿ ಮಾಡಿ, ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡುವುದು ನಾಗರಿಕರಾದ ನಮ್ಮೆಲ್ಲರ ಪ್ರಥಮ ಕರ್ತವ್ಯವಾಗಿರುತ್ತದೆ. ಈ ದಿಶೆಯಲ್ಲಿ ನಮ್ಮ ಕೇಂದ್ರದ ಮೂಲಕ ಒಂದು ಹೊಸ ಪ್ರಯೋಗವನ್ನು ಮಾಡಿದೆವು. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಗಳನ್ನು ನಮ್ಮ ಸ್ಟುಡಿಯೋಕ್ಕೆ ಕರೆಸಿದೆವು. ಅವರಿಗೆ ಸಿಹಿ ಊಟವನ್ನು ಹಾಕಿದೆವು. ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗಾಹಿಸಲು ವಿಶೇಷ ಅವಕಾಶವನ್ನು ಮಾಡಿಕೊಟ್ಟೆವು. ಇಡೀ ದಿನ ನಮ್ಮ ಸ್ಟುಡಿಯೋದಲ್ಲಿ ಕಳೆಯುವುದಕ್ಕೆ ಅವಕಾಶ ಮಾಡಿಕೊಟ್ಟೆವು. ನಮ್ಮ ಈ ಹೊಸ ಪ್ರಯತ್ನ ಅಭೂತಪೂರ್ವ ಯಶಸ್ಸನ್ನು ಕಂಡಿತು.

೨.      ನಮ್ಮಲ್ಲಿ ಬಹಳಷ್ಟು ಜನರು ಏಡ್ಸ್ ಎಂದರೆ ಈಗಲೂ ಹೆದರುವರು. ಏಡ್ಸ್ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅಜ್ಞಾನದ ಕಾರಣ, ಏಡ್ಸ್ ಪೀಡಿತರನ್ನು ಅಮಾನವೀಯವಾಗಿ ಮನೆಯಿಂದ ಹೊರಗೆ ಹಾಕುವರು. ಇದು ತಪ್ಪು ಎನ್ನುವುದನ್ನು ತಿಳಿಯಪಡಿಸಲು, ನಮ್ಮ ನಡುವೆ ಎಲ್ಲರ ಹಾಗೆ ಬದುಕಲು ಅವರಿಗೂ ಅವಕಾಶವನ್ನು ಮಾಡಿಕೊಡಬೇಕು ಎನ್ನುವ ದಿಶೆಯಿಂದ ಏಡ್ಸ್ ಪೀಡಿತರನ್ನು ನಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿದೆವು. ಆ ಕಾರ್ಯಕ್ರಮದಲ್ಲಿ ಏಡ್ಸ್ ಪೀಡಿತರೇ, ಏಡ್ಸ್ ಬಗ್ಗೆ ವಿಶೇಷವಾದ ಮಾಹಿತಿಯನ್ನು ನೀಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

೩.      ವಿಕಲ ಚೇತನರಿಗೆ ಸಹಾನುಭೂತಿಗಿಂತ, ಸಮಾನವಾಗಿ ಬದುಕುವ ಅವಕಾಶವನ್ನು ಕಲ್ಪಿಸಿಕೊಡುವುದು ನಮ್ಮ ಇಚ್ಛೆ. ಈ ದಿಶೆಯಲ್ಲಿ ಅಂಧರಿಗಾಗಿ ವಿಶೇಷ ಕ್ವಿಜ್ ಕಾರ್ಯಕ್ರಮಗಳನ್ನು ಭಾಗವಹಿಸಿದೆವು. ಒಂದು ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಬಂದ ಶ್ರೀಮತಿ ಮಂಜುಳ ಅವರು ಅಂಧರಾಗಿದ್ದರೂ ಸಹಾ ೧೪ ಕ್ಕೂ ಹೆಚ್ಚು ಪುಸ್ತಕಗಳನ್ನು ಗಳಿಸಿ, ಸಿ.ಡಿಯನ್ನು ಪಡೆದು ದಾಖಲೆಯನ್ನು ನಿರ್ಮಿಸಿದರು. ಅದು ಇಂದಿಗೂ ಸಹಾ ಅವಿಸ್ಮರಣೀಯ ಘಟನೆಯಾಗಿ ನಮ್ಮ ಮನಸ್ಸಿನಲ್ಲಿ ಉಳಿದಿದೆ.

೪.      ಐ.ಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುವ ಪೀಳಿಗೆಗೆ ನಾವು ವಿಶೇಷ ಕ್ವಿಜ್ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಅನಿವಾಸಿ ಭಾರತೀಯರಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇವೆ. ಪ್ರತಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಗಾಂಧಿಜಯಂತಿಯ ವೇಳೆಯಲ್ಲಿ ಕರ್ನಾಟಕದ ವಿವಿಧ ಮೂಲೆಗಳಿಂದ ಹೈಸೂಲ್ ವಿದ್ಯಾರ್ಥಿಗಳನ್ನು ಕರೆದು ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇವೆ.

೫.      ಏಕತಾನತೆಯನ್ನು ತಪ್ಪಿಸುವ ದೃಷ್ಟಿಯಿಂದ ನಾವು ದಸರೆಯ ಸಂದರ್ಭದಲ್ಲಿ ಮೈಸೂರಿಗೆ ಬಂದು ಎದುರಿಗೆ ಸಿಕ್ಕವರಿಗೆಲ್ಲ ಒಂದು ಪ್ರಶ್ನೆಯನ್ನು ಕೇಳಿ ಒಂದೊಂದು ಪುಸ್ತಕವನ್ನು ನೀಡುವ ಹೊಸ್ ಪ್ರಯತ್ನವನ್ನು ಮಾಡಿದೆವು. ಹೀಗೆಯೇ ಪ್ರಯೋಗಗಳನ್ನು ಬೆಂಗಳೂರಿನ ಬೀದಿಗಳಲ್ಲಿ ಹಾಗೂ ನಂದಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಡಿದೆವು. ಈ ಪ್ರಯೋಗವೂ ಸಹಾ ಅಪಾರ ಜನಪ್ರಿಯತೆಯನ್ನು ಗಳಿಸಿತು.

೬.      ಹಲವು ಸಂದರ್ಭಗಳಲ್ಲಿ ನಾಡಿನ ಹಿರಿಯ ಲೇಖಕರು ಹಾಗೂ ಗಣ್ಯರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಹಾಗೆ ಭಾಗವಹಿಸಿದ ಕೆಲವು ಗಣ್ಯರ ಹೆಸರು ಈ ರೀತಿ ಇವೆ. ಜಿ.ವೆಂಕಟಸುಬ್ಬಯ್ಯ, ಮಾಸ್ಟರ್ ಹಿರಣ್ಣಯ್ಯ, ಸುಧಾಮೂರ್ತಿ, ಚಂದ್ರಶೇಖರ ಕಂಬಾರ, ನಿಸಾರ್ ಅಹಮದ್, ಹಂಪನಾ, ಕಮಲಾ ಹಂಪನಾ, ಜಯಂತ ಕಾಯ್ಕಿಣಿ, ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ನಾಗತಿಹಳ್ಳಿ ಚಂದ್ರಶೇಖರ್, ಡಾ.ಸಿ.ಆರ್.ಚಂದ್ರಶೇಖರ್ ಮುಂತಾದವರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

೭.      ಕರ್ನಾಟಕ ರಾಜ್ಯೋತ್ಸವ, ವಿಜಯದಶಮಿ, ದೀಪಾವಳಿ ಮುಂತಾದ ಹಬ್ಬಗಳಲ್ಲಿ ಅತಿಥಿಗಳನ್ನು ಕರೆಯಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ತಾರಾ, ಸುದೀಪ್, ಜಗ್ಗೇಶ್, ಸಿಹಿಕಹಿ ಚಂದ್ರು, ವಿಜಯ್, ಯೋಗರಾಜ್ ಭಟ್, ಕವಿತಾ ಲಂಕೇಶ್, ಮನೋಮೂರ್ತಿ, ಜಯಶ್ರೀ, ಮಂಜುಳಾ ಗುರುರಾಜ್, ಎಂ.ಡಿ.ಪಲ್ಲವಿ, ಸುಪ್ರಿಯಾ ಆಚಾರ್ಯ, ರಾಜೇಶ್ ಕೃಷ್ಣನ್, ಎಲ್.ಎನ್.ಶಾಸ್ತ್ರಿ ಮುಂತಾದವರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದನ್ಮ್ನ ಇಲ್ಲಿ ಸ್ಮರಿಸಿಕೊಳ್ಳಬಹ್ಮದು.

೮.      ಕಳೆದ ವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಡೀ ಒಂದು ತಿಂಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ನಡೆಸಿದ್ದು ತಮಗೆ ನೆನಪಿರಬಹುದು. ನಾಡಿನ ಅನೇಕ ಸಾಹಿತಿ, ಕಲಾವಿದರು, ಹಾಡುಗಾರರು, ನಾಟಕಕಾರರು ಹಾಗೂ ಬುದ್ಧಿಜೀವಿಗಳನ್ನು ಕರೆಸಿದ್ದವು. ಈಗ, ತಾವೆಲ್ಲರೂ ನೋಡುತ್ತಿರುವ ಹಾಗೆ ನಾಡಿನ ಅನೇಕ ಸಾಹಿತಿ-ಕಲಾವಿದರನ್ನು ಕರೆಯಿಸಿ, ನಮ್ಮ ಥಟ್ ಅಂತ ಹೇಳಿ ಕಾರ್ಯಕ್ರಮದ ಮುಂದಿನ ಸ್ವರೂಪ ಹೇಗಿದ್ದರೆ ಚೆನ್ನ ಎಂಬುದರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದೇವೆ. ಈ ಕಾರ್ಯಕ್ರಮ ಸರಣಿ ತಮಗೆಲ್ಲ ತೃಪ್ತಿಯನ್ನು ತಂದಿರುವ ನಮ್ಮ ಪ್ರಯತ್ನಕ್ಕೆ ಸಾರ್ಥಕತೆಯನ್ನು ತಂದಿದೆ.

೯.      ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮವು ೧೫೦೦ ಕಂತುಗಳನ್ನು ಪೂರ್ಣಗೊಳಿಸಿದ್ದಾಗ ಒಂದು ವಿಶೇಷ ಕಾರ್ಯಕ್ರಮವನ್ನು ಬೆಂಗಳೂರಿನ ಎನ್.ಎಂ.ಕೆ.ಆರ್.ವಿ ಕಾಲೇಜಿನ ಮಂಗಳ ಮಂಟಪದಲ್ಲಿ ದಿನಾಂಕ ೧೩.೦೬.೨೦೧೦ ರಲ್ಲಿ ಆಯೋಜಿಸಿದ್ದೆವು. ಆ ಕಾರ್ಯಕ್ರಮದಲ್ಲಿ ಅನೇಕ ಜನರು ಭಾಗವಹಿಸಿದ್ದರು. ಅದರ ನಂತರ ಈಗ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮದ ೨೦೦೦ ನೆಯ ಕಂತನ್ನು ಈಗ ಇದೇ ಸಭಾಂಗಣದಲ್ಲಿ ಮುದ್ರಿಸಲಿದ್ದೇವೆ. ಅದರಲ್ಲಿ ತಾವೆಲ್ಲರೂ ಭಾಗವಹಿಸಲಿರುವುದು ನಮ್ಮ ಸುದೈವ. ನಾವೆಲ್ಲ ಹೆಮ್ಮೆ ಪಡಬಹುದಾದ ವಿಷಯವಾಗಿದೆ.

೧೦.   ನಿಮ್ಮ ಮೆಚ್ಚಿನ ಥಟ್ ಅಂತ ಹೇಳಿ ಕಾರ್ಯಕ್ರಮವು ಇನ್ನು ಮುಂದೆ ಹೇಗೆ ಬಂದರೆ ಚೆನ್ನಾಗಿರುತ್ತದೆ ಎನ್ನುವುದನ್ನು ನೀವು ಪತ್ರ ಮುಖೇನ/ಮಿಂಚಂಚೆಯ ನಮಗೆ ತಿಳಿಸಬಹುದು. ನಾವೂ ಸಹಾ ಹೊಸ ರೀತಿಯ ಕಾರ್ಯಕ್ರಮಗಳನ್ನು ಯೋಚಿಸುತ್ತಿದ್ದೇವೆ.

·        ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಹೋಗಿ ಅಲ್ಲಿನ ಜನಗಳಿಗಾಗಿಯೇ ವಿಶೇಷವಾದ ಕ್ವಿಜ್ ಕಾರ್ಯಕ್ರಮವನ್ನು ನಡೆಸುವ ಆಸೆಯಿದೆ.

·        ಕರ್ನಾಟಕದ ವಿವಿಧ ಶಾಲಾ ಕಾಲೇಜುಗಳಿಗೆ ಹೋಗಿ. ಅವರಿಗಾಗಿಯೇ ಕನ್ನಡ ಕ್ವಿಜ್ ಕಾರ್ಯಕ್ರಮಗಳನ್ನು ಹಾಗೂ ವಿಜ್ಞಾನ ಕ್ವಿಜ್ ಕಾರ್ಯಕ್ರಮಗಳನ್ನು ನಡೆಸುವ ಇಚ್ಛೆ ನಮ್ಮದಾಗಿದೆ.

·        ಅಖಿಲ ಕರ್ನಾಟಕದ ಮಟ್ಟದಲ್ಲಿಯೂ ಸಹಾ ಕ್ವಿಜ್ ಸರಣಿಯನ್ನು ನಡೆಸುವ  ಯೋಜನೆಯಿದೆ.

 

ನಮ್ಮ ಥಟ್ ಅಂತ ಹೇಳಿ ಕಾರ್ಯಕ್ರಮದ ಇನ್ನೊಂದೆರಡು ವಿಶೇಷತೆಗಳನ್ನು ಹೇಳಿ ನನ್ನ ಈ ಬರಹವನ್ನು ಮುಗಿಸುತ್ತೇನೆ.

೧.      ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮವು ಮಾಹಿತಿ-ಮನರಂಜನೆಯನ್ನು ನೀಡುವ ಕಾರ್ಯಕ್ರಮ.

೨.      ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮವು ಕನ್ನಡದಲ್ಲಿ, ಕನ್ನಡರಿಗಾಗಿ, ಕನ್ನಡದ ಬಗ್ಗೆ ನಡೆಯುತ್ತಿರುವ ಕಾರ್ಯಕ್ರಮ. ಹಾಗಾಗಿಯೇ ಶ್ರೀಸಿ.ಎನ್.ರಾಮಚಂದ್ರನ್ ಅವರಂತಹ ಹಿರಿಯ ವಿಮರ್ಶಕರು ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮವನ್ನು ”ಒಂದು ಕನ್ನಡ ಶಾಲೆ” ಎಂದು ಕರೆದರು. ಕನ್ನಡ ಭಾಷೆ, ನುಡಿಗಟ್ಟು, ಒಗಟು, ಗಾದೆ, ಶಬ್ಧಗಳನ್ನು ಪರಿಚಯಿಸುವ ಈ ಕಾರ್ಯಕ್ರಮ ವಿಶ್ವ ಅರಿವನ್ನು ಕನ್ನಡ ಭಾಷೆಯಲ್ಲಿ ನೀಡುವ ರೀತಿ ವಿಶಿಷ್ಠವಾಗಿದೆ.

೩.      ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮವು ಪುಸ್ತಕ ಸಂಸ್ಕೃತಿಗೆ ಪೂರಕವಾಗಿರುವ ಕಾರ್ಯಕ್ರಮ. ಕನ್ನಡದಲ್ಲಿ ಪ್ರಕಟವಾಗುವ ಹೊಸ ಪುಸ್ತಕಗಳನ್ನು ಪರಿಚಯ ಮಾಡಿಕೊಡುವುದರ ಜೊತೆಗೆ ಬಹುಮಾನವಾಗಿ ಪುಸ್ತಕಗಳನ್ನೇ ನೀಡುತ್ತಾ ಬಂದಿದ್ದೇವೆ. ಹೀಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡುವ ಕ್ವಿಜ್ ಕಾರ್ಯಕ್ರಮವು ಭಾರತದಲ್ಲಿ ಮತ್ತೊಂದಿಲ್ಲ.

೪.      ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮದ ಕೆಲವು ಅಂಕಿ೦-ಸಂಖ್ಯೆಗಳನ್ನು ಬಹಳ ಹೆಮ್ಮೆಯಿಂದ ತಮ್ಮ ಮುಂದಿಡುತ್ತಿದ್ದೇನೆ.

ಇದುವರೆಗೂ ೨೦೦೦ ಕಂತುಗಳಲ್ಲಿ ಸುಮಾರು ೬೦೦೦ ಸ್ಪರ್ಧಿಗಳು ಭಾಗವಹಿಸಿದ್ದು, ಅವರಿಗೆ ೨೭,೩೦೦ ಪ್ರಶ್ನೆಗಳನ್ನು ಕೇಳಿ, ೨೮,೫೦೦ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ನೀಡಿದ್ದೇವೆ. ನಾವು ಬಹುಮಾನವಾಗಿ ೪೭,೫೦೦ ಪುಸ್ತಕಗಳನ್ನು ಇಟ್ಟಿದ್ದೆವು. ಅವುಗಳಲ್ಲಿ ತಾವು ೨೮,೫೦೦ ಪುಸ್ತಕಗಳನ್ನು ಪಡೆದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ.

ಪ್ರಿಯ ಓದುಗರೆ!

ಈ ಸಂದರ್ಭದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ಉಪಮಹಾನಿರ್ದೇಶಕರಾಗಿರುವ ಡಾ|ಮಹೇಶ್ ಜೋಷಿಯವರಿಗೆ, ಕಾರ್ಯಕ್ರಮದ ನಿರ್ಮ್ಪಾಕರಾದ ಶ್ರೀಮತಿ ಉಷಾ ಕಿಣಿ, ಶ್ರೀಮತಿ ಎಚ್.ಎನ್.ಆರತಿ ಹಾಗೂ ಶ್ರೀರಘು ಅವರಿಗೆ ನಾನು ಕೃತಜ್ಞ. ಸಕಲ ತಾಂತ್ರಿಕ ವರ್ಗದವರಿಗೂ ಹಾಗೂ ನಮ್ಮೊಡನೆ ನಿರಂತರವಾಗಿ ಕೆಲಸ ಮಾಡುತ್ತಿರುವ ಅನಿತಾ, ಶ್ರೀದೇವಿ, ಶಕುಂತಲಾ, ರವಿ ಎಲ್ಲರಿಗೂ ನಾನು ಕೃತಜ್ಞ.

ಮುಖ್ಯವಾಗಿ ಪ್ರಶ್ನೆಗಳನ್ನು ರೂಪಿಸಲು ಮಾಹಿತಿಯನ್ನು ಒದಗಿಸಿದ ವಾಲ್ಮೀಕಿಯಿಂದ ಶೇಕ್ಸ್ ಪಿಯರ್ ವರೆಗೆ, ಪಂಪನಿಂದ ಕುವೆಂಪುವರೆಗೆ, ಕಾಳಿದಾಸನಿಂದ ಡಾ|ರಾಜಕುಮಾರ್ ವರೆಗೆ ಅನೇಕ ಸಾಹಿತಿ, ಕವಿ, ಮಾಟಕಕಾರ ಹಾಗೂ ಬರಹಗಾರರಿಗೆ ನಾನು ಕೃತಜ್ಞ. ನಾನು ಮಾದಿರುವುದು ಕೇವಲ ದುಂಬಿಯ ಕೆಲಸ. ಸಾಹಿತ್ಯ ಲೋಕದಲ್ಲಿ ಅರಳಿರುವ ಕೋಟ್ಯಾನುಕೋಟಿ ಕಾವ್ಯಕುಸುಮಗಳ ಬಳಿ ಹೋಗಿ, ನನಗೆ ದಕ್ಕಿದಷ್ಟು ಮಕರಂದವನ್ನು ತಂದು ನಿಮಗೆ ಉಣಬಡಿಸುವ ಕೆಲಸವನ್ನಷ್ಟೇ ಮಾಡಿದ್ದೇನೆ. ಅಷ್ಟೇ ನನ್ನ ಹಿರಿಮೆ.

          ಜೂನ್ ೧೭, ೨೦೧೨ ರ ಬೆಳಿಗ್ಗೆ ೧೦ ಗಂಟೆಗೆ ಮೈಸೂರಿನ ಶ್ರೀಸಚ್ಚಿದಾನಂದ ಗಣಪತಿ ಆಶ್ರಮದ ನಾದಮಂಟಪದಲ್ಲಿ ನಡೆಯಲಿರುವ ಥಟ್ ಅಂತ ಹೇಳಿ ಕಾರ್ಯಕ್ರಮದ ೨೦೦೦ ನೆಯ ಕಂತಿನ ಮುದ್ರಣ ಕಾರ್ಯದಲ್ಲಿ ತಾವು ಭಾಗಿಗಳಾಗಬೇಕೆಂದು ಈ ಮೂಲಕ ಪ್ರಾರ್ಥಿಸುತ್ತಿದ್ದೇನೆ. ನಿಮಗಾಗಿ ನಾನು ಕಾಯುತ್ತಿರುತ್ತೇನೆ.

        ನಿಮ್ಮವ

        ನಾಸೋಮೇಶ್ವರ