ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!!
ನಾಲ್ಕು ತಿಂಗಳ ಹಿಂದೆ ನಡೆದ ಘಟನೆ. ಅಂದು ರಶ್ ಇತ್ತು. ಆ ಸಮಯದಲ್ಲಿ ಆ ಪರಿಚಿತರು ಏನೋ ಕೇಳಲು ಬಂದರು. ಅದೇ ಸಮಯದಲ್ಲಿ ಅವರ ಮೊಬೈಲಿಗೊಂದು ಕರೆ ಬಂತು. ಹೊರತೆಗೆದು ಮಾತನಾಡಲಾರಂಬಿಸಿದರು. ತಿಂಗಳ ಹಿಂದಷ್ಟೇ (ಜಾವಾ ಇರುವ) ಡಬಲ್ ಸಿಮ್ ನ ಮೈಕ್ರೋಮ್ಯಾಕ್ಸ್ ಮೊಬೈಲ್ ತಗಂಡಿದ್ದ ನನ್ನ ಕಣ್ಣು ಸಹಜವಾಗಿಯೇ ಅವರ ಮೊಬೈಲ್ ಮೇಲೆ ಬಿತ್ತು. ಅನಂತರ ನಡೆದಿದ್ದು ಕೇವಲ ಒಂದೆರಡು ನಿಮಿಷಗಳ ಮಾತುಕತೆ. ಆಂಡ್ರೋಯ್ಡ್ ಸ್ಮಾರ್ಟ್ ಫೋನ್,ಜಿ.ಪಿ.ಎಸ್, ಇಂಟರ್ನೆಟ್ ಹಾಗೂ ಆಂಡ್ರೋಯ್ಡ್ ಅಪ್ಪ್ಲಿಕೇಶನ್ ಗಳ ಬಗ್ಗೆ ಅವರ ಚಿಕ್ಕ ವಿವರಣೆ-(ಹಾಗೂ ಆ ಸಂಬಂದ ಅನಂತರ ವಿಕಿಪೀಡಿಯಾದಲ್ಲಿ ನಾನು ಸಂಗ್ರಹಿಸಿದ ಮಾಹಿತಿ)–ಮೊಬೈಲ್ ಫೋನ್ ಗಳ ಬಗ್ಗೆ ಹಿಂದಿನ ನನ್ನೆಲ್ಲಾ ಅಭಿಪ್ರಾಯಗಳನ್ನು ಬದಲಾಯಿಸಿತು!!! ತಿಂಗಳ ಹಿಂದಷ್ಟೇ ತಗಂಡ ನನ್ನ ಸಾದಾರಣ ಫೋನನ್ನು–ದುಡ್ಡು ಎಂದಾದರು ಕಂತಿನ ಮೇಲಾದರೂ ಕೊಡು ಎಂದು ಹೇಳಿ-ಹೆಂಡತಿಗೆ ಹೊಸ ಮೊಬೈಲ್ ಒಂದರ ಹುಡುಕಾಟದಲ್ಲಿದ್ದ ನನ್ನ ಸ್ನೇಹಿತನ ಕೈ ಮೇಲೆ ಹಾಕಿ–ಸ್ಮಾರ್ಟ್ ಫೋನ್ ಗಳ ಹುಡುಕಾಟದಲ್ಲಿ ಅಂತರ್ಜಾಲದಲ್ಲಿ ಮುಳುಗಿದೆ!!! ಹಾಗಾದರೆ ಸ್ಮಾರ್ಟ್ ಫೋನ್ ಗಳೆಂದರೇನು? ಆಂಡ್ರೋಯ್ಡ್ ಅಂದರೆ ಏನು?? ಅವುಗಳಿಗೂ ಸಾದಾರಣ ಫೋನ್ ಗಳಿಗೂ ಇರುವ ವ್ಯತ್ಯಾಸಗಳೇನು??? –ಎಂಬುದು ನಿಮ್ಮ ಪ್ರಶ್ನೆಗಳಾಗಿದ್ದರೆ ಅದಕ್ಕೆ ಉತ್ತರವೇ ಈ ಬ್ಲಾಗ್ ಬರಹ. ಸ್ಮಾರ್ಟ್ ಫೋನ್ ಗಳ ಜನಪ್ರಿಯತೆ ರಾಕೆಟ್ ಗತಿಯಲ್ಲಿ ಏರುತ್ತಿದೆ. ಅನೇಕರಿಗೆ ಮುಂದಿನ ನನ್ನ ಬರವಣಿಗೆ ಅತೀ ಸಾದಾರಣ ಹಾಗೂ ಗೊತ್ತಿದ್ದಿದ್ದೆ ವಿಷಯವೇ ಎಂದನ್ನಿಸಿದರೂ ಕೆಲವರಿಗಾದರೂ ಸ್ಮಾರ್ಟ್ ಫೋನ್ ಗಳ ಬಗ್ಗೆ (ಪರಿಚಿತರೊಂದಿಗಿನ ಒಂದೆರಡು ನಿಮಿಷಗಳ ಮಾತುಕತೆಯಲ್ಲಿ) ನನಗಾದಂತೆ ಜ್ಞಾನೋದಯವಾಗಬಹುದು!!! (ಇಂತಹ ಬರಹವೊಂದನ್ನು ಯಾವುದಾದರೊಂದು ಬ್ಲಾಗ್ ನಲ್ಲಿ ಹಿಂದೆಂದಾದರೂ ಓದಿದ್ದರೆ ಅಂದೇ ಸ್ಮಾರ್ಟ್ ಫೋನ್ ಕೊಳ್ಳುವ ನಿರ್ದಾರ ಮಾಡುತ್ತಿದ್ದನೇನೋ). (ಆಂಡ್ರೋಯ್ಡ್ – ಈ ಪದದ ಮೊದಲ ಅಕ್ಷರವನ್ನು apple ನ ಮೊದಲ ಅಕ್ಷರದಂತೆ ದಯವಿಟ್ಟು ಓದಿಕೊಳ್ಳಿ).
ಪ್ರಪಂಚಾದ್ಯಂತ ಇಂದು ಇರುವ ಕೋಟ್ಯಾನುಕೋಟಿ ಮೊಬೈಲ್ ಗಳನ್ನು ಮುಖ್ಯವಾಗಿ ಎರಡು ವಿದಗಳನ್ನಾಗಿ ವಿಂಗಡಿಸಬಹುದು. ಒಂದು ಸಾದಾರಣ ಫೋನುಗಳು. ಮತ್ತೊಂದು ಸ್ಮಾರ್ಟ್ ಫೋನುಗಳು. ಸಾದಾರಣ ಮೊಬೈಲ್ ಗಳ ಬಗ್ಗೆ ಎಲ್ಲರಿಗೂ ಗೊತ್ತಿವೆ. ಆದರೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೆಚ್ಚಿನ ಜನಸಾಮಾನ್ಯರಿಗೆ ಹೆಚ್ಚು ಮಾಹಿತಿಯಿಲ್ಲವೆಂಬುದು ನನ್ನ ಅನುಭವ. ಸ್ಮಾರ್ಟ್ ಫೋನ್ ಗಳು ಸಾದಾರಣ ಫೋನ್ ಗಳಿಗಿಂತ ಹೇಗೆ ಭಿನ್ನವೆಂದರೆ ಅವು ಚಿಕ್ಕ ಕಂಪ್ಯೂಟರ್ ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಕಂಪ್ಯೂಟರ್ ಗಳಲ್ಲಿ ಇಂತಿಷ್ಟು ಶಕ್ತಿಯ ಪ್ರೊಸೆಸರ್, ಇಂತಿಷ್ಟು ಸ್ಮರಣಶಕ್ತಿಯ ರಾಂ ಇರುವಂತೆ ಈ ಸ್ಮಾರ್ಟ್ ಫೋನ್ ಗಳಲ್ಲೂ ಇರುತ್ತವೆ. ಹೇಗೆ ಕಂಪ್ಯೂಟರ್ ಗಳಲ್ಲಿ ವಿಂಡೋಸ್ (ಹೆಚ್ಚಿನ ಜನ ಉಪಯೋಗಿಸುವುದು),ಲಿನೆಕ್ಸ್ ಎಂಬೆಲ್ಲಾ ಕಾರ್ಯತಂತ್ರ ವ್ಯವಸ್ಥೆ ಇರುವಂತೆ ಸ್ಮಾರ್ಟ್ ಫೋನ್ ಗಳಲ್ಲೂ ಒಂದು ಕಾರ್ಯತಂತ್ರವ್ಯವಸ್ಥೆಯಿರುತ್ತದೆ. ಸರಿ. ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳೆಂದರೇನು? ಇದಕ್ಕೆ ಉತ್ತರ – ಈ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಲಾಗಿರುವ ಆಪರೇಟಿಂಗ್ ಸಿಸ್ಟಂ ಆದಾರದ ಮೇಲೆ ಅವುಗಳನ್ನು ಪುನಃ ವಿಂಗಡಿಸಬಹುದು. ಆಪಲ್ ಐಫೋನ್ ಗಳು ಆಪಲ್ ನವರದ್ದೇ ಆಪರೇಟಿಂಗ್ ಸಿಸ್ಟಂ ಹೊಂದಿದ್ದರೆ ನೋಕಿಯಾ ಸ್ಮಾರ್ಟ್ ಫೋನ್, ಬ್ಲಾಕ್ ಬೆರಿ ಫೋನ್ ಗಳು ತಮ್ಮದೇ ಆಪರೇಟಿಂಗ್ ಸಿಸ್ಟಂ (ಸಿಂಬಯಾನ್/ಬ್ಲಾಕ್ ಬೆರಿ) ಹೊಂದಿವೆ. ಮೈಕ್ರೋಸಾಫ್ಟ್ ನವರದ್ದೇ ವಿಂಡೋಸ್ ಮೊಬೈಲ್ ಎಂಬ ಆಪರೇಟಿಂಗ್ ಸಿಸ್ಟಂ ಇದೆ. ಪ್ರಪಂಚದ ಒಟ್ಟು ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ರಾಜನಾದರೂ ಸ್ಮಾರ್ಟ್ ಫೋನ್ ವಿಷಯದಲ್ಲಿ ಸ್ವಲ್ಪ ಹಿಂದೆನೇ. ಇನ್ನು ಗೂಗಲ್ ನವರ ಮುಕ್ತ (ಲಿನಕ್ಸ್ ತರಹ) ಆಪರೇಟಿಂಗ್ ಸಿಸ್ಟಮ್ಮೆ ಆಂಡ್ರೋಯ್ಡ್. ಈ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್ ಫೋನ್ ಗಳೇ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳು. ಇಂದು (ಹಾಗೂ ಇನ್ನು) ಹೆಚ್ಚು ಚಲಾವಣೆಯಲ್ಲಿರುವ ನಾಣ್ಯ!!! ಗೂಗಲ್ ನವರದ್ದು ಯಾವತ್ತೂ ಮುಕ್ತ ಹಾಗೂ ಬಳಕೆದಾರ ಸ್ನೇಹಿ. ಸ್ಯಾಮ್ಸಂಗ್, ಎಲ್.ಜಿ, ಹೆಚ್.ಟಿ.ಸಿ, ಸೋನಿ ಎರಿಕ್ಸನ್ ಮೊದಲಾದ ಕಂಪನಿಗಳು ಆಂಡ್ರೋಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಆಪಲ್ ನವರ ಐಫೋನ್ ಗಳು ಅತ್ತ್ಯುತ್ತಮವಾಗಿದ್ದರೂ ಕೂಡ ಅವುಗಳ ಬೆಲೆಯೂ ಅಷ್ಟೇ ಹೆಚ್ಚು. (ಹೋಲಿಸಿದಾಗ) ಕಡಿಮೆ ಬೆಲೆ ಹಾಗೂ ಬಳಕೆದಾರ ಸ್ನೇಹಿಯಾಗಿರುವ ಆಂಡ್ರೋಯ್ಡ್ ಫೋನ್ ಗಳ ಮೇಲೆ ಜನ ಮುಗಿದುಬೀಳುತ್ತಿದ್ದಾರೆ. ಇಂಟರ್ನೆಟ್ ನಿಂದ ಇಳಿಸಿಕೊಳ್ಳಬಹುದಾದ–ಅಂತರ್ಜಾಲದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿರುವ–ಅಪ್ಪ್ಲಿಕೇಶನ್ ಗಳೆಂಬ ಸಾಫ್ಟ್ ವೇರ್ ಗಳು (ಆಪ್ಸ್)–ಎಲ್ಲಾ ಸ್ಮಾರ್ಟ್ ಫೋನ್ ಗಳ ನಿಜವಾದ ಆಕರ್ಷಣೆ. ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಅನೇಕ ಉಪಯುಕ್ತ ಅಪ್ಲಿಕೇಶನ್ ಗಳು ಉಚಿತ!!! ಲೇಖನದ ಮುಂದಿನ ಭಾಗದಲ್ಲಿ–ಮೊಬೈಲ್ ಫೋನ್ ಗಳನ್ನು ಜನೋಪಯೋಗೆ ವಸ್ತುಗಳನ್ನಾಗಿ ಮಾಡುವ–ಅಂತರ್ಜಾಲದ ಆಂಡ್ರೋಯ್ಡ್ ಮಾರುಕಟ್ಟೆಯಲ್ಲಿ ಸಾವಿರ ಸಂಖ್ಯೆಗಳಲ್ಲಿರುವ ಅಪ್ಪ್ಲಿಕೆಶನ್ ಗಳಲ್ಲಿ–ಕೆಲವೊಂದನ್ನು ನಿಮಗೆ ವಿವರಿಸಲಿದ್ದೇನೆ. ಈ ವಿವರಣೆಗಳು ಮಾಮೂಲಿ ಮೊಬೈಲ್ ಗಳಿಗಿಂತ (ಆಂಡ್ರೋಯ್ಡ್) ಸ್ಮಾರ್ಟ್ ಫೋನ್ ಗಳು ಹೇಗೆ ಬಿನ್ನವೆಂಬುದು ನಿಮಗೇ ಗಮನಕ್ಕೆ ತರುತ್ತವೆ.
ಮೇಲ್ ವ್ಯವಸ್ಥೆ – ಕಂಪ್ಯೂಟರ್ ಗಳಲ್ಲಿ ಎಂ.ಎಸ್. ಆಫಿಸ್ ಔಟ್ಲುಕ್ ಇರುವಂತೆ ಸ್ಮಾರ್ಟ್ ಫೋನ್ ಗಳಲ್ಲೂ ಮೇಲ್ ಕಳಿಸಲು ಹಾಗೂ ಸ್ವೀಕರಿಸಲು ವ್ಯವಸ್ತೆಯಿದೆ. ಒಮ್ಮೆ ಕಾನ್ಫಿಗರ್ ಮಾಡಿದರೆ ಸಾಕು. ನಿಮ್ಮ ಮೇಲ್ ಗಳು ನಿಮ್ಮ ಮೇಲ್ ಅಕೌಂಟ್ ನಿಂದ (ಜಿ ಮೈಲ್/ಯಾಹೂ ಇತ್ಯಾದಿ) ಮೊಬೈಲ್ ಗೇ ಆ ಕ್ಷಣದಲ್ಲಿ ಬಂದು ಬೀಳುತ್ತವೆ!!! ಎಸ್.ಎಂ.ಎಸ್ ತರ ಸಣ್ಣ ಶಬ್ದದೊಂದಿಗೆ. (ನಿಮ್ಮ ಜಿ ಮೈಲ್/ಯಾಹೂ ಅಕೌಂಟ್ ನ ಸೆಟ್ಟಿಂಗ್ ನಲ್ಲಿ POP/IMAP ಎನಾಬಲ್ ಮಾಡಿ ಸೇವ್ ಮಾಡಿರಬೇಕು). ಮೇಲ್ ಗಳನ್ನು ನೋಡಲು ಕಂಪ್ಯೂಟರ್ ಮೊರೆ ಹೋಗುವ ಅವಶ್ಯಕತೆಯಿಲ್ಲ. ಮೊಬೈಲ್ ಉಪಯೋಗಿಸಿ ನೀವು ತೆಗೆದ ಫೋಟೋಗಳನ್ನೂ ಕ್ಷಣಾರ್ದದಲ್ಲಿ ಮೇಲ್ ಮಾಡಬಹುದು. ಆಂಡ್ರೋಯ್ಡ್ ಫೋನ್ ಗಳಲ್ಲಿ ಜಿ ಮೈಲ್ ಎಂಬ ಅಪ್ಪ್ಲಿಕೆಶನ್ನೇ ಇದೆ.
ಗೂಗ್ಲ್ ಸ್ಕೈ ಮ್ಯಾಪ್ – ಸೂರ್ಯ ಆಗಷ್ಟೇ ಮುಳುಗಿ ಕತ್ತಲಾವರಿಸುತ್ತಿರುವಂತೆ ಚಂದ್ರನ ಪಕ್ಕ ಹೊಳೆಯುವ ಆಕಾಶಕಾಯವೊಂದು ಕಾಣಿಸಲಾರಂಬಿಸುತ್ತದೆ. ನೀವು ಸ್ನೇಹಿತರೊಂದಿಗೆ ನಿಂತಿದ್ದೀರಿ. ಆ ಆಕಾಶಕಾಯ ಯಾವುದೆಂದು ಚರ್ಚೆನಡೆಯುತ್ತಿದೆ – ಗುರುನೋ,ಶುಕ್ರನೋ,ಶನಿಯೋ ಅಥವಾ ಮತ್ತಾವುದೋ ನಕ್ಷತ್ರವೋ ಎಂದು. ಈಗ ನಿಮ್ಮ ಜೇಬಿನಿಂದ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಹೊರಬರುತ್ತದೆ. ಗೂಗ್ಲ್ ಸ್ಕೈ ಮ್ಯಾಪ್ ಅಪ್ಲಿಕೇಶನ್ ಕ್ಲಿಕ್ ಮಾಡ್ತೀರಿ. ಟವರ್ ಲೋಕೇಶನ್ ಆದಾರದಲ್ಲಿ ನೀವಿರುವ ಸ್ಥಳ ತಿಳಿದುಕೊಂಡು ಆ ಅಪ್ಲಿಕೇಶನ್ ನಿಮ್ಮ ಮೊಬೈಲ್ ಸ್ಕ್ರೀನ್ ನಲ್ಲಿ ನಿಮ್ಮ ಸುತ್ತ ಕಾಣುವ ಗ್ರಹನಕ್ಷತ್ರಗಳನ್ನು ಮೂಡಿಸುತ್ತದೆ!!! ಸ್ಮಾರ್ಟ್ ಫೋನನ್ನು ಚಂದ್ರನತ್ತ ಹಿಡಿದರೆ ಸಾಕು. ಚಂದ್ರ ಹಾಗೂ ಆ ಆಕಾಶಕಾಯ ಯಾವುದೆಂದು (ಇಂಗ್ಲೀಷ್ ನಲ್ಲಿ) ಸ್ಕ್ರೀನ್ ನಲ್ಲಿ ಮೂಡಿರುತ್ತದೆ. ವಾವ್!!! ಎಷ್ಟೊಂದು ಅದ್ಬುತ ಅಲ್ವಾ?? ಸ್ಮಾರ್ಟ್ ಫೋನ್ ಗಳು ನಿಮ್ಮನ್ನು ಮತ್ತಷ್ಟು ಸ್ಮಾರ್ಟ್ ಮಾಡುತ್ತವೆ!!!
ಜಿ.ಪಿ.ಎಸ್, ಗೂಗ್ಲ್ ಮ್ಯಾಪ್ ಹಾಗೂ ಇವಕ್ಕೆ ಸಂಬಂದಿತ ಅಪ್ಲಿಕೇಶನ್ ಗಳು – ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು ಜಿ.ಪಿ.ಎಸ್ ಆನ್ ಮಾಡಿ ಗೂಗ್ಲ್ ಮ್ಯಾಪ್ ಅಪ್ಲಿಕೇಶನನ್ನ ಬೆರಳಿಂದ ಮುಟ್ತೀರಿ. ಈಗ ಮೊಬೈಲ್ ನ ಪರದೆಯಮೇಲೆ (ಟವರ್ ಆದಾರದಮೇಲೆ ನೀವಿರುವ ಜಾಗ ತಿಳಿದುಕೊಂಡು) ನೀವಿರುವ ಜಾಗದ ಮ್ಯಾಪ್ ಮೂಡಲಾರಂಬಿಸುತ್ತದೆ. ಮನೆಮುಂದೆ ನಿಂತಿದ್ದಾರೆ ಮನೆ ಮಾಡು,ಅಂಗಳ, ರಸ್ತೆ ಕಾಣಲಾರಂಬಿಸುತ್ತದೆ. ಈಗ ಪರದೆಯಮೇಲೆ ಬಾಣದ ತುದಿಯ ಆಕಾರದ ಸಣ್ಣ ನೀಲಿ ಬಣ್ಣದ ಗುರುತು ಮೂಡುತ್ತದೆ. ಅದೇ ನಿಮ್ಮ ಸ್ಮಾರ್ಟ್ ಫೋನ್ (ಗುರುತು)!!! ಫೋನ್ ಹಿಡಿದುಕೊಂಡು ನೀವು ಗೇಟಿನತ್ತ ನಡೆಯುತ್ತಿದ್ದಂತೆ ಆ ಬಾಣದ ಗುರುತೂ ಸ್ಕ್ರೀನ್ ಮೇಲಿನ ಮ್ಯಾಪಿನಲ್ಲಿ ಚಲಿಸಲಾರಂಭಿಸುತ್ತದೆ!!! ಬೈಕೋ ಕಾರೋ ಹತ್ತಿ ವೇಗವಾಗಿ ಹೋಗುತ್ತಿದ್ದರೆ ಪರದೆಯಲ್ಲಿ ಕಾಣುವ ರಸ್ತೆಯ ಮ್ಯಾಪಿನಲ್ಲಿ ಆ ಗುರುತೂ ಅಷ್ಟೇ ವೇಗವಾಗಿ ಚಲಿಸುತ್ತಿರುತ್ತದೆ!!! ಇದೇ ಜಿ.ಪಿ.ಎಸ್ ವ್ಯವಸ್ಥೆ. ಜಿ.ಪಿ.ಎಸ್ ಎಂದರೆ ನಾವು (ಜಿ.ಪಿ.ಎಸ್ ಇರುವ ಉಪಕರಣ ಹಿಡಿದವರು) ಪ್ರಪಂಚದ ಎಲ್ಲೇ ಇದ್ದರೂ ನಾವಿರುವ ಖಚಿತ ಸ್ಥಳವನ್ನು ನಮ್ಮ ಉಪಕರಣದಲ್ಲಿ ತೋರಿಸುವ ವ್ಯವಸ್ಥೆ. ಹೆಚ್ಚಿನ ಸ್ಮಾರ್ಟ್ ಫೋನ್ ಗಳಲ್ಲಿ ಜಿ.ಪಿ.ಎಸ್ ರಿಸೀವರ್ ಇರುತ್ತವೆ. ನಗರದೊಳಗಾಗಲಿ ಕಾಡಿನಲ್ಲಾಗಲಿ ನಾವು ಕಳೆದುಹೋಗುವ ಸಂಭವ ಕಡಿಮೆ. ಇನ್ನೂ ಆಶ್ಚರ್ಯವೆಂದರೆ ಜಿ.ಪಿ.ಎಸ್ ವ್ಯವಸ್ಥೆಗೆ ಮೊಬೈಲ್ ನೆಟ್ ವರ್ಕ್ ಸಿಗ್ನಲ್ ಅಗತ್ಯತೆ ಇಲ್ಲದೇ ಇರುವುದು!!! (ಆದರೆ ಗೂಗ್ಲ್ ಮ್ಯಾಪ್ ತೆರೆದುಕೊಳ್ಳಲು ನೆಟ್ ವರ್ಕ್ ಬೇಕು. ಆದರೆ ಒಮ್ಮೆ ನೆಟ್ ವರ್ಕ್ ಇದ್ದಾಗ ನಮ್ಮ ಸುತ್ತಮುತ್ತಲಿನ ಒಂದಿಷ್ಟು ಜಾಗದ ಮ್ಯಾಪ್ ಫೋನ್ ನ ಕೆಷೆಯಲ್ಲಿ ಸಂಗ್ರಹವಾಗಿರುತ್ತದೆ. ಕೂಡಲೇ ನೆಟ್ ವರ್ಕ್ ಸಿಗ್ನಲ್ ಇಲ್ಲದ ಜಾಗಕ್ಕೆ ನಾವು ಹೋದರೂ ಜಾಗದ ಮ್ಯಾಪ್ ಸ್ಕ್ರೀನ್ ನಲ್ಲಿ ಇದ್ದೇ ಇರುತ್ತದೆ!!) ನಡುರಾತ್ರಿಯಲ್ಲಾಗಲಿ ಚಾರಣ ಮಾಡುತ್ತಾ ಕಾಡೊಳಗೆ ದಾರಿ ತಪ್ಪಿದ್ದರೆ ಜಿ.ಪಿ.ಎಸ್ ಇರುವ ಸ್ಮಾರ್ಟ್ ಫೋನ್ ಇದ್ದರೆ ಅಲೆದಾಟ ತಪ್ಪುತ್ತದೆ. ಸರಿದಾರಿಗೆ ಸುಲಭವಾಗಿ ಬರಬಹುದು. ಈ ಜಿ.ಪಿ.ಎಸ್ ಗೆ ಸಂಬಂದಿಸಿದಂತೆ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳಿಗಾಗಿ (ಮೈ ಟ್ರಾಕ್, ಜಿ.ಪಿ.ಎಸ್ ಎಸ್ಸೇನ್ಶಿಯಲ್ ನಂತಹ) ಅನೇಕ ಅಪ್ಲಿಕೇಶನ್ ಗಳಿವೆ. ಅವುಗಳನ್ನು ಆನ್ ಮಾಡಿ ಫೋನನ್ನು ಜೇಬಿನಲ್ಲಿಟ್ಟುಕೊಂಡು ಜಮೀನಿಗೆ ಒಂದು ಸುತ್ತು ಬಂದರೆ ಜಮೀನಿನ ಮ್ಯಾಪ್ ರೆಡಿ!!! ಸ್ಮಾರ್ಟ್ ಫೋನ್ ಗಳಿದ್ದರೆ (ನಗರಗಳಲ್ಲಿ) ನೇವಿಗೇಶನ್ ಗೇ ಅನೇಕ ಅಪ್ಲಿಕೇಶನ್ ಗಳಿವೆ. ರಾತ್ರಿ ಕೊಲ್ಲೂರಿನಿಂದ ಶೃಂಗೇರಿಕಡೆ ಹೊರಟು–ಮದ್ಯದಲ್ಲೆಲ್ಲಾದರೂ (ಅಪರಾತ್ರಿಯಲ್ಲಿ)-ಸಾಗುತ್ತಿರುವ ದಾರಿ ಸರಿಯೇ ತಪ್ಪೇ ಎಂದು ಅನುಮಾನ ಬಂದರೆ-ಈ ನೇವಿಗೇಶನ್ ಅಪ್ಲಿಕೇಶನ್ ಉಪಯೋಗಿಸಿ–ದಾರಿ ಸರಿಯಾದದ್ದಾಗಿದೆಯೇ ಹಾಗೂ ಶೃಂಗೇರಿ ಎಷ್ಟು ದೂರದಲ್ಲಿದೆ ಹಾಗು ಎಷ್ಟು ಸಮಯದ ದಾರಿ ಎಂಬುದನ್ನು ಕಂಡುಕೊಳ್ಳಬಹುದು!!!! ನಿಜಕ್ಕೂ ಈ ಜಿ.ಪಿ.ಎಸ್ ವ್ಯವಸ್ಥೆ ಅತ್ಯದ್ಭುತ.
ಅಕ್ಕ್ಯುವೆದರ್ – ‘ಥೇನ್’ ಚಂಡಮಾರುತ ಬರುವುದಕ್ಕೆ ನಾಲ್ಕೈದು ದಿನ ಮೊದಲು. ಸಮಾ ಚಳಿ ಬಾರಿಸುತಿತ್ತು. ಚಳಿ ಬಗ್ಗೆನೇ ಎಲ್ಲರ ಮಾತು. ಸ್ಮಾರ್ಟ್ ಫೋನ್ ಹೊರತೆಗೆದು ಏನೋ ನೋಡಿ ನಾನೆಂದೆ-‘ಮೂರ್ನಾಲ್ಕು ದಿನಗಳಲ್ಲಿ ಮೋಡಗಳ ಆಗಮನವಾಗಲಿದೆ. ಚಳಿ ಕಡಿಮೆಯಾಗಲಿದೆ’–ಎಂದು. ನನ್ನ ಭವಿಷ್ಯವಾಣಿ ನಿಜವಾಗಿತ್ತು!! ಮೋಡಗಳ ಆಗಮನವಾಗಿ ಚಳಿ ಹಿಂದೇಟು ಹಾಕಿತ್ತು!!! ಎಲ್ಲರಿಗೂ ಆಶ್ಚರ್ಯ. ಅಂದು ನನ್ನಿಂದ ಆ ಭವಿಷ್ಯವಾಣಿ ಬರಲು ಕಾರಣವಾಗಿದ್ದು ಅಕ್ಕ್ಯುವೆದರ್ ಅಪ್ಲಿಕೇಶನ್. ಅಂತರಜಾಲದಲ್ಲಿ ಬಹು ಪ್ರಸಿದ್ದ ಅಕ್ಕ್ಯುವೆದರ್.ಕಾಂ ನವರ (ಉಚಿತ) ಅಪ್ಲಿಕೇಶನ್. (ನಾನು ಗಮನಿಸಿದಂತೆ) ನಾಲ್ಕೈದು ದಿನಗಳೊಳಗಿನ ಹವಾಮಾನ ಮನ್ಸೂಚನೆ ನೂರಕ್ಕೆ ಎಂಬತ್ತರಷ್ಟು ಸರಿ. ನಗರವಾಸಿಗಳಿಗೆ ಹವಾಮಾನ ಮನ್ಸೂಚನೆ ಅಷ್ಟು ಅಗತ್ಯವೆನ್ನಿಸದಿದ್ದರೂ ರೈತರಿಗೆ ಅಂತಹ ಮನ್ಸೂಚನೆಗಳು ಅತ್ಯಮೂಲ್ಯ.
ಗ್ಲಿಂಪ್ಸ್ – ಉದಾಹರಣೆ ೧ – ತಂದೆ:- (ದೂರದ್ಯಾವುದೋ ಒಂದು ಊರಿನಲ್ಲಿ ಓದುತ್ತಿರುವ ಮಗನನ್ನುದ್ದೇಶಿಸಿ ಫೋನಿನಲ್ಲಿ) “ಏನ್ ಮಾಡ್ತಿದ್ದಿ ಮಗನೇ? ಚನ್ನಾಗಿ ಓದ್ಕಂತಿದ್ದ್ಯಾ?”. ಮಗನ ಉತ್ತರ :- “ಹೂ ಅಪ್ಪ. ಹಾಸ್ಟಲಲ್ಲೇ ಕುಂತ್ಕಂಡ್ ಓದ್ತಿದ್ದೀನಿ”. ಸತ್ಯ :- ಸಿನೆಮಾ ಟಾಕೀಸ್ ಎದುರುಗಡೆ ಕ್ಯೂನಲ್ಲಿ ನಿಂತಿರ್ತಾನೆ!!! ಉದಾಹರಣೆ ೨ – ಹೆಂಡತಿ :- (ರಾತ್ರಿಯಾದರೂ ಇನ್ನೂ ಆಪೀಸಿನಿಂದ ಮನೆಗೆ ಬಾರದ ಗಂಡನಿಗೆ ಫೋನಿನಲ್ಲಿ) “ರೀ, ಎಲ್ ಎನ್ಮಾಡ್ತಿದ್ದೀರೀ?”. ಗಂಡನ ಉತ್ತರ :- “ಆಫೀಸಲ್ಲೇ ಇದ್ದೀನಿ. ಇಂಪಾರ್ಟೆಂಟ್ ಮೀಟಿಂಗ್ ಇದೆ. ಇನ್ನೇನ್ ಬಂದ್ಬಿಡ್ತೀನಿ”. ಸತ್ಯ :- ಯಾವ್ದೋ ಹೋಟ್ಲಲ್ (ಯಾರೊಂದಿಗೋ) ದೋಸೆ ಮೆಲ್ತಿರ್ತಾನೆ!!! ಉದಾಹರಣೆ ೩ – ಮಾಲೀಕ :- (ಯಾವುದೋ ಕೆಲಸಕ್ಕೆ ದೂರದ ಊರಿಗೆ ಕಳಿಸಿದ ಕೆಲಸಗಾರನನ್ನುದ್ದೇಶಿಸಿ ಫೋನಿನಲ್ಲಿ) “ಎಲ್ಲಿದ್ದಿ? ಹೋದ್ ಕೆಲಸ ಆಯ್ತಾ?”. ಕೆಲಸಗಾರನ ಉತ್ತರ :- “ಇಲ್ಲಾ ಸಾರ್. ಇಲ್ಲೇ ಇದ್ದೀನಿ. ಕೆಲಸ ಮುಗ್ಸಿ ನಾಳೆ ಬರ್ತೀನಿ”. ಸತ್ಯ :- ಮನೆಗೆ ಹೋಗಿ ಮುಸುಕೆಳಕೊಂಡ್ ಮಲಗಿರ್ತಾನೆ!!
ತಾವೀಗಿರುವ ಸ್ಥಳದ ಬಗ್ಗೆ ಜನ ಸುಳ್ಳು ಹೇಳಲು ಮುಖ್ಯ ಕಾರಣ ದೂರದಲ್ಲಿದ್ದು ಕೇಳುತ್ತಿರುವವರಿಗೆ ಅದು ಗೊತ್ತಾಗುವುದಿಲ್ಲವೆಂಬುದು. ಅಂತಹ ಸುಳ್ಳಾಟಕ್ಕೆಲ್ಲ ಕಡಿವಾಣ ಹಾಕುವ ಒಂದು ಅಪ್ಲಿಕೇಶನ್ ಸ್ಮಾರ್ಟ್ ಫೋನ್ ಗಳಲ್ಲಿವೆಯೆಂದರೆ ನಿಜಕ್ಕೂ ನಿಮಗೆ ನಂಬಲು ಕಷ್ಟವಾಗಬಹುದು. ಅದೇ ಗ್ಲಿಂಪ್ಸ್ ಎಂಬ ಅಪ್ಲಿಕೇಶನ್!!! ಜಿ.ಪಿ.ಎಸ್. ಆನ್ ಮಾಡಿ ಈ ಗ್ಲಿಂಪ್ಸ್ ಅನ್ನು ಲಾಂಚ್ ಮಾಡುತ್ತಿದ್ದಂತೆಯೇ ತೆರೆಯಮೇಲೆ (ಗೂಗ್ಲ್) ಮ್ಯಾಪ್ ಹಾಗೂ ಅದರಲ್ಲಿ ನಾವಿರುವ ಸ್ಥಳ (ಮಿನುಗುವ ಸಣ್ಣ ಗುರುತಿನಂತೆ) ಕಾಣಿಸಿಕೊಳ್ಳುತ್ತದೆ. ಈ ಲೊಕೇಶನನ್ನು ನಾವು ಯಾರಿಗಾದರೂ ಎಸ್.ಎಂ.ಎಸ್/ಈ ಮೇಲ್ ಮಾಡಬಹುದು. (ಫೇಸ್ ಬುಕ್/ಟ್ವಿಟ್ಟರಲ್ಲೂ ಶೇರ್ ಮಾಡಬಹುದು). ಎಸ್.ಎಂ.ಎಸ್/ಈ ಮೇಲ್ ಗಳು ಕೂಡಲೇ ತಲುಪುತ್ತವಷ್ಟೇ. ಅವರು ಆ ಎಸ್.ಎಂ.ಎಸ್/ಈ ಮೇಲ್ ತೆರೆದರೆ ಅಲ್ಲಿ (ಗೂಗ್ಲ್) ಮ್ಯಾಪ್ ತೆರೆದುಕೊಂಡು ನಮ್ಮ ಲೊಕೇಶನ್ ಕಾಣಿಸುತ್ತದೆ. ಮೇಲಿನ ಉದಾಹರಣೆಗಳಲ್ಲಿ (ಸ್ಮಾರ್ಟ್ ಫೋನ್ ಉಪಯೋಗಿಸಲ್ಪಡುತ್ತಿದ್ದು) ತಂದೆ/ಹೆಣ್ತಿ/ಮಾಲೀಕ “ಹೌದಾ. ಎಲ್ಲಿ ಒಂದು ಗ್ಲಿಂಪ್ಸ್ ಮೆಸ್ಸೇಜ್ ಕಳಿಸಿ ನೋಡುವ”- ಅಂದರೆ ಮಗ/ಗಂಡ/ಕೆಲಸಗಾರನ ನಿಜಸ್ಥಳ ಗೊತ್ತಾಗುತ್ತದೆ!! ಈ ಅಪ್ಲಿಕೇಶನನ್ನು ಅನೆಕಕಡೆ ಉಪಯೋಗಿಸಬಹುದೆಂದು ನನ್ನನಿಸಿಕೆ. ರಾತ್ರಿ ಬೀಟ್ ಪೋಲಿಸ್ ನವರು ಠಾಣೆಗೆ ಆಗಾಗ್ಯೆ ಈ ಮೇಲ್/ಎಸ್.ಎಂ.ಎಸ್ ಕಳಿಸುವ ವ್ಯವಸ್ಥೆ ಮಾಡಬಹುದು.
ಯೂಟ್ಯೂಬ್ – ಅಂತರ್ಜಾಲದ ಯೂಟ್ಯೂಬ್ ನಲ್ಲಿರುವ ಸಾವಿರ ಸಾವಿರ ವಿಡಿಯೋಗಳು ಸ್ಮಾರ್ಟ್ ಫೋನ್ ನಲ್ಲಿ ನಿಮ್ಮ ಕೈಯ್ಯಲ್ಲಿ!! ಯೂಟ್ಯೂಬ್ ಅಪ್ಲಿಕೇಶನ್ ಮಹಿಮೆ. ‘ಕೊಲವೆರಿ’ ಹಾಡಿನ ಬಗ್ಗೆ ಪೇಪರಲ್ಲಿ ಓದಿದ ನಾನು ಕೂಡಲೇ ಯೂಟ್ಯೂಬ್ ಅಪ್ಲಿಕೇಶನನ್ನು ಸ್ಮಾರ್ಟ್ ಫೋನಲ್ಲಿ ಕ್ಲಿಕ್ಕಿಸಿ ಆ ಕೂಡಲೇ ಆ ಹಾಡು ನೋಡಿದೆ!!
ಟಾಕಿಂಗ್ ಟಾಮ್ – ಮೇಲೆಲ್ಲಾ ನಾನು ಹೇಳಿದ ಅಪ್ಲಿಕೇಶನ್ ಗಳು ಕೆಲವರ ಸ್ಮಾರ್ಟ್ ಫೋನಲ್ಲಿ ಇರಬಹುದು ಅಥವಾ ಕೆಲವರದ್ದರಲ್ಲಿ ಇಲ್ಲದೇ ಇರಬಹುದು. ಆದರೆ (ಬಹುಶಃ) ಪ್ರತಿಯೊಂದು ಆಂಡ್ರೋಯ್ಡ್ ಸ್ಮಾರ್ಟ್ ಫೋನಲ್ಲಿ ಇದ್ದೇಇರಬಹುದಾದ ಅಪ್ಲಿಕೇಶನ್ನೇ ಮಾತಾಡುವ ತುಂಟ ಬೆಕ್ಕು ಟಾಕಿಂಗ್ ಟಾಮ್!!! ಟಾಕಿಂಗ್ ಟಾಮ್ ಅಪ್ಲಿಕೇಶನ್ ಲಾಂಚ್ ಮಾಡುತ್ತಿದ್ದಂತೆ ತೆರೆಯಮೇಲೆ ಬೆಕ್ಕೊಂದು ಪ್ರತ್ಯಕ್ಷವಾಗಿ ಆಕಳಿಸಲಾರಂಬಿಸುತ್ತದೆ. ನಾವು ಮಾತು ಶುರುಮಾಡುತ್ತಿದ್ದಂತೆ-ಕತ್ತನ್ನು ಪಕ್ಕಕ್ಕೆ ಹೊರಳಿಸಿ ಕಣ್ಣು ಮಿಟುಕಿಸುತ್ತಾ-ಕಿವಿ ಹಿಂದೆ ಅಂಗೈಯನ್ನು ಅಗಲಮಾಡಿ ಹಿಡಿದು-ನಮ್ಮ ಮಾತನ್ನೇ ಆಲಿಸಲಾರಂಬಿಸುತ್ತದೆ. ನಮ್ಮ ಮಾತು ಮುಗಿಸುತ್ತಿದ್ದಂತೆ ನಾವು ಏನು ಮಾತಾಡಿದ್ದೆವೋ ಅದನ್ನೇ ತನ್ನದೇ ಧ್ವನಿಯಲ್ಲಿ (ಸ್ಪಷ್ಟವಾಗಿ) ಒದರುತ್ತದೆ!!! ಪಟಪಟ ಮಾತಾಡುವ ಹೆಂಗಸರ ಮದ್ಯ ಹಿಡಿದರಂತೂ ‘ಹೇಳಿದ್ದೇ ಹೇಳುತ್ತಲಾ ನೋಡೇ’ ಎಂದು ಬಿದ್ದುಬಿದ್ದು ನೆಗಾಡುತ್ತಾರೆ. ಅದು ಪುನರಾವರ್ತಿಸುವ ನಮ್ಮ ಮಾತುಗಳನ್ನು ರೆಕಾರ್ಡ್ ಮಾಡಿ ಫೇಸ್ ಬುಕ್/ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಬಹುದು. ಅದಕ್ಕೂ ಮಜಾವೆಂದರೆ-ಪರದೆಯ ಮೇಲೆ ಕಾಣುವ ಆ ಬೆಕ್ಕನ್ನ-ಬೆರಳಿನಿಂದ ಮುಟ್ಟುತ್ತಿದ್ದಂತೆ-ಅದು ಮಾಡುವ ಶಬ್ದಗಳು!!! ತಲೆಯನ್ನ ನಾಲ್ಕೈದುಸಲ ಮುಟ್ಟಿದರೆ ದಡ್ ಅಂತ ಅಡ್ಡನೇ ಬೀಳ್ತದೆ. ಹಾಲಿನ ಕ್ಯಾನ್ ಮುಟ್ಟಿ ಒಂದಿಷ್ಟು ಹಾಲು ಹಾಕಬಹುದು. ಗಟಗಟನೆ ಕುಡಿದು ಬಾಯಿ ಒರಸಿಕೊಳ್ಳುತ್ತದೆ. ಶುದ್ದ ಮನರಂಜನೆ. ಮಾತಾಡುವ ಇಂತಾ ಹಲವಾರು ಪ್ರಾಣಿಗಳು ಆಂಡ್ರೋಯ್ಡ್ ಮಾರುಕಟ್ಟೆಯಲ್ಲಿದ್ದರೂ ಅತಿಹೆಚ್ಚು ಡೌನ್ ಲೋಡ್ ಆಗುತ್ತಿರುವ ಅಪ್ಲಿಕೇಶನ್ ಇದು.
ಸ್ಮಾರ್ಟ್ ಫೋನ್ ಗಳನ್ನು ಜನೋಪಯೋಗಿ ಮಾಡುವ ಇಂತಹ ಹತ್ತಾರು ಅಲ್ಲ ನೂರಾರು ಅಲ್ಲ ಸಾವಿರಾರು ಅಪ್ಲಿಕೇಶನ್ ಗಳು ಅಂತರ್ಜಾಲದಲ್ಲಿವೆ. ಯಾವುದೋ ಇಂಗ್ಲೀಷ್ ಪದದ ಅರ್ಥ ಗೊತ್ತಾಗಲಿಲ್ಲವೆಂದುಕೊಳ್ಳಿ. ಕೂಡಲೇ ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು ಡಿಕ್ಷನರಿ ತೆರೆದು ನೋಡಬಹುದು. ಪ್ರಪಂಚಾದ್ಯಂತ ನಡೆಯುತ್ತಿರುವ ಘಟನೆಗಳನ್ನ ನಿಮಗೆ ಆ ಕೂಡಲೇ ತಿಳಿಸಲು ನೂರಾರು ಅಪ್ಲಿಕೇಶನ್ ಗಳಿವೆ. (ಎಲ್ಲಾ ಇಂಗ್ಲಿಷ್ ನ್ಯೂಸ್ ಚಾನಲ್ ಗಳ ಅಪ್ಲಿಕೇಶನ್ ಗಳಿವೆ. ‘ನ್ಯೂಸ್ ಹಂಟ್’ ಅಪ್ಲಿಕೇಶನ್ ನಲ್ಲಿ ಕನ್ನಡ ದಿನಪತ್ರಿಕೆಗಳನ್ನು ಓದಬಹುದು). ನೂರಾರು ಆಟದ ಅಪ್ಲಿಕೇಶನ್ ಗಳಿವೆ. ಅಡಿಗೆಗೆ ಸಂಬಂದಪಟ್ಟವು, ರಸಿಕರ ಮನತಣಿಸುವಂತವು(!!!), ನಾವು ಮಾಡುವ ಉದ್ಯೋಗಗಳಿಗೆ ಸಂಬಂದಿಸಿದ್ದಂತವು (ಇವು ನಿಜಕ್ಕೂ ತುಂಬಾ ಅನುಕೂಲ), ಬಿ.ಎಂ.ಟಿ.ಸಿ ಬಸ್ಸಿನ ವೆಳಾಪಟ್ಟಿ ತಿಳಿಸುವಂತವು, ರೈಲ್ವೆ ವಿಮಾನ ವೆಳಾಪಟ್ಟಿ ತಿಳಿಸುವಂತವು, ಬಾರ್ ಕೋಡ್ ಓದುವಂತವು – ಇನ್ನೂ ಏನೇನಿವೆ ಎಂಬುದನ್ನು ನೀವೇ ನೋಡಲು ಇಲ್ಲಿ ಕ್ಲಿಕ್ಕಿಸಿ ಹಾಗೂ ಬೇಕಾದ್ದನ್ನು ಹುಡುಕಿ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿ ಮುಂದಿನ ಹತ್ತು ವರ್ಷಗಳಲ್ಲಿ ‘ಅಪ್ಲಿಕೇಶನ್’ (ಆಪ್ಸ್) ಎಂಬುದು ಹೆಚ್ಚಿನ ಎಲ್ಲರಿಗೂ ತಿಳಿದಿರುವ ಸರ್ವೇಸಾಮಾನ್ಯ ಪದವಾಗಬಹುದು. ಪತ್ರಿಕೆಗಳ ಒಂದು ಕಾಲಮ್ಮನ್ನು (ಹೊಸ) ಅಪ್ಲಿಕೇಶನ್ ಗಳ ಗುಣಾವಗುಣಗಳನ್ನು ವಿವರಿಸುವುದಕ್ಕೇ ಮೀಸಲಾಗಿಡುವ ದಿನಗಳು ದೂರವಿಲ್ಲ. ಸಂಸ್ಥೆಯೊಂದು (ಖಾಸಗಿ/ಸರ್ಕಾರಿ/ಶೈಕ್ಷಣಿಕ/ಧಾರ್ಮಿಕ/ಸಹಕಾರಿ-ಇತ್ಯಾದಿ) ತನ್ನ ಗ್ರಾಹಕರಿಗೆ ನೀಡುವ ಮಾಹಿತಿ/ಸೇವೆಗಳ ಮಾಹಿತಿಯನ್ನು ಅಪ್ಲಿಕೇಶನ್ ರೂಪದಲ್ಲಿ ಮೊಬೈಲ್ ಗೇ ನೀಡುವ ದಿನಗಳು ದೂರವಿಲ್ಲವೆಂದೆನಿಸುತ್ತದೆ. ಉದಾಹರಣೆಗೆ (ಮುಂದೊಂದು ಕಾಲದಲ್ಲಿ ಬರಬಹುದಾದ) ಕರ್ನಾಟಕ ಟೂರಿಸಂ ಅಪ್ಲಿಕೇಶನನ್ನು ಸ್ಮಾರ್ಟ್ ಫೋನಿಗೆ ಇಳಿಸಿಕೊಂಡು ಸುತ್ತಾಡಕ್ಕೆ ಹೋಗಬಹುದು!! ಜಿ.ಪಿ.ಎಸ್. ಉಪಯೋಗಿಸಿ ನೀವಿರುವ ಸ್ಥಳವನ್ನು ನಿಮ್ಮ ಮೊಬೈಲ್ ಮ್ಯಾಪಿನಲ್ಲೇ ತೋರಿಸಿ ಸುತ್ತಮುತ್ತ ಇರುವ ನೋಡುವ ಸ್ಥಳಗಳ ಮಾಹಿತಿಯನ್ನು ಹಾಗೂ ತಲುಪಲು ಸರಿಯಾದ ದಾರಿಯನ್ನು ಆ ಅಪ್ಲಿಕೇಶನ್ ನಿಮಗೆ ತಿಳಿಸಬಹುದು!!!
ಎಲ್ಲಾ ಸರಿ. ಆಗಿಂದಲೇ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೊಗಳುತ್ತಲೇ ಇದ್ದೀರಿ, ಅವುಗಳ ಬಗ್ಗೆ ಋಣಾತ್ಮಕ ಅಂಶಗಳು ಯಾವುವೂ ಇಲ್ವೆ??–ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮ ತಲೆಯಲ್ಲಿ ಇಷ್ಟೊತ್ತಿಗಾಗಲೇ ಮೂಡಿರಬಹುದು. ಅದಕ್ಕೆ ಉತ್ತರವೇ ಲೇಖನದ ಈ ಪ್ಯಾರ. ಸ್ಮಾರ್ಟ್ ಫೋನ್ ಗಳಲ್ಲಿ ಎರಡು ಮುಖ್ಯ ನೆಗಿಟಿವ್ ಪಾಯಿಂಟ್ ಗಳಿವೆ. ಒಂದು ಅವುಗಳ ಬೆಲೆ. (ನೋಕಿಯಾ/ಎಲ್.ಜಿ/ಸ್ಯಾಮ್ಸಂಗ್ ನಂತಹ) ದೊಡ್ಡ ಕಂಪನಿಗಳನ್ನು ಬಿಡಿ. ಕಡಿಮೆ ಬೆಲೆಗಳ ಮೊಬೈಲ್ ತಯಾರಿಸುವ ಮೈಕ್ರೋಮ್ಯಾಕ್ಸ್ ನಂತಹ ಕಂಪನಿಗಳ ಸ್ಮಾರ್ಟ್ ಫೋನ್ ಗಳ ಬೆಲೆ (ಸಾದಾರಣವಾಗಿ) ಏಳು ಸಾವಿರ ರುಪಾಯಿಗಳ ಮೇಲೇ. ತುಂಬಾ ಸಾದಾರಣ ಕ್ಯಾಮರಾವಿರುವ (2 MP)-ಸ್ವಲ್ಪ ಇತ್ತೀಚಿನ ಆಂಡ್ರೋಯ್ಡ್ ವರ್ಷನ್ (ಜಿಂಜರ್ ಬ್ರೆಡ್) ಇರುವ-ಸಾದಾರಣ ಅಳತೆಯ ಪರದೆಯಿರುವ-ಸ್ವಲ್ಪ ಉತ್ತಮ ಪ್ರೊಸೆಸರ್ (೮೩೦ Mhz) ಇರುವ-ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್ ನಲ್ಲಿರುವ ಹೆಚ್ಚಿನ ಎಲ್ಲಾ ಉಪಯೋಗಗಳಿರುವ- ಹಾಗೂ ಆ ಕಾರಣಗಳಿಂದಾಗಿ ಇಂದು ಮಾರುಕಟ್ಟೆಯಲ್ಲಿ ಬಿಸಿದೋಸೆಯಂತೆ ಖಾಲಿಯಾಗುತ್ತಿರುವ-ಸ್ಯಾಮ್ಸಂಗ್ ನವರ ಗ್ಯಾಲಕ್ಸಿ ವೈ ಸ್ಮಾರ್ಟ್ ಫೋನ್ ಬೆಲೆಯೂ ಏಳುಸಾವಿರ ರೂ ಗಳ ಆಚೆನೇ. (ಅದೇ ಸ್ಯಾಮ್ಸಂಗ್ ನವರ ಗ್ಯಾಲಕ್ಸಿ S-2 ಬೆಲೆ ೨೯೦೦೦ !!!). ಇನ್ನೊಂದು ನೆಗಿಟಿವ್ ಪಾಯಿಂಟ್ ಅವುಗಳ ಕಡಿಮೆ ಅವದಿಯ ಬ್ಯಾಟರಿ ಬಾಳಿಕೆ. (ಮತ್ತೆಮತ್ತೆ ಮಾಡಬೇಕೆನಿಸುವ) ಅನೇಕ ಮಂಗಾಟಗಳಿಗೆ ತುಂಬಾ ಅವಕಾಶಗಳಿರುವುದರಿಂದ-ಮೊಬೈಲಿನ ಕೇವಲ ಮಾತನಾಡುವುದಕ್ಕಿಂತ ಬೇರೆ ಉಪಯೋಗಗಳೇ ಹೆಚ್ಚು ಹೆಚ್ಚು ಇರುವುದರಿಂದ-ಬ್ಯಾಟರಿಯ ಬಳಕೆಯೂ ಹೆಚ್ಚು. ಮಾಮೂಲಿ ಮೊಬೈಲಿಗಿಂತ ಹೆಚ್ಚುಬಾರಿ ಚಾರ್ಜ್ ಮಾಡ್ಬೇಕಾಗುತ್ತೆ. ಇನ್ನೊಂದು ವಿಷಯ. ನಾಳೆನೇ ನೀವು ಮಾಮೂಲಿ ಮೊಬೈಲ್ ಬದಲಾಯಿಸಿ ಹೊಸ ಸ್ಮಾರ್ಟ್ ಫೋನ್ ತಗಂಡರೆ, ಉಪಯೋಗಿಸುವ ಮೊದಲು ಒಂದು ಇಂಟರ್ನೆಟ್ ಡಾಟಾ ಪ್ಲಾನ್ ತಗಣುವುದು ಒಳ್ಳೆಯದು. (ಬಿ.ಎಸ್.ಏನ್.ಎಲ್ ನವರದ್ದು ೫೭ ಹಾಗೂ ೯೬ ರೂಗಳ/ತಿಂಗಳಿಗೆ ಪ್ಲಾನ್-2Gಗೆ-ಇದೆ). ಇಲ್ಲದಿದ್ದರೆ ನಿಮ್ಮ ಕರೆನ್ಸಿ (ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಗಳನ್ನು ಉಪಯೋಗಿಸಿದಂತೆಲ್ಲಾ) ನೀರಿನಂತೆ ಖಾಲಿಯಾಗಲಾರಂಬಿಸಿ ನನ್ನನ್ನು ಬೈದುಕೊಳ್ಳುತ್ತೀರಿ.
ಈ ಲೇಖನ-ಮೊಬೈಲ್ ಗಳು ಕೇವಲ ಪರಸ್ಪರ ಮಾತಾಡಲು (ಮಾತ್ರ) ಇರುವುವು-ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ-ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆಯೆಂಬುದು ನನ್ನನಿಸಿಕೆ. ಇನ್ನುಮುಂದಾದರೂ ನೀವು-ನಾಲ್ಕಾರು ಜನ ಒಟ್ಟುಸೇರಿ ಮಾತಾಡುತ್ತಿರುವಾಗ-ನೆಂಟರಿಷ್ಟರ ಹುಡುಗನೊಬ್ಬ/ಸ್ನೇಹಿತನೊಬ್ಬ ಅದೆಷ್ಟೋ ಸಾವಿರ ರೂಪಾಯಿಯ ಮೊಬೈಲ್ ತಗಂಡ-ಎಂಬ ಮಾತು ಬಂದಾಗ-ಚಿನ್ನದ ಉಂಗುರಗಳನ್ನು ಬೆರಳುಗಳಿಗೆ ಹಾಕಿದ ಕೈಯ್ಯಿಂದ-ಜೋಬಿನಿಂದ ನೋಕಿಯಾ (ಯಾವುದೋ ನಂಬರಿನ) ಹಳೆ ಸೆಟ್ ಹೊರತೆಗೆದು-ನಾನಿನ್ನೂ ಉಪಯೋಗಿಸುತ್ತಿರುದು ಇದನ್ನೇ-ಎಂದು (ಸಾವಿರಾರು ರೂಪಾಯಿ ಮೊಬೈಲನ್ನು ಕೊಂಡವರನ್ನು ಟೀಕೆ ಮಾಡುವ ದಾಟಿಯಲ್ಲಿ) ಹೇಳಲಾರಿರೆಂದು ಭಾವಿಸುತ್ತೇನೆ.(ನನಗಾದ ಅನುಭವ !!!) (ಯಾವುದೇ ಒಂದು) ಮೊಬೈಲಿನ ಬಳಕೆ ನನಗೆ ತೀರಾ ಇತ್ತೀಚಿನದು. ಕೇವಲ ಒಂದೂ ಮುಕ್ಕಾಲು ವರ್ಷವಾಯಿತಷ್ಟೇ(ಬೆಟ್ಟ-ಗುಡ್ಡಗಳ ಹಳ್ಳಿಗಾಡಿಗಳಲ್ಲಿನ ನೆಟ್ವರ್ಕ್ ಸಮಸ್ಯೆಯೇ ಇದಕ್ಕೆ ಕಾರಣ). ಅದಲ್ಲದೆ ಈ (ಮೊಬೈಲ್ ಗಳಿಗೆ ಸಂಬಂದಿಸಿದ) ತಾಂತ್ರಿಕತೆ ನಾನು ಓದಿದ ವಿಷಯವೂ ಅಲ್ಲ ಹಾಗು ನನ್ನ ಕಾರ್ಯಕ್ಷೇತ್ರವೂ ಅಲ್ಲ. ಈ ಎರಡು ಕಾರಣಗಳೇ ಸಾಕು ಒಂದಿಷ್ಟು ತಪ್ಪುಗಳು ಈ ಲೇಖನದಲ್ಲಿ ನುಸಿಳಿರಲು. ಈ ಲೇಖನವನ್ನು ಓದಿದ ವಿಷಯಕ್ಕೆ ಸಂಬಂದಪಟ್ಟ ತಂತ್ರಜ್ಞರು ಅವುಗಳನ್ನು (ಕಾಮೆಂಟ್ ನಲ್ಲಿ ಬರೆಯುವ ಮೂಲಕ) ನನ್ನ ಗಮನಕ್ಕೆ ತಂದರೆ ನನಗೆ ನನ್ನ ತಪ್ಪುಗಳ ಅರಿವಾಗಿ ತಿಳುವಳಿಕೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ನಾನು ಆರಂಬದಲ್ಲೇ ಬರೆದಿದ್ದೇನೆ. ಈ ಸ್ಮಾರ್ಟ್ ಫೋನುಗಳ ಬಗ್ಗೆ ವಿವರಣೆ ಕೆಲವರಿಗೆ ತೀರಾ ಸಾಮಾನ್ಯ ಹಾಗು ಗೊತ್ತಿದ್ದಿದ್ದೇ ಎಂದನಿಸಿದರೂ ಕೆಲವರಿಗಾದರೂ ಆಶ್ಚರ್ಯವಾಗಬಹುದು. ಸ್ಮಾರ್ಟ್ ಫೋನುಗಳ ಬಗ್ಗೆ ನಿಮಗೆ ಗೊತ್ತಿತ್ತೇ? ಅಥವಾ ಜ್ಞಾನೋದಯವಾಗಲ್ಪಡುತ್ತಿದೆಯೇ?? ನೀವು ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಉಪಯೋಗಿಸುವವರಾಗಿದ್ದಾರೆ ಒಂದಿಷ್ಟು ಆಸಕ್ತಿದಾಯಕ ಆಪ್ಸ್ ಗಳನ್ನ ಹಂಚಿಕೊಳ್ಳಬಹುದು. (ಕಾಮೆಂಟ್ ರೂಪದಲ್ಲಿ) ಓದುಗರ ಅಭಿಪ್ರಾಯಗಳಿಗೆ ಸದಾ ಸ್ವಾಗತ.
Comments
ಉ: ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!!
ಉ: ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!!
ಉ: ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!!
ಉ: ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!!
In reply to ಉ: ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!! by makara
ಉ: ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!!
ಉ: ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!!