' ಅವಸಾನ ' (ಕಥೆ) ಭಾಗ 1
ಆಷಾಡದ ಜಡಿಮಳೆ ಧೋ ಎಂದು ಸುರಿಯುತ್ತಿದೆ ! ಮೃಗಶಿರಾ ಮಳೆ ಆಕಾಶ ಮತ್ತು ಭೂಮಿಗಳನ್ನು ಒಂದು ಮಾಡಲು ಪಣವನ್ನು ತೊಟ್ಟಂತಿದೆ. ಹಸಿರು ಪರ್ವತ ಶ್ರೇಣಿಗಳ ಹಿಂದಿನಿಂದ ಆನೆಗಳ ಹಿಂಡಿನಂತೆ ಘೀಳಿಡುತ್ತ ಬರುತ್ತಲಿರುವ ದಟ್ಟ ಕಾಮರ್ೋಡಗಳ ಪ್ರವಾಹ. ಇಷ್ಟು ದಿನಗಳ ವರೆಗೆ ಎಲ್ಲಿದ್ದವೀ ಕರಿಮೋಡಗಳ ಹಿಂಡು ? ಸಿಡಿಲು ಗುಡುಗುಗಳ ಆರ್ಭಟದೊಂದಿಗೆ ವರುಣನು ಆಗಮಿಸಿ ಒಂದು ತಿಂಗಳು ದಾಟಿ ಹೊಗಿದೆ. ಏಕೋ ಏನೋ ದಿನದಿಂದ ದಿನಕ್ಕೆ ಮಳೆಯ ಆರ್ಭಟ ಹೆಚ್ಚಾಗಿದೆ, ' ಯಾವ ಕೇಡಿಗೋ ಏನೋ ಎಂದು ಹಿರಿಯ ತಲೆಗಳು ಗೊಣಗಿಕೊಳ್ಳುತ್ತಿವೆ. ಆಷಾಡದ ಚಳಿಗಾಳಿ ದೇಹದ ನರನಾಡಿಗಳನ್ನು ನಡುಗಿಸುವಂತೆ ಬೀಸುತ್ತಿದೆ; ಬರಬರುತ್ತ ವ್ಯವಸಾಯ ಲಾಭದಾಯಕವಲ್ಲದ ವೃತ್ತಿಯಾಗುತ್ತ ಬರುತ್ತಿದೆ. ಅತಿವೃಷ್ಟಿ ಇಲ್ಲವೆ ಅನಾವೃಷ್ಟಿಯಿಂದ ವ್ಯವಸಾಯ ಗಾರನಿಗೆ ನಷ್ಟ ತಪ್ಪಿದ್ದಲ್ಲ. ಕುಟುಂಬಗಳು ಬೆಳೆದಂತೆ ಕಾಲ ಗತಿಸಿದಂತೆ ಕಡಿಮೆಯಾಗುತ್ತಿರುವ ಭೂ ಹಿಡುವಳಿ ಪ್ರದೇಶ, ಏರುತ್ತಲಿರುವ ಜನಸಂಖ್ಯೆ, ಅದಕ್ಕನುಗುಣವಾಗಿ ಭೂಮಿ ಬೆಳೆಯಲು ಸಾಧ್ಯವೆ ? ಇರುವ ಅಲ್ಪ ಸ್ವಲ್ಪ ಭೂಮಿಯನ್ನು ಬಿಟ್ಟು ಹೋಗಲು ಮನಸಾಗದು, ಏಕೋ ಏನೋ ಹುಟ್ಟಿ ಬೆಳೆದ ಊರಿನ ವಾಸಸ್ಥಳದ ಮತ್ತು ಮನೆತನದ ವ್ಯಾಮೋಹ ; ಇಲ್ಲಿಯೆ ಬಾಳಿ ಬದುಕಿ ಮಣ್ಣಾಗ ಬೇಕೆಂಬ ವಾಂéಛೆ ಪ್ರಬಲ ವಾಗುತ್ತಿದೆ.
ಕೆಲವು ವರ್ಷಗಳಿಂದಿಚೆಗೆ ಕೇರಳದ ವಲಸಿಗರು ಮಲೆನಾಡಿನ ಹೃದಯದಂತಿರುವ ಕನಕಗಿರಿ ಪರ್ವತ ಶ್ರೇಣಿಯ ಸುತ್ತಲೂ ದೃಗ್ಗೋಚರವಾಗಿ ಹರಡಿ ನಿಂತಿರುವ ಕಾನನಕ್ಕೆ ಲಗ್ಗೆ ಇಟ್ಟಿದ್ದಾರೆ. ಶುಂಠಿಯನ್ನು ಬೆಳೆಯಲು ನಮ್ಮವರ ಭೂಮಿಯನ್ನೆ ಕೆಲವು ಸಾವಿರಕೊಟ್ಟು ಗೇಣಿಗೆ ಪಡೆದು ಲಕ್ಷಾಂತರ ಹಣ ಸಂಪಾದಿಸಿದ್ದಾರೆ. ಅವರು ಕೊಟ್ಟ ಸಾವಿರಾರು ರೂಪಾಯಿ ಗಳನ್ನು ಕುಡಿದು ಕರಗಿಸಿದ ನಮ್ಮ ಜನಕ್ಕೆ ಅವರು ಗಳಿಸಿದ ಲಕ್ಷಾಂತರ ಹಣದ ಬಗ್ಗೆ ಅಸೂಯೆ ಪ್ರಾರಂಭವಾಗಿ ಗೊಣಗಾಟ ನಡೆಸಿದ್ದಾರೆ. ಪರಿಸರ ಹಾಳಾಗುತ್ತಿದೆ ಭೂಮಿ ಬಂಜರಾಗುತ್ತದೆ ಕ್ರಮೇಣ ಕಡಸು ಕಡಿಮೆಯಾಗಿ ನೈಸರ್ಗಿಕ ಪ್ರಕೋಪಗಳು ಉಂಟಾಗುತ್ತವೆ, ಮಾನವ ಸಮುದಾಯ ಪ್ರಪಾತದ ಅಂಚಿಗೆ ತಲುಪುತ್ತಿದೆ ಎಂದು ಪರಿಸರವಾದಗಳು ಪ್ರತಿಭಟಿಸುತ್ತಿದ್ದಾರೆ. ಕೆಲವರು ಇದನ್ನು ಪರಿವಾರ ಹೋರಾಟವೆಂದು ಗೇಲಿ ಮಾಡುತ್ತಿದ್ದಾರೆ; ಅವರಿಗೆ ಜನರಿಂದ ಸೂಕ್ತ ಬೆಂಬಲ ಸಿಗುತ್ತಿಲ. ಇನ್ನು ಕೆಲವರು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಭೂಮಿಯನ್ನು ಅತಿಕ್ರಮಿಸಿ ಬಗರ್ ಹುಕುಂ ಸಾಗುವಳಿ ಮಾಡಿ ಶುಂಠಿಯನ್ನು ಬೆಳೆಯಲು ಪ್ರಾರಂಭಿ ಸಿದ್ದಾರೆ. ಇನ್ನು ಹಲವರು ಬಗರ್ ಹುಕುಂ ಮಾಡಿದ ಜಮೀನು ತಮ್ಮದೆ ಎಂದು ನಮ್ಮ ಕನ್ನಡ ಭಾಷೆ ತಿಳಿಯದ ಕೇರಳದ ವಲಸಿಗರಿಗೆ ಕೊಟ್ಟು ಚೌಕಾಸಿ ಮಾಡಿ ಹೆಚ್ಚು ಹಣಕ್ಕೆ ವರ್ಷ ವರ್ಷ ತುಂಡು ಗುತ್ತಿಗೆಗೆ ಕೊಡುತ್ತ ಆರಾಮದ ಸಂಪಾದನೆಗೆ ತೊಡಗಿದ್ದಾರೆ. ಇನ್ನು ಕೆಲವರು ಮಲೆಯಾಳಿಗಳು ಕಷ್ಟ ಪಟ್ಟು ಬೆಳೆದ ಶುಂಠೀಯು ತಮ್ಮದೆಂದು ದುಂಡಾವರ್ತನೆ ಮಾಡಿ ಕಷ್ಟ ಪಟ್ಟು ಬೆಳೆದವನಿಗೆ ಪಂಗನಾಮ ಹಾಕಿದ ಉದಾಹರಣೆಗಳು ಸಾಕಷ್ಟಿವೆ.
ಈಗೀಗ ನಮ್ಮ ಗ್ರಾಮಗಳ ಎಲ್ಲ ಕೃಷಿ ಕಾರ್ಮಿಕರು ಶುಂಠಿ ಕೃಷಿ ಕಾರ್ಯಕ್ಕೆ ಪಕ್ಷಾಂತರ ಮಾಡಿದ್ದಾರೆ. ಹೀಗಾಗಿ ದಿನಕ್ಕೆ ಇನ್ನೂರಕ್ಕೂ ಹೆಚ್ಚಿಗೆ ಗಳಿಸುವ ಕೆಲಸಗಾರರು ಸಾಂಪ್ರದಾಯಿಕ ಕೃಷಿ ಕಾರ್ಯಗಳಿಗೆ ಬರುತ್ತಿಲ್ಲ.. ದಶಕದ ಹಿಂದೆ ಸೇರು ಅಕ್ಕಿ ಮೂವತ್ತು ರೂಪಾಯಿಗಳ ದಿನಗೂಲಿ ಕೆಲಸಕ್ಕೆ ಸಂತೋಷದಿಂದ ಹಾಗೂ ನಿಯಮಬದ್ಧವಾಗಿ ಬರುತ್ತಿದ್ದವರು ಈಗ ಕೃಷಿ ಕೆಲಸಗಳಿಗೆ ಬರುತ್ತಿಲ್ಲ. ಶುಂಠಿಯ ಕೆಲಸ ಇಲ್ಲದಿದ್ದಾಗ ಮಾತ್ರ ಅದು ಅನಿವಾರ್ಯವಾಗಿ ಬರುತ್ತಾರೆ,ಬಂದರೂ ಈ ಹಿಂದಿನ ನಿಯಮ ನಿಷ್ಟೆಗಳಿಲ್ಲ. ಬೆಳಗಿನ ಹತ್ತು ಘಂಟೆಗೆ ಮೊದಲು ಗದ್ದೆಗೆ ಇಳಿಯುವುದಿಲ್ಲ. ಕೆಲಸ ಪ್ರಾರಂಭಿಸುವ ಪೂರ್ವಭಾವಿಯಾಗಿ ಬೀಡಿ ಸೇದುವ ಅಥವಾ ಎಲೆ ಅಡಿಕೆ ಹಾಕುವ ನೆವದಲ್ಲಿ ಬಹಳಷ್ಟು ಸಮಯವನ್ನು ದುರ್ವಿನಿಯೋಗ ಮಾಡಿ ಸೂರ್ಯನು ಪಶ್ಚಿಮದ ಅಂಚಿಗೆ ಬಾಗುತ್ತಿದ್ದಂತೆ ಕೆಲಸ ಮುಗಿಸಿ ಮನೆಗೆ ಸಾಗುವ ತರಾತುರಿಯಲ್ಲಿ ಕೆಲಸ ಮುಗಿಸಿ ಹೊರಡುವ ಚಾಳಿ ಬೆಳೆಸಿ ಕೊಂಡಿದ್ದಾರೆ. ಈ ಮೊದಲಿನ ಕಷ್ಟ ಪಟ್ಟು ದುಡಿಯುವ ಪ್ರವೃತ್ತಿ ತೋರದೆ ಉದಾಸೀನತೆಯನ್ನು ರೂಢಿಸಿಕೊಂಡಿದ್ದಾರೆ. ಹೀಗಾಗಿ ಸಣ್ಣ ಹಿಡುವಳಿ ದಾರರಿಗೆ ವ್ಯವಸಾಯವು ದಿನದಿಂದ ದಿನಕ್ಕೆ ನಷ್ಟದ ವೃತ್ತಿಯಗಿ ಪರಿಣಮಿಸುತ್ತಲಿದೆ.
*
ಗ್ರಾಮದ ಪರಿಸ್ಥಿತಿ ಈ ರೀತಿ ಇದ್ದರೂ ಊರು ಬಿಟ್ಟು ಹೋಗಲು ಮನಸಿಲ್ಲ, ಮೇಲಾಗಿ ಕೈಯಲ್ಲಿ ಹಣವಿಲ್ಲ. ಮಲೆನಾಡಿನ ಈ ಪ್ರಶಾಂತತೆಗೆ ಒಗ್ಗಿ ಹೋದವರಿಗೆ ಪಟ್ಟಣದ ಜನಜಂಗುಳಿ ಯೊಂದಿಗಿನ ಸ್ಪರ್ದೆ, ಮತ್ತು ಸಣ್ಣತನ ಗಳನ್ನು ಮೈಗೂಡಿಸಿ ಕೊಳ್ಳುವುದು ಕಷ್ಟ. ಹೀಗಾಗಿ ದಟ್ಟ ಹಸುರಿನ ಶಾಂತ ಪರಿಸರದ ಮಧ್ಯೆ ನಮ್ಮ ಹೋರಾಟದ ಬದುಕು ಮುಂದುವರಿದಿದೆ. ಮಿತಿಮೀರಿದ ಮಳೆಯ ಹೊಡೆತಕ್ಕೆ ಗದ್ದೆಯ ಬದುವುಗಳು ಅಲ್ಲಲ್ಲಿ ಕೊಚ್ಚಿ ಹೋಗಿ ಕೊರಕಲು ಗಳಾಗಿವೆ ಅವುಗಳನ್ನು ತುಂಬಿ ಸರಿಪಡಿಸ ಬೇಕೆಂದರೆ ಮಳೆ ನಿಂತು ಹೊರಪು ಕೊಡಬೇಕು. ಗದ್ದೆಗಳಲ್ಲಿ ಅಂತರ್ಜಲ ಒಡೆದಿದೆ. ಭತ್ತದ ಸಸಿಗಳು ನಾಟಿಗೆ ಬಂದಿವೆ, ಬೇಗನೆ ಇನ್ನೊಂದು ವಾರದಲ್ಲಿ ನಾಟಿಯ ಕೆಲಸ ಮಾಡಿ ಮುಗಿಸಬೇಕು. ಆಳುಗಳನ್ನು ಹುಡುಕುವ ಕೆಲಸವೆ ಬಹಳ ಪ್ರಯಾಸದ್ದು, ಆಳುಗಳನ್ನು ಕರೆತರುವ ಕೆಲಸವನ್ನು ಕೆಳಗಿನ ಕೇರಿಯ ದ್ಯಾವೀರಿಗೆ ವಹಿಸಬೇಕು. ಅಡಿಕೆಗೆ ಕೊಳೆರೋಗ ಬಂದಿದೆ, ಔಷಧಿ ಹೊಡೆಯಲು ಐತ ಪೂಜಾರಿಗೆ ಹೇಳಬೇಕು. ಹೀಗೆಯೆ ತಿಮ್ಮಪ್ಪಯ್ಯ ತಮ್ಮದೇ ಆದ ಯೋಚನಾ ಲಹರಿಯಲ್ಲಿ ಸಾಗಿದ್ದರು. ಭರ್ ಎಂದು ಬೀಸಿದ ಗಾಳಿಗೆ ಪ್ಲಾಸ್ಟಿಕ್ ಹಾಳೆ ಹೊದಿಸಿದ ಗೊರಬು ಗದ್ದೆಗೆ ಬಿದ್ದಿತು. ಹಾಗೆ ಬಿದ್ದ ಗೊರಬನ್ನು ಕೈಗೆ ಎತ್ತಿಕೊಳ್ಳುವಷ್ಟರಲ್ಲಿ ತಿಮ್ಮಪ್ಪಯ್ಯ ಅರ್ಧ ತೊಯ್ದು ಹೋದರು. ಅಡಿಕೆ ತೊಟದ ಬದುವಿನಲ್ಲಿ ಧಾವಿಸಿ ಬರುತ್ತಿದ್ಚ ತುಕ್ರನನ್ನು ನೋಡಿ ತಿಮ್ಮಪ್ಪಯ್ಯ ನಿಂತರು.
ತುಕ್ರ ಬಂದವನೆ ' ಅಯ್ಯ, ಭಾಸ್ಕರನ್ ನಾಯರ್ ತೀರಿ ಹೋದನಂತೆ, ಆತ ಸತ್ತು ಎರಡು ಮೂರು ದಿನ ಗಳಾಗಿವೆಯಂತೆ,, ಪಂಚಾಯ್ತಿ ಜನ ಪೋಲೀಸ್ ಎಲ್ಲ ಬಂದಿದ್ದಾರಂತೆ, ಹೆಣ ಊದಿಕೊಂಡು ಒಡೆದು ಹೋಗಿದೆ ಯಂತೆ, ದುರ್ವಾಸನೆ ತಡೆಯ ಲಾಗುತ್ತಿಲ್ಲವಂತೆ ' ಎಂದು ಒಂದೇ ಉಸುರಿಗೆ ವರದಿ ಒಪ್ಪಿಸಿದ.
' ಎಂತಹ ನಾಯರ್ಗೆ ಎಂತನ ಸಾವು !' ಎಂದು ತಿಮ್ಮಪ್ಪಯ್ಯ ಗೊಣಗಿಕೊಂಡರು. ವಿಷಾದದ ಭಾವ ಒಂದು ಕ್ಷಣ ಅವರ ಮುಖದ ಮೇಲೆ ಸುಳಿದು ಹೋಯಿತು. ನಂತರ ಸಾವರಿಸಿಕೊಂಡು ನಾಯರ್ನ ಕೊನೆ ದರ್ಶನಕ್ಕೆ ಹೊರಟ ತಿಮ್ಮಪ್ಪಯ್ಯ ನೆನಪಿನಾಳಕ್ಕೆ ಇಳಿದರು.
*
ಸ್ವಾತಂತ್ರ ಪೂರ್ವದ ದಶಕಗಳ ಹಿಂದಿನ ಕಥೆಯದು. ಈಗಿನ ತಿಮ್ಮಪ್ಪಯ್ಯ ಬಿದ್ರಕಾನಿನ ತನ್ನ ಮನೆಯಿಂದ ಮಾವಿನಕೊಪ್ಪ ಶಾಲೆಗೆ ಬರುತ್ತಿದ್ದ ದಿನಗಳವು. ಮನೆಯಿಂದ ಶಾಲೆಗೆ ಮೂರು ಮೈಲಿಗಳ ದೂರ,, ಪ್ರತಿದಿನ ನಡೆದು ಹೋಗಿ ಬರಬೇಕು. ಈಗಿನಂತೆ ಆಗ ರಸ್ತೆಗಳ ಸೌಕರ್ಯವಿರಲಿಲ್ಲ. ಮಕ್ಕಳನ್ನು ಶಾಲೆಗೆ ಕಳಿಸಬೇಕೆಂಬ ಯೋಚನೆಯೆ ಇಲ್ಲದ ಆ ದಿನಗಳಲ್ಲಿ ಬೆರಳೆಣಿಕೆಯಷ್ಟು ಹುಡುಗರು ಶಾಲೆಗೆ ಹೋಗಿ ಬರುತ್ತಿದ್ದ ಯಥಾಸ್ಥಿತಿ ವಾದವನ್ನು ಸಾರ್ವತ್ರಿಕ ವಾಗಿ ಅಂಗೀಕರಿಸಿದ್ದಂತಹ ದಿನಗಳವು. ಪ್ರತಿದಿನ ಮೂರು ಮೈಲಿಗಳಷ್ಟು ದೂರ ಹೋಗಿ ಬರುವುದು ಅಷ್ಟು ಸುಲಭ ವಾಗಿರಲಿಲ್ಲ. ಬಿದ್ರಕಾನಿನ ತಿಮ್ಮಪ್ಪಯ್ಯನವರ ಮನೆಯಿಂದ ಎರಡು ಫರ್ಲಾಂಗ ದೂರದಿಂದಲೆ ದಟ್ಟವಾದ ಕಾಡಿನಿಂದ ಆವೃತವಾದ ನಿತ್ಯ ಹರಿದ್ವರ್ಣ ಕಾನನದ ಪ್ರಾರಂಭ ಮೊದಲಿಡುತ್ತಿತ್ತು. ಪರಿಚಿತ ಕಾಲುದಾರಿಯಲ್ಲಿಯೆ ಶಾಲೆಗೆ ಹೋಗಿ ಬರಬೇಕು ಅನಿರೀಕ್ಷಿತವಾಗಿ ಕಾಡಿನಲ್ಲಿ ದರ್ಶನ ಕೊಡುವ ಹುಲಿರಾಯ ಮತ್ತು ಗಜರಾಜರು ಹಾಗೂ ವಿಷಜಂತುಗಳು. ಇವಕ್ಕೆಲ್ಲ ಹೊಂದಿಕೊಂಡ ತಿಮ್ಮಪ್ಪಯ್ಯ ಹೆದರುತ್ತಿದ್ದುದು ಇಂಬಳಗಳ ಕಾಟಕ್ಕೆ. ಆಗಿನ ಋತುಮಾನಗಳೆಂದರೆ ಎಲ್ಲವೂ ಕರಾರುವಾಕ್. ಆಯಾ ಋತುಗಳಿಗೆ ತಕ್ಕಂತೆ ಹವಾಮಾನ. ಮೇ ತಿಂಗಳ ಕೊನೆಗೆ ಕನಕಗಿರಿ ಘಟ್ಟ ಪ್ರದೇಶಕ್ಕೆ ಗದ್ದಲ ಗೌಜಿನೊಂದಿಗೆ ವರುಣ ಆಗಮಿಸಿದನೆಂದರೆ ಆತನ ಆರ್ಭಟ ನಿಲ್ಲುತ್ತಿದ್ದುದು ನವರಾತ್ರಿ ಹಬ್ಬ ಬಂದ ನಂತರವೆ. ಈ ಅವಧಿಯಲ್ಲಿ ಬಿಸಿಲು ಇರಲಿ ಒಂದೇ ಒಂದು ಕ್ಷಣ ಸೂರ್ಯನ ಮುಖದರ್ಶನ ಕೂಡ ಕಷ್ಟವಿತ್ತು. ಹೀಗಾಗಿ ಅಲ್ಲಿ ಛಳಿಜ್ವರದ ಹಾವಳಿ ವಿಪರೀತ. ಬೆರಳೆಣಿಕೆಯ ಕೆಲವು ಕುಟುಂಬಗಳನ್ನು ಬಿಟ್ಟರೆ ಉಳಿದವರೆಲ್ಲ ಬಡತನದ ರೇಖೆಯಿಂದ ಕೆಳಗಿರುವವರೆ. ಕೆಲವರಂತೂ ಮಳೆಗಾಲದಲ್ಲಿ ಹಲಸು ಗೆಡ್ಡೆ ಗೆಣಸುಗಳನ್ನು ತಿಂದು ದಿನಗಳೆಯುವ ಸಂಧರ್ಭಗಳೂ ಇರುತ್ತಿದ್ದವು. ದೈನಂದಿನ ಬದುಕೆ ಹೋರಾಟವಾಗಿದ್ಚ ಆ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವ ಕೊಡುವ ವಾತಾವರಣವೆ ಇರಲಿಲ್ಲ. ಹೀಗಾಗಿ ತಿಮ್ಮಪ್ಪಯ್ಯನ ಹೆಚ್ಚಿನ ಒಡನಾಟ ಕಾಡಿನ ಜೊತೆಗೆ ಎಂದೆ ಹೇಳ ಬಹುದಿತ್ತು.
ಆಗ ಸುತ್ತ ಮುತ್ತಲಿನ ಜನ ಭಯ ಮಿಶ್ರಿತ ಗೌರವದಿಂದ ಭಾಸ್ಕರನ್ ನಾಯರ್ನ ಹೆಸರನ್ನು ನೆನಪಿಸಿ ಕೊಳ್ಳುತ್ತಿದ್ದುದನ್ನು ತಿಮ್ಮಪ್ಪಯ್ಯ ಅನೇಕ ಸಂಧರ್ಭಗಳಲ್ಲಿ ತನ್ನ ಬಾಲ್ಯದಲ್ಲಿ ಕೇಳಿದ್ದುದಿತ್ತು. ಎತ್ರರದ ನಿಲುವಿನ ನೀಳ ಮೂಗಿನ ತೀಕ್ಷ್ಣ ಕಣ್ಣೋಟದ ಎಣ್ಣೆಗೆಂಪು ಮೈಬಣ್ಣದ ಕಟ್ಟುಮಸ್ತಾದ ವ್ಯಕ್ತಿತ್ವ ಭಾಸ್ಕರನ್ ನಾಯರನದು. ಬಿಳಿ ಪಂಚೆಯನ್ನು ಎತ್ತಿಕಟ್ಟಿ ಸೊಂಟಕ್ಕೆ ನಾಲ್ಕು ಬೆರಳು ಅಗಲದ ಚರ್ಮದ ಪಟ್ಟಿ, ಆ ಪಟ್ಟಿಗೆ ಸದಾ ಸಿಕ್ಕಿಸಿಕೊಂಡು ಇರುತ್ತಿದ್ದ ಸ್ವಲ್ಪ ದೊಡ್ಡ ಗಾತ್ರದ ಚಾಕು. ಮೈಮೇಲೊಂದು ಬಿಳಿ ಬಣ್ಣದ ಮಲ್ ಬಟ್ಟೆಯ ಅರ್ಧ ತೋಳಿನ ಶರಟು. ಕೊರಳಲ್ಲಿ ಎರಡು ಹುಲಿಯುಗುರು ಗಳನ್ನು ಸೇರಿಸಿ ಮಾಡಿದ ಒಂದು ಬಂಗಾರದ ಚೈನು. ಇವಿಷ್ಟು ಅವನ ನಿತ್ಯದ ವೇಷ ಭೂಷಣ. ಅವನು ಜನರೊಂದಿಗೆ ಮತನಾಡುತ್ತಿದ್ದುದೆ ಕಡಿಮೆ ; ಬಹುಶಃ ಭಾಷೆಯ ತೊಂದರೆ ಇದ್ದಿರಬಹುದು. ಆನರೊಂದಿಗೆ ಆತನ ಮಾತುಕತೆ ಇದ್ದುದು ವ್ಯಾವಹಾರಿಕವಾಗಿಯಷ್ಟೆ.
ಬಿದ್ರಕಾನಿನಿಂದ ಸ್ವಲ್ಪ ಮುಂದೆ ಹನ್ನೆರಡು ತಿಂಗಳೂ ಹರಿಯುತ್ತಿದ್ದ ' ಬಿದ್ರಕಾನ ಹಳ್ಳ ' . ಆ ಹಳ್ಳದ ಅಚೆಯಿಂದ ಪ್ರಾರಂಭವಾಗುವ ದಟ್ಟವಾಗಿ ಹರಡಿ ಕೊಂಡಿದ್ದ ಕಾನಿನಿಂದಲೆ ಭಾಸ್ಕರನ್ ನಾಯರನ ಓಡಾಟ. ಆ ದಿನಗಳಲ್ಲಿ ಆ ಕಾನಿನಲ್ಲಿ ಸುಮಾರು ಹತ್ತು ಮೈಲಿ ದೂರದಲ್ಲಿ ಭಾಸ್ಕರನ್ ನಾಯರನ ಬಿಡಾರವೆಂದು ತಿಮ್ಮಪ್ಪಯ್ಯನಿಗೆ ಅವರ ಮನೆಯ ಆಳು ಚಿಂಕ್ರ ಹೇಳಿದ್ದಲ್ಲದೆ ಆತನಿಗೊಬ್ಬಳು ಚೆಂದದ ಹೆಂಡತಿ ಇರುವಳೆಂದು ಕಿಸಕ್ಕನೆ ನಕ್ಕಿದ್ದ. ನಕ್ಕಿದ್ದು ಯಾಕೆ ಎಂದು ಆತನನ್ನ ಕೇಳಿದರೆ ಸತಾಯಿಸಿ ಕೊನೆಗೊಂದು ದಿನ ಯಾರಿಗೂ ಹೇಳ ಬಾರದು ಎಂದು ಹೇಳಿ ಆತನ ಹೆಂಡತಿಯ ಹೆಸರು ಅಮ್ಮು ಎಂದೂ ಆಕೆಯನ್ನು ಆತ ಕಣ್ಣನೂರಿನಿಂದ ಹಾರಿಸಿಕೊಂಡು ಬಂದಿರುವ ನೆಂದೂ, ಆಕೆಗೆ ಊರಲ್ಲಿ ಗಂಡ ಹಾಗೂ ಒಬ್ಬ ಸಣ್ಣ ಮಗನಿರುವನೆಂದೂ ಮತ್ತು ಈ ವಿಷಯವನ್ನು ತಾನು ಹೇಳಿರುವೆನೆಂದು ಯಾರ ಹತ್ತಿರವೂ ಹೇಳಬಾರದೆಂದು ತಿಳಿಸಿ ಬಿದ್ರಕಾನಿನ ಚೌಡಿಯ ಹೆಸರಿನಲ್ಲಿ ಪ್ರಮಾಣ ಮಾಡಿಸಿಕೊಂಡಿದ್ದ, ಅಷ್ಟೆ ಅಲ್ಲದೆ ನಾಯರನು ಆನೆಗಳನ್ನು ಕೊಂದು ಅವುಗಳ ದಂತಗಳನ್ನು ಮತ್ತು ಶ್ರೀಗಂಧದ ಮರದ ತುಂಡುಗಳನ್ನು ಕಳ್ಳ ಸಾಗಣೆ ಮಾಡುವುದು ಅವನ ವ್ಯವಹಾರವೆಂದೂ ಹೇಳಿದ್ದ. ಬಹುಶಃ ಇದೇ ಕಾರಣಕ್ಕೆ ಜನ ಭಾಸ್ಕರನ್ ನಾಯರನ ಬಗ್ಗೆ ಭಯಮಿಶ್ರಿತ ಗೌರವ ತೋರಲು ಕಾರಣಗಳಾಗಿದ್ದಿರಬಹುದಾದರೂ ಇದಕ್ಕೂ ಪ್ರಬಲವಾದ ಇನ್ನೊಂದು ಕಾರಣವೂ ಇತ್ತು.
( ಮುಂದುವರಿದುದು )
Comments
ಉ: ' ಅವಸಾನ '(ಕಥೆ_ಭಾಗ 1): @ಹಿರಿಯರೇ ....
In reply to ಉ: ' ಅವಸಾನ '(ಕಥೆ_ಭಾಗ 1): @ಹಿರಿಯರೇ .... by venkatb83
ಉ: ' ಅವಸಾನ '(ಕಥೆ_ಭಾಗ 1): @ಹಿರಿಯರೇ ....
ಉ: ' ಅವಸಾನ '(ಕಥೆ_ಭಾಗ 1)
In reply to ಉ: ' ಅವಸಾನ '(ಕಥೆ_ಭಾಗ 1) by dattatraya
ಉ: ' ಅವಸಾನ '(ಕಥೆ_ಭಾಗ 1)
ಉ: ' ಅವಸಾನ '(ಕಥೆ_ಭಾಗ 1)
In reply to ಉ: ' ಅವಸಾನ '(ಕಥೆ_ಭಾಗ 1) by partha1059
ಉ: ' ಅವಸಾನ '(ಕಥೆ_ಭಾಗ 1)
ಉ: ' ಅವಸಾನ ' (ಕಥೆ) ಭಾಗ 1
In reply to ಉ: ' ಅವಸಾನ ' (ಕಥೆ) ಭಾಗ 1 by makara
ಉ: ' ಅವಸಾನ ' (ಕಥೆ) ಭಾಗ 1
ಉ: ' ಅವಸಾನ ' (ಕಥೆ) ಭಾಗ 1
In reply to ಉ: ' ಅವಸಾನ ' (ಕಥೆ) ಭಾಗ 1 by tthimmappa
ಉ: ' ಅವಸಾನ ' (ಕಥೆ) ಭಾಗ 1