ಕಾರ್ಗತ್ತಲು = ಕೊನೆಯ ಭಾಗ‌

ಕಾರ್ಗತ್ತಲು = ಕೊನೆಯ ಭಾಗ‌

ಇದೆ ಘಟನೆಯನ್ನು ಸ್ವಲ್ಪ ಬದಲಾವಣೆಯೊಂದಿಗೆ ಸಿನೆಮಾ ಮಾಡುವ ಉದ್ದೇಶದಿಂದ ರಾಜೀವ್ ಸ್ಕ್ರಿಪ್ಟ್ ಬರೆದು ಸಿದ್ಧಮಾಡಿಕೊಂಡು ಸಿನೆಮಾ ಮಾಡಲು ಮೊದಲಿಗೆ ರಾಮಾಪುರದಲ್ಲೇ ಶೂಟಿಂಗ್ ಮಾಡಲು ನಿರ್ಧರಿಸಿದ್ದ. ಆದರೆ ಲೀಲಾ ಮಹಲ್ ನಲ್ಲಿ ಶೂಟಿಂಗ್ ಮಾಡಲು ಅವನಿಗೆ ಅನುಮತಿ ಸಿಗದಿದ್ದ ಕಾರಣ ರಾಮಾಪುರದಿಂದ ೧೦ ಕಿಮೀ ದೂರದ ಹಳ್ಳಿಯೊಂದರಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದ.

 

ಲೀಲಾ ಮಹಲನ್ನೇ ಹೋಲುವಂಥಹ ಸೆಟ್ ಅನ್ನು ನಿರ್ಮಿಸಿ ಅಲ್ಲೇ ಪಕ್ಕದಲ್ಲೇ ಪಾಳು ಬಿದ್ದ ಲೀಲಾ ಮಹಲ್ ನ ಸೆಟ್ ಅನ್ನು ನಿರ್ಮಿಸಿ ಶೂಟಿಂಗ್ ಶುರುಮಾಡಿದರು. ಮೊದಲ ಶಾಟ್ ಭಯಾನಕವಾಗಿ ತೋರಿಸಲು ರಾಜೀವ್ ಪ್ಲಾನ್ ಮಾಡಿದ್ದ.

ಎಲ್ಲೆಡೆ ಘೋರವಾದ ಕತ್ತಲು ತುಂಬಿದೆ. ಎದುರಿಗಿದ್ದ ವ್ಯಕ್ತಿ ಕಾಣಿಸದಷ್ಟು ಕತ್ತಲು ಆವರಿಸಿದೆ..

 ಒಂದೆಡೆ ಕತ್ತಲು...ಮತ್ತೊಂದೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ...ನಿಂತರೆ ಹಾರಿ ಹೋಗುವಷ್ಟು ಬಿರುಗಾಳಿ ಬೀಸುತ್ತಿದೆ...

ಆ ಸಮಯದಲ್ಲಿ ಪಾಳು ಬಿದ್ದಿರುವ ಲೀಲಾ ಮಹಲ್ ನಿಂದ ರಾಜೇಶ್ ಹೆದರಿಕೊಂಡು ಓಡೋಡಿ ಬರುತ್ತಿದ್ದಾನೆ...ಏದುಸಿರು ಬಿಟ್ಟುಕೊಂಡು ಓಡುತ್ತಿದ್ದಾನೆ.ಹಿಂದೆಯೇ ಅಸ್ಪಷ್ಟವಾದ ಆಕೃತಿಯೊಂದು ರಾಜೇಶ್ ನನ್ನು ಅಟ್ಟಿಸಿಕೊಂಡು ಬರುತ್ತಿದೆ. ರಾಜೇಶ್ ಓಡಿ ಓಡಿ ಮೈಯೆಲ್ಲಾ ಬೆವರಿನಿಂದ ಒದ್ದೆ ಆಗಿದೆ..ಅಷ್ಟರಲ್ಲಿ ಜೋರಾಗಿ ಸಿಡಿಲೊಂದು ಬಡಿದು ರಾಜೇಶ ಓಡುತ್ತಿದ್ದ ದಾರಿಯಲ್ಲಿ ಅವನಿಗೆ ಸರಿಯಾಗಿ ಎದುರಿಗಿದ್ದ ಮರ ಬೆಂಕಿ ಹೊತ್ತಿಕೊಂಡು ರಸ್ತೆಗೆ ಅಡ್ಡಲಾಗಿ ಬಿದ್ದು ಬಿಟ್ಟಿದೆ.

 ವೇಗವಾಗಿ ಓಡುತ್ತಿದ್ದ ರಾಜೇಶ್ ದಿಡೀರನೆ ಮರ ಬಿದ್ದಿದ್ದರಿಂದ ಗಕ್ಕನೆ ನಿಂತು ಹಿಂತಿರುಗಿದ. ಅಷ್ಟರಲ್ಲಿ ಆ ಅಸ್ಪಷ್ಟ ಆಕೃತಿ ರಾಜೇಶ್ ಗೆ ಇನ್ನಷ್ಟು ಹತ್ತಿರವಾಗಿತ್ತು. ಹತ್ತಿರವಾದಂತೆ ಆ ಅಸ್ಪಷ್ಟ ಆಕೃತಿ ಸ್ಪಷ್ಟವಾಗಿ ಕಾಣುತ್ತಿದೆ. ಕೆ೦ಡದಂತೆ ಹೊಳೆಯುತ್ತಿರುವ ಕಣ್ಣುಗಳು, ಬಾಯಲ್ಲಿ ಎರಡು ಕೋರೆ ಹಲ್ಲುಗಳು, ಉದ್ದನೆಯ ಕೂದಲು ವಿಕಾರವಾದ ಮುಖ

ತನ್ನ ಎರಡೂ ಕೈಗಳನ್ನು ರಾಜೇಶ್ ನ ಕುತ್ತಿಗೆಯ ಬಳಿ ತರುತ್ತಿದೆ. ಅಷ್ಟರಲ್ಲಿ...

 

ಕಟ್...ಕಟ್....ಶಾಟ್ ಓಕೆ...ವೆರಿ ಗುಡ್ ಮದನ್(ಸಿನೆಮಾದಲ್ಲಿ ರಾಜೇಶ್ ಎಂದು ಹೆಸರು)....ಸೂಪರ್ ಎಕ್ಷ್ಪ್ರೆಶನ್.... ಎಂದು ನಿರ್ದೇಶಕ ರಾಜೀವ್ ಮದನ್ ನ ಅಭಿನಯವನ್ನು ಕೊಂಡಾಡುತ್ತಿದ್ದನು. ನಾಳೆ ಮುಂದಿನ ಶಾಟ್ ಗೆ ರೆಡಿ ಆಗಿ ಮದನ್....ಪ್ಯಾಕಪ್

-----------------------------------------------------------------------------------------------------------------------------------------------------------------------------

ಮೊದಲ ದಿನದ ಶೂಟಿಂಗ್ ಮುಗಿಸಿ ಎಲ್ಲರೂ ಊಟ ಮಾಡಲು ಕುಳಿತಿದ್ದಾಗ ಎಲ್ಲರೂ ರಾಜೀವ್ ನ ನಿರ್ದೇಶನದ ಶೈಲಿಯನ್ನು ಹೊಗಳುತ್ತಿದ್ದರು. ಕೆಲವರು ಅವರವರ ಪಾತ್ರಗಳ ಮಾತಾಡುತ್ತಿದ್ದರು. ವಿಜಯಸಿಂಹನ ಪಾತ್ರಧಾರಿ ಮೋಹನ್ ರಾವ್ ಎಂಬ ಪೋಷಕ ಪಾತ್ರಧಾರಿ ವಹಿಸಿದ್ದರು. ಅವರು ಮಾತನಾಡುತ್ತ ಆಡುತ್ತ ರಾಜೀವ್ ನನ್ನು ಕುರಿತು ಹೇಳುತ್ತಿದ್ದರು. ಅಲ್ರೀ ರಾಜೀವ್ ಅವನೆಂತ ಹುಚ್ಚ ರೀ ಆ ರಾಜ ದೇವರಂತೆ ನೋಡುತ್ತಿದ್ದ ಜನರ ಪಾಲಿಗೆ ದೆವ್ವ ಆಗಿ ಹೋದನಲ್ಲ...ಹ್ಹ ಹ್ಹ ಹ್ಹ ಎಂದು ನಗಲು ಶುರು ಮಾಡಿದ. ಅವನೊಟ್ಟಿಗೆ ತಂಡದ ಉಳಿದವರು ನಗಲೂ ಶುರುಮಾಡಿದರು. ಅವನ ಪಕ್ಕದಲ್ಲಿ ಕೂತಿದ್ದ ಬುದ್ಧಿಮಾಂದ್ಯ ಮಗನ ಪಾತ್ರಧಾರಿ ಆ ರಾಜನ ಪಾತ್ರಧಾರಿ ಕುರಿತು ಅಲ್ಲ ಸಾರ್ ನೀವೊಬ್ರೆ ಸಾಯೋದು ಅಲ್ದೆ ನನ್ನನ್ನು ಯಾಕೆ ಸಾರ್ ಸಾಯಿಸಿದಿರಿ? ಎಂದು ಮತ್ತೊಮ್ಮೆ ನಗಲು ಶುರು ಮಾಡಿದರು...

 ನಿಜಕ್ಕೂ ಅವನಿಗೆ ರಾಜ ಆಗುವ ಯೋಗ್ಯತೆಯೇ ಇಲ್ಲ. ತನ್ನ ಸ್ವಾರ್ಥಕ್ಕಾಗಿ ಜನರನ್ನು ದಂಡಿಸಿದ ಅವನಿಗೆ ತಕ್ಕ ಶಾಸ್ತಿಯೇ ಆಯಿತು ಎಂದು ರಾಜನ ಪಾತ್ರಧಾರಿ ಹೇಳಿದರು. ಎಲ್ಲರೂ ಊಟ ಮುಗಿಸಿ ಅವರವರ ಕೋಣೆಗೆ ಹೋಗಿ ಮಲಗಲು ಸಿದ್ಧರಾದರು. ಮೋಹನ್ ಸಾರ್ ನಾಳೆಯಿಂದ ಸತತವಾಗಿ ಮೂರು ದಿವಸ ನಿಮ್ಮ ಭಾಗದ ಶೂಟಿಂಗ್ ಇದೆ. ಬೇಗನೆ ಮಲಗಿ ಎಂದು ಹೇಳಿ ಎಲ್ಲರೂ ಮಲಗಲು ಹೋದರು.

 ಮುಂಜಾನೆ ಆರು ಗಂಟೆ...ರಾಜೀವನ ಕೋಣೆಯ ಬಾಗಿಲನ್ನು ಯಾರೋ ದಬ ದಬ ಬಡಿಯುತ್ತಿದ್ದಾರೆ. ಸರ್ ಬೇಗನೆ ಆಚೆ ಬನ್ನಿ ಸರ್ ಇಲ್ಲೊಂದು ಘೋರ ನಡೆದು ಹೋಗಿದೆ ಎಂದು ಕೂಗುತ್ತಿದ್ದರು. ತಕ್ಷಣ ನಿದ್ದೆಯಿಂದ ಎಚ್ಚೆತ್ತ ರಾಜೀವ್ ದಡಬಡಾಯಿಸಿ ಎದ್ದು ಬಂದು ಬಾಗಿಲು ತೆರೆದರೆ ಎದುರುಗಡೆ ಸಿನೆಮ ತಂಡದ ಊಟೋಪಚಾರ ನೋಡಿಕೊಳ್ಳುವ ಹುಡುಗ ಬೆವರುತ್ತ ನಿಂತಿದ್ದಾನೆ. ಯಾಕೋ ಮಧು ಬೆಳ್ಳಂ ಬೆಳಿಗ್ಗೆ ಹೀಗೆ ಬಾಗಿಲು ಬಡಿಯುತ್ತಿದ್ದೀಯ. ನೆಮ್ಮದಿಯಿಂದ ಮಲಗಲು ಬಿಡುವುದಿಲ್ಲವಲ್ಲೋ ಏನಾಯ್ತೋ?...

 ಸರ್ ಅದು ಅದು ಮೋಹನ್ ಸರ್ ಅವರ ರೂಮಿನಲ್ಲಿ ಸತ್ತು ಬಿದ್ದಿದ್ದಾರೆ...ಎಂದು ಏದುಸಿರು ಬಿಡುತ್ತ ಹೇಳಿದ...

 ಏನೋ ಹೇಳ್ತಾ ಇದ್ದೀಯ ನೀನು ನಡೀ ಮೊದಲು ಎಂದು ಅವನ ಹಿಂದೆಯೇ ಓಡಿ ಮೋಹನ್ ರಾವ್ ಕೋಣೆಯ ಬಳಿ ಬರುವಷ್ಟರಲ್ಲಿ ಆಗಲೇ ಎಲ್ಲರೂ ಅಲ್ಲಿ ತುಂಬಿಕೊಂಡಿದ್ದರು. ರಾಜೀವ್ ಕೋಣೆಯ ಒಳಗೆ ಹೋಗಲು ಹೋದಾಗ ಮದನ್ ಅವನನ್ನು ತಡೆದು ರಾಜೀವ್ ಒಳಗೆ ಹೋಗಬೇಡಿ. ಇದು ಪೋಲಿಸ್ ಕೇಸ್ ಅವರು ಬರುವವರೆಗೂ ಯಾರೂ ಒಳಗೆ ಹೋಗುವುದು ಬೇಡ ಎಂದು ತಡೆದರು.

ಅಷ್ಟರಲ್ಲಿ ಪೊಲೀಸರು ಬಂದು ಎಲ್ಲರನ್ನೂ ದೂರಕ್ಕೆ ಕಳಿಸಿ ಕೋಣೆಯ ಒಳಗೆ ಹೋಗಿ ಶವದ ಮಹಜರು ಮಾಡಿ ಎಲ್ಲಾದರೂ ಏನಾದರೂ ಸುಳಿವು ಸಿಗುತ್ತದ ಎಂದು ಹುಡುಕುತ್ತಿದ್ದರು. ಆಚೆ ಇನ್ನೊಬ್ಬ ಅಧಿಕಾರಿ ಒಬ್ಬೊಬ್ಬರನ್ನೇ ಕರೆದು ವಿಚಾರಣೆ ನಡೆಸುತ್ತಿದ್ದರು. ಮೊದಲು ಯಾರು ಇದನ್ನು ನೋಡಿದ್ದು ಎಂದು ಕೇಳಿದ್ದಕ್ಕೆ ಮಧು ಮುಂದೆ ಬಂದು ಸರ್ ನಾನು ಬೆಳಿಗ್ಗೆ ಕಾಫಿ ಕೊಡಲು ಹೋದಾಗ ಬಾಗಿಲು ತೆರೆದೇ ಇತ್ತು. ಒಳಗೆ ಹೋಗಿ ನೋಡಿದಾಗ ಅವರು ಸತ್ತು ಬಿದ್ದಿದ್ದರು. ತಕ್ಷಣ ಎಲ್ಲರಿಗೂ ವಿಷಯ ತಿಳಿಸಿದೆ ಎಂದು ಹೇಳಿದ.

 ನಂತರ ಅಧಿಕಾರಿಗಳು ಎಲ್ಲರನ್ನೂ ಕರೆದು ನೋಡಿ ಪೋಸ್ಟ್ ಮಾರ್ಟಂ ರಿಪೋರ್ಟ್ ಬರುವವರೆಗೂ ನೀವ್ಯಾರೂ ಈ ಊರನ್ನು ಬಿಟ್ಟು ಹೋಗುವ ಹಾಗಿಲ್ಲ. ಹಾಗೆ ಯಾವಾಗ ಕರೆದರೂ ವಿಚಾರಣೆಗೆ ಬರಬೇಕು ಎಂದು ತಿಳಿಸಿ ಹೊರಟು ಹೋದರು.

 ಅವರು ಹೊರಟು ಹೋದ ಮೇಲೆ ತಂಡದಲ್ಲಿ ಗುಸು ಗುಸು ಶುರುವಾಯಿತು. ಥೂ ಸುಮ್ಮನೆ ನೆಮ್ಮದಿ ಇಂದ ಇರದೇ ಇದ್ಯಾವುದಪ್ಪ ನಮಗೆ ಹಣೆ ಬರಹ. ಒಳ್ಳೆ ಶ್...ಸಿನೆಮಾ ಥರ ಆಗಿ ಹೋಯ್ತಲ್ಲ ನಮ್ಮ ಕಥೆ. ಬಹುಶಃ ಆ ರಾಜನ ದೆವ್ವವೇ ಕೊಲೆ ಮಾಡಿರಬಹುದ? ಏಕೆಂದರೆ ನೆನ್ನೆ ರಾತ್ರಿ ಎಲ್ಲ ಮೋಹನ್ ಸರ್ ರಾಜನ ಬಗ್ಗೆ ಬೈಯ್ಯುತ್ತಿದ್ದರು. ರಾಜೀವ್ ಸರ್ ಮುಂಚೆಯೇ ಕಥೆ ಹೇಳಿದ್ದಾಗ ರಾಜನ ವಿರುದ್ಧ ಮಗನ ವಿರುದ್ಧ ಕೆಟ್ಟದಾಗಿ ಮಾತಾಡಿದವರನ್ನು ರಾಜನ ಪ್ರೇತ ಕೊಲೆ ಮಾಡುತ್ತಿತ್ತು ಎಂದು ಹೇಳಿದ್ದರು. ಈಗ ನೋಡಿದರೆ ಅದೇ ನಿಜ ಆಗುತ್ತಿದೆ. ಇನ್ನು ಅಪ್ಪಿ ತಪ್ಪಿ ಯಾರೂ ರಾಜನ ಬಗ್ಗೆ ಆಗಲಿ ಅವನ ಮಗನ ಬಗ್ಗೆ ಯಾಗಲಿ ಮಾತಾಡುವುದೇ ಬೇಡ ಎಂದು ನಿರ್ಧರಿಸಿದ್ದರು.

 ಎಲ್ಲರಿಗೂ ಒಂದು ರೀತಿ ಬಂಧನದಲ್ಲಿಟ್ಟ ಹಾಗಾಗಿತ್ತು. ಎಲ್ಲರೂ ಚಿಂತಾಕ್ರಾಂತರಾಗಿದ್ದರು. ಯಾವಾಗ ಊರು ಬಿಟ್ಟು ಹೋಗುತ್ತೇವೋ ಎಂದು ಕಾತುರರಾಗಿದ್ದರು. ಎರಡು ದಿನ ಕಳೆದ ಮೇಲೆ ಒಬ್ಬ ಪೋಲಿಸ್ ಪೇದೆ ಬಂದು ಎಲ್ಲರೂ ಸ್ಟೇಶನ್ ಗೆ ಬರಬೇಕು ಎಂದು ಸಾಹೇಬರು ಹೇಳಿ ಕಳುಹಿಸಿದ್ದಾರೆ ಎಂದು ಅವರೆಲ್ಲರನ್ನೂ ಕರೆದುಕೊಂಡು ಸ್ಟೇಶನ್ ಗೆ ಬಂದ. ಅಧಿಕಾರಿಗಳು ಪೇದೆಯನ್ನು ಕುರಿತು ಎಲ್ಲರದೂ ಫಿಂಗರ್ ಪ್ರಿಂಟ್ಸ್ ತೆಗೆದುಕೋ ಎಂದು ಆಜ್ಞೆ ಮಾಡಿದ. ಕೆಲವರು ಆಗಲೇ ಶುರು ಮಾಡಿದ್ದರು. ಸರ್ ನಮಗೂ ಈ ಕೊಲೆಗೂ ಯಾವುದೇ ಸಂಬಂಧವಿಲ್ಲ ದಯವಿಟ್ಟು ನಮ್ಮನ್ನು ವಾಪಸ್ ಊರಿಗೆ ಕಳುಹಿಸಿಬಿಡಿ. ಏನೋ ಹೊಟ್ಟೆಪಾಡಿಗೆಂದು ನಾವು ಬಂದಿರುವುದು. ನಮಗ್ಯಾಕೆ ಸರ್ ಈ ಕೊಲೆ ಎಲ್ಲ. ಅದೂ ಅಲ್ಲದೆ ಮೋಹನ್ ಸರ್ ಎಲ್ಲರಿಗೂ ಬೇಕಾದ ವ್ಯಕ್ತಿ ಆಗಿದ್ದರು. ನಾವ್ಯಾರು ಈ ಕೊಲೆಯನ್ನು ಮಾಡಿಲ್ಲ ಎಂದು ಗೋಗರೆಯುತ್ತಿದ್ದರು. ಹೆಣ್ಣು ಮಕ್ಕಳಂತೂ ಅಳುತ್ತಿದ್ದರು.

 ನೋಡಿ ನೀವ್ಯಾರೂ ಕೊಲೆ ಮಾಡಿಲ್ಲ ಎಂದ ಮೇಲೆ ಯಾಕೆ ಹೆದರುತ್ತೀರಾ? ಇನ್ನೊಂದು ವಾರದಲ್ಲಿ ಸತ್ಯ ಪತ್ತೆ ಮಾಡುತ್ತೇವೆ ಆಮೇಲೆ ನೀವೆಲ್ಲ ಹೊರಡಬಹುದು. ದಯವಿಟ್ಟು ನಮಗೆ ಸಹಕರಿಸಿ ಎಂದು ಹೇಳಿ ಪ್ರತಿಯೊಬ್ಬರ ಫಿಂಗರ್ ಪ್ರಿಂಟ್ಸ್ ತೆಗೆದುಕೊಂಡು ಕಳುಹಿಸಿದರು.

 ಎರಡು ದಿನದ ನಂತರ ಮತ್ತೆ ಪೇದೆ ಬಂದು ರಾಜೀವ್ ಅವರೇ ನಿಮ್ಮನ್ನು ಸ್ಟೇಶನ್ ಗೆ ಕರೆದು ಕೊಂಡು ಬರಲು ಹೇಳಿದ್ದಾರೆ ಸಾಹೇಬರು ಎಂದು ಕರೆದುಕೊಂಡು ಹೋದ. ಸ್ಟೇಶನ್ ಗೆ ಬಂದ ರಾಜೀವ್ ಅಧಿಕಾರಿಗಳ ಮುಂದೆ ಕುಳಿತು ಸರ್ ಏನಾದರೂ ಅಭಿವೃದ್ಧಿ ಆಯ್ತಾ ಕೇಸಿನಲ್ಲಿ, ಎಲ್ಲರೂ ಪಾಪ ತುಂಬಾ ತೊಂದರೆ ಪಡುತ್ತಿದ್ದಾರೆ, ನೀವು ಎಷ್ಟು ಬೇಗ ಖುಲಾಸೆ ಮಾಡಿದರೆ ಅಷ್ಟು ನೆಮ್ಮದಿ ಸರ್ ನಮಗೆ ಎಂದು ಕೇಳಿದ. ಅಧಿಕಾರಿಗಳು ಸ್ವಲ್ಪ ಹೊತ್ತು ಮೌನ ವಹಿಸಿ ರಾಜೀವ್ ನನ್ನು ದಿಟ್ಟಿಸಿ ನೋಡಿ ರಾಜೀವ್ ನೀವು ತುಂಬಾ ಸ್ಮಾರ್ಟ್ ಕಣ್ರೀ. ನೀವೇ ಕೊಲೆ ಮಾಡಿ ಏನೂ ಗೊತ್ತಿಲ್ಲದವರಂತೆ ನಟಿಸುತ್ತಿದ್ದೀರಲ್ಲ್ಲ ನಿಮಗೆ ಏನು ಹೇಳೋಣ ಹೇಳಿ?.

 ತಕ್ಷಣ ರಾಜೀವ್ ಗೆ ಗರ ಬಡಿದಂತಾಯಿತು. ಚೇತರಿಸಿಕೊಂಡು ಸರ್ ಏನು ಹೇಳುತ್ತಿದ್ದೀರಿ ನೀವು. ನಾನ್ ಯಾಕೆ ಅವರನ್ನು ಕೊಲೆ ಮಾಡಲಿ, ನನಗೂ ಅವರಿಗೂ ಯಾವುದೇ ದ್ವೇಷವಿಲ್ಲ, ಒಂದು ವೇಳೆ ದ್ವೇಷ ಇದ್ದರೂ ಒಂದು ಪ್ರಾಣವನ್ನು ತೆಗೆಯುವಷ್ಟು ಕಟುಕ ನಾನಲ್ಲ, ಅಷ್ಟು ಧೈರ್ಯವೂ ಇಲ್ಲ.

 ನೋಡಿ ರಾಜೀವ್ ನೀವು ಸುಳ್ಳು ಹೇಳಬಹುದು ಆದರೆ ರಿಪೋರ್ಟ್ ಸುಳ್ಳು ಹೇಳಲ್ಲ. ಮೋಹನ್ ರಾವ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಅವರ ಕತ್ತಿನ ಮೇಲೆ ಮೂಡಿದ್ದ ಬೆರಳು ಗುರುತುಗಳು ಹಾಗೂ ನಿಮ್ಮ ಬೆರಳು ಗುರುತುಗಳು ಒಂದೇ ಆಗಿವೆ ಎಂದು ಹೇಳುತ್ತಿದ್ದಂತೆ ರಾಜೀವ್ ತಲೆ ತಿರುಗಿ ಬಿದ್ದು ಬಿಟ್ಟ. ಕೂಡಲೇ ಅಧಿಕಾರಿಗಳು ಅವನಿಗೆ ನೀರು ಸಿಂಪಡಿಸಿ ಅವನನ್ನು ಎಬ್ಬಿಸಿ ನೋಡಿ ರಾಜೀವ್ ಈ ಕೇಸ್ ವಿಚಾರಣೆ ಮುಗಿಯುವವರೆಗೂ ನಿಮ್ಮನ್ನು ಬಂಧಿಸುತ್ತಿದ್ದೇವೆ. ಇಂದು ಮಧ್ಯಾಹ್ನ ಮಂಪರು ಪರೀಕ್ಷೆ ಇದೆ. ಅದಾದ ಮೇಲೆ ನೀವು ಕೋರ್ಟಿಗೆ ಅರ್ಜಿ ಸಲ್ಲಿಸಬಹುದು. ಎಂದು ಅವನನ್ನು ಜೈಲಿನ ಒಳಗೆ ಕೂಡಿಸಿದರು.

 ಮಧ್ಯಾಹ್ನದ ವೇಳೆಗೆ ಮಂಪರು ಪರೀಕ್ಷೆಗೆಂದು ಅವನನ್ನು ಅಲ್ಲಿಂದ ಮತ್ತೊಂದು ಜಾಗಕ್ಕೆ ಕರೆದೊಯ್ದರು. ಪರೀಕ್ಷೆ ನಡೆಯುವ ಸಮಯದಲ್ಲಿ ಒಬ್ಬ ಡಾಕ್ಟರ ಹಾಗೂ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳು ಅಲ್ಲಿದ್ದರು. ವಿಚಾರಣೆ ಮುಗಿಸಿ ಆಚೆ ಬಂದ ಅಧಿಕಾರಿಗಳ ಮುಖದಲ್ಲಿ ವಿಚಿತ್ರ ಭಾವ ವ್ಯಕ್ತವಾಗಿತ್ತು. ರಾಜೀವ್ ಇನ್ನೂ ಅರೆ ನಿದ್ರಾವಸ್ಥೆಯಲ್ಲೇ ಇದ್ದ. ಅಲ್ಲಿಂದ ಹೊರಗೆ ಬಂದ ಡಾಕ್ಟರ ಮತ್ತು ಅಧಿಕಾರಿಗಳು ಮತ್ತೊಂದು ಕೊಠಡಿಗೆ ಹೋದರು.

 ಡಾಕ್ಟರ ಏನಿದು ಒಂದೂ ಅರ್ಥ ಆಗುತ್ತಿಲ್ಲ. ಬೆಳಿಗ್ಗೆ ನಾನು ವಿಚಾರಣೆ ನಡೆಸಿದಾಗ ಈ ಕೊಲೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದ ರಾಜೀವ್ ಈಗ ನೋಡಿದರೆ ಹೀಗೆ ಹೇಳುತ್ತಿದ್ದ್ದಾನೆ. ಹೌದು ಸರ್, ಈ ಕೊಲೆಗೂ ರಾಜೀವ್ ಗೂ ಯಾವುದೇ ಸಂಬಂಧವಿಲ್ಲ. ಆದರೆ ಈ ಕೊಲೆಗೂ ರಾಜ ವಿಜಯಸಿಂಹನಿಗೂ ಸಂಬಂಧವಿದೆ. ಅಂದರೆ ಕೊಲೆ ಮಾಡಿದ್ದು ರಾಜೀವನೆ ಆದರೆ ಕೊಲೆ ಮಾಡುವಾಗ ಅವನು ವಿಜಯಸಿಂಹನಾಗಿದ್ದ.

ಡಾಕ್ಟರ ದಯವಿಟ್ಟು ಸ್ವಲ್ಪ ವಿವರವಾಗಿ ಹೇಳಿ ನನಗೊಂದೂ ಅರ್ಥ ಆಗುತ್ತಿಲ್ಲ. ವಿಜಯಸಿಂಹನ ದೆವ್ವ ರಾಜೀವನ ಮೈಯಲ್ಲಿ ಬಂದು ಕೊಲೆ ಮಾಡಿತೆ. ತಕ್ಷಣ ಡಾಕ್ಟರ ನಕ್ಕು....ಸರ್ ದೆವ್ವವೂ ಇಲ್ಲ ಭೂತವೂ ಇಲ್ಲ. ವಿವರವಾಗಿ ಹೇಳುತ್ತೇನೆ ಕೇಳಿ.

 ರಾಜೀವ್ ಈ ಸಿನೆಮಾ ಮಾಡಲು ರಾಮಾಪುರಕ್ಕೆ ಹೋಗಿದ್ದಾಗ ಅಲ್ಲಿನ ಜನರು ಮೊದಲು ವಿಜಯಸಿಂಹನ ಒಳ್ಳೆಯತನದ ಬಗ್ಗೆ ಹೇಳಿದಾಗ ಇವನು ರಾಜನ ವ್ಯಕ್ತಿತ್ವವನ್ನು ಬಹಳವಾಗಿ ಇಷ್ಟಪಟ್ಟು ಬಿಟ್ಟಿದ್ದ. ನಂತರದಲ್ಲಿ ರಾಜನ ಕುಟುಂಬದಲ್ಲಿ ನಡೆದ ಘಟನೆಗಳು ಅದರಿಂದ ಕುಪಿತನಾದ ರಾಜ, ಅದರಿಂದ ಜನರು ರಾಜನನ್ನು ಅವನ ಮಗನನ್ನು ಹೀಗಳೆಯಲು ಶುರುಮಾಡಿದ್ದನ್ನು ಕೇಳಿ ಇವನಿಗೆ ತಡೆದು ಕೊಳ್ಳಲು ಆಗಿಲ್ಲ. ಅಂಥಹ ಒಳ್ಳೆಯ ರಾಜನನ್ನು ಜನ ಹೀಗಳೆದರು ಎಂಬ ಕೋಪದಲ್ಲಿ ಇವನು ವಿಜಯಸಿಂಹನಾಗಿ ಪರಿವರ್ತಿತನಾದ. ಇನ್ನೂ ಅರ್ಥವಾಗುವಂತೆ ಹೇಳಬೇಕೆಂದರೆ ಅವನು Split Personality Disorder ಗೆ ಒಳಗಾದ.

 ನಂತರದಲ್ಲಿ ಚಿತ್ರಕಥೆ ಬರೆಯುವ ಸಮಯದಲ್ಲಿ ರಾಜನನ್ನು ದೂಶಿಸುವವರನ್ನು ಕೊಲ್ಲಬೇಕೆಂದು ಕಥೆಯನ್ನು ಸಿದ್ಧಪಡಿಸಿ ತನ್ನ ಮನಸ್ಸನ್ನು ಅದೇ ರೀತಿ ಸಿದ್ಧಪಡಿಸಿಕೊಂಡಿದ್ದ. ಚಿತ್ರೀಕರಣದ ಸಂದರ್ಭದಲ್ಲಿ ಮೋಹನ್ ರಾವ್ ಅವರು ಯಾವಾಗ ರಾಜನ ಬಗ್ಗೆ ಕೆಟ್ಟದಾಗಿ ಮಾತಾಡಿದರೋ ಆಗಲೇ ಅವನನ್ನು ಮುಗಿಸಬೇಕೆಂದು ರಾಜೀವ್ ನಿರ್ಧರಿಸಿಬಿಟ್ಟಿದ್ದ. ಅದೇ ರೀತಿ ಅಂದು ರಾತ್ರಿ ಎಲ್ಲರೂ ಮಲಗಿದ ಮೇಲೆ ಹೋಗಿ ಮೋಹನ್ ರಾವ್ ಅವರನ್ನು ಕೊಲೆ ಮಾಡಿದ್ದಾನೆ. ಈಗಲೇ ಈ ವಿಷಯ ಪತ್ತೆ ಆಗಿದ್ದು ಒಳ್ಳೆಯದು ಆಯಿತು. ಇಲ್ಲವಾದಲ್ಲಿ ಅವನು ಕಥೆಯಲ್ಲಿ ಬರೆದಿರುವಂತೆ ಇನ್ನೆಷ್ಟು ಜನರ ಹತ್ಯೆ ಆಗುತ್ತಿತ್ತೋ...ಎಂದು ಡಾಕ್ಟರ ನಿಟ್ಟುಸಿರು ಬಿಟ್ಟರು.

 ಪೋಲಿಸ್ ಅಧಿಕಾರಿ ಏನು ಹೇಳಬೇಕೋ ಗೊತ್ತಾಗದೆ ಗೊಂದಲದಲ್ಲಿದ್ದರು. ಮತ್ತೆ ಡಾಕ್ಟರ ಶುರು ಮಾಡಿದರು. ಸರ್ ಒಂದು ಪ್ರಶ್ನೆ ಕೇಳುತ್ತೀನಿ. ಇಂಥಹ ಕೇಸನ್ನು ನೀವು ತೆಗೆದುಕೊಂಡಿರುವುದು ಇದೆ ಮೊದಲು ಅನಿಸುತ್ತದೆ. ಇಂಥಹ ಸಂದರ್ಭದಲ್ಲಿ ಅಪರಾಧಿ ನಿಜವಾಗಿಯೂ ಕೊಲೆ ಮಾಡುವ ಉದ್ದೇಶ ಹೊಂದಿರುವುದಿಲ್ಲ, ತನ್ನ ಮಾನಸಿಕ ಬದಲಾವಣೆಯಿಂದ ಅವನು ಈ ರೀತಿ ಅಪರಾಧ ಮಾಡಿರುತ್ತಾನೆ. ಆದರೆ ಆತ ನಿಜಕ್ಕೂ ನಿರಪರಾಧಿ ಆಗಿರುತ್ತಾನೆ.

ಇಂಥಹ ಸಂದರ್ಭದಲ್ಲಿ ರಾಜೀವ್ ಗೆ ಶಿಕ್ಷೆ ಆಗುತ್ತದ?

 ನೋಡಿ ಡಾಕ್ಟರ ನೀವಂದದ್ದು ಸರಿಯೇ ಇದೆ. ಆದರೆ ಅಪರಾಧ ಆಗಿರುವುದಂತೆ ಸಾಬೀತಾಗಿದೆ. ಅದೂ ಅಲ್ಲದೆ ಇದು ಸಣ್ಣ ಪ್ರಕರಣ ಅಲ್ಲ, ಕೊಲೆ ಅದೂ ಅಲ್ಲದೆ ಒಬ್ಬ ಸಿನೆಮಾ ನಟನ ಕೊಲೆ. ಇಲ್ಲಿ ಅಪರಾಧಿ ಯಾವ ಉದ್ದೇಶದಿಂದ ಮಾಡಿದ್ದಾನೆ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಕಷ್ಟ. ರಾಜೀವ್ ಬಗ್ಗೆ ನನಗೂ ಅನುಕಂಪ ಇದೆ. ನೋಡೋಣ ಕೋರ್ಟ್ ಏನು ತೀರ್ಮಾನ ಕೊಡುತ್ತದೋ ಎಂದು ಆಗಷ್ಟೇ ನಿದ್ರಾವಸ್ಥೆಯಿಂದ ಆಚೆ ಬಂದ ರಾಜೀವ್ ನನ್ನು ಮಾತಾಡಿಸಲು ಹೋದರು.

ಮುಗಿಯಿತು..

Rating
No votes yet

Comments